Home Blog

ಚುನಾವಣಾ ವೀಕ್ಷಕರ ಭೇಟಿ, ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸಂಬಂಧ ಚುನಾವಣಾ ಸಾಮಾನ್ಯ ವೀಕ್ಷಕರಾದ ಇ. ಶರವಣ ವೆಲ್‌ರಾಜ್ ಐಎಎಸ್, ಪೊಲೀಸ್ ವೀಕ್ಷಕರಾದ ಎಂ.ಆರ್ಶಿ ಐಪಿಎಸ್, ವೆಚ್ಚ ವೀಕ್ಷಕರಾದ ಇಪ್ತಿಕಾರ್ ಅಹಮ್ಮದ್ ಐಆರ್‌ಎಸ್ ಅವರು ಲೋಕಸಭಾ ಚುನಾವಣಾ ಸಿದ್ಧತೆ ಸಂಬಂಧಿಸಿದಂತೆ ಮಂಗಳವಾರ ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನಿಯಂತ್ರಣ ಕೊಠಡಿ ವೀಕ್ಷಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಾಮಾನ್ಯ ವೀಕ್ಷಕ ಶರವಣ ವೆಲ್‌ರಾಜ್, ನರುಗುಂದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ವಿವರ, ಯುವ ಮತದಾರರ ಸಂಖ್ಯೆ, ಮತಗಟ್ಟೆಗಳ ವಿವರ, ಅಂಚೆ ಮತಪತ್ರ, ವಿದ್ಯುನ್ಮಾನ ಮತಯಂತ್ರ, ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಸೇರಿದಂತೆ ಹಲವು ಮಾಹಿತಿ ಪಡೆದರು.

ಪೊಲೀಸ್ ವೀಕ್ಷಕರಾದ ಎಂ.ಆರ್ಸಿ, ಲೋಕಸಭಾ ಚುನಾವಣೆಯನ್ನು ನಿಷ್ಪಕ್ಷಪಾತ ಮತ್ತು ಶಾಂತಿಯುತವಾಗಿ ನಡೆಸಬೇಕು ಎಂದರಲ್ಲದೆ, ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸೂಚಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ನರುಗುಂದ ವಿಧಾನಸಭಾ ಕ್ಷೇತ್ರದಲ್ಲಿನ ಮತದಾರರ ಸಂಖ್ಯೆ, ಯುವ ಮತದಾರರ ಸಂಖ್ಯೆ, ಮತಗಟ್ಟೆ ವಿವರ, ವಿದ್ಯುನ್ಮಾನ ಮತಯಂತ್ರ, ಭದ್ರತಾ ಕೊಠಡಿ, ಮತಗಟ್ಟೆ ಅಧಿಕಾರಿಗಳ ನಿಯೋಜನೆ, ಮೈಕ್ರೋ ವೀಕ್ಷಕರ ನೇಮಕ, ಅಂಚೆ ಮತದಾನ ಸೇರಿದಂತೆ ಲೋಕಸಭಾ ಚುನಾವಣೆ ಬಗ್ಗೆ ಮಾಹಿತಿ ನೀಡಿದರು.

ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಅಮಿನಸಾಬ್ ಅತ್ತಾರ, ನಿಯಂತ್ರಣ ಕೊಠಡಿಯ ನೋಡಲ್ ಅಧಿಕಾರಿ ಸೈಯದ್ ಸೇರಿದಂತೆ ವಿವಿಧ ವಿಭಾಗದ ನೋಡಲ್ ಅಧಿಕಾರಿಗಳು ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಚೆಕ್‌ಪೋಸ್ಟ್ಗಳ ಸಂಖ್ಯೆ, ಪೊಲೀಸರ ನಿಯೋಜನೆ ಸೇರಿದಂತೆ ಚುನಾವಣೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಜಿ.ಪಂ ಸಿಇಓ ಎಸ್.ಭರತ್ ಮಾತನಾಡಿ, ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂವಿಧಾನದ ಆಶಯಗಳನ್ನು ಮುಂದುವರೆಸಲು ಸಹಕರಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲಿನ ಬಾಲೇಹೊಸೂರ ಗ್ರಾಮದಲ್ಲಿ ಸೋಮವಾರ ಸಂಜೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಭಾಗದ ನೈಜ ಸಮಸ್ಯೆಗಳ ಅರಿವಿದೆ. ಮೂಲ ಸೌಕರ್ಯ ಒದಗಿಸುವುದಷ್ಟೇ ಅಲ್ಲದೆ, ನಿಮ್ಮ ಭಾವನೆಗಳಿಗೆ ಸ್ಪಂದಿಸುತ್ತೇನೆ. ಸರ್ವರಲ್ಲೂ ಸಮಭಾವ ಕಾಣುವ ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದೆ. ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಸಂವಿಧಾನದ ಆಶಯಗಳನ್ನು ಮುಂದುವರೆಸಲು ಸಹಕರಿಸಬೇಕು ಎಂದು ವಿನಂತಿಸಿದರು.

ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಜನಪರ ಭಾವನೆಯುಳ್ಳ ಆನಂದಸ್ವಾಮಿ ಅವರಿಗೆ ಬಾಲೇಹೊಸೂರ ಗ್ರಾಮದ ಮತದಾರರು ಅತಿ ಹೆಚ್ಚಿನ ಮತಗಳಿಂದ ಬೆಂಬಲಿಸಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಈಶ್ವರ, ಗುರುನಾಥ ದಾನಪ್ಪನವರ, ಧ್ರುವ ಹೊನ್ನಪ್ಪನವರ, ಭಾಗ್ಯಶ್ರೀ ಬಾಬಣ್ಣ, ಯಲ್ಲಪ್ಪ ಸೂರಣಗಿ, ಜಿ.ಆರ್. ಕೊಪ್ಪದ, ಶಿವಪ್ಪ ಕಬ್ಬೇರ, ಫಕ್ಕೀರೇಶ ಮ್ಯಾಟಣ್ಣವರ, ನೀಲಪ್ಪ ಸುರಸುರಿ, ಬಸವರಡ್ಡಿ ಹನುಮರಡ್ಡಿ, ಮಾರುತಿ ಕೊಳದ, ಬಸವರಾಜ ನೀಲಣ್ಣವರ, ಭರತರಾಜ ಗುಡಗೇರಿ ಉಪಸ್ಥಿತರಿದ್ದರು.

ಕಾಂಗ್ರೆಸ್ ರಾಜ್ಯ ಆಳುವ ನೈತಿಕತೆ ಕಳೆದುಕೊಂಡಿದೆ : ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ರಾಜ್ಯ ಸರ್ಕಾರ ರೈತರ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಸ್ಥಗಿತಗೊಳಿಸಿದೆ. ಬರ ಪರಿಸ್ಥಿತಿಯಲ್ಲಿ ಯಾವುದೇ ಪರಿಹಾರ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯ ಆಳುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಳವತ್ತಿ, ಮಾಗಡಿ, ಕಡಕೋಳ, ಬನ್ನಿಕೊಪ್ಪ, ಮಾಚೇನಹಳ್ಳಿ ಗ್ರಾಮಗಳಲ್ಲಿ ರೋಡ್‌ಶೋ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು.

ವಿಪಕ್ಷದವರು ಪ್ರಣಾಳಿಕೆ ಮಾಡಲಿ. ಆದರೆ, ಗ್ಯಾರಂಟಿ ಕಾರ್ಡ್ ಕೊಟ್ಟು ನಂಬಿಸಲು ಶುರುಮಾಡಿದ್ದಾರೆ. ಇದು ಕಾನೂನು ವಿರುದ್ಧ ಎಂದು ಗ್ಯಾರಂಟಿ ಕಾರ್ಡ್ ವಿರುದ್ಧ ಹರಿಹಾಯ್ದರು.

ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ಬಹಮತಕ್ಕೆ 232 ಸ್ಥಾನಬೇಕು. ಕಾಂಗ್ರೆಸ್ ಸ್ಪರ್ಧೆ ಮಾಡಿರುವುದೇ 230 ಸ್ಥಾನಗಳಿಗೆ. ಹೀಗಾಗಿ ಕಾಂಗ್ರೆಸ್ ಬಹುಮತ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆ ಕೊಟ್ಟು ಪ್ರಾಣ ಉಳಿಸಿದ್ದಾರೆ. ಅಮೇರಿಕಾ ದೇಶದಲ್ಲಿ ಒಂದು ಲಸಿಗೆ 30 ಸಾವಿರ ರೂಪಾಯಿ ಇದೆ.

ಮೋದಿಯವರು ಎಲ್ಲರಿಗೂ ಉಚಿತವಾಗಿ ಮೂರು ಬಾರಿ ಲಸಿಕೆ ಕೊಟ್ಟಿದ್ದಾರೆ. ಪ್ರಾಣ ಉಳಿಸಿದ ಅವರ ಋಣವನ್ನು ಬಿಜೆಪಿಗೆ ಮತ ಹಾಕುವ ಮೂಲಕ ತೀರಿಸಬೇಕು. ನಾನು ಈ ಕ್ಷೇತ್ರದ ಸಂಸದನಾಗಿ ಆಯ್ಕೆಯಾಗಿ ಈ ಭಾಗಕ್ಕೆ ಅನುಕೂಲವಾಗುವ ನೀರಾವರಿ ಯೋಜನೆ, ಕೈಗಾರಿಕೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ನಿಲ್ಲುತ್ತೇನೆ ಎಂದರು.

ಪ್ರಚಾರದ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

ತೋಂಟದ ಸಿದ್ದರಾಮ ಶ್ರೀಗಳಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರದ ಭಾವೈಕ್ಯತೆಯ ಮಠವಾದ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಪ್ರತಿ ವರ್ಷವೂ ಜಾತಿ-ಮತ-ಬೇಧವೆನ್ನದೆ ಎಲ್ಲಾ ಧರ್ಮದವರನ್ನು ಒಳಗೊಂಡಂತೆ ಪದಾಧಿಕಾರಿಗಳನ್ನು ನೇಮಕ ಮಾಡಿ ಜಾತ್ರೆ ನೆರವೇರಿಸುತ್ತಿರುವುದು ಭಾವೈಕ್ಯತೆಯ ಮಠ ಎಂಬ ಬಿರುದಿಗೆ ಪಾತ್ರವಾಗಿದೆ. ಅದರಂತೆ ಈ ವರ್ಷವೂ ಕೂಡ ಸಂಪ್ರದಾಯದಂತೆ ಎಸ್.ಎಸ್. ಕಳಸಾಪುರ ಅವರ ಮನೆಯಿಂದ ಜಾತ್ರಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಜುಮ್ಮಾ ಮಸ್ಜಿದ್ ಕಮಿಟಿಯ ವತಿಯಿಂದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು.

ಈ ಸಂರ್ಭದಲ್ಲಿ ಜಾಮಿಯಾ ಮಸ್ಜಿದ್ ಕಮಿಟಿಯ ಅಕ್ಬರ್‌ಸಾಬ ಬಬರ್ಚಿ, ಹಾಜಿ ಮಕಬೂಲ್‌ಸಾಬ್ ಶಿರಹಟ್ಟಿ, ಮಹಮ್ಮದ್‌ಶಫಿ ಕುದರಿ, ಹಾಜಿ ಧಾರವಾಡ, ರಿಯಾಜ್ ಬ್ಯಾಳಿರೊಟ್ಟಿ, ಇನ್ನೂ ಹಲವಾರು ಮುಸ್ಲಿಂ ಸಮಾಜದ ಗಣ್ಯರು ಉಪಸ್ಥಿರಿದ್ದರು.

ನೆನಪಿಡಿ, ಇಲ್ಲಿ ಯಾವುದೂ ಉಚಿತವಿಲ್ಲ!

0

ನಾವು ಈ ತಂತ್ರಜ್ಞಾನ ಯುಗದಲ್ಲಿ ಎಷ್ಟೆಲ್ಲ ಮುಂದುವರೆದಿದ್ದೇವೆ, ಎಂತೆಂಥಾ ಸಾಧನೆ ಮಾಡಿದ್ದೇವೆ, ಅಸಾಧ್ಯವಾದುದನ್ನೂ ಸಾಧಿಸಿ ಬೀಗುತ್ತಿದ್ದೇವೆ ಎಂಬುದು ಎಷ್ಟು ಸತ್ಯವೋ, ಇನ್ನೊಂದು ಮಗ್ಗುಲಲ್ಲಿ, ಅದೇ ತಂತ್ರಜ್ಞಾನದ ಅಪಾಯಗಳು, ಮೋಸದಾಟಗಳ ಬಗ್ಗೆ ಎಚ್ಚರಿಕೆ ಮೂಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ ಎಂಬುದೂ ಅಷ್ಟೇ ಸತ್ಯ. ಅಸಲಿಗೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಮುಖ ಅಭಿವೃದ್ಧಿಯದಾದರೆ, ಎಚ್ಚರಿಕೆಯೆಂಬುದು ಇನ್ನೊಂದು ಮುಖವೆಂದುಕೊಳ್ಳಬಹುದು. ಒಂದನ್ನೊಂದು ಎಂದಿಗೂ ಮುಖಾಮುಖಿಯಾಗುವುದಿಲ್ಲ!

ಇಂತಹ ಮೋಸದಾಟಗಳ ಬಗ್ಗೆ ವಿಷಯ ತಜ್ಞರು, ಸೈಬರ್ ಕ್ರೈಂ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಎಷ್ಟೇ ಮಾಹಿತಿ ನೀಡುತ್ತಿದ್ದರೂ ಎಚ್ಚರವಾಗುತ್ತಿಲ್ಲ. ಈ ಹಿಂದಿನ ಅದೆಷ್ಟೋ ಫ್ರೀ ಆಫರ್  ಸ್ಕ್ಯಾಮ್ ಗಳ ಸಾಲಿಗೆ ಇನ್ನೊಂದು ಸೇರ್ಪಡೆ `ಫ್ರೀ ರಿಚಾರ್ಜ್ ಆಫರ್!’ ಭಾರತದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಲೇ ಹೀಗೊಂದು ಮೆಸೇಜ್ ವಾಟ್ಸಪ್‌ನಲ್ಲಿ ಹರಿದಾಡತೊಡಗಿತು. `ಬಿಜೆಪಿಯ ಉಚಿತ ರೀಚಾರ್ಜ್ ಯೋಜನೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಭಾರತೀಯ ಬಳಕೆದಾರರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ. ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು 3 ತಿಂಗಳ ಉಚಿತ ರೀಚಾರ್ಜ್ ಪಡೆಯಿರಿ’ ಎಂಬುದೇ ಆ ಮೆಸೇಜ್.

ಮೊದಲೇ ಹೇಳಿದಂತೆ, ಇದೂ ಒಂದು ಮೋಸದ ಜಾಲವಾಗಿರಬಹುದು ಎಂಬ ಅನುಮಾನ ಎಷ್ಟೋ ಜನರಿಗೆ ಬರಲಿಲ್ಲ. ಲಿಂಕ್ ಒತ್ತಿದ್ದೇ ತಡ. ವಾಟ್ಸಪ್ ಸಂಪರ್ಕದಲ್ಲಿರುವ ಎಷ್ಟೂ ನಂಬರ್‌ಗಳಿಗೆ ನಮಗೇ ಅರಿವಿಲ್ಲದಂತೆ ಇದೇ ಮೆಸೇಜ್ ಫಾರ್ವರ್ಡ್ ಆಯಿತು. ಎಷ್ಟೋ ಫೋನ್‌ಗಳು ಹ್ಯಾಕ್ ಆದವು.

ಉಚಿತವೆಂದರೆ ನನಗೊಂದು, ಮನೆಯವರಿಗೂ ಒಂದೊಂದು ಎನ್ನುವ ಕಾಲದಲ್ಲೇ ನಾವಿನ್ನೂ ನಿಂತಿದ್ದೇವೆ. ಇದರ ಬೆನ್ನಲ್ಲೇ ಚುನಾವಣೆಗೆ ಸಂಬಂಧಿಸಿ ಇಂತದೇ ಇನ್ನೂ ಹಲವು ಸೈಬರ್ ಫಿಶಿಂಗ್ ನಡೆಯುತ್ತಿದೆ. `ನಿಮ್ಮ ವೋಟರ್ ಐಡಿ ವಿವರಗಳನ್ನು ಪರಿಶೀಲಿಸದಿದ್ದರೆ ನಿಮ್ಮ ವೋಟರ್ ಐಡಿ ನಿಷ್ಕಿçಯಗೊಳ್ಳುತ್ತದೆ. ಇದನ್ನು ತಪ್ಪಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ’ ಎಂಬ ಸಂದೇಶಗಳೂ ಓಡಾಡುತ್ತವೆ. ಕ್ಲಿಕ್ ಮಾಡಿದಾಗ ನಮಗರಿವಿಲ್ಲದಂತೆ ನಮ್ಮಲ್ಲಿರುವ ಎಲ್ಲಾ ಸಂಪರ್ಕಗಳಿಗೂ ಫಾರ್ವರ್ಡ್ ಆಗುತ್ತವೆ. ಅವರಿಂದ ಫೋನ್ ಸಂಖ್ಯೆ, ಆಧಾರ್, ವೋಟರ್ ಐಡಿ ಮತ್ತು ಇತರ ಅವರ ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಸೈಬರ್ ಕಳ್ಳರ ಪಾಲಾಗುತ್ತವೆ.

ಚುನಾವಣೆಯ ಸಮಯದಲ್ಲಿ ಇಂತಹ ಸೈಬರ್ ದಾಳಿಗಳು ಸೃಷ್ಟಿಸುವ ಸಮಸ್ಯೆ ಒಂದೆರಡಲ್ಲ. ರಾಜಕೀಯ ನಾಯಕರ ಡೀಪ್ ಫೇಕ್ ವೀಡಿಯೊಗಳು ಅಥವಾ ನಕಲಿ ಸಮೀಕ್ಷೆಯ ಫಲಿತಾಂಶಗಳನ್ನು ಮತದಾನದ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಅಥವಾ ಕೋಮುಗಲಭೆಯನ್ನು ಪ್ರಚೋದಿಸಲು ವೈರಲ್ ಆಗುತ್ತವೆ.

ಅರಿವಿಲ್ಲದ ಅಭಿಮಾನಿಗಳು, ಅನುಯಾಯಿಗಳನ್ನು ಲೂಟಿ ಮಾಡುವ ಅಥವಾ ವಂಚಿಸುವ ಉದ್ದೇಶದಿಂದ ಅವರಿಗೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ಪರವಾಗಿ ಲಿಂಕ್‌ಗಳು ಅಥವಾ ಕಿಖ ಕೋಡ್‌ಗಳೊಂದಿಗೆ ನಕಲಿ ನಿಧಿ ಸಂಗ್ರಹಿಸುವ ಮೆಸೇಜ್, ಇಮೇಲ್‌ಗಳೂ ಹರಿದಾಡುತ್ತವೆ.

ಆದರೆ, ಪ್ರಜ್ಞಾವಂತರಾದ ಮತದಾರರು, ಸಾರ್ವಜನಿಕರು ಇಂತಹ ಘಟನೆಗಳು ಕಂಡುಬಂದಲ್ಲಿ ತಕ್ಷಣ ಚುನಾವಣಾ ಆಯೋಗ ರಚಿಸಿರುವ ಸಿ-ವಿಜಿಲ್ ಅಪ್ಲಿಕೇಶನ್‌ನಲ್ಲಿ ವರದಿ ಮಾಡುವ ಅವಕಾಶವಿರುತ್ತದೆ. ಇಂತಹ ಚುನಾವಣೆ ಸಂಬಂಧಿತ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಮಾರ್ಗಗಳೂ ಇವೆ.

ಇಷ್ಟರ ಮೇಲೂ ನೀವು ಮೂಸ ಹೋಗಿದ್ದೀರೆಂಬ ಅನುಮಾನ ಬಂದರೆ, ತಕ್ಷಣ 1930 ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ, cybercrime.gov.in ವೆಬ್‌ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಚುನಾವಣಾ ಆಯೋಗ ಮತ್ತು ಆಯಾ ಸಾಮಾಜಿಕ ಮಾಧ್ಯಮ ವೆಬ್‌ಸೈಟ್, ಆ್ಯಪ್‌ನಲ್ಲಿ ವರದಿ ಮಾಡಿ ಮತ್ತು ದೂರು ನೀಡಿ. ನಿಮಗೆ ಅರಿವಿಲ್ಲದೆ ಅಪರಿಚಿತರಿಗೆ ಹಣ ವರ್ಗಾಯಿಸಿದ್ದರೆ, ಪೊಲೀಸರ ಸಹಾಯದಿಂದ ನೀವು ವರ್ಗಾಯಿಸಿದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿಸಬಹುದು ಎಂಬುದೂ ಗಮನಕ್ಕಿರಲಿ.

ಭಾವೈಕ್ಯತೆ ಸಾರಿದ ತೋಂಟದ ಜಾತ್ರೆ

0

ವಿಜಯಸಾಕ್ಷಿ ಸುದ್ದಿ, ಗದಗ : ನಾಡಿನ ಜಾತ್ರೆಗಳಲ್ಲಿಯೇ ಮಾದರಿಯ ಜಾತ್ರೆಯೆನಿಸಿದ ಐತಿಹಾಸಿಕ ಗದುಗಿನ ತೋಂಟದಾರ್ಯ ಮಹಾರಥೋತ್ಸವವು ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಮಂಗಳವಾರ ಸಂಜೆ 6.30ಕ್ಕೆ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣನವರ ಹಾಗೂ ಸಿದ್ಧಲಿಂಗೇಶ್ವರರ ಭಾವಚಿತ್ರಗಳನ್ನು, ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾವಿರಾರು ಭಕ್ತರೊಂದಿಗೆ ಎರಡು ಕಿ.ಮಿ ಉದ್ದದ ಮೆರವಣಿಗೆಯೊಂದಿಗೆ ನಡೆದು ಸಾಗಿದರು. ಪೂಜ್ಯ ಶ್ರೀ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಾರಂಗಮಠ ಶ್ರೀಶೈಲ ಹಾಗೂ ಸುಲಫಲಮಠ, ಕಲಬುರ್ಗಿ, ಪೂಜ್ಯ ಶ್ರೀ ಮ.ನಿ.ಪ್ರ. ಗುರುಮಹಾಂತ ಮಹಾಸ್ವಾಮಿಗಳು ವಿಜಯಮಹಾಂತೇಶ್ವರ ಮಠ, ಚಿತ್ತರಗಿ-ಇಲಕಲ್ಲ, ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ, ಸೊನ್ನ ಭೈರನಟ್ಟಿ, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು, ಕೆಂಚಬಸವ ಶಿವಾಚಾರ್ಯ ಸ್ವಾಮಿಗಳು ರೋಜಾ ಹಿರೇಮಠ, ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು, ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಹರ್ಲಾಪೂರದೇವರು ಮುಂತಾದ ಹರಗುರುಚರಮೂರ್ತಿಗಳು ಭಾಗವಹಿಸಿದ್ದರು.

10ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡವು.
ರಥೋತ್ಸವಕ್ಕೆ ಮುನ್ನ ಪರಂಪರೆಯಂತೆ ಶ್ರೀ ವೀರನಾರಾಯಣ ರಸ್ತೆಯಲ್ಲಿರುವ ಎಸ್.ಎಸ್. ಕಳಸಾಪೂರಶೆಟ್ರ ನಿವಾಸದಿಂದ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ಡಾ.ತೋಂಟದ ಸಿದ್ಧರಾಮ ಶ್ರೀಗಳು ಶ್ರೀಮಠಕ್ಕೆ ಆಗಮಿಸಿದರು.

ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್ ಬೇಲೂರ, ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ್, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿ ಗವಿಸಿದ್ಧಪ್ಪ ಗಾಣಿಗೇರ, ಬರಕತಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿ ತಿಮ್ಮರೆಡ್ಡಿ ಕೋನರಡ್ಡಿ, ಕೋಶಾಧ್ಯಕ್ಷ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷ ಅಜಯ ಮುನವಳ್ಳಿ, ಶ್ರೀಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ, ಎಸ್.ಎಸ್. ಪಟ್ಟಣಶೆಟ್ಟಿ, ವ್ಯವಸ್ಥಾಪಕರಾದ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ರಾಜು ಕುರಡಗಿ, ಶೇಖಣ್ಣ ಕವಳಿಕಾಯಿ, ಸದು ಮದರಿಮಠ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ರಸ್ತೆಯುದ್ದಕ್ಕೂ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದವರು ಬಸವೇಶ್ವರ ಮತ್ತು ಸಿದ್ಧಲಿಂಗೇಶ್ವರ ವಚನ ಕಟ್ಟುಗಳಿಗೆ ಹಾಗೂ ಪೂಜ್ಯರಿಗೆ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಮೆರವಣಿಗೆ ತಂಡಗಳಿಗೆ ವರ್ತಕರು ಕುಡಿಯಲು ತಂಪು ಪಾನೀಯಗಳನ್ನು ವಿತರಿಸಿದ್ದು ಐಕ್ಯತೆಯ ಸಂದೇಶವನ್ನು ಸಾರಿತು.

ಕುಮಾರ ಸ್ವೀಟ್ ಮಾರ್ಟ್ಇಂಡಸ್ಟ್ರೀಸ್ ನಲ್ಲಿ ಮಳೆ-ಗಾಳಿಗೆ ಅಪಾರ ಹಾನಿ

0

ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಪಟ್ಟಣದಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಪಟ್ಟಣದ ಹೊಳೆಆಲೂರ ರಸ್ತೆಯಲ್ಲಿರುವ ಕುಮಾರ ಸ್ವೀಟ್ ಮಾರ್ಟ್ ಇಂಡಸ್ಟ್ರೀಸ್ ಗೆ ಭಾರೀ ಪ್ರಮಾಣದ ಹಾನಿಯಾಗಿದೆ.

ಸೋಮವಾರ ಸಂಜೆ ಏಕಾಏಕಿ ಭಾರೀ ಗಾಳಿಯೊಂದಿಗೆ ಆರಂಭಗೊಂಡ ಮಳೆ ಗಂಟೆಗಳ ಕಾಲ ಸುರಿಯಿತು.

ಗಾಳಿಯೂ ಬೀಸಿದ ಪರಿಣಾಮ ಕುಮಾರ ಇಂಡಸ್ಟ್ರೀಸ್ ನ ಮೇಲ್ಚಾವಣಿ ಕಿತ್ತು ಹೋಗಿದ್ದು, ಅಂದಾಜು 8-10 ಲಕ್ಷ ರೂ.ಗಳ ಸರಂಜಾಮುಗಳು ನೀರಲ್ಲಿ ಮುಳುಗಿ ಹಾನಿ ಸಂಭವಿಸಿದೆ. ಮಳೆಯ ಆರ್ಭಟಕ್ಕೆ ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಚರಂಡಿಗಳ ನೀರು ರಸ್ತೆಗೆ ಹರಿದ ಪರಿಣಾಮ ಸುಮಾರ ನಾಲ್ಕು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು. ಮುಲ್ಲಾನ ಭಾವಿ ವೃತ್ತದಲ್ಲಿ ನೂರಾರು ವಾಹನಗಳು ಜಮಾವಣೆಗೊಂಡ ಪ್ರಯುಕ್ತ ಪ್ರಯಾಣಿಕರು ಪರದಾಡುವಂತಾಗಿದ್ದಲ್ಲದೆ ವಿದ್ಯತ್ ನಿಲುಗಡೆಯಿಂದಲೂ ಸಾರ್ವಜನಿಕರು ಪರಿತಪಿಸುವಂತಾಯಿತು.

ಮೋದಿಯವರ ಹೇಳಿಕೆ ಹತಾಶೆಯ ಪ್ರತೀಕ : ತಾಹೇರ್ ಹುಸೇನ್

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಮುಸ್ಲಿಂ ಸಮುದಾಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ದ್ವೇಷ ಭಾಷಣ ಅವರ ಹತಾಶ ಮನಸ್ಥಿತಿಯನ್ನು ಬಹಿರಂಗಪಡಿಸುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೊದಲ ಹಂತದ ಮತದಾನದ ಬಳಿಕ ಪ್ರಧಾನಿಗಳಿಗೆ ಸೋಲಿನ ವಾಸನೆ ಬಡಿದಿರಬಹುದು. ಸುಳ್ಳು ಹೇಳಿ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಧಾನಿಗಳ ಬಗ್ಗೆ ಜನರಿಗೆ ಅರಿವಾಗತೊಡಗಿದೆ. ಬೇರೆ ದಾರಿ ಕಾಣದೆ ಚುನಾವಣಾ ಪ್ರಚಾರ ಸಭೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸತೊಡಗಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ : ಈರಣ್ಣ ಪೂಜಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠಳ ಬರ್ಬರ ಹತ್ಯೆ ಖಂಡಿಸಿ ಮಂಗಳವಾರ ಪಟ್ಟಣದ ಹಾವಳಿ ಹನುಮಂತದೇವರ ದೇವಸ್ಥಾನದ ಹತ್ತಿರ ಶ್ರೀ ರಾಮಸೇನಾ ಮತ್ತು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನಾ ತಾಲೂಕ ಸಂಚಾಲಕ ಈರಣ್ಣ ಪೂಜಾರ, ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಪುಸಲಾಯಿತಿ ಮೋಸ ಮಾಡಿ ಮೃಗೀಯ ರೀತಿಯಲ್ಲಿ ಕೊಲೆ ಮಾಡುವ ಕೆಟ್ಟ ಮನಸ್ಥಿತಿಯ ದುಷ್ಕರ್ಮಿಗಳು ಹೆಚ್ಚುತ್ತಿದ್ದು, ಹಿಂದೂ ಸಮಾಜ ಭಯದಲ್ಲಿ ಬದುಕುವಂತಾಗಿದೆ. ಸರಕಾರ ಒಂದು ಸಮಾಜವನ್ನು ಓಲೈಸುವ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಸರಕಾರ ನೇಹಾ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ದುಷ್ಕರ್ಮಿ ಫಯಾಜ್‌ನನ್ನು ಕೂಡಲೇ ಗಲ್ಲಿಗೇರಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು. ಕಿರಣ ಚಿಲ್ಲೂರಮಠ, ಬಸವರಾಜ ಚಕ್ರಸಾಲಿ, ಬಸವರಾಜ ಅರಳಿ, ಮುತ್ತು, ಕರ್ಜೆಕಣ್ಣವರ, ಮಂಜುನಾಥ ಕೊಡಳ್ಳಿ, ಅರುಣ ಮೆಕ್ಕಿ, ಅಮಿತ್ ಗುಡಗೇರಿ, ಸೋಮೇಶ ಉಪನಾಳ, ಸಾಗರ ಅಳ್ಳಳ್ಳಿ, ಫಕ್ಕೀರೇಶ ಕರ್ಜೆಕಣ್ಣವರ, ನವೀನ ಕುಂಬಾರ, ಸೋಮು ಗೌರಿ, ಪ್ರಾಣೇಶ ವ್ಯಾಪಾರಿ, ವೆಂಕಟೇಶ ಕುಲಕರ್ಣಿ, ಕುಮಾರ ಕಣವಿ, ಆದೇಶ ಸವಣೂರ ಹಾಜರಿದ್ದರು.

ನಿಷ್ಪಕ್ಷಪಾತ ತನಿಖೆಯಾಗಲಿ : ವೀರಭದ್ರಯ್ಯ ಹಿರೇಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ಹಾಡಹಗಲೇ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠಳ ಭೀಕರ ಹತ್ಯೆ ಇಡೀ ರಾಜ್ಯದ ಜನತೆ ಮತ್ತು ವಿದ್ಯಾರ್ಥಿಗಳಿಗೆ ಆಘಾತ ನೀಡಿದೆ. ಈ ಕೃತ್ಯವನ್ನು ಸಾರ್ವಜನಿಕವಾಗಿ ತೀವ್ರವಾಗಿ ಖಂಡಿಸುತ್ತೇವೆ ಎಂದು ತಾಲೂಕ ಜಂಗಮ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ಹೇಳಿದರು.

ಅವರು ಮಂಗಳವಾರ ಪಟ್ಟಣದಲ್ಲಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಇದರಲ್ಲಿ ಯಾವುದೇ ರಾಜಕೀಯ, ಜಾತಿಯ ಬಣ್ಣ ಬಳಿಯದೆ ನಿಷ್ಪಕ್ಷಪಾತ ತನಿಖೆ ಕೈಗೊಂಡು ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡುವದು ಅವಶ್ಯವಾಗಿದೆ. ನೇಹಾ ಹಿರೇಮಠ ಅವರ ಕುಟುಂಬದ ದುಃಖದಲ್ಲಿ ಇಡೀ ರಾಜ್ಯದ ಜನತೆ ಇದೆ. ನಿರಂಜನ ಹಿರೇಮಠ ಅವರ ಕುಟುಂಬಕ್ಕೆ ನ್ಯಾಯ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.

ಈ ವೇಳೆ ಶಿವಯೋಗಿ ಗಡ್ಡದೇವರಮಠ, ರವಿ ಪುರಾಣಿಕಮಠ, ಎಂ.ಕೆ. ಕಳ್ಳಿಮಠ, ಮಹೇಶ್ವರಯ್ಯ ಹಿರೇಮಠ, ಶಿದ್ದಲಿಂಗೇಶ ಗೋಲಗೇರಿಮಠ, ಗಿರೀಶ ಕಲ್ಮಠ, ಪ್ರವೀಣ ಕುಲಕರ್ಣಿ, ಸೋಮಯ್ಯ ಕಲ್ಮಠ, ಗಂಗಾಧರ ಶಿಗ್ಲಿಮಠ, ಶಂಕ್ರಯ್ಯ ಹಿರೇಮಠ ಸೇರಿದಂತೆ ಸಂಘದ ತಾಲೂಕಿನ ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು. ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು.

error: Content is protected !!