Home Blog

ನಾಲ್ವಾಡ ಓಣಿಯಲ್ಲಿ ಕಾಮರತಿ ಉತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ನಾಲ್ವಾಡದವರ ಓಣಿಯಲ್ಲಿ 99ನೇ ವರ್ಷದ ಕಾಮರತಿ ಉತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಮಂಗಳವಾರ ಉತ್ಸವ ಸಮಿತಿಯು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಸುಮಾರು 800ಕ್ಕೂ ಹೆಚ್ಚಿನ ಮಹಿಳೆಯರು ಕಾಮರತಿಯ ದರ್ಶನ ಪಡೆದುಕೊಂಡು ತಮ್ಮ ಇಷ್ಟಾರ್ಥ ಸಂಕಲ್ಪಗಳನ್ನು ಮಾಡಿಕೊಂಡರು. ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಾಲ್ವಾಡ ಓಣಿಯ ಗುರು ಹಿರಿಯರು, ಯುವಕರು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಮುಂದಿನ ವರ್ಷ 100ನೇ ವರ್ಷದ ಕಾಮರತಿ ಉತ್ಸವವನ್ನು ಸಂಭ್ರಮ ಸಡಗರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲು ನಿರ್ಧರಿಸಿದರು.

ರಂಗಭೂಮಿ ಕಲಾವಿದರು ಆರ್ಥಿಕವಾಗಿ ಸಬಲರಾಗಲಿ

0

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ಗದಗ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಮತ್ತು ಮಹಾವಿದ್ಯಾಲಯದ ವುಮೆನ್ಸ್ ಸೆಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ `ವಿಶ್ವ ರಂಗಭೂಮಿ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿತ್ತು.

ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಕಲಾವಿದೆ ಗಾಯತ್ರಿ ಹಿರೇಮಠ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾವಿದರ ಬದುಕು, ಬವಣೆ, ರಂಗಭೂಮಿಯಲ್ಲಿ ಆಗುತ್ತಿರುವ ಆಧುನಿಕ ಬದಲಾವಣೆಗಳು, ಕನ್ನಡ ರಂಗಭೂಮಿಯ ಹೊಸ ಪ್ರಯತ್ನಗಳು, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ಸಂಕ್ಷೀಪ್ತ ಹಿನ್ನೆಲೆಗಳನ್ನು ಮೆಲುಕುಹಾಕಿ, ಬದಲಾದ ಕಾಲಘಟ್ಟದಲ್ಲಿ ರಂಗಭೂಮಿ ಕಲಾವಿದರು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಸುನಂದಾ ಹಿರೇಮಠ ಮಾತನಾಡಿ, ಗಂಡು ಕಲೆಯಾದ ನಾಟಕರಂಗದಲ್ಲಿ ಹೆಣ್ಣೊಬ್ಬಳು ಸಾಧನೆ ಮಾಡುವುದು ಸುಲಭದ ಕೆಲಸವಲ್ಲ. ಹೆಣ್ಣುಮಕ್ಕಳ ಪಾತ್ರವನ್ನು ಗಂಡು ಮಕ್ಕಳೇ ನಿರ್ವಹಿಸುತ್ತಿದ್ದ ಒಂದು ಕಾಲವಿತ್ತು. ಆದರೆ ಇವತ್ತಿಗೂ ಕೂಡ ತಮ್ಮ ತಾಯಿಯವರಾದ ಗಾಯತ್ರಿ ಹಿರೇಮಠ ಅವರು ಹೆಣ್ಣಾಗಿಯೂ ಕೂಡ ಗಂಡು ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗದಗ ತಾಲೂಕಾ ಕ.ಸಾ.ಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ, ರಂಗಭೂಮಿ ನಡೆದು ಬಂದ ದಾರಿಯನ್ನು ಮತ್ತು ಕನ್ನಡದಲ್ಲಿ ವಿಶೇಷವಾಗಿ ಮಹಿಳೆಯರು ಮಾಡಿರುವ ಸಾಧನೆಯನ್ನು ನೆನಪಿಸಿಕೊಂಡರು.

ಕಸಾಪ ಸಹಕಾರ್ಯದರ್ಶಿ ವಿಶ್ವನಾಥ ಬೇಂದ್ರೆ ಮಾತನಾಡಿ, ಮನುಷ್ಯನಿಗೆ ಕಲೆಗಳ ಅಗತ್ಯತೆಯ ಕುರಿತು ತಿಳಿಸುತ್ತ, ಓದು-ಬರಹದ ಜೊತೆಗೆ ಮನಸ್ಸನ್ನು ಸ್ಥಿರಗೊಳಿಸಲು, ಚಂಚಲತೆಯನ್ನು ಹೋಗಲಾಡಿಸಲು ಕಲೆಯ ಅಗತ್ಯ ಇಂದಿನ ವಿದ್ಯಾರ್ಥಿಗಳಿಗೆ ಇದೆ ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿ ಶಿವಮೂರ್ತಯ್ಯ ರೇಷ್ಮಿ ಕನ್ನಡ ರಂಗಭೂಮಿ ಕುರಿತು ಮಾತನಾಡುತ್ತ, ಗೊಂಬೆಯಾಟ, ತೊಗಲು ಗೊಂಬೆಯಾಟ, ಬಯಲಾಟ, ಯಕ್ಷಗಾನ, ದೊಡ್ಡಾಟ, ಕನ್ನಡ ಜನಪದದ ಮೂಲ ರೂಪಗಳೇ ಆಗಿವೆ. ಜನಪದ ರಂಗಭೂಮಿಯ ಮೂಲ ಅಂಶಗಳು ದೈವಾರಾಧನೆಯಲ್ಲಿಯೇ ಕಂಡುಬರುತ್ತದೆ. ವೈದ್ಯರ ಕುಣಿತ, ನಾಗನೃತ್ಯಗಳು ಕರಾವಳಿಯ ಹಳ್ಳಿಗಳಲ್ಲಿ ಕಾಣಸಿಗುತ್ತವೆ ಎಂದರು.

ಫಕ್ರುದ್ದೀನ, ಶಶಿಧರ ಮಾಳೋಜಿ, ಓಂಕಾರ ತೋರಟ್, ಬಸಪ್ಪ, ಪೂರ್ಣಿಮಾ, ಪ್ರತಿಭಾ ಪವಾರ, ವಿಜಯಲಕ್ಷ್ಮಿ ಬಿ., ಅದಿತಿ ನಾಡಿಗೇರ್, ಪ್ರಜ್ವಲ್ ಜಡಿಮಠ, ಶೇಷಾದ್ರಿ ಕುಲಕರ್ಣಿ ಸಹಕಾರ ನೀಡಿದರು. ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳು, ಕಸಾಪ ಪದಾಧಿಕಾರಿಗಳು, ಸದಸ್ಯರು, ಡಾ. ಶೈಲಜಾ ಮುದೇನಗುಡಿ, ಡಾ. ಅಶ್ವಿನಿ ಅರಳಿ, ಪ್ರೊ. ಮುಕ್ತಾ ಪಾಟೀಲ, ಪ್ರೊ. ನೀತಾ, ಪ್ರೊ. ರೇಖಾ, ತನುಶ್ರೀ, ಪ್ರೊ. ಸುಜಾತ ಬೆಟಗೇರಿ ಹಾಜರಿದ್ದರು.

ತೇಜಸ್ವಿನಿ ಮಡಿವಾಳರ ಪ್ರಾರ್ಥಿಸಿದರು. ಮಂಜುನಾಥ ಸಿಂಗಣ್ಣವರ ಸ್ವಾಗತಿಸಿದರು. ಮಾನ್ಯ ಶೆಟ್ಟಿ, ಆಕಾಂಕ್ಷ ಕಲ್ಯಾಣಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜ್ಯೋತಿ ಎಸ್, ಶೃತಿ ನಿರೂಪಿಸಿದರು. ಭೂಮಿಕ ಹಿರೇಮಠ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ. ಈರಣ್ಣ ಕೊರಚಗಾಂವ್ ಮಾತನಾಡಿ, ರಂಗಭೂಮಿಯ ಕುರಿತು ಮಹಾವಿದ್ಯಾಲಯದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆಯಾಗಿರಲಿಲ್ಲ. ಈ ಬೆಳವಣಿಗೆ ನಿಜಕ್ಕೂ ಸ್ವಾಗತಾರ್ಹ. ಜಿಲ್ಲಾ ಕಸಾಪ ಮತ್ತು ಗದಗ ತಾಲೂಕಾ ಕಸಾಪ ಈ ಭಾಗದಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಶನಿವಾರ ಸಂಜೆ ಕಾರ್ಯಕ್ರಮಗಳು ನಡೆಯುತ್ತವೆ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಪಾಲ್ಗೊಳ್ಳಬೇಕೆಂದು ಹೇಳಿದರು.

 

ಯೋಜನೆಯ ಲಾಭ ಬಡವರಿಗೆ ದೊರಕಲಿ

0

ವಿಜಯಸಾಕ್ಷಿ ಸುದ್ದಿ, ರೋಣ : ನರೇಗಾ ಯೋಜನೆಯಡಿ ಈ ಬಾರಿ ಸಮುದಾಯ ಕಾಮಗಾರಿಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದು, ಗ್ರಾಮೀಣ ಪ್ರದೇಶಗಳ ಬಡ ಜನರಿಗೆ ನರೇಗಾ ಯೋಜನೆಯ ಲಾಭ ದೊರಕುವ ಹಾಗೆ ಮಾಡುವುದು ನಮ್ಮ ಕರ್ತವ್ಯ. ಅದಕ್ಕೆ ನಿಮ್ಮೆಲ್ಲರ ಸಹಕಾರ ಕೂಡ ಬಹಳ ಮುಖ್ಯ ಎಂದು ಅಸೂಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಗಿರಿತಿಮ್ಮಣ್ಣವರ ಹೇಳಿದರು.

ಅಸೂಟಿ ಗ್ರಾ.ಪಂನಲ್ಲಿ ನಡೆದ ಕಾಯಕ ಬಂಧುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಏಪ್ರೀಲ್ 1ರಿಂದ ಅಸೂಟಿ ಗ್ರಾ.ಪಂನಲ್ಲಿ ನರೇಗಾ ಸಾಮೂಹಿಕ ಕಾಮಗಾರಿ ಆರಂಭವಾಗಲಿದ್ದು, ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸವನ್ನು ತಾವು ಮಾಡಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಯೋಜನೆಯಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತೆ ಆಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ ಎಂದರು.

ಏಪ್ರಿಲ್ 1ರಿಂದ ನರೇಗಾ ಕೂಲಿಕಾರರಿಗೆ ದಿನವೊಂದಕ್ಕೆ 349 ರೂಪಾಯಿ ನಿಗದಿಪಡಿಸಲಾಗಿದೆ. ಬೇಸಿಗೆ ಅವಧಿಯ 100 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದರೆ ಕೂಲಿಕಾರರಿಗೆ 34900 ರೂಪಾಯಿ ಸಿಗುತ್ತದೆ. ಕೂಲಿಕಾರರು ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಬಿತ್ತನೆಯ ಕಾರ್ಯಕ್ಕೆ ಸದುಪಯೋಗ ಪಡಿಸಿಕೊಳ್ಳಲು ನೆರವಾಗುವುದು ಎಂದು ಅಭಿಪ್ರಾಯಪಟ್ಟರು.
ಬಿಎಫ್‌ಟಿ ಅಶೋಕ ಕಂಬಳಿ, ಕಾಯಕ ಮಿತ್ರರಾದ ಪವಿತ್ರಾ ನಾಡಗೌಡರ, ಕಾಯಕ ಬಂಧುಗಳು, ನರೇಗಾ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಈ ಬಾರಿ ಅತೀ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದು ಹಾವೇರಿ-ಗದಗ ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಅವರು ಪಟ್ಟಣದ ದಿ. ಆರ್.ಎನ್. ದೇಶಪಾಂಡೆ ಅವರ ವಾಡೆಯಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ಬಡವರ ಬದುಕು ಸುಧರಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಲು ಸಹಕಾರಿಯಾಗಿವೆ. ಹಾವೇರಿ ಮತ್ತು ಗದಗ ಭಾಗದಲ್ಲಿ ನಾನು ಸಂಚಾರ ಮಾಡಿದ್ದು, ಕೇಂದ್ರ ಸರಕಾರ ಸುಳ್ಳು ಭರವಸೆ ನೀಡಿ ನಮಗೆ ಮೋಸ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ತಮ ವಾತಾವರಣ ಸೃಷ್ಟಿಯಾಗಿದೆ ಎಂದರು.

ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ರೈತರ ಆದಾಯ ದುಪ್ಪಟ್ಟು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ, 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಯಾವ ಭರವಸೆಗಳನ್ನೂ ಇಂದಿಗೂ ಈಡೇರಿಸದೇ ಮೋಸ ಮಾಡಿದ್ದಾರೆ. ಇದರಿಂದ ಬಿಜೆಪಿ ಸರಕಾರದ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಹೊರಟು ಹೋಗಿದ್ದು ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಖಚಿತವಾಗಿದೆ. ಹಾವೇರಿ-ಗದಗ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅತೀ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿರಹಟ್ಟಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ಬಿ.ವಿ. ಸುಂಕಾಪೂರ, ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಬಿ.ಎಂ. ಹರಪನಹಳ್ಳಿ, ಪ.ಪಂ ಸದಸ್ಯ ನಾಗರಾಜ ದೇಶಪಾಂಡೆ, ಎಸ್.ಸಿ. ಬಡ್ನಿ, ಕೆ.ಎಲ್. ಕರಿಗೌಡರ, ವಿಜಯ ನೀಲಗುಂದ, ಉಮಾ ಮಟ್ಟಿ, ಚಂಪಾವತಿ ಗುಳೇದ, ಇಮಾಮಸಾಬ ಶೇಖ, ಮಾಹಾದೇವಪ್ಪ ಗಡಾದ, ದಾವೂದ ಜಮಾಲ ಸೇರಿದಂತೆ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಮಾಜಿ ಶಾಸಕ ಡಿ.ಆರ್. ಪಾಟೀಲ್ ಮಾತನಾಡಿ, ಮುಳಗುಂದ ಪಟ್ಟಣ ೫೦ ವರ್ಷಗಳಿಂದಲೂ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಈ ಬಾರಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದರು.

ಮಳಿಗೆಗಳ ಹರಾಜು ಯಾವಾಗ?

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪಟ್ಟಣದ ಹೃದಯ ಭಾಗದಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸಮಿತಿಯ ಜಾಗೆಯಲ್ಲಿ ಕೃಷಿ ಮಾರಾಟ ಇಲಾಖೆ ವತಿಯಿಂದ 10 ಮಳಿಗೆಗಳನ್ನು ನಿರ್ಮಾಣ ಮಾಡಿ ಕೆಲವು ತಿಂಗಳುಗಳೇ ಕಳೆದರೂ ಸಹ ಇಲ್ಲಿಯವರೆಗೂ ಹರಾಜು ಆಗದೇ ಹಾಗೆಯೇ ಉಳಿದಿದ್ದು, ಇದೀಗ ಮಳಿಗೆಗಳ ಹರಾಜು ಯಾವಾಗ ಎಂದು ಪಟ್ಟಣದ ಜನತೆ ಕಾಯುತ್ತಿದ್ದಾರೆ.

ಶಿರಹಟ್ಟಿಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಬೆಳ್ಳಟ್ಟಿ ರಸ್ತೆಗೆ ಹೊಂದಿಕೊಂಡಿರುವ ಕೋಟ್ಯಂತರ ರೂ ಬೆಲೆ ಬಾಳುವ ಜಾಗೆಯಲ್ಲಿ ಇಲಾಖೆಯು 2022-23ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ 44 ಲಕ್ಷ ರೂ ವೆಚ್ಚದಲ್ಲಿ 10 ಮಳಿಗೆಗಳನ್ನು ನಿರ್ಮಿಸಿದೆ. ಮಳಿಗೆಗಳು ನಿರ್ಮಾಣಗೊಂಡಿದ್ದರೂ ಸಹ ಇವುಗಳ ಹರಾಜು ಪ್ರಕ್ರಿಯೆ ಇದುವರೆಗೂ ನಡೆದಿಲ್ಲ.

ಶಿರಹಟ್ಟಿ ಮತಕ್ಷೇತ್ರದ ಕೇಂದ್ರಸ್ಥಳವಾಗಿದ್ದರೂ ಸಹ ಇಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಕೇವಲ ಹೆಸರಿಗಷ್ಟೇ ಸಿಮೀತವಾದಂತೆ ಕಾಣುತ್ತಿದೆ. ಏಕೆಂದರೆ ಇಲ್ಲಿಯ ಉಪ ಮಾರುಕಟ್ಟೆಯಲ್ಲಿ 2 ಬೃಹತ್ ಗೋಡೌನ್‌ಗಳಿದ್ದು, ಇವುಗಳನ್ನು ಸಹ ಕೇಳುವವರಿಲ್ಲದಂತಾಗಿದೆ. ಇಲ್ಲಿ ವ್ಯಾಪಾರ ಮಾಡುವುದಕ್ಕೆ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ, ವಿಶಾಲವಾದ ಜಾಗೆ ಇದ್ದರೂ ಸಹ ಅಲ್ಲಲ್ಲಿ ಗಿಡಗಂಟಿಗಳು ಬೆಳೆದು ರೈತರಿಗೆ ವರದಾನವಾಗಬೇಕಿದ್ದ ಮಾರುಕಟ್ಟೆ ಬಿಕೋ ಎನ್ನುತ್ತಿದೆ.

ಶಿರಹಟ್ಟಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪ ಮಾರುಕಟ್ಟೆ ಮಾತ್ರ ಇದ್ದು, ಇದು ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಬೇಕಿತ್ತು. ಆದರೆ ಈ ಭಾಗದಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಕ್ಕೆ ಯಾರೂ ಕೈ ಹಾಕಿದಂತೆ ಕಾಣುತ್ತಿಲ್ಲ. ಜೊತೆಗೆ ಇಲ್ಲಿ ವ್ಯಾಪಾರ ಮಾಡುವುದಕ್ಕೆ ಯಾವ ವ್ಯಾಪಾರಸ್ಥರು ಕೂಡಾ ಮುಂದೆ ಬರದೇ ಇರುವದರಿಂದ ತಾಲೂಕಿನ ರೈತರು ಮಾರುಕಟ್ಟೆಗೆ ಬೇರೆ ಬೇರೆ ಕಡೆ ತೆರಳುತ್ತಿದ್ದಾರೆ. ಹೀಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲದೇ ಇರುವದು ತಾಲೂಕಿನ ಅಭಿವೃದ್ಧಿಗೂ ಸಹ ಹಿನ್ನಡೆಯಾಗಿದೆ.

ಸದ್ಯ ಶಿರಹಟ್ಟಿ ಪಟ್ಟಣದಲ್ಲಿರುವ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ, ಈ ಜಾಗೆಯನ್ನು ಸದ್ಬಳಕೆಯನ್ನು ಮಾಡಿಕೊಂಡು ರೈತರಿಗೆ ಮತ್ತು ಇಲ್ಲಿಯ ವ್ಯಾಪಾರಸ್ಥರಿಗೆ ಎಲ್ಲ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ಪ್ರಯತ್ನಗಳು ಈ ಭಾಗದ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ಆಗಬೇಕಿದೆ ಎಂದು ತಾಲೂಕಿನ ಪ್ರಜ್ಞಾವಂತ ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶಿವಾನಂದ ಮಠ, ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಟೆಂಡರ್ ಕಮ್ ಬಹಿರಂಗ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ತಾಲೂಕಾ ಕರವೇ ಅಧ್ಯಕ್ಷ ಬಸವರಾಜ ವಡವಿ, ಮಳಿಗೆ ನಿರ್ಮಾಣವಾಗಿದ್ದರೂ ಸಹ ಅವುಗಳನ್ನು ಹರಾಜು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸರಕಾರದ ಅನುದಾನ ಸದ್ವಿನಿಯೋಗವಾಗಬೇಕು. ಈ ನಿಟ್ಟಿನಲ್ಲಿ ಪಾರದರ್ಶಕತೆಯಿಂದ ಹರಾಜು ಪ್ರಕ್ರಿಯೆ ಮಾಡಿ, ಶಿರಹಟ್ಟಿ ಉಪ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಹೇಳಿದರು.

ರಂಗಕಲೆ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿ

0

ವಿಜಯಸಾಕ್ಷಿ ಸುದ್ದಿ, ಗದಗ : ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ, ಮಾರ್ಗದರ್ಶಿಸವಲ್ಲಿ ರಂಗಕಲೆ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದ್ದು, ಅದು ಸದಾ ಕ್ರಿಯಶೀಲವಾಗಿರಬೇಕು. ರಂಗಭೂಮಿ ದಿನಾಚರಣೆ ಕೇವಲ ಔಪಚಾರಿಕತೆ ಪಡೆದುಕೊಳ್ಳದಿರಲಿ ಎಂದು ಡಿಜಿಎಮ್ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಂಸ್ಕೃತಿಕ ಸಂಘಟಕ ಡಾ. ಜಿ.ಬಿ. ಪಾಟೀಲ ಅಭಿಪ್ರಾಯಪಟ್ಟರು.

ಅವರು ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ವಿಶ್ವ ರಂಗಭೂಮಿ ದಿನಾಚರಣೆ-2024’ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರಿಗೆ `ಚಿನ್ಮಯ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ರಂಗಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ನಾವೆಲ್ಲ ತೊಡಗಿಸಿಕೊಂಡಾಗ ಮಾತ್ರ ರಂಗಭೂಮಿ ದಿನಾಚರಣೆಗೆ ನೈಜ ಅರ್ಥಬರಲು ಸಾಧ್ಯ ಎಂದರು.

`ಚಿನ್ಮಯ ಕಲಾಶ್ರೀ’ ಪ್ರಶಸ್ತಿ ಸ್ವೀಕರಿಸಿದ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಮಾತನಾಡಿ, ಶ್ರೀರಾಘವೇಂದ್ರ ಸೇವಾ ಸಮಿತಿ ಹಾಗೂ ಆರ್‌ಎನ್‌ಕೆ ಮಿತ್ರಮಂಡಳಿಗಳು ಕಳೆದ ಎರಡು ದಶಕಗಳಿಂದ ನನ್ನ ರಂಗ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತದ್ದು ಸ್ಮರಣಾರ್ಹ. ಪರಸ್ಪರರಲ್ಲಿ ವಿಶ್ವಾಸಾರ್ಹತೆ, ಶಾಂತಿ ನೆಮ್ಮದಿ ನೀಡುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪಾತ್ರ ಮಹತ್ವದ್ದು. ಇಂದಿನ ಮಕ್ಕಳು ಮೊಬೈಲ್ ಗೀಳು ಬದಿಗಿಟ್ಟು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಸಮಯ ನೀಡಬೇಕು. ರಂಗಕಲೆ ಮನುಷ್ಯನ ಸರ್ವಾಂಗೀಣ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗೌರವ ಅಧ್ಯಕ್ಷರಾದ ಪ್ರೊ. ಎಮ್.ಎಸ್. ಕುಲಕರ್ಣಿ ಅಧ್ಯಕ್ಷೀಯ ನುಡಿಗಳಾಡಿದರು.

ಹಿರಿಯ ರಂಗ ಸಾಧಕರಾದ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರಿಗೆ `ಚಿನ್ಮಯ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಜಾನಪದ ಅಕಾಡೆಮಿಗೆ ಸದಸ್ಯರಾಗಿ ನೇಮಕ ಹೊಂದಿರುವ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ ಹಾಗೂ ಕರ್ನಾಟಕ ಬಂಜಾರ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ಜಾನಪದ ಕಲಾವಿದೆ ಸಾವಿತ್ರಿಬಾಯಿ ಲಮಾಣಿ ಅವರನ್ನು ಸನ್ಮಾನಿಸಲಾಯಿತು.

ರೋಣ ತಾಲೂಕಿನ ಹುಲ್ಲೂರ ಗ್ರಾಮದ ಕಲಾವಿದರಾದ ರಾಮಕೃಷ್ಣ ಪೂಜಾರ ಮತ್ತು ತಂಡದವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ರಾಮಕೃಷ್ಣ ಪೂಜಾರ ಪ್ರಾರ್ಥಿಸಿದರು. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಸಿ.ಬಡಿಗೇರ(ನರೇಗಲ್ಲ) ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಲಾವಿದರಾದ ವೀರಯ್ಯ ಹೊಸಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಾದ ಸುಶಿಲೇಂದ್ರ ಜೋಷಿ, ಅಂದಾನೆಪ್ಪ ವಿಭೂತಿ, ಕಾವೆಂ ಶ್ರೀನಿವಾಸ, ವಾದಿರಾಜ ಸೊರಟೂರ, ಗಾಯತ್ರಿ ಹಿರೇಮಠ, ಸುಮಾ ಪಿಡ್ಡನಗೌಡರ್, ಸೀತಾಬಾಯಿ ದ್ಯಾಮೇನಹಳ್ಳಿ, ಶುಭಾಂಗಿ ದ್ಯಾಮೇನಹಳ್ಳಿ, ಅಶೋಕ ಗಿರಡ್ಡಿ, ವಿಶ್ವನಾಥ ಬೇಂದ್ರೆ, ರಾಚಯ್ಯ ಹೊಸಮಠ, ಡಾ. ಪ್ರಭು ಗಂಜಿಹಾಳ, ಸೋಮು ಚಿಕ್ಕಮಠ, ಧಮೇಂದ್ರ ಇಟಗಿ, ಬಸವರಾಜ ಈರಣ್ಣವರ, ಪರುಶುರಾಮ ರಾಮಪೂರ, ಮಂಜುನಾಥ ಒಂಟೆತ್ತಿನ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ರಂಗಾಸಕ್ತರು ಭಾಗವಹಿಸಿದ್ದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಕಬ್ಬಿಗರ ಕೂಟದ ಸಂಸ್ಥಾಪಕರು ಹಾಗೂ ಹಿರಿಯ ಸಾಹಿತಿಗಳಾದ ಡಿ.ವಿ. ಬಡಿಗೇರ ಮಾತನಾಡಿ, ಗದಗ ಜಿಲ್ಲೆ ಅದರಲ್ಲೂ ವಿಶೇಷವಾಗಿ ಶಹಪೂರಪೇಟೆ ರಂಗಭೂಮಿಗೆ ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದೆ. ಇಂತಹ ನಗರದಲ್ಲಿ ರಂಗ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕು. ಅಂತಹ ಕಾರ್ಯಗಳಿಗೆ ಕಬ್ಬಿಗರ ಕೂಟದ ಸಭಾಭವನ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.

 

ನೂತನ ಅಕಾಡೆಮಿ ಸದಸ್ಯರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ, ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಗೆ ಸದಸ್ಯರಾಗಿ ನೇಮಕ ಹೊಂದಿರುವ ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಶಂಕರಣ್ಣ ಸಂಕಣ್ಣವರ ಹಾಗೂ ಕರ್ನಾಟಕ ಬಂಜಾರ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ಜಾನಪದ ಕಲಾವಿದೆ ಸಾವಿತ್ರಿಬಾಯಿ ಲಮಾಣಿ ಅವರನ್ನು ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಕಲಾ ಚೇತನ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪ್ರೊ. ಎಮ್.ಎಸ್. ಕುಲಕರ್ಣಿ, ಡಾ. ಜಿ.ಬಿ. ಪಾಟೀಲ, ಡಿ.ವಿ. ಬಡಿಗೇರ, ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ, ಕಾವೆಂ ಶ್ರೀನಿವಾಸ, ಶಂಕರಣ್ಣ ಸಂಕಣ್ಣವರ, ಸಾವಿತ್ರಬಾಯಿ ಲಮಾಣಿ, ವಿಶ್ವನಾಥ ನಾಲವಾಡದ ಉಪಸ್ಥಿತರಿದ್ದರು.

ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ದಿನಮಾನದ ಆಹಾರ, ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹೃದಯಾಘಾತ, ರಕ್ತದ ಒತ್ತಡ, ಸಕ್ಕರೆ ಖಾಯಿಲೆ ಹೆಚ್ಚಾಗುತ್ತಿರುದಕ್ಕೆ ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಗಳೇ ಕಾರಣ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2686ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿ, ದೈಹಿಕ ಶ್ರಮಗಳು ಕಡಿಮೆಯಾಗಿ, ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮನುಷ್ಯನ ಆಯುಷ್ಯ ಕೂಡ ಬಹಳಷ್ಟು ಕಡಿಮೆಯಾಗುತ್ತಿದೆ. ದುಶ್ಚಟಗಳನ್ನು ತ್ಯಜಿಸಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ‘ಕಿತ್ತೂರು ಚೆನ್ನಮ್ಮ’ ಪ್ರಶಸ್ತಿ ಪಡೆದ ನಿಮಿತ್ತ ವಿ.ವಿ. ಹಿರೇಮಠರನ್ನು ಸಂಮಾನಿಸಲಾಯಿತು. ತಾಲೂಕಾ ಬಣಜಿಗರ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಇಂಗಳಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಣಜಿಗ ಮಹಿಳಾ ಘಟಕದ ಸದಸ್ಯರು ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಸ್ನೇಹಾ ಬಳ್ಳೊಳ್ಳಿ, ವಚನ ಚಿಂತನೆಯನ್ನು ದೀಪಾ ಸುರೇಶ ನಿಲೂಗಲ್ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಬಸವರಾಜ ರಾಮನಕೊಪ್ಪ ಹಾಗೂ ಬಣಜಿಗ ಮಹಿಳಾ ಸಮಾಜ ತಾಲೂಕಾ ಘಟಕ, ಗದಗ ಮತ್ತು ವ್ಯಾಪಾರೋದ್ಯಮಿ ಉಮೇಶ ಗಂಗಾಧರಪ್ಪ ನಾಲ್ವಾಡರನ್ನು ಪೂಜ್ಯರು ಸಂಮಾನಿಸಿದರು.

ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

ಹೆಸರಾಂತ ವೈದ್ಯ ಡಾ. ಗಣೇಶ ಕುಂದಾಪೂರ ಉಪನ್ಯಾಸ ನೀಡಿ, ಕ್ಯಾನ್ಸರ್‌ನ್ನು ಮೊದಲನೇ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಕ್ಯಾನ್ಸ್ರ್ ವಾಸಿಯಾಗುವುದು ಖಚಿತ. ಕ್ಯಾನ್ಸ್ರ್ ರೋಗ ಎಂದ ತಕ್ಷಣ ಭಯಪಡಬಾರದು. ಸಿಗರೇಟ್, ಗುಟಕಾ, ಸೇವನೆಯಿಂದ ಕ್ಯಾನ್ಸ್ರ್‌ಗೆ ಬಹಳಷ್ಟು ಜನ ತುತ್ತಾಗುತ್ತಿದ್ದಾರೆ. ಸಾಧ್ಯವಾದಷ್ಟು ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದ ಅವರು, ಕ್ಯಾನ್ಸ್ರ್ ಕುರಿತು ಅನೇಕ ಮಹತ್ವದ ಸಂಗತಿಗಳನ್ನು ಜನರಿಗೆ ತಿಳಿಸಿಕೊಟ್ಟರು.

 

ಸಾಮಾಜಿಕ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಶ್ರಮವಿದೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗದಲ್ಲಿ, ಪತ್ರಿಕೆಗಳು ಸದಾ ತಿಳುವಳಿಕೆ ನೀಡುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ ಅಭಿಪ್ರಾಯಪಟ್ಟರು.

ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಭಾಂಗಣದಲ್ಲಿ ಗುರುವಾರ ಪತ್ರಕರ್ತ ದಿ.ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಧಾರವಾಡದಲ್ಲಿ ಮುರುಘಾಮಠದ ಉಚಿತ ಪ್ರಸಾದ ನಿಲಯ, ಕವಿವಿಯಲ್ಲಿ ನಿರಂತರ ಓದಿನ ಮೂಲಕ ಸಾವಿರಾರು ಜನ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಏರಿದ್ದನ್ನು ಸ್ಮರಿಸಿದ ಅವರು, ಪತ್ರಕರ್ತ ಮೊಹರೆ ಹಣಂತರಾಯರು ಕಾಲು ಶತಮಾನ ಕಾಲ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ಸಂಪಾದಕರಾಗಿ ಭದ್ರ ಬುನಾದಿ ಹಾಕಿದವರು. ವಯಕ್ತಿಕ ಜೀವನವನ್ನು ಸಂಪೂರ್ಣವಾಗಿ ಪತ್ರಿಕೆಗೆ ಅರ್ಪಿಸಿದವರು ಮತ್ತು ಕರ್ನಾಟಕ ವಿವಿ ಸ್ಥಾಪನೆಗೆ, ಬೆಳವಣಿಗೆಗೆ ಶ್ರಮಿಸಿದವರು ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಉತ್ತರಿಸಿದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಸಮಾಜದಲ್ಲಿ ತಮ್ಮ ಸುತ್ತ-ಮುತ್ತ ಇರುವ ಕುಂದು ಕೊರತೆಗಳ ಬಗ್ಗೆ ಪತ್ರಿಕೆಗಳಿಗೆ ಪತ್ರ, ಲೇಖನ ಬರೆಯುವುದನ್ನು ರೂಢಿಸಿಕೊಳ್ಳುವ ಮೂಲಕ ಪ್ರಬುದ್ಧ ಪತ್ರಕರ್ತರಾಗಿ ಹೊರಹೊಮ್ಮಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಷಣ್ಮುಖ ಕೋಳಿವಾಡ ದಂಪತಿಗಳನ್ನು ಶಾಲು ಹೊದೆಸಿ ಫಲಫುಷ್ಪ ನೀಡಿ ಸನ್ಮಾನಿಸಲಾಯಿತು. ಡಾ.ನಯನಾ ಗಂಗಧರಪ್ಪ ವೇದಿಕೆಯಲ್ಲಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚಂದುನವರ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ವಿಚಾರಗಳನ್ನು ಇಟ್ಟುಕೊಂಡು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು ಎಂದರು.

ಡಾ.ಸಂಜಯ ಕುಮಾರ ಮಾಲಗತ್ತಿ ಸ್ವಾಗತಿಸಿದರು. ಡಾ.ಶಕುಂತಲಾ ಸೊರಟೂರ, ಡಾ. ನಾಗರಾಜ ರೋಣದ, ಪತ್ರಕರ್ತರಾದ ಸುನಿಲ ಪಾಟೀಲ, ರವೀಶ ಪವಾರ, ಪ್ರೊ. ನೀಲಗುಂದ ಉಪಸ್ಥಿತರಿದ್ದರು. ಡಾ.ಮಂಜುನಾಥ ಅಡಿಗಲ್ ಕಾರ್ಯಕ್ರಮ ನಿರೂಪಿಸಿದರು.

ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಸರಿಯಾದ ರೀತಿಯಲ್ಲಿ ನಡೆಯುವಂತೆ ವೈಫಲ್ಯಗಳನ್ನು ಎತ್ತಿ ತೋರಿಸುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಪ್ರಾದೇಶಿಕ ಅಸಮಾನತೆ ಹಾಗೂ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಪರ ಕೆಲಸ ಮಾಡುತ್ತಿವೆ ಎಂದು ಷಣ್ಮುಖ ಕೋಳಿವಾಡ ನುಡಿದರು.

ಸರಕಾರಿ ಬಸ್‌ನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 5ಲಕ್ಷ ರೂ. ಜಪ್ತಿ

0


ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ


ಸೂಕ್ತ ದಾಖಲೆ ಇಲ್ಲದೇ ಸರಕಾರಿ ಬಸ್‌ನಲ್ಲಿ ಸಾಗಿಸುತ್ತಿದ್ದ 5ಲಕ್ಷ ರೂ ಹಣವನ್ನು ತಾಲೂಕಿನ ರಾಮಗೇರಿ ಚೆಕ್‌ಪೋಸ್ಟ್ ನಲ್ಲಿ  ಗುರುವಾರ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.


ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಸಿ ಬಸ್‌ನಲ್ಲಿ ತಪಾಸಣೆ ವೇಳೆ 5ಲಕ್ಷ ರೂ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಮುಗದ ಗ್ರಾಮದ ಸಯ್ಯದ್ ಅಬ್ದುಲ್‌ರಜಾಕ್ ಪೀರಜಾಧೆ ಎಂಬುವರು ಸೂಕ್ತ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದರು.

ತಹಸೀಲ್ದಾರ, ವಾಸುದೇವ ಸ್ವಾಮಿ, ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ, ವಿನಾಯಕ ವೇತಾಳ, ಮಾರುತಿ ರಾಠೋಡ ಸೇರಿ ಪೊಲೀಸ್, ಕಂದಾಯ ಸಿಬ್ಬಂದಿಗಳು ಇದ್ದರು.

ಪ್ರತ್ಯೇಕ ಪ್ರಕರಣದಲ್ಲಿ 7ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!