27.8 C
Gadag
Friday, September 22, 2023
Home Blog

ಗಾಂಜಾ ಬೆಳೆದ ಆರೋಪಿಗೆ 3 ವರ್ಷ ಶಿಕ್ಷೆ, 25 ಸಾವಿರ ದಂಡ

0

ಅಯ್ಯನಗೌಡ ಗೌಡಪ್ಪಗೌಡ……ಜಮೀನಿನಲ್ಲಿ ಗಾಂಜಾ ಬೆಳೆದಿದ್ದ…..

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಸ್ವಂತ ಲಾಭಕ್ಕೋಸ್ಕರ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಗದಗ ತಾಲೂಕಿನ ಬೆಳಹೋಡದಿಂದ ಮದಗಾನೂರು ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸರ್ವೆ ನಂ. 111/1+2ಅ/2 ರಲ್ಲಿ ಒಟ್ಟು 10 ಹಸಿ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು.

22.10.2021 ರಂದು ಆರೋಪಿತ ಅಯ್ಯನಗೌಡ ರಾಮನಗೌಡ ಗೌಡಪ್ಪಗೌಡರ ಸಿಕ್ಕಿಬಿದ್ದಿದ್ದು, ಇವನಿಂದ ಸುಮಾರು 12 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಗದಗ ವಲಯದ ಅಬಕಾರಿ ನಿರೀಕ್ಷಕ ನಾರಾಯಣಸಾ ಪವಾರ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಎಸ್‌ ಶೆಟ್ಟಿ ಇವರು ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಅಯ್ಯನಗೌಡ ರಾಮನಗೌಡ ಗೌಡಪ್ಪಗೌಡನಿಗೆ ದಿ.16.09.2023 ರಂದು ಶಿಕ್ಷೆ ವಿಧಿಸಿದ್ದಾರೆ.

ಎನ್‌ಡಿಪಿಎಸ್‌ ಕಾಯ್ದೆಯ ಕಲಂ 20(I) 20(ಎ) 25, 8 (ಸಿ) ಅಡಿಯಲ್ಲಿ 3 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ಲೋಕಾಯುಕ್ತರ ದಾಳಿ, ಬಿಲ್ ಪಾವತಿಸಲು 1. 50 ಲಕ್ಷ ರೂ. ಲಂಚ ಕೇಳಿದ್ದ ಸಿಡಿಪಿಒ, ಸಿಬ್ಬಂದಿ ಬಲೆಗೆ

0

ಡಾಬಾವೊಂದರಲ್ಲಿ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರ ದಾಳಿ……

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಅಂಗನವಾಡಿಗಳಿಗೆ ಆಹಾರ ಪೂರೈಸಿದ್ದ ಬಿಲ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗಜೇಂದ್ರಗಡ ಸಿಡಿಪಿಒ ಹಾಗೂ ಕಚೇರಿ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ರೋಣ ತಾಲೂಕಿನ ಸಿಡಿಪಿಒ ಬಸಮ್ಮ ಹೂಲಿ ಎಂಬುವರು ತಮ್ಮ ಸಿಬ್ಬಂದಿ ಜಗದೀಶ್ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಗಜೇಂದ್ರಗಡದ ಡಾಬಾವೊಂದರಲ್ಲಿ 1ಲಕ್ಷ 50 ಸಾವಿರ ರೂ. ಗಳನ್ನು ಗುತ್ತಿಗೆದಾರನಿಂದ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಕಳೆದ ವರ್ಷ ರೋಣ ತಾಲೂಕಿನ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಿದ್ದ ಅನಿಲ ಎಂಬ ಗುತ್ತಿಗೆದಾರರ 42 ಲಕ್ಷ ರೂ. ಬಿಲ್ ಪಾವತಿಸಲು ಸಿಡಿಪಿಒ ಬಸಮ್ಮ ಒಂದೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಶನಿವಾರ ಮಧ್ಯಾಹ್ನ ಗಜೇಂದ್ರಗಡದ ಡಾಬಾವೊಂದರಲ್ಲಿ ಲಂಚದ ಹಣ ಪಡೆಯುತ್ತಿದ್ದ ಸಿಬ್ಬಂದಿ ಜಗದೀಶ್ ಎಂಬಾತನನ್ನು ಡ್ರಾಪ್ ಮಾಡಲಾಗಿದೆ.

ಗದಗ ಜಿಲ್ಲೆಯ ಲೋಕಾಯುಕ್ತರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಸದ್ಯ ಸಿಡಿಪಿಒ ಹಾಗೂ ಸಿಬ್ಬಂದಿ ಇಬ್ಬರನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲು ರೋಣ ಪಟ್ಟಣಕ್ಕೆ ಕರೆದೊಯ್ಯಲಾಗಿದೆ.

ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಮತ್ತೊಬ್ಬ ಯುವಕನಿಗೆ ಗಂಭೀರ ಗಾಯ

0

ಬಸವೇಶ್ವರ ಜಾತ್ರೆಗೆ ಡ್ರೆಸ್ ತರಲು ಹೋಗಿದ್ದಾಗ ಘಟನೆ…

ವಿಜಯಸಾಕ್ಷಿ ಸುದ್ದಿ, ನರಗುಂದ

ದ್ವಿಚಕ್ರ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.

ಗದಗ ರಸ್ತೆಯ ಕುರ್ಲಗೇರಿ ಗ್ರಾಮದ ಬಳಿ ನಡೆದ ಈ ಘಟನೆಯಿಂದಾಗಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸುರೇಶ್ (26) ಎಂಬಾತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸವಾರ ಸಂತೋಷ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ಶ್ರಾವಣ ಮಾಸದ ಕಡೆ ಸೋಮವಾರ ಬಸವೇಶ್ವರ ಜಾತ್ರೆ ಇತ್ತು. ಹೀಗಾಗಿ ನರಗುಂದ ಪಟ್ಟಣಕ್ಕೆ ಡ್ರೆಸ್ ತರಲು ಹೋಗಿದ್ದರು ಎಂದು ಎನ್ನಲಾಗಿದೆ.

ಡ್ರೆಸ್ ಖರೀದಿಸಿ ವಾಪಾಸು ಗ್ರಾಮಕ್ಕೆ ಬರುವಾಗ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಜರುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತೋಳಗಳ ದಾಳಿ; 20ಕ್ಕೂ ಹೆಚ್ಚು ಕುರಿಮರಿಗಳ ಸಾವು

0

ಕುರಿಗಾಯಿಗಳ ಆಕ್ರಂಧನ……

ವಿಜಯಸಾಕ್ಷಿ ಸುದ್ದಿ, ನರಗುಂದ

ತೋಳಗಳ ದಾಳಿಗೆ 20 ಕ್ಕೂ ಹೆಚ್ಚು ಕುರಿಯ ಮರಿಗಳು ಸಾವನ್ನಪ್ಪಿದ ಘಟನೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ.

ಹಿರೇಕೊಪ್ಪ ಗ್ರಾಮದ ಮಹಾದೇವಪ್ಪ ಬಾಳಣ್ಣವರ ಎಂಬ ಕುರಿಗಾಯಿಗೆ ಸೇರಿದ ಕುರಿಮರಿಗಳು ಸಾವನ್ನಪ್ಪಿವೆ. ಕುರಿಗಳ ದಡ್ಡಿಯ ಮೇಲೆ ಯಾರು ಇಲ್ಲದ ಸಮಯದಲ್ಲಿ ತೋಳಗಳು ದಾಳಿ ಮಾಡಿ ಕುರಿ ಮರಿಗಳ ತಿಂದು ಹಾಕಿವೆ.

ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು,
ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕುರಿ ಮರಿಗಳನ್ನು ಸಾಕಿದ್ದ ಕುರಿಗಾಯಿ ಕುಟುಂಬ ಕಣ್ಣೀರು ಹಾಕುತ್ತಿದೆ. ಸ್ಥಳಕ್ಕೆ ಪಶು ವೈದ್ಯರು ಹಾಗೂ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೀಗ ಮುರಿದು ನಗದು ಸೇರಿ ಲಕ್ಷಾಂತರ ರೂ. ಚಿನ್ನಾಭರಣ ಲೂಟಿ

0

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದ ದುಷ್ಕರ್ಮಿಗಳು, ಮನೆಯಲ್ಲಿದ್ದ ನಗದು ಸೇರಿದಂತೆ ಲಕ್ಷಾಂತರ ರೂ.ಗಳ ಚಿನ್ನಾಭರಣ ದೋಚಿಕೊಂಡು ಹೋದ ಘಟನೆ ನಡೆದಿದೆ.

ಹುಬ್ಬಳ್ಳಿ ರಸ್ತೆಯ ಹ್ಯುಂಡೈ ಶೋ ರೂಂ ಬಳಿಯ ನಿವಾಸಿ ಉದ್ಯಮಿ ವಿಜಯಕುಮಾರ್ ವಿಷ್ಣುಸಾ ಶಿದ್ಲಿಂಗ್ ಎಂಬುವರ ಮನೆಯೆ ಕಳ್ಳತನವಾಗಿದ್ದು, ಸೆ.03 ರ ಮುಂಜಾನೆಯಿಂದ 4 ತಾರೀಖಿನ ಮುಂಜಾನೆ 9ಗಂಟೆ‌ ನಡುವಿನ ಅವಧಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ.

ಇದನ್ನೂ ಓದಿ ಮದುವೆ ಮುಗಿಸಿಕೊಂಡು ಬರುವಾಗ ಬೈಕ್ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಯಾರೋ ದುಷ್ಕರ್ಮಿಗಳು, ಮನೆಯ ಬೀಗ ಮುರಿದು ಮನೆ ಒಳಗೆ ಹೋಗಿ ಟ್ರಝರಿಯಲ್ಲಿಟ್ಟಿದ್ದ ನಗದು 2ಲಕ್ಷ 16 ಸಾವಿರದ 500 ರೂ.ಗಳು, ಹಾಗೂ 50 ಸಾವಿರ ರೂ. ಮೌಲ್ಯದ 9 ಗ್ರಾಮ ತೂಕದ ಬಂಗಾರದ ಆಭರಣಗಳು, 33ಸಾವಿರದ 300ರೂ.ಗಳ 395 ಗ್ರಾಮ ತೂಕದ ಬೆಳ್ಳಿ ಆಭರಣಗಳು ಸೇರಿದಂತೆ ಒಟ್ಟು 2ಲಕ್ಷ 99ಸಾವಿರದ 800ರೂ.ಗಳಷ್ಟು ವಸ್ತುಗಳು ಕಳ್ಳತನವಾಗಿವೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 0258/2023- IPC 1860(U/s-454,457,380) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೆ ಮನೆ ಕಳ್ಳತನ; ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು….

0

ಆತಂಕದಲ್ಲಿ ಗ್ರಾಮಸ್ಥರು….

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ಮನೆಗೆ ಹಾಕಿದ್ದ ಚಿಲಕ ತಗೆದು ಒಳಹೊಕ್ಕ ಖದೀಮರು, ಅಡುಗೆ ಮನೆಯಲ್ಲಿದ್ದ ಟ್ರಝರಿಯಲ್ಲಿದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ಹಾಡಹಗಲೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಮೀಪದ ಬೂದಿಹಾಳ ಗ್ರಾಮದ ರೈತ ಬಸನಗೌಡ ಪಾಟೀಲ ಅವರ ಮನೆಯ ಹಗಲು ಹೊತ್ತಿನಲ್ಲಿ ಕಳ್ಳತನವಾಗಿದೆ.

ಪಾಟೀಲ ದಂಪತಿ ಜಮೀನಿಗೆ ಹೋದಾಗ, ಮಕ್ಕಳು ‌ಹಾಗೂ ತಾಯಿ ಮನೆಗೆ ಚಿಲಕ ಹಾಕಿ ಹೊರ ಹೋದಾಗ ಖದೀಮರು ಹೊಂಚು ಹಾಕಿ ಈ ದುಷ್ಕೃತ್ಯ ನಡೆಸಿದ್ದಾರೆ.

ದುಷ್ಕರ್ಮಿಗಳು, ಅಡುಗೆ ಮನೆಯ ಟ್ರಝರಿಯಲ್ಲಿ ಇಟ್ಟಿದ್ದ 50 ಸಾವಿರ ರೂ. ಮೌಲ್ಯದ ಎರಡೂವರೆ ತೊಲಿ ಬಂಗಾರದ ಚೈನು ಹಾಗೂ 8 ಸಾವಿರ ರೂ. ಮೌಲ್ಯದ 4 ಗ್ರಾಮ ತೂಕದ ಬೆಂಡವಾಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ 0060/2023-ipc 1860(U/s-454,380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಮುಗಿಸಿಕೊಂಡು ಬರುವಾಗ ಬೈಕ್ ಅಪಘಾತ; ಸವಾರ ಸ್ಥಳದಲ್ಲೇ ಸಾವು

0

ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಸಂಬಂಧಿಕರ ಮದುವೆ ಮುಗಿಸಿಕೊಂಡು ಬೈಕ್ ನಲ್ಲಿ ವಾಪಾಸು ತನ್ನ ಊರಿಗೆ ಬರುವಾಗ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಶೈನ್ ಬೋರ್ಡ್ ಹಾಗೂ ರಿಪ್ಲೇಕ್ಟರ್ ಇರುವ ತಗಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಜರುಗಿದೆ.

ಗದಗ ಜಿಲ್ಲೆಯ ಕೊಪ್ಪಳ ರಸ್ತೆಯ ಹಳ್ಳಿಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗದಗ ತಾಲೂಕಿನ ಅಡವಿಸೋಮಾಪೂರತಾಂಡಾದ ನಿವಾಸಿ ಪಾಂಡುರಂಗ ತಂದೆ ಲಚ್ಚಪ್ಪ ಲಮಾಣಿ (35) ಎಂಬಾತ ಮೃತಪಟ್ಟ ದುರ್ಧೈವಿ.

ಮೃತ ಪಾಂಡುರಂಗ ಹಾಗೂ ಕುಟುಂಬ ಸದಸ್ಯರು ಕೊಪ್ಪಳ ಜಿಲ್ಲೆಯ ಇರಕಲ್ ಗಡಾದಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದರು. ಆದರೆ ಮದುವೆ ಮುಗಿದ ನಂತರ ಪಾಂಡುರಂಗ ತಾನೊಬ್ಬನೆ ಬೈಕ್ ನಲ್ಲಿ ವಾಪಾಸು ತನ್ನ ತಾಂಡಾಕ್ಕೆ ಬರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಳ್ಳಿಕೇರಿ ಸಮೀಪ ರಸ್ತೆ ದುರಸ್ತಿಯಲ್ಲಿದೆ. ಆ ಕಾರಣಕ್ಕಾಗಿ ಅಲ್ಲಿ ಶೈನ್ ಬೋರ್ಡ್ ಹಾಗೂ ರಿಪ್ಲೇಕ್ಟರ್ ತಗಡು ಇಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ 0142/2023 IPC 1860(U/s-279,304(A)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೆಕ್ಯಾನಿಕ್ ಮನೆಯನ್ನು ಬಿಡದ ಕಳ್ಳರು; ಬಂಗಾರದ ಆಭರಣಗಳ ಕದ್ದು ಪರಾರಿ…

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಯಾರೋ ಕಳ್ಳರು ಮನೆಗೆ ಹಾಕಿದ್ದ ಬೀಗವನ್ನು ಮೀಟಿ ಮನೆಯಲ್ಲಿದ್ದ ಸಾವಿರಾರು ರೂ.ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಬೆಟಗೇರಿಯ ಮಂಜುನಾಥ್ ನಗರದ ವಾಂಬೆ ಬಡಾವಣೆಯ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಪರಶುರಾಮ ತಂದೆ ಸಂಗಪ್ಪ ಸೂರ್ಯವಂಶಿ ಇವರ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಈ ಕೃತ್ಯ ಮಾಡಿದ್ದಾರೆ.

ಮನೆಯಲ್ಲಿ ಬೆಡ್ ರೂಂನಲ್ಲಿದ್ದ ಟ್ರಝರಿಯ ಲಾಕರ್ ನ್ನು ಯಾವುದು ವಸ್ತುವಿನಿಂದ ಮೀಟಿ ತಗೆದು ಅದರಲ್ಲಿದ್ದ 89ಸಾವಿರದ 250ರೂ.ಗಳ ಮೌಲ್ಯದ 25.5 ಗ್ರಾಮ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ 0068/2023 ಕಲಂ 454,380 ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಧಿ ಆಸೆಗಾಗಿ ದೇವಸ್ಥಾನದಲ್ಲಿ ಗುಂಡಿ ಅಗೆದ ಖದೀಮರು…..

ಬಸವಣ್ಣನ ಮೂರ್ತಿ ಕಿತ್ತು ಹಾಕಿ ದುಷ್ಕೃತ್ಯ….

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ


ಲಕ್ಕುಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಟೆಲ್ ಹಾಗೂ ಮನೆಗಳ ಕಳ್ಳತನವಾಗಿರುವ ಘಟನೆಗಳು ಇನ್ನೂ ಹಸಿಯಾಗಿರುವಾಗಲೇ, ಇಲ್ಲಿಯ ದೇವಸ್ಥಾನವೊಂದರಲ್ಲಿ ನಿಧಿ ಆಸೆಗಾಗಿ ಕಳ್ಳರು ಮೂರ್ತಿಯಿರುವ ಸ್ಥಳವನ್ನು ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದಿಂದ 3 ಕೀ.ಮೀ ದೂರದಲ್ಲಿರುವ ಕದಾಂಪೂರ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಜಮೀನೊಂದರಲ್ಲಿ ಈ ಘಟನೆ ನಡೆದಿದೆ.

ಐತಿಹಾಸಿಕ ಸೋಮೇಶ್ವರ ದೇವಾಲಯದ ಒಳಗೆ ಈಶ್ವರಲಿಂಗ ಮೂರ್ತಿಯ ಮುಂದೆ ಇದ್ದ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿ, ಅದರ ಕೆಳಗೆ ಸುಮಾರು ಹತ್ತು ಅಡಿ ಆಳಕ್ಕೆ ಅಗೆಯಲಾಗಿದೆ.

ನೂಲು ಹುಣ್ಣಿಮೆ ದಿನ ರಾತ್ರಿ ಈ ಪ್ರಕರಣ ನಡೆದಿದ್ದು, ಅರ್ಚಕರು ಮುಂಜಾನೆ ಪೂಜೆ ನೆರವೇರಿಸಲು ತೆರಳಿದಾಗ ಕೃತ್ಯ ಗಮನಕ್ಕೆ ಬಂದಿದೆ. ನಿಧಿ ಆಸೆಗಾಗಿ ಕಳ್ಳರು ಇಂತಹ ಕೃತ್ಯವನ್ನು ಎಸಗಿರಬಹುದು ಎಂದು ದೇವಸ್ಥಾನದ ಅರ್ಚಕ ಶಿದ್ರಾಮಯ್ಯ ಮಾಯಾಕರಮಠ ಅಭಿಪ್ರಾಯಪಟ್ಟಿದ್ದಾರೆ.


ಕಳೆದ ಎರಡು ವರ್ಷಗಳ ಹಿಂದೆ ಇದೇ ದೇವಸ್ಥಾನದಲ್ಲಿ ಇಂತಹ ಪ್ರಕರಣ ನಡೆದಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.


ಸೋಮನಕಟ್ಟಿ ಪ್ರದೇಶವೇಂದು ಹೇಳಲಾಗುತ್ತಿರುವ ಇಲ್ಲಿ, ನೂರಾರು ವರ್ಷಗಳ ಹಿಂದೆ ಜನ ವಸತಿಯಿತ್ತು. ಇಲ್ಲಿನ ಕಲಾತ್ಮಕ ಕೆತ್ತನೆಯ ಈ ಸೋಮೇಶ್ವರ ದೇವಸ್ಥಾನವು ಅಂದಿನಿಂದಲೇ ಪೂಜೆಗೊಳ್ಳುತ್ತಿದೆ.
ಇದರ ಕೂಗಳತೆಯ ದೂರದಲ್ಲಿ ಮಾರುತಿ ದೇವಸ್ಥಾನವೂ ಇದೆ. ದೇವಸ್ಥಾನಕ್ಕೆ ರಕ್ಷಣಾ ಕವಚ ಒದಗಿಸಬೇಕೆಂದು ಸಮಾಜ ಸೇವಕ ಮರಿಯಪ್ಪ ವಡ್ಡರ ಹಾಗೂ ಸಾರ್ವಜನಿಕರ ಒತ್ತಾಯಿಸಿದ್ದಾರೆ.

ನಕಲಿ ಸಹಿ ಮಾಡಿ ಗ್ರಾಹಕನಿಗೆ ವಂಚನೆ; ಮುತ್ತೂಟ್ ಪಿನ್ ಕಾರ್ಪ್ ಕಂಪನಿ ಮೋಸ, ಮ್ಯಾನೇಜರ್ ಸೇರಿ ಸಿಬ್ಬಂದಿ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಹಣದ ಅಡಚಣೆಗಾಗಿ ತಾಯಿ ನೆಕ್ಲೆಸ್ ಅಡವಿಟ್ಟಿದ್ದ ವ್ಯಕ್ತಿವೊರ್ವ ಮೃತಪಟ್ಟಿದ್ದರೂ ಆತನ ನಕಲಿ ಸಹಿ ಮಾಡಿ ಮುತ್ತೂಟ್ ಪಿನ್ ಕಾರ್ಪ್ ಕಂಪನಿ ಸಿಬ್ಬಂದಿ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಕೆಲಸಗಾರ ಕೃಷ್ಣ ನಾಯಕ, ಬ್ರ್ಯಾಂಚ್ ಮ್ಯಾನೇಜರ್ ಹಾಸೀಮಸಾಬ ಮತ್ತು ಸಿಬ್ಬಂದಿಗಳ ಮೇಲೆ ಚೀಟಿಂಗ್ ಕೇಸ್ ದಾಖಲಾಗಿದೆ.

ಲಕ್ಷ್ಮೇಶ್ವರ ಪಟ್ಟಣದ ಮುತ್ತೂಟ್ ಪಿನ್ ಕಾರ್ಪ್ ಗೋಲ್ಡ್ ಲೋನ್ ಕಂಪನಿಯಲ್ಲಿ ಶಿವಕುಮಾರ್ ವಿ. ಎಂಬುವರು ಹಣದ ಅಡಚಣೆಗಾಗಿ ತನ್ನ ತಾಯಿ ಸಾವಿತ್ರಮ್ಮ ಇವರ 52.5 ಗ್ರಾಮ ತೂಕದ ಚಿನ್ನದ ನೆಕ್ಲೆಸ್ ಅಡವಿಟ್ಟು ಒಂದು ಲಕ್ಷ ಮೂವತ್ತು ಸಾವಿರ ರೂ.ಗಳನ್ನು 14-10-2022 ರಂದು ಸಾಲ ತೆಗೆದುಕೊಂಡಿದ್ದರು. ಆ ನಂತರ 6-11-2022 ರಂದು ಶಿವಕುಮಾರ್ ಮೃತಪಟ್ಟಿದ್ದರು.

ಇತ್ತ ಮೃತ ಶಿವಕುಮಾರ್ ತಾಯಿ ಹಾಗೂ ಸಹೋದರಿ ಭಾರತಿ ವಿರೂಪಾಕ್ಷಪ್ಪ ಆರ್ ಸೇರಿ ಲಕ್ಷ್ಮೇಶ್ವರದ ಮುತ್ತೂಟ್ ಪಿನ್ ಕಾರ್ಪ್ ಕಂಪನಿಗೆ ಅಡವಿಟ್ಟಿದ್ದ ನೆಕ್ಲೆಸ್ ಬಗ್ಗೆ ಕೇಳಲು ಹೋದಾಗ ಕಂಪನಿಯ ಕೃಷ್ಣ ನಾಯಕ ಶಿವಕುಮಾರ್ ಎಂಬ ಹೆಸರಿನಲ್ಲಿ ಯಾರೂ ಸಾಲ ಪಡೆದಿಲ್ಲ ಸುಳ್ಳು ಹೇಳಿ ಕಳುಹಿಸಿದ್ದರು.

ಆದರೆ ಇಷ್ಟಕ್ಕೆ ಸುಮ್ಮನಾಗದ ಮೃತ ಶಿವಕುಮಾರ್ ನ ಸಹೋದರಿ ಭಾರತಿ, ಸಂಬಂಧಪಟ್ಟ ಕಂಪನಿಯಲ್ಲಿ ಸಾಲದ ಬಗ್ಗೆ ಮಾಹಿತಿ ಪಡೆದಾಗ , ಅದರಲ್ಲಿ ಸಂಬಂಧಪಟ್ಟ ಕಂಪನಿಯ ಕೆಲಸಗಾರ ಕೃಷ್ಣ ನಾಯಕ ಹಾಗೂ ಬ್ರಾಂಚ್ ಮ್ಯಾನೇಜರ್ ಹಾಸೀಮಸಾಬ ಮತ್ತು ಸಿಬ್ಬಂದಿ ಎಲ್ಲರೂ ಮಿಲಾಪಿಯಾಗಿ, ಶಿವಕುಮಾರ್ 6-11-22 ರಂದು ಮೃತಪಟ್ಟಿದ್ದರೂ 02-02-23 ರಂದು ಮೃತಪಟ್ಟಿದ್ದ ಶಿವಕುಮಾರ್ ಹಣ ತುಂಬಿ ಬಂಗಾರದ ನೆಕ್ಲೆಸ್ ಬಿಡಿಸಿಕೊಂಡು ಹೋದಂತೆ ಮೃತನ ನಕಲಿ ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ್ದಾರೆ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಈ ಕುರಿತು 0117/2023, IPC 1860(U/s-417,420,465,468,471,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!