ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಕೇಂದ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಕಳೆದ 27 ದಿನಗಳ ಅಂತರದಲ್ಲಿ ಭಾರೀ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
ದೇವಸ್ಥಾನದ ಹುಂಡಿಯಲ್ಲಿ ಭಕ್ತರಿಂದ ಒಟ್ಟು ₹2.70 ಕೋಟಿ ನಗದು, ಜೊತೆಗೆ 43 ಗ್ರಾಂ ಚಿನ್ನ ಮತ್ತು 1 ಕೆಜಿ 600 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಮಲೆ ಮಹದೇಶ್ವರನಿಗೆ ಭಕ್ತರು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ತಮ್ಮ ನಿಷ್ಠೆ ಹಾಗೂ ಭಕ್ತಿಯಿಂದ ಕಾಣಿಕೆ ರೂಪದಲ್ಲಿ ನಗದು, ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಅರ್ಪಿಸುತ್ತಾರೆ. ಈ ಬಾರಿ ನಡೆದ ಎಣಿಕೆಯಲ್ಲಿ ₹2000 ಮುಖಬೆಲೆಯ ಹತ್ತು ನೋಟುಗಳು ಸಹ ಪತ್ತೆಯಾಗಿವೆ.
ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ಎಣಿಕೆ ಪ್ರಕ್ರಿಯೆ ನಡೆದಿದ್ದು, ಪತ್ತೆಯಾದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ನಿಗದಿತ ಕ್ರಮದಲ್ಲಿ ಬ್ಯಾಂಕ್ನಲ್ಲಿ ಜಮೆ ಮಾಡುವ ಕೆಲಸ ಪ್ರಾರಂಭವಾಗಿದೆ. ಭಕ್ತರ ದೇಣಿಗೆಯಿಂದ ಮಹದೇಶ್ವರ ದೇವಸ್ಥಾನ ಆಡಳಿತಕ್ಕೆ ದೊಡ್ಡ ಪ್ರಮಾಣದ ಆದಾಯ ದೊರೆತಿದ್ದು, ಈ ಮೊತ್ತವನ್ನು ದೇವಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಯಾತ್ರಾರ್ಥಿಗಳ ಸೌಲಭ್ಯ ವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


