Home Blog Page 2

ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಕರ್ನಾಟಕದಲ್ಲಿ ಪ್ರವಾಸ ಮಾಡಿ

0

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದಲ್ಲಿ ಸುಳ್ಳು ಗ್ಯಾರಂಟಿಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಆಡಳಿತ ನಡೆಸುವಲ್ಲಿ ಸಂಪೂರ್ಣ ಕುಸಿದಿದ್ದು, ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಹಾಗೂ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ರಾಹುಲ್ ಗಾಂಧಿಯವರಿಗೆ ಒತ್ತಾಯಿಸಿದ್ದಾರೆ.

ಅವರು ಪಕ್ಷದ ಕಾರ್ಯಾಲಯದಲ್ಲಿ ಗುರುವಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 11 ತಿಂಗಳು ಕಳೆದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆರ್ಥಿಕವಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ. ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದರ ಹೊಣೆ ಹೊರುತ್ತೀರಾ ಎಂದು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ, ವಿದ್ಯುತ್ ದರ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ದರ ಹೆಚ್ಚಳ ಮಾಡಲಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ನಗರ ಅಧ್ಯಕ್ಷ ಅನಿಲ ಅಬ್ಬಿಗೇರಿ, ಮಾಧ್ಯಮ ಪ್ರಮುಖ ರಾಜು ಹೊಂಗಲ ಒತ್ತಾಯಿಸಿದ್ದಾರೆ.

ಕೋಟೆ ವೀರಭದ್ರೇಶ್ವರ ರಥೋತ್ಸವ ನಾಳೆ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ರಥೋತ್ಸವವು ಎಪ್ರಿಲ್ 20ರ ಸಂಜೆ ಸಂಭ್ರಮದಿಂದ ಜರುಗಲಿದೆ. 46ನೇ ವರ್ಷದ ರಥೋತ್ಸವಕ್ಕೆ ಸಂಜೆ 4 ಗಂಟೆಗೆ ಡೋಣಿ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿಗಳು, ಹರ್ಲಾಪೂರ ಡಾ. ಕೊಟ್ಟೂರೇಶ್ವರ ಶ್ರೀಗಳು, ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು ಚಾಲನೆ ನೀಡುವರು.

ರಥೋತ್ಸವದಲ್ಲಿ ನಂದಿಕೋಲ ಮೇಳ, ಡೊಳ್ಳು ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುವವು. ಇದಕ್ಕೂ ಪೂರ್ವ ಮುಂಜಾನೆ 10ರಿಂದ 1ರವರೆಗೆ ಉಚಿತ ಆರೋಗ್ಯ ತಪಾಸಣೆ, ಚರ್ಮರೋಗ ತಪಾಸಣೆ, ಹೃದಯ ರೋಗ ತಪಾಸಣೆ ಹಾಗೂ ಉಚಿತ ರಕ್ತದಾನ ಶಿಬಿರ ಜರುಗಲಿದೆ.

ಏ.21ರಂದು ಗುಗ್ಗಳೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪ್ಯಾಟಿ ಹನುಮಂತ ದೇವರ ದೇವಸ್ಥಾನದಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ದೇವಸ್ಥಾನದ ಮುಂದೆ ಅಗ್ನಿ ಕುಂಡದಲ್ಲಿ ಹಾಯುವ ಕಾರ್ಯಕ್ರಮ ಜರುಗಲಿದೆ. ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ಜರುಗಲಿದ್ದು, ರಥೋತ್ಸವದ ಅಂಗವಾಗಿ ಪ್ರತಿದಿನ ಪ್ರಾತಃಕಾಲ ರುದ್ರಾಭಿಷೇಕ ಜರುಗಲಿದೆ ಎಂದು ಜಾತ್ರಾ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಮಾನವ ಜೀವನಕ್ಕೆ ಧರ್ಮವೇ ದಿಕ್ಸೂಚಿ : ಶ್ರೀ ರಂಭಾಪುರಿ ಜಗದ್ಗುರುಗಳು

0

ವಿಜಯಸಾಕ್ಷಿ ಸುದ್ದಿ, ಅಫಜಲಪುರ : ಭಗವಂತನ ಸೃಷ್ಟಿಯಲ್ಲಿ ಮಾನವ ಜನ್ಮಕ್ಕೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಮನುಷ್ಯನಿಗೆ ಇರುವ ತಿಳುವಳಿಕೆ ಇತರ ಪ್ರಾಣಿ-ಪಕ್ಷಿಗಳಿಗೆ ಇಲ್ಲದೆ ಇರುವುದು ವಿಶೇಷ. ಮನುಷ್ಯನಾಗಿ ಅರಿತು ಬಾಳುವುದರಲ್ಲಿ ಜೀವನದ ಶ್ರೇಯಸ್ಸು ಇದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ತಾಲೂಕಿನ ಕರಜಿಗಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಗೋಪುರ ಕಳಸಾರೋಹಣದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದೆ ಹೋದರೆ ಮಾನವ ಜೀವನ ವ್ಯರ್ಥವಾಗುತ್ತದೆ. ಅರಿವುಳ್ಳ ಮಾನವ ಜನ್ಮದಲ್ಲಿ ಬಂದ ಬಳಿಕ ಒಂದಿಷ್ಟಾದರೂ ಶಿವಜ್ಞಾನ ಮತ್ತು ಗುರು ಕಾರುಣ್ಯ ಪಡೆದು ಬಾಳಿದರೆ ಜೀವನ ಸಾರ್ಥಕವಾಗುತ್ತದೆ.

ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ವೀರಶೈವ ಧರ್ಮದಲ್ಲಿ ಜಾತಿ, ಮತ, ಪಂಥಗಳೆನ್ನದೆ ಎಲ್ಲ ವರ್ಗದ ಜನತೆಗೆ ನೀತಿ ಬೋಧನಾತ್ಮಕವಾದ ಆದರ್ಶ ಮೌಲ್ಯಗಳನ್ನು ಬೋಧಿಸಿದ್ದನ್ನು ಎಂದಿಗೂ ಮರೆಯುವಂತಿಲ್ಲ. ಗ್ರಾಮದ ಜನತೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ನಿರ್ಮಿಸಿ ಗೋಪುರ ಕಳಸಾರೋಹಣ ಮಾಡಿರುವುದು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಅತ್ಯಂತ ಸಂತೋಷವನ್ನು ತಂದಿದೆ ಎಚಿದರಲ್ಲದೆ, ಗ್ರಾಮದ ಎಲ್ಲ ಜನತೆ ಶಾಚಿತಿ-ಸೌಹಾರ್ದತೆಯಿಂದ ಬದುಕಿ ಬಾಳಲು ಶ್ರೀ ರಂಭಾಪುರಿ ಜಗದ್ಗುರು ಕರೆ ನೀಡಿದರು.

ಸಮಾರಂಭದಲ್ಲಿ ಹಲವಾರು ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಂಭ್ರಮದ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳ ದರ್ಶನ-ಆಶೀರ್ವಾದ ಪಡೆದರು.

ಸಮಾರಂಭದ ನೇತೃತ್ವವನ್ನು ವಹಿಸಿದ್ದ ಅಫಜಲಪುರ ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬದುಕಿ ಬಾಳುವ ಮನುಷ್ಯನಿಗೆ ಧರ್ಮವೊಂದೇ ಆಶಾಕಿರಣ. ಶ್ರೀ ರಂಭಾಪುರಿ ಪೀಠದ `ಮಾನವ ಧರ್ಮಕ್ಕೆ ಜಯವಾಗಲಿ’ ಅನ್ನುವ ಉದ್ಘೋಷಣೆ ಸಾಮರಸ್ಯ, ಸೌಹಾರ್ದತೆಗೆ ಸಾಕ್ಷಿಯಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಶುಭಾಗಮನ ಈ ಭಾಗದ ಎಲ್ಲ ಭಕ್ತರಿಗೆ ಶಾಂತಿ, ಸುಖ, ಸಮೃದ್ಧಿಯನ್ನು ಉಂಟು ಮಾಡಲೆಂದು ಹಾರೈಸಿದರು.

ಶೇಕಡಾವಾರು ಮತದಾನ ಹೆಚ್ಚಳಕ್ಕೆ ಶ್ರಮಿಸಿ : ಭರತ್.ಎಸ್

0

ವಿಜಯಸಾಕ್ಷಿ ಸುದ್ದಿ, ಗದಗ : ಮತದಾನದ ಮಹತ್ವ, ಮತದಾನದ ಮೌಲ್ಯ ಹಾಗೂ ನೈತಿಕ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಗದಗ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ದಿಸೆಯಲ್ಲಿ ಏಪ್ರಿಲ್ 28ರಂದು `ನಮ್ಮ ನಡೆ-ಮತಗಟ್ಟೆ ಕಡೆಗೆ’ ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಭರತ್ ಸೂಚಿಸಿದ್ದಾರೆ.

ನಗರದ ಕೇಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸ್ವೀಪ್ ಸಮಿತಿಯ ಅಧಿಕಾರಿಗಳ ಜೊತೆ ಸಂವಾದ ನಡೆಸಿ, ಏಪ್ರಿಲ್ 28ರಂದು `ನಮ್ಮ ನಡೆ-ಮತಗಟ್ಟೆ ಕಡೆಗೆ’ ಕಾರ್ಯಕ್ರಮದ ಸಂದರ್ಭದಲ್ಲಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮತಗಟ್ಟೆಗಳನ್ನು ಪರಿಚಯಿಸುವ ಕೆಲಸ ಆಗಬೇಕು ಎಂದು ಎಸ್. ಭರತ್ ಅವರು ಸಲಹೆ ನೀಡಿದರು.

ಜಿಲ್ಲೆಯಲ್ಲಿ 961 ಮತಗಟ್ಟೆ ಕೇಂದ್ರಗಳಿದ್ದು, ಅಗತ್ಯ ಮೂಲಸೌಲಭ್ಯಗಳ ಬಗ್ಗೆ ಮತ್ತೊಮ್ಮೆ ಖಾತರಿಪಡಿಸಿಕೊಳ್ಳಬೇಕು. ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರವಾರು ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವಾಗಬೇಕು.

ನಗರ/ಗ್ರಾಮೀಣ ಮತಗಟ್ಟೆ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮಗಳ ಆಯೋಜನೆ ಮಾಡುವಂತೆ ಭರತ್.ಎಸ್ ಅವರು ಹೇಳಿದರು.

ತಾಲೂಕು ಮಟ್ಟದ ಕಾರ್ಯಕ್ರಮ ಆಯೋಜನೆ ಸಂಬಂಧ ಕೂಡಲೇ ಪಟ್ಟಿ ವಿವರ ನೀಡುವಂತೆ ತಾಲೂಕು ಪಂಚಾಯತ್ ಇಒಗಳಿಗೆ ಸೂಚಿಸಿದ ಅವರು, ಕಾರ್ಯಕ್ರಮ ಆಯೋಜನೆ ಸಂಬಂಧ ಹತ್ತಿರದ ಪೊಲೀಸ್ ಠಾಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕು. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಎಲ್ಲ ಇಲಾಖೆಗಳ ಸಹಕಾರ ಪಡೆದು ಕಾರ್ಯಕ್ರಮ ಆಯೋಜನೆಗೆ ಮುಂದಾಗಬೇಕು ಎಂದರು.

ಜಿ.ಪಂ ಉಪಕಾರ್ಯದರ್ಶಿ ಹಾಗೂ ಸ್ವೀಪ್ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿ ಸಿ.ಬಿ. ದೇವರಮನಿ ಅವರು ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಅಮಿನಸಾಬ್ ಅತ್ತಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪಿ.ವೈ. ಶೆಟ್ಟೆಪ್ಪನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ಥಳೀಯ ಸಂಸ್ಥೆಗಳು ಹೀಗೆ ಎಲ್ಲರೂ ಕೈಜೋಡಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಭರತ್.ಎಸ್ ಅವರು ಸೂಚಿಸಿದರು.

ಹೆಚ್ಚಿನ ಮುನ್ನಡೆಯೊಂದಿಗೆ ಗೆಲ್ಲುವ ವಿಶ್ವಾಸ : ಆನಂದಸ್ವಾಮಿ

0

ವಿಜಯಸಾಕ್ಷಿ ಸುದ್ದಿ, ಹಾವೇರಿ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಬುಧವಾರ ಬೃಹತ್ ಮೆರವಣಿಗೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು. ಬಿಸಿಲಿನ ಝಳವನ್ನೂ ಲೆಕ್ಕಿಸದೇ ಹಾವೇರಿ-ಗದಗ ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಿಂದ ಪಕ್ಷದ ಕಾರ್ಯಕರ್ತರು, ಮಹಿಳೆಯರು, ಯುವಕರು, ಅಭಿಮಾನಿಗಳು ಪಾಲ್ಗೊಂಡಿದ್ದರಲ್ಲದೇ ಎಲ್ಲೆಡೆ ಪಕ್ಷದ ಧ್ವಜ, ನಾಯಕರ ಕಟೌಟ್‌ಗಳು, `ನಾನು ಶ್ರಮಿಕ-ನನ್ನ ಮತ ಕಾಂಗ್ರೆಸ್ಸಿಗೆ’ ಇತ್ಯಾದಿ ಘೋಷಣೆಗಳು ಮೊಳಗಿದವು.

gaddadevaramat

ಟಿಕೆಟ್ ಘೋಷಣೆಯಾದಾಗಿನಿಂದ ಅವಿರತವಾಗಿ ಕ್ಷೇತ್ರದಾದ್ಯಂತ ಸಂಚರಿಸುತ್ತ ಈಗಾಗಲೇ ಒಂದು ಸುತ್ತಿನ ಪ್ರಚಾರ ಪೂರೈಸಿರುವ ಆನಂದಸ್ವಾಮಿ ಗಡ್ಡದೇವರಮಠ, ಬುಧವಾರ ಬೆಳಿಗ್ಗೆ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿಗಳ ಆಶೀರ್ವಾದ ಪಡೆದರಲ್ಲದೆ, ನಗರದ ಶ್ರೀ ವೀರಭದ್ರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಚಿವರಾದ ಡಾ. ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮದ್, ಶಾಸಕರಾದ ಜೆ.ಎಸ್. ಪಟೇಲ್, ಪ್ರಕಾಶ್ ಕೋಳಿವಾಡ, ಯು.ಬಿ. ಬಣಕಾರ್, ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣ ಸೇರಿದಂತೆ ಮುಖಂಡರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆನಂದಸ್ವಾಮಿ ಗಡ್ಡದೇವರಮಠ, ಎಲ್ಲ ಸಚಿವರು, ಶಾಸಕರು, ಪಕ್ಷದ ಮುಖಂಡರು, ಉತ್ಸಾಹಿ ಕಾರ್ಯಕರ್ತರು, ಮುಖ್ಯವಾಗಿ ಕ್ಷೇತ್ರದ ಮಹಾಜನತೆ ನನ್ನ ಮೇಲೆ ವಿಶ್ವಾಸ, ಪ್ರೀತಿಯಿಟ್ಟು ಸುಡುಬಿಸಿಲಿನಲ್ಲೂ ನನ್ನೊಂದಿಗೆ ನಡೆದಿದ್ದನ್ನು ನಾನೆಂದೂ ಮರೆಯಲಾರೆ. ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದ ಎಂದು ಹೇಳಿದರು.

ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು, ಎಲ್ಲರೂ ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡಿದ್ದಾರೆ. ಸಚಿವರಾದ ಎಚ್.ಕೆ. ಪಾಟೀಲ, ಸಲೀಂ ಅಹ್ಮದ್ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡು ನನಗೆ ಸ್ಪೂರ್ತಿ ತುಂಬಿದ್ದಾರೆ. ಕ್ಷೇತ್ರದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬಂದಿದ್ದು, ಅವರ ಅಪರಿಮಿತ ಉತ್ಸಾಹದಿಂದ ಮನ ತುಂಬಿ ಬಂದಿದೆ. ಎಲ್ಲರ ಆಶೀರ್ವಾದದಿಂದ ಅತ್ಯಂತ ಹೆಚ್ಚಿನ ಮುನ್ನಡೆಯೊಂದಿಗೆ ಗೆಲುವು ಸಾಧಿಸುವ ವಿಶ್ವಾಸವಿದೆ.
– ಆನಂದಸ್ವಾಮಿ ಗಡ್ಡದೇವರಮಠ.
ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

ಬೆಳ್ಳಟ್ಟಿಗೆ ತೆರಳುತ್ತಿದ್ದ ಬಸ್ ಪಲ್ಟಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಬುಧವಾರ ಶಿರಹಟ್ಟಿ ಕಡೆಯಿಂದ ಬೆಳ್ಳಟ್ಟಿಗೆ ತೆರಳುತ್ತಿದ್ದ ಸಾರಿಗೆ ಇಲಾಖೆಯ ಬಸ್ ಮಧ್ಯಾಹ್ನ 1.30ರ ಸುಮಾರಿಗೆ ವರವಿ ಕ್ರಾಸ್ ಸಮೀಪ ಪಲ್ಟಿಯಾದ ಘಟನೆ ನಡೆದಿದೆ.

ಬಸ್‌ನಲ್ಲಿ ಸುಮಾರು 48 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೂವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣವೇ ಗಾಯಗೊಂಡವರನ್ನು 108 ಅಂಬ್ಯುಲೆನ್ಸ್ ಮೂಲಕ ತಾಲೂಕಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕಲ್ಪಿಸಲಾಗಿದೆ.

 

ಸಂಭ್ರಮದ ಪುಲಿಗೆರೆ ಉತ್ಸವಕ್ಕೆ ಕ್ಷಣಗಣನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮತ್ತೊಮ್ಮೆ `ಪುಲಿಗೆರೆ ಉತ್ಸವ’ ಸಾಂಸ್ಕೃತಿಕ ಹಬ್ಬದ ವಿಜೃಂಭಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸಹಕಾರ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ನಡೆಯುತ್ತಿರುವ 7ನೇ ಆವೃತ್ತಿಯ `ಪುಲಿಗೆರೆ ಉತ್ಸವ’ ಏ.19, 20 ಮತ್ತು 21ರಂದು ಜರುಗಲಿದೆ. ನಾಡಿನ ಪ್ರಸಿದ್ಧ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

utsav

3 ದಿನಗಳ ಕಾಲ ನಡೆಯುವ ನೃತ್ಯ-ಸಂಗೀತ-ಚಿತ್ರಕಲಾ ಸಂಭ್ರಮವನ್ನು ಸಾಂಸ್ಕೃತಿಕ ಪರಂಪರೆಯ ಉತ್ಥಾನದ ಧ್ಯೇಯದಿಂದ ರೂಪಿಸಲಾಗಿದ್ದು, ಉತ್ಸವದಲ್ಲಿ ಸುಮಾರು 100ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರಸಿದ್ಧ ಕಲಾ ತಂಡದವರ ವಿವಿಧ ವಾದ್ಯ ವೈಭವಗಳೊಂದಿಗೆ ಅಲಂಕೃತ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.

ಪುಲಿಗೆರೆ ಉತ್ಸವದಲ್ಲಿ ಮೊದಲ ದಿನ ಏ.19ರಂದು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಮತ್ತು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಥಳೀಯ ಹಾಗೂ ಸಂಸ್ಥೆಯ ಅನೇಕ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಶುಕ್ರವಾರ ಬೆಳಿಗ್ಗೆ 6.10ಕ್ಕೆ ಉದಯ ರಾಗ-1ರಲ್ಲಿ ಖ್ಯಾತ ಕಲಾವಿದ ಸರ್ಪರಾಜ್ ಖಾನ್ ಇವರಿಂದ ಸಾರಂಗಿ ವಾದನ, ಬೆಳಿಗ್ಗೆ 7ಕ್ಕೆ ಖ್ಯಾತ ಹಿಂದುಸ್ಥಾನಿ ಸಂಗೀತ ಕಲಾವಿದೆ ರೇಷ್ಮಾ ಭಟ್ ಅವರಿಂದ ಹಿಂದೂಸ್ಥಾನಿ ಗಾಯನ ಜರುಗುವುದು. ಸಂಜೆ 4ಕ್ಕೆ ಅಲಂಕೃತ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ.

ಸಂಜೆಯ ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕ ಪ್ರಶಾಂತ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 6ಕ್ಕೆ ಸಿದ್ದಾಪುರದ ಕೊಳಗಿ ಕೇಶವ ಹೆಗಡೆ ಮತ್ತು ತಂಡದವರಿಂದ ಯಕ್ಷಗಾನ ಜರುಗಲಿದೆ. ಸಂಜೆ 7ಕ್ಕೆ ಹಿರಿಯ ಗಾಯಕ ಡಾ.ಅಶೋಕ ಹುಗ್ಗಣ್ಣವರ ಅವರಿಂದ ಹಿಂದೂಸ್ಥಾನಿ ಗಾಯನ, 8.30ಕ್ಕೆ ಬೆಂಗಳೂರಿನ ವಿ.ಕಾವ್ಯಾ ಕಾಶಿನಾಥನ್ ಮತ್ತು ಶಶಾಂಕ್ ಕಿರೋಣ ನಾಯರ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಏ.20ರಂದು ಬೆಳಿಗ್ಗೆ 6 ಗಂಟೆಗೆ ಲಕ್ಷ್ಮೇಶ್ವರದ ಖ್ಯಾತ ಕಲಾವಿದ ಕೃಷ್ಣ ಕ್ಷತ್ರಿಯ ಅವರಿಂದ ಶಹನಾಯಿ ವಾದನ, 7 ಗಂಟೆಗೆ ಹುಬ್ಬಳ್ಳಿಯ ಕೃತಿಕಾ ಜಂಗಿನಮಠರಿಂದ ಬಾನ್ಸುರಿ ವಾದನ ನಡೆಯಲಿದೆ. ಸಂಜೆ 6ಕ್ಕೆ ಬೆಂಗಳೂರಿನ ಮನೋಹರ ಪಟವರ್ಧನ ಮತ್ತು ತಂಡದವರಿಂದ ಹಿಂದೂಸ್ಥಾನಿ ಗಾಯನ, 7.30ಕ್ಕೆ ಬೆಂಗಳೂರಿನ ನಂದಿನಿ ಮೆಹ್ತಾ ಮತ್ತು ಕೆ.ಮುರಳಿ ಅವರಿಂದ ಕಥಕ್ ಕಿ ಕಾನಾಕ್ ಜರುಗಲಿದೆ. 8.30ಕ್ಕೆ ಬೆಂಗಳೂರಿನ ಡಾ.ರೇಖಾ ರಾಜು ಮತ್ತು ತಂಡದವರಿಂದ ಮೋಹಿನಿಅಟ್ಟಂ ನೃತ್ಯ ಪ್ರದರ್ಶನ ನಡೆಯಲಿದೆ.

ಏ.21ರ ಬೆಳಿಗ್ಗೆ 6ಕ್ಕೆ ಹುಬ್ಬಳ್ಳಿಯ ಶಶಿಕಲಾ ದಾನಿ ಅವರಿಂದ ಜಲತರಂಗ ವಿಶೇಷ ಕಾರ್ಯಕ್ರಮ, 7 ಗಂಟೆಗೆ ಶಿರಹಟ್ಟಿಯ ಶೃತಿ ರೊಟ್ಟಿ ಜೋಶಿ ಅವರಿಂದ ಹಿಂದೂಸ್ಥಾನಿ ಗಾಯನ ನೆರವೇರಲಿದೆ. ಸಂಜೆ 6ಕ್ಕೆ ಬೆಂಗಳೂರಿನ ಡಾ.ರವೀಂದ್ರ ಗುರುರಾಜ ಕಾಟೋಟಿ ಅವರಿಂದ ಹಾರ್ಮೋನಿಯಂ ಸೋಲೋ, 7.30ಕ್ಕೆ ಬೆಂಗಳೂರಿನ ಅರ್ಚನಾ ಮತ್ತು ಚೇತನಾ ಅವರಿಂದ ಭರತನಾಟ್ಯ, 8.30ಕ್ಕೆ ಬೆಂಗಳೂರಿನ ಅನುಶ್ರೀ ಪದ್ಮನಾಮ ಅವರಿಂದ ಓಡಿಸ್ಸಿ ನೃತ್ಯ ಪ್ರದರ್ಶನ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿದ್ದ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾವನ್ನು ಡಾ. ಸುಧಾ ನಾರಾಯಣ ಮೂರ್ತಿ ತಮ್ಮದೇ ಪ್ರತಿಷ್ಠಾನದಿಂದ 4.5 ಕೋಟಿ ರೂ. ಖರ್ಚು ಮಾಡಿ ಜೀರ್ಣೊದ್ಧಾರಗೊಳಿಸಿದರು. ಬಳಿಕ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಳೆ ತುಂಬಲು `ಪುಲಿಗೆರೆ ಉತ್ಸವ’ ಹೆಸರಿನಲ್ಲಿ ಪ್ರತಿವರ್ಷ ಬೆಂಗಳೂರಿನ ಭಾರತಿ ವಿದ್ಯಾಭವನದ ನೇತೃತ್ವದಲ್ಲಿ ಸಂಗೀತ, ನೃತ್ಯ, ಚಿತ್ರ ಸಂಭ್ರಮದ ಮೂಲಕ ಈ ಭಾಗದ ಜನತೆಗೆ ಭಾರತೀಯ ಕಲೆ, ಸಂಗೀತ, ಶಿಲ್ಪಕಲೆ, ಇತಿಹಾಸ ಪರಂಪರೆ ಉಳಿಸಿ ಬೆಳೆಸುವ ಮಹೋನ್ನತ ಕಾರ್ಯ ಮಾಡುತ್ತಿದ್ದಾರೆ.

ಉತ್ತಮ ನಾಳೆಗಾಗಿ ಕಡ್ಡಾಯ ಮತದಾನ ಅಗತ್ಯ : ವಿಶ್ವನಾಥ ಹೊಸಮನಿ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಮತದಾನ ಅತ್ಯಮೂಲ್ಯವಾದ ಹಕ್ಕು. ಉತ್ತಮ ನಾಳೆಗಳಿಗಾಗಿ ಹಾಗೂ ಸದೃಢ ಆಡಳಿತಕ್ಕಾಗಿ ತಪ್ಪದೇ ಎಲ್ಲರೂ ಮತ ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಸಮನಿ ಹೇಳಿದರು.

ತಾ.ಪಂ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನಕ್ಕಾಗಿ ಬಿಸಿಯೂಟ ಸಿಬ್ಬಂದಿಗಳ ಕಾಲ್ನಡಿಗೆ ಜಾಥಾ ಹಾಗೂ ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆ ಭೇಟಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಟ್ಟಣದ ತಾ.ಪಂ ಆವರಣದಿಂದ ಆರಂಭವಾದ ಕಾಲ್ನಡಿಗೆ ಜಾಗೃತಿ ಜಾಥಾ ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸುವ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ನಂತರ ಕೊಪ್ಪಳ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕಡ್ಡಾಯ ಮತದಾನಕ್ಕೆ ಘೋಷಣೆಗಳ ಮೂಲಕ ಕರೆ ನೀಡಿದರು.

ನಂತರ ಕಡಿಮೆ ಮತದಾನವಾದ ಅನ್ನದಾನೇಶ್ವರ ನಗರದ 42ರಿಂದ 47ನೇ ಮತಗಟ್ಟೆಗಳ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ತಪ್ಪದೇ ಮತ ಚಲಾಯಿಸುವಂತೆ ಮನವರಿಕೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬಿಇಒ ಎಚ್.ಎಂ. ಫಡ್ನೇಶಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಡಾ. ರಂಜನಾ ತಳಗೇರಿ, ಮಹೇಶ ಜಕ್ಕಲಿ, ಮಹಾಂತೇಶ ಖೋತ, ಎಚ್.ಎಂ. ಕಾತರಕಿ, ಸಿ.ಬಿ. ಪಾಟೀಲ ಇತರರಿದ್ದರು.

ವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ : ವೈಶಾಲಿ ಎಂ.ಎಲ್.

0

ವಿಜಯಸಾಕ್ಷಿ ಸುದ್ದಿ, ಗದಗ : ದ್ವಿತೀಯ ಪಿಯುಸಿ ಪರೀಕ್ಷೆ-2 ಅಂತಿಮ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಇದೇ ಏಪ್ರಿಲ್ 29ರಿಂದ ಪರೀಕ್ಷೆ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಪರೀಕ್ಷೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶನದಂತೆ ದ್ವಿತೀಯು ಪಿ.ಯು.ಸಿ.-2 ಪರೀಕ್ಷೆಯನ್ನು ನಡೆಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿವಿ ಅಳವಡಿಸುವುದು, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡುವುದು ಸೇರಿದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವಂತೆ ಪ.ಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಪರೀಕ್ಷೆಯ ಗಂಭೀರತೆಯನ್ನು ತಿಳಿಯಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಮಾಡದೇ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಗಾಳಿ, ಬೆಳಕು ವ್ಯವಸ್ಥೆ ಇರಬೇಕು.

ಪರೀಕ್ಷಾ ಸಂದರ್ಭದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಇರಬೇಕು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿ ಕೊನೆಯ ಸ್ಥಾನ ಪಡೆದಿರುವುದು ಬೇಸರ ತಂದಿದೆ. ಆದ್ದರಿಂದ ಮುಂದಿನ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯ ಎಲ್ಲಾ ಪ.ಪೂ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸಬೇಕು.

ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಕಾಲೇಜಿಗೆ ಬರುವ ಮತ್ತು ಹೋಗುವ ಸಮಯ ದಾಖಲಾಗಬೇಕು. ಬಯೋಮೆಟ್ರಿಕ್‌ನಲ್ಲಿ ದೋಷ ಉಂಟಾದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಗಮನ ಹರಿಸಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎ. ರಡ್ಡೇರ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಇದ್ದರು.

ಪ.ಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎನ್. ಕುರ್ತಕೋಟಿ ಮಾತನಾಡಿ, ರೋಣ ಪಟ್ಟಣದ ವೀರರಾಣಿ ಚೆನ್ನಮ್ಮ ಪ.ಪೂ ಕಾಲೇಜು, ನರಗುಂದ ಪಟ್ಟಣದ, ಲಕ್ಷ್ಮೇಶ್ವರ ಪಟ್ಟಣದ, ಶಿರಹಟ್ಟಿ ಪಟ್ಟಣದ ಸರಕಾರಿ ಪ. ಪೂ ಕಾಲೇಜು, ಮುಂಡರಗಿಯ ಅನ್ನದಾನೇಶ್ವರ ಕಾಲೇಜು, ಗಜೇಂದ್ರಗಡ ಪಟ್ಟಣದ ಸರಕಾರಿ ಪ.ಪೂ ಕಾಲೇಜು, ಗದಗ ನಗರದ ಎಚ್.ಸಿ.ಇ.ಎಸ್. ಪ.ಪೂ ಕಾಲೇಜು ಮತ್ತು ಜೆ.ಟಿ. ಪದವಿ ಪೂರ್ವ ಕಾಲೇಜು ಈ 8 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಮಾಯಣದ ಪ್ರಸಂಗಗಳು ಬದುಕಿಗೆ ಆದರ್ಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಶಂಕರ ಭಾರತಿ ಮಠದಲ್ಲಿ ಬ್ರಹ್ಮವೃಂದದ ವತಿಯಿಂದ ಬುಧವಾರ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.

ಶ್ರೀಮಠದಲ್ಲಿ ಸೇರಿದ್ದ ಸುಮಂಗಲೆಯರು ಶ್ರೀರಾಮ ಸ್ವರೂಪಿ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಭಕ್ತಿಯಿಂದ ತೂಗಿ ರಾಮನಾಮದ ಭಕ್ತಿಗೀತೆ ಹಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆ.ಮೂ. ಬಾಲಚಂದ್ರಭಟ್ ಹುಲಮನಿ, ಧರ್ಮ ಸಂಸ್ಥಾಪನೆಗಾಗಿ ಮರ್ಯಾದಾ ಪುರುಷೋತ್ತಮನಾಗಿ ಅವತಾರವೆತ್ತಿದ ಶ್ರೀರಾಮ ಸಾಕ್ಷಾತ್ ದೇವರೇ ಆಗಿದ್ದಾನೆ. ಸೂರ್ಯವಂಶಸ್ಥನಾದ ಶ್ರೀರಾಮನು ಕಾಲಾತೀತ, ಗುಣಾತೀತನಾಗಿದ್ದು, ಶ್ರೀರಾಮನೇ ಮೂಲವಾಗಿರುವ ರಾಮಾಯಣದ ಪ್ರಸಂಗಗಳು ಬದುಕಿಗೆ ಆದರ್ಶವಾಗಿವೆ. ಶ್ರೀರಾಮ ಎಲ್ಲರ ಬದುಕಿಗೂ ಆದರ್ಶ ಮತ್ತು ಪೂಜನೀಯವಾಗಿದ್ದು, ಶ್ರೀರಾಮ ನಾಮ ಜಪದಿಂದ ಕಷ್ಟಗಳು ಪರಿಹಾರವಾಗಿ ಸುಖ-ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದರು.

ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ, ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಮಿತ್ತ ಇಲ್ಲಿನ ಬ್ರಾಹ್ಮಣ ಸಮಾಜ ಒಂದು ಕೋಟಿ ರಾಮನಾಮ ತಾರಕ ಮಂತ್ರದ ಜಪಯಜ್ಞವನ್ನು ಯಶಸ್ವಿಯಾಗಿ ನೆರವೇರಿಸಿದ್ದು ಎಲ್ಲರ ಗಮನ ಸೆಳೆಯುವಂತಾಗಿತ್ತು. ಬ್ರಾಹ್ಮಣ ಸಮಾಜದ ಜೊತೆ ಇತರೆ ಎಲ್ಲ ಸಮಾಜ ಬಾಂಧವರು ಅಂದಿನ ರಾಮತಾರಕ ಯಜ್ಞವನ್ನು ಯಶಸ್ವಿಗೊಳಿಸಲು ಸಹಕರಿಸಿದ್ದು, ಅದೇ ರೀತಿ ಇಂದು ಶ್ರೀರಾಮ ನವಮಿಯನ್ನು ಸಂಪ್ರದಾಯದಂತೆ ಆಚರಿಸಲಾಗಿದೆ ಎಂದರು.

error: Content is protected !!