Home Blog Page 275

ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು!

0

ಮಂಡ್ಯ: ಬಲಮುರಿಯ ಕಾವೇರಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಬಲಮುರಿಯಲ್ಲಿ ನಡೆದಿದೆ. ದಾವಣಗೆರೆ ಮೂಲದ ವಿದ್ಯಾರ್ಥ ಜಾವಿದ್ (22)  ಮೃತ ದುರ್ದೈವಿ ಯುವಕನಾಗಿದ್ದು,

ನಿನ್ನೆ ಸಂಜೆ ಸ್ನೇಹಿತರೊಂದಿಗೆ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಈಜಲು ನದಿಗೆ ಇಳಿದಿದ್ದ ಜಾವಿದ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರೆಂದು ತಿಳಿದುಬಂದಿದೆ.

ಸ್ನೇಹಿತರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ನಿನ್ನೆ ರಾತ್ರಿ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಹುಡುಕಾಟ ಮುಂದುವರಿಸಿದ ವೇಳೆ ಜಾವಿದ್ ಅವರ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣವು ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸುಪ್ರೀಂಕೋರ್ಟ್ ತಾತ್ಕಾಲಿಕ ಬ್ರೇಕ್: ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಮುಂದೂಡಿಕೆ!

ಗದಗ; ಗದಗ–ಬೆಟಗೇರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಕಂಡು ಬಂದಿದ್ದು, ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಮಾರ್ಚ್ 03 ರಂದು ನಡೆಯಬೇಕಿದ್ದ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ, ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ Special Leave to Appeal (C) No(s): 8340/2026 ಪ್ರಕರಣದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದಿನಾಂಕ 27-02-2026 ರಂದು ಈ ತಾತ್ಕಾಲಿಕ ಸ್ಥಗಿತ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ, 03 ಮಾರ್ಚ್ 2026 ರಂದು ನಿಗದಿಯಾಗಿದ್ದ ಚುನಾವಣೆ ಮುಂದಿನ ಆದೇಶದವರೆಗೆ ನಡೆಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶ ಹೊರ ಬರುವವರೆಗೆ ಚುನಾವಣಾ ಪ್ರಕ್ರಿಯೆ ಸ್ಥಗಿತವಾಗಿರಲಿದೆ ಎಂದು ಉಪವಿಭಾಗಾಧಿಕಾರಿಗಳ ಕಚೇರಿ ಪ್ರಕಟಿಸಿದೆ.

ಗದಗ: ಚಿಂಚಲಿ ಕೆರೆಯಲ್ಲಿ ಈಜಲು ಇಳಿದ ಇಬ್ಬರು ವಿದ್ಯಾರ್ಥಿಗಳ ದುರ್ಮರಣ!

0

ಗದಗ: ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಈಜಲು ಕೆರೆಯಲ್ಲಿ ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಪರಶುರಾಮ ವಡ್ಡರ ಹಾಗೂ ಬಸವರಾಜ ಬಡಿಗೇರ ಎಂಬ ಇಬ್ಬರು ವಿದ್ಯಾರ್ಥಿಗಳು ಈಜಲು ಹೋಗಿ ನೀರಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಪರಶುರಾಮನು ಹಮ್ಮಿಗಿ (ಮುಂಡರಗಿ ತಾಲೂಕು) ಗ್ರಾಮದ ನಿವಾಸಿಯಾಗಿದ್ದು, ಬಸವರಾಜನು ಬೆಳಧಡಿ ಗ್ರಾಮದ ಬಾಲಕನಾಗಿದ್ದಾನೆ. ಇಬ್ಬರೂ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ಹಾಗೂ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದರು.

ಶಾಲೆ ಮುಗಿಸಿಕೊಂಡ ಬಳಿಕ ಆರು ವಿದ್ಯಾರ್ಥಿಗಳು ಕೆರೆಗೆ ಈಜಲು ಇಳಿದಿದ್ದು, ಈ ವೇಳೆ ಇಬ್ಬರು ಆಳವಾದ ನೀರಿನಲ್ಲಿ ಮುಳುಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 20 ಅಡಿಗೂ ಹೆಚ್ಚು ಆಳವಿರುವ ಕೆರೆಯಲ್ಲಿ ಸ್ಥಳೀಯರು, ಈಜು ತಜ್ಞರು ಹಾಗೂ ಪೊಲೀಸರು ನೀರು ಪಾಲಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಶೋಧ ನಡೆಸಿ ಸಂಜೆ ಹೊತ್ತಿಗೆ ಶವ ಹೊರ ತೆಗೆದರು.

ಘಟನೆ ಕುರಿತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಅರ್ಧ ಗಂಟೆ ಕಳೆದರೂ ಸಿಬ್ಬಂದಿ ಆಗಮಿಸಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದ್ದು, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಸತತ ನಾಲ್ಕು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಶವ ಹೊರ ತೆಗೆಯಲಾಯಿತು.

ಈ ಘಟನೆ ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ರಕ್ತ ಚಂದ್ರಗ್ರಹಣ ಹಿನ್ನೆಲೆ: ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಸಮಯ ಬದಲಾವಣೆ

0

ದಕ್ಷಿಣ ಕನ್ನಡ: ಮಾರ್ಚ್ 3ರಂದು ಸಂಭವಿಸಲಿರುವ ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ದರ್ಶನ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.

ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿ ಭಕ್ತರಿಗೆ ಅಗತ್ಯ ಸೂಚನೆಗಳನ್ನು ನೀಡಿದೆ. ಪ್ರಕಟಣೆಯ ಪ್ರಕಾರ, ಮಾರ್ಚ್ 3ರಂದು ಮಧ್ಯಾಹ್ನ 1:30ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ರಕ್ತ ಚಂದ್ರಗ್ರಹಣದ ಅವಧಿ ಮುಗಿದ ಬಳಿಕ ರಾತ್ರಿ 7:30ರಿಂದ ಪುನಃ ದರ್ಶನ ಆರಂಭವಾಗಲಿದೆ.

ಗ್ರಹಣ ಸಮಯದಲ್ಲಿ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂಬ ನಿಯಮಕ್ಕೆ ಅನುಗುಣವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಭಕ್ತಾದಿಗಳ ಅನುಕೂಲ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಭಕ್ತಾದಿಗಳು ಬದಲಾದ ದರ್ಶನ ಸಮಯವನ್ನು ಗಮನದಲ್ಲಿಟ್ಟುಕೊಂಡು ದೇವರ ದರ್ಶನಕ್ಕೆ ಆಗಮಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ವಿನಂತಿಸಿದೆ.

ಹೊರೆ ಆಗುತ್ತೆ ಅಂದ್ರೆ ಗ್ಯಾರಂಟಿ ಕೊಡುವ ಮೊದಲು ಚಿಂತನೆ ಮಾಡಬೇಕಾಗಿತ್ತು: ಡಿಕೆ ಸುರೇಶ್

0

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಆಗಿದ್ದರೂ ಜನರಿಗೆ ನೀಡಿದ ಮಾತಿನಂತೆ ಅವನ್ನು ಈಡೇರಿಸಲೇಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಒತ್ತಡ ಉಂಟಾಗಿದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, “ಗ್ಯಾರಂಟಿ ನಮ್ಮ ವಾಗ್ದಾನ. ಕರ್ನಾಟಕದ ಜನತೆಗೆ ನೀಡಿದ ಭರವಸೆ. ಆ ಮಾತಿನಂತೆ ನಡೆದುಕೊಳ್ಳಬೇಕು” ಎಂದು ಹೇಳಿದರು.

ಯಾರು ಚುನಾವಣೆಯನ್ನು ಎದುರಿಸಿದ್ದಾರೋ, ಅವರು ಜನರಿಗೆ ನಂಬಿಕೆ ನೀಡಿದ್ದಾರೆ. ಹೊರೆ ಆದರೂ ಆಗಲಿ, ಏನೇ ಆಗಲಿ ಕೊಟ್ಟ ಮಾತನ್ನು ಈಡೇರಿಸಲೇಬೇಕು. ಹೊರೆ ಆಗುತ್ತದೆ ಎನ್ನುವುದಾದರೆ ಗ್ಯಾರಂಟಿ ಘೋಷಿಸುವ ಮೊದಲು, ಮಾತು ಕೊಡುವ ಮೊದಲು ಚಿಂತನೆ ಮಾಡಬೇಕಾಗಿತ್ತು. ಈಗ ಮಾತು ಕೊಟ್ಟಿರುವುದರಿಂದ ಅದರಂತೆ ನಡೆದುಕೊಳ್ಳಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಐದು ವರ್ಷಗಳ ಕಾಲ ಯಾವುದೇ ಕಷ್ಟ ಎದುರಾದರೂ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ, ಗ್ಯಾರಂಟಿ ಯೋಜನೆಗಳನ್ನು ಸಿರಿವಂತರು ಪಡೆಯುತ್ತಿರುವುದನ್ನು ಅವರು ಆಕ್ಷೇಪಿಸಿದರು. “ಗ್ಯಾರಂಟಿ ಯೋಜನೆಗಳು ಅಸಹಾಯಕರು, ಜೀವನ ಸಾಗಿಸಲು ಕಷ್ಟಪಡುವವರು ಹಾಗೂ ಬದುಕಿನಲ್ಲಿ ಹೋರಾಟ ಮಾಡುತ್ತಿರುವವರಿಗಾಗಿ. ಸಿರಿವಂತರು ಈ ಸೌಲಭ್ಯ ಪಡೆಯುವುದು ಸರಿಯಲ್ಲ” ಎಂದು ಕಿವಿಮಾತು ಹೇಳಿದರು.

ರೌಡಿಶೀಟರ್ ಪವನ್ ಕುಮಾರ್ ಹತ್ಯೆ ಪ್ರಕರಣ: ಆರೋಪಿ ರಂಜನ್ ಕಾಲಿಗೆ ಗುಂಡೇಟು!

0

ಬೆಂಗಳೂರು: ನಗರದಲ್ಲಿ ನಡೆದ ರೌಡಿಶೀಟರ್ ಪವನ್ ಕುಮಾರ್ ಬರ್ಬರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ರಂಜನ್‌ನ್ನು ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಸಂಪಿಗೆಹಳ್ಳಿ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಘಟನೆ ನಡೆದಿದೆ.

ಬಾಗಲೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಅಡಗಿದ್ದ ರಂಜನ್‌ನನ್ನು ಬಂಧಿಸಲು ಇಂದು ಬೆಳಗ್ಗೆ ಸಂಪಿಗೆಹಳ್ಳಿ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಮಾರಕಾಸ್ತ್ರ ಬಳಸಿ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.

ತಕ್ಷಣ ಎಚ್ಚೆತ್ತ ಇನ್ಸ್ಪೆಕ್ಟರ್ ವೆಂಕಟೇಶ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ರಂಜನ್‌ನನ್ನು ಕೂಡಲೇ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೆಬ್ರವರಿ 25ರಂದು ರಾತ್ರಿ ಥಣಿಸಂದ್ರ ಸಮೀಪದ ಅಮರಜ್ಯೋತಿ ಲೇಔಟ್‌ನಲ್ಲಿ 28 ವರ್ಷದ ಪವನ್ ಕುಮಾರ್ ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ಹೆಲ್ಮೆಟ್ ಧರಿಸಿ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದರು.

ಪವನ್ ಕುಮಾರ್ ಡಿ.ಜೆ ಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ಮೂರು ವರ್ಷಗಳ ಹಿಂದೆ ನಡೆದಿದ್ದ ರೌಡಿಶೀಟರ್ ಕಪಿಲ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಕಳೆದ ಮೇ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ, ಒಂದೂವರೆ ತಿಂಗಳ ಹಿಂದಷ್ಟೇ ಬೇಕರಿ ಆರಂಭಿಸಿದ್ದನು.

ಕಪಿಲ್ ಹತ್ಯೆಯ ಮಾದರಿಯಲ್ಲೇ ಹೆಲ್ಮೆಟ್ ಧರಿಸಿದ್ದ ತಂಡ ಪವನ್ ಕುಮಾರ್‌ನನ್ನೂ ಹತ್ಯೆ ಮಾಡಿರುವುದು ಗಮನಾರ್ಹವಾಗಿದೆ. ಹಳೆಯ ವೈಷಮ್ಯವೇ ಈ ಹತ್ಯೆಗೆ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಕಾಲೇಜು ವಿದ್ಯಾರ್ಥಿಗಳ ಭೀಕರ ಕೃತ್ಯ: ಕಾರು ಹತ್ತಿಸಿ ಸಹಾಯಕ ಲೇಬರ್ ಇನ್ಸ್‌ಪೆಕ್ಟರ್ ಕೊಲೆ!

0

ತಮಿಳುನಾಡು: ತಮಿಳುನಾಡಿನ ಗಡಿಭಾಗದ ನಗರ ಹೊಸೂರು ನಲ್ಲಿ ಘನಘೋರ ಘಟನೆ ನಡೆದಿದೆ. ಮದ್ಯದ ನಶೆಯಲ್ಲಿ ವಾಹನ ಚಲಾಯಿಸಿದ್ದ ಕಾಲೇಜು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯಲ್ಲಿ 54 ವರ್ಷದ ಶಿವಮೂರ್ತಿ ಮೃತಪಟ್ಟಿದ್ದಾರೆ. ಅವರು ಹೊಸೂರಿನ ಅಣ್ಣೈ ಅರವಿಂದ್ ನಗರ ನಿವಾಸಿಯಾಗಿದ್ದು, ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮನೆಯ ಮುಂದೆ ಬೈಕ್ ನಿಲ್ಲಿಸಿದ್ದ ಶಿವಮೂರ್ತಿ ಅವರ ವಾಹನಕ್ಕೆ ಕಾರಿನಲ್ಲಿ ಬಂದ ಮೂವರು ವಿದ್ಯಾರ್ಥಿಗಳು ಮೊದಲು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಶಿವಮೂರ್ತಿ ಹಾಗೂ ಅವರ ಕುಟುಂಬಸ್ಥರು ಹೊರಬಂದು ಪ್ರಶ್ನಿಸಿದ್ದು, ಪರಸ್ಪರ ವಾಗ್ವಾದ ನಡೆದಿದೆ.

ವಾಗ್ವಾದದ ಬಳಿಕ ಆರೋಪಿಗಳು ಏಕಾಏಕಿ ಕಾರನ್ನು ಮುಂದೆ ಚಲಾಯಿಸಿ ಶಿವಮೂರ್ತಿ ಅವರ ಮೇಲೆ ಹರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಶಿವಮೂರ್ತಿ ಅವರ ಮಗ, ಸೊಸೆ ಹಾಗೂ ಮೊಮ್ಮಗ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಸ್ಥಳದಲ್ಲಿದ್ದವರ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಕರಣ ಸಂಬಂಧ ಆದಿತ್ಯ (20), ರಿತಿಕ್ ಕುಮಾರ್ (19) ಮತ್ತು ಹರೀಶ್ (19) ಎಂಬ ಮೂವರು ಆರೋಪಿಗಳನ್ನು ಹೊಸೂರು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದ್ದು, ಮದ್ಯದ ನಶೆಯಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ರಶ್ಮಿಕಾ ಮಂದಣ್ಣ-ವಿಜಯ್ ಧರಿಸಿದ್ದ ಚಿನ್ನದ ಬೆಲೆ ಎಷ್ಟು ಕೋಟಿ ರೂಪಾಯಿ? ಇಲ್ಲಿದೆ ಮಾಹಿತಿ

0

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ರಾಜರ ಥೀಮ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಇಬ್ಬರೂ ಧರಿಸಿದ ಆಭರಣಗಳ ಬೆಲೆ ಇದೀಗ ಎಲ್ಲರ ಗಮನ ಸೆಳೆದಿದೆ.

ಡೆಸ್ಟಿನೇಷನ್ ವೆಡ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ದಂಪತಿ, ರಾಜಸ್ಥಾನದ ಉದಯಪುರದಲ್ಲಿ ವೈಭವಶಾಲಿಯಾಗಿ ಮದುವೆಯಾದರು ಎನ್ನಲಾಗುತ್ತಿದೆ. ಮದುವೆಯ ಥೀಮ್ ರಾಜಮನೆತನದ ಶೈಲಿಯಲ್ಲಿ ಇದ್ದ ಕಾರಣ, ವಿಜಯ್ ದೇವರಕೊಂಡ ರಾಜನಂತೆ ಮತ್ತು ರಶ್ಮಿಕಾ ಮಂದಣ್ಣ ಯುವರಾಣಿಯಂತೆ ಮೆರಗಿನಿಂದ ಕಂಗೊಳಿಸಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇಬ್ಬರೂ ಧರಿಸಿದ ಚಿನ್ನದ ಸರಗಳು, ಬಳೆಗಳು ಮತ್ತು ಡೈಮಂಡ್ ಆಭರಣಗಳು ವಿಶೇಷವಾಗಿ ಗಮನ ಸೆಳೆದಿವೆ. ವರದಿಗಳ ಪ್ರಕಾರ, ರಶ್ಮಿಕಾ ಸುಮಾರು 1.5 ರಿಂದ 2 ಕೆಜಿ ಚಿನ್ನ ಧರಿಸಿದ್ದರು ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ಕೂಡ ಬಹಳ ಪ್ರಮಾಣದ ಚಿನ್ನಾಭರಣಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತಿದೆ.

ಒಂದು ಕೆಜಿ ಚಿನ್ನದ ಬೆಲೆ ಒಂದೂವರೆ ಕೋಟಿ ರೂಪಾಯಿ ಇದ್ದು, ಡೈಮಂಡ್ ಹಾಗೂ ವಿನ್ಯಾಸ ವೆಚ್ಚ ಸೇರಿ ರಶ್ಮಿಕಾ ಮತ್ತು ವಿಜಯ್ ಧರಿಸಿದ ಆಭರಣಗಳ ಒಟ್ಟು ಮೌಲ್ಯ 7 ಕೋಟಿಗೂ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ರಶ್ಮಿಕಾ ಧರಿಸಿದ ಆಭರಣಗಳ ಮೌಲ್ಯ ಸುಮಾರು 5 ಕೋಟಿ ರೂಪಾಯಿ ಹಾಗೂ ವಿಜಯ್ ಧರಿಸಿದ ಆಭರಣಗಳ ಮೌಲ್ಯ 2 ಕೋಟಿ ರೂಪಾಯಿ ಇರಬಹುದು ಎಂಬ ಚರ್ಚೆ ನಡೆಯುತ್ತಿದೆ.

ಆದರೆ, ಈ ಕುರಿತು ದಂಪತಿ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಷ್ಟೇ ಇದಾಗಿದ್ದು, ಅಧಿಕೃತ ದೃಢೀಕರಣ ಇನ್ನಷ್ಟೇ ಬೇಕಾಗಿದೆ.

ಪ್ರಧಾನಿ ಮೋದಿ ರಾಜಸ್ಥಾನ–ಗುಜರಾತ್ ಭೇಟಿ: 37,000 ಕೋಟಿ ರೂ. ಯೋಜನೆಗಳ ಉದ್ಘಾಟನೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ, 37,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ರಾಜಸ್ಥಾನದಲ್ಲಿ 16,680 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ, ನಗರಾಭಿವೃದ್ಧಿ, ಶುದ್ಧ ಕುಡಿಯುವ ನೀರು, ರಸ್ತೆ ಜಾಲ, ನೀರಾವರಿ, ಇಂಧನ ಮತ್ತು ಕೈಗಾರಿಕಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ ನಡೆಯಲಿದೆ. ಜೊತೆಗೆ, ಜೈಪುರ–ಬಂಡಿಕುಯಿ 4-ಪಥ ಎಕ್ಸ್ಪ್ರೆಸ್‌ವೇ, ದೆಹಲಿ–ವಡೋದರಾ 8-ಪಥ ಎಕ್ಸ್ಪ್ರೆಸ್‌ವೇ, ಜೋಧ್ಪುರ 4-ಪಥ ಎತ್ತರದ ರಸ್ತೆ ಮತ್ತು ಬರಾನ್‌ನಲ್ಲಿ ಹೊಸ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅಡಿಪಾಯ.

ರಾಜಸ್ಥಾನದಲ್ಲಿ ಐದು 220 ಕೆವಿ, ಎರಡು 400 ಕೆವಿ ಗ್ರಿಡ್ ಸಬ್ಸ್ಟೇಷನ್‌ಗಳಿಗೆ ಅಡಿಪಾಯ ಮತ್ತು 21,800ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್ಪಿವಿ ಲಸಿಕೆ ಅಭಿಯಾನ ಪ್ರಾರಂಭವಾಗಲಿದೆ.

ಗುಜರಾತ್ ಸನಂದ್‌ನಲ್ಲಿ 22,500 ಕೋಟಿ ರೂ. ವೆಚ್ಚದ ದೇಶದ ಮೊದಲ ದೊಡ್ಡ ಸೆಮಿಕಂಡಕ್ಟರ್ ಅಸೆಂಬ್ಲಿ ಸೌಲಭ್ಯ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಚೆನ್ನೈಗೆ ಪ್ರಯಾಣ ಮಾಡಿ, ತಮಿಳುನಾಡು ಮತ್ತು ಪುದುಚೇರಿ ಭೇಟಿಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ!

0

ಮಂಡ್ಯ: ಮಾನಸಿಕ ಖಿನ್ನತೆಗೆ ಒಳಗಾಗಿ ವೈದ್ಯ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ನಗರದ ಹರಿಪ್ರಿಯ ಹೊಟೇಲ್‌ನಲ್ಲಿ ನಡೆದಿದೆ. ಕೆ.ಆರ್.ನಗರ ಮೂಲದ ಸುಖದೇವ್ (53) ಆತ್ಮಹತ್ಯೆಗೆ ಶರಣಾದ ವೈದ್ಯನಾಗಿದ್ದು,

ಮೈಸೂರಿನ ಖಾಸಗಿ ಕ್ಲಿನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ನಗರದಲ್ಲಿರುವ ಹರಿಪ್ರಿಯ ಹೊಟೇಲ್‌ನಲ್ಲಿ ರೂಂ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮದ್ಯ ಸೇವನೆ ಮಾಡಿ, 30 ಮಾತ್ರೆಗಳ ಔಷಧ ಸೇವಿಸಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ.

error: Content is protected !!