ಅವರು ನಡೆಯುತ್ತಲೇ ಇದ್ದಾರೆ

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಲಾಕ್‌ಡೌನ್ ಅವಧಿಯ ದುರಂತ ಕತೆಗಳು ಹೊರ ಬರುತ್ತಿವೆ. ಊಟ, ವಸತಿ ಇಲ್ಲದೇ ದಿಕ್ಕಾಪಾಲಾಗಿದ್ದ ವಲಸೆ ಕಾರ್ಮಿಕರಿಗೆ ಅವರ ಊರನ್ನು ತಲುಪಲೂ ಸರ್ಕಾರಗಳೇ ಅಡ್ಡಿ ಮಾಡುತ್ತಿವೆ. ಇದಕ್ಕಿಂತ ನಾಚಿಕೆಗೇಡುತನ ಬೇಕೆ?
ನಂಜನಗೂಡಿನಲ್ಲಿ ನೂರಾರು ಕಾರ್ಮಿಕರನ್ನು ೪೦ ದಿಗಳ ಕಾಲ ಬಲವಂತದಲ್ಲಿ ಕೂಡಿ ಹಾಕಿ ಕೆಲಸ ಮಾಡಿಸಿ ಕೊಂಡಿದ್ದಾರೆ. ಕೊಪ್ಪಳದ ಕಲ್ಯಾಣಿ ಉದ್ಯಮವೂ ಕಾರ್ಮಿಕರನ್ನು ಬೀದಿಪಾಲು ಮಾಡಿದೆ. ನಮ್ಮ ಗದಗ ಜಿಲ್ಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಾರ್ಮಿಕರನ್ನು ರೆಡ್‌ಕ್ರಾಸ್ ಸಂಸ್ಥೆ ಮತ್ತು ಕಾರ್ಮಿಕ ಇಲಾಖೆ ಅವರ ಊರಿಗೆ ಕಳಿಸುವ ವ್ಯವಸ್ಥೆ ಮಾಡಿವೆ. ಆದರೆ ಇದು ಎಲ್ಲ ಕಡೆಯೂ ಆಗುತ್ತಿಲ್ಲ.

ಮೈಸೂರು, ಮಂಗಳೂರು ಸೇರಿದಂತೆ ಹಲವಾರು ಕಡೆ ಕಾರ್ಮಿಕರನ್ನು ಗುಂಪು ಗುಂಪಾಗಿ ಇಟ್ಟುಕೊಂಡಿರುವುದೂ ಇದೆ; ಕೆಲವು ಕಡೆ ಕಾರ್ಮಿಕರನ್ನು ಇರಲು ಬಿಡದೇ ಇಲ್ಲಿಂದ ಮೊದಲು ಹೊರಡಿ ಎಂದು ಹೇಳುತ್ತಿರುವುದೂ ಇದೆ. ನಿಜಕ್ಕೂ ಮನುಷ್ಯರಾದವರು ಕರಗದಿರಲು ಸಾಧ್ಯವೇ ಇಲ್ಲ, ಅಂತಹ ನೂರಾರು ವಿವರಗಳು ಇವೆ. ಹಾಗಾಗಿ ನಾವು ಇದಕ್ಕೆ ಪ್ರತಿಕ್ರಿಯಿಸಲೇಬೇಕು.

ಇಂದಿನಿಂದ ರೈಲುಗಳು ಹೊರಡಲಿವೆ ಎಂದು ಹೇಳಲಾಗುತ್ತಿದೆಯಾದರೂ ಇನ್ನೂ ಎಲ್ಲೆಲ್ಲೋ ಸಿಕ್ಕಿಕೊಂಡಿರುವ ಸಾವಿರಾರು ಜನರಿದ್ದಾರೆ ಮತ್ತು ೩ ದಿನಗಳ ನಂತರ ರೈಲುಗಳು ಮತ್ತೆ ನಿಲ್ಲುತ್ತವೆ. ಜೊತೆಗೆ ಸರ್ಕಾರದ ಮಟ್ಟದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಹಾಗಾಗಿ ಇದೊಂದು ಕೊನೆಯಿಲ್ಲದ ಅಮಾನವೀಯ ದುರಂತವಾಗಬಾರದು.

ಕರ್ನಾಟಕವು ಅಮಾನವೀಯ ರಾಜ್ಯವಲ್ಲ; ಬಡವರ ಸಂಕಷ್ಟಕ್ಕೆ, ಅಸಂಘಟಿತ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಕರ್ನಾಟಕದ ನಾಗರಿಕ ಸಮಾಜ ತನ್ನ ಕೈಲಾದಷ್ಟು ಸ್ಪಂದಿಸಿದೆ. ಸರ್ಕಾರವು ಒಂದಷ್ಟು ಸ್ಪಂದಿಸಿದ್ದರೂ, ಗೊಂದಲಕ್ಕೆ ಸಿಕ್ಕಿಕೊಂಡಂತೆ ಕಾಣುತ್ತಿದೆ. ಅದಕ್ಕೆ ಯಾರು ಕಾರಣ, ಯಾವ ಲಾಬಿಗಳು ಅಥವಾ ಯಾವ ಅಸಾಮರ್ಥ್ಯ ಇದಕ್ಕೆ ಕಾರಣ ಎಂಬುದು ನಂತರದ ದಿನಗಳಲ್ಲಿ ಪತ್ತೆಯಾಗಲೇಬೇಕು.

ಈ ಸದ್ಯ ಆ ವಿಚಾರದಲ್ಲಿ ದೋಷಾರೋಪಣೆ ಮಾಡುವುದನ್ನು ಪಕ್ಕಕ್ಕಿಡೋಣ. ಈಗಂತೂ ಈ ವಿಚಾರದ ರಾಜ್ಯ ಮಟ್ಟದ ನಿಯೋಜಿತ ಅಧಿಕಾರಿ ಮಂಜುನಾಥ ಪ್ರಸಾದ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರೇ ಜವಾಬ್ದಾರರು. ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಹಿತ ಕಾಪಾಡುವುದು ಇವರೆಲ್ಲರ ಜವಾಬ್ದಾರಿ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

eight − 4 =