ಶೈನಿಂಗ್ ಕ್ರೀಂ ತಂದು ಶೈನ್ ಆದ ಶಿಖಾ!

Vijayasakshi (Gadag News) :

-ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ ಶಿಖಾ, ಗುರುಬಸಪ್ಪ ಪೊಲೀಸ್ ಜೀಪ್ ಬಳಸಿದ್ದು ಸತ್ಯ
-ಇದು ಮುಗಿದು ಹೋದ ಕತೆಯಲ್ಲ, ಈಗಷ್ಟೇ ಆರಂಭ

ಶಿಖಾ ಶೇಖ್ ಪ್ರಕರಣ ಭಾಗ-4

ಬಸವರಾಜ್ ಕರುಗಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಶಿಖಾ ಶೇಖ್ ಪ್ರಕರಣದ ಮಾಹಿತಿಯನ್ನೂ ಈಗಾಗಲೇ ಈ ಸರಣಿಯಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಇದು ಕೊನೆಯ ಭಾಗವಾಗಿದ್ದು, ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಶಿಖಾ ಶೇಖ್ ಪೊಲೀಸರಿಗೆ ಕೊಟ್ಟ ಹೇಳಿಕೆಯ ಜೊತೆ ಸರಣಿಗೆ ಜನ ನೀಡಿದ ಬೆಂಬಲ, ಸಂಬಂಧಪಟ್ಟ ಅಧಿಕಾರಿಗಳು ಏನು ಹೇಳಿದರು ಎಂಬಿತ್ಯಾದಿ ವಿಷಯ ನಿಮ್ಮ ಮುಂದೆ..

ಹೋಲಿಕೆಯಾಗದ ಹೇಳಿಕೆಗಳು

ಈಗಾಗಲೇ ಪ್ರತ್ಯಕ್ಷದರ್ಶಿ ಹಾಗೂ ಇಬ್ಬರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ನಗರ ಠಾಣೆಯ ಪೊಲೀಸರು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರತ್ಯಕ್ಷದರ್ಶಿ ಹಾಗೂ ಆರೋಪಿ ಗುರುಬಸಪ್ಪ ಹೊಳಗುಂದಿ ಹುಬ್ಬಳ್ಳಿಗೆ ಹೋಗಿದ್ದು, ಅಲ್ಲಿ ವಸ್ತುಗಳನ್ನು ಖರೀದಿಸಿರುವ ವಿಷಯಕ್ಕೆ ಇರುವ ಸಾಮ್ಯತೆ, ಶಿಖಾ ವಿಷಯದಲ್ಲಿ ಇಲ್ಲ. ಪ್ರತ್ಯಕ್ಷದರ್ಶಿಗೆ ತಂಗಿ ಎಂದಿರುವ ಗುರುಬಸಪ್ಪ, ತನ್ನ ಹೇಳಿಕೆಯಲ್ಲಿ ಪರಿಚಯಸ್ಥರು ಎಂದು ಹೇಳಿಕೊಂಡಿದ್ದಾನೆ. ಆದರೆ ಶಿಖಾ ಹೇಳಿಕೆಯಲ್ಲಿ ಗುರುಬಸಪ್ಪ ಪರಿಚಯಸ್ಥನೇ ಅಲ್ಲ ಎಂದಿರುವ ಅಂಶ ಗಮನ ಸೆಳೆದಿದೆ.

ಶಿಖಾಗೂ ಹುಬ್ಬಳ್ಳಿಯ ಲಕ್ಷ್ಮೀಭಟ್‍ಗೂ 6 ತಿಂಗಳ ಹಿಂದೆ ಪರಿಚಯವಾಗಿ ಮುಂಬಯಿನಲ್ಲಿ ಸಿಗುತ್ತಿದ್ದ ಕಡಿಮೆ ಬೆಲೆಯ ಬಟ್ಟೆ ಹಾಗೂ ಶೈನಿಂಗ್ ಕ್ರೀಮ್ ಕೊಟ್ಟು ಹೋಗಲು ಮುಂಬೈನಿಂದ ವಿಆರ್‍ಎಲ್‍ ಬಸ್‍ನಲ್ಲಿ ಬಂದಿದ್ದ ಶಿಖಾ, ಲಾಕ್‍ಡೌನ್ ಇದ್ದುದರಿಂದ 20ದಿನಗಳವರೆಗೆ ಲಕ್ಷ್ಮೀಭಟ್‍ ಮನೆಯಲ್ಲೇ ಉಳಿಯುವಂತಾಯಿತು. ವಿಆರ್‍ಎಲ್‍ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಪ್ರಾಥಮಿಕ ಸಂಪರ್ಕಿತಳಾಗಿದ್ದರಿಂದ ಪೊಲೀಸರು ತಪಾಸಣೆಗೆ ಒಳಪಟ್ಟು, ಕ್ವಾರಂಟೈನ್‍ಗೆ ತಿಳಿಸಿದ್ದರಿಂದ ಗಾಬರಿಯಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದೆ ಎಂದು ಶಿಖಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆನಂತರ ಲಕ್ಷ್ಮೀಭಟ್ ಅವರಿಗೆ ಪರಿಚಯವಿದ್ದ ಗುರುಬಸಪ್ಪ ಮೂಲಕ ಪೊಲೀಸ್ ಅಧಿಕಾರಿಗಳಿದ್ದ ಜೀಪಿನಲ್ಲಿ ನನ್ನನ್ನು ಕೊಪ್ಪಳಕ್ಕೆ ಕಳಿಸಿದ್ದು, ಅಲ್ಲಿಂದ ಭಾಗ್ಯನಗರದ ಶಾಂತಾರಾಮ ಅವರ ಮನೆಗೆ ಗುರುಬಸಪ್ಪ ಕರೆದೊಯ್ದು ಬಿಟ್ಟರು. ಶಾಂತಾರಾಮ ಕುಟುಂಬ ಮುಂಬೈಗೆ ಹೋಗಲು ಪಾಸ್ ಮಾಡಿಸುತ್ತಿದ್ದರಿಂದ ಅವರ ಜೊತೆಯಲ್ಲಿ ನನ್ನನ್ನು ಕಳಿಸುವುದಾಗಿ ಗುರುಬಸಪ್ಪ ತಿಳಿಸಿದ್ದರು. ಬೆಳಗ್ಗೆ ಶಾಂತಾರಾಮ ಕುಟುಂಬದೊಂದಿಗೆ ನನ್ನನ್ನು ಸಹ ಗುರುಬಸಪ್ಪ ಎಸ್‍ಪಿ ಮೇಡಂ ಹತ್ತಿರ ಕರೆದುಕೊಂಡು ಹೋದಾಗ ಮೇಡಂ ಅವರು, ಮೊದಲು ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಸೂಚಿಸಿದರು ಎಂದು ಹೇಳಿಕೆ ದಾಖಲಿಸಿದ್ದಾರೆ.

ಅವರನ್ನು ಕೇಳಿ, ಇವರನ್ನು ಕೇಳಿ…..


ಈ ಕುರಿತು ಪೊಲೀಸ್ ಇಲಾಖೆಯ ಹೇಳಿಕೆ ಪಡೆಯಲು ಎಸ್ಪಿ ಜಿ ಸಂಗೀತಾ ಅವರಿಗೆ ಕರೆ ಮಾಡಿದಾಗ ಈ ಪ್ರಕರಣದ ಮಾಹಿತಿಯನ್ನು ಕೊಪ್ಪಳ ಡಿವೈಎಸ್‍ಪಿ ವೆಂಕಟಪ್ಪ ನಾಯಕ್ ಅವರನ್ನ ಕೇಳಿ ಎಂದರು. ಕೊಪ್ಪಳ ಡಿವೈಎಸ್‍ಪಿ ವೆಂಕಟಪ್ಪ ನಾಯಕ್ ಅವರಿಗೆ ಕರೆ ಮಾಡಿ ಕೇಳಿದಾಗ ತನಿಖಾಧಿಕಾರಿ ಪಿಎಸ್ಐ ಚಂದ್ರಪ್ಪ ಅವರನ್ನ ಕೇಳಿ ಎಂದರು. ತನಿಖಾಧಿಕಾರಿ ನಗರ ಠಾಣೆಯ ಪಿಎಸ್‍ಐ ಚಂದ್ರಪ್ಪ ಅವರನ್ನು ಕೇಳಿದಾಗ ಮೇಲಾಧಿಕಾರಿಗಳನ್ನ ಕೇಳಿ, ನಮಗೆ ಮಾಹಿತಿ ಕೊಡುವ ಅಧಿಕಾರ ಇಲ್ಲ ಎಂದರು.

ಜನರ ಸ್ಪಂದನೆಗೆ ಧನ್ಯವಾದ

ಕಣ್ಮರೆಯಾಗುತ್ತಿರುವ ಶಿಖಾ ಶೇಖ್ ಪ್ರಕರಣದ ತಿರುವು-ಸುಳಿವಿನ ಜಾಡು ಹಿಡಿದ ಸರಣಿ ವರದಿಗೆ ಕೊಪ್ಪಳ, ಭಾಗ್ಯನಗರದ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹಣ ಇದ್ದರೆ ಏನನ್ನಾದರೂ ಖರೀದಿಸಬಹುದು ಎಂಬ ಮದ ಇರುವವರಿಗೆ ತಕ್ಕ ಶಾಸ್ತಿಯಾಗಲಿ. ನ್ಯಾಯಕ್ಕೆ ಗೆಲುವಾಗಲಿ. ಮಾಸ್ಕ್ ಹಾಕದಿರುವುದಕ್ಕೆ ದಂಡ ವಿಧಿಸುವ, ಲಾಠಿ ಬೀಸುವ ಪೊಲೀಸರು ಧನಬಲದಿಂದ ಪ್ರಭಾವ ಹೊಂದಿರುವ ಇಂಥವರ ಬೆನ್ನಿಗೆ ನಿಂತಿರುವುದು ನಾಚಿಕೆಗೇಡು ಎಂಬ ಅಭಿಪ್ರಾಯಗಳನ್ನು ನೂರಾರು ಓದುಗರು ಕಳಿಸಿಕೊಟ್ಟಿದ್ದಾರೆ. ಹಾಗೆಯೇ ಕೆಲವರು ಮುಗಿದ ಹೋದ ಕಥೆಯನ್ನ ಯಾಕೆ ಮುಂದುವರಿಸುತ್ತಿರಿ. ಮುಂದೆ ನಿಮಗೆ ತೊಂದರೆಯಾಗದಿರುವಂತೆ ಎಚ್ಚರ ವಹಿಸಿ ಎಂಬ ಪ್ರೀತಿ ಪೂರ್ವಕ ಕಾಳಜಿ ತೋರಿದ್ದಾರೆ. ಕೆಲವೆಡೆ ಕಾಳಜಿಪೂರ್ವಕ ಬೆದರಿಕೆಗಳು ಬಂದಿವೆ. ನಮ್ಮ ಉದ್ದೇಶ ನ್ಯಾಯ, ಸತ್ಯಕ್ಕೆ ಜಯ ಸಿಗಲಿ ಎಂಬುದೇ ಹೊರತು ವ್ಯಕ್ತಿಯ ಗುರಿಯಲ್ಲ. ಇದು ಮುಗಿದ ಕತೆಯಲ್ಲ. ಈಗಷ್ಟೇ ಆರಂಭ. ಮುಂದಿನ ದಿನಗಳಲ್ಲಿ ಈ ಪ್ರಕರಣದ ಬೆಳವಣಿಗೆಗಳು ಖಂಡಿತ ನಿಮ್ಮ ಮುಂದಿರುತ್ತವೆ.

ನನಗೂ, ಪ್ರಕರಣಕ್ಕೂ ಸಂಬಂಧವಿಲ್ಲ

ಶಿಖಾ ಶೇಖ್ ಯಾರು ಅಂತ ನನಗೆ ಗೊತ್ತಿಲ್ಲ. ನನಗೂ ಆ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಶಿಖಾ ಅವರನ್ನು ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಕರೆದುಕೊಂಡು ಬಂದಿಲ್ಲ.

-ಗುರುಬಸಪ್ಪ ಹೊಳಗುಂದಿ, ಭಾಗ್ಯನಗರ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

5 × 4 =