Home Blog Page 162

ಗೋಲ್ಡ್ ಪ್ರಿಯರೇ.. ಇಂದಿನ ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ದರಪಟ್ಟಿ

0

ದೇಶದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕಂಡುಬಂದಿದ್ದ ಏರಿಳಿತಗಳು ವಾರಾಂತ್ಯದಲ್ಲಿ ಶಾಂತಗೊಂಡಿವೆ. ಈ ವಾರ ಚಿನ್ನದ ಬೆಲೆಯಲ್ಲಿ ಗ್ರಾಮ್‌ಗೆ ₹260 ಏರಿಕೆಯಾಗಿದೆ.

ವಿದೇಶಿ ಮಾರುಕಟ್ಟೆಗಳಲ್ಲಿ ಅಲ್ಪ ಮಟ್ಟಿನ ಏರಿಕೆ ಕಂಡುಬಂದಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಣಿಸಿಕೊಂಡಿದೆ. ಇತ್ತ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,320 ರೂ.
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ.
  •  

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

    • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,093 ರೂ.
    • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,835 ರೂ.
    • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ.

ಪರಪ್ಪನ ಅಗ್ರಹಾರದ ಬಳಿಕ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿಯೂ ಮೊಬೈಲ್​​ಗಳು ಪತ್ತೆ: ಎಫ್‌ಐಆರ್‌ ದಾಖಲು

0

ಹುಬ್ಬಳ್ಳಿ: ಜೈಲಿನಲ್ಲಿ ಖೈದಿಗಳಿಗೆ ರಾಜಾಥಿತ್ಯ ನೀಡಲಾಗುತ್ತಿದೆಯೇ. ಕಂಬಿಗಳ ಹಿಂದೆ ಇದ್ದರು ಮೊಬೈಲ್‌ ಬಳಸಲು ಅನುಮತಿ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಮತ್ತೊಮ್ಮೆ ಹುಟ್ಟಿಕೊಂಡಿದೆ. ಇದೀಗ ರಾಜ್ಯದ ಜೈಲು ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತೊಂದು ಅಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಉಪ ಕಾರಾಗೃಹದ ಬ್ಯಾರಕ್ ಸಂಖ್ಯೆ 8ರಲ್ಲಿ ತಪಾಸಣೆ ನಡೆಸಿದಾಗ ಸ್ಮಾರ್ಟ್‌ಫೋನ್‌ಗಳು, ಚಾರ್ಜರ್‌ಗಳು ಮತ್ತು ಕನೆಕ್ಟರ್‌ಗಳು ಪತ್ತೆಯಾಗಿವೆ. ಆದರೆ, “ಇದು ಯಾರದ್ದು?” ಎಂಬ ಪ್ರಶ್ನೆಗೆ ಯಾರೂ ಉತ್ತರಿಸದೇ ಇರುವುದೇ ಮತ್ತಷ್ಟು ಸಂಶಯ ಹುಟ್ಟಿಸಿದೆ.

ಈ ಹಿನ್ನೆಲೆಯಲ್ಲಿ ಬ್ಯಾರಕ್‌ನಲ್ಲಿದ್ದ 13 ಕೈದಿಗಳ ವಿರುದ್ಧ FIR ದಾಖಲಾಗಿದ್ದು, ಪ್ರಕರಣ ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೂ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದ ಘಟನೆ ಇನ್ನೂ ಮಾಸಿಲ್ಲ. ಜಾಮರ್ ಇದ್ದರೂ ನೆಟ್‌ವರ್ಕ್ ಸಿಗುತ್ತಿರುವುದು, ಸಿಬ್ಬಂದಿಯ ಶಾಮೀಲು ಇರುವ ಶಂಕೆ ಮೂಡಿಸಿದೆ.

ಈ ನಡುವೆ ಹುಬ್ಬಳ್ಳಿಯಲ್ಲೂ ಮೊಬೈಲ್ ಪತ್ತೆಯಾಗಿರುವುದು, “ಜೈಲುಗಳಲ್ಲಿ ರಾಜಾತಿಥ್ಯ ಮುಂದುವರಿದೇ?” ಎಂಬ ಪ್ರಶ್ನೆಯನ್ನು ಮತ್ತೆ ಎಬ್ಬಿಸಿದೆ. ಇದೀಗ ಈ ಪ್ರಕರಣ ಜೈಲು ವ್ಯವಸ್ಥೆಯ ದುರ್ಬಲತೆಗಳನ್ನು ಬಹಿರಂಗಪಡಿಸುತ್ತಿದೆ.

 

ಹುಬ್ಬಳ್ಳಿಯಲ್ಲಿ ಮತ್ತೊಂದು ಶಾಕಿಂಗ್ ಪ್ರಕರಣ: ವಿಡಿಯೋ ಬ್ಲ್ಯಾಕ್ಮೇಲ್ ಮಾಡಿ ವರ್ಷಗಳ ಕಾಲ ಯುವತಿ ಮೇಲೆ ಅತ್ಯಾಚಾರ ಆರೋಪ

0

ಹುಬ್ಬಳ್ಳಿ: ನಗರದಲ್ಲಿ ಒಂದರ ಹಿಂದೆ ಮತ್ತೊಂದು ಶಾಕ್ ನೀಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಜಿಮ್ ಟ್ರೈನರ್ ಪ್ರಕರಣದ ಬೆನ್ನಲ್ಲೇ, ಇದೀಗ ಯುವತಿಯನ್ನು ಪ್ರೀತಿಯ ನಾಟಕದಲ್ಲಿ ಸೆರೆಹಿಡಿದು, ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ವರ್ಷಗಳ ಕಾಲ ದೌರ್ಜನ್ಯ ಎಸಗಿದ ಆರೋಪ ಸ್ಫೋಟವಾಗಿದೆ.

ಮುಫೀಸ್ ಮಿಯಾನ್ನವರ್ ಎಂಬಾತ, ಕಾಲೇಜು ದಿನಗಳಲ್ಲೇ ಯುವತಿಗೆ ಪರಿಚಯವಾಗಿ, ಸ್ನೇಹವನ್ನು ಪ್ರೀತಿಯಾಗಿ ತೋರಿಸಿ ಆಕೆಯನ್ನು ನಂಬಿಸಿದ್ದಾನೆ. ನಂತರ ಗದಗ ರಸ್ತೆಯ ಬಳಿ ಕರೆದುಕೊಂಡು ಹೋಗಿ, ಯುವತಿಯ ವಿರೋಧದ ನಡುವೆಯೇ ಅತ್ಯಾಚಾರ ಎಸಗಿ, ಅದನ್ನು ವಿಡಿಯೋ ಮಾಡಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವಿಡಿಯೋವನ್ನು ಬಳಸಿಕೊಂಡು, “ಯಾರಿಗಾದರೂ ಹೇಳಿದರೆ ಜೀವ ಸಮೇತ ಬಿಡುವುದಿಲ್ಲ” ಎಂದು ಬೆದರಿಸಿ, ಹಲವು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಮುಂದುವರಿಸಿದ್ದಾನೆ ಎನ್ನಲಾಗಿದೆ.

ಇದರಷ್ಟೇ ಅಲ್ಲ, 2025ರಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಮದುವೆಗೆ ಒತ್ತಾಯಿಸಿದ ಘಟನೆ ಕೂಡ ನಡೆದಿದೆ. ಕುಟುಂಬದವರು ತಡೆದರೂ, ಆರೋಪಿ ಮನೆಗೂ ಬರುತ್ತಿದ್ದನು. ಇತ್ತೀಚೆಗೆ ಮನೆ ಖಾಲಿ ಇರುವ ಸಮಯದಲ್ಲಿ ಮತ್ತೆ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.

ಇತ್ತೀಚೆಗೆ ಬೆಳಕಿಗೆ ಬಂದ ಮತ್ತೊಂದು ಪ್ರಕರಣದಿಂದ ಧೈರ್ಯಗೊಂಡ ಯುವತಿ, ಈಗ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

IPL 2026: SRHಗೆ ಬಿಗ್ ಶಾಕ್; ಐಪಿಎಲ್ ತೊರೆದು ಆಸ್ಟ್ರೇಲಿಯಾಕ್ಕೆ ಮರಳಿದ ಪ್ಯಾಟ್ ಕಮ್ಮಿನ್ಸ್

0

ಐಪಿಎಲ್ 2026ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಿಶ್ರ ಪ್ರದರ್ಶನ ನೀಡಿದ್ದು, ಒಂದು ಸೋಲು ಮತ್ತು ಒಂದು ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದೆ.

ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದ ತಂಡ, ನಂತರದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿತು. ಆದಾಗ್ಯೂ, ತಂಡದ ಬೌಲಿಂಗ್ ವಿಭಾಗ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ.

ಈ ದುರ್ಬಲತೆಗೆ ಪ್ರಮುಖ ಕಾರಣವಾಗಿ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಅನುಪಸ್ಥಿತಿ ಕಾಣಿಸಿಕೊಂಡಿದೆ. ಗಾಯದ ಸಮಸ್ಯೆಯಿಂದಾಗಿ ಅವರು ಮೊದಲ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದ್ದರೂ, ಅವರು ತಕ್ಷಣವೇ ಆಸ್ಟ್ರೇಲಿಯಾಗೆ ಮರಳಿದ್ದಾರೆ.

ವರದಿಗಳ ಪ್ರಕಾರ, ಬೆನ್ನಿನ ಸಮಸ್ಯೆಗೆ ಸಂಬಂಧಿಸಿದ ಪರೀಕ್ಷೆಗಾಗಿ ಕಮ್ಮಿನ್ಸ್ ತಾಯ್ನಾಡಿಗೆ ತೆರಳಿದ್ದು, ಅಂತಿಮ ಸ್ಕ್ಯಾನ್ ಬಳಿಕವೇ ಅವರ ಮರಳುವಿಕೆ ನಿರ್ಧಾರವಾಗಲಿದೆ. ಫಲಿತಾಂಶಗಳು ಅನುಕೂಲಕರವಾಗಿದ್ದರೆ ಏಪ್ರಿಲ್ ಮೂರನೇ ವಾರದೊಳಗೆ ಅವರು ಮತ್ತೆ ತಂಡ ಸೇರುವ ಸಾಧ್ಯತೆ ಇದೆ.

ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಮ್ಮಿನ್ಸ್ ಕಳೆದ ಒಂದು ವರ್ಷದಿಂದ ಬೆನ್ನುನೋವಿನಿಂದ ಬಳಲುತ್ತಿದ್ದು, 2025ರ ಜುಲೈ ಬಳಿಕ ಬಹುತೇಕ ಪಂದ್ಯಗಳಿಂದ ದೂರವಾಗಿದ್ದಾರೆ. ಈ ಹಿನ್ನೆಲೆ ಅವರ ಫಿಟ್ನೆಸ್ ಬಗ್ಗೆ ತಂಡದಲ್ಲಿ ಆತಂಕ ಮೂಡಿದೆ.

ಮುಂದಿನ ಪಂದ್ಯಗಳಲ್ಲಿ ಕಮ್ಮಿನ್ಸ್ ಲಭ್ಯತೆ ತಂಡದ ಪ್ರದರ್ಶನದ ಮೇಲೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.

ಗರ್ಭಿಣಿ ಮಹಿಳೆಯರ ಗಮನಕ್ಕೆ: ಡೆಲಿವರಿ ಮೊದಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ!

0

ಗರ್ಭಧಾರಣೆಯ ಕೊನೆಯ ಹಂತ ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಅವಧಿಯಾಗಿದ್ದು, ಈ ಸಮಯದಲ್ಲಿ ಸೂಕ್ತ ಆರೈಕೆ ಅತ್ಯಗತ್ಯವಾಗಿದೆ.

ತಜ್ಞರ ಪ್ರಕಾರ, ಈ ಹಂತದಲ್ಲಿ ತಾಯಿಯ ಆರೋಗ್ಯ ನೇರವಾಗಿ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹಾರ್ಮೋನಲ್ ಬದಲಾವಣೆಗಳ ಕಾರಣ ದಣಿವು, ದುರ್ಬಲತೆ ಹಾಗೂ ಭಾವನಾತ್ಮಕ ಏರಿಳಿತಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಗರ್ಭಿಣಿಯರು ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ.

ಡಿಲಿವರಿ ಮೊದಲು ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚಿನ ಮಹತ್ವ ನೀಡಬೇಕು. ಪ್ರೋಟೀನ್, ಐರನ್ ಮತ್ತು ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವಿಸುವುದರ ಜೊತೆಗೆ ಸಾಕಷ್ಟು ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ನಿಯಮಿತ ವೈದ್ಯಕೀಯ ತಪಾಸಣೆ ಹಾಗೂ ವೈದ್ಯರು ಸೂಚಿಸಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಸೇವಿಸುವುದು ಅಗತ್ಯ. ಜೊತೆಗೆ ಲಘು ವ್ಯಾಯಾಮಗಳನ್ನು ವೈದ್ಯರ ಸಲಹೆಯಂತೆ ಮಾಡುವುದು ದೇಹವನ್ನು ಸಜ್ಜುಗೊಳಿಸುತ್ತದೆ.

ಇನ್ನೊಂದೆಡೆ, ಗರ್ಭಿಣಿಯರು ಕೆಲವು ವಿಷಯಗಳಿಂದ ದೂರವಿರುವುದು ಕೂಡ ಮುಖ್ಯ. ಹೆಚ್ಚು ಮಸಾಲೆ, ಕರಿದ ಮತ್ತು ಜಂಕ್ ಫುಡ್‌ಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಕೆಫೀನ್ ಹಾಗೂ ತಂಪು ಪಾನೀಯಗಳ ಅಧಿಕ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಭಾರವಾದ ವಸ್ತುಗಳನ್ನು ಎತ್ತುವುದು, ಹೆಚ್ಚು ಶ್ರಮದ ಕೆಲಸಗಳು ಹಾಗೂ ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸುವುದು ಅಪಾಯಕಾರಿಯಾಗಿದೆ. ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ದೂರವಿಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಾನಸಿಕ ಸಿದ್ಧತೆಯೂ ಡಿಲಿವರಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕುಟುಂಬದ ಬೆಂಬಲ ಮತ್ತು ಪಾಸಿಟಿವ್ ವಾತಾವರಣ ಗರ್ಭಿಣಿಗೆ ಆತ್ಮವಿಶ್ವಾಸ ನೀಡುತ್ತದೆ. ಮುಂಚಿತವಾಗಿ ಆಸ್ಪತ್ರೆ ಮತ್ತು ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದು, ಅಗತ್ಯ ದಾಖಲೆಗಳು ಹಾಗೂ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ. ಜೊತೆಗೆ ಡಿಲಿವರಿ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತೆರಳಲು ಸಹಾಯವಾಗುತ್ತದೆ.

ಒಟ್ಟಿನಲ್ಲಿ, ಸರಿಯಾದ ಮಾಹಿತಿ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಡಿಲಿವರಿ ಪ್ರಕ್ರಿಯೆಯನ್ನು ಸುರಕ್ಷಿತ ಹಾಗೂ ಸುಗಮವಾಗಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯಕ್ಕಿಂತ ದೇಶದ ಜನರ ಸುರಕ್ಷತೆ ಮುಖ್ಯ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

0

ನವದೆಹಲಿ: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಿರುವಲ್ಲಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಶ್ಚಿಮ ಏಷ್ಯಾದ ರಾಷ್ಟ್ರಗಳ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆಗಳು ಭಾರತಕ್ಕೆ ಹಾನಿಕಾರಕವಾಗಿವೆ ಎಂದು ಟೀಕಿಸಿದ ಅವರು, ಇಂತಹ ಹೇಳಿಕೆಗಳಿಂದ ಗಲ್ಫ್ ದೇಶಗಳಲ್ಲಿ ಭಾರತೀಯರ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಿದರು.

ರಾಜಕೀಯಕ್ಕಿಂತ ದೇಶದ ಜನರ ಸುರಕ್ಷತೆಯೇ ಮುಖ್ಯ ಎಂದು ಒತ್ತಿ ಹೇಳಿದ ಮೋದಿ, ಕೇರಳದ ಜನರ ರಕ್ಷಣೆಗೆ ತಾವು ಬದ್ಧರಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿನ ಎಲ್‌ಡಿಎಫ್ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ದಶಕಗಳ ದುರಾಡಳಿತಕ್ಕೆ ಈ ಚುನಾವಣೆಯಲ್ಲಿ ಅಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಕೇರಳದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ ಪ್ರಧಾನಿ, ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸಿಲುಕಿಕೊಂಡಿರುವ ರಾಜ್ಯದ ಜನತೆ ಈ ಬಾರಿ ಬದಲಾವಣೆಗೆ ಮತ ಹಾಕಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಅಭಿವೃದ್ಧಿ ವಿಷಯದಲ್ಲೂ ಸರ್ಕಾರಗಳನ್ನು ಟೀಕಿಸಿದ ಮೋದಿ, ರಸ್ತೆ, ಸೇತುವೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಈ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಳೆಯ ವಾಹನಗಳಿಗೆ HSRP ಕಡ್ಡಾಯ: ಸುಳ್ಳು ಸುದ್ದಿಗೆ ತೆರೆ ಎಳೆದ ಸಾರಿಗೆ ಇಲಾಖೆ!

ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ (HSRP) ಅಳವಡಿಸುವುದು ಕಡ್ಡಾಯವಾಗಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದೆ.

ಇತ್ತೀಚೆಗೆ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಲ್ಲ ಎಂಬ ತಪ್ಪು ಮಾಹಿತಿ ಹರಡಲಾಗಿತ್ತು. ಆದರೆ, ಸಾರಿಗೆ ಇಲಾಖೆಯ ಪ್ರಕಾರ 2019ರ ಏಪ್ರಿಲ್ 1ಕ್ಕೂ ಮೊದಲು ರಿಜಿಸ್ಟರ್ ಆಗಿರುವ ಎಲ್ಲಾ ವಾಹನಗಳಿಗೆ HSRP ಅಳವಡಿಸುವುದು ಕಡ್ಡಾಯವಾಗಿದ್ದು, ವಾಹನ ಮಾಲೀಕರು ತಕ್ಷಣವೇ ಈ ನಿಯಮ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.

ಕೇಂದ್ರ ಸರ್ಕಾರವು 1989ರ ಕೇಂದ್ರ ಮೋಟಾರು ವಾಹನ ನಿಯಮಗಳ 50ನೇ ವಿಧಿಯ ಪ್ರಕಾರ, ಈ ನಿಯಮವನ್ನು 2018ರಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿಯೂ ಅನ್ವಯವಾಗುತ್ತಿದೆ. ರಾಜ್ಯ ಸಾರಿಗೆ ಇಲಾಖೆ 2023ರಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿಯೂ ಇದೇ ವಿಷಯವನ್ನು ಪುನರುಚ್ಚರಿಸಿದೆ.

ಇದಲ್ಲದೆ, ಈ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಸರ್ಕಾರದ ಕ್ರಮಕ್ಕೆ ಅವಕಾಶ ನೀಡಿದ್ದು, HSRP ಅಳವಡಿಕೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ. ಯಾವುದೇ ವಿನಾಯಿತಿ ಇಲ್ಲದೆ ಎಲ್ಲಾ ಹಳೆಯ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯ ಎಂದು ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

 

ನಾಳೆ RCB ಮ್ಯಾಚ್: ಚಿನ್ನಸ್ವಾಮಿ ಸ್ಟೇಡಿಯಂನಿಂದ ಈ ಮಾರ್ಗಗಳಲ್ಲಿ ಬಿಎಂಟಿಸಿ ವಿಶೇಷ ಬಸ್ ಸಂಚಾರ!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ಹಿನ್ನೆಲೆ, ಅಭಿಮಾನಿಗಳ ಅನುಕೂಲಕ್ಕಾಗಿ ಆಯೋಜಕರು ಹಾಗೂ ಬೆಂಗಳೂರು ಪೊಲೀಸರು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಈಗಾಗಲೇ ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳ ಸಮಯ ವಿಸ್ತರಣೆ ಮಾಡಿರುವ ನಡುವೆ, ಜನಸಂದಣಿ ನಿಯಂತ್ರಣಕ್ಕಾಗಿ ಬಿಎಂಟಿಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 8 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.

ಈ ಬಸ್‌ಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (HAL ರಸ್ತೆ), ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಮಾಗಡಿ ರಸ್ತೆಯ ಜನಪ್ರಿಯ ಟೌನ್‌ಶಿಪ್, ಆರ್.ಕೆ. ಹೆಗಡೆ ನಗರ (ಯಲಹಂಕ), ಹೊಸಕೋಟೆ ಹಾಗೂ ಬನಶಂಕರಿ ಕಡೆಗಳಿಗೆ ಸಂಚರಿಸಲಿವೆ. ವಿಶೇಷ ಬಸ್‌ಗಳು ಸಿ.ಟಿ.ಒ ಜಂಕ್ಷನ್‌ನಿಂದ ಬಿ.ಆರ್.ವಿ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗದಲ್ಲಿ ನಿಲುಗಡೆಯಾಗಲಿವೆ.

ಇದರ ಜೊತೆಗೆ, ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಕೆಲವು ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭಿಮಾನಿಗಳು ಸುರಕ್ಷತಾ ಸಿಬ್ಬಂದಿಯೊಂದಿಗೆ ಸಹಕರಿಸಿ, ನಿರ್ಬಂಧಿತ ವಸ್ತುಗಳನ್ನು ತರದಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಂಶಯಾಸ್ಪದ ವಸ್ತುಗಳು ಕಂಡುಬಂದಲ್ಲಿ ಅವನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್: ಮುಂಬೈ ವಿರುದ್ಧ ಡೆಲ್ಲಿಗೆ 6 ವಿಕೆಟ್‌ಗಳ ಜಯ!

0

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 163 ರನ್ ಟಾರ್ಗೆಟ್ ನೀಡಿತು. ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 164 ರನ್ ಗಳಿಸುವ ಮೂಲಕ ಜಯ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಎರಡನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಕೇವಲ 1 ರನ್ ಗಳಿಸಿ ಔಟಾದರು. ನಿತೀಶ್ ರಾಣಾ ರನೌಟ್ ಆದರು. ಕೇವಲ 7 ರನ್‌ಗಳಿಗೆ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಆಘಾತಕ್ಕೊಳಗಾಗಿತ್ತು. ಈ ವೇಳೆ, ಪಾತುಮ್ ನಿಸ್ಸಾಂಕ 30 ಎಸೆತಗಳಿಗೆ 4 ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿ ಒಟ್ಟು 44 ರನ್ ಕಲೆಹಾಕಿ, ತಂಡಕ್ಕೆ ಚೇತರಿಗೆ ನೀಡಿತು. ಸಮೀರ್ ರಿಜ್ವಿ 51 ಬಾಲ್‌ಗೆ 90 ರನ್ ಗಳಿಸಿ (7 ಫೋರ್ ಮತ್ತು 7 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಿಮಗೂ ಥೈರಾಯ್ಡ್ ಸಮಸ್ಯೆ ಇದ್ಯಾ!? ಚಿಂತೆ ಬಿಟ್ಟು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಥೈರಾಯ್ಡ್ ಒಂದು ಪ್ರಮುಖ ಗ್ರಂಥಿಯಾಗಿದ್ದು, ಇದು ಕುತ್ತಿಗೆಯ ಭಾಗದಲ್ಲಿ ಇರುತ್ತದೆ ಮತ್ತು ದೇಹದ ಮೆಟಾಬಾಲಿಸಮ್ ಅನ್ನು ನಿಯಂತ್ರಿಸುತ್ತದೆ.

ಈ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ತೂಕ ಹೆಚ್ಚುವುದು ಅಥವಾ ಕಡಿಮೆಯಾಗುವುದು, ದಣಿವು, ಕೂದಲು ಉದುರುವುದು, ಚರ್ಮದ ಸಮಸ್ಯೆಗಳು ಕಾಣಿಸಬಹುದು. ಜೀವನಶೈಲಿ, ಒತ್ತಡ, ಹಾರ್ಮೋನ್ ಬದಲಾವಣೆಗಳು ಮತ್ತು ಪೌಷ್ಟಿಕಾಂಶ ಕೊರತೆಯೂ ಇದರ ಪ್ರಮುಖ ಕಾರಣಗಳಾಗಿವೆ.

ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ಆಹಾರಗಳ ಸೇವನೆ ಮಾಡಬಾರದು?

  • ಸೋಯಾ ಮತ್ತು ಸೋಯಾ ಉತ್ಪನ್ನಗಳು, ಏಕೆಂದರೆ ಇವು ಥೈರಾಯ್ಡ್ ಹಾರ್ಮೋನ್ ಕಾರ್ಯಕ್ಕೆ ಅಡ್ಡಿಯಾಗಬಹುದು
  • ಕಚ್ಚಾ ತರಕಾರಿಗಳು, ವಿಶೇಷವಾಗಿ ಗೋಬಿ, ಬ್ರೋಕೊಲಿ ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು
  • ಪ್ರೊಸೆಸ್ಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕಾರಕ
  • ಹೆಚ್ಚು ಉಪ್ಪು ಮತ್ತು ಸಕ್ಕರೆ ಇರುವ ಆಹಾರಗಳು
  • ಕೆಫೀನ್ ಮತ್ತು ಮದ್ಯಪಾನ, ಹಾರ್ಮೋನ್ ಅಸಮತೋಲನಕ್ಕೆ ಕಾರಣ
  • ಥೈರಾಯ್ಡ್ ನಿಯಂತ್ರಣಕ್ಕೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?
  • ಐಯೋಡಿನ್ ಇರುವ ಆಹಾರಗಳು: ಉಪ್ಪು, ಹಾಲು ಉತ್ಪನ್ನಗಳು, ಮೀನು
  • ಸೆಲೆನಿಯಂ ಮತ್ತು ಜಿಂಕ್ ಇರುವ ಆಹಾರಗಳು: ಡ್ರೈಫ್ರೂಟ್ಸ್, ಬೀಜಗಳು, ಸಂಪೂರ್ಣ ಧಾನ್ಯಗಳು
  • ಹಸಿರು ತರಕಾರಿಗಳು ಮತ್ತು ಹಣ್ಣುಗಳು
  • ಪ್ರೋಟೀನ್ ಆಹಾರಗಳು: ಬೇಳೆ, ಮೊಟ್ಟೆ, ಪನೀರ್
  • ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲನ ಆಹಾರ ಸೇವನೆ
  • ಜೀವನಶೈಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು?
  • ನಿಯಮಿತ ವ್ಯಾಯಾಮ ಮತ್ತು ಯೋಗ
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು
  • ವೈದ್ಯರ ಸೂಚನೆ ಅನುಸರಿಸಿ ಔಷಧಿ ಸಮಯಕ್ಕೆ ತೆಗೆದುಕೊಳ್ಳುವುದು
  • ಸಾಕಷ್ಟು ನಿದ್ರೆ
  • ನಿಯಮಿತವಾಗಿ ಆರೋಗ್ಯ ತಪಾಸಣೆ

ಒಟ್ಟಿನಲ್ಲಿ, ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿ ಮೂಲಕ ಥೈರಾಯ್ಡ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಜೊತೆಗೆ, ತಜ್ಞರ ಸಲಹೆಯನ್ನು ಪಾಲಿಸುವುದು ಬಹಳ ಮುಖ್ಯ.

 

error: Content is protected !!