Home Blog

ಮುಳಗುಂದ ಪಟ್ಟಣದ ಅಲ್ಲಮ ಪ್ರಭುಸ್ವಾಮಿ ಜಾತ್ರಾ ಮಹೋತ್ಸವ

0

ಮುಳಗುಂದ ಪಟ್ಟಣದ ಅಲ್ಲಮ ಪ್ರಭುಸ್ವಾಮಿ ಜಾತ್ರಾ ಮಹೋತ್ಸವ ಸಕಲ ವಾದ್ಯ ಮೇಳಗಳೊಂದಿಗೆ ನೆರವೇರಿತು. ಅಲ್ಲಮ ಪ್ರಭುವಿನ ಪ್ರಭಾವಳಿ ಉತ್ಸವ, ಸಂಭ್ರಮದ ಕಡುಬಿನ ಕಾಳಗವನ್ನು ಸಿದ್ದರಾಮಯ್ಯ ಹಿರೇಮಠ ನೆರೆವೇರಿಸಿದರು.

ಬಳಿಗಾರ ಕುಟುಂಬದಿಂದ ಡಾ. ಎಚ್.ಎಲ್. ಪುಷ್ಪಾ ಅವರಿಗೆ ದತ್ತಿನಿಧಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಶಿಗ್ಲಿ ಗ್ರಾಮದ ನಾಡೋಜ ಡಾ.ಮನು ಬಳಿಗಾರ, ಡಾ. ಎಸ್.ಪಿ. ಬಳಿಗಾರ ಇವರು ತಮ್ಮ ಬಳಿಗಾರ ಕುಟುಂಬದಿಂದ ತಾಯಿ ಶಂಕರಮ್ಮ ಪರಮೇಶ್ವರಪ್ಪ ಬಳಿಗಾರ ಅವರ ಹೆಸರಿನಲ್ಲಿ ಕೊಡಮಾಡಿದ ದತ್ತಿನಿಧಿಯ 5 ಲಕ್ಷ ರೂ ಚೆಕ್‌ನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ಅವರಿಗೆ ಸಲ್ಲಿಸಲಾಯಿತು.

ಈ ಕುರಿತು ಮಾತನಾಡಿದ ಎಸ್.ಪಿ. ಬಳಿಗಾರ, ಈ ದತ್ತಿನಿಧಿಯಿಂದ ಬರುವ ಬಡ್ಡಿ ಹಣದಲ್ಲಿ ಗದ್ಯ ಸಾಹಿತ್ಯ, ಕಾವ್ಯ ಪ್ರಕಾರ ಮತ್ತು ಸಮಾಜ ಸೇವೆ ಈ ಮೂರು ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗೆ ಪ್ರಶಸ್ತಿಯನ್ನು ಪ್ರತಿವರ್ಷದ ಕಾರ್ಯಕ್ರಮದ ವೇಳೆ ಕೊಡಲು ಬಳಿಗಾರ ಕುಟುಂಬ ಅಪೇಕ್ಷಿಸಿದೆ. ಅನ್ನ, ಆಶ್ರಯ, ಅಕ್ಷರ ಎಲ್ಲವನ್ನೂ ನೀಡಿ ಸುಂದರ ಬದುಕು ಕಟ್ಟಿಕೊಳ್ಳಲು ಆಸರೆಯಾದ ಕನ್ನಡ ಸಾರಸ್ವತ ಲೋಕಕ್ಕೆ ಅಳಿಲು ಸೇವೆ ಮಾಡಬೇಕೆಂಬ ಉದ್ದೇಶದಿಂದ ಬಳಿಗಾರ ಕುಟುಂಬದಿಂದ ತಾಯಿಯವರ ಹೆಸರಿನಲ್ಲಿ ದತ್ತಿ ನೀಡಲಾಗಿದೆ. ನಾವು ಪಡೆದಿದ್ದರಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ಮರಳಿಸುವ ಮತ್ತು ಸಾಹಿತ್ಯ ಸೇವೆ ಮಾಡುವ ಮನಸ್ಥಿತಿಯನ್ನೂ ತಾಯಿ ಭುವನೇಶ್ವರಿ ನೀಡಿದ್ದಾಳೆ ಎಂದರು.

ರೋಸ್ ತಗೊಳ್ಳಿ, ಕಡ್ಡಾಯ ಮತದಾನ ಮಾಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ : ತಾಲೂಕು ಪಂಚಾಯಿತಿ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸಾರ್ವಜನಿಕರ ಸ್ಥಳಗಳಾದ ಬಸ್ ನಿಲ್ದಾಣ ಹಾಗೂ ಆಟೋ ರಿಕ್ಷಾ ನಿಲ್ದಾಣಗಳಲ್ಲಿನ ಸಾರ್ವಜನಿಕರಿಗೆ ಕಡ್ಡಾಯ ಮತದಾನ ಜಾಗೃತಿ ಮೂಡಿಸಲಾಯಿತು. ಬಸ್ ನಿಲ್ದಾಣದಲ್ಲಿನ ಮತದಾರರನ್ನು ಭೇಟಿಯಾಗಿ, ಕೈಗೆ ರೆಡ್ ರೋಸ್ ನೀಡುವುದರ ಮೂಲಕ ಮೇ.7ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ತಾ.ಪಂ ಅಧಿಕಾರಿಗಳು ಮನವಿ ಮಾಡಿದರು.

ತಾ.ಪಂ ಇ.ಓ ಮತ್ತು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಸೋಮಶೇಖರ್ ಬಿರಾದಾರ ಮಾತನಾಡಿ, ಪಂಚಾಯತ್ ರಾಜ್ ದಿವಸ್ ಅಂಗವಾಗಿ ಇಂದು ಸಾರ್ವಜನಿಕರ ಸ್ಥಳಗಳಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಲೋಕಸಭೆ ಚುನಾವಣೆಯ ಮತದಾನದ ವೇಳೆ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸಬೇಕೆಂದರು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮೇ-7ರ ಮತದಾನ ದಿನವನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲೇ ಇದ್ದರೂ ಆ ದಿನ ಊರಿಗೆ ಬಂದು ಮತ ಚಲಾಯಿಸಬೇಕು ಎಂದರು.

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್ ಮಾತನಾಡಿ, ಆಟೋ ರಿಕ್ಷಾ ಮೂಲಕ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ. ಆಟೋ ರಿಕ್ಷಾ ಚಲಾಯಿಸುವವರು ತಮ್ಮ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಮತದಾನ ಮಾಡಲು ತಿಳಿಹೇಳಬೇಕು. ಈ ಮೂಲಕ ದೇಶದ ಚುನಾವಣೆಯ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಕೃಷ್ಣಮ್ಮ ಹಾದಿಮನಿ, ತಾಲೂಕಿನ ಗ್ರಾಮ ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ಬಸ್ ನಿಲ್ದಾಣದ ವ್ಯವಸ್ಥಾಪಕರು, ಸಾರಿಗೆ ಇಲಾಖೆ ಸಿಬ್ಬಂದಿ, ತಾಲೂಕು ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು.

ನಗರದ ಬಸ್ ನಿಲ್ದಾಣದ ಮೂಲಕ ಬೇರೆ ಬೇರೆ ಗ್ರಾಮಗಳಿಗೆ, ಜಿಲ್ಲೆಗಳಿಗೆ, ರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರ ಕೈಗೆ ರೆಡ್ ರೋಸ್ ನೀಡಿ ಮತದಾನ ಮಾಡುವ ಸಂಕಲ್ಪ ಮಾಡೋಣ ಎಂದು ಅಧಿಕಾರಿ ವರ್ಗ ಮತದಾನ ಅರಿವು ಮೂಡಿಸಿದರು. ಅಲ್ಲದೆ ನಿಲ್ದಾಣದ ಆಟೋ ರಿಕ್ಷಾ ಸವಾರರನ್ನು ಭೇಟಿಯಾಗಿ ಅವರಿಗೆ ರೋಸ್ ನೀಡಿ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿ ಮತದಾನ ಮಾಡಿ ಮತ್ತು ಪ್ರಯಾಣಿಕರಿಗೆ ಮತದಾನ ಮಾಡುವಂತೆ ತಿಳಿಹೇಳಿ ಎಂದು ಮಾಹಿತಿ ನೀಡಲಾಯಿತು.

ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿಗಳಾದ ಭವರಲಾಲ್ ಆರ್ಯ ಹಾಗೂ ಗದಗ ಪತಂಜಲಿ ಯೋಗ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ತಾಲೂಕಾ ಪ್ರಭಾರಿಗಳನ್ನಾಗಿ ಮಂಜುನಾಥ ಅಳವಂಡಿ, ಮಹಿಳಾ ಪತಂಜಲಿ ಯೋಗ ಸಮಿತಿಯ ತಾಲೂಕಾ ಪ್ರಭಾರಿಗಳನ್ನಾಗಿ ಮಂಜುಳಾ ಇಟಗಿ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪತಂಜಲಿ ಯೋಗ ವಾರಿಯರ್ ಪ್ರಶಸ್ತಿಯನ್ನು ಮಂಜುನಾಥ್ ಅಳವಂಡಿ, ಮಂಜುಳಾ ಇಟಗಿ, ರೇಣುಕಾ ಅಳವಂಡಿ, ಜಗದೀಶ್ ಸೋನಿ, ಬಿ.ಆರ್. ಕುಲಕರ್ಣಿ, ನಾರಾಯಣಪ್ಪ ಗುಬ್ಬಿ ಅವರಿಗೆ ಪ್ರದಾನ ಮಾಡಲಾಯಿತು.
ಪತಂಜಲಿ ಯೋಗ ಸಮಿತಿಯ ಅಶೋಕ್ ಸವಣೂರು, ಶಂಕರ್ ಕುಕುನೂರು, ಶ್ರೀಕಾಂತ್ ಅಳವಂಡಿ, ಶ್ವೇತಾ ಅಳವಂಡಿ, ವಿಜಯಲಕ್ಷ್ಮಿ ಕುಂಬಾರ್ ಮುಂತಾದವರಿದ್ದರು.

ಅಕ್ಕಮಹಾದೇವಿ ಪರಮ ವೈರಾಗ್ಯ ಮೂರ್ತಿ : ದೇವಕಿ ಕೊಡ್ಲಿವಾಡ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಕ್ಕಮಹಾದೇವಿ ವಚನಗಳ ಅಂಶಗಳು ಸಾರ್ವಕಾಲಿಕ ಸತ್ಯ ಮತ್ತು ಕನ್ನಡ ಸಾರಸ್ವತ ಲೋಕದ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಮಹತ್ತರ ಕೊಡುಗೆಗಳಾಗಿವೆ ಎಂದು ನಿವೃತ್ತ ಶಿಕ್ಷಕಿ, ಸಾಹಿತಿ ದೇವಕಿ ಕೊಡ್ಲಿವಾಡ ಹೇಳಿದರು.

ಅವರು ಮಂಗಳವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕದಳಿ ಮಹಿಳಾ ವೇದಿಕೆಯಿಂದ ಹಮ್ಮಿಕೊಂಡಿದ್ದದ ಅಕ್ಕಮಹಾದೇವಿ ಜಯಂತಿ ಆಚರಣೆ ವೇಳೆ ಮಾತನಾಡಿದರು.

ಸಾಮಾಜಿಕ ಸಮಾನತೆ, ಸ್ತ್ರೀಕುಲದ ಏಳಿಗೆಗಾಗಿ ಶ್ರಮಿಸಿದ ಅಕ್ಕಮಹಾದೇವಿ ಪರಮ ವೈರಾಗ್ಯ ಮೂರುತಿಯಾಗಿದ್ದರು. ಅಣ್ಣ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಅನೇಕ ಶರಣ ಶ್ರೇಷ್ಠರ ಸಮಕಾಲೀನಳಾಗಿ, ಅವರೆಲ್ಲರ ಸಮಕ್ಕೆ ನಿಂತು ಶ್ರೇಷ್ಠ ವಚನಗಳನ್ನು ರಚಿಸಿದ ಕನ್ನಡದ ಪ್ರಥಮ ಕವಯಿತ್ರಿಯಾಗಿ ಅಕ್ಕಮಹಾದೇವಿಯ ಹೆಸರು ಸದಾ ಚಿರಸ್ಥಾಯಿಯಾಗಿದೆ. ಇಂತಹ ಶ್ರೇಷ್ಠ ಮಹಿಳೆಯನ್ನು ಸ್ಮರಿಸುವದು ಅಗತ್ಯವಾಗಿದೆ ಎಂದು ಹೇಳಿದರು.

ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನತೆ ಎಲ್ಲ ಕ್ಷೇತ್ರಗಳಲ್ಲಿ ಸಿಗಬೇಕು ಎಂದು 12ನೇ ಶತಮಾನದಲ್ಲಿಯೇ ಗಟ್ಟಿಯಾಗಿ ಬಿಂಬಿಸುವ ಕಾರ್ಯ ಮಾಡಿದ್ದಾರೆ. ಅಕ್ಕ ಮಹಾದೇವಿ ಮಹಿಳೆಯರ ಬದುಕಿನ ಆದರ್ಶವಾಗಿದ್ದಾರೆ ಎಂದರು.

ಈ ವೇಳೆ ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರತ್ನಾ ಕರ್ಕಿ, ಪ್ರಿಯಾ ಕುಂಬಿ, ನಂದಾ ಧರ್ಮಾಯತ, ಲಕ್ಷ್ಮಿ ಕೆರಿಮನಿ, ವಿನುತಾ ಅರಳಿ, ಮಹಾನಂದ ಕೊಣ್ಣೂರ, ಶೋಭಾ ವಡಕಣ್ಣವರ, ಶಾಂತಾ ಅಬ್ಬಿಗೇರಿ, ಗೌರಮ್ಮ ಸಂಗಪಟ್ಟಶೆಟ್ಟರ, ವಿದ್ಯಾ ಗಾಂಜಿ, ಗೌರಮ್ಮ ಯಳಮಲಿ, ಶ್ವೇತಾ ಕೊಣ್ಣೂರ ಸೇರಿ ಹಲವರಿದ್ದರು.

ನೇಹಾ ಹತ್ಯೆ ಖಂಡಿಸಿ ರಾಜ್ಯಪಾಲರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯಲ್ಲಿ ಶ್ರೀರಾಮ ಸೇನೆಯ ತಾಲೂಕಾ ಘಟಕದ ವತಿಯಿಂದ ರಾಜ್ಯದಲ್ಲಿ ಸಾಲು ಸಾಲು ಹಿಂದೂಗಳ ಮೇಲೆ ಬರ್ಬರ ಕೊಲೆ, ದಾಳಿ ಖಂಡಿಸಿ ಕುಸಿದು ಬಿದ್ದ ಕಾನೂನು ಸುವ್ಯವಸ್ಥೆಯನ್ನು ಖಂಡಿಸಿ, ರಾಜ್ಯದಲ್ಲಿ ರಾಷ್ಟçಪತಿ ಆಡಳಿತಕ್ಕೆ ಆಗ್ರಹಿಸಿ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ವಾಸುದೇವ ಜಾಧವ, ಹುಬ್ಬಳ್ಳಿಯಲ್ಲಿ ಬಿವಿಬಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಡುಹಗಲೇ ಫಯಾಜ್‌ನಿಂದ ಬರ್ಬರ ಹತ್ಯೆ, ದಾವಣಗೆರೆ ಜಿಲ್ಲೆ ನಲ್ಲೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂರಿಂದ 3 ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ, ಚಿತ್ರದುರ್ಗದಲ್ಲಿ ಸಹ ಉದ್ಯೋಗಿ ಹಿಂದೂ ಯುವಕ ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟಿದ್ದಕ್ಕೆ ಮುಸ್ಲಿಂ ಗೂಂಡಾಗಳಿಂದ ಹಿಗ್ಗಾಮುಗ್ಗಾ ಥಳಿತ, ಬೆಂಗಳೂರು ವಿದ್ಯಾರಣ್ಯಪುರದಲ್ಲಿ ಜೈಶ್ರೀರಾಮ ಘೋಷಣೆ ಕೂಗಿದ ಹಿಂದೂಗಳ ಮೇಲೆ ಮುಸ್ಲಿಂರಿಂದ ಆಕ್ರಮಣ, ಮೈಸೂರು, ಮತ್ತು ಬಾಗಲಕೋಟಿಯಲ್ಲೂ ಸಹ ಮುಸ್ಲಿಂರಿಂದ ದಾಳಿ ನಡೆಯುತ್ತಿದೆ. ಕೂಡಲೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದರು.

ಪವನ ಕುರಿ, ಸಂತೋಷ ಪರಬತ, ಮಾರುತಿ ಹಾದಿಮನಿ, ಜಗದೀಶ ಸಿಂಧೆ, ಪ್ರದೀಪ ಕಟ್ಟೇಕಾರ, ಬಸವರಾಜ ಹದ್ಲಿ ಮುಂತಾದವರು ಉಪಸ್ಥಿತರಿದ್ದರು.

ತಾಯಿಯ ಸ್ಥಾನಕ್ಕೆ ಯಾರೂ ಸಾಟಿಯಿಲ್ಲ : ಬಸವರಾಜ ಹೊರಟ್ಟಿ

0
ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಯಾವ ದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆದಿರುತ್ತಾರೋ ಆ ದೇಶ ಅಭಿವೃದ್ಧಿ ಪಥದತ್ತ ಸಾಗುವುದು ನಿಶ್ಚಿತ. ಜೊತೆಗೆ ಆ ದೇಶದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆಯೊಂದಿಗೆ ಎಲ್ಲ ಸೌಭಾಗ್ಯಗಳನ್ನು ಕಾಣಲು ಸಾಧ್ಯ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಸ್ಮರಣೆಗಾಗಿ ಸ್ಥಾಪಿಸಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಜಂಗಮ ಪುಂಗವ ಅಲ್ಲಮ ಪ್ರಭುಗಳ, ಅಕ್ಕಮಹಾದೇವಿ ಜಯಂತಿ ಮತ್ತು ಶ್ರೀಮಠದ 9ನೇ ಪೀಠಾಧಿಪತಿಗಳ 57ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಿ, ಕಳೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 101ನೇ ಸ್ಥಾನ ಗಳಿಸಿದ ಹಾಗೂ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಮುಧೋಳ ಗ್ರಾಮದ ಸೌಭಾಗ್ಯ ಬೀಳಗಿಮಠ ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಿ ಮಾತನಾಡಿದರು.
ಒಬ್ಬ ತಾಯಿ ಮನೆಯಲ್ಲಿದ್ದರೆ ನೂರು ಶಾಲೆಗಳನ್ನು ತೆರೆದಷ್ಟು ಮಕ್ಕಳು ಸಂಸ್ಕಾರವಂತರಾಗುತ್ತಾರೆ. ತಾಯಿ ದೇವರಾಗಬಹುದು. ಆದರೆ ದೇವರು ತಾಯಿಯಾಗಲು ಸಾಧ್ಯವಿಲ್ಲ. ಈ ಸ್ಥಾನಕ್ಕೆ ಯಾರೂ ಸಮನಲ್ಲ.
ನಮ್ಮನ್ನು ಹೊತ್ತು, ಹೆತ್ತು, ಸಾಕಿ, ಸಲುಹಿ ದೊಡ್ಡವರನ್ನಾಗಿ ಮಾಡಿದ ನಮ್ಮ ತಂದೆ-ತಾಯಿಯವರನ್ನು ನೋಯಿಸದೇ ಅವರ ಕೊನೆಗಾಲದಲ್ಲಿ ಪ್ರೀತಿ, ವಿಶ್ವಾಸ, ಗೌರವ ಆದರಾತಿಥ್ಯಗಳಿಂದ ನೋಡಿಕೊಳ್ಳಬೇಕು.
ಮಹಿಳೆಯರು ಸಬಲರಾದರೆ ಸದೃಢ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಅಂತಹ ಸಾಧನೆ ಮಾಡಿದ ಸೌಭಾಗ್ಯ ಬೀಳಗಿಮಠ ಹಾಗೂ ಲತಾ ಮಲ್ಲಿಕಾರ್ಜುನ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಮಾದರಿಯಾಗಿದ್ದಾರೆ.
ಇವರ ಸಾಧನೆಯನ್ನು ಗೌರವಿಸಲು ಅವ್ವ ಸೇವಾ ಟ್ರಸ್ಟ್ ಬಳಗಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಶಶಿ ಸಾಲಿ, ನಿವೃತ್ತ ಪ್ರಾಚಾರ್ಯ ಕರಿಭರಮಗೌಡರ, ಡಾ.ಬಸವರಾಜ ಧಾರವಾಡ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಳವಂಡಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಕರಬಸಪ್ಪ ಹಂಚಿನಾಳ, ಆರ್.ಬಿ. ಡಂಬಳಮಠ, ವೀರನಗೌಡ ಗುಡದಪ್ಪನವರ, ಆರ್.ಎಲ್. ಪೊಲೀಸ್‌ಪಾಟೀಲ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಸ್.ಪಿ. ನಿಂಬಿಮಠ, ಎಮ್.ಎಸ್. ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಇನಾಮತಿ ನಿರೂಪಿಸಿದರು.
ಸಾನ್ನಿಧ್ಯ ವಹಿಸಿದ್ದ ಜ.ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠ ಸದಾ ಸಮಾಜಮುಖಿಯಾಗಿ ಸೇವೆ ಮಾಡುವ ಮೂಲಕ ಸಮಾಜದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದೆ.
ವಿಶೇಷವಾಗಿ ಕಳೆದ 2 ವರ್ಷಗಳಿಂದ ಮಾತೋಶ್ರೀ ಗುರಮ್ಮ ಶಿವಲಿಂಗಪ್ಪ ಹೊರಟ್ಟಿಯವರ ಹೆಸರಿನಲ್ಲಿ ವಿಶೇಷ ಶಿವಾನುಭವ ಆಚರಿಸುತ್ತಿರುವುದು ನಮಗೂ, ನಮ್ಮ ಮಠಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಿದರು.

ರಾಯರ ಸಂಕಲ್ಪದಂತೆ ಕಿರಟಗೇರಿ ಸುಕ್ಷೇತ್ರವಾಗಲಿದೆ

0
ವಿಜಯಸಾಕ್ಷಿ ಸುದ್ದಿ, ಗದಗ : ಕಿರಟಗೇರಿ ಗ್ರಾಮಸ್ಥರ ಹಾಗೂ ರಾಘವೇಂದ್ರ ಸ್ವಾಮಿಗಳ ಭಕ್ತರ ಸದಿಚ್ಛೆಯಂತೆ ಗದಗ ತಾಲೂಕಿನ ಕಿರಟಗೇರಿ ಗ್ರಾಮ ಪವಾಡದ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು ಮಂತ್ರಾಲಯದ ಪೀಠಾಧಿಪತಿಗಳಾದ 108 ಶ್ರೀ ಸುಭುದೇಂದ್ರ ಶ್ರೀಗಳು ಕಿರಟಗೇರಿ ಗ್ರಾಮದಿಂದ ಆಗಮಿಸಿದ್ದ ಭಕ್ತರಿಗೆ ಶ್ರೀಮಠದ ಸಂಕಲ್ಪ ತಿಳಿಸಿದರು.
ಹಲವಾರು ವರ್ಷಗಳಿಂದ ಈ ಕ್ಷೇತ್ರವನ್ನು ಸುಕ್ಷೇತ್ರ ಮಾಡುವ ಉದ್ದೇಶ ಹೊಂದಿದ ಭಕ್ತರು 400 ವರ್ಷಗಳ ಹಿಂದೆ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳು ಕಿರಟಗೇರಿ ಗ್ರಾಮಕ್ಕೆ ಆಗಮಿಸಿ, ದೇಸಾಯಿ ಮನೆತನದ ಮಗು ಅಪಮೃತ್ಯುವಿಗೆ ಈಡಾದ ಸಂದರ್ಭದಲ್ಲಿ ಶ್ರೀಗಳು ಮಂತ್ರಾಕ್ಷತೆ ಮೂಲಕ ಮಗುವಿಗೆ ಪುನರ್ಜನ್ಮ ನೀಡಿದ ಘಟನೆಯನ್ನು ಸ್ಮರಿಸುತ್ತಿದ್ದರು. ವೆಂಕಣ್ಣ ದೇಸಾಯಿಯವರು ತಮಗೆ ಆದ ಸಂತೋಷಕ್ಕೆ ಕಿರಟಗೇರಿ ಗ್ರಾಮವನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳಿಗೆ ಉಂಬಳಿ (ಭಕ್ಷೀಸ) ನೀಡಿದ್ದನ್ನು ನೆನೆಪಿಸುತ್ತಾ, ಮಂತ್ರಾಲಯಕ್ಕೆ ಭೇಟಿ ನೀಡಿದ ಭಕ್ತರು ಶ್ರೀಗಳಿಗೆ ಇಲ್ಲಿ ಸಹ ಜಾಗೃತ ಕ್ಷೇತ್ರ ಮಾಡಲು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಆಸಕ್ತಿ ವಹಿಸಿದ್ದ ಸುಭುದೇಂದ್ರ ತೀರ್ಥರು ಕಿರಟಗೇರಿ ಗ್ರಾಮಕ್ಕೆ ಆಗಮಿಸಿ, ಗುರು ರಾಘವೇಂದ್ರ ಸ್ವಾಮಿಗಳ ಪಾದಸ್ಪರ್ಶವಾದ ಈ ಕ್ಷೇತ್ರವನ್ನು ಸುಕ್ಷೇತ್ರ ಮಾಡುವ ಸಂಕಲ್ಪದೊಂದಿಗೆ ಆಶೀರ್ವದಿಸಿದ್ದರು.
ಕಿರಟಗೇರಿ ಗ್ರಾಮದ ಮಹೇಶಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ, ಕಲ್ಮೇಶ್ವರಯ್ಯ ಹಿರೇಮಠ, ಶ್ರೀನಿವಾಸ ಹುಬ್ಬಳ್ಳಿ ಮುಂತಾದವರಿದ್ದರು.
ಇನ್ನು ಕೆಲವೇ ದಿನಗಳಲ್ಲಿ ಕಿರಟಗೇರಿ ಸುಕ್ಷೇತ್ರಕ್ಕೆ ಆಗಮಿಸಿ, ಶೀಘ್ರದಲ್ಲಿ ದೇಸಾಯಿ ವಾಡೆಯಲ್ಲಿ ಮತ್ತೆ ಹೊಸರೂಪದೊಂದಿಗೆ ರಾಘವೇಂದ್ರ ಸ್ವಾಮಿಗಳ ಇಚ್ಛಾನುಸಾರ ಭಕ್ತರಿಗೆ ಸಕಲ ಕಷ್ಟ ಪರಿಹಾರಾರ್ಥವಾಗಿ ಪ್ರಾಣ ಪ್ರತಿಷ್ಠೆಯೊಂದಿಗೆ ಎಲ್ಲರ ಸಹಕಾರ ಪಡೆದು ಶ್ರೀಮಠದಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶ್ರೀಗಳು ಆಶೀರ್ವಾದ ಮೂಲಕ ತಿಳಿಸಿದರು.

ಅಕ್ಕನ ಬಳಗದಲ್ಲಿ ನಾಲ್ಕನೇ ದಿನದ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಅಕ್ಕನ ಬಳಗದಲ್ಲಿ ಅಕ್ಕನ ಜಯಂತಿ ಉತ್ಸವದ ಅಂಗವಾಗಿ 4ನೇ ದಿನವಾದ ಮಂಗಳವಾರ ಅಕ್ಕಮಹಾದೇವಿಯನ್ನು ತೊಟ್ಟಲಿಗೆ ಹಾಕಿ ಹೆಸರಿಡುವ ಹಾಗೂ ಮುತ್ತೈಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಉಡಿ ತುಂಬುವ ಸೇವೆಯನ್ನು ಅನುಪಮಾ ಅಮರೇಶ್ವರ ಮಾಳೆಕೊಪ್ಪಮಠ ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಅನ್ನಪೂರ್ಣ ಮಾಳೆಕೊಪ್ಪಮಠ, ಕಾರ್ಯದರ್ಶಿ ರೇಣುಕಾ ಎಲ್.ಅಮಾತ್ಯ, ಖಜಾಂಚಿ ಜಯಲಕ್ಷ್ಮಿ ವಿ.ಬಳ್ಳಾರಿ, ಟ್ರಸ್ಟಿಗಳಾದ ನಾಗರತ್ನ ಹುಬ್ಬಳ್ಳಿಮಠ, ಗೀತಾ ಮಾನ್ವಿ, ಶಶಿರೇಖಾ ಶಿಗ್ಲಿಮಠ, ಶಾರದಾ ಹಿರೇಮಠ, ಶಾಂತ ಸಂಕನೂರು, ಶಿವಲೀಲಾ ಕುರುಡಗಿ, ಸದಸ್ಯರಾದ ಪ್ರೀತಿ ಶಿವಪ್ಪನಮಠ, ಮಂಗಳ ನಲವತವಾಡಮಠ, ಶಿವಲೀಲಾ ಅಕ್ಕಿ, ಸುವರ್ಣ ಹೊಸಂಗಡಿ, ವಿದ್ಯಾ ತಡಿ. ಮಹಾಂತ ಹಿರೇಮಠ, ಖುಷಿ ಮುದೇಗಣ್ಣವರ, ಶಿವಲೀಲಾ ಹಿರೇಮಠ, ಶೋಭಾ ಪಟ್ಟಣಶೆಟ್ಟಿ, ಮಾಧುರಿ ಮಳೆಕೊಪ್ಪ, ಸುಜಾತ ಬಳ್ಳಾರಿ, ಕಮಲ ಭೂಮಾ, ಗಿರಿಜಾ ನಲವತವಾಡಮಠ, ಮಂಜುಳಾ ಹುಬ್ಬಳ್ಳಿಮಠ, ಪ್ರಭಾವತಿ ಯಳಮಲಿ ನಿರ್ಮಲ ಹುಬ್ಬಳ್ಳಿಮಠ, ಸುಜಾತಾ ಬಳ್ಳಾರಿ, ಲತಾ ಪತ್ತಾರ, ಶಿವಲೀಲಾ ಹಿರೇಮಠ ಶಕುಂತಲಾ ಉಪಸ್ಥಿತರಿದ್ದರು.

ಸಂಭ್ರಮದ ಹನುಮ ಜಯಂತಿ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಬ್ರಾಹ್ಮಣ ಸಮಾಜ ಸೇವಾ ಸಮಿತಿ ವತಿಯಿಂದ ಮಂಗಳವಾರ ಇಲ್ಲಿನ ಹಿರೇಬಜಾರದ ಮಾರುತಿ ದೇವರ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ತೊಟ್ಟಿಲೋತ್ಸವ, ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.

ಸ್ಥಳೀಯ ಹಿರೇಅಗಸಿ ಬಳಿಯ ಹನುಮಾನ ದೇಗುಲದಲ್ಲಿ ಬೆಳಿಗ್ಗೆ ಹನುಮಾನ ಮೂರ್ತಿಗೆ ಪಂಚಾಮೃತ ಅಭಿಷೇಕ, ಚಂದನ ಅಭಿಷೇಕ ನೆರವೇರಿಸಿದರು. ವಿವಿಧ ಪರಿಮಳ ಪುಷ್ಪ, ವೀಳ್ಯದೆಲೆ ಹಾಗೂ ಚಿನ್ನದ ಆಭರಣಗಳಿಂದ ಶೃಂಗರಿಸಲಾಗಿತ್ತು. ಬಳಿಕ ಆಂಜನೇಯನ ಪಾಲಕಿ ಉತ್ಸವ ನಡೆಯಿತು. ದಿನಪೂರ್ತಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಿಗ್ಗೆಯಿಂದಲೇ ಮಕ್ಕಳು, ಮಹಿಳೆಯರು ತಂಡೋಪತಂಡವಾಗಿ ಹನುಮಂತ ದೇಗುಲಕ್ಕೆ ಆಗಮಿಸಿ ಹಣ್ಣು, ಕಾಯಿ, ಕರ್ಪೂರ ಅರ್ಪಿಸಿ ದೇವರ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ರಘುನಾಥ ತಾಸಿನ, ಕೆ.ಸತ್ಯನಾರಾಯಣಭಟ್ಟ, ಶಶಿಧರ ಕುಲಕರ್ಣಿ, ಎಂ.ವಿ. ನಾಡಗೇರ, ರವಿ ಕುಲಕರ್ಣಿ, ಶಾರದಾ ತಾಸಿನ, ಸಂಧ್ಯಾ ಕುಲಕರ್ಣಿ, ರಾಧಾ ಉಟಗಿ, ಸವಿತಾ ಕೊಡಗಾನೂರ, ಲಕ್ಷ್ಮಿದೇವಿ ಕುಲಕರ್ಣಿ, ಲತಾ ರಾಜಪುರೋಹಿತ, ರಂಜಿತಾ ಕುಲಕರ್ಣಿ ಸೇರಿ ಇತರರು ಇದ್ದರು.

error: Content is protected !!