ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ನಿಧನ; ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ

0
Spread the love

ಬೆಂಗಳೂರು: ಪರಿಸರ ಉಳಿವಿಗೆ ತಮ್ಮ ಜೀವನ ಮುಡುಪಾಗಿಟ್ಟವರು ನಮ್ಮ ಜಿಲ್ಲೆಯ ಸಾಲುಮರದ ತಿಮ್ಮಕ್ಕನವರು. ಪರಿಸರ ಉಳಿವಿಗೆ, ಜಾಗೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

Advertisement

ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, “ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ತಿಮ್ಮಕ್ಕ ಅವರದ್ದು ಮಹಾನ್ ವ್ಯಕ್ತಿತ್ವ” ಎಂದರು.

ಮರಗಳನ್ನೇ ಸ್ವಂತ ಮಕ್ಕಳೆಂದು ಬೆಳೆಸಿ ನೀರುಣಿಸಿದ ವೃಕ್ಷಮಾತೆ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಇಡೀ ಪರಿಸರವೇ ಇಂದು ದುಃಖದಲ್ಲಿ ಇರುವಂತೆ ನನಗೆ ಭಾಸವಾಗುತ್ತಿದೆ. “ಕೊಟ್ಟು ಹೋಗಬೇಕು ಅಥವಾ ಬಿಟ್ಟು ಹೋಗಬೇಕು” ಎನ್ನುವ ಮಾತಿದೆ. ಆ ಮಾತಿಗೆ ಅನ್ವಯದಂತೆ ಬದುಕಿದ ಮಹಾನ್ ತಾಯಿಗೆ ನಾನು ಶಿರಬಾಗಿಸಿ ನಮಿಸುತ್ತೇನೆ. 114 ವರ್ಷಗಳ ತುಂಬು ಜೀವನ ನಡೆಸಿ ಹೊರಟಿದ್ದಾರೆ.

ಅವರು ಬೆಳೆಸಿದ ಮರಗಳು ಸೇರಿದಂತೆ ನಮ್ಮೆಲ್ಲರಲ್ಲಿ ಅವರು ಮೂಡಿಸಿದ ಜಾಗೃತಿ ಸದಾ ಜೀವಂತವಾಗಿರಲಿದೆ. ತಿಮ್ಮಕ್ಕ ಅವರು ಕರ್ನಾಟಕದ ಹಾಗೂ ಇಡೀ ಭಾರತದ ಹೆಮ್ಮೆ. ರಸ್ತೆ ಬದಿಯಲ್ಲಿ ಕಿಲೋಮೀಟರ್ ಗಟ್ಟಲೇ ಗಿಡಗಳನ್ನು ನೆಟ್ಟು ನಿತ್ಯ ನೀರು ಹಾಕಿ ಮರಗಳಾಗುವಂತೆ ಬೆಳೆಸಿದ್ದರು. ಮಕ್ಕಳಂತೆ ನೋಡಿಕೊಂಡಿದ್ದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವೆ 4.5 ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ್ದರು. ಆ ದಾರಿಯಲ್ಲಿ ಹೋದಾಗಲೆಲ್ಲಾ ಅವರೇ ನೆನಪಾಗುತ್ತಿದ್ದರು. ಈವರೆಗೆ 8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಹೊಸ ಪೀಳಿಗೆಗೆ ಮಾದರಿಯನ್ನು ಬಿಟ್ಟು ಹೋಗಿದ್ದಾರೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here