Home Blog Page 3

ನಾಮಪತ್ರ ಸಲ್ಲಿಕೆಗೆ ಸಾವಿರಾರು ಜನರ ಆಗಮನದ ನಿರೀಕ್ಷೆ

0

ವಿಜಯಸಾಕ್ಷಿ ಸುದ್ದಿ, ಗದಗ : ಏಪ್ರಿಲ್ 19ರಂದು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಜನರು ಬರುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದುಗಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಎಂಟು ಕ್ಷೇತ್ರದ ಜನರು ಕಾರ್ಯಕರ್ತರಿಗೆ ಬರಲು ಸೂಚನೆ ನೀಡಿದ್ದೇವೆ. ಸಾವಿರಾರು ಜನರು ಬರುತ್ತಾರೆ. ಅಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಮಾಜಿ ಸಚಿವರಾರ ಬೈರತಿ ಬಸವರಾಜ, ಮುರುಗೇಶ್ ನಿರಾಣಿ ಆಗಮಿಸಲಿದ್ದಾರೆ ಎಂದರು.

ಸಂಸದ ಕರಡಿ ಸಂಗಣ್ಣ ಬಿಜೆಪಿ ತೊರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಗಣ್ಣ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ದುರಾದೃಷ್ಟಕರ. ನಾವು ಅವರ ಮನವೊಲಿಸುವ ಕೆಲಸ ಮಾಡಿದ್ದರೂ, ಕಾಂಗ್ರೆಸ್‌ನವರು ಅವರಿಗೆ ಪ್ರಚೋದನೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದವರು ಬೇಸರ ಮಾಡಿಕೊಳ್ಳುವುದು ಸಹಜ. ಇದು ರಾಷ್ಟ್ರೀಯ ಚುನಾವಣೆ ಆಗಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಿಂದಲೂ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬೆಳ್ಳಟ್ಟಿ ಗ್ರಾಮದಲ್ಲಿ ನೂರಾರು ಜನರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸ್ಥಳೀಯವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ

0

ವಿಜಯಸಾಕ್ಷಿ ಸುದ್ದಿ, ರೋಣ : ಸತತ ಮೂರು ದಿನಗಳ ಕಾಲ ಮಾರನಬಸರಿ ಗ್ರಾಮದಲ್ಲಿ ಜರುಗಿದ ಗ್ರಾಮ ದೇವತೆಯ ಜಾತ್ರಾಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದ್ದು, ಮೂರು ದಿನಗಳ ಧಾರ್ಮಿಕ ಕಾರ್ಯದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಂಡು ದ್ಯಾಮವ್ವ ದೇವಿಯ ದರ್ಶನ ಪಡೆದರು.

ಗ್ರಾಮ ದೇವತೆಯ ಜಾತ್ರೆ ಕೊನೆಯದಾಗಿ 5 ವರ್ಷಗಳ ಹಿಂದೆ ನಡೆದಿತ್ತು. ಹೀಗಾಗಿ, ಗ್ರಾಮದ ಹಿರಿಯರು ಹಾಗೂ ಭಕ್ತರು ದೇವತೆಯ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ನಿರ್ಧಾರ ಕೈಗೊಂಡು, ಏ.14ರಿಂದ 16ರವರೆಗೆ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಿದರು.

ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು. ಏ.15ರಂದು ದೇವಿಯ ಕಟ್ಟೆಯ ಬಳಿ ಡೊಳ್ಳಿನ ಪದಗಳ ಜುಗಲ್‌ಬಂದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ನಾಗರಿಕರು ಜುಗಲ್‌ಬಂದಿ ಕಾರ್ಯಕ್ರಮವನ್ನು ವೀಕ್ಷಿಸಿ, ದೇವಿಯ ಆಸ್ಥಾನದಲ್ಲಿ ಜಾಗರಣೆ ಕೈಗೊಂಡು ಬೆಳಗಿನ ಜಾವ ಗ್ರಾಮ ದೇವತೆಯ ದರ್ಶನ ಪಡೆದು ಧನ್ಯತೆಯನ್ನು ಮೆರೆದರು.

ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ:ಮಹೇಶಕುಮಾರ ವಾಗಿ

ವಿಜಯಸಾಕ್ಷಿ ಸುದ್ದಿ, ರೋಣ : ತಾಲೂಕಿನ ಯಾವುದೇ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕುಡಿಯುವ ನೀರು ಸೇರಿದಂತೆ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಧಿಕಾರಿಗಳು ಹಾಗೂ ಗ್ರಾ.ಪಂ ಪಿಡಿಓಗಳು ನಿಗಾ ವಹಿಸಬೇಕು ಎಂದು ನೋಡಲ್ ಅಧಿಕಾರಿ ಮಹೇಶಕುಮಾರ ವಾಗಿ ಹೇಳಿದರು.

ಅವರು ಬುಧವಾರ ತಾ.ಪಂ ಸಭಾಭವನದಲ್ಲಿ ಜರುಗಿದ ಬರ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ರೋಣ ತಾಲೂಕಿನ ಎಲ್ಲ ಗ್ರಾಮಗಳು ಹಾಗೂ ಶಹರಗಳಲ್ಲಿ ಸಂಪೂರ್ಣ ಮಳೆಯಾಗುವ ತನಕ ಅಧಿಕಾರಿಗಳು ಹಾಗೂ ಪಿಡಿಓಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಮುಖ್ಯವಾಗಿ, ಕುಡಿಯುವ ನೀರಿನ ಸಮಸ್ಯೆ ಹೊಂದಿರುವ ಗ್ರಾಮಗಳ ಬಗ್ಗೆ ಪಿಡಿಓಗಳು ಸಭೆಗೆ ಮಾಹಿತಿ ನೀಡಬೇಕು. ಅಂದಾಗ ಮಾತ್ರ ಸಮಸ್ಯೆ ನಿವಾರಿಸಲು ಸಾದ್ಯವಾಗುತ್ತದೆ ಎಂದು ಸಭೆಗೆ ವಿವರಿಸಿದರು.

ಈ ಸಂಧರ್ಭದಲ್ಲಿ ಹಿರೇಹಾಳ, ಬೆಳವಣಕಿ ಗ್ರಾ.ಪಂಗಳ ಪಿಡಿಓಗಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲದಿದ್ದರೂ ಸಹ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗಳ ಕೊರತೆಯಾಗಿದ್ದು, ಇದನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ಆರ್‌ಡಬ್ಲುಎಸ್ ಇಇ ಜಗದೀಶ ಮಡಿವಾಳ, ಅನುದಾನದ ಕೊರತೆಯಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ತತಕ್ಷಣ ಏಜೆನ್ಸಿಗಳ ಮೂಲಕ ಕಾಮಗಾರಿಯನ್ನು ನಡೆಸಲಾಗುವುದು ಎಂದರು.

ಜಿಗಳೂರ ಕೆರೆಯಲ್ಲಿ ನೀರು ಇರುವುದರಿಂದ ಸದ್ಯದ ಸ್ಥಿತಿಯಲ್ಲಿ ರೋಣ ಪುರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎಂದು ಮುಖ್ಯಾಧಿಕಾರಿ ಕುಲಕರ್ಣಿ ಸಭೆಗೆ ಮಾಹಿತಿ ನೀಡಿದರು.

ಅಬ್ಬಿಗೇರಿ, ಜಕ್ಕಲಿ, ಕುರಹಟ್ಟಿ, ಹೊಳೆಮಣ್ಣೂರ, ಹೊಳೆಆಲೂರ ಗ್ರಾ.ಪಂ ಪಿಡಿಓಗಳು ಸಹ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎಂದು ನೋಡಲ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.

ತಹಸೀಲ್ದಾರ್ ನಾಗರಾಜ ಕೆ, ತಾ.ಪಂ ಇಒ ಎಸ್.ಕೆ. ಇನಾಮದಾರ, ಎಡಿ ರಿಯಾಜ್ ಖತೀಬ ಉಪಸ್ಥಿತರಿದ್ದರು.

 

ಕುಡಿಯುವ ನೀರು ಸಂಗ್ರಹ ಟ್ಯಾಂಕರ್‌ಗಳನ್ನು ಶುಚಿಗೊಳಿಸಬೇಕು. ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು. ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ರೋಗಗಳು ಹರಡದಂತೆ ಮುನ್ನಚ್ಚೆರಿಕೆಯನ್ನು ಅಧಿಕಾರಿಗಳು, ಪಿಡಿಓಗಳು ವಹಿಸಬೇಕು.
– ಮಹೇಶಕುಮಾರ ವಾಗಿ.
ನೋಡಲ್ ಅಧಿಕಾರಿ, ರೋಣ.

 

ಶ್ರೀರಾಮ ಎಲ್ಲರ ಬದುಕಿನ ಆದರ್ಶ : ಮುರಘೇಂದ್ರಸ್ವಾಮಿ ಹಿರೇಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸೊಪ್ಪಿನಕೇರಿ ಓಣಿಯಲ್ಲಿ ಶ್ರೀರಾಮ ನವಮಿ ನಿಮಿತ್ತ ಬುಧವಾರ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಹಾವಳಿ ಆಂಜನೇಯ ದೇವಸ್ಥಾನದ ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ ಮಾತನಾಡಿ, ಶ್ರೀರಾಮ ಕೇವಲ ವ್ಯಕ್ತಿಯಲ್ಲ, ಪ್ರತಿಯೊಬ್ಬರ ಬದುಕಿನ ಆದರ್ಶವಾಗಿದ್ದಾರೆ. ಭಕ್ತಿ, ಶೃದ್ಧೆ, ಸತ್ಯ, ಶಾಂತಿ, ಪ್ರೀತಿ, ಧರ್ಮ, ಸಂಸ್ಕಾರ, ಮಾನವೀಯತೆ, ಕರ್ತವ್ಯಪ್ರಜ್ಞೆಗಳನ್ನು ರೂಢಿಸಿಕೊಂಡು ಸಾರ್ಥಕ ಜೀವನ ಹೊಂದಬೇಕು ಎಂಬುದನ್ನು ಸಾಕ್ಷೀಕರಿಸಿದ್ದಾನೆ. ಕುಟುಂಬ, ಸಮಾಜ, ದೇಶಕ್ಕಾಗಿ ಬದುಕುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ಈರಣ್ಣ ಮುಳಗುಂದ, ವಿರೇಶ ಚಿಂಚಲಿ, ಈರಣ್ಣ ಪೂಜಾರ, ಅರುಣ ಮೆಕ್ಕಿ, ಅಮಿತ ಗುಡಗೇರಿ, ಶಿವು ಮೆಕ್ಕಿ, ಆದೇಶ ಸವಣೂರ, ಸುನೀಲ ಮುಳಗುಂದ, ಯಶವಂತ ಶಿರಹಟ್ಟಿ, ಸೋಮು ಗೌರಿ, ಕುಮಾರ ಕಣವಿ, ವೈಭವ ತಿರುಮಲೆ, ಬಾಲಾಜಿ ಕಲಾಲ್, ಈರಣ್ಣ ಮೆಣಸಿನಕಾಯಿ, ದುಂಡೇಶ ಸವಣೂರ, ಸೋಮು ನರೇಗಲ್, ನೀಲೇಶ ಹುಳಕನವರ ಸೇರಿ ಹಲವರಿದ್ದರು.

ಮೋದಿಯವರ ಆಳ್ವಿಕೆಯಲ್ಲಿ ದೇಶ ಬಲಿಷ್ಠವಾಗಿದೆ

ವಿಜಯಸಾಕ್ಷಿ ಸುದ್ದಿ, ಹಾವೇರಿ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ತುಂತುರು ಹನಿ ನೀರಾವರಿ ಪೈಪುಗಳು ಹಾಗೂ ರೈತರ ಪಂಪ್‌ಸೆಟ್‌ಗೆ ಟಿಸಿ ಅಳವಡಿಸಲು ಕಮಿಷನ್ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಭಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕನಕಾಪುರ, ಕುರುಬಗೊಂಡ, ಕಬ್ನೂರ, ಕುಳೇನೂರು, ಸಂಗೂರು, ದೇವಿಹೊಸೂರು, ಆಲದಕಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

bommay

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಬೆಲೆಯೂ ಹೆಚ್ಚಳವಾಗಿದೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಳವಾಗಿದೆ. ಮದ್ಯದ ದರವೂ ಹೆಚ್ಚಳವಾಗಿದೆ. ಈ ಸರ್ಕಾರದ ಅವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ ಎಂದು ಹೇಳಿದರು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಗ್ಯಾರಂಟಿ. ಕಾಂಗ್ರೆಸ್‌ನವರು ಮಹಿಳೆಯರಿಗೆ ಒಂದು ಲಕ್ಷ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಬಹುಮತಕ್ಕೆ ಬೇಕಾದಷ್ಟು ಸ್ಥಾನದಲ್ಲಿ ಸ್ಪರ್ಧೆ ಮಾಡಿಲ್ಲ. ಅವರು ರಾಜ್ಯದ ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡುವ ನಾಯಕ. ದೇಶದ ನೂರು ಕೋಟಿ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲರ ಮನೆಗಳಿಗೂ ನೀರು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಜಲ ಜಿವನ್ ಮಿಷನ್ ಅಡಿ ಮನೆಗಳಿಗೆ ನಳದ ನೀರು ಒದಗಿಸಲಾಗಿದೆ. ಲಾಲ್ ಬಹಾದ್ದೂರು ಶಾಸ್ತ್ರೀ ನಂತರ ಅಪ್ಪಟ ದೇಶ ಪ್ರೇಮಿ ನರೇಂದ್ರ ಮೋದಿಯವರು. ಅವರು ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಕೊಡಿಸಿ ಜೀವ ಉಳಿಸಿದ್ದಾರೆ. ಎಲ್ಲರಿಗೂ 5 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದಾರೆ. ಮನೆಗಳಿಗೆ ನಳದ ಮೂಲಕ ನೀರು ಕೊಡುತ್ತಿದ್ದಾರೆ. ನಾವು ಅವರ ಋಣ ತೀರಿಸಬೇಕಾಗಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಮೋದಿಯವರ ಋಣ ತೀರಿಸೋಣ ಎಂದು ಹೇಳಿದರು.

ಪ್ರಚಾರದ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ್ ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಹತ್ತು ವರ್ಷದಲ್ಲಿ ದುರ್ಬಲ ದೇಶವನ್ನು ಬಲಿಷ್ಠ ದೇಶವನ್ನಾಗಿ ಮಾಡಿದ್ದಾರೆ. ಅವರ ಬಗ್ಗೆ ದೇಶಾದ್ಯಂತ ಅಲೆ ಇದೆ. ಅವರು ಅಪ್ಪಟ ದೇಶ ಭಕ್ತ. ಅವರ ತಾಯಿ ತೀರಿಕೊಂಡಿದ್ದರೂ ಅಂತ್ಯಸಂಸ್ಕಾರ ಮಾಡಿ ದೇಶ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮನಮೋಹನ ಸಿಂಗ್ ಕಾಲದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಿತ್ತು. ಮೋದಿಯವರು ಬಂದ ಮೇಲೆ ಅವರ ತಾಣಗಳಿಗೆ ಹೊಕ್ಕು ಹೊಡೆದು ಬಂದರು. ಭಯೋತ್ಪಾಕದರಿಗೂ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

 

ಪ್ರಜಾಪ್ರಭುತ್ವ ಬಲಪಡಿಸಲು ಕೈ ಜೋಡಿಸಿ : ಎಸ್.ಭರತ್

ವಿಜಯಸಾಕ್ಷಿ ಸುದ್ದಿ, ಗದಗ : ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನವು `ಬೈಸಿಕಲ್ ಜಾಥಾ’ ಮೂಲಕ ಮಂಗಳವಾರ ಜರುಗಿತು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಮುಂಭಾಗ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ ಸಿಇಒ ಎಸ್. ಭರತ್ ಅವರು ಬೈಸಿಕಲ್‌ನಲ್ಲಿ ಸಂಚರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇದೇ ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅರ್ಹರೆಲ್ಲರೂ ತಪ್ಪದೇ ಮತ ಚಲಾಯಿಸಿ. ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನಕ್ಕೆ ಸಹಕರಿಸಬೇಕು. 18 ವರ್ಷ ಪೂರ್ಣಗೊಂಡ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವ ಬಲಪಡಿಸಲು ಕೈ ಜೋಡಿಸಬೇಕು ಎಂದು ಕೋರಿದರು.

ಕಡ್ಡಾಯವಾಗಿ ಮತದಾನ ಮಾಡಿ-ಪ್ರಜಾಪ್ರಭುತ್ವ ಬಲಪಡಿಸಿ, ನಮ್ಮ ಮತ-ನಮ್ಮ ಹಕ್ಕು, ಮತದಾರರು ಮತದಾನದಿಂದ ಹೊರಗುಳಿಯಬಾರದು, ಪ್ರತಿಶತ ಮತದಾನ–ಉತ್ತಮ ಸಮಾಜ ನಿರ್ಮಿಸಿ, ಮತದಾನಕ್ಕಿಂತ ಮತ್ತೊಂದಿಲ್ಲ, ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಎಂಬ ಘೋಷವಾಕ್ಯಗಳು ಮೊಳಗಿದವು.
ಜಿ.ಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ಬೈಸಿಕಲ್ ಜಾಥಾದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬೈಸಿಕಲ್ ಜಾಥಾವು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಪಂಚಾಕ್ಷರಿ ನಗರದ ಶುದ್ಧ ಕುಡಿಯುವ ನೀರಿನ ಘಟಕ, ಚೇತನ ಕ್ಯಾಂಟೀನ್, ಹಾತಲಗೇರಿ ನಾಕಾ, ಬಳ್ಳಾರಿ ಗೇಟ್, ಕುರಹಟ್ಟಿ ಪೇಟೆ, ಟೆಂಗಿನಕಾಯಿ ಬಜಾರ, ಜರ್ಮನ್ ಆಸ್ಪತ್ರೆ, ಸಹಸ್ರಾರ್ಜುನ ವೃತ್ತ, ಮಹಾರಾಣ ಪ್ರತಾಪ ಸಿಂಹ ವೃತ್ತ, ಹಳೇ ಕೋರ್ಟ್ ವೃತ್ತ, ಗಾಂಧಿ ವೃತ್ತ, ರೋಟರಿ ವೃತ್ತ, ಭೂಮರಡ್ಡಿ ವೃತ್ತದ ಮೂಲಕ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ತಲುಪಿತು.

ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಅವರಿಗೆ ಮೌಲ್ಯಯುತ ಮತ್ತು ನೈತಿಕ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯ ಸಂಚಾಲಕಿ ಬಿ.ಕೆ. ಸರೋಜಕ್ಕ ಹೇಳಿದರು.

ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯಲ್ಲಿ ಕಳೆದ 10 ದಿನಗಳಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಮುಖ್ಯವಾಗಿ ಬೇಕಾಗಿರುವ ನೈತಿಕ ಮತ್ತು ಮೌಲ್ಯಯುತ ಶಿಕ್ಷಣ ಇಲ್ಲದ್ದರಿಂದ ಭವಿಷ್ಯದಲ್ಲಿ ಅವರು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ದುಶ್ಚಟದಿಂದ ದೂರ ಉಳಿಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಹಿರಿಯರಿಗೆ ಗೌರವ, ಸಾತ್ವಿಕ ಆಹಾರ ಸೇವನೆ, ಉತ್ತಮ ದಿನಚರಿ, ಒಳ್ಳೆಯ ಸ್ನೇಹವನ್ನು ಬೆಳೆಸಿಕೊಳ್ಳುವುದರಿಂದ ಈ ಸಮಾಜಕ್ಕೆ ಸದೃಡವಾದ ನಾಗರಿಕರನ್ನಾಗಿ ಮಾಡಬಹುದು ಎಂದರು.

5ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ಮೌಲ್ಯಯುಕ್ತ ಆಟಗಳು, ಹಾಡುಗಳು, ಶ್ಲೋಕಗಳ ಕಂಠಪಾಠ, ಜ್ಞಾಪಕ ಶಕ್ತಿ, ಏಕಾಗ್ರತೆ, ದೃಢತೆ, ಇಚ್ಛಾಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುವುದು ಮತ್ತು ರಾಜಯೋಗ ಧ್ಯಾನದ ಬಗ್ಗೆ ತರಬೇತಿ ನೀಡಲಾಯಿತು. ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ಡಾ. ವೈಶಾಲಿ ಬಿರಾದಾರ, ಕೆ.ಸಿ. ಹಿರೇಮಠ, ಸಿದ್ದಪ್ಪ ಚಬ್ಬರಭಾವಿ ಸೇರಿದಂತೆ ದೈವಿ ಪರಿವಾರದವರು ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಅನ್ವಯಿಸುತ್ತವೆ : ಗುರುನಾಥ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾಂಗ್ರೆಸ್ ಪಕ್ಷ ಬಡವರಿಗಾಗಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳು ಎಂದು ಟೀಕೆ ಮಾಡಿ, ಬಡವರನ್ನು ಹೀಯಾಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಆರೋಪಿಸಿದರು.

ಅವರು ಎಪಿಎಮ್‌ಸಿ ಯಾರ್ಡ್ನಲ್ಲಿ ಕೂಲಿಕಾರ್ಮಿಕರು ಮತ್ತು ಹಮಾಲರ ಸಂಘದ ಸದಸ್ಯರನ್ನು ಉದ್ದೇಶಿಸಿ ಹಾವೇರಿ ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರ ಪರವಾಗಿ ಪ್ರಚಾರ ಕೈಗೊಂಡು ಮಾತನಾಡಿದರು.

ಗ್ಯಾರಂಟಿ ಯೋಜನೆಗಳು ಎಲ್ಲ ಜಾತಿ, ಧರ್ಮ, ಪಕ್ಷದವರಿಗೂ ಅನ್ವಯಿಸುತ್ತವೆ. ಗ್ಯಾರಂಟಿ ಯೋಜನೆಗಳನ್ನು ಟೀಕೀಸುವ ಮೊದಲು ಬಡವರಿಗೆ, ನೊಂದವರಿಗೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಶ್ರಮಿಕರ, ಕಾರ್ಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಪಡಗೇರಿ ಮಾತನಾಡಿ, ಕಾಂಗ್ರೆಸ್ ಜನಪರ ಯೋಜನೆಗಳನ್ನು ಮನೆ ಮನೆಗೂ ಹೇಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಜಣ್ಣ ಹೊಳಲಾಪುರ, ನೀಲಪ್ಪ ಪೂಜಾರ, ಶರಣು ಗೋಡಿ, ಕಿರಣ ನವಲೆ, ಎಪಿಎಮ್‌ಸಿ ಹಮಾಲರ ಸಂಘದ ಅಧ್ಯಕ್ಷ ಮುದಕಣ್ಣ ಗದ್ದಿ, ಸಂತೋಷ ಚಕ್ರಸಾಲಿ, ಲೆಂಕೆಪ್ಪ ಶೆರಸೂರಿ, ಮಲ್ಲಪ್ಪ ಗದ್ದಿ, ನೀಲಪ್ಪ ಶೆರಸೂರಿ, ನಿಂಗಪ್ಪ ಶೆರಸೂರಿ ಸೇರಿದಂತೆ ಕಾರ್ಮಿಕ ಮುಖಂಡರು, ಕೂಲಿ ಕಾರ್ಮಿಕರ ಇದ್ದರು.

ಪಕ್ಷದ ಗೆಲುವಿಗೆ ಮತ್ತಷ್ಟು ಬಲ : ಜಿ.ಎಸ್. ಗಡ್ಡದೇವರಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಆಮ್ ಆದ್ಮಿ ಪಕ್ಷ ನೈತಿಕ, ಸೈದ್ಧಾಂತಿಕವಾಗಿ ತನ್ನದೇ ಆದ ನೆಲೆಗಟ್ಟನ್ನು ಹೊಂದಿರುವ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಜಿಲ್ಲೆಯ ಆಮ್ ಆದ್ಮಿ ಪಕ್ಷದಿಂದ ಬೆಂಬಲ ಸೂಚಿಸುತ್ತಿರುವುದು ಪಕ್ಷದ ಗೆಲುವಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.

ಅವರು ತಮ್ಮ ನಿವಾಸದಲ್ಲಿ ಗದಗ ಜಿಲ್ಲೆಯ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿ ಮಾತನಾಡಿದರು.

ಆಮ್ ಆದ್ಮಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದು ಒಂದು ದೊಡ್ಡ ಶಕ್ತಿ ಬಂದಂತಾಗಿದೆ. ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಆಮ್ ಆದ್ಮಿ ಪಕ್ಷ ಸೇರಿ ಕೆಲಸ ಮಾಡುತ್ತಿವೆ ಹಾಗೆಯೇ ಇಲ್ಲಿಯೂ ಸಹ ಒಟ್ಟಾಗಿ ಕ್ಷೇತ್ರದಲ್ಲಿ ಸಂಚಾರ ಮಾಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದರು.

ಕಾಂಗ್ರೆಸ್ ಮುಖಂಡರಾದ ಚನ್ನಪ್ಪ ಜಗಲಿ, ವಿರೂಪಾಕ್ಷಪ್ಪ ಪಡಗೇರಿ, ಗುರುನಾಥ ದಾನಪ್ಪನವರ, ಶರಣು ಗೋಡಿ, ಕಿರಣ ನವಲೆ, ರಾಜು ಹೊಳಲಾಪುರ, ಶಿವಾನಂದ ಲಿಂಗಶೆಟ್ಟಿ, ಕೆ.ಓ. ಹುಲಿಕಟ್ಟಿ, ಮಹಾಂತೇಶ ತೋಟದ, ಮುದಕಣ್ಣ ಗದ್ದಿ, ಮೋಹನ ನಂದೆಣ್ಣನವರ, ಎಎಪಿ ಸದಸ್ಯರಾದ ಅಶೋಕ ಉಳ್ಳಾಗಡ್ಡಿ, ರಾಹುಲ ಮಡಿವಾಳರ, ಷಣ್ಮುಖ ಬಡ್ನಿ, ಬಸವರಾಜ ಬಡ್ನಿ, ಮೌಲಾಸಾಬ್ ಜಾಲವಾಡಗಿ, ಸುಭಾಷಚಂದ್ರ ಕುಂಬಾರ, ಶಿವಣ್ಣ ಹಳ್ಳಿಗುಡಿ ಮುಂತಾದವರಿದ್ದರು.

ಗದಗ ಜಿಲ್ಲಾ ಎಎಪಿ ಮುಖಂಡ ಮಲ್ಲಿಕಾರ್ಜುನ ದೊಡ್ಡಮನಿ ಮಾತನಾಡಿ, ರಾಷ್ಟçಮಟ್ಟದಲ್ಲಿ ಇಂಡಿಯಾ ಒಕ್ಕೂಟದಲ್ಲಿ ಎಎಪಿ ಸೇರಿಕೊಂಡಿದ್ದು, ಅದರಂತೆ ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.

ಕೊಣ್ಣೂರು ಚೆಕ್‌ಪೋಸ್ಟ್ ಗೆ ಅಧಿಕಾರಿಗಳ ಭೇಟಿ

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕೊಣ್ಣೂರು ಮತ್ತು ಕಲಕೇರಿ ಚೆಕ್‌ಪೋಸ್ಟ್ ಗಳಲ್ಲಿ  ಚುನಾವಣೆ ಅಕ್ರಮ ತಡೆಗಟ್ಟಲು ತಾಲೂಕು ಆಡಳಿತ ಮತ್ತು ಚುನಾವಣೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರತಿನಿತ್ಯ ಚೆಕ್‌ಪೋಸ್ಟ್ ಗಳಿಗೆ ಭೇಟಿ ನೀಡುತ್ತಿರುವ ಚುನಾವಣೆ ಅಧಿಕಾರಿಗಳು, ಅಕ್ರಮ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ, ನರಗುಂದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕಿನ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳಾದ ಸೋಮಶೇಖರ್ ಬಿರಾದರ್ ಕೊಣ್ಣೂರು ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಕ್‌ಪೋಸ್ಟ್ ನಲ್ಲಿ ನಡೆಸಲಾಗುವ ತಪಾಸಣೆಯ ದಾಖಲೆಗಳನ್ನು ಮತ್ತು ತಪಾಸಣೆ ಕಾರ್ಯವನ್ನು ಸೆರೆಹಿಡಿಯುವ ಕ್ಯಾಮೆರಾದ ಸೂಕ್ತ ಕಾರ್ಯ ನಿರ್ವಹಣೆಯ ಕುರಿತು ಪರಿಶೀಲಿಸಿದರು. ಕೆಲವು ವಾಹನಗಳನ್ನು ತಡೆದ ಇಓ ಮತ್ತು ತಹಸೀಲ್ದಾರರು ತಪಾಸಣೆ ನಡೆಸಿದರು. ಸ್ಥಳದಲ್ಲಿದ್ದ ಚೆಕ್‌ಪೋಸ್ಟ್ ಸಿಬ್ಬಂದಿಗಳಿಗೆ ಚುನಾವಣೆ ಅಕ್ರಮದಲ್ಲಿ ಯಾರೇ ಭಾಗಿಯಾದರೂ ಅಂತಹವರ ವಿರುದ್ಧ ಚುನಾವಣೆ ನಿಯಮಾನುಸಾರ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

error: Content is protected !!