ಎರಡು ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಮಿಸ್ಸಿಂಗ್ ಬಾಯ್

Vijayasakshi (Gadag News) :

-ಅಪ್ಪ ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಮಹಮ್ಮದ್ ಫಯಾಜ್
-ಓದಿನಲ್ಲೂ, ಆಟದಲ್ಲೂ ಮೇಲುಗೈ ಸಾಧಿಸಿದ್ದವನನ್ನು ಬೆಳೆಸಿದರು ಮಂಡ್ಯದ ಗೌಡ್ರು!

-ಬಸವರಾಜ ಕರುಗಲ್.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಕೊಪ್ಪಳ: ಆಗ ಆತನಿಗಿನ್ನೂ 15 ವರ್ಷ. ಪಾಠದಲ್ಲೂ ಮುಂದಿದ್ದ ಆತನಿಗೆ ಕ್ರಿಕೆಟ್ ಅಂದ್ರೆ ಬಹಳ ಇಷ್ಟ. ಆಟ ಕಡಿಮೆ ಮಾಡಿ ಪಾಠದ ಕಡೆಗೆ ಗಮನ ಕೊಡು ಎಂದು ಅಪ್ಪ ಹೇಳಿದ್ದಕ್ಕೆ ಮನೇ ಬಿಟ್ಟೇ ಹೋಗಿದ್ದ. ಮಗನ ನಾಪತ್ತೆಯಿಂದ ಗಾಬರಿಗೊಂಡ ಹೆತ್ತವರು ಪೊಲೀಸ್ ಸ್ಟೇಷನ್ನಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು. ಎರಡು ವರ್ಷಗಳ ನಂತರ ನಾಪತ್ತೆಯಾಗಿದ್ದ ಮಗನನ್ನು ಮತ್ತೇ ಹೆತ್ತವರ ಮಡಿಲಿಗೆ ಹಾಕಿದ್ದಾರೆ ಪೊಲೀಸರು.

ಈ ಘಟನೆ ನಡೆದದ್ದು ಕೊಪ್ಪಳದಲ್ಲಿ. ಎರಡು ವರ್ಷಗಳ ಹಿಂದೆ 9ನೇ ತರಗತಿ ಓದುತ್ತಿದ್ದ ಮಹಮ್ಮದ್ ಫಯಾಜ್ ಪ್ರತಿಭಾವಂತ ವಿದ್ಯಾರ್ಥಿ. 9ನೇ ತರಗತಿವರೆಗೆ ಶೇಕಡಾ 92 ರಿಂದ 95ರವರೆಗೆ ಅಂಕ ಗಳಿಸಿದ್ದ. ಮಗನ ಮೇಲೆ ಅಪಾರ ಭರವಸೆ ಹೊಂದಿದ್ದ ತಂದೆ ಬಾಬಾ ಶರೀಫ್ ಅವರು ಮಗನನ್ನು ಜಾಸ್ತಿ ಕ್ರಿಕೆಟ್ ಗ್ರೌಂಡ್ ನಲ್ಲಿ ನೋಡಿದ್ದಕ್ಕೆ ಆಟ ಕಡಿಮೆ ಮಾಡಿ, ಪಾಠದ ಕಡೆ ಗಮನ ಕೊಡು ಎಂದು ಬುದ್ಧಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಮಹಮ್ಮದ್ ಫಯಾಜ್ ಮನೆ ಬಿಟ್ಟು ಬೆಂಗಳೂರಿಗೆ ಹೋಗಿದ್ದ.
ಮಗನ ಪತ್ತೆ ಆಗದಿರುವುದರಿಂದ ಹೆತ್ತವರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ 2018ರ ಏಪ್ರಿಲ್/ಮೇನಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟು ಮಗ ಇಂದು ಬಂದಾನು,, ನಾಳೆ ಬಂದಾನು,, ಎಂದು ಕಾಯುತ್ತಲೇ ಇದ್ದರು. ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಬಾಬಾ ಶರೀಫ್ ಸಮಯ ಸಿಕ್ಕಾಗಲೆಲ್ಲ ಮಗನ ಬಗ್ಗೆ ಪೊಲೀಸರನ್ನು ವಿಚಾರಿಸುತ್ತಲೇ ಇದ್ದರು.

ಆರಂಭದಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಪಡೆದ ಪೊಲೀಸರು, ಹಣ ಇರೋವರೆಗೂ ಸುತ್ತಾಡ್ತಾನೆ. ಆಮೇಲೆ ಅವನೇ ಮನೆಗೆ ಬರ್ತಾನೆ ಬಿಡಿ. ನಾವೂ ಸಹ ಆತನನ್ನು ಪತ್ತೆ ಮಾಡ್ತಿವಿ ಎಂದು ಭರವಸೆ ನೀಡಿ ಸುಮ್ಮನಾಗಿದ್ದರು. ಆದರೆ ಮಿಸ್ದಿಂಗ್ ಬಾಯ್ ಮಹಮ್ಮದ್ ಫಯಾಜ್ ಎರಡು ವರ್ಷಗಳಾದರೂ ಪತ್ತೆಯಾಗದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸರ್ಚಿಂಗ್ ಕೆಲಸ ಶುರು ಮಾಡಿದಾಗ ಬೆಂಗಳೂರಿನಲ್ಲಿ ಫಯಾಜ್ ಇರುವುದನ್ನು ಪತ್ತೆ ಹಚ್ಚಿ, ಕರೆದುಕೊಂಡು ಬಂದು ಹೆತ್ತವರ ಮಡಿಲಿಗೆ ಹಾಕಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಜಾತಿ-ಧರ್ಮದ ಎಲ್ಲೆ ಬಿಟ್ಟು ಮಾದರಿಯಾದ ಮಂಡ್ಯದ ಗೌಡ್ರು!

ಮಹಮದ್ ಫಯಾಜ್ ಬೆಂಗಳೂರು ತಲುಪಿದ ತಕ್ಷಣ ಕೆಲಸ ಕೇಳಿಕೊಂಡು ಮಂಡ್ಯದ ಗೌಡ್ರ (ಹೆಸರು ಬೇಡ) ಬಳಿ ಹೋಗಿದ್ದಾನೆ. ಹುಡುಗನನ್ನು ವಿಚಾರಿಸಿದ ಗೌಡ್ರು, ಅಪ್ಪ- ಅಮ್ಮನ ಬಗ್ಗೆ ವಿಚಾರಿಸಿದ್ದಾರೆ. ಆ ಕ್ಷಣದಲ್ಲಿ ಬೇಸರದಲ್ಲಿದ್ದ ಫಯಾಜ್ ಅನಾಥ ಎಂದಿದ್ದಕ್ಕೆ ಮರುಗಿದ ಗೌಡ್ರು, ಹುಡುಗನ ಜಾಣತನ ಕಂಡು ಮಗನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾರೆ. ಫಯಾಜ್ ಸಹ ಅಷ್ಟೇ. ಅವರ ನಂಬಿಕೆಯನ್ನು ಉಳಿಸಿಕೊಂಡಿದ್ದಾನೆ. ಎರಡು ವರ್ಷಗಳ ಕಾಲ ಗೌಡ್ರ ಕೆಲಸವನ್ನು ನೋಡಿಕೊಂಡಿದ್ದ ಫಯಾಜ್ಗೆ ಹೆತ್ತವರ ನೆನಪು ಬಂದೇ ಬಂದಿರುತ್ತೆ. ಮನೆ ಬಿಟ್ಟು ಬಂದ ಭಯಕ್ಕೆ ಎಷ್ಟೋ ಸಲ ಹೆತ್ತವರಿಗೆ ಫೋನ್ ಮಾಡಲು ಮನಸ್ಸಾದರೂ ಅಪ್ಪನ ಅಂಜಿಕೆಯಿಂದ ಮಾಡಿಲ್ಲ.

ಈಚೆಗಷ್ಟೇ ಪೊಲೀಸರು ಬೆಂಗಳೂರಿಗೆ ಹೋಗಿ ಫಯಾಜ್ನನ್ನು ಕೊಪ್ಪಳಕ್ಕೆ ಕರೆ ತರುವಾಗ ವಿಷಯ ಅರಿತ ಮಂಡ್ಯದ ಗೌಡ್ರು, ಫಯಾಜ್ಗೆ ಪ್ರೀತಿಯಿಂದ ಸಲಹೆ ನೀಡಿ, ಹೆತ್ತವರ ಜೊತೆಗಿರಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅವರೂ ಸಹ ಕೊಪ್ಪಳಕ್ಕೆ ಬಂದು ಪೊಲೀಸರನ್ನು ಫಯಾಜ್ನ ಹೆತ್ತವರನ್ನು ಕಂಡು ನಮ್ಮ ಬಾಂಧವ್ಯ ಚನ್ನಾಗಿರಲಿ. ಫಯಾಜ್ ಒಳ್ಳೇ ಹುಡುಗ ಎಂದು ಸೌಹಾರ್ದತೆ ಮೆರೆದಿದ್ದಾರೆ.

ಫಯಾಜ್ನನ್ನು ಕೊಪ್ಪಳಕ್ಕೆ ಕರೆ ತಂದಾಗ ಓಡೋಡಿ ಬಂದ ಹೆತ್ತವರು ಮಗನನ್ನು ಕಂಡು ಆನಂದಭಾಷ್ಪ ಸುರಿಸಿದರು. ಪೊಲೀಸರಿಗೆ ಕೈ ಮುಗಿದು ಕೃತಜ್ಙತೆ ತಿಳಿಸಿದ ದೃಶ್ಯ ಮನ ಕಲುಕುವಂತಿತ್ತು. ಮಹಮಮದ್ ಫಯಾಜ್ ಸಹ ಹೆತ್ತವರನ್ನು ಕಂಡೊಡನೆ ಕಣ್ಣೀರು ಸುರಿಸಿದ. ಮಗನನ್ನು ಕಂಡ ಅಪ್ಪ ಬಾಬಾ ಶರೀಫ್ ಸಹ ಭಾವುಕರಾದರು. ಒಟ್ಟಾರೆ ಕೊಪ್ಪಳದ ಪೊಲೀಸರು ದೂರವಾಗಿದ್ದ ಮಗನನ್ನು ಹೆತ್ತವರ ಮಡಿಲಿಗೆ ಹಾಕುವ ಮೂಲಕ ಒಂದೊಳ್ಳೆ ಕೆಲಸ ಮಾಡಿದ್ದಾರೆ.

ಈ ಪ್ರಕರಣವನ್ನು ಪತ್ತೆ ಹಚ್ಚಿದ್ದೇವೆ. ಮಿಸ್ಸಿಂಗ್ ಬಾಯ್ ಮಹಮ್ಮದ್ ಫಯಾಜ್ನನ್ನು ಹೆತ್ತವರ ಬಳಿ ಸೇರಿಸಿದ್ದೇವೆ. ಮಾನವ ಕಳ್ಳ ಸಾಗಣೆಯ ಈ ದಿನಗಳಲ್ಲಿ ಮಗನ ನಾಪತ್ತೆಯಿಂದ ಹೆತ್ತವರು ಗಾಬರಿಯಾಗಿದ್ದು ನಿಜ. ಆದರೆ ಮಂಡ್ಯದ ಗೌಡ್ರು ಆತನನ್ನು ಎರಡು ವರ್ಷಗಳ ಕಾಲ ಚನ್ನಾಗಿ ನೋಡಿಕೊಂಡಿದ್ದಾರೆ. ಫಯಾಜ್ಗೆ ಈಗಾಗಲೇ ಕೌನ್ಸೆಲಿಂಗ್ ಮಾಡಲಾಗಿದೆ.
-ಪ್ರಕಾಶ್ ಮಾಳೆ, ನಗರ ಠಾಣೆ ಪಿಐ, ಕೊಪ್ಪಳ.

ಮಗನನ್ನು ಎರಡು ಬಳಿಕ ಕಂಡು ಅಪಾರ ಸಂತೋಷವಾಗಿದೆ. ಸದ್ಯ ನಾನು ಜಾಸ್ತಿ ಮಾತನಾಡುವ ಸ್ಥೀತಿಯಲ್ಲಿಲ್ಲ. ಮುಂದೆ ನಾನೇ ನಿಮಗೆ ಮಾಹಿತಿ ನೀಡುವೆ.
-ಬಾಬಾ ಶರೀಫ್, ಫಯಾಜ್ನ ತಂದೆ, ಕೊಪ್ಪಳ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

nine + ten =