Home Blog

ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ಇಂದು

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಇಲ್ಲಿನ ಜಂತ್ಲಿ ಶಿರೂರ ಗ್ರಾಮದಲ್ಲಿ ಏ.17ರಂದು ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ನೆರವೇರಲಿದೆ.

ಶ್ರೀರಾಮ ನವಮಿಯಂದು ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಶ್ರೀ ಮಾರುತಿ ದೇವರಿಗೆ ರುದ್ರಾಭಿಷೇಕ, ಸಕಲ ವಸ್ತಾçಭರಣಗಳಿಂದ ಅಲಂಕಾರ, ಸಾಯಂಕಾಲ 5 ಗಂಟೆಯಿಂದ ಡೊಳ್ಳು, ಸಕಲ ವಾದ್ಯ ಮೇಳಗಳೊಂದಿಗೆ ಪಾಲಕಿ ಉತ್ಸವ ನಡೆಯುವುದು. ಸಾಯಂಕಾಲ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾನ್ನಿಧ್ಯವನ್ನು ಚಿಕ್ಕೇನಕೊಪ್ಪದ ಚನ್ನವೀರ ಶರಣರಮಠ ಸುಕ್ಷೇತ್ರ ಬಳಗಾನೂರು ಶಾಖಾಮಠ ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು ವಹಿಸಿಕೊಳ್ಳುವರು.

ನಂತರ ಮಹಾದಾಸೋಹ ನಡೆಯುವುದು. ರಾತ್ರಿ ಗ್ರಾಮದ ಶ್ರೀ ರಾಮ ವಾಲ್ಮೀಕಿ ಯುವಕ ಮಂಡಳದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಏ.18ರಂದು ಸಾಯಂಕಾಲ 7ಕ್ಕೆ ಶ್ರೀ ಪರಮಪೂಜ್ಯ ಧರ್ಮರಾಜ ಧರ್ಮದಮಠ ಸಾ. ಕಣಗಿನಹಾಳ ಇವರ ಸಾನ್ನಿಧ್ಯದಲ್ಲಿ ಲಘು ರಥೋತ್ಸವ ನಡೆಯುವುದು. ಈ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಆಗಮಿಸಿ ದೇವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕೆಂದು ಹನಮಂತಪ್ಪ ನಾಗಪ್ಪ ಚಿಗರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ಶಿವಜ್ಞಾನದ ಅರಿವಿಗೆ ಗುರು ಕಾರುಣ್ಯ ಅವಶ್ಯಕ

0

ವಿಜಯಸಾಕ್ಷಿ ಸುದ್ದಿ, ಕಲಘಟಗಿ : ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವನ ಬಿಟ್ಟು ಶಕ್ತಿ, ಶಕ್ತಿ ಬಿಟ್ಟು ಶಿವನಿಲ್ಲ. ಶಿವಜ್ಞಾನದ ಸಂಪತ್ತಿನ ಅರಿವಿಗಾಗಿ ಗುರು ಕಾರುಣ್ಯ ಅತ್ಯಂತ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ಬೇಗೂರು ಗ್ರಾಮದಲ್ಲಿ ಗ್ರಾಮದೇವತೆಯ ನೂತನ ದೇವಾಲಯ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ದೇವರು ಕೊಟ್ಟ ಕೊಡುಗೆ ಸಾಮಾನ್ಯವಾದುದಲ್ಲ. ಅರಿವುಳ್ಳ ಮಾನವ ಜೀವನದ ಜೊತೆಗೆ ಮನುಷ್ಯ ಬದುಕಿ ಬಾಳಲು ನೆಲ, ಜಲ, ಅನ್ನ, ಗಾಳಿ ಮೊದಲಾದ ಅಮೂಲ್ಯ ವಸ್ತುಗಳನ್ನು ಕರುಣಿಸಿದ್ದಾನೆ. ದೇವರ ಮೇಲಿನ ನಂಬಿಕೆ ಕಳೆದುಕೊಳ್ಳಬಾರದು. ನಂಬಿಕೆಯಿದ್ದರೆ ಕಲ್ಲು ಕೂಡಾ ದೇವರಾಗಿ ಕಾಣುತ್ತದೆ. ನಂಬಿಕೆ ಕಳೆದುಕೊಂಡರೆ ದೇವರು ಧರ್ಮ ಇಲ್ಲವೇ ಇಲ್ಲ. ದೇವರು, ಗುರು, ಮಂತ್ರ, ವೈದ್ಯ, ತೀರ್ಥ ಇವುಗಳಲ್ಲಿ ಯಾವ ನಂಬಿಕೆ ಇಟ್ಟು ನಡೆಯುತ್ತೇವೆಯೋ ಆ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹಳೆಯದಾದ ಗ್ರಾಮ ದೇವತೆ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿ ಇಂದು ದೇವತಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಕಳಸರೋಹಣ ನೆರವೇರಿಸಿದ್ದು ಸಂತೊಷದ ಸಂಗತಿ ಎಂದರು.

ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು.

ಸಮಾರಂಭವನ್ನು ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನೇತೃತ್ವವನ್ನು ಎಂ.ಚಂದರಗಿ-ಕಟಕೋಳ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವಹಿಸಿ ಉಪದೇಶಾಮೃತವನ್ನಿತ್ತರು. ಸಮಾರಂಭದ ಸಮ್ಮುಖವನ್ನು ಕಲಘಟಗಿ ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು.

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಹುಲಕೋಟಿ ಶ್ರೀ ಕರಿಯಮ್ಮ ದೇವಿಯ ರಥೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಹುಲಕೋಟಿ ಗ್ರಾಮದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮ ನವಮಿ ಕಾರ್ಯಕ್ರಮಗಳನ್ನು ಏ. 17ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಬೆಳಿಗ್ಗೆ ಶ್ರೀರಾಮನಿಗೆ ಅಭಿಷೇಕ, 10 ಗಂಟೆಗೆ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮ, ಮಧ್ಯಾಹ್ನ ಸಕಲ ಸದ್ಭಕ್ತರಿಗೆ ಪಾನಕ ಪ್ರಸಾದ ಸೇವೆ ನೆರವೇರಲಿದೆ.

ಏ. 18ರಂದು ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ ಜರುಗಲಿದ್ದು, ಬೆಳಿಗ್ಗೆ ಗ್ರಾಮದ ಎಲ್ಲಾ ದೇವರಿಗೆ ಅಭಿಷೇಕ, ನಂತರ ಶ್ರೀರಾಮ ಭಜನಾ ಸಂಘದವರಿಂದ ಶ್ರೀರಾಮ ಮಂದಿರದಿಂದ ಗ್ರಾಮದಲ್ಲಿ ದಿಂಡಿಯ ಪ್ರದಕ್ಷಿಣೆ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ ಗ್ರಾಮದ ಎಲ್ಲಾ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ, ಪಾಲಕಿ ಸೇವೆ, ಮಧ್ಯಾಹ್ನ 1.30ಕ್ಕೆ ಅನ್ನ ಸಂತರ್ಪಣೆ ನೇರವೇರುವುದು.

ಸಾಯಂಕಾಲ 6 ಗಂಟೆಗೆ ಶ್ರೀ ಕರಿಯಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ಜರುಗುವುದು. ಏ.19ರ ಸಾಯಂಕಾಲ 6 ಗಂಟೆಗೆ ಲಘು ರಥೋತ್ಸವವು (ಕಡುಬಿನ ಕಾಳಗ) ಜರುಗಲಿದೆ. ಗ್ರಾಮದ ಸರ್ವ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ಆಶಿರ್ವಾದ ಪಡೆದುಕೊಳ್ಳಬೇಕೆಂದು ದೇವಸ್ಥಾನ ಟ್ರಸ್ಟ್ ಕಮಿಟಿಯವರು ವಿನಂತಿಸಿದ್ದಾರೆ.

ಮನೆಗಳ್ಳತನ ನಡೆಸಿದ್ದ ಆರೋಪಿಯ ಬಂಧನ

0

ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನೇವರಿ ತಿಂಗಳಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನಿಂದ ಒಟ್ಟು 1,76,300 ರೂ ಕಿಮ್ಮತ್ತಿನ 39 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಒಟ್ಟು 10 ಸಾವಿರ ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಲಕ್ಷ್ಮಿ ನಗರ ಹಾಗೂ ಜನ್ನತ್ ನಗರದಲ್ಲಿಯ ಮನೆಗಳಲ್ಲಿ ಯಾರೋ ಕಳ್ಳರು 14.01.2024ರಿಂದ 16.01.2024ರ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 05/2024 00: 454. 457, 380 : 04/2024:454, 457, 380 ಐಪಿಸಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ಆರೋಪಿತರ ಪತ್ತೆ ಮಾಡಲು ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಗದಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿ.ಎಸ್.ಪಿ, ಸಿಪಿಐ ಶಿರಹಟ್ಟಿರವರ ಇವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ, ಪತ್ತೆ ಕಾರ್ಯ ಕೈಗೊಂಡಿದ್ದರು.

ಪ್ರಕರಣದ ಆರೋಪಿತನಾದ ರಾಣೆಬೆನ್ನೂರಿನ ಸದ್ಯ ಬಳ್ಳಾರಿ ಕಾಟೆಗುಡ್ಡ, ಎಂ.ಜಿ. ರೋಡ್ ಹತ್ತಿರದ ಪರಶುರಾಮ ರಾಮಪ್ಪ ಚಂದಳ್ಳಿ ತಳವಾರ ಇವನನ್ನು ಮಂಗಳವಾರ ಪತ್ತೆ ಮಾಡಿ ದಸ್ತಗೀರ ಮಾಡಿದ್ದಾರೆ.

ಆರೋಪಿತನ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಸಿಪಿಐ ನಾಗರಾಜ ಮಾಡಳ್ಳಿ, ಲಕ್ಷೇಶ್ವರ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ, ಕ್ರೈಂಮ್‌ವಿಭಾಗದ ಪಿಎಸ್‌ಐ ಚನ್ನಬಸವ ಬಬಲಿ, ಎಎಸ್‌ಐ ಎಮ್.ಎ. ಮೌಲ್ವಿ, ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ್, ಎಮ್.ಎಸ್. ಬಳ್ಳಾರಿ, ಆನಂದ ಕಮ್ಮಾರ, ಸಿ.ಎಸ್. ಮಠಪತಿ, ಡಿ.ಎಸ್. ನದಾಫ್, ಗಣೇಶ ಗ್ರಾಮಪುರೋಹಿತ್, ಹೆಚ್.ಐ. ಕಲ್ಲಣ್ಣವರ, ಪಾಂಡುರAಗರಾವ, ಮಧುಚಂದ್ರ ಧಾರವಾಡ ಇವರುಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ, ಸಮಾನತೆಗಳು ಸಮಾಜೋನ್ನತಿಗೆ ಸಹಕಾರಿ

0

ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಬಿ.ಆರ್. ಅಂಬೇಡ್ಕರರು ರಚಿಸಿದ ಭಾರತದ ಸಂವಿಧಾನದ ಫಲದಿಂದ ಇಂದು ನಾವು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಸುಖಮಯ ಜೀವನ ನಡೆಸುತಿದ್ದೇವೆ.

ಅಂಬೇಡ್ಕರರು ತಮ್ಮ ಜೀವನದಲ್ಲಿ ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟ ಮತ್ತು ಸಮಾಜ ತಮಗೆ ತೋರಿದ ತಾರತಮ್ಯ, ದೌರ್ಜನ್ಯಗಳು ಮುಂದಿನ ಜನಾಂಗದವರು ಅನುಭವಿಸಬಾರದೆಂಬ ಹೋರಾಟಗಳಿಂದ ಜಯಗಳಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ರಚಿಸಿದರು ಎಂದು ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ ಗಿಡ್ಡಕೆಂಚಣ್ಣವರ ತಿಳಿಸಿದರು.

ಇಲ್ಲಿನ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2024 ಗದಗ ಇವರುಗಳ ಸಹಯೋಗದಲ್ಲಿ ಬೇಸಿಗೆ ರಜೆ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ನಡೆದಿರುವ ಸಂಸ್ಕೃತಿ-ಸಂಸ್ಕಾರ ಶಿಬಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲತ್ವಾಡಮಠ ಮಾತನಾಡಿ, ಹಿರಿಯರಾದ ನಾವೆಲ್ಲರೂ ಅಂಬೇಡ್ಕರರ ತತ್ವಾದರ್ಶಗಳನ್ನು ಪರಿಪಾಲಿಸಿದರೆ ಕಿರಿಯರೂ ನಮ್ಮನ್ನು ಅನುಸರಿಸುವರು ಎಂದು ಹೇಳಿದರು.

ಶಿಬಿರಾರ್ಥಿಗಳಾದ ಸಿಮ್ರಾನ್ ನದಾಫ್, ಚಿನ್ಮಯಿ ಗೌಡರ, ನಿಧಿ ಕಟ್ಟಿಮನಿ, ಅನುಷ್ಕಾ ಹಿರೇಮಠ ಅಂಬೇಡ್ಕರರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ನವೀನ ಪಲ್ಲೇದ, ಶಿಬಿರದ ಶಿಕ್ಷಕರಾದ ಎಸ್.ಎಂ. ಬುರಡಿ, ಸುನಂದಾ ಜ್ಯಾನೋಪಂತರ, ವೀಣಾ ಹಿರೇಮಠ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಅದಿತಿ ಹಿರೇಮಠ, ಸಾಹಿತ್ಯ ಜಾಧವ, ತ್ರಿಶಾ ಸಿ. ಪ್ರಾರ್ಥನೆ ಹೇಳಿದರು. ಶ್ರಾವಣಿ ಗುಡದೂರ ಸಂವಿಧಾನ ಪೀಠಿಕೆ ಪಠಣ ಮಾಡಿಸಿದರು. ಶಿಬಿರ ಸಂಯೋಜಕ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ. ಬುರಡಿ ವಂದಿಸಿದರು.

ಬೆಳದಡಿ ತಾಂಡಾದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ

0

ವಿಜಯಸಾಕ್ಷಿ ಸುದ್ದಿ, ಗದಗ : ಬೆಳದಡಿ ತಾಂಡಾದ ಶ್ರೀ ಸೇವಾಲಾಲ್ ಯುವಕ ಸಂಘ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ ಜಯಂತಿಯ ಪ್ರಯುಕ್ತ ಬೆಳದಡಿ ತಾಂಡಾದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯಲಿಶಿರುಂಜ ಜ್ಞಾನಯೋಗಾಶ್ರಮದ ಪೀಠಾಧಿಪತಿಗಳಾದ ಪೂಜ್ಯಶ್ರೀ ಬಸವ ಸಮರ್ಥ ಮಹಾಸ್ವಾಮಿಗಳು ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಂಡಾದ ಮುಖಂಡ ಚಂದು ನಾಯಕ್, ಮುಖ್ಯ ಅತಿಥಿಗಳಾಗಿ ಕೆ.ಸಿ. ನಭಾಪುರ, ರವಿಕಾಂತ ಅಂಗಡಿ, ಸೋಮು ನಾಯಕ್, ಮನೋಹರ್ ಕಾರಭಾರಿ, ವೆಂಕಣ್ಣ ಪೂಜಾರ, ವಿಜಯ್ ಮಾಳಗಿಮನಿ, ಭೀಮಪ್ಪ ರಾಠೋಡ, ನಾರಾಯಣ್ ಪವಾರ, ಈಶ್ವರ್ ಹೊಸಮನಿ, ಲಾಲಪ್ಪಾ ಪೂಜಾರ್, ಲಕ್ಷö್ಮಣ ಚವ್ಹಾಣ, ಮೋತಿಲಾಲ್ ಪೂಜಾರ, ಮಾಂತೇಶ್ ಚವ್ಹಾಣ, ನಾರಾಯಣ್ ನಾಯಕ್, ಗೋವಿಂದ ಡೋಣಿ, ಮಂಜುನಾಥ ಪೂಜಾರ, ಸಂತೋಷ ನಾಯಕ, ಠಾಕಪ್ಪ ಚವ್ಹಾಣ, ಅರ್ಜುನ ನಾಯಕ, ಜಗದೀಶ್ ಹಡಗಲಿ, ಲೋಕಪ್ಪ ತುಳಸಿಮಣಿ, ಗೇಮಪ್ಪ ಪೂಜಾರ, ಚಂದಪ್ಪ ನಾಯಕ, ಠಾಕ್ರಪ್ಪ, ಕಪಿಲ್ ಪೂಜಾರ, ವೆಂಕಟೇಶ ಪೂಜಾರ, ರಾಮು ಚವ್ಹಾಣ, ಸಂಜೀವ ನಾಯಕ, ಪಾಂಡು ರಾಠೋಡ, ಪ್ರವೀಣ ಪವಾರ ಮುಂತಾದವರು ಉಪಸ್ಥಿತರಿದ್ದರು. ಪಾಂಡು ಚವ್ಹಾಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಗುಂಡಪ್ಪ ನಾಯಕ ಸ್ವಾಗತಿಸಿದರು. ಹೇಮಂತ್ ಬೇವಿನಕಟ್ಟಿ ನಿರೂಪಿಸಿದರು. ರಮೇಶ ಚವ್ಹಾಣ ವಂದಿಸಿದರು.

ಮಾರನಬಸರಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ರೋಣ : ಸೌಹಾರ್ದತೆಯ ತವರು ಎಂದು ಖ್ಯಾತಿ ಪಡೆದಿರುವ ಮಾರನಬಸರಿ ಗ್ರಾಮದಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಂಗಮದಲ್ಲಿ ಅದ್ದೂರಿಯಾಗಿ ಜರುಗಿತು.

ಸೋಮವಾರ ಬೆಳಗಿನ ಜಾವ ದೇವಸ್ಥಾನದಲ್ಲಿ ದೇವತೆಗೆ ವಿಷೇಷ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಭಕ್ತರ ದರ್ಶನಕ್ಕೆ ಅಣಿಗೊಳಿಸಲಾಯಿತು. ನಂತರ ಗ್ರಾಮ ದೇವತೆಯು ಮಾರುತೇಶ್ವರನ ಸನ್ನಿಧಾನಕ್ಕೆ ತೆರಳಿ ಮರಳಿ ಬರುವ ಸಂಧರ್ಭದಲ್ಲಿ ಉಗ್ರ ರೂಪವನ್ನು ತಾಳುವ ಮೂಲಕ ಭಕ್ತರ ಮನೆಗೆ ತೆರಳಿ ದಂಡಿ ಹಾಗೂ ಸೀರೆಯನ್ನು ಮುಡಿಯುವದರೊಂದಿಗೆ ದಲಿತ ಕಾಲೋನಿಯಲ್ಲಿರುವ ದುರ್ಗಾದೇವಿಯ ದೇವಸ್ಥಾನಕ್ಕೆ ಆಗಮಿಸಿ ಭಕ್ತರಿಗೆ ದರ್ಶನಗೈದಳು.

ಕೆಲ ಗಂಟೆಗಳವರೆಗೆ ಗ್ರಾಮದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಗ್ರಾಮದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದು ಜಾತ್ರಾ ಮಹೋತ್ಸವದ ವಿಶೇಷತೆಯಾಗಿತ್ತು.

ಗ್ರಾಮ ದೇವತೆಯ ಉಗ್ರ ರೂಪವನ್ನು ಕಂಡ ಸಾವಿರಾರು ಭಕ್ತರು ದೇವಿಯ ನಾಮ ಸ್ಮರಣೆಯನ್ನು ಮಾಡುತ್ತಾ ಜಯಘೋಷಗಳನ್ನು ಕೂಗಿ ದೇವಿ ಬರುವ ದಾರಿಯಲ್ಲಿ ನೀರು ಹಾಕುವ ಮೂಲಕ ಭಕ್ತಿ ಮೆರದರು. ದೇವಿಯು ಸಣ್ಣ ಮಸೂತಿ, ದೊಡ್ಡ ಮಸೂತಿಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಹಿಂದೂ-ಮುಸ್ಲಿಂ ಭಕ್ತರ ಭಕ್ತಿ ಇಮ್ಮಡಿಗೊಂಡಿತ್ತು.

ಗ್ರಾಮ ದೇವತೆಯು ದ್ವಾರ ಬಾಗಿಲ ಬಳಿ ಬರುತ್ತಿದ್ದಂತೆ ದೇವಿ ಉರಿನೊಳಗೆ ಹೊಗಲು ನಿರಾಕರಿಸಿ ದ್ವಾರ ಬಾಗಿಲದ ಬಳಿ ಗಂಟೆಗೂ ಹೆಚ್ಚು ಕಾಲ ನಿಂತಿದ್ದು ಭಕ್ತರ ಭಯಕ್ಕೆ ಕಾರಣವಾಗಿತ್ತು. ಬಳಿಕ ಭಕ್ತರು ದೇವಿಯ ಭಾವಚಿತ್ರಕ್ಕೆ ಹೂಮಾಲೆಯನ್ನು ಸಮರ್ಪಿಸಿ ಧನ್ಯತೆಯನ್ನು ಮೆರೆದಾಗ ದೇವಿ ಉರಿನೊಳಕ್ಕೆ ಪ್ರವೇಶಿಸಿದಳು.

ಅನಿಲ್‌ರ ದೂರದೃಷ್ಟಿ ಸಮಾಜಕ್ಕೆ ಮಾದರಿ : ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಗದಗ : ಅನಿಲ ಮೆಣಸಿನಕಾಯಿ ಗದಗ ಕ್ಷೇತ್ರದಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. ಸಮಾನತೆಗಾಗಿ ಅವರ ಹೊಂದಿರುವ ದೂರದೃಷ್ಟಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ.

ಅನಿಲ್ ಮೆಣಸಿನಕಾಯಿ ಕೆಲಸಕ್ಕೆ ನಾನು ಸದಾ ಬೆಂಬಲವಾಗಿ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ರಾತ್ರಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರ ನಿವಾಸದಲ್ಲಿ ಸಮಾನತೆಯ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ನಡೆದ ಸಮಾನತೆಯ ಜಾಥಾ ಸಮಾರೋಪ ಹಾಗೂ ಶ್ರೀರಾಮ, ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂತ ಶಿಶುನಾಳ ಶರೀಫರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಕುರ್ತಕೋಟಿ ಗ್ರಾಮದಲ್ಲಿ ಸಮಾನತೆಯ ಮಂದಿರ ನಿರ್ಮಾಣದ ಸಂಕಲ್ಪ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಮನುಕುಲಕ್ಕಾಗಿ, ಮನುಕುಲದ ಸಮಾನತೆಗಾಗಿ ಈ ಬೃಹತ್ ಜಾಥಾ ಮತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗದಗ ಭಾವೈಕ್ಯತೆ ಹೊಂದಿರುವ ಜಿಲ್ಲೆ. ಇಲ್ಲಿನ ಜನರು ಜಾತಿ, ಮತ, ಪಂಥ ಮರೆತು ಮನುಷ್ಯರಾಗಿ ಬದುಕಬೇಕು ಎಂಬ ಭಾವನೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸಮಾನತೆಯ ಸಂದೇಶ ಸಾರಿದ ಶ್ರೀರಾಮ, ಅಂಬೇಡ್ಕರ್, ಬುದ್ಧ, ಬಸವ ಮತ್ತು ಶರೀಫರ ಮಂದಿರಗಳನ್ನು ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ನಿರ್ಮಿಸಲಾಗುವುದು ಎಂದರು.

ಸಮಾರಂಭದಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಮುಖಂಡರಾದ ಕಾಂತಿಲಾಲ್ ಬನ್ಸಾಲಿ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿ ಸಮಾನತೆಗಾಗಿಯೇ ಜನ್ಮತಾಳಿದ ಪಕ್ಷ. ಆದರೆ, ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಪೊಳ್ಳು ಭರವಸೆಗಳಿಗೆ ಮತದಾರರು ಮರುಳಾಗಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕ್ಷೇತ್ರದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುವೆ : ಗುರುನಾಥ ದಾನಪ್ಪನವರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದಲಿತ ಸಮಾಜದ ಪ್ರಬಲ ಮುಖಂಡ, ಬಿಜೆಪಿಯ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಸೋಮವಾರ ಗದಗನಲ್ಲಿ ಸಚಿವ ಎಚ್.ಕೆ. ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ರವಿವಾರ ಲಕ್ಷ್ಮೇಶ್ವರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮುಖಂಡರ ನಡೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದು, ಶೀಘ್ರದಲ್ಲಿಯೇ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವದಾಗಿ ಹೇಳಿದ್ದರು. ಸೋಮವಾರ ದಿಢೀರನೆ ಗದಗ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗಿ, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸಚಿವ ಎಚ್.ಕೆ. ಪಾಟೀಲರು ದಾನಪ್ಪನವರ ಅವರನ್ನು ಪಕ್ಷದ ಶಾಲು, ಮಾಲೆ ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.

ಈ ಸಮಯದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಗುರುನಾಥ ದಾನಪ್ಪನವರ ಬಿಜೆಪಿಯ ತತ್ವ-ಸಿದ್ದಾಂತ, ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವದು ಶಿರಹಟ್ಟಿ ಸೇರಿದಂತೆ ಈ ಭಾಗಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತದೆ.

ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸುವಲ್ಲಿ ಯಾವುದೇ ಸಂಶಯವಿಲ್ಲ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಇಂದಿನಿಂದಲೇ ಅವರು ಕಾರ್ಯನಿರ್ವಹಿಸಲಿ. ಇಂತಹ ಅನೇಕ ಪ್ರಮುಖ ಮುಖಂಡರು ಈ ಭಾಗದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ನುಡಿದರು.

ಪಕ್ಷ ಸೇರ್ಪಡೆಗೊಂಡ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಮಾತನಾಡಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಅನೇಕ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಜಿಲ್ಲಾ ಹಾಗೂ ಮಂಡಳ ಘಟಕದವರು ಮಾಡುತ್ತಿದ್ದಾರೆ. ಇವರ ನಡೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಮಂಡಳ, ನಗರ, ಜಿಲ್ಲಾ ಘಟಕಗಳು ಸೇರಿದಂತೆ ಪಕ್ಷದ ಯಾವುದೇ ಪದಾಧಿಕಾರಿಗಳ ಆಯ್ಕೆಯಲ್ಲಿ ನಮ್ಮ ಕಾರ್ಯಕರ್ತರು ಎನ್ನುವ ಉದ್ದೇಶದಿಂದ ಅವಕಾಶ ನೀಡದಿರುವದು ಹಾಗೂ ಒಂದು ವರ್ಷದಿಂದ ಪಕ್ಷದ ಯಾವುದೇ ಬೈಠಕ್‌ಗಳಿಗೆ, ಸಭೆಗಳಿಗೆ ನನ್ನನ್ನು ಆಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸಿದ್ದಲಿಂಗೇಶ ಪಾಟೀಲ, ರಾಜಣ್ಣ ಕುಂಬಿ, ತಿಪ್ಪಣ್ಣ ಸಂಶಿ, ಫಕ್ಕೀರೇಶ ಮ್ಯಾಟಣ್ಣವರ, ರಾಮು ಅಡಗಿಮನಿ ಮುಂತಾದವರಿದ್ದರು.

ಬಿಜೆಪಿಯ ಧೋರಣೆಯಿಂದ ಬೇಸತ್ತು ಪಕ್ಷವನ್ನು ತ್ಯಜಿಸಿದ್ದೇನೆ. ಅಲ್ಲದೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಪಕ್ಷದ ಅನೇಕ ಸಿದ್ಧಾಂತಗಳನ್ನು ಒಪ್ಪಿ ಯಾವುದೇ ಶರತ್ತು ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವದಾಗಿ ಗುರುನಾಥ ದಾನಪ್ಪನವರ ಹೇಳಿದರು.

ನಮ್ಮ ಸಾಧನೆಯನ್ನೂ ತಿಳಿಸುತ್ತೇವೆ : ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಹಾವೇರಿ : ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನೊಂದಿಗೆ ಕೇಂದ್ರ ಸರ್ಕಾರ ಹಾಗೂ ನಮ್ಮ ಅವಧಿಯ ಸಾಧನೆಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಇವತ್ತು ಒಳ್ಳೆಯ ಮುಹೂರ್ತ ಇದೆ. ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಏಪ್ರಿಲ್ 19ರಂದು ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸುವೆ. ಅಂದು ನಮ್ಮ ನಾಯಕರಾದ ಯಡಿಯೂರಪ್ಪ, ಬೈರತಿ ಬಸವರಾಜ ಸೇರಿ ಹಲವು ನಾಯಕರು ಆಗಮಿಸಲಿದ್ದಾರೆ ಎಂದರಲ್ಲದೆ, ಅತಿ ಹೆಚ್ಚು ಮತಗಳ ಅಂತರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಕೇಂದ್ರದಲ್ಲಿ ಬಹುಮತ ಬರುತ್ತೇವೆ ಎಂದು ನೀಡುವ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ.

ಬಹುಮತಕ್ಕೆ 272 ಸ್ಥಾನ ಬೇಕು. ಅಷ್ಟು ಸ್ಥಾನಗಳಿಗೆ ನಿಲ್ಲುವ ಶಕ್ತಿ ಇಲ್ಲದವರು ಸಲ್ಲದ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ ನೀರಾವರಿ ಸಾಧನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಒಂದು ಲಕ್ಷ ಎಕರೆ ನೀರಾವರಿ ಮಾಡಿರುವುದು ಸಾಮಾನ್ಯದ ಮಾತಲ್ಲ. ಇದರಿಂದ ಹಾನಗಲ್, ಹಿರೆಕೆರೂರು, ರಾಣೆಬೆನ್ನೂರು ತಾಲೂಕುಗಳಲ್ಲಿ ನೀರಾವರಿಯಾಗಿದೆ. ಈ ಕೆಲಸ ಸಾಧ್ಯವಿಲ್ಲ ಎಂದು ಹೇಳಿದ್ದರು. ಅದನ್ನು ಮಾಡಿ ತೋರಿಸಿದ್ದೇನೆ. ಶಿಗ್ಗಾಂವಿ ಕ್ಷೇತ್ರ ಬಿಟ್ಟು ಎಂಟು ಏತ ನೀರಾವರಿ ಯೋಜನೆ ಮಾಡಿದ್ದೇನೆ ಎಂದರು.

ಪ್ರಧಾನಿ ಮೋದಿ ಪ್ರಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಏಪ್ರಿಲ್ 25 ಅಥವಾ 26ರ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಸ ಮಾಡಲಿದ್ದು, ಎರಡು ಅಥವಾ ಮೂರು ಲೋಕಸಭೆಗೆ ಒಂದು ಕ್ಲಸ್ಟರ್ ಮಾಡಿದ್ದಾರೆ ಎಂದರು.

ನಟ ಪ್ರಕಾಶ್ ರೈ ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ ರೈ ಯಾವಾಗ ಫೇಸ್ ರೀಡರ್ ಆದರು? ಮೋದಿಯವರು ವಿಶ್ವದ ನಾಯಕ. ಅವರು ನೋಡುವ ದೃಷ್ಟಿಕೋನ ಹಾಗಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್ ಕುಮಾರ್ ಪೂಜಾರಿ, ಶಿವರಾಜ ಸಜ್ಜನ್ ಹಾಗೂ ಬಿಜೆಪಿ ಮುಖಂಡ ಶಂಕರಣ್ಣ ಮಾಂತನವರ ಹಾಜರಿದ್ದರು.

ಈ ಚುನಾವಣೆಯಲ್ಲಿ ಬಿಜೆಪಿಯವರು ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ಇದು ಲೋಕಸಭಾ ಚುನಾವಣೆ, ರಾಷ್ಟçದ ಚುನಾವಣೆ. ಮೋದಿಯವರ ಹೆಸರು ಹೇಳಲೇಬೇಕು, ಹೇಳುತ್ತೇವೆ. ಅದರೊಂದಿಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನೂ ತಿಳಿಸಿ ಮತ ಕೇಳುತ್ತೇವೆ ಎಂದರು.

 

error: Content is protected !!