22.2 C
Gadag
Wednesday, September 28, 2022
Home Blog Page 3

ಲಗಾಮಿಲ್ಲದೇ ಸಾಗಿದೆ ಅಕ್ರಮ ಮರಳು ದಂಧೆ; ಕಣ್ಣಿದ್ದೂ ಕುರುಡಾಯಿತಾ ತಾಲೂಕಾಡಳಿತ?

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಅಕ್ರಮ ಮರಳು ಸಂಗ್ರಹಣೆ, ಸಾಗಾಟ ಲಂಗುಲಗಾಮಿಲ್ಲದೇ ಸಾಗುತ್ತಿದೆ. ಒಂದೆಡೆ ಮರಳು ಪೂರೈಕೆ ತಗ್ಗಿರುವದರಿಂದ ದರ ಮುಗಿಲು ಮುಟ್ಟಿದೆ. ಈ ನಡುವೆ, ಆಡಳಿತದ ನಿಯಮಾವಳಿಗಳಿಗೆ ಕ್ಯಾರೇ ಎನ್ನದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಿಸುತ್ತಿರುವ ಬಗ್ಗೆ ರೋಣದಿಂದ ವರದಿಯಾಗಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ತುಂಬಿದ ಹಳ್ಳದಲ್ಲಿ ಅಕ್ರಮ ಮರಳು ಧಂದೆ ಯಾರ ಭಯವೂ ಇಲ್ಲದೇ ಸಾಗುತ್ತಿರುವದು ತಾಲೂಕಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿ ತುಂಬಿದ ಸವಿನೀರಿನ ಹಳ್ಳದಲ್ಲಿಯೇ ಟ್ರಾಕ್ಟರ್ ಮೂಲಕ ಮರಳು ಸಂಗ್ರಹಣೆ ಹಾಗೂ ಸಾಗಾಟ ನಿತ್ಯವೂ ನಡೆಯುತ್ತಲೇ ಇದೆ ಎಂಬ ಆರೋಪ ಕೇಳಿಬರುತ್ತಿದೆ.

ಹರಿಯುವ ನೀರಲ್ಲಿ ಟ್ರ್ಯಾಕರ್ ಚಾಲಕರ ಹುಚ್ಚಾಟವೂ ಹೆಚ್ಚಾಗಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಸದ್ಯ ವೈರಲ್ ಆಗಿರುವ ವಿಡಿಯೋ ಒಂದು ಸಾಕ್ಷಿಕರಿಸಿದೆ.

ಇಂಥ ಅಕ್ರಮಗಳ ಬಗ್ಗೆ ಗಮನಹರಿಸಬೇಕಿದ್ದ ಆಡಳಿತ ದಿವ್ಯ ನಿರ್ಲಕ್ಯ ಧೋರಣೆ ತಾಳಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ‌ ಪಂಚಾಯತಿ ಸಮೀಪವೇ ಬೈಕ್ ಅಡ್ಡಗಟ್ಟಿ ಯುವಕನ ಕೊಲೆ

0

ವಿಜಯಸಾಕ್ಷಿ ಸುದ್ದಿ, ಗದಗ

ಬೈಕ್ ನಲ್ಲಿ ಹೊಲಕ್ಕೆ ಹೊರಟಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ಸಂಗನಗೌಡ ತಂದೆ ಮಲ್ಲನಗೌಡ ನಾಯ್ಕನೂರು(30) ಕೊಲೆಯಾದ ದುರ್ಧೈವಿ.

ಸೋಮವಾರ ಮಧ್ಯಾಹ್ನ ಬೈಕ್ ನಲ್ಲಿ ಹೊಲಕ್ಕೆ ಹೊರಟಾಗ ಗುರ್ಲಕಟ್ಟಿ ಗ್ರಾಮದ ಗ್ರಾಮ ಪಂಚಾಯತಿ ಸಮೀಪದಲ್ಲಿ ಅಡ್ಡಗಟ್ಟಿ ಸಂಗನಗೌಡನನ್ನು ಕೆಳಗೆ ಇಳಿಸಿ, ಈರಣ್ಣ ತಂದೆ ಉಮೇಶ್ ಅಂತಕ್ಕನವರ್, ಚಂದ್ರುಗೌಡ ತಂದೆ ಈರನಗೌಡ ಪಾಟೀಲ್, ಮಹೇಶ್ ಗೌಡ ತಂದೆ ಕಲ್ಲನಗೌಡ ಪಾಟೀಲ್, ಎಂಬುವವರು ಕೊಲೆಗೀಡಾದ ಸಂಗನಗೌಡನ ಕೈ ಹಿಡಿದುಕೊಂಡಾಗ ಇನ್ನೊಬ್ಬ ಸುರೇಶಗೌಡ ತಂದೆ ಕಲ್ಲನಗೌಡ ಪಾಟೀಲ್ ಎಂಬಾತ ಚಾಕುವಿನಿಂದ ಕುತ್ತಿಗೆ ಹಾಗೂ ಎದೆಗೆ ಇರಿದಿದ್ದಾನೆ. ಇದರಿಂದಾಗಿ ಸಂಗನಗೌಡ ಮೃತಪಟ್ಟಿದ್ದಾನೆ.

ಮೃತನ ಪತ್ನಿ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 150/2022 ಕಲಂ 341, 302, 504, ಹಾಗೂ 34 ಐಪಿಸಿ ಪ್ರಕಾರ ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳಿಗೆ ಚಾಟಿ ಬೀಸಿದ ಶಾಸಕ ಕಳಕಪ್ಪ ಬಂಡಿ!

ವಿಜಯಸಾಕ್ಷಿ ಸುದ್ದಿ, ರೋಣ

ಮನೆಯಲ್ಲಿರುವ ಎಲ್ಲ ಸಾಮಾನು ಹಳ್ಳಕ್ಕೆ ತೇಲಿ ಹೋದ ಮೆಲೆ ಪರಿಹಾರ ಕೊಡುವುದರಲ್ಲಿ ಅರ್ಥವಿಲ್ಲ. ನಾನು ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ ಜನರ ಕಷ್ಟಗಳನ್ನು ಆಲಿಸಿದ್ದೇನೆ. ಹೀಗಾಗಿ ಸರಕಾರದ ನಿರ್ದೇಶನದ ಜೊತೆಗೆ ಮಾನವೀಯತೆ ಕೂಡ ಇರಬೇಕು ಎಂದು ಶಾಸಕ ಕಳಕಪ್ಪ ಬಂಡಿ ಅವರು ತಹಸೀಲ್ದಾರ್ ವಾಣಿ ಉಂಕಿಯವರಿಗೆ ಸೂಚಿಸಿದ ಘಟನೆ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಡೆಯಿತು.

ಅವರು ಸೋಮವಾರ ಹಿರೇಹಾಳ ಗ್ರಾಮಕ್ಕೆ ಭೇಟಿ ನೀಡಿ ಮಳೆಗೆ ಬಿದ್ದ ಮನೆಗಳನ್ನು ವೀಕ್ಷಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುವ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸತತ ಮಳೆಗೆ ಮನೆಗಳಿಗೆ ನೀರು ಹೊಕ್ಕು ದವಸ ಧಾನ್ಯಗಳು ನೀರು ಪಾಲಾಗಿವೆ. ಇದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಹೀಗಾಗಿ ಅವರಿಗೂ ಸಹ ಪರಿಹಾರ ವಿತರಿಸಬೇಕು ಎಂದರು. ಇದಕ್ಕೆ ತಹಸೀಲ್ದಾರ್ ವಾಣಿ ಉಂಕಿಯವರು ಸರಕಾರದ ನಿರ್ದೇಶನದ ಮೇರೆಗೆ ಹಾಗೆ ವಿತರಣೆ ಮಾಡಲು ಬರುವುದಿಲ್ಲ. ಅಲ್ಲದೆ ಮನೆಯಲ್ಲಿದ್ದ ವಸ್ತುಗಳು ಹಳ್ಳಕ್ಕೆ ತೇಲಿ ಹೋದರೆ ಮಾತ್ರ ಪರಿಹಾರ ವಿತರಣೆ ಮಾಡಬಹುದು ಎಂಬ ನಿಯಮವಿದೆ ಎನ್ನುತ್ತಿದ್ದಂತೆ ಶಾಸಕರು ಈಗಾಗಲೇ ತಿನ್ನುವ ಆಹಾರ ಹಾಗೂ ಉಡುವ ಬಟ್ಟೆ ನೀರಲ್ಲಿ ಮುಳುಗಿ ಹೋಗಿದೆ. ಇಲ್ಲಿ ನಿಯಮಾವಳಿಯ ಜೊತೆಗೆ ಮಾನವೀಯತೆ ಕೂಡ ಪಾಲನೆ ಆಗಬೇಕು. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದರು.

ಇನ್ನು ಮಳೆಗೆ ಬಿದ್ದಿರುವ ಮನೆಗಳಿಗೆ ಕೇವಲ ೩೨೦೦ ರೂ. ನೀಡಲಾಗುತ್ತಿದೆ ಎಂದು ಸಂತ್ರಸ್ತರು ಶಾಸಕರ ಬಳಿ ದೂರಿದರು. ಆಗ ತಹಸೀಲ್ದಾರ್ ವಾಣಿ ಉಂಕಿಯವರು ಸರಕಾರದ ನಿರ್ದೇಶನ ಬರುವ ಮೊದಲು ಕುಸಿದ ಮನೆಗಳಿಗೆ ಹಾಗೂ ಆಗಿನ ನಿಯಮಾವಳಿ ಪ್ರಕಾರ ೩೨೦೦ ರೂ. ಸಂತ್ರಸ್ತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದಾಗ, ಶಾಸಕರು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅವರಿಗೂ ಸಹ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ತಹಸೀಲ್ದಾರ್‌ರವರಿಗೆ ಸೂಚಿಸಿದರು.

ಅಲ್ಲದೆ ಈಗಾಗಲೇ ಕೆಲ ಸಂತ್ರಸ್ತರಿಗೆ ಹಣ ಜಮಾ ಆಗಿದೆ ಎಂದು ಇಲಾಖೆಯ ದಾಖಲೆಗಳು ತೋರಿಸುತ್ತವೆ. ವಿಪರ್ಯಾಸ ಅಂದರೆ ಸಂತ್ರಸ್ತರ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಆಗಿಲ್ಲ. ಹೀಗಾಗಿ ಈ ಕುರಿತು ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಶಾಸಕರು ತಹಸೀಲ್ದಾರರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರರು ಈ ಪ್ರಕರಣ ಈ ಹಿಂದೆ ನಡೆದಿದ್ದು ನಾನು ಬಂದಾಗ ಆಗಿಲ್ಲವಾದರೂ ಸಹ ನಿಮ್ಮ ಸಲಹೆಯಂತೆ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಸೆ. 9 ರಂದು ಹಿರೇಹಾಳ ಗ್ರಾಮದಲ್ಲಿ ಸತತ ಮಳೆಯಿಂದ ಮನೆ ಬಿದ್ದ ಪರಿಣಾಮ ಗ್ರಾಮದ ಲಕ್ಷ್ಮವ್ವ ಮಾದರ [೮೦] ಎಂಬ ವೃದ್ಧೆ ಸ್ಥಳದಲ್ಲಿ ಮೃತಪಟ್ಟಿದ್ದಳು. ಶಾಸಕ ಕಳಕಪ್ಪ ಬಂಡಿಯವರು ಮೃತ ಕುಟುಂಬದ ಸದಸ್ಯರಿಗೆ ೫ ಲಕ್ಷ ರೂ. ಗಳ ಪರಿಹಾರದ ಮೊತ್ತದ ಚೆಕ್‌ನ್ನು ವಿತರಿಸುವ ಮೂಲಕ ಸಾಂತ್ವನ ಹೇಳಿದರು. ಅಲ್ಲದೆ ಬಿದ್ದಿರುವ ಮನೆಗೆ ಅಗತ್ಯ ನೆರವು ನೀಡಲು ತಹಸೀಲ್ದಾರರಿಗೆ ಸೂಚಿಸಿದರು.

ಉಪತಹಸೀಲ್ದಾರ್ ಜೆ.ಟಿ.ಕೊಪ್ಪದ, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಪಂ ಮಾಜಿ ಸದಸ್ಯ ಶಿವಕುಮಾರ ನೀಲಗುಂದ, ಗ್ರಾಪಂ ಸದಸ್ಯರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸಾವರ್ಕರ್ ಬಗ್ಗೆ ಮಾತಾಡೋರು ಅವ್ರ ಚಪ್ಪಲಿ ಕಿಮ್ಮತ್ತಿಗೂ ಬರಲ್ಲ; ಬಸನಗೌಡ ಯತ್ನಾಳ

ವಿಜಯಸಾಕ್ಷಿ ಸುದ್ದಿ, ಗದಗ

ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲಾ, ಅವರ ತಪಸ್ಸಿನ ಬಗ್ಗೆ ಮಾತನಾಡುತ್ತೀರಾ ಎಂದು ಬಸನಗೌಡ ಯತ್ನಾಳ ಟಾಂಗ್ ನೀಡಿದ್ದಾರೆ.

ಅವರು, ಗದಗ ಕಾಟನ್ ಮಾರ್ಕೆಟ್ ರಸ್ತೆಯ ಹಿಂದೂ ಮಹಾ ಗಣಪತಿ ನೇತೃತ್ವದ ಧರ್ಮಸಭೆಯಲ್ಲಿ ಪಾಲ್ಗೊಂಡು ಯತ್ನಾಳ ಮಾತನಾಡಿದರು.

ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತಿಗೂ ಬರಲ್ಲ. ದೇಶದಲ್ಲಿನ ಸಾವರ್ಕರ್ ವಿರೋಧಿಗಳಿಗೆ ಒಂದು ಸವಾಲು ಹಾಕುತ್ತೀನಿ. ಇವರೆಲ್ಲ ತಾಕತ್ತಿದ್ದರೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸಾರ್ವಕರ್ ಅವರನ್ನು ಇಡಲಾಗಿದ್ದ ಜೈಲಿನಲ್ಲಿ ಒಂದು ವಾರ ಇದ್ದು, ಕಾಲಪಾನಿ ಶಿಕ್ಷೆಗೆ ಒಳಗಾಗಿ ಇದ್ದು ಬರಲಿ. ಅಪ್ಪನಿಗೆ ಹುಟ್ಟಿದ್ದರೆ ಒಂದು ವಾರ ಅಲ್ಲಿರಬೇಕೆಂದು ಯತ್ನಾಳ ಸವಾಲು ಹಾಕಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಪದೇ ಪದೇ ಹಿಂದೂ ಯುವಕರ ಹತ್ಯೆ ನಡೆಯುತ್ತಿದ್ದು, ರಾಜ್ಯಕ್ಕೆ ಸಮರ್ಥ ಗೃಹ ಸಚಿವರ ಅವಶ್ಯಕತೆ ಇದೆ ಎಂದು ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ.

ನನ್ನಂತವರು ರಾಜ್ಯದ ಗೃಹ ಸಚಿವರಾದರೆ, ಹಿಂದೂ ಯುವಕರ ಹತ್ಯೆ ಮಾಡುತ್ತಿರುವರರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸುತ್ತಿದ್ದೆ. ಹಿಂದೂಗಳ ರಕ್ಷಣೆಗೆ ನನ್ನಂತಹ ಸಮರ್ಥ ರಾಜ್ಯದ ಗೃಹ ಸಚಿವರಾಗಬೇಕು ಎಂದು ಯತ್ನಾಳ ಏರು ಧ್ವನಿಯಲ್ಲಿ ಹೇಳಿದರು.

ಯತ್ನಾಳ ಅವರ ಈ ಮಾತಿಗೆ ಸಭಿಕರು ಸಿಳ್ಳೆ ಹೊಡೆದು ಬೆಂಬಲ ಸೂಚಿಸಿದರು.

ದೇಶದಲ್ಲಿ ಗಣೇಶ ಹಬ್ಬಕ್ಕೆ ಯಾವುದೇ ಪರವಾನಗಿ ಬೇಕಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಗಣೇಶ ಹಬ್ಬದ ಪಾತ್ರವೂ ಇದೆ. ಬಾಲಗಂಗಾಧರ ತಿಲಕ್‌ ಅವರು ಸಾರ್ವಜನಿಕ ಗಣೇಶ ಹಬ್ಬ ಆಚರಣೆಗ ಆರಂಭಿಸುವ ಮೂಲಕ, ಹಿಂದೂ ಸಮಾಜವನ್ನು ಒಟ್ಟುಗೂಡಿಸಿದರು ಎಂದರು.

ಉಪವಾಸ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿಲ್ಲ ಎಂಬ ಸತ್ಯವನ್ನು ನಾವು ಅರಿಯಬೇಕಿದೆ. ಭಾರತ ಮಾತೆಯ ವೀರ ಪುತ್ರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ರಕ್ತ ಚೆಲ್ಲಿದ ಫಲವಾಗಿ, ನಮಗೆ ಸ್ವಾತಂತ್ರ್ಯ ಲಭಿಸಿದೆ.‌ ದೇಶಕ್ಕೆ ನೆಹರೂ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಕೊಡುಗೆ ಶೂನ್ಯ. ಆದರೂ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು, ನಮ್ಮ ದುರದೃಷ್ಟಕರ ಎಂದು ಯತ್ನಾಳ ತೀವ್ರ ವಾಗ್ದಾಳಿ ನಡೆಸಿದರು.

ಭಾರತದ ಉಳಿವಿಗಾಗಿ ಹಿಂದೂ ಸಮಾಜ ಒಂದಾಗಬೇಕಿದೆ. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ, ಈ ದೇಶವನ್ನು ತುಂಡು ಮಾಡಲು ಪ್ರಯತ್ನಿಸುತ್ತಿರುವ ದುಷ್ಟ ಶಕ್ತಿಗಳಿಗೆ ಸೋಲಾಗಲಿದೆ. ಹಿಂದೂ ಸಮಾಜದ ಒಳಿತಿಗಾಗಿ ತಾವು ಹೋರಾಟ ಮುಂದುವರೆಸುವುದಾಗಿ ಯತ್ನಾಳ ಇದೇ ವೇಳೆ ಘೋಷಿಸಿದರು.

ಬಳಿಕ ಬಾಲಿವುಡ್ ಸ್ಟಾರ್​​ಗಳಾದ ಅಮೀರ್​​ ಖಾನ್​, ಶಾರುಖ್​​ ಖಾನ್, ಸಲ್ಮಾನ ಖಾನ್, ಸೈಫ್​​ ಅಲಿಖಾನ್ ಪಾಕಿಸ್ತಾನದ ಏಜೆಂಟರಾಗಿದ್ದಾರೆ ಎಂದು ಶಾಸಕ ಯತ್ನಾಳ್​​ ಕಿಡಿಕಾರಿದರು. ಭಾರತದ ಅನ್ನ ತಿಂದು ಪಾಕಿಸ್ತಾನ ಪರ ವಕಲಾತು ವಹಿಸುತ್ತಾರೆ. ನಮ್ಮ ಸಿನೆಮಾ ಪ್ರಿಯರು ಸಿನೆಮಾ ನೋಡುವುದರಿಂದ ಈಗ ಇವರು ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ನೆಹರು ಭಾವಚಿತ್ರ ಕೈ ಬಿಟ್ಟಿರುವುದನ್ನು ಸಮರ್ಥಿಸಿಕೊಂಡ ಯತ್ನಾಳ, ನೆಹರು ಕೊಡುಗೆ ದೇಶಕ್ಕೆ ಏನಾದರು ಇದೆಯಾ? ನಿಜವಾಗಿ ದೇಶದ ಪ್ರಧಾನಿ ನೇತಾಜಿ ಸುಭಾಷ್​​ ಚಂದ್ರ ಬೋಸ್ ಎಂದರು. ಗಾಂಧೀಜಿ ಹಠಕ್ಕೆ ಬಿದ್ದ ಕಾರಣ ನೆಹರು ಪ್ರಧಾನಿಯಾದರೇ ಹೊರತು ಯಾರಿಗೂ ಇಷ್ಟವಿರಲಿಲ್ಲ ಎಂದರು.

ಸುಮಾರು ಏಳು ದಶಕಗಳ ಬಳಿಕ ಚೀತಾ ಭಾರತಕ್ಕೆ ಮರು ಪ್ರವೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದೇ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಮರುಪರಿಚಯ ಯೋಜನೆಯಡಿ 70 ವರ್ಷಗಳ ಬಳಿಕ ಚೀತಾಗಳ ಪರಿಚಯಸಿದ್ದಾರೆ.

ಚೀತಾಗಳನ್ನು ಭಾರತಕ್ಕೆ ತರುವುದರ ಮೂಲಕ ಚೀತಾ ಸಂತತಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದ್ರೆ ಕಾಂಗ್ರೆಸ್ ನವರು ಭಾರತ ಜೋಡು ಯಾತ್ರೆ ಮಾಡುತ್ತಿದ್ದಾರೆ. ಅದು ಭಾರತ ತೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುಪ್ರೀಂ ಕೋರ್ಟಿನ ಆದೇಶ ಮಸೀದಿ ಮೇಲಿನ ಮೈಕ್ ಗೂ ಇದೆ, ಗಣಪತಿಗೂ ಇದೆ. ಮಸೀದಿ ಮೇಲಿನ ಮೈಕ್ ಯಾವಾಗ ಬಂದ್ ಆಗುತ್ತದೆಯೋ ಅಂದು ಗಣಪತಿ ಮುಂದಿನ ಡಿಜೆ ಬಂದ್ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಈಶ್ವರಸಿಂಗ್ ಠಾಕೂರ್, ರವಿ ಶಿದ್ಲಿಂಗ ಹಾಗೂ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬೊಮ್ಮಾಯಿಯವರನ್ನ ಟಾರ್ಗೆಟ್ ಮಾಡಿರುವ ಮೃತ್ಯುಂಜಯ ಶ್ರೀಗಳ ನಡೆ ಖಂಡನೀಯ; ಸಚಿವ ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕೆನ್ನುವ ಸಮಾಜದ‌ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮಿಗಳ ಹೋರಾಟ ಸ್ವಾಗತಾರ್ಹ. ಆದರೆ ಪೂಜ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟಾರ್ಗೆಟ್ ಮಾಡುವ ನಡೆಯನ್ನು ಖಂಡಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಗೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆ ಕುರಿತು ಪ್ರಾಮಾಣಿಕ ಕಳಕಳಿ ಇದೆ. ಶ್ರೀಗಳು ಇದಕ್ಕಾಗಿ ಹೋರಾಟ ಮಾಡಲಿ, ಆದ್ರೆ ಸಿಎಂ ಅವರನ್ನು ಯಾಕೆ ಟಾರ್ಗೆಟ್ ಮಾಡ್ತಾರೆ ಎನ್ನುವುದು ನನ್ನ ಮಿಲಿಯನ್ ಡಾಲರ್ ಪ್ರಶ್ನೆ ಎಂದರು.

ಸಿಎಂ ಮನೆ ಮುಂದೆ ಯಾಕೇ ಧರಣಿ? ಅವರ ಕ್ಷೇತ್ರದಲ್ಲಿ ಸತ್ಯಾಗ್ರಹ ಯಾಕೆ? ಈ ಹಿಂದೆ ಅವರ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ. ನಾವು ಕೂಡಾ ಸಾಕಷ್ಟು ಖರ್ಚು ಮಾಡಿ, ಪಾದಯಾತ್ರೆಗೆ ಜನರನ್ನು ಕಳಿಸಿದ್ದೇವೆ.
ಈಗ ಒಬ್ಬಿಬ್ಬರ ಮಾತು ಕೇಳಿಕೊಂಡು ಸಿಎಂ ಮನೆ ಮುಂದೆ ಹೋರಾಟ ಅಂತಾರೆ. ಶ್ರೀಗಳಿಗೆ ಭಕ್ತಿ, ನಮ್ರತೆಯಿಂದ ತಿಳಿಸಿ ಹೇಳಿದ್ದೇನೆ. ಸಮಾಜ ಎಂದರೆ ಒಬ್ಬಿಬ್ಬರ ಮಾತು ಕೇಳಿಕೊಂಡು, ನಿರ್ಧಾರ ಮಾಡೋದಲ್ಲ, ಸಮಾಜದ‌ ನಾಲ್ಕಾರು ಹಿರಿಯರ ಜೊತೆ ಸಮಾಲೋಚಿಸಿ ಮುಂದಿನ ನಡೆ‌ ತೀರ್ಮಾನಿಸಬೇಕು. ಬೊಮ್ಮಾಯಿಯವರ ಮನೆ ಮುಂದೆ ಶ್ರೀಗಳ ಹೋರಾಟವನ್ನು ವಿರೋಧಿಸುತ್ತೇನೆ ಎಂದರು.

ಪೊಲೀಸರ ಭರ್ಜರಿ ಕಾರ್ಯಾಚರಣೆ; ಗಾಂಜಾ ಬೆಳೆದಿದ್ದ ಇಬ್ಬರು ಸಹೋದರರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಈರುಳ್ಳಿ, ಮೆಣಸಿನಕಾಯಿ ಬೆಳೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ರೋಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಸಹೋದರರನ್ನು ವಶಕ್ಕೆ ಪಡೆದು, 80 ಸಾವಿರ ರೂ. ಮೌಲ್ಯದ ಐವತ್ತು ಗಾಂಜಾ ಗಿಡ ಜಪ್ತಿ ಮಾಡಿದ್ದಾರೆ.

ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಹದ್ದಿನಲ್ಲಿ ಇರುವ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದ ಆರೋಪದಲ್ಲಿ ಮಲ್ಲನಗೌಡ ಭರಮಗೌಡ ಹಾಗೂ ಚಂದ್ರಗೌಡ ಭರಮಗೌಡ ಎಂಬುವರನ್ನು ರೋಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿಎಸ್ಐ ಚಂದ್ರಶೇಖರ ಹೆರಕಲ್ಲ‌ ನೇತೃತ್ವದಲ್ಲಿ ಸಿಬ್ಬಂದಿ ಈ ದಾಳಿ ಮಾಡಿದ್ದರು. 80 ಸಾವಿರ ರೂ. ಮೌಲ್ಯದ 16 ಕೆ.ಜಿ ತೂಕದ 50 ಗಿಡ ಜಪ್ತಿ ಮಾಡಿದ್ದು, 186/2022 ಕಲಂ 20: (ಎ)ಎನ್ ಡಿ ಪಿ ಎಸ್ ಆ್ಯಕ್ಟ್ 1985 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತೋಟದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಕಳಸಾಪೂರ ಗ್ರಾಮದ ತೋಟವೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವೊಂದು ಸ್ಥಳಕ್ಕೆ ದೌಡಾಯಿಸಿದೆ.

ಗುರುವಾರದಂದು ಕಳಸಾಪೂರ ಗ್ರಾಮದಿಂದ ನಾಗಾವಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಇರುವ ಹಳ್ಳವೊಂದರ ಪಕ್ಕದ ರಾಮನಗೌಡ ಎಂಬುವವರ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ 26 ಸೆಕೆಂಡ್ ಇರುವ ವಿಡಿಯೋ ಒಂದು ನಿನ್ನೆ ಇಡೀ ದಿನ‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಕಬಲಾಯತಕಟ್ಟಿ ತಾಂಡಾದಲ್ಲೂ ಅಂದೇ ರಾತ್ರಿ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೀತಿ ವಿಡಿಯೋ ಹರದಾಡಿದ ಪರಿಣಾಮ ಕಳಸಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಭೀತಿ ಆವರಿಸಿದೆ.

ಕಳಸಾಪೂರ ಗ್ರಾಮ ಪಂಚಾಯತಿ ಕೂಡ ಡಂಗೂರು ಸಾರಿದ್ದು, ಗ್ರಾಮಸ್ಥರಲ್ಲಿ ಒಬ್ಬಂಟಿಯಾಗಿ ತಿರುಗದಂತೆ ಮನವಿ ಮಾಡಿದೆ.

ಕಳಸಾಪೂರ ಗ್ರಾಮಕ್ಕೆ ಭೇಟಿ ನೀಡಿರುವ ಗದಗ ತಾಲೂಕಿನ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಲಮನಿ ಹಾಗೂ ಸಿಬ್ಬಂದಿ, ತೋಟದಲ್ಲಿ ಚಿರತೆ ನಡೆದಾಡಿರುವ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಲಮನಿ, ಡಿಎಫ್ ಓ ಅವರ ಆದೇಶದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುರುವಾರ ದಿನ ಈ ಚಿರತೆ ಕಂಡು ಬಂದಿದೆ ಎಂದು ಗ್ರಾಮದ ರಾಮನಗೌಡ್ರ ಎಂಬುವವರು ಮಾಹಿತಿ ನೀಡಿದ್ದಾರೆ. ವಿಡಿಯೋದಲ್ಲಿ ನೋಡಿದ ಹಾಗೇ ಮೇಲ್ನೋಟಕ್ಕೆ ಚಿರತೆ ಕಂಡು ಬಂದಿದೆ. ಆ ಕುರಿತು ಇನ್ನೂ ಪರಿಶೀಲನೆ ನಡೆಸಿದ್ದೇವೆ ಎಂದರು.

ಕಪ್ಪತಗುಡ್ಡದಿಂದ ಈ ಚಿರತೆ ಬಂದಿದ್ದು, ಮತ್ತೆ ಮರಳಿ ಹೋಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಜನ ಭಯಪಡದೇ ಇರಲು ಮನವಿ ಮಾಡಿರುವ ಅಧಿಕಾರಿಗಳು, ದಿನವೂ ಮುಂಜಾನೆ ಹಾಗೂ ಸಂಜೆ ಕಳಸಾಪೂರ, ಕಬಲಾಯತಕಟ್ಟಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ತಂಡವೊಂದು ಗಸ್ತು ತಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಂಟಂ ಪಲ್ಟಿ: ಯುವಕ ಸ್ಥಳದಲ್ಲಿಯೇ ಸಾವು, ಆರು ಜನರಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಟಂಟಂ ಪಲ್ಟಿಯಾಗಿ ಪ್ರಯಾಣಿಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು, ಆರು ಜನ ಗಾಯಗೊಂಡ ಘಟನೆ ಗಜೇಂದ್ರಗಡ ತಾಲೂಕಿನ ಬೈರಾಪುರ ಕ್ರಾಸ್ ಬಳಿ ಗುರುವಾರ ನಡೆದಿದೆ.

ಬೈರಾಪುರ ಗ್ರಾಮದ ಶರಣಪ್ಪ (24) ಮೃತಪಟ್ಟವರು. ಗಾಯಗೊಂಡಿರುವ ಆರು ಜನರ ಪೈಕಿ ಮೂವರು ಜಿಲ್ಲಾಸ್ಪತ್ರೆ, ಉಳಿದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಂಟಂ ಬೈರಾಪುರ ಗ್ರಾಮದಿಂದ ಗಜೇಂದ್ರಗಡ ತೆರಳುತ್ತಿದ್ದಾಗ ಬೈರಾಪುರ ಕ್ರಾಸ್ ಬಳಿ ಟಂಟಂ ಪಲ್ಟಿಯಾಗಿದೆ.

ಸುದ್ದಿ ತಿಳಿಯುತ್ತಲೇ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗಜೇಂದ್ರಗಡ ಠಾಣೆ ಪಿಎಸ್‌ಐ ರಾಘವೇಂದ್ರ ಎಸ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ‌ದಾಖಲು ಮಾಡಿಕೊಂಡಿದ್ದಾರೆ.

ಸೈಬರ್ ಪೊಲೀಸರ ಕಾರ್ಯಾಚರಣೆ; ಮೋಸ ಮಾಡಿದ್ದ ಆರೋಪಿ ಬಲೆಗೆ; 3.39 ಲಕ್ಷ ರೂ. ಜಪ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ

ಇಂಡಿಯಾ ಮಾರ್ಟ್ ಜಾಲತಾಣದಲ್ಲಿ ಖರೀದಿಸುವ ಉದ್ದೇಶದಿಂದ ಸ್ಟೀಲ್ ಮಟೀರಿಯಲ್ ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ, ಸ್ಟೀಲ್ ವಸ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ಒದಗಿಸುತ್ತೇನೆ ಎಂದು ತನ್ನ ಖಾತೆಗೆ ಲಕ್ಷಾಂತರ ರೂ. ಹಣ ವರ್ಗಾಯಿಸುವಂತೆ ಹೇಳಿ, ಹಣವನ್ನು ಪಡೆದುಕೊಂಡು ಮೋಸ ಮಾಡಿರುವ ಕುರಿತು ದಾಖಲಾಗಿದ್ದ ಪ್ರಕರಣವನ್ನು ಗದಗ ಸಿಇಎನ್ ಪೊಲೀಸರು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗದಗ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ

2021ರ ಅಕ್ಟೋಬರ್ 4ರಂದು ದೂರುದಾರ ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಗ್ರಾಮದ ಗುತ್ತಿಗೆದಾರ ವಿನಾಯಕ ಮಂಜುನಾಥಗೌಡ ಪಾಟೀಲ, ಇಂಡಿಯಾ ಮಾರ್ಟ್ ಎಂಬ ಜಾಲತಾಣದಲ್ಲಿ 4 ಎಂಎಂ ಸ್ಟೀಲ್ ಮಟೀರಿಯಲ್ ಪರೀಕ್ಷಿಸಿದ್ದರು.

ನಂತರ ದೂರುದಾರರ ಮೊಬೈಲ್ ಸಂಖ್ಯೆಗೆ ಕರೆಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮಗೆ ಎಷ್ಟು ಮಟೀರಿಯಲ್ ಬೇಕಾಗಿದೆ ಎಂದು ವಿಚಾರಿಸಿ, ಬೇಡಿಕೆಯಿರುವ 6 ಟನ್ ಮೆಟೀರಿಯಲ್ಸ್ ಗೆ 2,54,880 ರೂ. ಮೊತ್ತವಾಗುತ್ತದೆ ಎಂದು ತಿಳಿಸಿ, ಖಾತೆಗೆ ಈ ಹಣವನ್ನು ಜಮಾ ಮಾಡಿದರೆ ನಿಮ್ಮ ವಿಳಾಸಕ್ಕೆ ನಾಳೆಯೇ ಮಟೀರಿಯಲ್ ಕಳಿಸುತ್ತೇವೆ ಎಂದು ನಂಬಿಸಿದ್ದ.

ದೂರುದಾರರು ಅವರು ತಿಳಿಸಿದ ಖಾತೆಗೆ ಹಣ ಜಮಾ ಮಾಡಿದ ನಂತರ, ನೀವು ತಿಳಿಸಿದಂತೆ 6 ಟನ್ ಮಟೀರಿಯಲ್ ಕಳಿಸಲು ಆಗುವದಿಲ್ಲ, 10 ಟನ್ ಆದರೆ ಕಳಿಸುತ್ತೇವೆ, ಮತ್ತೆ 4 ಟನ್ ಆರ್ಡರ್ ಮಾಡಿ, ಈಗ 2 ಟನ್ ಮಟೀರಿಯಲ್ ಹಣವನ್ನು ಖಾತೆಗೆ ಜಮಾ ಮಾಡಿ, ಉಳಿದ 2 ಟನ್ ಮಟೀರಿಯಲ್ ಮೊತ್ತವನ್ನು ಮಟೀರಿಯಲ್ ತಲುಪಿದ ಮೇಲೆ ಹಾಕಿ ಎಂದು ನಂಬಿಸಿ, 28-9-2021ರಂದು 85 ಸಾವಿರ ರೂ. ಸೇರಿ ಒಟ್ಟೂ 3,39,880 ರೂ. ಹಣವನ್ನು ಖಾತೆಗೆ ಹಾಕಿಸಿಕೊಂಡು ಮಟೀರಿಯಲ್ ಕಳಿಸಿಕೊಡದೇ, ಫೋನ್ ಕರೆಯನ್ನೂ ಸ್ವೀಕರಿಸದೇ ಮೋಸ ಮಾಡಿದ್ದಾರೆ ಎಂದು ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಲಂ: 66 (ಸಿ)(ಡಿ) ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಸದರಿ ಪ್ರಕರಣದ ಕುರಿತು ಡಿಸಿ ಆರ್ ಬಿ ಡಿಎಸ್ಪಿ ತಮ್ಮರಾಯ ಪಾಟೀಲ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಪಿಐ ಮಹಾಂತೇಶ.ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಬಿ. ಪಮ್ಮಾರ, ಎಸ್.ಎಚ್. ಅಂಗಡಿ, ಎಫ್.ಆರ್. ಕಂತಿ ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಕಾರ್ಯಚರಣೆ ನಡೆಸಿ, ಪ್ರಕರಣವನ್ನು ಬೇಧಿಸಿ, ಮುಂಬೈ ಮೂಲದ ಆರೋಪಿ ಪ್ರದೀಪ ಓಂಪ್ರಕಾಶ ದುಬೆ ಎಂಬುವನನ್ನು ಸೆ.12ರಂದು ಪತ್ತೆಮಾಡಿ ಬಂಧಿಸಿದ್ದಾರೆ.

ಆರೋಪಿತನಿಂದ 2.5 ಲಕ್ಷ ರೂ. ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸದರಿ ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಪತ್ತೆಮಾಡಿ, ಕಾನೂನಿನನ್ವಯ ಕ್ರಮ ಜರುಗಿಸಿದ ತನಿಖಾಧಿಕಾರಿಗಳಿಗೆ ಹಾಗೂ ಗದಗ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಸೈಬರ್ ಜಾಲತಾಣಗಳ ಮೂಲಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೊಳಗಾಗುತ್ತಿದ್ದು, ಯಾವ ಕಾರಣಕ್ಕೂ ತಮ್ಮ ವೈಯಕ್ತಿಕ ಹಾಗೂ ಇತರ ಮಾಹಿತಿಗಳನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡದಂತೆ ವಿನಂತಿಸಿದ್ದು, ಯಾರಾದರೂ ಸೈಬರ್ ವಂಚನೆಗೆ ಒಳಗಾದಲ್ಲಿ ನೇರವಾಗಿ ಅಥವಾ 112/1930 ಮುಖಾಂತರ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

ಕುರ್ತಕೋಟಿ ಗ್ರಾ.ಪಂ ಮಾಜಿ ಸದಸ್ಯ ಯಲ್ಲಪ್ಪ ರವಳೋಜಿ ನಿಧನ

0

ವಿಜಯಸಾಕ್ಷಿ ಸುದ್ದಿ, ಕುರ್ತಕೋಟಿ

ಗ್ರಾಮ ಪಂಚಾಯತಿ ಮಾಜಿ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ಯಲ್ಲಪ್ಪ ತಿಪ್ಪಣ್ಣ ರವಳೋಜಿ (48) ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 1ಗಂಟೆಗೆ ಜರುಗಿತು.

ಸಂತಾಪ: ಯಲ್ಲಪ್ಪ ರವಳೋಜಿ ಅವರ ನಿಧನಕ್ಕೆ ಮಾಜಿ ಸಚಿವ, ಗದಗ ಶಾಸಕ ಎಚ್. ಕೆ ಪಾಟೀಲ, ಮಾಜಿ ಶಾಸಕರಾದ ಡಿ. ಆರ್ ಪಾಟೀಲ, ಗ್ರಾಮ‌ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಪ್ಪಣ್ಣ ಇನಾಮತಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!