ನೋವಿನ ಮೂಟೆಯಲ್ಲೇ ಜೀವನ ಪಾಠ ಕಲಿತ ಕೃಷಿ ಸಾಧಕಿ ಮಲ್ಲಮ್ಮ

Vijayasakshi (Gadag News) :

-ತನ್ನವರನ್ನು ಸಾಲುಸಾಲಾಗಿ ಕಳೆದುಕೊಂಡರೂ ಧೃತಿಗೆಡದೇ ಸ್ವಾವಲಂಬಿ ಬದುಕು

-ಇರುವ ಅರ್ಧ ಎಕರೆ ಹೊಲದಲ್ಲೇ ಆದಾಯ ಗಳಿಕೆ

ಬಸವರಾಜ ಕರುಗಲ್.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಷ್ಟಗಳು ಬಂದರೆ ಮೇಲಿಂದ ಮೇಲೆ ಬರುತ್ತಲೇ ಇರುತ್ತವೆ. ಅದರಲ್ಲೂ ಮನೆಯಲ್ಲಿ ಸಾಲು ಸಾಲಾಗಿ ಸಾವು ಸಂಭವಿಸಿದರೆ ಎಷ್ಟೋ ಜನ ಆತ್ಮಹತ್ಯೆಯ ಹಾದಿ ಹಿಡಿದು ಜೀವನ ಹಾಳು ಮಾಡಿಕೊಂಡವರ ನೂರಾರು ಘಟನೆಗಳು ನಮ್ಮ ಸುತ್ತಮುತ್ತಲೂ ನಡೆಯುತ್ತವೆ. ಇಂಥ ಹಲವು ಸಂಕಷ್ಟಗಳು ಎದುರಾದರೂ ಧೃತಿಗೆಡದೇ ಇರುವ ಅರ್ಧ ಎಕರೆ ಜಮೀನಿನಲ್ಲೇ ಬೆಳೆ ಬೆಳೆದು ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಒಂದಲ್ಲ…‌ಎರಡಲ್ಲ ಬರೋಬ್ಬರಿ 6 ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಆ ಮಹಿಳೆಯ ಪತಿ ಕಳೆದ 18 ವರ್ಷದ‌ ಹಿಂದೆ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ ಜೀವನಕ್ಕೆ ಆಧಾರವಾಗಬೇಕಿದ್ದ ಇದ್ದೊಬ್ಬ ಮಗ ಆತ್ಮಹತ್ಯೆ ಮಾಡಿಕೊಂಡರೆ, ಮಗಳನ್ನು ಕ್ಯಾನ್ಸರ್ ಎಂಬ ಕಾಯಿಲೆ ಕಿತ್ತುಕೊಂಡಿದೆ. ಹಾಗಂತ ಇವರು ಯಾರ ಹತ್ತಿರವೂ ಸಹಾಯ ಕೇಳಿಲ್ಲ. ಬದಲಾಗಿ ಇದ್ದ ಅರ್ಧ ಎಕರೆ ಹೊಲದಲ್ಲಿ ಕೃಷಿ ಮಾಡಿ, ಸ್ವಾವಲಂಬಿ ಜೀವನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಹೊಲದಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಾ ಹೂವು ಬೆಳೆದು ಹೂವಿನಂಥ ಜೀವನ ಸಾಗಿಸುತ್ತಿರುವ ಕನಕಗಿರಿಯ ಮಲ್ಲಮ್ಮ ಹೂಗಾರ ಇವರ ಜೀವನದ ಕಥೆ ಕೇಳಿದ್ರೆ ಸೋಲು ಎನ್ನುವುದು ಹತ್ತಿರವೂ ಸುಳಿಯುವುದಿಲ್ಲ.

ಹೌದು! ಮಲ್ಲಮ್ಮರಿಗೆ ಬರೊಬ್ಬರಿ ಆರು ಶಸ್ತ್ರಚಿಕಿತ್ಸೆ ಆಗಿದೆ. ತಮ್ಮ 50 ವರ್ಷದ ಜೀವನದಲ್ಲಿ 18 ವರ್ಷಗಳ ಹಿಂದೆ ಇವರ ಪತಿ ಲಿಂಗಪ್ಪ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಮಗಳು 11 ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಡುತ್ತಾಳೆ. ಮಗ ರಂಗನಾಥ 4 ವರ್ಷ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಷ್ಟೆ ಅಲ್ದೆ ಮಲ್ಲಮ್ಮಳಿಗೆ ಆರು ಶಸ್ತ್ರ ಚಿಕಿತ್ಸೆ ಆಗಿದೆ. ಎರಡು ಸಲ ಗರ್ಭಕೋಶ, ಮೊಣಕಾಲು, ಎದೆಭಾಗದಲ್ಲಿ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಯುತ್ತದೆ.

ಇಷ್ಟೆಲ್ಲ ಜೀವನದಲ್ಲಿ ನೋವುಂಡ ಮಲ್ಲಮ್ಮ ಹತಾಶೆಗೊಳ್ಳದೆ ಕೇವಲ ಅರ್ಧ ಎಕರೆಯಲ್ಲಿ ವಿವಿಧ ಹೂವು ತರಕಾರಿ ಬೆಳೆದು ಹೂವಿನಂಥ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಯಾರಿಂದಲೂ ಸಹಾಯಕ್ಕೆ‌ ಕೈ ಚಾಚದೇ ಸ್ವಾವಲಂಬಿ ಬದುಕು ಅಂದ್ರೆ ಏನು ಅನ್ನೋದಕ್ಕೆ‌ ಕನಕಗಿರಿಯ ಮಲ್ಲಮ್ಮ ನಿಜಕ್ಕೂ ಮಾದರಿ

ಮಲ್ಲಮ್ಮ ನಿಜಕ್ಕೂ ಗಟ್ಟಿಗಿತ್ತಿ. ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಹೊರವಲಯದ ಚರಂಡಿ‌ ನೀರನ್ನು ಶುದ್ಧಿಕರಿಸಿ ವಿವಿಧ ತರಕಾರಿ, ಹೂವುಗಳನ್ನು ತಮ್ಮ ಪುಟ್ಟ ಜಮೀನಿನಲ್ಲಿ ಬೆಳೆದು ವರ್ಷಕ್ಕೆ 3 ಲಕ್ಷದವರೆಗೂ ಆದಾಯ ಗಳಿಸುತ್ತಾ ತಮ್ಮ ಮೊಮ್ಮಕ್ಕಳು ಹಾಗೂ ಸೊಸೆ ಜೊತೆ ಹೂವಿನಂಥ ಸುಂದರವಾದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದ ಒಂದು ನಯಾಪೈಸೆ ಸಹಾಯ ಧನವನ್ನಾಗಲೀ, ಯಾರ ಬಳಿಯೂ ಧನ ಸಹಾಯವನ್ನಾಗಲೀ ಪಡೆಯದೇ ಕೂಲಿ ಮಾಡಿ, ಹಣ ಸಂಪಾದನೆ ಮಾಡಿ, ಅರ್ಧ ಎಕರೆ ಜಮೀನಿನಲ್ಲಿ ದುಡಿಮೆಯೇ ನನ್ನ ದೇವರು ಅಂತಾ ದುಡಿಯುತ್ತಿರುವುದು ಇತರೆ ಮಹಿಳೆಯರಿಗೆ ಮಾತ್ರವಲ್ಲ, ಜೀವನದಲ್ಲಿ ಹತಾಶೆಗೊಂಡ, ಜಿಗುಪ್ಸೆಗೊಂಡ ಎಷ್ಟೋ ಜೀವಗಳೆದುರು ದಂತಕಥೆ ಎಂದರೂ ತಪ್ಪಾಗಲಿಕ್ಕಿಲ್ಲ.

ನಿಜಕ್ಕೂ ಮಲ್ಲಮ್ಮ ಒಬ್ಬ ಗಟ್ಟಿಗಿತ್ತಿ ಕಳೆದ ಮೂರು ವರ್ಷದಿಂದ ಯಾರ ಬಳಿ ಕೈ ಚಾಚದೇ ಅಲ್ಪ ಜಮೀನಿನಲ್ಲಿ ಕಡಿಮೆ ಬಂಡವಾಳದಿಂದ ಹೆಚ್ಚಿನ ಆದಾಯ ಪಡೆಯುತ್ತಿರುವುದು ನಿಜಕ್ಕೂ ಇವರು ಜೀವನಕ್ಕೆ ಒಂದು ಉತ್ತಮ ಪಾಠ.

ಕಷ್ಟಗಳು ಮನುಷ್ಯನಿಗಲ್ಲದೇ ಮರಗಳಿಗೆ ಬರುತ್ತವಾ? ನನ್ನ ಇತಿ-ಮಿತಿಯಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದೇನೆ. ಮೊಮ್ಮಕ್ಕಳ ಜೀವನಕ್ಕೆ ಏನಾದರೂ ಆಸರೆ ಆಗಬೇಕು. ಈಗಿರುವ ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳುವ ಆಸೆ ಇದೆ. ಸರ್ಕಾರ ಇದನ್ನು ಮಾಡಿಕೊಟ್ರೆ, ನನಗೆ ಅಷ್ಟೇ ಸಾಕು.
-ಮಲ್ಲಮ್ಮ, ಕೃಷಿಸಾಧಕಿ, ಕನಕಗಿರಿ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

ten + 5 =