25.8 C
Gadag
Saturday, June 10, 2023
Home Blog

ಪ್ರಚಾರದ ಉದ್ದೇಶದಿಂದ ಜನತಾ ಸದನ ಆಯೋಜನೆ; ಕಾಂಗ್ರೆಸ್ ಯುವ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ತಿರುಗೇಟು….

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಆಡಳಿತ ಇರುವ ನಗರಸಭೆಯಲ್ಲಿ ಜನರು ತಮ್ಮ ಕೆಲಸಕ್ಕಾಗಿ ಅಲೆದಾಡುವಂತಾಗಿದೆ. ಇಂಥ ಸಮಯದಲ್ಲಿ, ಈ ಹಿಂದೆ ತಮ್ಮ ಆಡಳಿತವಿದ್ದಾಗ ಜಿಲ್ಲೆಯಲ್ಲಿ ಸೂಕ್ತವಾದ ಅಭಿವೃದ್ಧಿ ಕೈಗೊಳ್ಳದೇ ಅನ್ಯಾಯ ಮಾಡಿ, ಈಗ ಕೇವಲ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ಜನತಾ ಸದನ ಆಯೋಜಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಕೊಪ್ಪಳ ವ್ಯಂಗ್ಯವಡಿದ್ದಾರೆ.

ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತಗಾರರಾದ ಎಚ್ ಕೆ ಪಾಟೀಲರು ಸಚಿವರಾಗಿದ್ದು, ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ.

ಜಿಲ್ಲೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಎಚ್ ಕೆ ಪಾಟೀಲರ ನೇತೃತ್ವದಲ್ಲಿ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ೫ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪೋಸ್ಟ್ ಮಾಸ್ಟರ್ ಚೀಟಿಂಗ್ ಕೇಸ್; ಸಾಕ್ಷಿ, ಪುರಾವೆ ಸಂಗ್ರಹಿಸುತ್ತಿರುವ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ/ ಶಿರಹಟ್ಟಿ

ಗ್ರಾಹಕರ ಖಾತೆಗೆ ಜಮಾ ಮಾಡಲು ಕೊಟ್ಟ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಪೋಸ್ಟ್ ಮಾಸ್ಟರ್ ವಿರುದ್ಧ ಶಿರಹಟ್ಟಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮದ ಗ್ರಾಮೀಣ ಶಾಖಾ ಅಂಚೆ ಪಾಲಕ ಎಂದು ಕಾರ್ಯನಿರ್ವಹಿಸುತ್ತಿದ್ದ ರಣತೂರ ಗ್ರಾಮದ ವಿನೋದಕುಮಾರ್ ಎಚ್. ಹೆಬ್ಬಾಳ ಎಂಬುವರು ಗ್ರಾಹಕರ ಹಣ ದುರ್ಬಳಕೆ ಮಾಡಿಕೊಂಡಿದ್ದರು.

21-10-2021ರಿಂದ 03-03-2022 ರ ಅವಧಿಯಲ್ಲಿ ಮೂರು ಜನ ಗ್ರಾಹಕರ 63,300 ರೂ.ಗಳನ್ನು ಸ್ವಂತಕ್ಕೆ ಬಳಸಿಕೊಂಡು ಆರೋಪ ಕೇಳಿ ಬಂದಿತ್ತು.

ಈ ಕುರಿತು ಪೋಸ್ಟ್ ಮಾಸ್ಟರ್ ವಿನೋದಕುಮಾರ್ ವಿರುದ್ಧ ಗದಗ ಹೆಡ್ ಪೋಸ್ಟ್‌ ನ ಅಧಿಕಾರಿ ಎಮ್.ಜಿ.ಕರಣ ಎಂಬುವರು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಶಿರಹಟ್ಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಶಿರಹಟ್ಟಿ ಪೊಲೀಸರು, ಗ್ರಾಹಕರಿಗೆ ಸೇರಿದ ಹಣ ದುರ್ಬಳಕೆ ಮಾಡಿಕೊಂಡಿರುವ
ಪೋಸ್ಟ್ ಮಾಸ್ಟರ್ ವಿರುದ್ಧ ತನಿಖೆ ಪ್ರಗತಿಯಲ್ಲಿದ್ದು, ಸಾಕ್ಷಿ, ಪುರಾವೆಗಳನ್ನು ಸಂಗ್ರಹ ಮಾಡಲಾಗುತ್ತಿದ್ದು, ಸದ್ಯದಲ್ಲಿಯೇ ತನಿಖಾ ಕಾರ್ಯ ಪೂರ್ಣಗೊಳಿಸಿ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಪಿಎಸ್ಐ ಈರಪ್ಪ. ಹ ರಿತ್ತಿ ಮಾಹಿತಿ ನೀಡಿದ್ದಾರೆ.

ಡೆಂಜರ್ ಮಾಂಜಾ ದಾರಕ್ಕೆ ಯುವಕ ಸಾವು; ಆರು ದಿನ ನರಳಾಡಿದ ರವಿ ಮೃತ್ಯು

ನಿಷೇಧವಿದ್ದರೂ ಮಾಂಜಾ ದಾರ ಗದಗನಲ್ಲಿ ಭರ್ಜರಿ ಮಾರಾಟ….

ವಿಜಯಸಾಕ್ಷಿ ಸುದ್ದಿ, ಗದಗ

ಕಾರ ಹುಣ್ಣಿಮೆ ದಿನದಂದು ಮಾಂಜಾ ದಾರಕ್ಕೆ ಸಿಲುಕಿ ತೀವ್ರ ಗಾಯಗೊಂಡು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾನೆ.

ಕಳೆದ ಆರು ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ನರಳಾಡಿದ ಯುವಕ ಪಿ.ರವಿ (28) ಇಂದು ಮುಂಜಾನೆ ಮೃತಪಟ್ಟಿದ್ದಾನೆ.

ಇದನ್ನೂ ಓದಿ ಜೀವ ಹಿಂಡುತ್ತಿರುವ ಗಾಳಿಪಟ ದಾರ; ನಿನ್ನೆ ಒಂದೇ ದಿನ ಪೊಲೀಸ್ ಸೇರಿ ಮೂವರಿಗೆ ಗಾಯ-ಯುವಕನ ಸ್ಥಿತಿ ಗಂಭೀರ

ಕಾರ ಹುಣ್ಣಿಮೆ ದಿನದಂದು ಗದಗ ನಗರದ ಡಂಬಳ ನಾಕಾ ಬಳಿ ಬೈಕ್ ನಲ್ಲಿ ಹೊರಟಿದ್ದ ಯುವಕ ಪಿ.ರವಿಯ ಕತ್ತಿಗೆ ಮಾಂಜಾ ದಾರ ಸಿಲುಕಿ ಕತ್ತು ಕಟ್ ಆಗಿತ್ತು. ತೀವ್ರ ರಕ್ತಸ್ರಾವದಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆಯ ನಿವಾಸಿಯಾಗಿದ್ದ ಪಿ. ರವಿ ನಗರದ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ.

ಜಿಮ್ಸ್ ನ ಶವಾಗಾರದ ಮುಂದೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲ ಮುಟ್ಟಿತ್ತು.

ಅಂದು ಕಾರ ಹುಣ್ಣಿಮೆ ದಿನದಂದು ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಲವು ಜನರು ಮಾಂಜಾ ದಾರದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಡೇಂಜರ್ ಮಾಂಜಾ ದಾರ ಮಾರಾಟ ಮಾಡದಂತೆ ನಿಷೇಧವಿದ್ದರೂ ಅವಳಿ ನಗರದಲ್ಲಿ ಭರ್ಜರಿ‌ ಮಾರಾಟವಾಗುತ್ತಿದೆ.

ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ನಕಲಿ ಬಿಲ್ ಸೃಷ್ಟಿಸಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ; ಲಕ್ಷಾಂತರ ರೂ. ಮೌಲ್ಯದ ಅಕ್ಕಿ ಜಪ್ತಿ, ಚಾಲಕ ಬಂಧನ

ಸಾರ್ವಜನಿಕರ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳ ದಾಳಿ……

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸಾರ್ವಜನಿಕರಿಗೆ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ನಕಲಿ ರಸೀದಿಯೊಂದಿಗೆ ಸಾಗಿಸುತ್ತಿದ್ದ ವೇಳೆ ಸಾಗಾಟಕ್ಕೆ ಬಳಸಿದ ಲಾರಿ, 4,59,310 ರೂ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್‌ 5ರಂದು ಮಧ್ಯಾಹ್ನ 1.20ರ ಸುಮಾರಿಗೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಕೊಂಬಳಿಯ ವಾಹನ ಚಾಲಕ ಹೊನ್ನಪ್ಪ ಮಲ್ಲಪ್ಪ ಮಾನ್ಯರಮಸಲವಾಡ ಹಾಗೂ ಲಾರಿಯ ಮಾಲಕ ಇಬ್ಬರೂ ಕೂಡಿಕೊಂಡು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕ್ವಾಲಿಟಿ ಅನಾಲೈಸಿಸ್‌ ನಕಲಿ ರಸೀದಿಗಳನ್ನು ಮಾಡಿ, ಅನಧಿಕೃತವಾಗಿ ತಮ್ಮ ಸ್ವಂತ ಲಾಭಕ್ಕೋಸ್ಕರ ಲಾರಿಯಲ್ಲಿ ತುಂಬಿಸಿಕೊಂಡು ಬಂದಿದ್ದರು.

ಮುಂಡರಗಿ ಪಟ್ಟಣದ ಕೆಎಫ್‌ಸಿಎಸ್‌ ಗೋದಾಮಿನ ಬಳಿ ಇಬ್ಬರೂ ಆರೋಪಿಗಳು ಸದರಿ ಲಾರಿಯೊಂದಿಗೆ ನಿಂತಿದ್ದರು. ಈ ಸಮಯದಲ್ಲಿ ಮುಂಡರಗಿ ವಲಯದ ಆಹಾರ ನಿರೀಕ್ಷಕ ಜಗದೀಶ ಭರಮಪ್ಪ ಅಮಾತಿ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಲಾರಿಯಲ್ಲಿದ್ದ 19,970 ಕೆಜಿ ಅಕ್ಕಿಯನ್ನು ಪರಿಶೀಲಿಸಿ ವಶಕ್ಕೆ ಪಡೆದರು.

ಇದನ್ನೂ ಓದಿ  ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ; ದಂಧೆಕೋರ ವೀರೇಶ್ ಬಡಿಗೇರನಿಗೆ ಬಿಸಿ!

ವಶಪಡಿಸಿಕೊಂಡ ಅಕ್ಕಿಯ ಒಟ್ಟೂ ಮೌಲ್ಯ 4,59,310 ರೂ ಆಗಿದ್ದು, ಸದರಿ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿಗೆ ಸಂಬಂಧಿಸಿ ಅಪರಾಧ: 84/2023, ಕಲಂ-3/7, ಇ.ಸಿ ಕಾಯ್ದೆ ಮತ್ತು ಪಿಡಿಎಸ್‌ ಆರ್ಡರ್-2016ರ ಕಲಂ 18ರ ಅಡಿಯಲ್ಲಿ ಮುಂಡರಗಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪತ್ನಿಯ ಶೀಲ ಶಂಕಿಸಿದ ಪತಿ, ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ….

ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದ ಘಟನೆ……!

ವಿಜಯಸಾಕ್ಷಿ ಸುದ್ದಿ, ಹಾವೇರಿ

ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದಲ್ಲಿ ನಡೆದಿದೆ.

ದಂಪತಿಗಳ ದುರ್ಮರಣದಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ತೋಟದ ಮನೆಯಲ್ಲಿ ಪತ್ನಿ ದ್ರಾಕ್ಷಾಣೆವ್ವ(45)ಳನ್ನು ಮಚ್ಚಿನಿಂದ ಕೊಲೆಗೈದ ಗಂಡ ಪ್ರಭು ವಾರತಿ(52) ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೆಂಡತಿಯ ಶೀಲದ ಬಗ್ಗೆ ಅನುಮಾನಪಟ್ಟ ಪ್ರಭು, ನಿತ್ಯವೂ ಮನೆಯಲ್ಲಿ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಮಂಗಳವಾರ ಜಗಳ ವಿಕೋಪಕ್ಕೆ ಹೋಗಿತ್ತು.

ಪತಿ-ಪತ್ನಿಯರ ನಡುವೆ ಹೊಡೆದಾಟ ನಡೆದ ಬಳಿಕ ಪ್ರಭು ಮಚ್ಚಿನಿಂದ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ಬಳಿಕ ತಾನೂ ಮನೆಯೆದುರೇ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಸ್ಥಳಕ್ಕೆ ಎಸ್‌ಪಿ ಶಿವಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪಾದಚಾರಿಗೆ ಕಾರ್ ಡಿಕ್ಕಿ; ಸ್ಥಳದಲ್ಲಿಯೇ ಸಾವು, ಟೈರ್ ಗೆ ಬೆಂಕಿ ಹಚ್ಚಿ ಗ್ರಾಮಸ್ಥರ ಆಕ್ರೋಶ, ರಸ್ತೆತಡೆ

ಸ್ಥಳಕ್ಕೆ ಸಂಸದ, ಶಾಸಕರ ಭೇಟಿಗೆ ಗ್ರಾಮಸ್ಥರ ಪಟ್ಟು……

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.

ತಾಲೂಕಿನ ಶಿರಗುಪ್ಪಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಎಂಟು ಗಂಟೆಗೆ ನಡೆದಿದ್ದು, ಘಟನೆಯಲ್ಲಿ ಶಿರಗುಪ್ಪಿ ಗ್ರಾಮದ ಬಸಪ್ಪ (45) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು, ರಸ್ತೆ ತಡೆ ನಡೆಸುತ್ತಿದ್ದು, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಸಂಸದರು ಹಾಗೂ ಶಾಸಕರು ಭೇಟಿ ನೀಡುವಂತೆ ಪಟ್ಟು ಹಿಡಿದಿದ್ದು, ಆರಂಭದಲ್ಲಿ ಪೊಲೀಸರ ಮನವೊಲಿಕೆಗೆ ಜಗ್ಗಲಿಲ್ಲ. ಸಂಸರ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಡಿಕ್ಕಿ ಹೊಡೆದ ಕಾರ್ ಹುಬ್ಬಳ್ಳಿಯಿಂದ ಗದಗ ಕಡೆ ಹೋಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ಗ್ರಾಮಸ್ಥರ ಮನವೊಲಿಸಲು ಹರಸಾಹಸ ಪಟ್ಟರು. ನಂತರ ಸಂಸದ ಜೋಶಿ ಅವರು ದೂರವಾಣಿ ಮೂಲಕ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆಯಲಾಗುವುದು ಎಂದು ಭರವಸೆ ಕೊಟ್ಟ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲಾಗಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು.

ಕಂಟಕ ನಿವಾರಣೆಗೆ ಪೂಜೆ ಮಾಡಿಸಲು ಹಣ ಪಡೆದು ನಾಪತ್ತೆಯಾದ ಬುಡಬುಡುಕೆ ಬಾಬಾ……

ಫೋನ್‌ಪೇ ಮೂಲಕ ಹಣ ಪಡೆದು ಮೋಸ: ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ರೋಣ

ನಿಮ್ಮ ಸಹೋದರನಿಗೆ ನಾನಾ ರೀತಿಯ ಸಮಸ್ಯೆಗಳು, ಜೀವ ಕಂಟಕವಿದೆ, ಅದನ್ನು ಪೂಜೆಯ ಮೂಲಕ ಪರಿಹರಿಸುತ್ತೇನೆಂದು ಹೇಳಿ ನಂಬಿಸಿ, ಫೋನ್‌ಪೇ ಮೂಲಕ 53 ಸಾವಿರ ರೂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವ್ಯಕ್ತಿಯೊಬ್ಬರು ಮೋಸ ಮಾಡಿರುವ ಕುರಿತು ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ರೋಣ ತಾಲೂಕಿನ ಅಸೂಟಿ ಗ್ರಾಮದ ನಿವಾಸಿ ಅಭಿಷೇಕ ವಿರೂಪಾಕ್ಷಪ್ಪ ದಿಂಡೂರು ದೂರುದಾರರಾಗಿದ್ದಾರೆ.

ಮೇ.9ರ ಮುಂಜಾನೆ 7.15 ಗಂಟೆಯ ಸುಮಾರಿಗೆ ಅಸೂಟಿ ಗ್ರಾಮದ ತಮ್ಮ ಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿಯೊಬ್ಬರು ತಾನು ಬುಡಬುಡುಕೆಯವನೆಂದು ಹೇಳಿಕೊಂಡು ಮನೆಗೆ ಬಂದಿದ್ದರು.

ಈ ಸಮಯದಲ್ಲಿ ದೂರುದಾರರಿಗೆ ಮೋಸ ಮಾಡುವ ಉದ್ದೇಶದಿಂದ ನಿಮ್ಮ ಅಣ್ಣನಿಗೆ ಹಲವಾರು ಸಮಸ್ಯೆಗಳಿವೆ, ಪ್ರಾಣ ಕಂಟಕವಿದೆ, ಪೂಜೆ ಮಾಡಿಸಬೇಕೆಂದು ನಂಬಿಸಿದ್ದರು.

ನಂತರ ಪೂಜಾ ಸಾಮಗ್ರಿಗಳನ್ನು ತರಲು ಹಣ ನೀಡಿ ಎಂದು ಅದೇ ಸಮಯದಲ್ಲಿ ತನ್ನ ಮೊಬೈಲ್‌ಗೆ 16 ಸಾವಿರ ರೂ ಹಣ ಹಾಕಿಸಿಕೊಂಡು ಹೋಗಿದ್ದರು.
ಮಾರನೇ ದಿನ ಬೆಳಿಗ್ಗೆ 9.45ರ ಸಮಯಕ್ಕೆ ಆರೋಪಿಯು ಫಿರ್ಯಾದಿಗೆ ಮತ್ತೆ ಫೋನ್‌ ಮಾಡಿ, ಪೂಜಾ ಸಾಮಗ್ರಿಗಳ ಒಟ್ಟೂ ಮೊತ್ತ 53 ಸಾವಿರ ರೂ ಆಗಿದೆ ಎಂದು ತಿಳಿಸಿ, ಪುನಃ 25 ಸಾವಿರ ರೂ ಹಣ ಹಾಕಿಸಿಕೊಂಡಿದ್ದರು.

ಅಲ್ಲದೆ, ಫಿರ್ಯಾದಿಯ ಅಣ್ಣ ಬಸವರಾಜ ದಿಂಡೂರ ಇವರ ಮೊಬೈಲ್‌ನಿಂದಲೂ 12 ಸಾವಿರ ರೂ. ಹಣವನ್ನು ಫೋನ್‌ಪೇ ಮೂಲಕ ವರ್ಗಾಯಿಸಿಕೊಂಡಿದ್ದರು.
ಇದಾದ ನಂತರ ಫಿರ್ಯಾದಿಯ ಮನೆಗೆ ಬಾರದೇ, ಯಾವುದೇ ಪೂಜೆಯನ್ನೂ ಮಾಡದೇ ಒಟ್ಟೂ 53 ಸಾವಿರ ರೂ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಈ ಸಂಬಂಧ ಅಪರಾಧ 0078/2023, ಐಪಿಸಿ 1860ರ ಕಲಂ 420 ಅಡಿಯಲ್ಲಿ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಯನೂರು ಬಾರ್‌ ಕ್ಯಾಶಿಯರ್‌ ಹತ್ಯೆ ಪ್ರಕರಣ: ರೋಚಕ ಕಾರ್ಯಾಚರಣೆಯಲ್ಲಿ ಕರ್ತವ್ಯ ಮೆರೆದ ಗದಗಿನ ಅಧಿಕಾರಿ ರಾಜು ರೆಡ್ಡಿ

ಮೂವರು ಆರೋಪಿಗಳ ಹೆಡಮುರಿ ಕಟ್ಟಿದ ಗದಗಿನ ಕುವರ….

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಆಯನೂರಿನ ನವರತ್ನ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಜೂನ್‌ 4ರ ರಾತ್ರಿ ಕ್ಯಾಶಿಯರ್‌ ಸಚಿನ್‌ ಎದೆಗೆ ಚಾಕು ಚುಚ್ಚಿ ಹತ್ಯೆ ಮಾಡಲಾಗಿತ್ತು. ಮದ್ಯ ಸೇವನೆ ಮಾಡುತ್ತಿದ್ದ ಮೂವರಿಗೆ, ಬಾರ್‌ ಬಂದ್‌ ಮಾಡುವ ಸಮಯವಾಗಿದೆ ಹೊರಡಿ ಎಂದಿದ್ದಕ್ಕೆ ಜಗಳ ತೆಗೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್‌ ಸಿಬ್ಬಂದಿಗಳ ಎದುರಲ್ಲೇ ಈ ಘಟನೆ ಸಂಭವಿಸಿತ್ತು. ಆರೋಪಿಗಳ ಪತ್ತೆ ಕಾರ್ಯಾಚರಣೆಗಿಳಿದ ಗದಗ ಜಿಲ್ಲೆಯ ಅಧಿಕಾರಿ ಪಿಎಸ್ಐ ರಾಜು ರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿ ಸಚಿನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಅಶೋಕ್‌ ಮತ್ತು ನಿರಂಜನ್‌ ಸೆರೆಸಿಕ್ಕಿದ್ದರೂ, ಪ್ರಮುಖ ಆರೋಪಿ ಸತೀಶ್‌ ಘಟನೆಯ ಬಳಿಕ ತಲೆಮರೆಸಿಕೊಂಡು ಸಮೀಪದ ಕಾಡಿನಲ್ಲಿ ಅವಿತುಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯೇ ದಾಳಿ ನಡೆಸಿದ್ದ.

ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸತೀಶ್‌ ತಲೆಮರೆಸಿಕೊಂಡಿರುವುದು ಗೊತ್ತಾಗುತ್ತಿದ್ದಂತೆ ಗದಗಿನ ಹೆಮ್ಮೆಯ ಅಧಿಕಾರಿ, ಪಿಎಸ್‌ಐ ರಾಜು ರೆಡ್ಡಿ ನೇತೃತ್ವದಲ್ಲಿ, ಸಿಬ್ಬಂದಿ ಶಿವರಾಜ್‌ ಮತ್ತು ಪ್ರವೀಣ್‌ ಆರೋಪಿಯನ್ನು ಬಂಧಿಸಲು ಕಾಯಾಚರಣೆಗಿಳಿದಿದ್ದರು.

ಈ ವೇಳೆ ಪೊಲೀಸ್‌ ಸಿಬ್ಬಂದಿ ಶಿವರಾಜ್‌ ಮತ್ತು ಪ್ರವೀಣ್‌ ಮೇಲೆ ಸತೀಶ್‌ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರನ್ನೂ ತಳ್ಳಿ ಪಿಎಸ್‌ಐ ರಾಜು ರೆಡ್ಡಿ ಮೇಲೆ ಚಾಕುವಿನಿಂದ ಹಲ್ಲೆಗೆ ನಡೆಸಲು ಮುಂದಾಗಿದ್ದ.
ಈ ವೇಳೆ ಪಿಎಸ್‌ಐ ರಾಜು ರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಆಗಲೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆರೋಪಿ ಸತೀಶ್‌ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್‌ ಸಿಬ್ಬಂದಿಗಳು ಗಾಯಗೊಂಡಿರುವ ವಿಚಾರ ತಿಳಿಯುತ್ತಿದ್ದಂತೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದರು.

ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಪುಟಗಾಂವ ಬಡ್ನಿ ಗ್ರಾಮದ ರಾಜು ರೆಡ್ಡಿ, ಈ ಹಿಂದೆ ಬೆಟಗೇರಿ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದರು.


ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಇವರ ಪತ್ತೆಗೆ ಮೂರು ತಂಡಗಳನ್ನು ರಚಿಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸತೀಶ್‌ ತಲೆಮರೆಸಿಕೊಂಡಿದ್ದ. ಈಗ ನಮ್ಮ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳು ಸಿಬ್ಬಂದಿಗಳೊಂದಿಗೆ ಮಾತನಾಡಿ, ಆರೋಗ್ಯ ವಿಚಾರಿಸಿದ್ದೇನೆ ಮತ್ತು ವೈದ್ಯರನ್ನೂ ಸಂಪರ್ಕಿಸಿ, ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿದ್ದೇನೆ.
-ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ.

ವಿಮಾ ಕಂಪನಿಗೆ ಬಿಸಿ ಮುಟ್ಟಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ; ಪರಿಹಾರ ಪಡೆದ ಅಜ್ಜ-ಮೊಮ್ಮಗಳು….

ನ್ಯಾಯವಾದಿ ಎಸ್ ಕೆ ನದಾಫ್ ಅವರ ಸಮರ್ಥ ವಾದದಿಂದ ಗ್ರಾಹಕ ನ್ಯಾಯಾಲಯದಲ್ಲಿ ಪರಿಹಾರ ಪಡೆದ ಗ್ರಾಹಕರು…

ವಿಜಯಸಾಕ್ಷಿ ಸುದ್ದಿ, ಗದಗ

ಮನೆ ನಿರ್ಮಾಣಕ್ಕೆ ಪಡೆದಿದ್ದ 30 ಲಕ್ಷ ರೂ. ಸಾಲಕ್ಕೆ ಅಷ್ಟೇ ಮೊತ್ತದ ವಿಮಾ ಪಾಲಿಸಿ ಪಡೆದು ಪ್ರೀಮಿಯಂ ಕಟ್ಟಿದ್ದ ಗ್ರಾಹಕರೊಬ್ಬರ ಸಾವಿನ ನಂತರ, ಸಾಲದಿಂದ ಮುಕ್ತಿಗೆ ವಿಮಾ ಹಣ ಪಾವತಿಸಲು ನಿರಾಕರಿಸಿದ್ದು, ಈ ಬಗ್ಗೆ ಯುನೈಟೆಡ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಇಲ್ಲಿನ ವಿವೇಕಾನಂದ ನಗರದಲ್ಲಿ ವಾಸವಾಗಿರುವ ಶಿಕ್ಷಕಿ ಕವಿತಾ ಲಾಲಪ್ಪ ಪೂಜಾರರು ಗದುಗಿನ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಮನೆ ಕಟ್ಟಿಸುವ ಸಲುವಾಗಿ 30 ಲಕ್ಷ ರೂ.ಗಳ ಸಾಲ ಪಡೆದಿದ್ದರು. ಸದರಿ ಸಾಲಕ್ಕೆ ಯುನೈಟೆಡ್ ಇನ್ಸುರೆನ್ಸ್ ಇಂಡಿಯಾ ಕಂ. ಲಿ ಇವರಲ್ಲಿ ವಿಮೆ ಪಡೆದಿದ್ದರು. ತನ್ನ ಗಂಡ ಸೇವಾ ನಾಯಕ ಹಾಗೂ ಕವಿತಾ ಇವರ ಮಧ್ಯೆ ಭಿನ್ನಾಭಿಪ್ರಾಯ ಇದ್ದುದರಿಂದ ಅನೇಕ ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ತನ್ನ ಅಲ್ಪವಹಿ ಮಗಳು ಹರ್ಷಿತಾ ಇವಳ ಸಂರಕ್ಷಣೆದಾರ ಎಂದು ಕವಿತಾಳ ತಂದೆ ಲಾಲಪ್ಪ ಶಿವಪ್ಪ ಪೂಜಾರ ಇವರಿಗೆ ಮೃತ್ಯುಪತ್ರವನ್ನು ಬರೆದುಕೊಟ್ಟು ನೋಂದಣಿ ಮಾಡಿಸಿದ್ದರು.

7-5-2021ರಂದು ಕೋವಿಡ್-19ರಿಂದ ಕವಿತಾ ಮೃತಪಟ್ಟಿದ್ದರು. ನಂತರ ಹರ್ಷಿತಾ ಪರವಾಗಿ ಅಜ್ಜ ಲಾಲಪ್ಪ ಪೂಜಾರ, ಬ್ಯಾಂಕ್ ಹಾಗೂ ವಿಮಾ ಕಂಪನಿಗೆ ದಾಖಲೆಗಳನ್ನು ಹಾಜರುಪಡಿಸಿ ಕವಿತಾಳ ಹೆಸರಿನಲ್ಲಿದ್ದ ಸಾಲವನ್ನು ವಿಮಾ ಕಂಪನಿಯವರು ತೀರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ, ಹರ್ಷಿತಾಳ ತಂದೆ ಬದುಕಿರುವಾಗ, ಅಲ್ಲ ಸಂರಕ್ಷಣೆದಾರರಾಗುವುದಿಲ್ಲ ಎಂಬ ಕಾರಣ ಹೇಳಿ ಸಾಲದ ಹಣ ತೀರಿಸಲು ನಿರಾಕರಿಸಿದ್ದರು.

ತಾಯಿ ಸರ್ಕಾರಿ ನೌಕರಳಾಗಿದ್ದರೂ ಮಗಳು ಅಲ್ಪವಯಿ. ತಂದೆಯೂ ಇಲ್ಲ. ಅಲ್ಪವಯಿ ಕಾರಣಕ್ಕೆ ತಾಯಿಯ ಪಿಂಚಣಿಯೂ ಬರುವುದಿಲ್ಲ. ಅತ್ತ ಅನುಕಂಪದ ಆಧಾರದ ನೌಕರಿಯೂ ಬರುವುದಿಲ್ಲ. ಈ ವೇಳೆ ದಿಕ್ಕು ತೋಚದ ಹರ್ಷಿತಾ, ಬ್ಯಾಂಕ್, ವಿಮಾ ಕಂಪನಿ ಸ್ಪಂದಿಸದೇ ಇರುವುದರಿಂದ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.

ಅತ್ತ ಕೆನರಾ ಬ್ಯಾಂಕ್‌ನವರು ಬ್ಯಾಂಕ್‌ನವರು ಸಾಲ ವಸೂಲಿಗೆ ಬೆಂಗಳೂರಿನ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ.

ಗದಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅರ್ಜಿದಾರರ ಪರ ನ್ಯಾಯವಾದಿ ಎಸ್ ಕೆ ನದಾಫ್ ಅವರು ವಾದ ಮಾಡಿ, ಕೊರೊನಾ ಸಾವು ಕೂಡ ಆಕಸ್ಮಿಕ ವ್ಯಾಪ್ತಿಗೆ ಬರುತ್ತದೆ. ಬ್ಯಾಂಕ್, ವಿಮಾ ಕಂಪನಿ ಸೇವಾ ನ್ಯೂನ್ಯತೆ ಪರಿಗಣಿಸಿ, ಈ ಕುಟಂಬವನ್ನು ಸಾಲದಿಂದ ಮುಕ್ತಿ ಮಾಡಿ, ಮಾನಸಿಕ ಪರಿಹಾರ ಹಾಗೂ ಪ್ರಕರಣ ಖರ್ಚು ಭರಿಸುವಂತೆ ವಾದ ಮಂಡಿಸಿದ್ದರು.

ಇದಕ್ಕೆ ಪೂರಕವಾದ ಸುಪ್ರೀಂ ಕೋರ್ಟ್ ಹಾಗೂ ಗ್ರಾಹಕ ಆಯೋಗಗಳ ಹಲವು ಪ್ರಕರಣಗಳ ಆದೇಶ ಹಾಜರುಪಡಿಸಿದ್ದರು.

ಅರ್ಜಿದಾರರ ವಾದ-ವಿಮಾ ಕಂಪನಿಯ ಪ್ರತಿವಾದ ಆಲಿಸಿದ ಗದಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಕೋವಿಡ್ ಸಾವು ಕೂಡ ಅಸಹಜ. ಕೋವಿಡ್ ಸೋಂಕು ಇಡೀ ಜಗತ್ತಿಗೆ ಆವರಿಸಿತ್ತು. ಈ ವೇಳೆ ವಿಮಾ ಕಂಪನಿಗಳು ಕೂಡ ವಿಮಾ ಪರಿಹಾರ ನೀಡಿವೆ. ಅಪಘಾತ ಕೇವಲ ವಾಹನದಿಂದ ಆಗಬೇಕೆಂದಿಲ್ಲ ಎಂದು ಹೇಳಿ, ವಿಮಾ ಕಂಪನಿಯು ಕೂಡಲೇ 30 ಲಕ್ಷ ರೂ. ವಿಮಾ ಪರಿಹಾರ ನೀಡಬೇಕು.

ಇದರೊಂದಿಗೆ ಪರಿಹಾರವಾಗಿ 30 ಸಾವಿರ ರೂ. ಹಾಗೂ ಪ್ರಕರಣದ ಖರ್ಚು ಎಂದು 15 ಸಾವಿರ ರೂ. ಪಾವತಿಸಬೇಕು. ಸಾಲ ನೀಡಿದ ಬ್ಯಾಂಕ್ ಕೂಡ ಸಾಲದ ಹಣ ಮುಟ್ಟಿದ ಒಂದು ತಿಂಗಳ ಒಳಗಾಗಿ ‘ಕ್ಲಿಯರೆನ್ಸ್’ ಸರ್ಟಿಫಿಕೇಟ್ ನೀಡಬೇಕು ಎಂದೂ ಆದೇಶ ನೀಡಿದೆ.

ಪ್ರಕರಣದಲ್ಲಿ ಫಿರ್ಯಾದಿದಾರರ ಪರವಾಗಿ ವಕೀಲರಾದ ಎಸ್ ಕೆ ನದಾಫ್ ವಾದ ಮಂಡಿಸಿದ್ದರು.

ಕೋವಿಡ್ ಸಾಂಕ್ರಾಮಿಕ ಖಾಯಿಲೆ ಇಡೀ ಜಗತ್ತಿಗೇ ಅಂಟಿಕೊಂಡಿತ್ತು. ಈ ಸೋಂಕಿನಿಂದ ಸಾವನ್ನಪ್ಪಿದವರಿಗೆ ವಿಮಾ ಪರಿಹಾರ ನೀಡಲು ನಿರಾಕರಿಸಿದರೆ, ಅವರ ಹಕ್ಕನ್ನು ಮೊಟಕುಗೊಳಿಸಿದಂತೆ. ಗ್ರಾಹಕ ನ್ಯಾಯಾಲಯವು ಈ ಹಕ್ಕನ್ನು ಎತ್ತಿಹಿಡಿದಿದೆ.

-ಎಸ್. ಕೆ.ನದಾಫ್. ಗ್ರಾಹಕ ಫಿರ್ಯಾದಿದಾರರ ಪರ ವಕೀಲರು.

ಜೀವ ಹಿಂಡುತ್ತಿರುವ ಗಾಳಿಪಟ ದಾರ; ನಿನ್ನೆ ಒಂದೇ ದಿನ ಪೊಲೀಸ್ ಸೇರಿ ಮೂವರಿಗೆ ಗಾಯ-ಯುವಕನ ಸ್ಥಿತಿ ಗಂಭೀರ

ನಿಷೇಧಿತ ಮಾಂಜಾ ದಾರದಿಂದ ಆಸ್ಪತ್ರೆ ಸೇರಿದ ಅಮಾಯಕರು….

ವಿಜಯಸಾಕ್ಷಿ ಸುದ್ದಿ, ಗದಗ

ಗಾಳಿಪಟ ಹಾರಿಸಲು ಉಪಯೋಗಿಸುವ ಮಾಂಜಾ ದಾರವನ್ನು ಮಾರಾಟ ಮಾಡದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ನಗರಸಭೆ ಸಿಬ್ಬಂದಿಗಳು ಮಾಂಜಾ ದಾರ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಆದರೂ ಮಾಂಜಾ ದಾರ ಎಗ್ಗಿಲ್ಲದೆ ಮಾರಾಟವಾಗುತ್ತಿದ್ದು, ಅಮಾಯಕ ಜನರ ಜೀವ ಹಿಂಡುತ್ತಿದೆ.

ನಿನ್ನೆ ಭಾನುವಾರ ಕಾರ ಹುಣ್ಣಿಮೆಯಂದು ಅವಳಿ ನಗರದ ವಿವಿಧೆಡೆ ಗಾಳಿಪಟ ದಾರಕ್ಕೆ ಸಿಲುಕಿ ಮೂರು ಜನರು ಗಾಯಗೊಂಡಿದ್ದಾರೆ.

ಡಂಬಳ ನಾಕಾದ ಬಳಿ, ವೀರನಾರಾಯಣ ದೇವಸ್ಥಾನ ದ ಸಮೀಪ ಸೇರಿದಂತೆ ಮೂರು ಕಡೆ ಗಾಳಿಪಟದ ದಾರದಿಂದ ಬೈಕ್ ಸವಾರರು, ಪಾದಚಾರಿಗಳಿಗೆ ಗಾಯವಾಗಿದೆ.

ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಬೈಕ್ ನಲ್ಲಿ ಹೋಗುವಾಗ ಮಾಂಜಾ ದಾರ ಬಡಿದು ರೈಲ್ವೆ ಪೊಲೀಸ್ ಸಿಬ್ಬಂದಿಯ ಮೂಗು, ಯುವಕನೊಬ್ಬನ ಕತ್ತಿಗೆ ದಾರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೊಬ್ಬನ ಪಾದಕ್ಕೆ ದಾರ ತಾಗಿದ್ದು ಆಸ್ಪತ್ರೆ ಸೇರುವಂತಾಗಿದೆ.

ಯುವಕನೊಬ್ಬನ ಕತ್ತಿಗೆ ಬಿದ್ದ ಮಾಂಜಾ ದಾರ ಜೀವಕ್ಕೆ ಅಪಾಯ ತಂದಿದ್ದು, ತೀವ್ರ ರಕ್ತಸ್ರಾವ ಆಗಿದೆ.

ನಿನ್ನೆಯ ದಿನ ಮಾಂಜಾ ದಾರಕ್ಕೆ ಸಿಲುಕಿ ಗಾಯಗೊಂಡವರ ವಿಡಿಯೋ ವೈರಲ್ ಆಗಿದ್ದು, ಇದರಿಂದಾಗಿ ಬೆಳಕಿಗೆ ಬಂದಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.