ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ವಿರುದ್ಧ ನೀಡಿದ್ದ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ತಿರುಗೇಟು ನೀಡಿದ್ದಾರೆ. ‘ಹರಿಪ್ರಸಾದ್ ಹುಚ್ಚ’ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹುಚ್ಚರಿಗೆಲ್ಲ ತಾನು ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, “ಜನಾರ್ದನ ರೆಡ್ಡಿಗೆ ವಂದೇ ಮಾತರಂ ಎರಡು ಪ್ಯಾರಾ ಆದ್ರೂ ಹಾಡೋಕೆ ಬರುತ್ತಾ ಎಂದು ಕೇಳಿ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
“ಗಣಿ ಲೂಟಿ ಮಾಡಿ ಜೈಲಿನಲ್ಲಿ ಇದ್ದವನಲ್ಲ ನಾನು. ರಾಜಕೀಯ ಹೋರಾಟ ಮಾಡಿಕೊಂಡು ಬಂದಿರುವವನು. ಇಂತಹವರ ಹೇಳಿಕೆಗಳಿಗೆಲ್ಲ ಉತ್ತರ ಕೊಡಲು ಹೋಗುವುದಿಲ್ಲ. ಅವರಿಗೆಲ್ಲ ಉತ್ತರ ಕೊಟ್ಟರೆ ನಾವೂ ಹುಚ್ಚರಾಗುತ್ತೇವೆ” ಎಂದು ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶಭಕ್ತಿ ಮತ್ತು ದೇಶಪ್ರೇಮದ ಬಗ್ಗೆ ಮಾತನಾಡುವವರು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹರಿಪ್ರಸಾದ್ ಹೇಳಿದರು. ಈ ವೇಳೆ ಜನಾರ್ದನ ರೆಡ್ಡಿ ವಿರುದ್ಧ ಅವರು ತೀವ್ರ ಟೀಕೆ ವ್ಯಕ್ತಪಡಿಸಿದರು.
ಇದೇ ವೇಳೆ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಶೀಘ್ರದಲ್ಲೇ ಪೊಲಿಟಿಕಲ್ ಅಫೇರ್ಸ್ ಕಮಿಟಿ ರಚನೆ ಮಾಡುವುದಾಗಿ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
“ಪೊಲಿಟಿಕಲ್ ಅಫೇರ್ಸ್ ಕಮಿಟಿ ಎಲ್ಲಾ ರಾಜ್ಯಗಳಲ್ಲೂ ಇದೆ. ಕರ್ನಾಟಕದಲ್ಲೂ ಸದ್ಯದಲ್ಲೇ ಈ ಸಮಿತಿಯನ್ನು ರಚನೆ ಮಾಡುತ್ತೇವೆ. ಇತ್ತೀಚೆಗೆ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆದಷ್ಟು ಬೇಗ ಪೊಲಿಟಿಕಲ್ ಅಫೇರ್ಸ್ ಕಮಿಟಿ ರಚಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಅದರಂತೆ ನಾವು ತಯಾರಿ ನಡೆಸುತ್ತಿದ್ದೇವೆ” ಎಂದು ಹೇಳಿದರು.
ಈ ಸಂಬಂಧ ಈಗಾಗಲೇ ಕಾಂಗ್ರೆಸ್ನ ಹಲವು ನಾಯಕರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯಲಾಗುತ್ತಿದೆ. ಶೀಘ್ರದಲ್ಲೇ ಚರ್ಚೆ ನಡೆಸಿ ಸಮಿತಿಯ ರಚನೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹರಿಪ್ರಸಾದ್ ಮಾಹಿತಿ ನೀಡಿದರು.



