Home Blog

ಯೋಗ ವಿಜ್ಞಾನ ಕೇಂದ್ರದ ಸದಸ್ಯರ ಕ್ರೀಡಾಕೂಟದ ಫಲಿತಾಂಶ

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಸಿದ್ಧಲಿಂಗ ನಗರದ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ 15ನೇ ವಾರ್ಷಿಕೋತ್ಸವದ ಅಂಗವಾಗಿ ಸದಸ್ಯರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟದ ಫಲಿತಾಂಶ ಕೆಳಗಿನಂತಿದೆ.

ವೇಗದ ನಡಿಗೆ: ಪ್ರಥಮ-ಚೈತ್ರಾ ಹದ್ದಣ್ಣವರ, ದ್ವಿತೀಯ-ಸಂಗೀತಾ ಮಡಿವಾಳರ, ತೃತೀಯ-ವೀಣಾ ಮಾಲಿಪಾಟೀಲ.

ಲಗೋರಿ ಸ್ಟ್ಯಾಂಡ್ ಬೀಳಿಸುವುದು: ಪ್ರಥಮ-ಗೌರಿ ಜೀರಂಕಳಿ, ದ್ವಿತೀಯ-ಜಯಶ್ರೀ ಡಾವಣಗೇರಿ, ತೃತೀಯ-ಸಂಗೀತಾ ಮಡಿವಾಳರ.

ಯೋಗಾಸನ: ಪ್ರಥಮ-ಚೈತ್ರಾ ಹದ್ದಣ್ಣವರ, ದ್ವಿತೀಯ-ಸಂಗೀತಾ ಮಡಿವಾಳರ, ತೃತೀಯ-ರಾಜೇಶ್ವರಿ.

ಯೋಗ ಆಶುಭಾಷ : ಪ್ರಥಮ-ಗೌರಿ ಜೀರಂಕಳಿ, ದ್ವಿತೀಯ-ಭಾರತಿ ಪಾಟೀಲ (ಪಲ್ಲೇದ), ತೃತೀಯ- ವಿಜಯಲಕ್ಷ್ಮೀ ಮೇಕಳಿ.

ಪುಟಾಣಿ-ಕಡ್ಲಿಬೇಳೆ ಬೇರ್ಪಡಿಸುವದು: ಪ್ರಥಮ-ಮಹಾದೇವಿ ಚರಂತಿಮಠ, ದ್ವಿತೀಯ-ಲಲಿತಾ ಕಡಗದ, ತೃತೀಯ-ಸಂಗೀತಾ ನಾಕೋಡ.

ಕ್ರೀಡಾಕೂಟದಲ್ಲಿ ಭಾಗವಹಿಸಿದ ಮತ್ತು ವಿಜೇತರಾದ ಸ್ಪರ್ಧಿಗಳೆಲ್ಲರಿಗೂ ಹಾಗೂ ಬಹುಮಾನ ದಾಸೋಹ ಸೇವೆ ಸಲ್ಲಿಸಿದ ಪಾರ್ವತಿ ಭೂಮಾ, ಶಾಂತಾ ಮುಂದಿನಮನಿ, ಗಿರಿಜಾ ನಾಲತ್ವಾಡಮಠ ಮತ್ತು ಮಾರ್ಗದರ್ಶನ ನೀಡಿದ ಬಸವ ಯೋಗ ಕೇಂದ್ರ ಪ್ರಾಚಾರ್ಯ ಕೆ.ಎಸ್. ಪಲ್ಲೇದ, ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಂ. ಬುರಡಿ ಇವರೆಲ್ಲರಿಗೂ ಕೇಂದ್ರದ ಅಧ್ಯಕ್ಷೆ ಜಯಶ್ರೀ ವಸ್ತದ ಹಾಗೂ ಪದಾಧಿಕಾರಿಗಳು ಅಭಿನಂದನೆ ತಿಳಿಸಿದ್ದಾರೆ.

ಜಂಜಾಟದ ಬದುಕಿಗೆ ಸಂಗೀತವೇ ಸಂಜೀವಿನಿ

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬದುಕಿನ ಜಂಜಾಟದಲ್ಲಿ ಸದಾ ಮುಳುಗಿರುವವರಿಗೆ ಸಂಗೀತ ಸಂತೋಷ-ಸಮಾಧಾನ ನೀಡುವ ಸಂಜೀವಿನಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಸಂಗೀತ ಸೌರಭ ಹಾಗೂ ಸಂಗೀತ ದಿಗ್ಗಜರಿಗೆ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಗದುಗಿನ ಪಂ.ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಹಾಗೂ ಧಾರವಾಡದ ಪಂ. ಡಾ. ಎಮ್.ವೆಂಕಟೇಶ ಕುಮಾರ್ ಇವರಿಗೆ ವಿಶೇಷ ಸತ್ಕಾರ ಹಾಗೂ ಗೌರವ ಗುರುರಕ್ಷೆ ನೀಡಿದ ತರುವಾಯ ಮಾತನಾಡಿದ ಶ್ರೀಗಳು, ಪ್ರತಿ ವರುಷದ ಜಯಂತಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಉಭಯ ಸಂಗೀತ ದಿಗ್ಗಜರು ಎರಡು ಗಂಟೆಗಳ ವಿಶೇಷ ಸಂಗೀತ ನಡೆಸಿಕೊಡುವುದಾದರೆ ಅದಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ನಂತರ ಪಂ. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರು ‘ಮಲತ್ರಯಗಳನು ತೊಲಗಿಸುವಂಥ ಜಾಣ್ಮೆಯುಳ್ಳವನೇ ವೀರಶೈವನು’ ಅಲ್ಲಮಪ್ರಭುಗಳ ವಚನವನ್ನು ಜೋಗ ರಾಗ ತೀನತಾಳದಲ್ಲಿ ಹಾಗೂ ತಮ್ಮ ಸ್ವರಚಿತ ಕವನ ‘ಅಂದಿಂದು ಕಂದದಾ ಮುಂದೆಂದೂ ನಂದದಾ ಪಂಚ ಪೀಠಾಧೀಶರ ಬೆಳಕು’ ಗೀತೆಯನ್ನು ಚಾಂದ ರಾಗದಲ್ಲಿ, ದಾದ್ರಾ ತಾಳದಲ್ಲಿ ಪ್ರಸ್ತುತಪಡಿಸಿ ಶ್ರೋತೃಗಳ ಮನಸ್ಸಿಗೆ ಮುದ ನೀಡಿದರು. ಗದಗಿನ ಶರಣಯ್ಯನವರು ತಬಲಾ, ಪಂ.ಬಸವರಾಜ ಹಿರೇಮಠ ಹರ‍್ಮೋನಿಯಂ ಸಾಥ್ ನೀಡಿದರು.
ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ಗದಗಿನ ಗಾನಭೂಷಣ ವೀರೇಶ ಕಿತ್ತೂರ ಪ್ರಾರ್ಥನೆ ಹಾಡಿದರು. ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಪಂ. ಡಾ. ಎಮ್.ವೆಂಕಟೇಶ ಕುಮಾರ್ ಅವರು ಬಸಂತ ರಾಗ, ದೃತ ತಾಳದಲ್ಲಿ ಪಶುಪತೇ ಗಿರಿಜಾಪತಿ, ಹಾನಗಲ್ ಕುಮಾರಸ್ವಾಮಿಗಳಿಂದ ವಿರಚಿತ ‘ಸುಶಾಂತ ಗುರುವರೇಣ್ಯ ರೇಣುಕಾರ್ಯಭೋ’ ಗೀತೆಯನ್ನು ಭೀಮಪಲಾಸ್ ರಾಗ, ಜಪ್ ತಾಳದಲ್ಲಿ, ನಂತರ ಗದಗಿನ ಕವಿ ಪುಟ್ಟರಾಜ ಗವಾಯಿಗಳಿಂದ ವಿರಚಿತ `ವೀರಶೈವದ ಜಗದ್ಗುರು ಪಂಚಾಚಾರ್ಯರ ನಮಿಸುವೆನು’ ಹಾಡನ್ನು ರಾಗೇಶ್ರೀ ರಾಗ, ಕೇರವ ತಾಳದಲ್ಲಿ ಅಮೋಘವಾಗಿ ಪ್ರಸ್ತುತಪಡಿಸಿ ಜನಮನ ಸೂರೆಗೊಂಡರು.

ಶ್ರೀ ರಂಭಾಪುರಿ ಜಗದ್ಗುರುಗಳ ಏಪ್ರಿಲ್ ಮಾಸದ ಪ್ರವಾಸದ ವಿವರ

0

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಏಪ್ರಿಲ್ ತಿಂಗಳ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿವೆ.

ಏ. 1ರಂದು ಬೈಲಹೊಂಗಲದ ವಣ್ಣೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಮಾರಂಭ, 2ರಂದು ತೀರ್ಥಹಳ್ಳಿಯ ಕವಲೇದುರ್ಗ ಮಠದಲ್ಲಿ ಇಷ್ಟಲಿಂಗ ಮಹಾಪೂಜಾ, 3ರಂದು ರಾಣೆಬೆನ್ನೂರಿನ ಲಿಂಗದಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜಾ, 4ರಂದು ಅಜ್ಜಂಪುರದ ಗೌರಾಪುರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 5ರಂದು ಹೊನ್ನಾಳಿಯ ಕುಳಗಟ್ಟಿಯಲ್ಲಿ ಇಷ್ಟಲಿಂಗ ಮಹಾಪೂಜಾ, 6ರಂದು ಕಡೂರಿನ ಹೊಗರೆಖಾನ್ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜಾ ಸಮಾರಂಭ, 7ರಂದು ಚಿಕ್ಕಮಗಳೂರಿನ ಮುತ್ತಿನಪುರದ ಶ್ರೀ ವೀರಭದ್ರೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸುವರು.

ಹುಬ್ಬಳ್ಳಿ ತಾಲೂಕ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ 8ರಂದು ಧರ್ಮ ಜಾಗೃತಿ ಸಮಾರಂಭ, 9ರಂದು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ಸಮಾರಂಭ, 10ರಂದು ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 11-12ರಂದು ಧಾರವಾಡದ ಅಮ್ಮಿನಭಾವಿಯಲ್ಲಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು.

13ರಂದು ಹುಬ್ಬಳ್ಳಿಯ ಹಳ್ಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ಹಾಗೂ ಧರ್ಮ ಸಮಾರಂಭ, 14ರಂದು ಹಾವೇರಿಯ ನೆಗಳೂರಿನಲ್ಲಿ ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಸಮಾರಂಭ, 15ರಂದು ಕಲಘಟಗಿಯ ಸಂಗೇದೇವರಕೊಪ್ಪದಲ್ಲಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ, 16ರಂದು ಕಲಘಟಗಿ ತಾಲೂಕ ಬೇಗೂರು ಗ್ರಾಮದಲ್ಲಿ ಗ್ರಾಮದೇವಿ ಪ್ರತಿಷ್ಠಾಪನಾ ಸಮಾರಂಭ, 17ರಂದು ಚಡಚಣ ತಾಲೂಕ ಏಳಗಿ ಪಿ.ಎಸ್. ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ಮಹಾದ್ವಾರ ಉದ್ಘಾಟನಾ ಸಮಾರಂಭ, 18ರಂದು ಅಫಜಲಪುರ ತಾಲೂಕ ಕರಜಗಿಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ, 19ರಂದು ಚಿತ್ತಾಪುರದ ಶ್ರೀ ಸಿದ್ಧೇಶ್ವರ ಜ್ಞಾನಧಾಮದಲ್ಲಿ ಧರ್ಮ ಸಮಾರಂಭ 23ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಪೌರ್ಣಿಮೆಯ ನಿಮಿತ್ಯ ವಾಸ್ತವ್ಯ ಮಾಡಿ ಭಕ್ತಾದಿಗಳಿಗೆ ದರ್ಶನ ಆಶೀರ್ವಾದ ನೀಡುವರು.

29ರಂದು ಕುಂದಗೋಳದ ಪಶುಪತಿಹಾಳದಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ತಿಳಿಸಿದ್ದಾರೆ.

ಅಧಿಕಾರಿಗಳು ರೈತರಿಗೆ ಭರವಸೆ ತುಂಬಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಿ, ಬರ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿದ್ದು, ಯಾವುದೇ ಗ್ರಾಮ, ಪಟ್ಟಣಗಳಿಗೆ ಕುಡಿಯುವ ನೀರಿನ ಕೊರತೆ ಅಥವಾ ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ ಮುಂದಿನ ದಿನಗಳಲ್ಲಿಯೂ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಅವರು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಬರ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಜೂನ್‌ವರೆಗೆ ಅಗತ್ಯವಿರುವಷ್ಟು ಮೇವು ದಾಸ್ತಾನು ಇದೆ. ರೈತರು ಸಹ ಮೇವು ಬಣವೆ ಹೊಂದಿದ್ದಾರೆ. ಆದರೂ ರೈತರಿಗೆ ಸರಕಾರದ ನೆರವು, ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂಬುದನ್ನು ಮನವರಿಕೆ ಮಾಡಲಾಗಿದೆ. ಕೃಷಿ ಭೂಮಿ ರಹಿತರು ಮತ್ತು ಹೈನುಗಾರಿಕೆ ಮಾಡುವವರಿಗೂ ಅನುಕೂಲವಾಗಲೆಂದು ಜಿಲ್ಲೆಯ ವಿವಿಧೆಡೆ ಬೇಡಿಕೆಗೆ ಅನುಗುಣವಾಗಿ ಆರು ಸ್ಥಳಗಳಲ್ಲಿ ಮೇವು ಬ್ಯಾಂಕುಗಳನ್ನು ತೆರೆಯಲಾಗಿದೆ. ರೈತರಿಗೆ ಈ ಕುರಿತು ಮಾಹಿತಿ ನೀಡಿದ್ದು, ರೈತರು ಅಗತ್ಯವಿದ್ದಾಗ ಮೇವು ಬ್ಯಾಂಕಿನಿಂದ ನಿಯಮಾನುಸಾರ ಮೇವು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಕೂಲಿ ನೀಡುವಾಗ `ಒಂದು ಗ್ರಾಮ ಒಂದು ಕೆರೆ ಯೋಜನೆ’ ಮಾಡಿಕೊಂಡು ಆಯಾ ಗ್ರಾಮದ ಎಲ್ಲಾ ನರೇಗಾ ಕೂಲಿ ಕಾರ್ಮಿಕರಿಂದ ಅವರದ್ದೇ ಊರಿನ ಒಂದು ಕೆರೆಯನ್ನು ಸಮಗ್ರ ಅಭಿವೃದ್ಧಿ ಮಾಡಿ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿ.ಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಸೇರಿದಂತೆ ಎಲ್ಲಾ ತಾಲೂಕುಗಳ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಲೋಕಸಭಾ ಚುನಾವಣೆ: ಧಾರವಾಡ ಜಿಲ್ಲೆಯಲ್ಲಿ 90,49,574 ರೂ. ಮೌಲ್ಯದ ಸ್ವತ್ತು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಧಾರವಾಡ : ಲೋಕಸಭೆ ಚುನಾವಣೆ ಪಾರದರ್ಶಕವಾಗಿ ಮತ್ತು ಮುಕ್ತ, ನ್ಯಾಯಸಮ್ಮತವಾಗಿ ಚುನಾವಣಾ ಆಯೋಗದ ನಿಯಮಾನುಸಾರ ಜರುಗಿಸಲು ಧಾರವಾಡ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ವಿವಿಧ ಚೇಕ್‌ಪೋಸ್ಟ್ ತಪಾಸಣೆಯಲ್ಲಿ ಮಾರ್ಚ್ 16ರಿಂದ ಮಾ.28ರವರೆಗೆ ನಗದು ಹಣ, ವಸ್ತುಗಳು ಸೇರಿದಂತೆ ಒಟ್ಟು 90,49,574 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 47 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ ಮಾರ್ಚ್ 16ರಂದು ಜಿಲ್ಲೆಯ ಗಡಿ ಭಾಗ ಮತ್ತು ಜಿಲ್ಲೆಯ ಅಂತರ ವಿಧಾನಸಭಾ ಮತಕ್ಷೇತ್ರಗಳ ಮುಖ್ಯ ಸ್ಥಳಗಳು ಸೇರಿದಂತೆ ಒಟ್ಟು 24 ಚೆಕ್‌ಪೋಸ್ಟ್ಗಳನ್ನು ತೆರೆಯಲಾಗಿದೆ. ಪ್ರತಿ ಚೆಕ್‌ಪೋಸ್ಟ್ನಲ್ಲಿ ನಿತ್ಯ ಸಂಚರಿಸುವ ಪ್ರತಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಪಾಸಣೆಯಲ್ಲಿ, ಸರಿಯಾದ ದಾಖಲೆಗಳಿಲ್ಲದೇ ಮತ್ತು ಚುನಾವಣಾ ಅಕ್ರಮಗಳಿಗೆ ಬಳಸಬಹುದಾದ ಸಂಶಯದ ಆಧಾರದಲ್ಲಿ ಪತ್ತೆಯಾದ 11,02,470 ರೂ ನಗದು ಹಣ, ರೂ. 3,31,084 ಮೊತ್ತದ 788.190 ಲೀಟರ್ ಮದ್ಯ, ರೂ.8,09,230 ಮೊತ್ತದ ಡ್ರಗ್ಸ್, ರೂ. 38,50,000 ಮೊತ್ತದ ಬಂಗಾರದ ಆಭರಣ ಮತ್ತು ರೂ. 29,56,790 ಮೌಲ್ಯದ ಮಿಕ್ಸರ್, ಸೀರೆ, ಪ್ಯಾಂಟ್ ಪೀಸ್ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ವಶಪಡಿಸಿಕೊಂಡು ನಿಯಮಾನುಸಾರ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಎಫ್.ಎಸ್.ಟಿ ಇಂದ 1 ಪ್ರಕರಣ, ಎಸ್.ಎಸ್.ಟಿ. ಇಂದ 5 ಪ್ರಕರಣ ಹಾಗೂ ಅಬಕಾರಿ ಕಾನೂನು ಉಲ್ಲಂಘನೆಯಡಿ 41 ಪ್ರಕರಣಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮಸ್ಥರಿಂದ ತಹಸೀಲ್ದಾರರಿಗೆ ಮನವಿ

ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳ ಬೃಹತ್ ವಾಹನಗಳ ಓಡಾಟದಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಕೂಡಲೇ ವಾಹನ ಸಂಚಾರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ತಹಸೀಲ್ದಾರ ಕೆ.ನಾಗರಾಜರವರಿಗೆ ಮನವಿ ಸಲ್ಲಿಸಿದರು.

ರೋಣ ಮಂಡಲ ಬಿಜೆಪಿ ಘಟಕದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಈ ಹಿಂದೆ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಿಸಲಾಗಿದೆ. ವಿಪರ್ಯಾಸವೆಂದರೆ, ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳ ಬೃಹತ್ ಗಾತ್ರದ ವಾಹನಗಳ ಓಡಾಟದಿಂದ ರಸ್ತೆಗಳು ಕಿತ್ತು ಹೋಗಿದ್ದು, ಸಂಚಾರ ಸಾಧ್ಯವಾಗದ ಸ್ಥಿತಿ ಉದ್ಭವಿಸಿದೆ. ಈ ಕೂಡಲೇ ವಾಹನ ಸಂಚಾರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಎ.ಎ. ಹೊಸಮನಿ ಮಾತನಾಡಿ, ಗ್ರಾಮದ ರಸ್ತೆಗಳು ಹಾಳಾಗುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಸಹ ಗಮನ ಹರಿಸುತ್ತಿಲ್ಲ. ಸುಮಾರು 60 ರಿಂದ 70 ಚಕ್ರಗಳನ್ನು ಹೊಂದಿರುವ ವಾಹನಗಳು ಸಂಚಾರ ಮಾಡುತ್ತಿವೆ. ಜೊತೆಗೆ ಧೂಳು ಏಳುತ್ತಿದ್ದು, ಅಸಹನೀಯವಾಗಿದೆ. ಇದರಿಂದ ಗ್ರಾಮಸ್ಥರು ಭಯ ಬಿಳುವಂತಾಗಿದ್ದು, ಕೂಡಲೇ ಕಂಪನಿಗಳ ವಾಹನಗಳನ್ನು ಗ್ರಾಮ ಪ್ರವೇಶಿಸದಂತೆ ತಡೆ ಹಿಡಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದರು.

ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗುವುದು ಎಂದು ತಹಸೀಲ್ದಾರ ಕೆ.ನಾಗರಾಜ ತಿಳಿಸಿದರು. ಆದಂಸಾಬ ಬಾಲೆಸಾಬನವರ, ಶೇಖಪ್ಪ ಮಾರನಬಸರಿ, ಶಿವಪ್ಪ ಕೆಳಗಡೆ, ಅಂದಪ್ಪ ಹಾಳಕೇರಿ ಸೇರಿದಂತೆ ಅನೇಕರಿದ್ದರು.

ದೇವರಾಜ್ ನಿಲ್ದಾಣವನ್ನು ಸ್ವಚ್ಛವಾಗಿಡಲು ಸಹಕರಿಸಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜಿಲ್ಲೆಯ ದೊಡ್ಡ ಬಸ್ ನಿಲ್ದಾಣವಾಗಿರುವ ನರೇಗಲ್ಲ ಬಸ್‌ನಿಲ್ದಾಣವು ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವುದನ್ನು ಮಾಧ್ಯಮದ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದಾರೆ. ಅವುಗಳಿಗೆ ಶೀಘ್ರವೇ ಕಾಯಕಲ್ಪ ನೀಡಲಾಗುವುದು ಎಂದು ಗದಗ ಜಿಲ್ಲಾ ಕರ್ನಾಟಕ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಕ ದೇವರಾಜ್ ಹೇಳಿದರು.

ಗುರುವಾರ ಬೆಳಿಗ್ಗೆ ನರೇಗಲ್ಲ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಅವರು, ಕಸವನ್ನು ಅಲ್ಲಲ್ಲೇ ಗುಂಪುಗೂಡಿಸಿ ಬೆಂಕಿ ಹಚ್ಚಿದ್ದನ್ನು ಕಂಡು ಕೆಂಡಾಮಂಡಲವಾದರು. ಇದರಿಂದ ಪ್ರಯಾಣಿಕರ ಆರೋಗ್ಯಕ್ಕೆ ಮಾರಕವಾಗುವುದೆಂದು ಸಾರಿಗೆ ನಿಯಂತ್ರಕರನ್ನು ಎಚ್ಚರಿಸಿದ ಅವರು, ಇನ್ನೆಂದಿಗೂ ಈ ರೀತಿ ಮಾಡಬೇಡಿ ಎಂದು ಹೇಳಿದರು.

ಶೌಚಾಲಯದ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ ಡಿಸಿ, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಶೌಚಾಲಯ ಸಿಬ್ಬಂದಿಗೆ ತಿಳಿಸಿ ಅದನ್ನು ಸರಿಪಡಿಸಲು ಹೇಳಿದರಲ್ಲದೆ, ಇಂಜಿನಿಯರ್ ಮಧು ಅವರಿಗೆ ಈ ಎಲ್ಲ ಕೆಲಸಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಆದೇಶಿಸಿದರು.

ಮುಖಂಡ ನಿಂಗಪ್ಪ ಲಕ್ಕನಗೌಡ್ರ ಮಾತನಾಡಿ, ಈಗ ಕೆಲವು ದಿನಗಳಿಂದ ಗಜೇಂದ್ರಗಡ-ಗದಗ ತಡೆ ರಹಿತ ಬಸ್‌ನ್ನು ಓಡಿಸುತ್ತಿದ್ದಿರಿ. ಮಧ್ಯದಲ್ಲಿ ನರೇಗಲ್ಲ ಒಂದು ದೊಡ್ಡ ಊರಾಗಿದೆ. ಇಲ್ಲಿಗೆ ಒಂದು ನಿಲುಗಡೆ ನೀಡಿ ಬಸ್ ಓಡಿಸಿ ಎಂದು ಸಲಹೆ ನೀಡಿದರು. ಈ ಕುರಿತು ಗಜೇಂದ್ರಗಡ ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ದೇವರಾಜ ಹೇಳಿದರು.

ಈ ಸಂದರ್ಭದಲ್ಲಿ ನರೇಗಲ್ಲ ಆಟೋ ಚಾಲಕರ ಸಂಘದ ಸದಸ್ಯರು ಅಧ್ಯಕ್ಷ ವಿಷ್ಣು ಜಕ್ಕಲಿಯವರ ನೇತೃತ್ವದಲ್ಲಿ ಬಸ್ ನಿಲ್ದಾಣದೊಳಗೆ ಒಂದು ಭಾಗದಲ್ಲಿ ನಮ್ಮ ಆಟೋಗಳನ್ನು ನಿಲ್ಲಿಸಲು ಆಟೋ ನಿಲ್ದಾಣದ ಅನುಕೂಲ ಮಾಡಿಕೊಡಬೇಕೆಂದು ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಜಾಖೀರ ಬುಡ್ಡಾ ಗದಗ, ಹುಚ್ಚಪ್ಪ ಬೆಟಗೇರಿ, ಅಬ್ದುಲ್ ರೆಹೆಮಾನ್ ಲಕ್ಕುಂಡಿ, ಮಹಮ್ಮದ್ ನಶೇಖಾನ್, ಮಂಜುನಾಥ ರಾಠೋಡ, ಪ್ರಕಾಶ ಸಂಕನೂರ, ಹುಸೇನ್ ಅತ್ತಾರ, ರಾಮು ಮಣ್ಣೊಡ್ಡರ ಇನ್ನೂ ಮುಂತಾದವರಿದ್ದರು.
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೈಕಲ್, ಮೋಟರ್ ಸೈಕಲ್ ಮತ್ತು ಕಾರ್ ಸ್ಟ್ಯಾಂಡ್ ಗಳಿಗೆ ಟೆಂಡರ್ ಕೆರಯಲು ಅವಕಾಶವಿಲ್ಲ. ನೀತಿ ಸಂಹಿತೆ ತೆರವಾದ ತಕ್ಷಣ ಇವುಗಳಿಗೆ ಟೆಂಡರ್ ಕರೆಯಲಾಗುವುದೆಂದು ಡಿಸಿ ದೇವರಾಜ್ ಉತ್ತರಿಸಿದರು.

ಪ್ರಯಾಣಿಕರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಪ.ಪಂ ಮುಖ್ಯಾಧಿಕಾರಿ ಭೂಷಣ್ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಪ್ರಯಾಣಿಕರಿಗೆ ಎಲ್ಲ ಅನುಕೂಲತೆಯನ್ನು ಒದಗಿಸುವುದು ನಮ್ಮ ಇಲಾಖೆಯ ಮೊದಲ ಆದ್ಯತೆಯಾಗಿದೆ. ಅನುಕೂಲತೆ ಬಯಸುವ ಪ್ರಯಾಣಿಕರೂ ಸಹ ಬಸ್‌ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಇಲಾಖೆಯವರೊಂದಿಗೆ ಸಹಕರಿಸಬೇಕು. ನಳಗಳನ್ನು ಹಾಳುಗೆಡವಬಾರದು. ಎಲ್ಲೆಂದರಲ್ಲಿ ಕಸ ಬೀಸಾಡುವುದನ್ನು ಬಿಟ್ಟು, ನಿಗದಿತ ಜಾಗೆಯಲ್ಲಿ ಕಸ ಹಾಕಿ ನಿಮ್ಮೂರಿನ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸಿ. ಸಾರಿಗೆ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ, ಪ್ರಯಾಣಿಕರು ಸಿಬ್ಬಂದಿಗಳೊಂದಿಗೆ ಪರಸ್ಪರ ಸೌಜನ್ಯ ಮತ್ತು ಗೌರವದಿಂದ ವರ್ತಿಸಿದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ
– ದೇವರಾಜ್.
ವಿಭಾಗೀಯ ಸಾರಿಗೆ ನಿಯಂತ್ರಕ.

ನರೇಗಾದಿಂದ ಬದುಕು ಸದೃಢ

0

ವಿಜಯಸಾಕ್ಷಿ ಸುದ್ದಿ, ರೋಣ : ನರೇಗಾ ಯೋಜನೆಯು ಬೇಸಿಗೆಯ ದಿನಗಳಲ್ಲಿ ಬಡವರಿಗೆ ಅಸರೆಯಾಗುವುದರ ಜೊತೆಗೆ ಬದುಕನ್ನು ಕಟ್ಟಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ನೀವೆಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಬಡವರು ಕೂಲಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸದೃಢಪಡಿಸಕೊಳ್ಳಬಹುದು ಎಂದು ಸಹಾಯಕ ನಿರ್ದೇಶಕ (ಪಂ.ರಾ) ಶಿವಯೋಗಿ ರಿತ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಯಕ ಬಂಧುಗಳು ಕರ್ತವ್ಯ ಹಾಗೂ ಹಕ್ಕುಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಪ್ರತಿಯೊಂದು ಕೂಲಿಕಾರರ ಗುಂಪಿನಲ್ಲಿ ನಿಮ್ಮನ್ನು ಕಾಯಕ ಬಂಧು ಎಂದೇ ಗುರುತಿಸಲಾಗುತ್ತದೆ. ಕಾಯಕ ಬಂಧುಗಳು ಕೆಲಸದ ಬೇಡಿಕೆಯನ್ನು ನಮೂನೆ-೬ರ ಮೂಲಕ ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು. 15 ದಿನಗಳೊಳಗೆ ಕೆಲಸ ದೊರಕುವಂತೆ ಮಾಡಬೇಕು ಮತ್ತು ಕೆಲಸದ ಸ್ಥಳದಲ್ಲಿ ಮಾರ್ಕಿಂಗ್ ಮಾಡಿ ಕೂಲಿಕಾರರಿಗೆ ಮಾಹಿತಿ ನೀಡಬೇಕು.

ಏಪ್ರಿಲ್ 1ರಿಂದ ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ನರೇಗಾ ಕೆಲಸ ಆರಂಭವಾಗಲಿದ್ದು, ಜಕ್ಕಲಿ ಗ್ರಾಮ ಪಂಚಾಯಿತಿಯಲ್ಲಿಯೂ ಕೆಲಸ ಆರಂಭವಾಗುತ್ತದೆ. ಹಾಗಾಗಿ ತಾವೆಲ್ಲರೂ ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸ ಮಾಡಬೇಕು ಎಂದರು.

ನರೇಗಾ ಕೂಲಿಕಾರರಿಗೆ ಕೂಲಿ ಪರಿಷ್ಕರಣೆಯಾಗಿದ್ದು, ದಿನವೊಂದಕ್ಕೆ ಕೂಲಿ ಮೊತ್ತವನ್ನು 349 ರೂಪಾಯಿಗೆ ಹೆಚ್ಚಿಸಲಾಗಿದೆ. ಆದ್ದರಿಂದ ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಹಣವನ್ನು ಮುಂಗಾರಿನ ಕೃಷಿ ಬಿತ್ತನೆಯ ಕಾರ್ಯಕ್ಕೆ ಬಳಸಿಕೊಳ್ಳಲು ನೆರವಾಗುವುದು ಎಂದು ತಿಳಿಸಿದರು. ಜಕ್ಕಲಿ ಗ್ರಾಮ ಪಂಚಾಯಿತಿ BFT, GKM ಕಾಯಕ ಬಂಧುಗಳು, ನರೇಗಾ ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಮುಂತಾದ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು. ಕಾಯಕ ಬಂಧುಗಳು ಅರೆಕುಶಲ ಕಾರ್ಮಿಕರೆಂದು ನರೇಗಾ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕೂಲಿಕಾರರ ಜಾಬ್ ಕಾರ್ಡ್ಗಳಲ್ಲಿ ವಿವರ ನಮೂದಿಸಬೇಕೆಂದು ಶಿವಯೋಗಿ ರಿತ್ತಿ ಹೇಳಿದರು.

ನಾಲ್ವಾಡ ಓಣಿಯಲ್ಲಿ ಕಾಮರತಿ ಉತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ನಾಲ್ವಾಡದವರ ಓಣಿಯಲ್ಲಿ 99ನೇ ವರ್ಷದ ಕಾಮರತಿ ಉತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಮಂಗಳವಾರ ಉತ್ಸವ ಸಮಿತಿಯು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಸುಮಾರು 800ಕ್ಕೂ ಹೆಚ್ಚಿನ ಮಹಿಳೆಯರು ಕಾಮರತಿಯ ದರ್ಶನ ಪಡೆದುಕೊಂಡು ತಮ್ಮ ಇಷ್ಟಾರ್ಥ ಸಂಕಲ್ಪಗಳನ್ನು ಮಾಡಿಕೊಂಡರು. ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಾಲ್ವಾಡ ಓಣಿಯ ಗುರು ಹಿರಿಯರು, ಯುವಕರು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಮುಂದಿನ ವರ್ಷ 100ನೇ ವರ್ಷದ ಕಾಮರತಿ ಉತ್ಸವವನ್ನು ಸಂಭ್ರಮ ಸಡಗರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲು ನಿರ್ಧರಿಸಿದರು.

ರಂಗಭೂಮಿ ಕಲಾವಿದರು ಆರ್ಥಿಕವಾಗಿ ಸಬಲರಾಗಲಿ

0

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ಗದಗ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಮತ್ತು ಮಹಾವಿದ್ಯಾಲಯದ ವುಮೆನ್ಸ್ ಸೆಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ `ವಿಶ್ವ ರಂಗಭೂಮಿ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿತ್ತು.

ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಕಲಾವಿದೆ ಗಾಯತ್ರಿ ಹಿರೇಮಠ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾವಿದರ ಬದುಕು, ಬವಣೆ, ರಂಗಭೂಮಿಯಲ್ಲಿ ಆಗುತ್ತಿರುವ ಆಧುನಿಕ ಬದಲಾವಣೆಗಳು, ಕನ್ನಡ ರಂಗಭೂಮಿಯ ಹೊಸ ಪ್ರಯತ್ನಗಳು, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ಸಂಕ್ಷೀಪ್ತ ಹಿನ್ನೆಲೆಗಳನ್ನು ಮೆಲುಕುಹಾಕಿ, ಬದಲಾದ ಕಾಲಘಟ್ಟದಲ್ಲಿ ರಂಗಭೂಮಿ ಕಲಾವಿದರು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಸುನಂದಾ ಹಿರೇಮಠ ಮಾತನಾಡಿ, ಗಂಡು ಕಲೆಯಾದ ನಾಟಕರಂಗದಲ್ಲಿ ಹೆಣ್ಣೊಬ್ಬಳು ಸಾಧನೆ ಮಾಡುವುದು ಸುಲಭದ ಕೆಲಸವಲ್ಲ. ಹೆಣ್ಣುಮಕ್ಕಳ ಪಾತ್ರವನ್ನು ಗಂಡು ಮಕ್ಕಳೇ ನಿರ್ವಹಿಸುತ್ತಿದ್ದ ಒಂದು ಕಾಲವಿತ್ತು. ಆದರೆ ಇವತ್ತಿಗೂ ಕೂಡ ತಮ್ಮ ತಾಯಿಯವರಾದ ಗಾಯತ್ರಿ ಹಿರೇಮಠ ಅವರು ಹೆಣ್ಣಾಗಿಯೂ ಕೂಡ ಗಂಡು ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗದಗ ತಾಲೂಕಾ ಕ.ಸಾ.ಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ, ರಂಗಭೂಮಿ ನಡೆದು ಬಂದ ದಾರಿಯನ್ನು ಮತ್ತು ಕನ್ನಡದಲ್ಲಿ ವಿಶೇಷವಾಗಿ ಮಹಿಳೆಯರು ಮಾಡಿರುವ ಸಾಧನೆಯನ್ನು ನೆನಪಿಸಿಕೊಂಡರು.

ಕಸಾಪ ಸಹಕಾರ್ಯದರ್ಶಿ ವಿಶ್ವನಾಥ ಬೇಂದ್ರೆ ಮಾತನಾಡಿ, ಮನುಷ್ಯನಿಗೆ ಕಲೆಗಳ ಅಗತ್ಯತೆಯ ಕುರಿತು ತಿಳಿಸುತ್ತ, ಓದು-ಬರಹದ ಜೊತೆಗೆ ಮನಸ್ಸನ್ನು ಸ್ಥಿರಗೊಳಿಸಲು, ಚಂಚಲತೆಯನ್ನು ಹೋಗಲಾಡಿಸಲು ಕಲೆಯ ಅಗತ್ಯ ಇಂದಿನ ವಿದ್ಯಾರ್ಥಿಗಳಿಗೆ ಇದೆ ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿ ಶಿವಮೂರ್ತಯ್ಯ ರೇಷ್ಮಿ ಕನ್ನಡ ರಂಗಭೂಮಿ ಕುರಿತು ಮಾತನಾಡುತ್ತ, ಗೊಂಬೆಯಾಟ, ತೊಗಲು ಗೊಂಬೆಯಾಟ, ಬಯಲಾಟ, ಯಕ್ಷಗಾನ, ದೊಡ್ಡಾಟ, ಕನ್ನಡ ಜನಪದದ ಮೂಲ ರೂಪಗಳೇ ಆಗಿವೆ. ಜನಪದ ರಂಗಭೂಮಿಯ ಮೂಲ ಅಂಶಗಳು ದೈವಾರಾಧನೆಯಲ್ಲಿಯೇ ಕಂಡುಬರುತ್ತದೆ. ವೈದ್ಯರ ಕುಣಿತ, ನಾಗನೃತ್ಯಗಳು ಕರಾವಳಿಯ ಹಳ್ಳಿಗಳಲ್ಲಿ ಕಾಣಸಿಗುತ್ತವೆ ಎಂದರು.

ಫಕ್ರುದ್ದೀನ, ಶಶಿಧರ ಮಾಳೋಜಿ, ಓಂಕಾರ ತೋರಟ್, ಬಸಪ್ಪ, ಪೂರ್ಣಿಮಾ, ಪ್ರತಿಭಾ ಪವಾರ, ವಿಜಯಲಕ್ಷ್ಮಿ ಬಿ., ಅದಿತಿ ನಾಡಿಗೇರ್, ಪ್ರಜ್ವಲ್ ಜಡಿಮಠ, ಶೇಷಾದ್ರಿ ಕುಲಕರ್ಣಿ ಸಹಕಾರ ನೀಡಿದರು. ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳು, ಕಸಾಪ ಪದಾಧಿಕಾರಿಗಳು, ಸದಸ್ಯರು, ಡಾ. ಶೈಲಜಾ ಮುದೇನಗುಡಿ, ಡಾ. ಅಶ್ವಿನಿ ಅರಳಿ, ಪ್ರೊ. ಮುಕ್ತಾ ಪಾಟೀಲ, ಪ್ರೊ. ನೀತಾ, ಪ್ರೊ. ರೇಖಾ, ತನುಶ್ರೀ, ಪ್ರೊ. ಸುಜಾತ ಬೆಟಗೇರಿ ಹಾಜರಿದ್ದರು.

ತೇಜಸ್ವಿನಿ ಮಡಿವಾಳರ ಪ್ರಾರ್ಥಿಸಿದರು. ಮಂಜುನಾಥ ಸಿಂಗಣ್ಣವರ ಸ್ವಾಗತಿಸಿದರು. ಮಾನ್ಯ ಶೆಟ್ಟಿ, ಆಕಾಂಕ್ಷ ಕಲ್ಯಾಣಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜ್ಯೋತಿ ಎಸ್, ಶೃತಿ ನಿರೂಪಿಸಿದರು. ಭೂಮಿಕ ಹಿರೇಮಠ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ. ಈರಣ್ಣ ಕೊರಚಗಾಂವ್ ಮಾತನಾಡಿ, ರಂಗಭೂಮಿಯ ಕುರಿತು ಮಹಾವಿದ್ಯಾಲಯದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆಯಾಗಿರಲಿಲ್ಲ. ಈ ಬೆಳವಣಿಗೆ ನಿಜಕ್ಕೂ ಸ್ವಾಗತಾರ್ಹ. ಜಿಲ್ಲಾ ಕಸಾಪ ಮತ್ತು ಗದಗ ತಾಲೂಕಾ ಕಸಾಪ ಈ ಭಾಗದಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಶನಿವಾರ ಸಂಜೆ ಕಾರ್ಯಕ್ರಮಗಳು ನಡೆಯುತ್ತವೆ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಪಾಲ್ಗೊಳ್ಳಬೇಕೆಂದು ಹೇಳಿದರು.

 

error: Content is protected !!