ಜೀವನ ಮೌಲ್ಯಗಳನ್ನು ಮರೆತರೆ ಬದುಕಿಗೆ ಬೆಲೆಯಿಲ್ಲ: ರಂಭಾಪುರಿ ಶ್ರೀ

0
Spread the love

ವಿಜಯಸಾಕ್ಷಿ ಸುದ್ದಿ, ಚನ್ನಗಿರಿ: ಸುಖ-ಸಂತೋಷದ ಬದುಕಿಗೆ ಧರ್ಮಾಚರಣೆ ಮುಖ್ಯ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಶಿವಜ್ಞಾನದ ಅರಿವು, ಆಚರಣೆ ಮುಖ್ಯ. ಜೀವನ ಮೌಲ್ಯಗಳನ್ನು ಮರೆತರೆ ಬದುಕಿಗೆ ಬೆಲೆಯಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಬುಧವಾರ ತಾಲೂಕಿನ ಕಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಒಳ್ಳೆಯ ಮಾತು ಮತ್ತು ಒಳ್ಳೆಯ ಆಚರಣೆಯಲ್ಲಿ ಬದುಕನ್ನು ಪರಿವರ್ತಿಸುವ ಶಕ್ತಿಯಿದೆ. ಧರ್ಮ ಎಂದರೆ ಉತ್ತಮ ನಡವಳಿಕೆ ಎಂದರ್ಥ. ಅರಿತು ಆಚರಿಸಿ ಬಾಳುವುದರಿಂದ ಬದುಕಿನಲ್ಲಿ ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ. ಮಾನವೀಯ ಮೌಲ್ಯಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಂಸ್ಕಾರ ಸದ್ವಿಚಾರಗಳನ್ನು ಮನವರಿಕೆ ಮಾಡಿಕೊಡುವ ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂಹಿತೆಯಲ್ಲಿ ದಶ ಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ದೇವಾಲಯಗಳು ಶ್ರದ್ಧಾ ಭಕ್ತಿ ಕೇಂದ್ರಗಳು. ದೇವಾಲಯದಲ್ಲಿ ಸ್ವಲ್ಪ ಕಾಲ ಕಳೆದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗ್ರಾಮ ಚಿಕ್ಕದಾದರೂ ಹಮ್ಮಿಕೊಂಡ ಕಾರ್ಯಕ್ರಮ ದೊಡ್ಡದಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯರು ಮಾತನಾಡಿ, ಬದುಕು ಭಗವಂತ ಕೊಟ್ಟ ಕೊಡುಗೆ. ಬದುಕಿಗೆ ಬಲ ಮತ್ತು ಸಂಸ್ಕಾರ ಕೊಡುವುದು ಗುರುವಿನ ಧರ್ಮ. ಸತ್ಯ ಶುದ್ಧವಾದ ಕಾಯಕ ಜೀವನ ಶ್ರೇಯೋಭಿವೃದ್ಧಿಗೆ ಕಾರಣವಾಗುತ್ತದೆ. ಗ್ರಾಮದ ಎಲ್ಲ ಸದ್ಭಕ್ತರು ಒಗ್ಗಟ್ಟಿನಿಂದ ಕಾರ್ಯ ಮಾಡಿರುವುದು ತಮ್ಮಲ್ಲಿ‍ ಅಡಗಿರುವ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದರು.

ರಾಮಘಟ್ಟ ರೇವಣಸಿದ್ಧೇಶ್ವರ ಶಿವಾಚಾರ್ಯರು, ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಹೊನ್ನಾಳಿ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರಾಂಪುರ ಶಿವಕುಮಾರ ಹಾಲಸ್ವಾಮಿಗಳು, ದುಗ್ಗಾವತಿ ಹಿರೇಮಠದ ವೀರಭದ್ರ ಸ್ವಾಮಿಗಳು, ಕತ್ತಲಗೆರೆ ಬೃಹನ್ಮಠದ ಹಾಲಸಿದ್ದೇಶ್ವರ ಸ್ವಾಮಿಗಳು ಪಾಲ್ಗೊಂಡಿದ್ದರು.
ಕೆ.ಎಂ. ಮಂಜಪ್ಪ, ರಾಮಸ್ವಾಮಿ, ರುದ್ರಮ್ಮ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಮಠದ ಮಹಾರುದ್ರಯ್ಯ ಸ್ವಾಗತಿಸಿದರು. ಶಿಕ್ಷಕ ಜಯಣ್ಣ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಸಡಗರ-ಸಂಭ್ರಮದಿಂದ ಜರುಗಿತು. ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು, ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಜರುಗಿತು. ನಂತರ ದೇವತಾ ವಿಗ್ರಹ ಪ್ರತಿಷ್ಠಾಪನೆ ಮಾಡಿ ಭಕ್ತ ಸಮೂಹವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತೇಜಸ್ವಿ ಪಟೇಲ ಮಾತನಾಡಿ, ಕಶೆಟ್ಟಿಹಳ್ಳಿ ಭಕ್ತಿಯ ಗ್ರಾಮ. ಇಲ್ಲಿರುವ ರೈತ ಸಮುದಾಯ ಶ್ರಮ ಜೀವಿಗಳು. ಗ್ರಾಮದ ಜನಸಂಖ್ಯೆ ಹೆಚ್ಚುತ್ತಿರುವುದರಿಂದ 12 ಎಕರೆ ಭೂಮಿಯಲ್ಲಿ ನಿವೇಶನ ವಿಂಗಡಿಸಿ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಕೊಡುವ ಯೋಜನೆ ಮಾಡುತ್ತೇವೆ ಎಂದರು.

 


Spread the love

LEAVE A REPLY

Please enter your comment!
Please enter your name here