ಅಸುರಕ್ಷಿತ ರಾಸಾಯನಿಕ ಕೈಗಾರಿಕೆಗಳು,
ಉಸಿರೊಳಗೇ ವಿಷಗಾಳಿ

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಸ್ವಾರ್ಥದಿಂದ ಮನುಕುಲ ನಾಶ ಎಂದು ಬೋಧಿಸಿದ ಬುದ್ಧನನ್ನು ನೆನೆಯುವ ಬುದ್ಧ ಪೂರ್ಣಿಮೆಯ ದಿನದಂದು ವಿಷಾನಿಲ ಸೋರಿಕೆಯಿಂದ ಹತ್ತಕ್ಕೂ ಹೆಚ್ಚು ಜನ (ಇದು ಇನ್ನೂ ಹೆಚ್ಚಬಹುದು ಎನ್ನಲಾಗಿದೆ) ಜೀವ ತೆತ್ತು ಸಾವಿರಕ್ಕೂ ಹೆಚ್ಚು ಜನ ತೀವ್ರ ಅಸ್ವಸ್ಥರಾಗಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿಯ ಗೋಪಾಲಪಟ್ಟಣಂನಲ್ಲಿ ಎಲ್‌ಜಿ ಪಾಲಿರ‍್ಸ್ ಕೈಗಾರಿಕಾ ಘಟಕದಲ್ಲಿ ರಾತ್ರಿ ೨.೩೦ರ ಸುಮಾರಿಗೆ ಸ್ಟೆöÊರೆನ್ (ಎಥಿನೈಲ್ ಬೆಂಜಿನ್, ವಿನೈಲ್ ಬೆಂಜಿನ್ ಪದಾರ್ಥ) ಎಂಬ ವಿಷಾನಿಲ ಸೋರಿಕೆಯಾದ ಪರಿಣಾಮ ಸುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನ ಆಗಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ.

ಮೂರುವರೆಗೆ ಡಿಜಿಪಿ ಗೌತಮ್ ಸೇವಂಗ್ ನೇತೃತ್ವದಲ್ಲಿ ಸ್ಥಳದ ಕಡೆ ಧಾವಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಜನ ಪ್ರಜ್ಞಾಹೀನ ಇಲ್ಲಾ ಅರೆಪ್ರಜ್ಞೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದರು. ಗಾಳಿಯಲ್ಲಿ ವಿಷಾನಿಲ ಬೆರೆತ ಪರಿಣಾಮ ಪೊಲೀಸರಿಗೆ ಕಾರ್ಯಾಚರಣೆ ನಡೆಸಲು ಕಷ್ಟವಾಗಿತು ಎಂದರೆ ಪರಿಸ್ಥಿತಿಯ ಭೀಕರತೆ ಅರ್ಥವಾಗಬಹುದು.
ಅರೆಪ್ರಜ್ಞೆಯಲ್ಲಿ ಇಬ್ಬರು ಬಾವಿಗೆ ಬಿದ್ದು ಸತ್ತಿದ್ದಾರೆ ಎಂಬ ಅಂಶ ಈ ದುರಂತ ದಿಂದ ಭವಿಷ್ಯದಲ್ಲಿ ಆಗಬಹುದಾದ ಅಪಾಯಕ್ಕೆ ಸಂಕೇತದಂತಿದೆ.

ಸಿಂಥೆಟಿಕ್ ರಬ್ಬರ್ ಮತ್ತು ರೆಸಿನ್ಸ್ ತಯಾರಿಸುವ ಈ ಘಟಕ ೧೯೬೮ರಲ್ಲಿ ಹಿಂದೂಸ್ತಾನ್ ಪಾಲಿರ್ಸ್ ಹೆಸರಿನಲ್ಲಿ ಸ್ಥಾಪಿತವಾಗಿದೆ. ೧೯೯೭ರಲ್ಲಿ ದಕ್ಷಿಣ ಕೊರಿಯಾದ ಎಲ್‌ಜಿ ಕೆಮಿಕಲ್ಸ್ ಇದನ್ನು ಖರೀದಿಸಿದ ಮೇಲೆ ಎಲ್‌ಜಿ ಪಾಲಿರ‍್ಸ್ ಎಂದು ಹೆಸರು ಬದಲಾಯಿಸಲಾಗಿದೆ.

೧೯೮೪ರಲ್ಲಿ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಯುನಿಯನ್ ಕಾರ್ಬೈಡ್ ಅನಿಲ ದುರಂತದ ನಂತರವೂ ರಾಸಾಯನಿಕಗಳನ್ನು ಬಳಸುವ ಕೈಗಾರಿಕೆಗಳ ಮೇಲೆ ಬಿಗಿಯಾದ ನಿರ್ಬಂಧ ಹೇರಿಲ್ಲ. ಇದು ನಮ್ಮ ಜಡ್ಡುಗಟ್ಟಿದ ಮತ್ತು ಭ್ರಷ್ಟ ವ್ಯವಸ್ಥೆಗೆ ಸಾಕ್ಷಿಯಾಗಿದೆ. ಸಣ್ಣ ಸಣ್ಣ ಘಟಕಗಳಲ್ಲಿ ಅಲ್ಲಿನ ಉದ್ಯೋಗಿಗಳು ಶಾಶ್ವತ ಉಸಿರಾಟದ ಕಾಯಿಲೆಗಳಿಗೆ ತುತ್ತಾಗಿ ಸಾಯುವುದು ವರದಿ ಆಗುವುದೇ ಇಲ್ಲ.

ಇವತ್ತಿಗೂ ಭೂಪಾಲ್ ದುರಂತದಲ್ಲಿ ಸತ್ತವರ ನಿಖರ ಸಂಖ್ಯೆಯೇ ಗೊತ್ತಿಲ್ಲ. ಸರ್ಕಾರಿ ಅಂಕಿಸಂಖ್ಯೆಯ ಪ್ರಕಾರ ೨.೫ ಲಕ್ಷದಿಂದ ೩ ಲಕ್ಷ ಜನ ಸಾವನ್ನಪ್ಪಿದರು. ಆದರೆ ಕೆಲವು ಸಮೀಕ್ಷೆಗಳ ಪ್ರಕಾರ, ದುರಂತ ಸಂಭವಿಸಿದ ಮೊದಲ ಮೂರು ವಾರದಲ್ಲಿ ೮ ಲಕ್ಷ ಮತ್ತು ಕಾಲಾಂತರದಲ್ಲಿ ೮ ಲಕ್ಷ ಜನ ಅಸು ನೀಗಿದರು. ಇವತ್ತಿಗೂ ಭೂಪಾಲ್ ಸುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಅಂಗವಿಕಲರನ್ನು ಕಾಣಬಹುದು. ವಂಶಾವಳಿಯ ಮೂಲಕ ಈಗಲೂ ವಿಷಾನಿಲ ತನ್ನ ಅಪಾಯವನ್ನು ತೋರಿಸುತ್ತಲೇ ಇದೆ.

ಭೂಪಾಲ್ ಅನಿಲ ದುರಂತದ ವಿಚಾರಣೆಯೇ ಹಾಸ್ಯಾಸ್ಪದ ರೀತಿಯಲ್ಲಿ ನಡೆಯಿತು. ಆಗ ಯುನಿಯನ್ ಲಾರ್ಬೈಡ್ ಸಿಇಒ ಆಗಿದ್ದ ಕೆನೆತ್ ಅಂಡರಸನ್‌ಗೆ ಯಾವ ಶಿಕ್ಷೆಯೂ ಆಗಲಿಲ್ಲ. ಭಾರತದ ಎಂಟು ನೌಕರರನ್ನು ತಪ್ಪಿಸ್ಥರು ಎಂದು ಗುರುತಿಸಿದರೂ, ಅವರೂ ಖುಲಾಸೆಯಾದರು.
ಪರಿಹಾರದ ವಿಷಯದಲ್ಲೂ ಸಂತ್ರಸ್ತರಿಗೆ ಮೋಸ ಮಾಡಲಾಯಿತು. ಅವತ್ತೇ ರಾಸಾಯನಿಕ ಕೈಗಾರಿಕೆಗಳ ಮೇಲೆ ಇನ್ನಷ್ಟು ಕಠಿಣ ಕಾನೂನು ರೂಪಿಸಿದ್ದರೆ ವಿಶಾಖಪಟ್ಟಣದಲ್ಲಿ ಈ ದುರಂತ ಸಂಭವಿಸುತ್ತಿರಲಿಲ್ಲ.
ನಮ್ಮ ಆಡಳಿತ ವ್ಯವಸ್ಥೆ ಕೈಗಾರಿಕೋದ್ಯಮಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪರಿಣಾಮವಾಗಿ ಉಸಿರಾಡುವ ಗಾಳಿಯೇ ವಿಷಪೂರಿತ ಆಗುತ್ತಿರುವ ಕಾಲ ಇದಾಗುತ್ತಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

three × 5 =