ಹಾವೇರಿ: ಹಾವೇರಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಸತತವಾಗಿ ಮಳೆ ಬಿದ್ದಿದ್ದರಿಂದ ಅವರು ಬೆಳೆದಿರುವ ಮೆಕ್ಕೆಜೋಳ ಹೆಸರು ಸೋಯಾಬಿನ್ ಎಲ್ಲವೂ ಕೂಡ ನಾಶವಾಗಿದೆ. ರಾಜ್ಯ ಸರ್ಕಾರ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು, ಮೆಕ್ಕೆಜೋಳ ಖರೀದಿ ಆರಂಭಿಸಬೇಕು. ಮತ್ತು ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ 3300 ರೂ ದರವನ್ನು ಜಿಲ್ಲೆಯ ರೈತರಿಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಹಾವೇರಿ ಜಿಲ್ಲೆಯಲ್ಲಿ ರೈತರು ಈಗ ಕಬ್ಬಿಗೆ ನ್ಯಾಯ ಸಮ್ಮತವಾದ ದರ ಸಿಕ್ಕಿಲ್ಲ ಹಾಗೂ ಮೆಕ್ಕೆಜೋಳ ಎಂಎಸ್ ಪಿ ಗಿಂತ ಹೆಚ್ಚು ದರದಲ್ಲಿ ಖರೀದಿ ಮಾಡಬೇಕೆಂದು ಧರಣಿ ಮಾಡುತ್ತಿದ್ದಾರೆ. ಹಾಗೂ ಬೆಳೆ ನಷ್ಟ ಸರ್ವೆಯಲ್ಲಿ ಅನ್ಯಾಯವಾಗಿದೆ ಇದುವರೆಗೂ ಬೆಳೆ ನಷ್ಟ ಪರಿಹಾರ ಬಂದಿಲ್ಲ.
ಆದ್ದರಿಂದ ಕೂಡಲೆ ಜಿಲ್ಲಾಡಳಿತ ರಾಜ್ಯ ಸರ್ಕಾರ ನಿಗದಿ ಮಾಡಿರುವ ಪ್ರತಿ ಟನ್ ಕಬ್ಬಿಗೆ 3300 ರೂ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಅನುಷ್ಠಾನ ಮಾಡಬೇಕು. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ಬೆಳೆದಿರುವುದು ಮೆಕ್ಕೆ ಜೋಳ ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುವ ಅಂದಾಜಿದೆ.
ಹೀಗಾಗಿ ದೊಡ್ಡ ಸಂಖ್ಯೆಯ ಮೆಕ್ಕೆಜೋಳ ಬೆಳೆದ ರೈತರ ರಕ್ಷಣೆಗೆ ಬರಬೇಕಿರುವುದು ರಾಜ್ಯ ಸರ್ಕಾರದ ಕರ್ತವ್ಯ ರಾಜ್ಯ ಸರ್ಕಾರ ಕೂಡಲೆ ಕೆಎಂಎಫ್ ಗೆ ಆದೇಶ ಕೊಟ್ಟು ಅವರಿಗೆ ಅವಶ್ಯವಿರುವ ಮೆಕ್ಕೆಜೋಳ ನೇರವಾಗಿ ರೈತರಿಂದ ಖರಿದಿಸಲು ಆದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತು ಕೂಡಲೇ ಮೆಕ್ಕೆಜೋಳ ಖರೀದಿ ಆರಂಭಿಸಬೇಕು ಎಲ್ಲೆಲ್ಲಿ ಸರ್ವೆ ಕಾರ್ಯ ಸರಿ ನಡೆದಿಲ್ಲ ಎಂಬ ದೂರು ಬಂದಿವೆ ಅಲ್ಲಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಮರು ಸರ್ವೆ ಮಾಡಿ ಕೂಡಲೇ ಬೆಳೆ ನಷ್ಟ ಪರಿಹಾರವನ್ನು ರಾಜ್ಯ ಸರಕಾರ ಘೋಷಣೆ ಮಾಡಲು ಆಗ್ರಹಿಸುತ್ತೇನೆ. ಈಗಾಗಲೇ ನಾನು ಕಬ್ಬಿನ ದರದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕೂಡಲೇ ಸಕ್ಕರೆ ಸಚಿವರೂ ಕೂಡ ಮಧ್ಯ ಪ್ರವೇಶ ಮಾಡಿ ಈ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.


