ನಟಿ ಆಶಿಕಾ ರಂಗನಾಥ್ ಸಂಬಂದಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಪ್ರೀತಿಸಿದವನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಾಸನ ಮೂಲದ ಯುವತಿ ಅಚಲ(22) ಬೆಂಗಳೂರಿನಲ್ಲಿ ಆತ್ಮಹತ್ಯೆ ಗೆ ಶರಣಾದ ಯುವತಿಯಾಗಿದ್ದಾಳೆ.
ನವೆಂಬರ್ 21 ರಂದು ಬೆಂಗಳೂರಿನ ಪಾಂಡುರಂಗ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದು ಹತ್ತು ದಿನ ಕಳೆದರೂ ಆರೋಪಿಗಳ ಬಂಧನ ಆಗಿಲ್ಲ ಎಂದು ಯುವತಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದ ಯುವತಿ ಅಚಲ ತನ್ನ ದೂರದ ಸಂಬಂಧಿ ಮಯಾಂಕ್ ಜೊತೆ ಸ್ನೇಹ ಹೊಂದಿದ್ದರು.
ಇದೇ ವೇಳೆ ಪ್ರೀತಿಸುವುದಾಗಿ ನಂಬಿಸಿ ಸುತ್ತಾಡುತ್ತಿದ್ದ ಮಯಾಂಕ್ ಮದುವೆಗೆ ಮೊದಲೇ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದ. ಡ್ರಗ್ ಅಡಿಕ್ಟ್ ಆಗಿದ್ದ ಮಯಾಂಕ್ ಪದೇ ಪದೇ ಸಂಪರ್ಕಕ್ಕೆ ಪೀಡಿಸುತ್ತಿದ್ದ. ಇದಕ್ಕೆ ಅಚಲ ಒಪ್ಪದಿದ್ದಕ್ಕೆ ದೈಹಿಕ ಹಲ್ಲೆ ನಡೆಸಿ ಮಾನಸಿಕವಾಗಿಯೂ ಕಿರುಕುಳ ಕೊಡ್ತಿದ್ದ. ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಚಲ ತಾಯಿ ಕಣ್ಣೀರಿಟ್ಟಿದ್ದಾರೆ.
ನಟಿ ಆಶಿಕಾ ರಂಗನಾಥ್ ಮಾವನ ಮಗಳೂ ಆಗಿರುವ ಅಚಲ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ತಯಾರಿ ನಡೆಸಿದ್ದಳು. ಹೀಗಿರುವಾಗಲೇ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಮಯಾಂಕ್ ಹಾಗೂ ಆತನ ತಾಯಿ ಮೈನಾ ವಿರುದ್ಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗಳ ಸಾವಿಗೆ ಕಾರಣವಾದರನ್ನ ಕೂಡಲೆ ಬಂಧಿಸಿ ಎಂದು ಅಚಲ ಪೋಷಕರು ಆಗ್ರಹಿಸಿದ್ದಾರೆ.


