ಕೊರೋನಾ, ಶಾಲೆ ಮತ್ತು ಪರೀಕ್ಷೆ

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಎಲ್ಲ ಸರ್ಕಾರಗಳಿಗೂ ಇದು ನಿಜಕ್ಕೂ ಸಂಕಷ್ಟ ಸಮಯ. ಲಾಕ್‌ಡೌನ್ ಈಗ ಮೂರನೇ ಹಂತದಲ್ಲಿದ್ದು, ಬಹುಪಾಲು ರಾಜ್ಯಗಳು ಮೂರನೇ ಹಂತದಾಚೆ ಲಾಕ್‌ಡೌನ್ ವಿಸ್ತರಿಸಲು ನಿರ್ಧಾರ ಮಾಡಿಲ್ಲ. ಆದರೆ. ಲಾಕ್‌ಡೌನ್ ತೆರವಾಗುತ್ತದೆ ಎಂಬ ಮಾತ್ರಕ್ಕೆ ಶಾಲಾ-ಕಾಲೇಜು ಮತ್ತು ವಿವಿಗಳನ್ನು ಆರಂಭಿಸಲು ಸಾಧ್ಯವೇ?
ಈಗ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆ ಎನಿಸಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪ್ರಕಟಿಸಿರುವ ಮಾಹಿತಿ ಪ್ರಕಾರ, ಎಲ್ಲ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಅಗಸ್ಟ್ ನಂತರವಷ್ಟೇ ಆರಂಭಿಸಬೇಕು.
೧೮ ವರ್ಷ ದಾಟಿರುವ ಯುವಕರು ಹಾಜರಾಗುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೇ ಅಗಸ್ಟ್ ನಲ್ಲಿ ಆರಂಭವಾಗುತ್ತಿವೆ. ಅಂದರೆ ೧೮ಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳ ಶಾಲೆಗಳನ್ನು ಆರಂಭಿಸಲು ಇದು ಸೂಕ್ತ ಕಾಲ ಅಲ್ಲ ಎಂದು ಕರ್ನಾಟಕ ಸೇರಿದಂತೆ ಹಲವು ಸರ್ಕಾರಗಳು ನಿರ್ಧಾರಕ್ಕೆ ಬಂದಿವೆ. ಪುಟ್ಟ ಪುಟ್ಟ ಮಕ್ಕಳ ದೃಷ್ಟಿಯಿಂದ ಇದು ಒಳ್ಳೇ ನಿರ್ಧಾರವೇ.

ಆದರೆ ಜೂನ್ ಒಂದರಿಂದ ಶುರುವಾದಾಗಲೂ ಶಾಲೆಗಳಲ್ಲಿ ಪಠ್ಯಕ್ರಮ ಪೂರ್ತಿ ಮಾಡುವುದಕ್ಕೆ ಹೆಣಗಾಡುತ್ತಿದ್ದರು. ಅದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯ ದೋಷಗಳು ಕಾರಣ. ಈಗ ಎರಡು-ಮೂರು ತಿಂಗಳು ತಡವಾಗಿ ಆರಂಭಿಸುವುದು ಅನಿವಾರ್ಯ. ಇದೇ ಸಮಯದಲ್ಲಿ ತಡವಾಗಿ ಆರಂಭವಾಗುವ ಶಾಲೆಗಳಲ್ಲಿ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಮುಗಿಸುವುದು ಕಷ್ಟ.

ಒಂದೋ ಸರ್ಕಾರ ಪಠ್ಯಕ್ರಮದಲ್ಲಿ ಕಡಿತ ಮಾಡಬೇಕು. ಇದರಿಂದ ಆಯಾ ವರ್ಷ ಆಯಾ ವಯಸ್ಸಿಗೆ ದಕ್ಕಬೇಕಾದ ಜ್ಞಾನ ನಮ್ಮ ಮಕ್ಕಳಿಗೆ ಸಿಗದೇ ಹೋಗುತ್ತದೆ. ಇದರ ಬದಲು ಭಾನುವಾರ ಅರ್ಧ ದಿನ ಶಾಲೆ-ಕಾಲೇಜು ನಡೆಸುವುದು, ದಸರಾ ರಜೆಯನ್ನು ರದ್ದು ಮಾಡುವುದು ಅಥವಾ ಕಡಿತ ಮಾಡುವುದು ಈಗ ಉಳಿದ ದಾರಿ.
ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗುತ್ತಿದೆ. ಒಳ್ಳೆಯದೇ. ಆದರೆ ಈ ಕಾರಣಕ್ಕೆ ವಯೋಮಿತಿ ನೆಪದಲ್ಲಿ ಕೆಲವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

two × 2 =