ವಿದ್ಯೆ ಸೌಂದರ್ಯ ಸಜೀವ, ಚಿನ್ನ ಚಲುವು ಶವದಂತೆ: ಕುವೆಂಪು

Vijayasakshi (Gadag News) :

ವಿಶ್ವ ಪುಸ್ತಕ ದಿನ ಅಂಗವಾಗಿ ಲೇಖನ

ಸೃಷ್ಟಿಯ ಸಕಲ ಜೀವರಾಶಿಗಳಲ್ಲಿ ಮಾನವ ವಿಶಿಷ್ಟ ಹಾಗೂ ಬುದ್ದಿಜೀವಿ ಎನಿಸಿಕೊಂಡಿದ್ದಾನೆ. ಕಾರಣ ಅವನಲ್ಲಿದ್ದ ಅಜ್ಞಾನ, ಅಂಧಕಾರವನ್ನು ತೊರೆದು ಹಾಕಲು ನೆರವಾಗಿದ್ದೇ ಪುಸ್ತಕ. ಅರಿವು, ತಿಳುವಳಿಕೆ, ಜ್ಞಾನ, ಜ್ಞಾನಕ್ಕೆ ಮೂಲಕ ಆಕರಗಳೇ ಪುಸ್ತಕಗಳು. ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಹಾಗೂ ಬದುಕನ್ನು ಆಸಕ್ತಿದಾಯಕವಾಗಿ ಮುನ್ನೆಡಸಲು ಪುಸ್ತಕಗಳ ಪಾತ್ರ ಅಮೂಲ್ಯವಾದದು. ಕವಿ ಕುವೆಂಪು ಅವರು ಹೇಳುವ ಹಾಗೆ ನಮ್ಮಲ್ಲಿ ಯಾರೂ ಕಸಿದುಕೊಳ್ಳಲಾಗದ ಸಂಪತ್ತು ಎಂದರೆ ಅದು ಕೇವಲ ವಿದ್ಯೆ ಮಾತ್ರ. ಈ ವಿದ್ಯೆ ಸೌಂದರ್ಯ ನಮ್ಮಲ್ಲಿ ಸಜೀವ ಸೌಂದರ್ಯವಾಗಿದೆ.

ಪ್ರಾಪಂಚಿಕ ಬೋಗಗಳೆಲ್ಲವು ಕ್ಷಣಿಕ ಹಾಗೂ ಶವದಂತೆ ಎಂಬ ಅವರ ವಿಚಾರದಂತೆ ಜ್ಞಾನಕ್ಕಿಂತ ಮಿಗಿಲು ಮತ್ತಾವದು ಇಲ್ಲ. ಖಡ್ಗಕ್ಕಿಂತ ಹರಿತವಾದದು ಒಂದು ಲೇಖನಿ. ಇದರಿಂದ ಜೀವಕಳೆಯನ್ನು ಪಡೆಯುವದೇ ಪುಸ್ತಕಗಳು.
ಪ್ರತಿ ವರ್ಷ ಏ.೨೩ ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಹಾಗೇಯೇ ಇದೇ ದಿನವನ್ನು ಕಾಪಿರೈಟ್ (ಗ್ರಂಥಸ್ವಾಮ್ಯ) ದಿನವಾಗಿಯೂ ಆಚರಿಸಲಾಗುತ್ತದೆ. ಪ್ರತಿಯೊಬ್ಬರಲ್ಲಿಯೂ ಓದುವ ಅಭಿರುಚಿ ಆಸಕ್ತಿ ಬೆಳಸಲು ಹಾಗೂ ಹಿಂದಿನ ಮಹಾನುಭಾವ ವ್ಯಕ್ತಿಗಳಿಂದ ರೂಪಗೊಂಡ ಅತ್ಯಮೂಲ್ಯ ವಿಚಾರಧಾರೆಗಳನ್ನು ಮುಂದಿನ ಪೀಳಿಗೆ ಸರಿಯಾಗಿ ಅರ್ಥಮಾಡಿಕೊಂಡು ಭಾವಿ ಭವಿಷ್ಯದ ಉತ್ತಮ ರೂವಾರಿಗಳಾಗಬೇಕೆಂಬುದೇ ಮುಖ್ಯ ಉದ್ದೇಶವಾಗಿದೆ.


ಉತ್ತಮ ಗ್ರಂಥಗಳು ನಾಡಿನ ಸಂಸ್ಕೃತಿ ಕತೆಯ ಪ್ರತೀಕ. ಪುಸ್ತಕ ರೂಪದಲ್ಲಿ ವಿಹರಿಸುವ ಪ್ರತಿಯೊಬ್ಬನ ಬದುಕು ಸುಂದರವಾಗಿರುತ್ತದೆ. ಈ ಪುಸ್ತಕ ದಿನದ ಸ್ವಾರಸ್ಯವೆಂದರೆ ೧೫೬೪ ಏಪ್ರಿಲ್ ೨೩ ಜಗದ್ವಿಖ್ಯಾತ ನಾಟಕಕಾರ ವಿಲಿಯಂ ಷೇಕ್ಸಿಪಿಯರ್ ಜನಿಸಿದ ದಿನವಾಗಿದೆ. ೧೬೧೬ಏಪ್ರಿಲ್ ೨೩ ರಂದೇ ಷೇಕ್ಸಿಪಿಯರ್ ನಿಧನಹೊಂದಿದ ದಿನವು ಹೌದು. ಇದೇ ರೀತಿ ಏ. ೨೩ ಹಲವಾರು ಲೇಖಕರ ಜನ್ಮದಿನ ಮಾತ್ರವಲ್ಲ. ಹಲವು ವೈವಿದ್ಯತೆಯನ್ನು ಕಂಡ ದಿನವಾಗಿದ್ದರಿಂದ ಇಂತಹ ಎಲ್ಲ ಕಾರಣದಿಂದ ವಿಶ್ವ ಪುಸ್ತಕ ದಿನವಾಗಿ ಆಚರಿಸಲಾಗುತ್ತಿದೆ.


೩೫೦೦ ವರ್ಷಗಳ ಹಿಂದೆ ಗ್ರೀಕರು ಪ್ಯಾಸಿಸ್ ಎಂಬ ಹುಲ್ಲಿನ ಹಾಳೆಯ ಮೇಲೆ ಬರೆಯುತ್ತಿದ್ದರಂತೆ. ಅಂದು ಮುದ್ರಣ ಸೌಕರ್ಯವಿಲ್ಲದ ಸಂದರ್ಭದಲ್ಲಿಯೂ ತಾಳೆಗೆರೆ, ಮರದ ಹಾಳೆ, ಬಿದಿರು ಪಟ್ಟೆ, ಮೇಲೆ ಬರೆಯುತ್ತಿದ್ದರು. ಲಭ್ಯವಾದ ಕನ್ನಡ ಪುಸ್ತಕದಲ್ಲಿಯೂ ನೃಪತುಂಗನ ಕವಿರಾಜಮಾರ್ಗ ಅತ್ಯಂತ ಪ್ರಾಚೀನ ಗ್ರಂಥವಾಗಿದೆ. ಕನ್ನಡದ ಆದಿಕವಿ ಪಂಪ ನಿಂದ ರಾಷ್ಟ್ರ ಕವಿ ಕುವೆಂಪುರವರೆಗೆ ಸುಮಾರು ಐದು ಸಾವಿರದಷ್ಟು ಪುಸ್ತಕಗಳು ಪ್ರಕಟಗೊಂಡಿವೆ.


ಪ್ರಪಂಚದ ಎಲ್ಲ ಮುಖ್ಯ ಭಾಷೆಗಳಲ್ಲಿ ಪುಸ್ತಕಗಳು ಪ್ರಕಟಗೊಂಡಿದ್ದು, ಶ್ರೇಷ್ಟ ಅತ್ಯದ್ಬುತ ಪುಸ್ತಕಗಳಿಗೆ ನೋಬೆಲ್, ಬುಕರ್, ಜ್ಞಾನಪೀಠ ಮೊದಲಾದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಕಥೆ, ಕಾದಂಬರಿ, ಕಾವ್ಯ ಮುಂತಾದ ಪ್ರಕಾರದ ಪುಸ್ತಕಗಳು ಓದುಗರ ಮನಸೂರೆಗೊಳ್ಳುತ್ತವೆ. ರಾಮಾಯಣ, ಮಹಾಭಾರತದಂತಹ ಕಾವ್ಯಗಳು ಜ್ಞಾನದೀವಿಗೆಯನ್ನು ಇಮ್ಮಡಿಗೊಳಿಸುತ್ತವೆ. ಮುಖ್ಯವಾಗಿ ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕವಾಗಿವೆ. ಪ್ರತಿ ವ್ಯಕ್ತಿ ವ್ಯಕ್ತಿತ್ವದ ನಿರ್ಮಾಣಕ್ಕೆ ಪುಸ್ತಕಗಳು ದಾರಿದೀಪವಾಗಿವೆ.

ಒಂದು ಉತ್ತಮ ಪುಸ್ತಕವು ನಮ್ಮೆಲ್ಲರ ಭಾವನೆಗಳಿಗೆ ಸ್ಪಂದಿಸುವ ಆತ್ಮೀಯ ಸ್ನೇಹಿತನಂತೆ. ಇಂದಿನ ಆಧುನಿಕ ಸಮಾಜದಲ್ಲಿ ಮೊಬೈಲ್ ಯುಗದ ಮಾಂತ್ರಿಕತೆಯಲ್ಲಿ ಪುಸ್ತಕವನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಮುಖ್ಯವಾಗಿ ಯುವಜನರಲ್ಲಿ ಹಾಗೂ ಮಕ್ಕಳಲ್ಲಿ ಓದುವ ಹವ್ಯಾಸ ತುಂಬಾ ಕ್ಞೀಣಿಸುತ್ತಿದೆ. ಇವುಗಳ ಮಧ್ಯ ಸಾಹಿತ್ಯವನ್ನು ಆಸ್ವಾದಿಸುವ ಜನರು ಇರುವ ಪರಿಣಾಮ ಪುಸ್ತಕಗಳ ಬೇಡಿಕೆ ಕಳೆಗುಂದಿಲ್ಲ.

ಏ. ೨೩ ಓದುಗ ಪ್ರೇಮಿಗಳಿಗೆ ಹಬ್ಬದ ದಿನ. ನಮ್ಮ ಜ್ಞಾನ ಶ್ರೀಮಂತಿಕೆಗೆ ಆಧಾರವಾದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡು ನಮ್ಮ ಮಕ್ಕಳಿಗೂ ಪುಸ್ತಕ ಸಂಸ್ಕೃತಿಯನ್ನು ಬೆಳಸಬೇಕು. ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಉತ್ತಮ ಪುಸ್ತಕಗಳು ಪ್ರೇರಣೆಯಾಗಿದ್ದು, ನನ್ನ ಈ ಪುಸ್ತಕ ರೂಪದ ಆಸೆಗೊಂದು ಆಸರೆ, ಭಾವಲಹರಿ, ಜೀವನಗಂಗೆ, ಕೃತಿಗಳು ಹಾಗೂ ವ್ಯಕ್ತಿತ್ವ ನಿರ್ಮಾಣದ ಲೇಖನಗಳು ಬರೆಯಲು ಸ್ಪೂರ್ತಿಯಾಗಿವೆ. ಸಾಹಿತ್ಯ ಅಭಿರುಚಿ ಹೊಂದುವದರೊಂದಿಗೆ ಈ ನಾಡು ಕಂಡ ಮಹಾನ್ ಲೇಖಕರ ಸಾಹಿತ್ಯ ಕೃಷಿಕರ ಕೃತಿಗಳ್ನು ಓದುವ ಹವ್ಯಾಸ ಬೆಳಸಿಕೊಳ್ಳೊಣ. ಪುಸ್ತಕ ಪ್ರಪಂಚವು ನಮ್ಮಲ್ಲಿ ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಹತ್ತು ಹಲವು ವಿಚಾರಧಾರೆಗಳನ್ನು ತಿಳಿಯೋಣ. ಪುಸ್ತಕಗಳು ನೈಜ ಆಕರಗಳಾಗಿವೆ. ಸಹೃದಯ ಪುಸ್ತಕಾಭಿಮಾನಿಗಳಿಗೆ ವಿಶ್ವ ಪುಸ್ತಕ ದಿನದ ಶುಭಾಶಯಗಳು.

ಸುಧಾ ಹುಚ್ಚಣ್ಣವರ, ಉಪನ್ಯಾಸಕರು
ಎಫ್.ಎಂ. ಡಬಾಲಿ ಪಿ.ಯೂ ಕಾಲೇಜ ಶಿರಹಟ್ಟಿ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

four × four =