ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ನಗರದ ಶ್ರೀ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಧಾರವಾಡ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಧಾರವಾಡ, ತಾಲೂಕು ಪಂಚಾಯಿತಿ ಹುಬ್ಬಳ್ಳಿ ಹಾಗೂ ಶ್ರೀ ಮೈತ್ರಿ ಸಮಗ್ರ ವ್ಯಸನಮುಕ್ತ ಪುನರ್ವಸತಿ ಕೇಂದ್ರ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ಜಿ.ವಿ. ಓಂಕಾರಿಗೌಡ್ರ ಮಾತನಾಡಿ, ಸದೃಢ ದೇಶ ಕಟ್ಟಲು ಯುವಕರ ಕೊಡುಗೆ ಅವಶ್ಯಕವಾಗಿದೆ. ಆದರೆ ಯುವಕರು ಮಾದಕ ವಸ್ತುಗಳಿಗೆ ದಾಸರಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಾರಣ ಇಂತಹ ವ್ಯಸನಗಳಿಂದ ದೂರವಿದ್ದು, ಆರೋಗ್ಯವಂತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಫ್. ಹಿರೇಗೌಡರ ಮಾತನಾಡಿ, ಯುವ ಪೀಳಿಗೆ ಮಾರಕ ದುಶ್ಚಟಗಳಿಗೆ ದಾಸರಾಗದೇ, ನಶಾ ವಸ್ತುಗಳಿಂದ ದೂರವಿದ್ದು, ಸದೃಢವಂತರಾಗಬೇಕೆಂದು ತಿಳಿಸಿದರು. ಮೈತ್ರಿ ಸಂಸ್ಥೆಯ ಮಂಜುನಾಥ ಮುದಿಗೌಡ್ರ, ಶಿವಾನಂದ ಚೌಗಲೆ, ಕಲ್ಮೇಶ್ ಬೆಳವಾಳ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ರಂಜಿತಾ, ಶರಾವತಿ, ಕಾಲೇಜಿನ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಜರಿದ್ದರು. ಸಹ ಪ್ರಾಧ್ಯಾಪಕರಾದ ಸಿ.ಡಿ. ಜಟ್ಟೆನವರ ನಿರೂಪಿಸಿದರು. ಎಂ.ಆರ್.ಡಬ್ಲ್ಯೂ. ಮಹಾಂತೇಶ ಕುರ್ತಕೋಟಿ ವಂದಿಸಿದರು.


