ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ, ಜಿಲ್ಲಾ ಬಂಜಾರ ಸಮುದಾಯಗಳ ಸಂಘಟನೆಗಳ ಆಶ್ರಯದಲ್ಲಿ, ನಾಯಕ, ಡಾವಸಾಣ, ಕಾರಭಾರಿ ಹಾಗೂ ಪಂಚರ ನೇತೃತ್ವದಲ್ಲಿ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಅ. 6ರಂದು ಮಹಾತ್ಮ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪಾದಯಾತ್ರೆ ನಡೆಸಿ, 11 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮೋಹನದಾಸ ಅವರು ಜಾತಿಗಳನ್ನು ವಿಂಗಡಿಸುವಾಗ ಹಿಂದುಳಿದ, ಅತ್ಯಂತ ಹಿಂದುಳಿದ ಸಮುದಾಯಗಳನ್ನು ಹೆಸರಿಸಿದ್ದಾರೆ. ಆದರೆ ಮೀಸಲಾತಿ ವರ್ಗೀಕರಿಸುವಾಗ ಸ್ಪೃಶ್ಯ, ಅಸ್ಪೃಶ್ಯ ಎಂದು ಅಸಾಂವಿಧಾನಿಕ ಪದಬಳಕೆ ಮಾಡಿರುವುದರ ಹಿಂದೆ ಯಾವ ತಂತ್ರಗಾರಿಕೆ ಇದೆ ಎನ್ನುವುದನ್ನು ಅವರೇ ಬಹಿರಂಗಪಡಿಸಬೇಕು. ಇದೇ ಪದಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲೂ ಬಳಕೆ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಪರಿಶಿಷ್ಟ ಜಾತಿಗಳಲ್ಲಿ ಬರುವ ಎಲ್ಲ ಜಾತಿಗಳು ಶೋಷಿತ ಹಾಗೂ ದಮನಿತ ಸಮುದಾಯಗಳೇ ಆಗಿರುವಾಗ ನಮ್ಮನಮ್ಮಲ್ಲಿಯೇ ವಿಂಗಡಿಸುವುದು ಸರಿಯಲ್ಲ ಎಂದರು.
ಜಿಲ್ಲೆಯಲ್ಲಿ ಒಟ್ಟು 72 ತಾಂಡಾಗಳಿದ್ದು, 11 ದಿನಗಳ ಈ ಅಹೋರಾತ್ರಿ ಧರಣಿಯಲ್ಲಿ ಪ್ರತಿದಿನ ಐದು ತಾಂಡಾಗಳ ಜನ ಸರದಿಯಂತೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚಂದು ನಾಯಕ, ಶಿವಪ್ಪ ನಾಯಕ, ದೇವು ನಾಯಕ, ಶಿವಪುತ್ರ ನಾಯಕ, ಮುತ್ತಪ್ಪ ಸಂದಕದ, ಕುಬೇರಪ್ಪ ಪವಾರ, ಸುರೇಶ ಮಹಾರಾಜ್, ಮಿಠಾ ನಾಯಕ, ಸುರೇಶ ಪೂಜಾರ, ಪರಮೇಶ ಲಮಾಣಿ ಇತರರು ಉಪಸ್ಥಿತರಿದ್ದರು.
ಸರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸಿ ವರ್ಗದವರಿಗೂ ಶೇ. 6ರಷ್ಟು ಮೀಸಲಾತಿ ನೀಡಬೇಕು. ಸ್ಪೃಶ್ಯ, ಅಸ್ಪೃಶ್ಯ ಪದಬಳಕೆಯನ್ನು ಕಡತದಿಂದ ತೆಗೆದುಹಾಕಿ, ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು. ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ನೀಡಬೇಕು. ಖಾಸಗಿ ಔದ್ಯೋಗಿಕ ವಲಯದಲ್ಲೂ ಮೀಸಲಾತಿ ಕಲ್ಪಿಸಬೇಕು. ನಾಗಮೋಹನದಾಸ ವರದಿ ತಿರಸ್ಕರಿಸಬೇಕು ಎನ್ನುವ ಬೇಡಿಕೆಯೊಂದಿಗೆ ಹೋರಾಟ ಆರಂಭಿಸಲಿದ್ದೇವೆ.
– ರವಿಕಾಂತ ಅಂಗಡಿ,
ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ.


