HomeGadag Newsಜನರಿಗೆ ನೆರವಾಗಲು ಅಧಿಕಾರವೇ ಬೇಕಿಲ್ಲ: ಅನಿಲ್ ಮೆಣಸಿನಕಾಯಿ

ಜನರಿಗೆ ನೆರವಾಗಲು ಅಧಿಕಾರವೇ ಬೇಕಿಲ್ಲ: ಅನಿಲ್ ಮೆಣಸಿನಕಾಯಿ

Spread the love

ಸರ್ಕಾರಿ ಆಸ್ಪತ್ರೆ, ಶಾಲೆ ಸುಧಾರಣೆ ನನ್ನ ಮೊದಲ ಆದ್ಯತೆ

ವಿಜಯಸಾಕ್ಷಿ ಸಂದರ್ಶನ

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮೂಲಭೂತ ಅಗತ್ಯಗಳನ್ನು ಕಲ್ಪಿಸಲು ಅಧಿಕಾರವಿದ್ದರೆ ಸುಲಭ ನಿಜ. ಹಾಗಂತ ಅಧಿಕಾರವಿಲ್ಲದೆಯೂ ಸಮಾಜ ಸುಧಾರಣೆಯ ಕೆಲಸಗಳನ್ನು ಮಾಡಬಹುದು. ಇಂತಹ ಕೆಲಸಗಳಿಗೆ ಹಣ ಕೊಡಲು ನೂರಾರು ಜನ ಸಿದ್ಧರಿದ್ದಾರೆ. ನಮ್ಮಂತವರು, ದಾನಿಗಳು ಮತ್ತು ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಈಗ ನಾನೂ ಒಂದು ಸೇತುವೆ ತರಹ ಅಷ್ಟೇ’ ಎಂದರು ಬಿಜೆಪಿ ಯುವನಾಯಕ ಅನಿಲ್ ಮೆಣಸಿನಕಾಯಿ.

ಭಾನುವಾರ ನಗರದ ಹೆರಿಗೆ ಆಸ್ಪತ್ರೆಗೆ ಅತ್ಯಾಧುನಿಕ ಬಯೊ-ಪ್ಯೂರಿಫೈಯರ್ ಯಂತ್ರ ನೀಡುವ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸುರಕ್ಷತೆಗೆ ಸ್ಪಂದಿಸಿದ ಅನಿಲ್, ಈ ನಂತರದಲ್ಲಿ ಇನ್ನಷ್ಟು ಉತ್ಸಾಹ ಪಡೆದುಕೊಂಡಿದ್ದಾರೆ. ಒಟ್ಟು ಅವರ ಕನಸು, ಆಶಯ ಮತ್ತು ಯೋಜನೆಗಳ ಕುರಿತು ಅವರಿಲ್ಲಿ ಮಾತನಾಡಿದ್ದಾರೆ.

ವಿಜಯಸಾಕ್ಷಿ: ಈ ಬಯೊ-ಪ್ಯೂರಿಫೈಯರ್ ಯಂತ್ರ ನೀಡುವ ಆಲೋಚನೆ ಹೊಳೆದಿದ್ದು ಹೇಗೆ?
ಅನಿಲ್: ‘ಮನುಕುಲಕ್ಕಾಗಿ ಭಿಕ್ಷಾಟನೆ’ ಹಮ್ಮಿಕೊಂಡಾಗಲೇ ಕೊರೋನಾ ಕಾರಣಕ್ಕೆ ತೀವ್ರ ಆತಂಕದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ನೆರವಾಗುವ ಯೋಚನೆಯಿತ್ತು. ಬೆಂಗಳೂರಿನ ವೈದ್ಯ ಮಿತ್ರರು ಇಂತಹ ಒಂದು ಸದುಪಯೋಗಿ ಯಂತ್ರ ಆವಿಷ್ಕರಿಸಿದ ಕುರಿತು ಹೇಳಿದರು. ಸೆಪ್ಟೆಂಬರ್ ೧ ರಂದು ಯಂತ್ರ ತಯಾರಿಸಿದ ರೆಡಾರ್ಕ್ ಕಂಪನಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಯೊ-ಪ್ಯೂರಿಫೈಯರ್ ಯಂತ್ರವನ್ನು ಉಚಿತವಾಗಿ ನೀಡಿತ್ತು. ಈ ಯಂತ್ರದ ಉಪಯೋಗದ ಕುರಿತಾಗಿ ‘ದಿ ಹಿಂದೂ’ ಪ್ರಕಟಿಸಿದ ವಿವರ ಓದಿದ ನಂತರ ಕೂಡಲೇ ಸಕ್ರಿಯರಾದೆವು. ಇಲ್ಲಾಗಲೇ ವೈದ್ಯ ಸೇರಿದಂತೆ ಇಬ್ಬರು ಆರೋಗ್ಯ ಸಿಬ್ಬಂದಿ ಸೋಂಕಿನ ಕಾರಣಕ್ಕೆ ಮೃತಪಟ್ಟಿದ್ದರು. ಜಿಲ್ಲೆಗೆ ಈ ಯಂತ್ರದ ತುರ್ತು ಅಗತ್ಯವಿದೆ ಎಂದು ಕಂಪನಿ ಜೊತೆ ಮಾತನಾಡಿ ಖರೀದಿಸಿದೆವು.

ವಿಜಯಸಾಕ್ಷಿ: ಇಷ್ಟು ದೊಡ್ಡ ಮೊತ್ತದ ಯಂತ್ರ ಖರೀದಿ ಹೇಗೆ ಸಾಧ್ಯವಾಯಿತು?
ಅನಿಲ್: ಇದರಲ್ಲಿ ನಾನು ಸೇತುವೆಯಷ್ಟೇ. ಜಿಲ್ಲೆಯ-ಹಲವಾರು ಸಹೃದಯರು ಧನ ಸಹಾಯ ಮಾಡಿದರು. ಕಾಂತಿಲಾಲ್ ಬನ್ಸಾಲಿ, ಎಂ ಎಂ ಹಿರೇಮಠ, ಸಂಗಮೇಶ ದುಂದೂರ, ಶಂಕ್ರಪ್ಪ ಇಂಡಿ, ಸಿದ್ದು ಪಲ್ಲೇದ, ಜಗನ್ನಾಥಸಾ ಭಾಂಡಗೆ, ಸಂಗಣ್ಣ ಬಂಗಾರಶೆಟ್ಟರ, ಪ್ರಶಾಂತ್ ನಾಯ್ಕರ್, ಮಹೇಶ್ ದಾಸರ, ರವಿ ಸಿದ್ಲಿಂಗ್, ಪ್ರಕಾಶ ಅಂಗಡಿ, ಸತೀಶ ಮುದಗಲ್ಲ, ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ, ಆನಂದ ಸೇಠ್, ಈಶಣ್ಣ ಸೋಳಂಕಿ, ಈಶಣ್ಣ ಮುನವಳ್ಳಿ, ಮಂಜು ಮ್ಯಾಗೇರಿ, ಭದ್ರೇಶ್ ಕುಸ್ಲಾಪೂರ, ದ್ಯಾಮಣ್ಣ ನೀಲಗುಂದ, ಕಿಷನ್ ಮೆರವಾಡೆ ಹೇಳುತ್ತ ಹೋದರೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರ ಸಹಕಾರದಿಂದ ಹಣ ಸೇರಿಸಿ ಯಂತ್ರ ಖರೀದಿಸಿದೆವು.

ವಿಜಯಸಾಕ್ಷಿ: ಈ ಯಂತ್ರ ಎಷ್ಟರ ಮಟ್ಟಿಗೆ ಪ್ರಯೋಜನಾಕಾರಿ?
ಅನಿಲ್: ಈ ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈರಲ್ ಲೋಡ್ ಒಂದು ಗಂಭೀರ ಸಮಸ್ಯೆಯಾಗಿದೆ. ಗೋಡೆ, ನೆಲ, ಕಾಟ್ ಇತ್ಯಾದಿ ಭೌತಿಕ ವಸ್ತುಗಳನ್ನು ಸ್ಯಾನಿಟೈಸ್ ಮಾಡಬಹುದು. ಆದರೆ ವಾತಾವರಣದಲ್ಲಿರುವ ವೈರಲ್ ಲೋಡ್ ನಿಯಂತ್ರಿಸಲು ಅಸಾಧ್ಯ. ಈ ಯಂತ್ರ ಆರು ವಿಧದಲ್ಲಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದು ವೈರಸ್, ಬ್ಯಾಕ್ಟಿರಿಯಾ, ಫಂಗಸ್‌ಗಳನ್ನು ನಾಶ ಮಾಡಿ ಶುದ್ಧ ಆಮ್ಲಜನಕವನ್ನು ಹೊರಸೂಸುತ್ತದೆ. ಇದರಿಂದ ಐಸಿಯು, ವಾರ್ಡ್, ಆಪರೇಷನ್ ಥಿಯೇಟರ್‌ಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿ ಸೋಂಕಿನ ಆತಂಕವಿಲ್ಲದೇ ಕೆಲಸ ಮಾಡಬಹುದು. ಹಲವಾರು ವೈದ್ಯ ಸಿಬ್ಬಂದಿ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.

‘ಸರ್ಕಾರಿ ಶಾಲೆ ದತ್ತು ಪಡೆಯಲಿದ್ದೇವೆ’

ವಿಜಯಸಾಕ್ಷಿ: ಮತ್ತೆ ಮುಂದಿನ ಕಾರ್ಯಕ್ರಮ?
ಅನಿಲ್: ಈಗ ತುರ್ತಾಗಿ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗಾಗಿ ಕೆಲಸ ಮಾಡಲೇಬೇಕಿದೆ. ಶಾಲೆಗಳು ಆರಂಭವಾಗುವ ಮುಂಚೆ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಸುವ, ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೂ ನೆರವು ನೀಡಲು ಜಿಲ್ಲೆಯಲ್ಲದೇ ಬೆಂಗಳೂರಿನ ಮಿತ್ರರು ಮುಂದೆ ಬಂದಿದ್ದಾರೆ. ಶಾಲೆಗಳನ್ನು ದತ್ತು ಪಡೆಯುವ ವಿಚಾರವೂ ಈಗ ಚರ್ಚೆಯಲ್ಲಿದೆ. ಧನಸಹಾಯ ನೀಡುವವರಿಗೆ ಕೊರತೆಯಿಲ್ಲ, ತಳಮಟ್ಟದಲ್ಲಿ ಯೋಜನೆ ಕಾರ್ಯಗತ ಮಾಡಲು ನಮ್ಮಂತಹ ಯುವಕರ ಅಗತ್ಯವಿದೆ. ನಮ್ಮ ಸರ್ಕಾರಿ ಶಾಲೆಗಳ ವಾತಾವರಣ ಖಾಸಗಿ ಶಾಲೆಗಳ ಮಟ್ಟಕ್ಕೆ ಏರಬೇಕು ಎಂಬುದೇ ನಮ್ಮ ಆಶಯ. ಮನುಕುಲಕ್ಕಾಗಿ ಭಿಕ್ಷೆ ಕಾರ್ಯಕ್ರಮದಲ್ಲಿ ಸಾಕಷ್ಟು ದವಸಧಾನ್ಯ ನೀಡಿದ ನಮ್ಮ ರೈತರ ಮಕ್ಕಳು ಯಾವ ಆತಂಕವೂ ಇಲ್ಲದೇ ಶಾಲೆ ಕಲಿಯುವಂತಾಗಬೇಕು.

ಇನ್ನೊಂದು ಪ್ಯೂರಿಫೈಯರ್ ನೀಡಲು ತಯಾರಿ

ವಿಜಯಸಾಕ್ಷಿ: ಒಂದು ಪ್ಯೂರಿಫೈಯರ್ ಯಂತ್ರ ಸಾಕಾಗುವುದೆ?
ಅನಿಲ್: ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಈ ಯಂತ್ರದ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸುತ್ತಿದೆ. ಆದರೆ ಈಗ ದಾನಿಗಳು ಮುಂದೆ ಬಂದಿದ್ದು ಜಿಮ್ಸ್ ಕೊವಿಡ್ ಐಸಿಯು ವಾರ್ಡಿಗೆ ಇನ್ನೊಂದು ಪ್ಯೂರಿಫೈರ್ ನೀಡಲು ತಯಾರಿ ನಡೆಸಿದ್ದೇವೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!