ಹಾವೇರಿ:- ತಾವು ಕಷ್ಟ ಪಟ್ಟು ಹಗಲು- ರಾತ್ರಿ ಎನ್ನದೇ ರೈತರು ಬೆಳೆದ ದವಸ-ಧಾನ್ಯಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ದುರಗಪ್ಪ ಕೊರವರ, ಗಂಗಾಧರ ಕೊಕನೂರ, ಮಾಂತೇಶ ಗದಗ, ಅಮೀತ ಗೋಸಾವಿ ಹಾಗೂ ಅಭಿಷೇಕ ನರೇಗಲ್ ಬಂಧಿತರು. ಇವರುಗಳಿಂದ 10.27 ಲಕ್ಷ ರೂಪಾಯಿ ಮೌಲ್ಯದ ಜೋಳ, ಗೋವಿನಜೋಳ, ಸಾವಿ, ಗೋದಿ, ಕಡ್ಲಿ ಸೇರಿದಂತೆ ವಿವಿಧ ಧಾನ್ಯಗಳು ಹಾಗೂ ಕಳ್ಳತನಕ್ಕೆ ಬಳಸಿದ ಒಂದು ಬೊಲೆರೋ ಹಾಗೂ ಒಂದು ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಕಳ್ಳರು ಕದ್ದುಕೊಂಡು ಪರಾರಿ ಆಗುತ್ತಿದ್ದರು. ವರ್ಷವಿಡಿ ಕಷ್ಟಪಟ್ಟು ಬೆಳೆದಿದ್ದ ರೈತರಿಗೆ ದವಸ ಧಾನ್ಯಗಳನ್ನು ರಕ್ಷಣೆ ಮಾಡಿಟ್ಟುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಮಾರ್ಚ್ 8 ರಂದು ಕಳ್ಳರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೆವರಮೆಳ್ಳಳ್ಳಿ ಗ್ರಾಮದ ರೈತ ಶಂಕ್ರಪ್ಪ ದೊಡ್ಡಮನಿ ಎಂಬುವರಿಗೆ ಸೇರಿದ ದವಸ ಧಾನ್ಯಗಳನ್ನು ಕಳ್ಳತನ ಮಾಡಿದ್ದರು.
ರೈತ ಶಂಕ್ರಪ್ಪ ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅಂಶುಕುಮಾರ ಆರೋಪಿಗಳ ಪತ್ತೆಗಾಗಿ ಸವಣೂರು ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಪ್ರಕರಣದ ತನಿಖೆಗೆ ಇಳಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಳ್ಳತನ ಪ್ರಕರಣ ಪತ್ತೆಯಿಂದ ಒಟ್ಟು ಶಿಗ್ಗಾಂವಿ, ಬಂಕಾಪುರ, ಹುಲಗೂರು ಹಾಗೂ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು ಒಂಬತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.