ಕಳಚಿತು ಕನ್ನಡದ ಕೊಪ್ಪಳ ಕೊಂಡಿ; ಕನ್ನಡ ಪುಸ್ತಕಾಲಯದ ಮೂಲಕವೇ ಮನೆಮಾತಾಗಿದ್ದ ತುಬಾಕಿ ಸರ್

Vijayasakshi (Gadag News) :

-ಸ್ಪರ್ಧಾತ್ಮಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು
-ಕುಮಾರರಾಮ ಹಾಗೂ ಕನ್ನಡ ಪುಸ್ತಕಗಳ ಬಗ್ಗೆ ಅಪಾರ ಪ್ರೀತಿ

-ಬಸವರಾಜ ಕರುಗಲ್.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಕೊಪ್ಪಳ: ಕಳೆದ ಸುಮಾರು 23 ವರ್ಷಗಳಿಂದ ಇದ್ದ ಜಾಗದಲ್ಲೇ ಕನ್ನಡ ಪುಸ್ತಕಾಲಯ ನೆಲೆ ನಿಂತಿದೆ. ಈ ಪುಸ್ತಕಾಲಯದ ಗಟ್ಟಿನೆಲೆಗೆ ಕಾರಣರಾದ ಬಿ.ಆರ್.ತುಬಾಕಿ ಸರ್ ಗಟ್ಟಿಯಾಗಿ ನಿಲ್ಲಲೇ ಇಲ್ಲ. ಬುಧವಾರವಷ್ಟೇ ಇಹಲೋಕ ತ್ಯಜಿಸಿದ ಅವರು ಹೈದ್ರಾಬಾದ್ ಕರ್ನಾಟಕ ಮಾತ್ರವಲ್ಲ, ಕನ್ನಡ ಪುಸ್ತಕ ಓದುವ ಹಸಿವು ಇರುವ ಜಗತ್ತಿನ ಯಾರೇ ಆಗಿರಲಿ, ಅವರಿಗೆ ಅಗಾಧ ಸಂಪತ್ತನ್ನೇ ಬಿಟ್ಟು ಹೋಗಿದ್ದಾರೆ.

ಬಾಲಪ್ಪ ರಾಮಪ್ಪ ತುಬಾಕಿಯವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತರಾದವರು. ಮೊದಲಿನಿಂದಲೂ ಕನ್ನಡ ಸಾಹಿತ್ಯ, ಇತಿಹಾಸದ ಬಗ್ಗೆ ಅಪಾರ ಒಲವು ಹೊಂದಿದವರು. ಕುಮಾರರಾಮನ ಬಗ್ಗೆ ಅವರಿಗೆ ಎಂಥ ಸೆಳೆತ ಇತ್ತೆಂದರೆ ತಮ್ಮ ಮಗುವಿಗೆ ಕುಮಾರರಾಮ ಎಂದು ಹೆಸರಿಟ್ಟು, ಮಗು ಉಳಿಯದಿದ್ದಾಗ ವಿರೋಧ ಎದುರಿಸಿದವರು. ಶಿಕ್ಷಕ ಕೆಲಸದಿಂದ ನಿವೃತ್ತರಾದ ಬಳಿಕ ಅವರು ಸ್ಥಾಪಿಸಿದ್ದ ಕನ್ನಡ ಪುಸ್ತಕಾಲಯವೇ ಅವರ ಮನೆಯಾಗಿತ್ತು.

ಪುಸ್ತಕದ ಭಂಡಾರದಂತಿದ್ದ ಅವರದ್ದು ಸರಳ ಬದುಕು. ಮಿತ ಭಾಷಿ. ನಾಡಿನ ಅನೇಕರು ಅವರ ಮಾರ್ಗದರ್ಶನ ಪಡೆದು ಎತ್ತರದ ಸ್ಥಾನದಲ್ಲಿದ್ದಾರೆ. ಆದರೂ ಅವರು ಎಂದಿಗೂ ಹಮ್ಮು-ಬಿಮ್ಮು ತೋರಿದವರಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಉತ್ಸಾಹ ಇರುವ ಯುವಮಿತ್ರರಿಗೆ ಯಾವ ಪುಸ್ತಕವನ್ನು ಹೇಗೆ ಓದಬೇಕು? ನೆನಪಿಟ್ಟುಕೊಳ್ಳುವ ಬಗೆ ಹೇಗೆ? ಎಂಬುದನ್ನ ವಿವರಿಸಿ ಅವರ ಪಾಲಿನ ದಾರಿದೀಪವಾದವರು ತುಬಾಕಿ ಸರ್.

ಕನ್ನಡ ಪುಸ್ತಕಾಲಯ ಉಗಮ

ಬಿ.ಆರ್.ತುಬಾಕಿ ಅವರಿಗೆ ಓದಿನ ಕಿಚ್ಚು ಎಷ್ಟಿತ್ತೆಂದರೆ ಖ್ಯಾತ ಸಾಹಿತಿ, ಕಾದಂಬರಿಕಾರರ ಯಾವುದೇ ಪುಸ್ತಕ ಮಾರುಕಟ್ಟೆಗೆ ಬಂದರೂ ಅದನ್ನು ಕೊಂಡು ಓದುತ್ತಿದ್ದರು. ಅವರು ಓದಿ ಮುಗಿಸಿದ ಪುಸ್ತಕಗಳೇ ಕನ್ನಡ ಪುಸ್ತಕಾಲಯ ಸೇರುತ್ತಿದ್ದವು. ಪುಸ್ತಕಾಲಯವನ್ನು ಅವರು ಆರಂಭಿಸಿದ್ದು ವ್ಯಾಪಾರದ ಉದ್ದೇಶಕ್ಕಲ್ಲ. ಬದಲಾಗಿ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳ್ಳಲಿ ಎನ್ನುವ ಕಾರಣಕ್ಕೆ.

ಹೈದ್ರಾಬಾದ್-ಕರ್ನಾಟಕದಲ್ಲಿ ಇರುವ ಏಕೈಕ ಕನ್ನಡ ಪುಸ್ತಕ ಸಂಗ್ರಹ ಎಂದರೆ ಅದು ಕೊಪ್ಪಳದ ಹಳೇ ಜಿಲ್ಲಾಸ್ಪತ್ರೆ ಹಿಂಭಾಗದಲ್ಲಿರುವ ಕನ್ನಡ ಪುಸ್ತಕಾಲಯ. ಪುಸ್ತಕ ಕೊಳ್ಳುವವನ ಓದುವಾಸಕ್ತಿ ಗಮನಿಸಿ ಅವರು ಸಲಹೆ ನೀಡುತ್ತಿದ್ದರು. ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ತುಬಾಕಿ ಸರ್, ಕನ್ನಡ ಸಾಹಿತ್ಯ ಪರಿಷತ್‌ ನ ಕುಷ್ಟಗಿ ತಾಲೂಕಿನ ಮೊದಲ ಆಜೀವ ಸದಸ್ಯರೂ ಹೌದು. ಜೊತೆಗೆ ಇತಿಹಾಸದ ಶಿಲಾ ಶಾಸನಗಳನ್ನು ಓದುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದರು.
ನಾಡಿನ ಖ್ಯಾತ ಪ್ರಕಾಶನಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ತುಬಾಕಿ ಸರ್ ಅವರ ಕನ್ನಡ ಪುಸ್ತಕಾಲಯದಲ್ಲಿ ಹೊಸ ತಲೆಮಾರಿನಿಂದ ಹಿಡಿದು ಖ್ಯಾತನಾಮ ಸಾಹಿತಿಗಳ ಕನ್ನಡದ ಕವನ ಸಂಕಲನಗಳು, ಕಥೆಗಳು, ಕಾದಂಬರಿಗಳು, ಗ್ರಂಥಗಳು ತುಂಬಿಕೊಂಡಿವೆ.

ಕನ್ನಡ ವಿಶ್ವವಿದ್ಯಾನಿಲಯದ ಎಷ್ಟೋ ಪುಸ್ತಕಗಳು ಹಿಂದೊಮ್ಮೆ ಪ್ರವಾಹದಲ್ಲಿ ಕೊಚ್ಚಿ ಹೋದಾಗ, ತಮ್ಮ ಬಳಿ ಇರುವ ಹಲವಾರು ಪುಸ್ತಕಗಳನ್ನು ವಿವಿಗೆ ಕೊಟ್ಟು ಬಂದಿರುವ ತುಬಾಕಿ ಸರ್, ಇವತ್ತಿನ ಯುವಪೀಳಿಗೆಗೆ ಮಾರ್ಗದರ್ಶನ ನೀಡಲು ಇನ್ನೂ ಇರಬೇಕಿತ್ತು.

ತುಬಾಕಿ ಸರ್, ಆರೋಗ್ಯವಾಗಿಯೇ ಇದ್ದವರು. ಅನಾರೋಗ್ಯದ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಅವರಿಲ್ಲ ಎನ್ನುವ ಸುದ್ದಿ ಕೇಳಿದಾಗ ಆಘಾತವಾಯ್ತು. ಗಂಡುಗಲಿ ಕುಮಾರರಾಮನ ಬಗ್ಗೆ ನಿಖರ ಮಾಹಿತಿಯ ಕಣಜವಾಗಿದ್ದರು ತುಬಾಕಿ ಸರ್.
-ಮಂಜುನಾಥ ಗೊಂಡಬಾಳ, ಕೊಪ್ಪಳ.

ಅವರು ನಡೆದಾಡುವ ವಿಶ್ವವಿದ್ಯಾಲಯದಂತೆ ಇದ್ದರು. ಕನ್ನಡ ಪುಸ್ತಕಗಳ ಬಗ್ಗೆ ಅವರಿಗೆ ಇನ್ನಿಲ್ಲದ ಪ್ರೀತಿ. ಕನ್ನಡದ ಇಂಥ ಪುಸ್ತಕ ಇಲ್ಲ ಎನ್ನುವಂಥ ಪುಸ್ತಕಾಲಯ ಆರಂಭಿಸಿದ್ದರು. ಒಂದೊಮ್ಮೆ ಕನ್ನಡ ಪುಸ್ತಕ ಇರದಿದ್ದರೆ ತಕ್ಷಣ ಆ ಪುಸ್ತಕದ ಪ್ರಕಾಶಕರನ್ನು ಸಂಪರ್ಕಿಸಿ ಮರುದಿನವೇ ಪುಸ್ತಕವನ್ನು ತರಿಸುತ್ತಿದ್ದರು. ತುಬಾಕಿ ಸರ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ನಿಜಕ್ಕೂ ಬೇಸರವಾಯ್ತು.
-ಹನುಮಂತಪ್ಪ ಅಂಡಗಿ, ಶಿಕ್ಷಕರು, ಕೊಪ್ಪಳ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

1 × five =