Home Blog

ಗದಗ ಜಿಲ್ಲೆಯಲ್ಲಿ ಅಬ್ಬರದ ಮಳೆ, ಸಿಡಿಲು ಬಡಿದು ಎತ್ತು, ಎಮ್ಮಿ ಸಾವು, ರೈತ ಕುಟುಂಬದ ಆಕ್ರಂದನ..! ಬೆಟಗೇರಿ ರೈಲ್ವೆ ಬ್ರಿಡ್ಜ್ ಜಲಾವೃತ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ/ಗದಗ

ಶನಿವಾರ ಮುಂಜಾನೆ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಸಿಡಿಲು, ‌ಗುಡುಗು ಸಮೇತ ಮಳೆ ಸುರಿದು ಅನಾಹುತ ಸೃಷ್ಟಿಸಿದೆ.

ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಬ್ಬರದ ಮಳೆ ಸುರಿದಿದ್ದು, ಸಿಡಿಲು ಬಡಿದು ಮುಂಡರಗಿ ತಾಲೂಕಿನ ಕೆಲೂರು ಗ್ರಾಮದಲ್ಲಿ ಎಮ್ಮಿ ಹಾಗೂ ಎತ್ತು ಮೃತಪಟ್ಟಿದೆ.

ರೈತ ಶಂಕ್ರಪ್ಪ ಸೋಂಪುರ ಅವರಿಗೆ ಸೇರಿದ ಎತ್ತು, ಹನಮಪ್ಪ ಕೊಂಚಿಗೇರಿ ಎಂಬುವವರಿಗೆ ಸೇರಿದ ಎಮ್ಮಿ ಮೃತಪಟ್ಟಿದ್ದು, ಎರಡು ರೈತ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೀತಿಯಿಂದ ಸಾಕಿದ ಎತ್ತು ಕಳೆದುಕೊಂಡ ರೈತ ಶಂಕ್ರಪ್ಪನ ಕುಟುಂಬ ಕಂಗಾಲಾಗಿದೆ.

ಗದಗ-ಬೆಟಗೇರಿಯಲ್ಲೂ ಸಿಡಿಲು- ಗುಡುಗು‌ ಸಮೇತ ಮಳೆ ಸುರಿದಿದ್ದು, ಬೆಟಗೇರಿಯ ರೈಲ್ವೆ ಸೇತುವೆ ಜಲಾವೃತಗೊಂಡಿದೆ. ವಾಹನ ಸವಾರರು ಪರದಾಡುವಂತಾಯಿತು. ಬೆಟಗೇರಿಯ ಕುರಹಟ್ಟಿ ಪೇಟೆಯ ನೀರಿನ ಟ್ಯಾಂಕ್ ಬಳಿಯ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆಗೆ ನುಗ್ಗಿದ ನೀರು ಹೊರ ಹಾಕಲು ಜನರು ಹರಸಾಹಸ ಪಟ್ಟರು.

ಪಕ್ಷಿ ಪ್ರೇಮ ಸದಾ ಇರಲಿ : ಸುರೇಶ ಕುಂಬಾರ

0

ವಿಜಯಸಾಕ್ಷಿ ಸುದ್ದಿ, ಗದಗ : ಪಕ್ಷಿಗಳು ನಮ್ಮ ಚೈತನ್ಯಕ್ಕೆ ಹಾಗೂ ಕ್ರಿಯಾಶೀಲತೆಗೆ ಆದರ್ಶವಾಗಿವೆ. ಪಕೃತಿಯಲ್ಲಿ ಹಾರಾಡುವ ಹಕ್ಕಿಗಳಿಗೆ ನೀರು, ಕಾಳು ನೀಡಿ ಅವುಗಳ ಜೀವ ಮತ್ತು ಜೀವನಕ್ಕೆ ಸಹಕಾರ ನೀಡಬೇಕು. ಮಾನವರಾದ ನಾವು ಎಲ್ಲ ಜೀವಿಗಳ ಮೇಲೆ ದಯೆ ಹೊಂದಿರಬೇಕು ಎಂದು ಶರಣರು ಹೇಳಿದ್ದಾರೆ. ಅದರಂತೆ ಪಕ್ಷಿ ಪ್ರೇಮ ಎಂಬ ಪರಿಕಲ್ಪನೆ ವಿಭಿನ್ನವಾಗಿರುವ ಕಾರ್ಯಕ್ರಮವಾಗಿರುವದರಿಂದ ಇಂತಹ ಬಿರು ಬಿಸಿಲಿನ ತಾಪಕ್ಕೆ ಬಳಲುವ ಹಕ್ಕಿಗಳಿಗೆ ಸಹಕಾರ ನೀಡಿದರೆ ಪುಣ್ಯ ಗಳಿಸಿದಂತೆ. ಪಕ್ಷಿಗಳು ರೈತನ ಮಿತ್ರನಾಗಿದ್ದು, ಪಕ್ಷಿ ಪ್ರೇಮ ಸದಾ ಇರಲಿ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸುರೇಶ ಕುಂಬಾರ ಕರೆ ನೀಡಿದರು.

ನವರಸ ಕಲಾ ಸಂಘ ಬೆಟಗೇರಿ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ನಯನತಾರಾ ಕಲಾ ಸಂಘ, ಶ್ರೀ ಗಣೇಶ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ಬೆಟಗೇರಿ, ಭಾಗ್ಯಶ್ರೀ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಅಂತೂರ-ಬೆಂತೂರ ಇವುಗಳ ಸಹಯೋಗದಲ್ಲಿ ವಿಶ್ವ ಕಲಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ `ಪಕ್ಷಿ ಪ್ರೇಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜುನಾಥ ಹುಯಿಲಗೋಳ ಮಾತನಾಡಿ, ವಿಶ್ವಕಲಾ ದಿನಾಚರಣೆಯ ರೂವಾರಿ ಲಿಯೊನಾರ್ಡ ಡ ವಿಂಚಿ ಈ ಜಗತ್ತು ಕಂಡ ಮಹಾನ್ ಕಲಾವಿದ. ಅಂತಹ ಕಲಾವಿದನ ಜನ್ಮ ದಿನವನ್ನು ವಿಶ್ವ ಕಲಾ ದಿನಚರಣೆಯನ್ನಾಗಿ ಆಚರಿಸಲಾಗುತ್ತದೆ. ಮೊನಾಲಿಸಾ ಕಲಾಕೃತಿ ರಚಿಸಿದ ಕಲಾವಿದರ ಸ್ಮರಣೆಯಲ್ಲಿ ಪಕ್ಷಿ, ನಿಸರ್ಗವನ್ನು ಸ್ಮರಿಸಲು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವದು ಮತ್ತು ಪಕೃತಿಯ ಕುರಿತು ಕಾವ್ಯ ವಾಚನ, ಪಕ್ಷಿಗಳಿಗೆ ಕಾಳು ನೀರು ನೀಡುವ ಪರಿಕಲ್ಪನೆಯ ಕಾರ್ಯಕ್ರಮ ವಿಶೇಷವಾಗಿದೆ. ಮನುಜ ತನ್ನ ಸ್ಥಳದಲ್ಲಿ ಗಿಡ ಮರ ಬೆಳಸಿದರೆ ಪಕ್ಷಿಗಳು ಗುಡ್ಡ ಬೆಟ್ಟಗಳಲ್ಲಿ ಬೀಜ ತೆಗೆದುಕೊಂಡು ಹೋಗಿ ಬಿಡುತ್ತವೆ.

ಆದರೆ ಬೆಟ್ಟದ ಮೇಲೆ ಗಿಡ ಮರ ನೆಟ್ಟವರು ಪಕ್ಷಿಗಳೇ. ಹೀಗಾಗಿ ಬೀಜ ಪ್ರಸರಣಕ್ಕೆ ಪಕ್ಷಿಗಳು ಸಾಕ್ಷಿಯಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಮಲ ಸೇವಾ ಸಂಸ್ಥೆಯ ಅಧ್ಯಕ್ಷೆ ನಿರ್ಮಲಾ ತರವಾಡೆ, ಮನುಷ್ಯ ಸದಾ ಸತ್ಕಾರ್ಯದಲ್ಲಿ ತೊಡಗಬೇಕು. ಇಂತಹ ವಾತಾವರಣದಲ್ಲಿ ನಮಗೆ ಸಾಧ್ಯವಾದಷ್ಟು ಪ್ರಾಣಿ-ಪಕ್ಷಿಗಳಿಗೆ ಕಾಳು, ನೀರು ನೀಡುವದರಿಂದ ನಮಗೆ ಪುಣ್ಯ ಬರುತ್ತದೆ. ಈ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಲಿ ಎಂದರು.

ವೇದಿಕೆಯ ಮೇಲೆ ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ, ಪರಿಸರ ಪ್ರೇಮಿಗಳಾದ ಪ್ರಕಾಶ ಅಕ್ಕಿ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ಕವಿಯಿತ್ರಿ ಮಂಜುಳಾ ವೆಂಕಟೇಶಯ್ಯ, ರಮೇಶ ಹಾದಿಮನಿ, ಸಂಸ್ಕೃತಿ, ಶಾರದಾ ಟಿ., ವಿಶ್ವನಾಥ ಬೇಂದ್ರೆ, ಕಲಾವಿದರಾದ ಎಸ್.ಎಫ್ ಬೆನಕಣ್ಣವರ, ಜಗದೀಶ ಶೀಲವಂತ, ನಿರಂಜನ ಬಗಲಿ ಉಪಸ್ಥಿತರಿದ್ದರು.

ಕವಿಗಳಾದ ನಾಜಿಯಾ ನೂರಭಾಷಾ, ರಮಾಚಿಗಟೇರಿ, ಶಿವಲೀಲಾ ಧನ್ನಾ, ಸಂಗೀತ ಅರಳಿಕಟ್ಟಿ, ನಾಗರತ್ನಾ ಹೊಸಮನಿ, ಕೊಟ್ರೇಶ ಜವಳಿ, ಕಸ್ತೂರಿ ಕಡಗದ, ಭಾಗ್ಯಶ್ರೀ ಹುರಕಡ್ಲಿ ಪರಿಸರದ ಕುರಿತು ಕವಿತೆ ವಾಚಿಸಿದರು. ಶಿಕ್ಷಕ ಕಳಕೇಶ ಅರಕೇರಿ ಪ್ರಾರ್ಥಿಸಿದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ಜಿ.ಬಿ. ಕಲ್ಯಾಣಶಟ್ಟಿ, ದ್ಯಾಮಣ್ಣ ಉಗಲಾಟ, ಗಣೇಶ ಕಬಾಡಿ, ಧಮೇಂದ್ರ ಇಟಗಿ, ಬಸಮ್ಮ ಹಳ್ಳಿ ಕಾರ್ಯಕ್ರಮದ ಯಶಸಿಗೆ ಶ್ರಮಿಸಿದರು.

ಇಂತಹ ಬಿರು ಬಿಸಿಲಿಗೆ ಪಕ್ಷಿಗಳು ಕಾಳು ನೀರಿನ ಕೊರತೆಯಿಂದ ಬಳಲುತ್ತವೆ, ತಾಪಮಾನಕ್ಕೆ ನಲುಗುತ್ತವೆ. ಪಕ್ಷಿಗಳ ಪ್ರೇಮ ಆಮೂಲ್ಯವಾಗಿದ್ದು, ಅವುಗಳಿಗೆ ಕಾಳು, ನೀರು ಕೊಡುವ ಕಾರ್ಯ ಶ್ಲಾಘನೀಯ. ಪಕ್ಷಿಗಳ ಮೇಲಿನ ಅಕ್ಕರೆ, ಅವುಗಳ ಒಡನಾಟ ನಿಮ್ಮ ಮನಸ್ಸನ್ನು ಶಕ್ತಿಯುತವಾಗಿ ಮಾಡುತ್ತವೆ ಎಂದು ಸುರೇಶ ಕುಂಬಾರ ಅಭಿಪ್ರಾಯಪಟ್ಟರು.

ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ : ಆನಂದಸ್ವಾಮಿ ಗಡ್ಡದೇವರಮಠ

0

ವಿಜಯಸಾಕ್ಷಿ ಸುದ್ದಿ, ರಾಣೇಬೆನ್ನೂರು : ಲೋಕಸಭಾ ಚುನಾವಣೆಯ ಪ್ರಯುಕ್ತ ಪಟ್ಟಣದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ನೀಡುವಂತೆ ಮತದಾರರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಣೇಬೆನ್ನೂರು ಕ್ಷೇತ್ರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಡವರು, ಜನಸಾಮಾನ್ಯರು ಹಾಗೂ ಮಹಿಳೆಯರಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಅಪಾರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ನಮ್ಮ ಮೇಲೆ ವಿಶ್ವಾಸವಿಟ್ಟು ಮತ ಹಾಕಿದವರಿಗೆ ಋಣಿಯಾಗಿರುತ್ತೇವೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತೇವೆ ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಣೇಬೆನ್ನೂರು ಶಾಸಕರು ಪ್ರಕಾಶ್ ಕೋಳಿವಾಡ, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಶ್ರೀ ಸೋಮೇಶ್ವರ ಪಲ್ಲಕ್ಕಿ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ 7ನೇ ವರ್ಷದ `ಪುಲಿಗೆರೆ ಉತ್ಸವ’ದ ಅಂಗವಾಗಿ ಶುಕ್ರವಾರ ಪುಲಿಗೆರೆಯ ಆರಾಧ್ಯ ದೈವ ಶ್ರೀ ಸೋಮೇಶ್ವರನ ಉತ್ಸವ ಮೂರ್ತಿಯನ್ನಿರಿಸಿದ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.

ಕೊಣ್ಣೂರಿನ ರಾಯಣ್ಣ ಮಹಿಳಾ ಡೊಳ್ಳು ಮೇಳ, ನಂದಿಕೋಲು ಕುಣಿತ, ಕರಡಿ ಮಜಲು, ವಾದ್ಯಮೇಳಗಳು ಮೆರವಣಿಗೆ ರಂಗು ಹೆಚ್ಚಿಸಿದ್ದವು.

ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಸಾಗಿದ ಮೆರವಣಿಗೆ ಮಾರ್ಗದಲ್ಲಿ ಜನತೆ ಶ್ರೀ ಸೋಮೇಶ್ವರನಿಗೆ ಭಕ್ತಿಯಿಂದ ನಮಿಸಿದರು. ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಸೋಮೇಶ್ವರನ ಮೂರ್ತಿಯನ್ನಿರಿಸಿ, ಉದ್ಘೋಷಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಮುಖ್ಯ ಬಜಾರ್ ಸೇರಿ ಪ್ರಮುಖ ಪ್ರದೇಶಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಸೋಮೇಶ್ವರ ದೇವಸ್ಥಾನ ಭಕ್ತರ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ಸಿದ್ದನಗೌಡ ಬಳ್ಳೊಳ್ಳಿ, ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ರಾವ್, ಕಾಶಪ್ಪ ಮುಳಗುಂದ, ಈಶ್ವರ ಮೇಡ್ಲೇರಿ, ಜಿ.ಎಸ್. ಗುಡಗೇರಿ, ಸೋಮಣ್ಣ ತಂಡಿಗೇರ, ನೀಲಪ್ಪ ಕನವಳ್ಳಿ, ಎಂ.ಕೆ. ಕಳ್ಳಿಮಠ, ಮಲ್ಲೇಶಪ್ಪ ಕಣವಿ ಸೇರಿ ದೇವಸ್ಥಾನ ಭಕ್ತರ ಸಮಿತಿ ಸದಸ್ಯರು, ಮುಖಂಡರು, ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

`ಪುಲಿಗೆರೆ ಉತ್ಸವ’ದ ಇಂದಿನ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ : ಇಲ್ಲಿನ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ `ಪುಲಿಗೆರೆ ಉತ್ಸವ’ದಲ್ಲಿ ಏ.20ರಂದು ಉದಯರಾಗ-2 ಕಾರ್ಯಕ್ರಮದಲ್ಲಿ ಬೆಳಿಗ್ಗೆ 6 ಗಂಟೆಗೆ ಲಕ್ಮೇಶ್ವರದ ಕಲಾವಿದ ಕೃಷ್ಣ ಕ್ಷತ್ರಿಯ ಅವರಿಂದ ಶಹನಾಯಿ ವಾದನ, 7 ಗಂಟೆಗೆ ಹುಬ್ಬಳ್ಳಿಯ ಕೃತಿಕಾ ಜಂಗಿನಮಠ ಅವರಿಂದ ಬಾನ್ಸುರಿ ವಾದನ ನಡೆಯಲಿದೆ.

ಸಂಜೆ 6 ಗಂಟೆಗೆ ಬೆಂಗಳೂರಿನ ಮನೋಹರ ಪಟವರ್ಧನ ಮತ್ತು ತಂಡದವರಿಂದ ಹಿಂದೂಸ್ತಾನಿ ಗಾಯನ ನೆರವೇರಲಿದೆ. 7.30ಕ್ಕೆ ಬೆಂಗಳೂರಿನ ನಂದಿನಿ ಮೆಹ್ತಾ ಮತ್ತು ಕೆ.ಮುರಳಿ ಅವರಿಂದ ಕಥಕ್ ಕಿ ಕಾನಾಕ್ ನೃತ್ಯ ವೈಭವ ಜರುಗಲಿದೆ. ರಾತ್ರಿ 8.30ಕ್ಕೆ ಬೆಂಗಳೂರಿನ ಡಾ.ರೇಖಾ ರಾಜು ಮತ್ತು ತಂಡದವರಿಂದ ಮೋಹಿನಿಅಟ್ಟಂ ನೃತ್ಯ ಪ್ರದರ್ಶನ ನಡೆಯಲಿದೆ.

ಆಯುಷ್ ಪಾನೀಯ ಪರಿಚಯ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಧಾರವಾಡ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದಲ್ಲಿ ಆಯುಷ್ ಪಾನೀಯ ಪರಿಚಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆಯುಷ್ ನಿರ್ದೇಶನಾಲಯದ ಮಾರ್ಗಸೂಚಿಗಳನುಸಾರ ರಾಜ್ಯಾದ್ಯಂತ ಇತ್ತೀಚಿನ ದಿನಗಳಲ್ಲಿ ತಾಪಮಾನವು ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಿದ್ದು, ಈ ಬೇಸಿಗೆಯ ಸುಡು ಬಿಸಿಲಿನ ದಿನಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯಕರವಾದ ಪಾನೀಯಗಳ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಆಯುಷ್ ಪದ್ಧತಿಗಳಲ್ಲಿ ಪಾನೀಯಗಳ ಮಹತ್ವವನ್ನು ಪರಿಚಯಿಸುವ ದೃಷ್ಟಿಯಿಂದ ಆಯುಷ್ ಪಾನೀಯ ಪರಿಚಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚುನಾವಣಾ ಕೊಠಡಿಯಲ್ಲಿನ ಲೋಕಸಭಾ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಯವರಿಗೆ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸುವ ಸಾರ್ವಜನಿಕರಿಗಾಗಿ ಹಮ್ಮಿಕೊಂಡು, ಉಚಿತವಾಗಿ ಚಿಂಚಾ ಪಾನಕವನ್ನು ವಿತರಿಸಲಾಯಿತು.

ಇದರಿಂದ ವ್ಯಕ್ತಿಯ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ, ಮಲಬದ್ಧತೆಯನ್ನು ನಿವಾರಿಸುವುದು, ಬಾಯಾರಿಕೆಯನ್ನು ನೀಗಿಸುವುದು ಸೇರಿದಂತೆ ಅನೇಕ ಉಪಯೋಗಗಳಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ತಿಳಿಸಿದರು.

ಮದುವೆ ಮನೆಯಲ್ಲಿ ಮತದಾನ ಜಾಗೃತಿ

0

ವಿಜಯಸಾಕ್ಷಿ ಸುದ್ದಿ, ಗದಗ : ಪಟ್ಟಣದ ಶಾದಿಮಹಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ನದಾಫ-ಹರ್ಲಾಪೂರ ಕುಟುಂಬದ ಮದುವೆ ಸಮಾರಂಭದಲ್ಲಿ ತಾಲೂಕು ಪಂಚಾಯಿತಿಯ ಸರ್ವ ಸಿಬ್ಬಂದಿಗಳು ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ನೇತೃತ್ವದಲ್ಲಿ ಭಾಗವಹಿಸಿ ಮದುವೆ ಮಂಟಪದಲ್ಲಿಯೇ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಕಲಕೇರಿ ಗ್ರಾಮದ ಯಮನೂರಸಾಬ ಅವರ ಜೊತೆ ಜಹೀದಾಬೇಗಂ ನವಜೀವನಕ್ಕೆ ಕಾಲಿಟ್ಟರು. ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮದುವೆಗೆ ಆಗಮಿಸಿದ್ದ ಬಂಧುಗಳಲ್ಲಿ ವಧು-ವರರ ಜೊತೆ ವೇದಿಕೆಯ ಮೇಲಿನಿಂದಲೇ ಮತದಾನದ ಕುರಿತು ಜಾಗೃತಿ ಮೂಡಿಸಿದರು.

ತಾ.ಪಂ ಇಓ ವಿಶ್ವನಾಥ ಹೊಸಮನಿ ಈ ಸಂದರ್ಭದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಅವಕಾಶ ನಿಮ್ಮದಾಗಿದೆ. ಪ್ರತಿಯೊಬ್ಬರೂ ಹಕ್ಕು ಚಲಾಯಿಸಿ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವ ಯಶಸ್ವಿಗೊಳಿಸಬೇಕು. ಮತದಾನದಿಂದ ಯಾರೂ ದೂರ ಉಳಿಯಬಾರದು ಎಂದರು.

ವಧು-ವರರಿಗೆ ಹಾಗೂ ಮದುವೆಗೆ ಹಾಜರಾದವರಿಗೆ ಚುನಾವಣೆಯಲ್ಲಿ ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪಿಡಿಓ ಫಕ್ರುದ್ದೀನ್ ನಧಾಪ, ಸಂತೋಷ ಮೇಟಿ, ಅಕ್ಕಮಹಾದೇವಿ ರುದ್ರೇಶ್ವರಮಠ, ತಾ.ಪಂ ಸಿಬ್ಬಂದಿಗಳಾದ ಎಚ್.ಎಂ. ಕಾತರಕಿ, ಸಿ.ಬಿ. ಪಾಟೀಲ, ಅಶೋಕ ಅಣ್ಣಿಗೇರಿ, ಸಿದ್ದು ಮಡಿವಾಳರ, ಮೋಹನ ಹೊಂಬಳ, ಗ್ರಾ.ಪಂ ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.

ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವಕ್ಕೆ ಬಲ : ವೈಶಾಲಿ ಎಂ.ಎಲ್

0

ವಿಜಯಸಾಕ್ಷಿ ಸುದ್ದಿ, ಗದಗ : ಈ ಬಾರಿ ಜಿಲ್ಲೆಯಲ್ಲಿ ಹೊಸದಾಗಿ 26 ಸಾವಿರ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿರುವುದು ವಿಶೇಷವಾಗಿದೆ. 18 ವರ್ಷ ಪೂರ್ಣಗೊಂಡ ಅರ್ಹ ಮತದಾರರೆಲ್ಲರೂ ಮತದಾನ ಮಾಡುವುದು ಅತಿ ಮುಖ್ಯವಾಗಿದೆ. ಪ್ರತಿ ಮತವೂ ಅಮೂಲ್ಯವಾಗಿದೆ. ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವದ ಬಲ ಹೆಚ್ಚಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮತದಾನದ ಮಹತ್ವ ಕುರಿತು ಹಮ್ಮಿಕೊಂಡಿದ್ದ ‘ಯುವ ಮತದಾರರಿಂದ ಮಾನವ ಸರಪಳಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

sarapali

ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿ.ಪಂ ಸಿಇಓ ಎಸ್.ಭರತ್ ಮಾತನಾಡಿ, ಮೇ 7ರಂದು ನಡೆಯುವ ಮತದಾನದಲ್ಲಿ ಅರ್ಹರೆಲ್ಲರೂ ಮತ ಚಲಾಯಿಸಬೇಕು. ಅರ್ಹರು ಮತದಾನದಿಂದ ವಂಚಿತರಾಗಬಾರದು. ಚುನಾವಣಾ ಪ್ರಕ್ರಿಯೆಯಲ್ಲಿ ಯುವಜನರು ಸಡಗರ-ಸಂಭ್ರಮದಿಂದ ತಮ್ಮ ಹಕ್ಕು ಚಲಾಯಿಸಬೇಕು. ಪ್ರತಿಯೊಂದು ಮತವೂ ಸಹ ಅತ್ಯಮೂಲ್ಯವಾಗಿದ್ದು, ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕೋರಿದರು.

ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ ಮಾತನಾಡಿ, ಯುವ ಜನರು ಯಾವುದೇ ಆಸೆ-ಆಮಿಷಗಳಿಗೆ ತುತ್ತಾಗದೇ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಇನ್ನೋರ್ವ ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಯೋಗಪಟು ಭೀಮಪ್ಪ ಯಮನಪ್ಪ ಕಬಾಡರ ಮಾತನಾಡಿ, ರಾಷ್ಟçದ ಸುಭದ್ರತೆಗೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸಬೇಕು. ಆ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಿ.ಪಂ ಉಪ ಕಾರ್ಯದರ್ಶಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ನೋಡಲ್ ಅಧಿಕಾರಿ ಸಿ.ಬಿ. ದೇವರಮನಿ, ತಾ.ಪಂ ಇಓ ಮಾಣಿಕರಾವ್ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಇತರರು ಇದ್ದರು. ಗದಗ ನಗರದ ವಿವಿಧ ಕಾಲೇಜಿನ ನೂರಾರು ಯುವ ಮತದಾರರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಚುನಾವಣೆಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 1950 ಅಥವಾ ಸಿವಿಜಲ್ ಆಪ್ ಮೂಲಕ ದೂರು ದಾಖಲಿಸಬಹುದಾಗಿದ್ದು, ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾಗಿದೆ. ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಯುವ ಮತದಾರರ ಪಾತ್ರ ಹೆಚ್ಚಿನದಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ.
– ವೈಶಾಲಿ ಎಂ.ಎಲ್.
ಗದಗ ಜಿಲ್ಲಾಧಿಕಾರಿಗಳು.

 

ಜೋಳ ಖರೀದಿ ನೋಂದಣಿ ವಿಸ್ತರಿಸಿ : ಟಾಕಪ್ಪ ಸಾತಪುತೆ

0

ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಪಟ್ಟಣದಲ್ಲಿ ಮಾರ್ಚ್ 27ರಿಂದ ಪ್ರಾರಂಭವಾಗಿದ್ದ ರೈತರ ಜೋಳ ಖರೀದಿ ನೋಂದಣಿ ಕಾರ್ಯಕ್ರಮವನ್ನು ಮುಂದುವರಿಸುವಂತೆ ಆಗ್ರಹಿಸಿ ಭಾರತಿಯ ಕಿಸಾನ್ ಸಂಘದಿಂದ ತಹಸೀಲ್ದಾರ ವಾಸುದೇವ ಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಭಾರತಿಯ ಕಿಸಾನ್ ಸಂಘದ ಅಧ್ಯಕ್ಷ ಟಾಕಪ್ಪ ಸಾತಪುತೆ, ತಾಲೂಕಿನಲ್ಲಿ ರೈತರ ಅನುಕೂಲಕ್ಕಾಗಿ ಜೋಳದ ಖರೀದಿ ಕೇಂದ್ರ ಸ್ಥಾಪಿಸಿದ್ದು ಅನುಕೂಲವಾಗಿತ್ತು. ಆದರೆ, ಪ್ರಾರಂಭದಿಂದ ಇಂದಿನವರೆಗೆ ತಾಲೂಕಿನ ಕೇವಲ 25 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.

ಏಪ್ರಿಲ್ 16ರಂದು ಸದರಿ ನೋಂದಣೆ ಕಾರ್ಯ ಸ್ಥಗಿತಗೊಂಡಿದ್ದು, ಇದರಿಂದ ರೈತರಿಗೆ ತೊಂದರೆಯಾಗಿದೆ.

ಕೂಡಲೇ ನೋಂದಣಿ ಅವಧಿ ವಿಸ್ತರಿಸುವ ಮೂಲಕ ರೈತರಿಗೆ ಅನೂಕೂಲ ಮಾಡಿಕೊಡಬೇಕು ಎಂದರು.

ಕೆಲವು ರೈತರಿಗೆ ಜಿಪಿಎಸ್ ಬಗ್ಗೆ ಮಾಹಿತಿ ಇಲ್ಲದ ಕಾರಣ ತಮ್ಮ ಹೊಲದ ಜಿಪಿಎಸ್ ಮಾಡಿಸಿಲ್ಲ. ಕಾರಣ, ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ಇಲ್ಲದ ರೈತರ ಹೊಲಗಳಿಗೆ ತೆರಳಿ ಜಿಪಿಎಸ್ ಮಾಡಿಸಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಫಕ್ಕೀರಪ್ಪ ಚಿಕ್ಕಣ್ಣನವರ, ಬಸವಣೆಪ್ಪ ಚಿಕ್ಕಣ್ಣನವರ, ಮಹಾದೇವಪ್ಪ ಹುಲಗೂರ, ಶಂಕ್ರಪ್ಪ ಅಣ್ಣಿಗೇರಿ, ಯಲ್ಲಪ್ಪ ಅಣ್ಣಿಗೇರಿ, ಬಸವರಾಜ ಸಂಬಾಜಿ, ಫಕ್ಕೀರಪ್ಪ ಮಾಳಗಿಮನಿ, ಬಸನಗೌಡ್ರ ಪಾಟೀಲ್ ಮುಂತಾದವರಿದ್ದರು.

error: Content is protected !!