ಚಿತ್ರರಂಗ @108; ಮತ್ತೇ ಮುನ್ನೆಲೆಗೆ ಬಂದ ಡ್ರೈವ್ ಇನ್ ಸಿನಿಮಾ

post advertise banner
Vijayasakshi (Gadag News) :

ಮುಖ್ಯಾಂಶಗಳು: -ಪ್ರದರ್ಶಕರು, ಕಾರ್ಮಿಕರು, ಚಿತ್ರಮಂದಿರಗಳ ಮಾಲಕರ ಬದುಕು ಅತಂತ್ರ -ಚಿತ್ರಮಂದಿರಗಳ ಕಾರ್ಮಿಕರಿಗೆ ಸರಕಾರ ಪರಿಹಾರ ಪ್ಯಾಕೇಜ್ ಘೋಷಿಸಲಿ-ಒಟಿಟಿ, ನೆಟ್‌ಫ್ಲೆಕ್ಸ್ ಸದ್ಯದ ಜನರೇಷನ್‌ಗಷ್ಟೇ, ದೀರ್ಘಕಾಲ ಓಡಲ್ಲಮಕಾಡೆ ಮಲಗಿದ ಮಲ್ಟಿಪ್ಲೆಕ್ಸ್

-ಬಸವರಾಜ ಕರುಗಲ್.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಕೊಪ್ಪಳ: ಭಾರತೀಯ ಚಿತ್ರರಂಗಕ್ಕೆ ಈಗ 108ನೇ ವರ್ಷ. ಆಗ ದಾದಾಸಾಹೇಬ್ ಫಾಲ್ಕೆಯವರಿಂದ ಶುರುವಾದ ಚಿತ್ರ ನಿರ್ಮಾಣ ಸುಮಾರು ಎಂಟು ದಶಕಗಳ ಕಾಲ ನಿರ್ವಿಘ್ನವಾಗಿತ್ತು. ಆನಂತರ ಕಾಲಿಟ್ಟ ಮಲ್ಟಿಪ್ಲೆಕ್ಸ್‌ನಿಂದ ಒಂದೊಂದೇ ಕಷ್ಟಗಳು ಎದುರಾಗುತ್ತಾ ಬಂದವು. ಈಗ ಕೊರೋನಾ ಸಂಕಷ್ಟದ ಜೊತೆಗೆ 108 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಚಿತ್ರರಂಗ, 108 ಸಮಸ್ಯೆಗಳಿಂದ ನಲುಗಿ ಹೋಗಿದೆ.

108ಕ್ಕೆ ಕರೆ ಮಾಡಿದರೆ ಚಿಕಿತ್ಸೆ ಲಭಿಸುವ ಭರವಸೆಯಾದರೂ ಇದೆ.‌ ಆದರೆ ಈ ಮಾತು, ಈ ಸಂಖ್ಯೆ ಚಿತ್ರರಂಗದ ಭವಿಷ್ಯದ ಪಾಲಿಗೆ ನಿಲುಕದ ನಕ್ಷತ್ರವಾಗಿದೆ. 1978-79ರ ಸುಮಾರಿಗೆ ಭಾರತಕ್ಕೆ ಪರಿಚಯಗೊಂಡು, ವಿಫಲವಾಗಿದ್ದ ಡ್ರೈವ್ ಇನ್ ಸಿನಿಮಾ, ಈಗ ಮತ್ತೇ ಮುಂಚೂಣಿಗೆ ಬಂದಿದೆ. ಕೊರೋನಾ ಕಷ್ಟಕಾಲದ ಪ್ರಯೋಜನವನ್ನು ಪಡೆದುಕೊಳ್ಳುವ ಲೆಕ್ಕಾಚಾರ ಡ್ರೈವ್ ಇನ್ ಸಿನಿಮಾದ ಹಿಂದಿದೆ.

ಏನಿದು ಡ್ರೈವ್ ಇನ್ ಸಿನಿಮಾ?

ಡ್ರೈವ್ ಇನ್ ಸಿನಿಮಾ ಎಂದರೆ ಬೃಹದಾಕಾರ ವಿಸ್ತಾರದ ಪ್ರದೇಶದಲ್ಲಿ (ಸುಮಾರು 2-3 ಎಕರೆ) ಬೃಹತ್ ಪರದೆಯಲ್ಲಿ ಸಿನಿಮಾ ಪ್ರದರ್ಶನವಾಗುತ್ತದೆ. ಪರದೆ ಸುತ್ತ ಕಾರುಗಳನ್ನ ನಿಲ್ಲಿಸಿ, ಕಾರಿನಲ್ಲಿ ಕುಳಿತು ಸಿನಿಮಾ ನೋಡುವುದು. ವಿದೇಶಗಳಲ್ಲಿ ತಕ್ಕಮಟ್ಟಿಗೆ ಯಶಸ್ಸು ಗಳಿಸಿರುವ ಇದು, ಭಾರತಕ್ಕೆ ಬಂದದ್ದು 1978-79ರಲ್ಲಿ. ಕ್ರಮೇಣ ಕರ್ನಾಟಕಕ್ಕೂ ಕಾಲಿಟ್ಟಿತ್ತು. ಆಗ‌ ದೇಶದಲ್ಲಿ ಚಿತ್ರಮಂದಿರಗಳ ಸಂಖ್ಯೆ ಅಧಿಕವಾಗಿದ್ದು, ಬಹುತೇಕ ಜನ ಸಿನಿಮಾಗಳನ್ನ ಥೇಟರ್‌ನಲ್ಲೇ ನೋಡಿ ಖುಷಿ ಪಡುತ್ತಿದ್ದರು. ಜನಜಂಗುಳಿ ಮಧ್ಯೆ ಸಿನಿಮಾ ನೋಡಲು‌ ಕಸಿವಿಸಿಗೊಳ್ಳುತ್ತಿದ್ದ ಶ್ರೀಮಂತ ವರ್ಗ ಮಾತ್ರ ಡ್ರೈವ್ ಇನ್ ಸಿನಿಮಾ ಕಡೆ ಮುಖ ಮಾಡಿತ್ತು. ಅದು ವೀಕೆಂಡ್‌‌ನಲ್ಲಿ ಮಾತ್ರ. ಆಗೆಲ್ಲ ಭಾರತದಲ್ಲಿ ಶ್ರೀಮಂತ ವರ್ಗದ ಅನುಪಾತ ತುಂಬಾ ಕಡಿಮೆ ಇತ್ತು. ಹಾಗಾಗಿ ಡ್ರೈವ್ ಇನ್ ಸಿನಿಮಾ ವಿಫಲವಾಗಿ ಕಣ್ಮರೆಯಾಗಿತ್ತು.

ಆನಂತರ ಮಲ್ಟಿಪ್ಲೆಕ್ಸ್ ಆರಂಭವಾದವು. ಆಗ ಚಿತ್ರಮಂದಿರಗಳ ಮಾಲೀಕರಿಂದ ವಿರೋಧ ವ್ಯಕ್ತವಾಯಿತಾದರೂ ಬಹುದೊಡ್ಡ ಪ್ರಮಾಣದಲ್ಲಿ ಕೂಗು ಕೇಳಲಿಲ್ಲ. ಅಂತೆಯೇ ಕರ್ನಾಟಕದ ದೊಡ್ಡ ನಗರಗಳಲ್ಲೂ ಮಲ್ಟಿಪ್ಲೆಕ್ಸ್ ತಲೆ ಎತ್ತಿದವು. ಆಮೇಲೆ ದೊಡ್ಡ ಬೆಳವಣಿಗೆ ಎಂದರೆ ನಟ-ನಿರ್ಮಾಪಕ ಕಮಲ್ ಹಾಸನ್ ತಮ್ಮ ವಿಶ್ವರೂಪಂ ಸಿನಿಮಾವನ್ನು ಆನ್‌ಲೈನ್ ಮೂಲಕ ಬಿಡುಗಡೆಗೊಳಿಸಲು ಯೋಚಿಸಿದ್ದು. ಎಲ್ಲೆಡೆ ದೊಡ್ಡ ಪ್ರತಿರೋಧ ವ್ಯಕ್ತವಾಗಿದ್ದರಿಂದ ವಿಶ್ವರೂಪಂ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಯಿತು.

ಈಗ ಇದು ಕೊರೋನಾ ಸಂಕಷ್ಟದ ಕಾಲ. ದೇಶಾದ್ಯಂತ ಎಲ್ಲ ಚಿತ್ರಮಂದಿರಗಳ, ಮಲ್ಟಿಪ್ಲೆಕ್ಸ್‌ಗಳ ಬಾಗಿಲು ಬಂದ್ ಆಗಿ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಈ ಸಮಯದಲ್ಲಿ ಓಟಿಟಿ, ನೆಟ್‌ಫ್ಲೆಕ್ಸ್‌ನಂಥ ವ್ಯವಸ್ಥೆ ಕಣ್ತೆರೆದಿದೆ. ಇವೆಲ್ಲ ಈಗಿನ ಜನರೇಷನ್ ರೀಚ್ ಆಗಬಹುದಷ್ಟೇ. ದೀರ್ಘ ಕಾಲ ಓಡುವ ಗ್ಯಾರೆಂಟಿ ಇಲ್ಲ. ಓಟಿಟಿಯಲ್ಲಿ ಈಚೆಗೆ ಬಿಡುಗಡೆಗೊಂಡ ಸಿನಿಮಾಗಳ ವೀಕ್ಷಕರ ಅಂಕಿ-ಸಂಖ್ಯೆ ಗಮನಿಸಿದರೆ ಇವುಗಳ ಭವಿಷ್ಯ ಅಸ್ಪಷ್ಪ ಎಂಬುದು ಅರ್ಥವಾಗುತ್ತದೆ.

ಅದಕ್ಕಾಗಿ ಈ ಹಿಂದೆ ಭಾರತಕ್ಕೆ ಪರಿಚಯಗೊಂಡು ಕಾಲ್ಕಿತ್ತಿದ್ದ ಡ್ರೈವ್ ಇನ್ ಸಿನಿಮಾ ಮತ್ತೇ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ಈಗಾಗಲೇ ವಿಕೇಂಡ್ ವೇಳೆ ಇದು ಪ್ರದರ್ಶನಗೊಳ್ಳುತ್ತಿದೆ. ಒಂದು ಕಾರಿನಲ್ಲಿ ಮೂವರಿರಬೇಕು, 50 ಕಾರುಗಳಿಗೆ ಮಾತ್ರ ಪ್ರವೇಶ. ಸ್ಯಾನಿಟೈಸರ್ ಹೊಂದಿರಬೇಕು. ಮಾಸ್ಕ್ ಕಡ್ಡಾಯ. ಆರು ಅಡಿ ಅಂತರದಲ್ಲಿ ಕಾರುಗಳನ್ನ ಪಾರ್ಕ್ ಮಾಡಬೇಕು ಎಂಬಿತ್ಯಾದಿ ನಿಬಂಧನೆಗಳಿವೆ. ಹಿಂದಿನ 40 ವರ್ಷಗಳಿಗೆ ಹೋಲಿಸಿದರೆ ಶ್ರೀಮಂತ ವರ್ಗದವರ ಪ್ರಮಾಣ ಅಧಿಕವಾಗಿದೆ. ಲೆಕ್ಕ ಹಾಕಿದರೆ ಕನಿಷ್ಟ ಹತ್ತು ಮನೆಗಳಿಗೆ ಒಂದರಂತೆ ಕಾರುಗಳಿವೆ. ಇವೆಲ್ಲವೂ ಡ್ರೈವ್ ಇನ್ ಸಿನಿಮಾ ಕೈ ಹಿಡಿಯಬಹುದು ಎಂಬ ಲೆಕ್ಕಾಚಾರ ಇದನ್ನ ನಿರ್ವಹಿಸುತ್ತಿರುವ ಜನರದ್ದು. ಅದೇನೇ ಇರಲಿ, ಕೊರೋನಾ ಆದಷ್ಟು ಬೇಗ ತೊಲಗಲಿ, ಚಿತ್ರರಂಗ ಚೇತರಿಕೆ ಕಾಣಲಿ, ಚಿತ್ರರಂಗದ ಕಾರ್ಮಿಕರ ಬದುಕು ಹಸನಾಗಲಿ ಎಂಬುದಷ್ಟೇ ಹಾರೈಕೆ.

ಕೊರೋನಾ ಬಂದು ಚಿತ್ರ ಪ್ರದರ್ಶಕರ, ಚಿತ್ರಮಂದಿರಗಳ ಕಾರ್ಮಿಕರ ಬದುಕು ಅತಂತ್ರವಾಗಿದೆ. ಡ್ರೈವ್ ಇನ್ ಸಿನಿಮಾ ಪ್ರದರ್ಶನ ಕಾನೂನು ಬಾಹಿರ. ಈ ಬಗ್ಗೆ ಸರಕಾರಕ್ಕೆ ದೂರು ನೀಡುತ್ತೇವೆ. ಕಾರ್ಮಿಕರಿಗೆ ಸರಕಾರ ಪರಿಹಾರ ಪ್ಯಾಕೇಜ್ ಘೋಷಿಸಲಿ.
-ವಿಶ್ವನಾಥ್ ಮಹಾಂತಯ್ಯನಮಠ, ಚಿತ್ರಪ್ರದರ್ಶಕರು, ಕೊಪ್ಪಳ.

ಚಿತ್ರರಂಗಕ್ಕೆ ಎದುರಾಗುತ್ತಿರುವ ಸಮಸ್ಯೆಗಳು ಇಂದು-ನಿನ್ನೆಯವಲ್ಲ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಚಿತ್ರಮಂದಿರಗಳನ್ನು ಬಂದ್ ಮಾಡಿ, ಕಲ್ಯಾಣಮಂಟಪವನ್ನೋ, ವಾಣಿಜ್ಯ ಮಳಿಗೆಯನ್ನೋ ಮಾಡಬೇಕು. ಬಹಳಷ್ಟು ಜನ ಮಾಲೀಕರು ಹಾಗೆಯೇ ಮಾಡಿದ್ದಾರೆ. ಸುಮಾರು ವರ್ಷಗಳಿಂದ ತುತ್ತಿನ ಚೀಲ ತುಂಬಿದ ಚಿತ್ರಮಂದಿರಗಳನ್ನು ಮುಚ್ಚಲು ಮನಸಿಲ್ಲ. ಸರಕಾರ ಚಿತ್ರರಂಗದ, ಚಿತ್ರರಂಗಕ್ಕೆ ಸಂಬಂಧಪಟ್ಟ ಜನರ ಸಂಕಷ್ಟಕ್ಕೆ ಸ್ಪಂದಿಸಲಿ.
-ಶಿವರಾಮಗೌಡ, ಚಿತ್ರಮಂದಿರದ ಮಾಲೀಕರು, ಮಾಜಿ ಸಂಸದರು, ಗಂಗಾವತಿ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.