Home Blog Page 3

ರಾಮಾಯಣದ ಪ್ರಸಂಗಗಳು ಬದುಕಿಗೆ ಆದರ್ಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಶಂಕರ ಭಾರತಿ ಮಠದಲ್ಲಿ ಬ್ರಹ್ಮವೃಂದದ ವತಿಯಿಂದ ಬುಧವಾರ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.

ಶ್ರೀಮಠದಲ್ಲಿ ಸೇರಿದ್ದ ಸುಮಂಗಲೆಯರು ಶ್ರೀರಾಮ ಸ್ವರೂಪಿ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಭಕ್ತಿಯಿಂದ ತೂಗಿ ರಾಮನಾಮದ ಭಕ್ತಿಗೀತೆ ಹಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆ.ಮೂ. ಬಾಲಚಂದ್ರಭಟ್ ಹುಲಮನಿ, ಧರ್ಮ ಸಂಸ್ಥಾಪನೆಗಾಗಿ ಮರ್ಯಾದಾ ಪುರುಷೋತ್ತಮನಾಗಿ ಅವತಾರವೆತ್ತಿದ ಶ್ರೀರಾಮ ಸಾಕ್ಷಾತ್ ದೇವರೇ ಆಗಿದ್ದಾನೆ. ಸೂರ್ಯವಂಶಸ್ಥನಾದ ಶ್ರೀರಾಮನು ಕಾಲಾತೀತ, ಗುಣಾತೀತನಾಗಿದ್ದು, ಶ್ರೀರಾಮನೇ ಮೂಲವಾಗಿರುವ ರಾಮಾಯಣದ ಪ್ರಸಂಗಗಳು ಬದುಕಿಗೆ ಆದರ್ಶವಾಗಿವೆ. ಶ್ರೀರಾಮ ಎಲ್ಲರ ಬದುಕಿಗೂ ಆದರ್ಶ ಮತ್ತು ಪೂಜನೀಯವಾಗಿದ್ದು, ಶ್ರೀರಾಮ ನಾಮ ಜಪದಿಂದ ಕಷ್ಟಗಳು ಪರಿಹಾರವಾಗಿ ಸುಖ-ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದರು.

ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ, ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಮಿತ್ತ ಇಲ್ಲಿನ ಬ್ರಾಹ್ಮಣ ಸಮಾಜ ಒಂದು ಕೋಟಿ ರಾಮನಾಮ ತಾರಕ ಮಂತ್ರದ ಜಪಯಜ್ಞವನ್ನು ಯಶಸ್ವಿಯಾಗಿ ನೆರವೇರಿಸಿದ್ದು ಎಲ್ಲರ ಗಮನ ಸೆಳೆಯುವಂತಾಗಿತ್ತು. ಬ್ರಾಹ್ಮಣ ಸಮಾಜದ ಜೊತೆ ಇತರೆ ಎಲ್ಲ ಸಮಾಜ ಬಾಂಧವರು ಅಂದಿನ ರಾಮತಾರಕ ಯಜ್ಞವನ್ನು ಯಶಸ್ವಿಗೊಳಿಸಲು ಸಹಕರಿಸಿದ್ದು, ಅದೇ ರೀತಿ ಇಂದು ಶ್ರೀರಾಮ ನವಮಿಯನ್ನು ಸಂಪ್ರದಾಯದಂತೆ ಆಚರಿಸಲಾಗಿದೆ ಎಂದರು.

ಬರ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ : ಸಿ.ಬಿ. ದೇವರಮನಿ

ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ಜಿಲ್ಲೆಯಲ್ಲಿ ಬರಗಾಲವಿದ್ದು, ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸ್ಥಿತಿ-ಗತಿಯ ಜೊತೆಗೆ ಬರನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿ.ಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ ಪಿಡಿಓಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿಯಲ್ಲಿ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಕುಡಿಯುವ ನೀರು, ಮೇವು ಪೂರೈಕೆ, ಬರ ನಿರ್ವಹಣೆ ಸಂಬಂಧ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿನ ತೊಂದರೆಗೊಳಗಾದ ಗ್ರಾಮಗಳನ್ನು ಈಗಾಗಲೇ ಗುರುತಿಸಿದ್ದು, ಯಾವುದೇ ಕಾರಣಕ್ಕೂ ಗದಗ ತಾಲೂಕಿನ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್‌ಗಳ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಬ್ಯಾಂಕ್‌ಗಳಲ್ಲಿ ಸಮರ್ಪಕ ಮೇವಿನ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯಲ್ಲಿ ಆದೇಶಿಸಿದರು.

ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು, ಟಾಸ್ಕ್ಫೋರ್ಸ್ ರಚನೆ ಹಾಗೂ 2024ರ ಲೋಕಸಭಾ ಚುನಾವಣೆ ಕುರಿತು ಮಾಹಿತಿ ಪಡೆದರು.

ಗದಗ ತಹಸೀಲ್ದಾರ್ ಶ್ರೀನಿವಾಸ್ ಕುಲಕರ್ಣಿ ಮಾತನಾಡಿ, ಏಪ್ರಿಲ್ 19ರಂದು ರಾಜ್ಯ ಚುನಾವಣೆ ಆಯೋಗದಿಂದ ವೀಕ್ಷಕರು ಆಗಮಿಸುತ್ತಿದ್ದು, ಕಡ್ಡಾಯವಾಗಿ ಪ್ರತಿ ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ (ಎ.ಎಮ್.ಎಫ್), ಮತಗಟ್ಟೆ ಸಂಖ್ಯೆ ಕಲ್ಪಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಚುನಾವಣೆಯ ಪರ್ವ-ದೇಶದ ಗರ್ವ

0

ಈ ಚುನಾವಣೆಯು ಭಾರತಕ್ಕೆ ಶ್ರೇಷ್ಠ ಸುಭದ್ರ ಸರ್ಕಾರವನ್ನು ನೀಡಲು ಅತ್ಯವಶ್ಯಕವಾಗಿದೆ. ಭಾರತೀಯ ನಾಗರಿಕರಾದ ನಾವೆಲ್ಲರೂ ಸುಭದ್ರ, ಉತ್ತಮ ಸರ್ಕಾರವನ್ನು ನೀಡಲು `ಮತದಾನ’ ಎಂಬ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕಾಗಿದೆ.

ಹಾಗಾದರೆ ಈ ಕರ್ತವ್ಯವನ್ನು ನಾವು ಹಬ್ಬದಂತೆ ವಿಜೃಂಭಣೆಯಿಂದ ಮಾಡಬೇಕು. ಯಾವ ರೀತಿ ಯುಗಾದಿ, ಬಸವ ಜಯಂತಿ, ಹೋಳಿ ಹಬ್ಬ, ರಂಜಾನ್, ಗ್ರಾಮದೇವಿ ಜಾತ್ರೆ, ಉರುಸು ಹೀಗೆ ಹಲವಾರು ಹಬ್ಬಗಳನ್ನು, ಜಾತ್ರೆಗಳನ್ನು ಊರಿನಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆಯೋ ಅದೇ ರೀತಿ ಪ್ರಜಾಪ್ರಭುತ್ವದ ಜಾತ್ರೆಯನ್ನು ಮತದಾನ ದಿನದಂದು (ಬರುವ ಮೇ 7)ಎಲ್ಲರೂ ದೇಶದಾದ್ಯಂತ ಸಂಭ್ರಮದಿಂದ ಆಚರಿಸಬೇಕಿದೆ.
ಈ ಚುನಾವಣೆ ಹಬ್ಬಕ್ಕೆ ನಾವೆಲ್ಲರೂ ಹೀಗೆ ಸಿದ್ಧರಾಗೋಣ.

* ಮತದಾನ ದಿನದಂದು ಭಾರತದ ಪ್ರತಿಯೊಬ್ಬ ಪ್ರಜೆ ಬೆಳಿಗ್ಗೆ ಬೇಗನೆ ಎದ್ದು `ನಮ್ಮ ನಡೆ ಮತಗಟ್ಟೆಯ ಕಡೆ-ನಮ್ಮ ಅಮೂಲ್ಯವಾದ ಮತದ ಹಕ್ಕನ್ನು ಚಲಾಯಿಸುವ ಕಡೆ’ ಎಂಬ ಮನೋಭಾವನೆಯನ್ನು ಹೊಂದಿ ಮತ ಚಲಾಯಿಸಲು ಮತಗಟ್ಟೆಗೆ ಹೋಗೋಣ.

* ನಮ್ಮ ಊರಿನ ಗ್ರಾಮದೇವಿ ಜಾತ್ರೆಗೆ ಬಂಧು-ಬಳಗವನ್ನು ಯಾವ ರೀತಿ ಆಹ್ವಾನ ನೀಡುತ್ತೇವೆ, ಆ ರೀತಿಯಲ್ಲಿಯೇ ಪ್ರಜಾಪ್ರಭುತ್ವ ಹಬ್ಬಕ್ಕೆ ಅಂದರೆ, ಮತದಾನ ಮಾಡಲಿಕ್ಕೆ ಮತಗಟ್ಟೆ ಕೇಂದ್ರದ ಕಡೆಗೆ ತಾವು ಬಂಧು-ಮಿತ್ರರು ಹಾಗೂ ಬಳಗವನ್ನೆಲ್ಲವನ್ನು ಕರೆದುಕೊಂಡು ಹೋಗಿ ಒಮ್ಮೆಲೇ ಸಾಲಲ್ಲಿ ನಿಂತು ಪ್ರಜಾತಂತ್ರದ ಯಶಸ್ಸಿಗೆ ಬಟನ್ ಒತ್ತಿ.

* ಜಾತ್ರೆಯಲ್ಲಿ ಎಲ್ಲರೂ ಸೇರಿ ತೇರನ್ನು ಎಳೆದಂತೆ ಇಲ್ಲಿ ಎಲ್ಲರೂ ಪ್ರಜಾಪ್ರಭುತ್ವವೆಂಬ ತೇರನ್ನು ತಮ್ಮ ಊರಿನಲ್ಲಿಯೇ ಅತಿ ಹೆಚ್ಚಿನ ವೋಟ್ ಮಾಡಿ. ಶೇಕಡಾವಾರು ಮತದಾನವನ್ನು ಹೆಚ್ಚಿಸುವ ಮೂಲಕ ಗೆಳೆಯರೆಲ್ಲ ಸೇರಿ ಎಳೆಯಿರಿ.

* ಕುಟುಂಬ ಸಮೇತ ಯಾವುದೇ ಮೋಜು ಮಸ್ತಿ, ಮನರಂಜನೆ, ಪ್ರವಾಸಿ ತಾಣಗಳಿಗೆ ಹೋಗದೇ ಮನೆಯಲ್ಲಿಯೇ ಇರಿ, ಮತದಾನ ಮಾಡಿ.

* ಅನ್ನದಾನ, ಅಕ್ಷರದಾನ, ನೇತ್ರದಾನ ಹೇಗೆ ಶ್ರೇಷ್ಠ ದಾನವೋ ಅದೇ ರೀತಿ ಮತದಾನ ಕೂಡ ಶ್ರೇಷ್ಠ ಕಾರ್ಯ.

* ನಗರದ ಜನ ಮೇ 7ರಂದು ಮನೆಯಿಂದ ಹೋರಗೆ ಬಂದು 100ಕ್ಕೆ 100ರಷ್ಟು ಮತದಾನ ಮಾಡುವ ಕಾಯಕ ಮಾಡುವದು.

* ಭಾರತೀಯರಾದ ಪ್ರತಿಯೊಬ್ಬರ ಮತ ಮೌಲ್ಯಯುತವಾದ್ದದ್ದು. ಅದನ್ನು ನಾನು ಮಾಡಿಯೇ ಮಾಡುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಇರಿ.

* ನೀವು ಮತ ಹಾಕಿದರೆ ನೀವು ನಿಮ್ಮ ದೇಶದ ಹೀರೋ. ಮತ ಹಾಕದಿದ್ದರೆ ಜೀರೊ ಎಂದು ತಿಳಿಯಿರಿ.

* ಕೆಲವು ಸಾರಿ ಅಭ್ಯರ್ಥಿ ಒಂದು ಮತದ ಅಂತರದಿಂದ ಗೆದ್ದ ಉದಾಹರಣೆ ಇದೆ. ಆ ನಿರ್ಣಾಯಕ ಮತ ನಿಮ್ಮದೇ ಆಗಿರಬಹುದು. ಆದ್ದರಿಂದ ತಡ ಯಾಕೆ? ಬೇಗ ಹೋಗಿ ಮೇ ೭ರಂದು ಮತ ಹಾಕಿ.

* ಅಂಚೆ ಮತ ಪಡೆದವರು ಸರಿಯಾಗಿ ಎಲ್ಲ ನಿಯಮ ಪಾಲಿಸಿ, ಜೂನ್ ಮತ ಎಣಿಕೆಗೆ ಮೊದಲು ಚುನಾವಣಾಧಿಕಾರಿಗೆ ತಲುಪುವಂತೆ ಮತದಾನ ಮಾಡಿ.

* ನಮ್ಮ ದೇಶದಲ್ಲಿ ಅಂದಾಜು ಶೇ.30ರಷ್ಟು ಯುವ ಮತದಾರರು ಇದ್ದಾರೆ. ಇಂದಿನ ಯುವಕರೇ ನಾಳಿನ ನಾಯಕರು. ಆದ್ದರಿಂದ ನಿಮ್ಮ ನಾಯಕರನ್ನು ಕಾಯಾ, ವಾಚಾ, ಮನಸಾ ಯೋಗ್ಯತೆ, ಮಾನದಂಡದ ಆಧಾರದ ಮೇಲೆ ಆಯ್ಕೆ ಮಾಡಬೇಕು. ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಮತ ಹಾಕಿ.

* ಯುವಜನರೇ, ನಮ್ಮ ದೇಶದ ಸ್ಥಿರ ಸರ್ಕಾರ ತಮ್ಮ ಮತದಾನದ ಮೇಲೆ ನಿರ್ಧಾರ ಆಗಬಹುದು. ಆದ್ದರಿಂದ ಮೊದಲ ಸಾರಿ ಮತದಾನದ ಮಾಡುವವರು ಉತ್ಸಹದಿಂದ ಮತಗಟ್ಟೆಗೆ ಬನ್ನಿ. ನಿಮ್ಮ ಹಕ್ಕು ಚಲಾಯಿಸಿ. ದೈರ್ಯದಿಂದ ಹೇಳಿ, `ನನ್ನ ಮತ-ನನ್ನ ಹಕ್ಕು’ ಎಂದು.

ಬನ್ನಿ ಭಾರತೀಯರೇ, ಎಲ್ಲರೂ ಸೇರಿ ಪ್ರಜಾಪ್ರಭುತ್ವದ ಹಬ್ಬ ಮಾಡೋಣ. ಮತಹಾಕಿ, ಮತಗಟ್ಟೆಯಿಂದ ಹೊರಗೆ ಬಂದು ಕುಟುಂಬದ ಸಮೇತ ಸೆಲ್ಪಿ ತೆಗೆದುಕೊಳ್ಳೋಣ. ಜವಾಬ್ದಾರಿಯುತ ನಾಗರಿಕನಾಗಿ ನಾವು ಮತದಾನ ದಿನಾಂಕದಂದು ನಮ್ಮ ಕರ್ತವ್ಯ ಮಾಡೋಣ.
– ಅಜ್ಜಪ್ಪ ಅಂಗಡಿ.
ಬಿ.ಆರ್.ಪಿ, ಬೈಲಹೊಂಗಲ.

angadi

ಧರ್ಮ ಪರಿಪಾಲನೆಯಿಂದ ಜೀವನದಲ್ಲಿ ಶ್ರೇಯಸ್ಸು:ರಂಭಾಪುರಿ ಶ್ರೀಗಳು

0
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಟ್ಟಿಗೆ ಧರ್ಮ ಪ್ರಜ್ಞೆ ಮತ್ತು ಸದಾಚಾರ ಬೆಳೆದು ಬರಬೇಕು. ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ಧರ್ಮ ಪರಿಪಾಲನೆಯಿಂದ ಜೀವನದಲ್ಲಿ ಸುಖ-ಶಾಂತಿ ಮತ್ತು ಶ್ರೇಯಸ್ಸು ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಪ್ರಕೃತಿ ಮಾನವನನ್ನು ಸೃಷ್ಟಿಸಿದರೆ, ಸಂಸ್ಕಾರ ಆದರ್ಶ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ. ಆಡಿದ ಮಾತು ಉಳಿಸಿಕೊಳ್ಳುವುದೇ ನಿಜವಾದ ಧರ್ಮ. ಭೌತಿಕ ಬದುಕಿನಿಂದ ಉಂಟಾಗುವ ಅತೃಪ್ತಿ ಮತ್ತು ಅಸಮಾಧಾನ ನಿವಾರಣೆಗೆ ಧರ್ಮವೊಂದೇ ಸುಲಭ ಮಾರ್ಗ. ಬಿತ್ತಿದ ಬೀಜದಂತೆ ಫಸಲು ಹೇಗೋ ಹಾಗೆ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿ. ಕರ್ತವ್ಯ, ಶಿಸ್ತು, ಶೃದ್ಧೆ, ಛಲ ಮತ್ತು ಸಮರ್ಪಣಾ ಮನೋಭಾವವನ್ನು ಮನುಷ್ಯ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ನೇತೃತ್ವ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯುತ್ತಿಲ್ಲ. ಮಾತಿಗೆ ತೂಕ ಬರುವುದು ಸತ್ಯದಿಂದಲ್ಲದೇ ಅಸತ್ಯದಿಂದಲ್ಲ. ಉಜ್ವಲ ಜೀವನಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆ ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
  ಬಿ.ಡಿ. ನಾಗನಗೌಡ್ರ, ಟಾಕನಗೌಡ ಗಬ್ಬೂರು, ಬಸವರಾಜ ಹಸರಡ್ಡಿ, ವಿಜಯಕುಮಾರ ಬೆಳವಟಗಿ, ಖಾದರಸಾಬ ನದಾಫ, ಮಾರುತಿ ಅಮರಗೋಳ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಗಂಗಾಧರಸ್ವಾಮಿ ಹಿರೇಮಠ ಭಕ್ತಿಗೀತೆ ಹಾಡಿದರು. ಗಂಗಾಧರ ನಾಗನಗೌಡ್ರ ಸ್ವಾಗತಿಸಿದರು.
ಗುರುನಾಥಗೌಡ ಮಾದಾಪುರ ಪ್ರಾಸ್ತಾವಿಕ ಮಾತನಾಡಿ, ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವ ಗುಣ. ಸ್ವಾರ್ಥ ರಹಿತ ಬದುಕಿಗೆ ಬಲವಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ ತತ್ವ ಸಿದ್ಧಾಂತಗಳ ಅರಿವು ಆಚರಣೆಯಿಂದ ಮಾನವ ಜೀವನ ಸ್ವಾರ್ಥಕಗೊಳ್ಳುತ್ತದೆ ಎಂದರು.

ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಿ

0

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರದ ನೂರಾರು ವಸತಿರಹಿತ ಕುಟುಂಬಗಳು ಮಾರ್ಚ್ 24ರಂದು ಸಭೆ ನಡೆಸಿ, ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲೋಕಸಭಾ ಚುನಾಚಣೆ ಬಹಿಷ್ಕಾರ ಮಾಡಲು ಎಚ್ಚರಿಕೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ವಸತಿ ರಹಿತರ ಸಭೆಯನ್ನು ನಡೆಸಿದ ಅಧಿಕಾರಿಗಳು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮನವೂಲಿಸುವಲ್ಲಿ ಸಫಲರಾಗಿದ್ದಾರೆ.

ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಗದಗ ಜಿಲ್ಲಾ ಉಪವಿಭಾಗೀಯ ಕಚೇರಿಯ ತಹಸೀಲ್ದಾರ ವಿಜಯಲಕ್ಷ್ಮಿ ವಸ್ತ್ರದ, ಗದಗ ಉಪ-ತಹಸೀಲ್ದಾರ ಕೊಣ್ಣೂರ ಮತ್ತು ನಗರಸಭೆ ವ್ಯವಸ್ಥಾಪಕರಾದ ಪರುಶರಾಮ ಶೇರಖಾನೆ ಸಮ್ಮುಖದಲ್ಲಿ ವಸತಿರಹಿತ ಕುಟುಂಬಗಳು ಸಭೆಯನ್ನು ನಡೆಸಿ, ತಮ್ಮ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ, ಗದಗ ಜಿಲ್ಲಾ ಡಿಎಸ್‌ಎಸ್ ಸಂಚಾಲಕ ವೆಂಕಟೇಶಯ್ಯ, ಮುಖಂಡರಾದ ಬಸವರಾಜ ಪೂಜಾರ, ರವಿಕುಮಾರ ಬೆಳಮಕರ, ಅಶೋಕ ಕುಸಬಿ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ನಜಮುನಿಸಾ ಮುರಗೋಡ, ವಿಶಾಲಕ್ಷಿ ಹಿರೇಗೌಡ್ರ, ವಂದನಾ ಶ್ಯಾವಿ, ಸುಶೀಲಮ್ಮ ಗೋಂದಾರ, ಮರ್ದಾನಬಿ ಬಳ್ಳಾರಿ, ನಗೀನಾ ಯಲಿಗಾರ, ಇಬ್ರಾಹಿಮ ಮುಲ್ಲಾ, ಶಂಕ್ರಪ್ಪ ಮೂಲಿಮನಿ, ದುರ್ಗಪ್ಪ ಮಣ್ಣವಡ್ಡರ, ದಾವಲಬಿ ಕೌತಾಳ, ಮಕ್ತುಮಸಾಬ ಮುಲ್ಲಾನವರ, ಬಾಷಾಸಾಬ ಡಂಬಳ, ಸಲೀಮ ಬೈರಕದಾರ ಮುಂತಾದವರಿದ್ದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಮಾತನಾಡಿ, ವಸತಿ ರಹಿತರ ಹಾಗೂ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಜಿಲ್ಲಾಡಳಿತದಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಹಂತ-ಹಂತವಾಗಿ ವಸತಿ ಸೌಲಭ್ಯ ಕಲ್ಪಿಸಲು ಹಾಗೂ ಸ್ಲಂ ನಿವಾಸಿಗಳ ಹಕ್ಕೊತ್ತಾಯಗಳಿಗೆ ಸ್ಪಂದಿಸಲಾಗುವುದು. ನಮ್ಮ ದೇಶದ ಸಂವಿಧಾನದ ಮೂಲ ಆಶಯದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿ ಸಭೆಯಲ್ಲಿ ಸೇರಿದ ಎಲ್ಲರಿಗೂ ಮತದಾನದ ಪ್ರತಿಜ್ಞಾ ವಿಧಿ ಬೋಧನೆ ಮಾಡಿಸಿದರು.

ಶ್ರೀರಾಮ ಸರ್ವ ಸದ್ಗುಣಗಳ ಖಣಿ : ಅರುಣ ಬಿ.ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪ್ರಭು ಶ್ರೀ ರಾಮ ಸದ್ಗುಣಗಳ ಖಣಿ. ಅವನನ್ನು ಪೂಜಿಸುವದರಿಂದ ಅವನ ಸದ್ಗುಣಗಳು ನಮ್ಮಲ್ಲಿ ಕಿಂಚಿತ್ತಾದರೂ ಬರುತ್ತವೆ. ಇದೇ ಕಾರಣಕ್ಕಾಗಿ ಶ್ರೀರಾಮ ನವಮಿಯನ್ನು ದೇಶಾದ್ಯಂತ ಎಲ್ಲರೂ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಶ್ರೀ ರಾಮ ಮಂದಿರದಲ್ಲಿ ನಡೆದ ಶ್ರೀರಾಮ ನವಮಿ ತೊಟ್ಟಿಲೋತ್ಸವದ ನಂತರ ಅವರು ಮಾತನಾಡಿದರು.

ವಿಷ್ಣುವಿನ 7ನೇ ಅವತಾರ ಶ್ರೀರಾಮಾವತಾರದಲ್ಲಿ ಮನುಷ್ಯ ಹೇಗೆ ಸದ್ಗುಣಿಯಾಗಿರಬೇಕು ಎಂಬುದನ್ನು ಶ್ರೀರಾಮ ಸ್ವತಃ ನಡೆದು ತೋರಿಸಿದ್ದಾನೆ. ತಂದೆ-ತಾಯಿಗಳ ಮಾತುಗಳನ್ನು ಹೇಗೆ ಕೇಳಬೇಕು, ಅವುಗಳನ್ನು ಹೇಗೆ ಪಾಲಿಸಬೇಕು ಎಂಬುದಕ್ಕೆ ಶ್ರೀರಾಮ ಸಾಕ್ಷಾತ್ ಉದಾಹರಣೆಯಾಗಿದ್ದಾನೆ. ಅವನ ಜೀವನ ಚರಿತ್ರೆಯನ್ನು ಓದಿ ಅದರಲ್ಲಿನ ಕೆಲವಷ್ಟು ಗುಣಗಳನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದ ಅವರು, ನಮ್ಮ ಸಂಸ್ಕೃತಿಯ ಕಣ್ಣುಗಳಾಗಿರುವ ರಾಮಾಯಣ ಮತ್ತು ಮಹಾಭಾರತವನ್ನು ಮಕ್ಕಳಿಂದ ಓದಿಸುವ, ಓದಲು ಪ್ರೇರಣೆ ನೀಡುವ ಕಾರ್ಯಗಳಾಬೇಕೆಂದು ಹೇಳಿದರು.

ಸುಮಂಗಲೆಯರು ಶ್ರೀರಾಮನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ಸಂಭ್ರಮಿಸಿದರು. ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ಶ್ರೀರಾಮನಿಗೆ ಪೂಜೆ ಮತ್ತು ಶ್ರೀರಾಮನ ತೊಟ್ಟಿಲೋತ್ಸವದ ಎಲ್ಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ದತ್ತ ಭಕ್ತ ಮಂಡಳಿಯ ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಖಜಾಂಚಿ ಮಂಜುನಾಥ ಗ್ರಾಮಪುರೋಹಿತ, ಶೇಷಗಿರಿ ಕುಲಕರ್ಣಿ, ಆರ್.ಡಿ. ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಹರೀಶ ಕುಲಕರ್ಣಿ, ವಿಶ್ವನಾಥಭಟ್ಟ ಗ್ರಾಮಪುರೋಹಿತ, ದತ್ತಾತ್ರೇಯ ಕುಲಕರ್ಣಿ, ರಾಮಕೃಷ್ಣ ಸದರಜೋಷಿ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿಲ್ಲ : ಹನುಮಂತಪ್ಪ ಆಲ್ಕೋಡ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ತಮ್ಮದು ನುಡಿದಂತೆ ನಡೆದ ಸರಕಾರ, ವಿಧಾನಸಭೆ ಚುನಾವಣೆಯಲ್ಲಿ ನಾವು ನೀಡಿದ ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತ ನಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಮತ್ತು ಅವರ ಸಚಿವ ಸಂಪುಟದವರು ಹೇಳುತ್ತಿರುವ ಮಾತುಗಳೆಲ್ಲ ಸಂಪೂರ್ಣ ಸುಳ್ಳು. ಜನತೆ ಇವುಗಳನ್ನು ನಂಬಿ ಈ ಲೋಕಸಭಾ ಚುನಾವಣೆಯಲ್ಲಿಯೂ ಅವರಿಗೆ ಮತ ನೀಡಿ ಮತ್ತೆ ಮೋಸ ಹೋಗಬಾರದು ಎಂದು ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಹನುಮಂತಪ್ಪ ಆಲ್ಕೋಡ್ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಗ್ಯಾರಂಟಿಗಳು ರಾಜ್ಯದ ಇನ್ನೂ ಶೇ.60ರಷ್ಟು ಜನರಿಗೆ ತಲುಪಿಲ್ಲ. ಇಂದು ಪದವಿ ಮುಗಿಸಿ ಮನೆಗೆ ಹೋಗುವವನಿಗೆ ಹಣ ಕೊಡುವಂತಿದ್ದರೆ ಈಗಾಗಲೇ ಪದವಿ ಮುಗಿಸಿ ಅದೆಷ್ಟೋ ವರ್ಷಗಳನ್ನು ಕಳೆದು ಕೆಲಸವಿಲ್ಲದೆ ಕುಳಿತಿರುವ ನಿರುದ್ಯೋಗಿ ಪದವೀಧರರಿಗೆ ಇವರೇನು ಹೇಳುತ್ತಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಈ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂಬ ವಿಷಯವನ್ನು ಮನಗಂಡು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಎನ್‌ಡಿಎಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಬೊಮ್ಮಾಯಿಯವರನ್ನು ಆರಿಸಿ ತಂದು ಮತ್ತೊಮ್ಮೆ ಮೋದಿ ಪ್ರಧಾನಿಯಾಗುವಂತೆ ನೋಡಿಕೊಳ್ಳಬೇಕೆಂದು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಹನುಮಂತಪ್ಪ ಮನವಿ ಮಾಡಿದರು.

ಮಂಡ್ಯದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿಯವರ ಸ್ಪರ್ಧೆಯಿಂದ ಈಗಿನ ಸಂಸದೆ ಸುಮಲತಾ ಅವರಿಗೆ ಅನ್ಯಾಯವಾದಂತಾಗಿಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಹನುಮಂತಪ್ಪ, ಇದು ಎನ್‌ಡಿಎ ಕೂಟ ತೆಗೆದುಕೊಂಡ ನಿರ್ಧಾರ. ಇದರಿಂದ ಸುಮಲತಾ ಅವರಿಗೆ ಯಾವುದೇ ಅನ್ಯಾಯವಾಗಿಲ್ಲ ಎಂಬುದು ನನ್ನ ಭಾವನೆ. ಅವರ ಪಕ್ಷ ಮುಂದೆ ಅವರಿಗೆ ಖಂಡಿತ ನ್ಯಾಯ ಒದಗಿಸುತ್ತದೆ ಎನ್ನುವ ವಿಶ್ವಾಸ ತಮ್ಮದು ಎಂದರು.

ಮತದಾರರು ಈ ಲೋಕಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಅವರೆಲ್ಲರ ಆಯ್ಕೆ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲ್ಲಿಸುವದಾಗಿದೆ. ಹೀಗಾಗಿ ಈ ಸಾರೆ ರಾಜ್ಯದಲ್ಲಿ ಎಲ್ಲ ಸ್ಥಾನಗಳೂ ಎನ್‌ಡಿಎ ಮೈತ್ರಿ ಕೂಟದ ಪರವಾಗಿರಲಿವೆ ಎಂದು ಅಲ್ಕೋಡ ಹನುಮಂತಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ.ಪಂ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ, ಧುರೀಣರಾದ ಶರಣಪ್ಪ ರೇವಡಿ, ಗದಗ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವೀರಪ್ಪ ಜಿರ್ಲ, ತಾಲೂಕಾ ಉಪಾಧ್ಯಕ್ಷ ರಕ್ಷಿತಗೌಡ ಪಾಟೀಲ ಇನ್ನೂ ಮುಂತಾದವರಿದ್ದರು.

ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸಿರುವುದು ಫಲಿತಾಂಶದ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಹನುಮಂತಪ್ಪ, ಪ್ರತಿಯೊಂದು ಪಕ್ಷವೂ ತನ್ನದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿರುತ್ತದೆ. ಅಸಮಾಧಾನದಿಂದಲೋ, ಇತರೆ ಕಾರಣಗಳಿಗಾಗಿಯೋ ಪಕ್ಷ ಬಿಟ್ಟು ಹೋದವರು ಅದೆಷ್ಟು ಪೆಟ್ಟು ತಿಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಫಲಿತಾಂಶದ ಮೇಲೆ ಈಶ್ವರಪ್ಪನವರ ಸ್ಪರ್ಧೆ ಏನೂ ಪರಿಣಾಮ ಬೀರದೆಂದರು.

ಸುಭದ್ರ ಸರ್ಕಾರ ರಚನೆಗೆ ಮತದಾನವೇ ಶಕ್ತಿ : ಡಾ. ಹಂಪಣ್ಣ ಸಜ್ಜನರ

0

ವಿಜಯಸಾಕ್ಷಿ ಸುದ್ದಿ, ಗದಗ : ದೇಶದಲ್ಲಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತವೆ. ಸಂವಿಧಾನ ನೀಡಿರುವ ಮತದಾನದ ಹಕ್ಕು ದೇಶದ ಸಂಸತ್ತನ್ನು ನಿರ್ಮಿಸುವ ಹಕ್ಕಾಗಿದೆ. ನಾವೆಲ್ಲ ಚುನಾವಣೆ ದಿನಗಳನ್ನು ಚುನಾವಣೆ ಪರ್ವ ಅಂದರೆ, ಅದು ದೇಶದ ಗರ್ವ ಎಂದೇ ಉಲ್ಲೇಖಿಸಬೇಕಾಗುತ್ತದೆ ಎಂದು ನರಗುಂದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಡಾ.ಹಂಪಣ್ಣ ಸಜ್ಜನರ ಅಭಿಪ್ರಾಯಪಟ್ಟರು.

ತಾಲೂಕಿನ ಅರಿಶಿಣಗೋಡಿ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕೈಗೊಂಡ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದರು.

ಸುಭದ್ರ ಸರ್ಕಾರ ರಚನೆಗೆ ಪ್ರತಿಯೊಬ್ಬರ ಮತದಾನ ಪ್ರಮುಖವಾಗಿದೆ. ಕಡ್ಡಾಯ ಮತದಾನ ರಕ್ತದಾನ, ಅನ್ನದಾನ ಸೇರಿದಂತೆ ಇನ್ನಿತರೆ ಯಾವುದೇ ದಾನಕ್ಕಿಂತ್ತಲೂ ಹೆಚ್ಚಿನ ದಾನವಾಗಿದೆ. ಕೂಲಿಕಾರರು ಎಲ್ಲರೂ ಮೇ 7ರಂದು ಮತ ಚಲಾಯಿಸಬೇಕು. ಸ್ವಂತ ಊರಿನಿಂದ ಬೇರೆ ಊರಿಗೆ ತೆರಳಿರುವ ತಮ್ಮ ಕುಟುಂಬ ಸದಸ್ಯರನ್ನು ಮತದಾನದ ದಿನ ಕರೆಸಿಕೊಂಡು ಮತದಾನ ಮಾಡಿಸಿ ಎಂದರು.

ಕಾಮಗಾರಿ ಸ್ಥಳದಲ್ಲಿದ್ದ 300ಕ್ಕೂ ಅಧಿಕ ಕೂಲಿಕಾರರಿಗೆ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರು ಮಾನವ ಸರಪಳಿ ರಚಿಸುವ ಮೂಲಕ ಕಡ್ಡಾಯ ಮತದಾನ ಬಗೆಗಿನ ಘೋಷಣೆಗಳನ್ನು ಕೂಗಿದರು.

ಸ್ವೀಪ್ ಚಟುವಟಿಕೆ ಕಾರ್ಯಕ್ರಮದಲ್ಲಿ ನರಗುಂದ ತಾ.ಪಂ ಇ.ಒ ಸೋಮಶೇಖರ್ ಬಿರಾದಾರ್, ಹಿರೇಕೊಪ್ಪ ಪಿಡಿಒ ಕೆ.ಎನ್. ಹದಗಲ್, ಜಿಲ್ಲಾ ಐಇಸಿ ಸಂಯೋಜಕ ವೀರಭದ್ರöಪ್ಪ ಸಜ್ಜನ, ತಾಲೂಕು ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ, ತಾಂತ್ರಿಕ ಸಹಾಯಕ ಅಲ್ತಾಪ ಅಮೀನಬಾವಿ, ಬಿಎಫ್‌ಟಿ ಬಸವರಾಜ ಚಿಮ್ಮನಕಟ್ಟಿ, ಹಿರೇಕೊಪ್ಪ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಚುನಾವಣೆ ಆಯೋಗ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತಗಳು ಇಡೀ ದೇಶಾದ್ಯಂತ ಸ್ವೀಪ್ ಚಟುವಟಿಕೆ ಮೂಲಕ ಕಡ್ಡಾಯ ಮತದಾನ ಬಗ್ಗೆ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಎಲ್ಲ ಮತದಾರರು ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಿದಾಗ ಮಾತ್ರ ಸ್ವೀಪ್ ಸಮಿತಿ ಕಾರ್ಯ ಯಶಸ್ವಿಯಾಗುತ್ತದೆ ಎಂದು ಡಾ.ಹಂಪಣ್ಣ ಸಜ್ಜನರ ಹೇಳಿದರು.

 

ನಾಮಪತ್ರ ಸಲ್ಲಿಕೆಗೆ ಸಾವಿರಾರು ಜನರ ಆಗಮನದ ನಿರೀಕ್ಷೆ

0

ವಿಜಯಸಾಕ್ಷಿ ಸುದ್ದಿ, ಗದಗ : ಏಪ್ರಿಲ್ 19ರಂದು ಹಾವೇರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಜನರು ಬರುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದುಗಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಎಂಟು ಕ್ಷೇತ್ರದ ಜನರು ಕಾರ್ಯಕರ್ತರಿಗೆ ಬರಲು ಸೂಚನೆ ನೀಡಿದ್ದೇವೆ. ಸಾವಿರಾರು ಜನರು ಬರುತ್ತಾರೆ. ಅಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಮಾಜಿ ಸಚಿವರಾರ ಬೈರತಿ ಬಸವರಾಜ, ಮುರುಗೇಶ್ ನಿರಾಣಿ ಆಗಮಿಸಲಿದ್ದಾರೆ ಎಂದರು.

ಸಂಸದ ಕರಡಿ ಸಂಗಣ್ಣ ಬಿಜೆಪಿ ತೊರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಗಣ್ಣ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ದುರಾದೃಷ್ಟಕರ. ನಾವು ಅವರ ಮನವೊಲಿಸುವ ಕೆಲಸ ಮಾಡಿದ್ದರೂ, ಕಾಂಗ್ರೆಸ್‌ನವರು ಅವರಿಗೆ ಪ್ರಚೋದನೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದವರು ಬೇಸರ ಮಾಡಿಕೊಳ್ಳುವುದು ಸಹಜ. ಇದು ರಾಷ್ಟ್ರೀಯ ಚುನಾವಣೆ ಆಗಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನಿಂದಲೂ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಬೆಳ್ಳಟ್ಟಿ ಗ್ರಾಮದಲ್ಲಿ ನೂರಾರು ಜನರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸ್ಥಳೀಯವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ

0

ವಿಜಯಸಾಕ್ಷಿ ಸುದ್ದಿ, ರೋಣ : ಸತತ ಮೂರು ದಿನಗಳ ಕಾಲ ಮಾರನಬಸರಿ ಗ್ರಾಮದಲ್ಲಿ ಜರುಗಿದ ಗ್ರಾಮ ದೇವತೆಯ ಜಾತ್ರಾಮಹೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದ್ದು, ಮೂರು ದಿನಗಳ ಧಾರ್ಮಿಕ ಕಾರ್ಯದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಪಾಲ್ಗೊಂಡು ದ್ಯಾಮವ್ವ ದೇವಿಯ ದರ್ಶನ ಪಡೆದರು.

ಗ್ರಾಮ ದೇವತೆಯ ಜಾತ್ರೆ ಕೊನೆಯದಾಗಿ 5 ವರ್ಷಗಳ ಹಿಂದೆ ನಡೆದಿತ್ತು. ಹೀಗಾಗಿ, ಗ್ರಾಮದ ಹಿರಿಯರು ಹಾಗೂ ಭಕ್ತರು ದೇವತೆಯ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ನಿರ್ಧಾರ ಕೈಗೊಂಡು, ಏ.14ರಿಂದ 16ರವರೆಗೆ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಿದರು.

ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು. ಏ.15ರಂದು ದೇವಿಯ ಕಟ್ಟೆಯ ಬಳಿ ಡೊಳ್ಳಿನ ಪದಗಳ ಜುಗಲ್‌ಬಂದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ನಾಗರಿಕರು ಜುಗಲ್‌ಬಂದಿ ಕಾರ್ಯಕ್ರಮವನ್ನು ವೀಕ್ಷಿಸಿ, ದೇವಿಯ ಆಸ್ಥಾನದಲ್ಲಿ ಜಾಗರಣೆ ಕೈಗೊಂಡು ಬೆಳಗಿನ ಜಾವ ಗ್ರಾಮ ದೇವತೆಯ ದರ್ಶನ ಪಡೆದು ಧನ್ಯತೆಯನ್ನು ಮೆರೆದರು.

error: Content is protected !!