Home Blog Page 318

ಶಹರ ಪೊಲೀಸರ ಭರ್ಜರಿ ಭೇಟಿ; ಇಬ್ಬರು ಅಂತಾರಾಜ್ಯ‌ ಮನೆಗಳ್ಳರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಅಂತರ ರಾಜ್ಯ ಮನೆಗಳ್ಳರನ್ನು ಗದಗ‌ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜ.3 ರಂದು ಗದಗ ಬಾಪೂಜಿ‌ ನಗರದ ನಿವಾಸಿ ರೇಖಾ ಸೋಮಪ್ಪ ಬೇಲೇರಿ ಅವರ ಮನೆಯ ಮನೆಯ ಬೀಗ ಮುರಿದು ಟ್ರಝುರಿಯಲ್ಲಿದ್ದ 1.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 6 ಸಾವಿರ ರೂ. ಬೆಲೆಬಾಳುವ 60 ಗ್ರಾಂ ತೂಕದ ಬೆಳ್ಳಿಯ ಲಕ್ಷ್ಮೀ ಮುಖ ಕದ್ದೋಯ್ದಿದ್ದ ಅಂತರ ರಾಜ್ಯ ಮನಗಳ್ಳರನ್ನು ಕೊನೆಗೂ ಗದಗ ಶಹರ ಪೊಲೀಸರು ಬಂಧಿಸಿದ್ದಾರೆ.

ನೆರೆಯ ಮಹಾರಾಷ್ಟ್ರ ಮೂಲದ ಶಂಕರ ಸಾಹೇಬರಾವ್ ಜಾಧವ ಹಾಗೂ ಶಿವಾ ಚಿಮ್ಮಾಜಿ ಜಾಧವ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.26 ಲಕ್ಷ ರೂ.‌ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೇ, ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ ಕಳ್ಳತನವಾಗಿದ್ದ ಒಟ್ಟು 2,27,500 ರೂ. ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತಿ‌ ಮಾಡಿದ್ದಾರೆ. ಅದರಂತೆ, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಒಟ್ಟು 1,03,900 ರೂ. ಮೌಲ್ಯದ 1,940 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಆರೋಪಿತರಿಂದ ಒಟ್ಟು 4,57,400 ರೂ.‌ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಜಪ್ತಿ‌ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ, ಡಿಎಸ್ಪಿ ಶಿವಾನಂದ ಪವಾಡಶೆಟ್ಟರ ಅವರ ನೇತೃತ್ವದಲ್ಲಿ ಪ್ರಕರಣ ಭೇದಿಸಿದ ಗದಗ ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ವ್ಹಿ.ಸಾಲಿಮಠ, ಮಹಿಳಾ ಪಿಎಸ್ಐ ಜಿ.ಟಿ.ಜಕ್ಕಲಿ, ಎಎಸ್ಐ ವೈ.ಬಿ.ಪಾಟೀಲ್, ಸಿಬ್ಬಂದಿಗಳಾದ ವ್ಹಿ.ಎಸ್.ಭಿಕ್ಷಾವತಿಮಠ, ವ್ಹಿ.ಎಸ್.ಶೆಟ್ಟಣ್ಣವರ, ಎಸ್.ಎ.ಗುಡ್ಡಿಮಠ, ಎಸ್.ಎಸ್.ಮಾವಿನಕಾಯಿ, ಕೆ.ಡಿ.ಜಮಾದರ, ಪಿ.ಎಸ್.ಕಲ್ಲೂರ, ಆರ್.ಎನ್.ಬಾಲರಡ್ಡಿ ಅವರನ್ನೊಳಗೊಂಡ ವಿಶೇಷ ತಂಡದ ಕಾರ್ಯಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಶತಕ ದಾಟಿದ ಸೋಂಕು; ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 110 ಜನರಿಗೆ ಕೊರೊನಾ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಶುರುವಾಗಿದೆ. ಶುಕ್ರವಾರ ಒಂದೇ ದಿನ ಹೊಸದಾಗಿ ದಾಖಲೆಯ ಬರೋಬ್ಬರಿ 110 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 110 ಸೋಂಕಿತರ ಪೈಕಿ ಏಳು ಜನ ಶಿಕ್ಷಕರಿಗೆ, ಏಳು ಜನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ.

ವಿದ್ಯಾದಾನ ಸಮಿತಿಯ ಬಾಲಕಿಯರ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ. ಹುಲಕೋಟಿಯ ರಾಜೇಶ್ವರಿ ಶಾಲೆಯ ಮೂವರು, ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಕೆಜಿಬಿವ್ಹಿ ಹಾಸ್ಟೆಲ್‌ನ ನಾಲ್ವರು ಹಾಗೂ ಗದಗನ ದೇವರಾಜು ಅರಸು ವಸತಿ ನಿಲಯದ ಓರ್ವ ವಿದ್ಯಾರ್ಥಿಗೆ ಸೋಂಕು ತಗುಲಿದೆ.

ಶುಕ್ರವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,02,440 ಮಾದರಿ ಸಂಗ್ರಹಿಸಿದ್ದು, 6,76,054 ನಕಾರಾತ್ಮಕವಾಗಿವೆ. ಶುಕ್ರವಾರದ 110 ಪ್ರಕರಣ ಸೇರಿ ಒಟ್ಟು 26,386 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 9 ಜನ ಸೇರಿ ಒಟ್ಟು 25,784 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 283 ಸಕ್ರಿಯ ಪ್ರಕರಣಗಳಿವೆ.

ಒಟ್ಟು 283 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 193, ಮುಂಡರಗಿ 40, ನರಗುಂದ 3, ರೋಣ 18 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 29 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ಆರ್ಭಟ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ಕುಕನೂರಿನಲ್ಲಿರುವ ನವೋದಯ ವಸತಿ ಶಾಲೆಯ‌ 13 ಜನರಲ್ಲಿ ಕೊರೋನಾ ‌ಸೋಂಕು ಪತ್ತೆಯಾಗಿದೆ.

ನವೋದಯ ವಸತಿ ಶಾಲೆಯ ಒಬ್ಬರು ಶಿಕ್ಷಕರು,12 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ವೈದ್ಯರು ಐಸೋಲೇಟ್ ಮಾಡಿದ್ದು ವಸತಿ ಶಾಲೆಯ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಮತ್ತೊಂದು ಪರೀಕ್ಷಾ ವರದಿ ನಿರೀಕ್ಷೆಯಲ್ಲಿರೋ ವೈದ್ಯ ಸಿಬ್ಬಂದಿ ಫಲಿತಾಂಶಕ್ಕಾಗಿ‌ ಕಾಯುತ್ತಿದ್ದಾರೆ.

ಬೆಟಗೇರಿ ಪೊಲೀಸರ ಕಾರ್ಯಾಚರಣೆ; ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಟಗೇರಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಒಟ್ಟು 20,300 ರೂ ಮೌಲ್ಯದ 2300 ಗ್ರಾಂ ಗಾಂಜಾ ಹಾಗೂ 2.50 ಲಕ್ಷ ರೂ. ಬೆಲೆ ಬಾಳುವ ಸಿಪ್ಟ್ ಕಾರು(ಕೆಎ 05 ಎಎಫ್ 6723) ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕೊನಸಾಗರ ಗ್ರಾಮದ ಚಾಲಕ ಪರಸಪ್ಪ ಖೀಗಪ್ಪ ಭಜಂತ್ರಿ ಹಾಗೂ ರೈತ ಹುಸೇನಸಾಬ ಯಮನೂರಸಾಬ ನಾಯ್ಕ್ ಎಂಬುವವರ ವಿರುದ್ಧ ಎನ್ ಡಿಪಿಎಸ್ ಆ್ಯಕ್ಟ್ ನಡಿ ಪ್ರಕರಣ ದಾಖಲಾಗಿದೆ.

ರೋಣದಿಂದ ಹುಬ್ಬಳಿ‌ ಕಡೆಗೆ ಕಾರಿನಲ್ಲಿ ಅನಧಿಕೃತವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ ಬಣಕಾರ ಅವರಿಗೆ ಮಾಹಿತಿ ಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ ಅವರ ನಿರ್ದೇಶನದಂತೆ ಬೆಟಗೇರಿ ಪೊಲೀಸ್ ಠಾಣೆಯ ಸಿಪಿಐ ಸುಬ್ಬಾಪೂರಮಠ ಅವರ ಮಾರ್ಗದರ್ಶನದಂತೆ ದಾಳಿ ನಡೆಸಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಿದ್ದಾರೆ.

ಬೆಟಗೇರಿ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನದ ಹತ್ತಿರ ನಿಂತುಕೊಂಡಿದ್ದ ಪೊಲೀಸರು ರೋಣ ಕಡೆಯಿಂದ ಬರುವ ಎಲ್ಲ ವಾಹನಗಳನ್ನು ತಪಾಸಣೆ‌ ನಡೆಸಿದ್ದಾರೆ. ಈ ವೇಳೆ ಬಿಳಿಯ ಸ್ವಿಫ್ಟ್ ಕಾರೊಂದು ಬಂದಿದ್ದು, ನಿಲ್ಲಿಸಿ ಚಾಲಕನನ್ನು ವಿಚಾರಿಸಿದ್ದಾರೆ. ಗಾಬರಿಗೊಂಡ ಚಾಲಕ ಮಾತನಾಡಲು ತಡವರಿಸಿದ್ದು, ಆಗ ಪೊಲೀಸರು ಕಾರು ಸುತ್ತುವರಿದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಡಿಕ್ಕಿಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಅಡಗಿಸಿಟ್ಟಿದ್ದ
ಒಣಗಿದ ಗಾಂಜಾ ಪತ್ತೆಯಾಗಿದೆ.

ಈ ವೇಳೆ ಪೊಲೀಸರು ಕಾರು ಚಾಲಕ ಪರಸಪ್ಪನನ್ನು
ವಿಚಾರಣೆ ನಡೆಸಿದ್ದು, ‘ಒಂದು ವರ್ಷದ ಹಿಂದೆ ಲಾರಿ ಚಾಲನೆ‌ ಮಾಡುತ್ತಿದ್ದಾಗ ವಿಜಯಪುರ ಹತ್ತಿರದ ಗಾಂಜಾ ಮಾರುತ್ತಿದ್ದವನ ಬಳಿ ತಂದಿದ್ದೇನೆ. ಆದರೆ, ಅವನು ಯಾರು? ಎಲ್ಲಿಯವನು ಅಂತಾ ಗೊತ್ತಿಲ್ಲ. ನಾನು ಹುಬ್ಬಳ್ಳಿಗೆ ಹೆಚ್ಚಿನ ಹಣಕ್ಕಾಗಿ ಗಾಂಜಾ ಮಾರಾಟ‌ಮಾಡಲು ಹೊರಟ್ಟಿದ್ದೇ‌ನೆ’ ಎಂದು ಬಾಯ್ಬಿಟ್ಟಿದ್ದಾನೆ. ಆದರೆ ಇದು ಕಟ್ಟುಕಥೆ ಎನ್ನಲಾಗಿದೆ.

ಗದಗ ತಹಸೀಲ್ದಾರ ಕಿಶನ್ ಕಲಾಲ್, ಕಂದಾಯ ನಿರೀಕ್ಷಕ ರಂಗನಗೌಡ ಶಿವಶಂಕರಗೌಡ ಪಾಟೀಲ್ ಹಾಗೂ ಮದಗಾನೂರ ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್ ಸಣ್ಣಯಲ್ಲಪ್ಪ ಗಾಜಿ ಎಂಬುವವರು ಗಾಂಜಾ ದಾಳಿ ವೇಳೆ ಇದ್ದರು. ಈ ಕುರಿತು ಪ್ರಕರಣ ದಾಖಲಿಸಿರುವ ಬೆಟಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕುಣಿಕೇರಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತಾಲೂಕಿನ‌ ಕುಣಿಕೇರಿ ಗ್ರಾಮದ ಬಸ್ ನಿಲ್ದಾಣದ ಸಮೀಪ ಕಿರಾಣಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಅಕ್ರಮವಾಗಿ‌ ಮದ್ಯ ಮಾರಾಟ ಮಾಡುವಾಗ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ‌ಬಿದ್ದಿದ್ದಾನೆ. ವಶಕ್ಕೆ ಪಡೆದ ಆರೋಪಿಯನ್ನು ಕುಬೇರ ಬಂಡಿ ಎಂದು ಗುರುತಿಸಲಾಗಿದ್ದು, ಕುಣಿಕೇರಿ ಬಸ್ ನಿಲ್ದಾಣದ ಬಳಿ ಕಿರಾಣಿ ಅಂಗಡಿ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ. ಅಕ್ರಮವಾಗಿ ಮಾರಾಟಕ್ಕಿಟ್ಟಿದ್ದ ಸುಮಾರು 18 ಸಾವಿರ ರೂಪಾಯಿ‌ ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗುರುವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಗೀತಾ ಬೆನಹಾಳ ಅವರ ದೂರಿನನ್ವಯ ಹಾಗೂ ಮಾರ್ಗದರ್ಶನದೊಂದಿಗೆ ಗ್ರಾಮೀಣ ಠಾಣೆಯ ಪಿಎಸ್ಐ ಫಕೀರಮ್ಮ ಮತ್ತು ಸಿಬ್ಬಂದಿ ದಾಳಿ‌ ನಡೆಸಿದ್ದರು. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೈ ಕಸರತ್ತಿಗೆ ಮುದುಡುತ್ತಾ ‘ಕಮಲ? ನಾಲ್ವರು ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಗಾಳ?

ಜ. 24ರಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಜ. 24ರಂದು ಮೂಹೂರ್ತ ನಿಗದಿಯಾಗಿದ್ದು, ಚುನಾವಣೆಗೆ ಇನ್ನೂ 9 ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಚದುರಂಗದಾಟ ಪ್ರಾರಂಭಿಸಿದೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿಯ ಕೆಲ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳಲು ಎಲ್ಲ ರೀತಿಯ ತಯಾರಿ ನಡೆಸುತ್ತಿದೆ ಎನ್ನಲಾಗುತ್ತಿದೆ.

ನಗರಸಭೆ ಫಲಿತಾಂಶ ಪ್ರಕಟವಾದ ದಿನ (ಡಿ. 30) ‘ಮತ್ತೆ ಅಧಿಕಾರ ಹಿಡಿಯುವುದಕ್ಕಾಗಿ ಆಪರೇಷನ್‌ಗೆ ಮುಂದಾಗುತ್ತಾ ಕಾಂಗ್ರೆಸ್? ಎಂಬ ಬಗ್ಗೆ ‘ವಿಜಯಸಾಕ್ಷಿ ಸವಿಸ್ತಾರವಾದ ಸುದ್ದಿ ಪ್ರಕಟಿಸಿತ್ತು. ಅಲ್ಲದೆ, ಹಲವು ಬಾರಿ ಆಪರೇಷನ್ ಹಸ್ತದ ಬಗ್ಗೆ ವರದಿ ಮಾಡುತ್ತಲೇ ಬಂದಿತ್ತು. ಇದೀಗ ಕಾಂಗ್ರೆಸ್ ನಾಯಕರು ನಗರಸಭೆಯಲ್ಲಿ ತಮ್ಮ ಸಂಖ್ಯಾಬಲವನ್ನು ಏರಿಸಿಕೊಳ್ಳಲು ಆಪರೇಷನ್ ಕಾಂಗ್ರೆಸ್‌ನ ಹಾದಿ ಹಿಡಿದಿದ್ದಾರೆ. ಪುನಃ ನಗರಸಭೆ ಅಧಿಕಾರದ ಗದ್ದುಗೆ ಏರಲು ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ. ಸ್ವಪಕ್ಷದಲ್ಲಿ ಯಾರ ಪೈಪೋಟಿ ಇಲ್ಲದೆ ಮೊದಲ ಅವಧಿಯಲ್ಲಿಯೇ, ರಾಜಕೀಯ ರಂಗ ಪ್ರವೇಶಿಸಿದ ಪ್ರಥಮ ಹಂತದಲ್ಲಿಯೇ ಸುಲಭವಾಗಿ ಅಧ್ಯಕ್ಷರಾಗಬೇಕೆಂಬ ಕನಸು ಕಾಣುತ್ತಿರುವ 35ನೇ ವಾರ್ಡ್‌ನ ಸದಸ್ಯೆ ಉಷಾ ದಾಸರ ಅವರ ಕನಸಿಗೆ ಕಾಂಗ್ರೆಸ್ ತಣ್ಣೀರೆರಚಲು ರಣತಂತ್ರ ರೂಪಿಸುತ್ತಿದೆ. ಇನ್ನು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಆಕಾಂಕ್ಷಿಗಳ ಕನಸು ಕಮರುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಪಕ್ಷೇತರರು ‘ಕೈ ವಶ?

ಗದಗ-ಬೆಟಗೇರಿ ನಗರಸಭೆಯ 35 ವಾರ್ಡ್‌ಗಳಲ್ಲಿ ಬಿಜೆಪಿ 18, ಕಾಂಗ್ರೆಸ್ 15 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಕಾಂಗ್ರೆಸ್ ನಿರೀಕ್ಷೆಯಂತೆ 17ನೇ ವಾರ್ಡಿನ ಪಕ್ಷೇತರ ಸದಸ್ಯೆ ಆಸ್ಮಾ ಮುನ್ನಾ ರೇಶ್ಮಿ ಅವರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗುವ ಮೂಲಕ ತನ್ನ ಸದಸ್ಯರ ಸಂಖ್ಯಾಬಲವನ್ನು 16ಕ್ಕೆ ಏರಿಕೆ ಮಾಡಿಕೊಂಡಿದೆ. ಅದರಂತೆ, 21ನೇ ವಾರ್ಡಿನ ಇನ್ನೋರ್ವ ಪಕ್ಷೇತರ ಸದಸ್ಯ ಚುಮ್ಮಿ ನದಾಫ್ ಅವರನ್ನು ಖೆಡ್ಡಾಗೆ ಕೆಡವಲು ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನು ಬಿಜೆಪಿಯ ನಾಲ್ವರು ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿರುವ ಕಾಂಗ್ರೆಸ್ ನಾಯಕರು ಅವರ ಮನವೊಲಿಸುವಲ್ಲಿ ಯಶಸ್ಸು ಕಂಡಿದ್ದು, ನಾಲ್ವರಲ್ಲಿ ಇಬ್ಬರಾದರೂ ಕೈ ವಶವಾಗೋದು ಖಚಿತ ಎಂದು ಮೂಲಗಳು ತಿಳಿಸಿವೆ. ಆದರೆ, ಇವೆಲ್ಲವಕ್ಕೂ ಜ. 24ರಂದು ಉತ್ತರ ಸಿಗಲಿದೆ.

ವರ್ಕೌಟ್ ಆಗಲಿಲ್ಲ ಅಸ್ಸಾಂ ಪ್ರವಾಸ?

ಆಪರೇಷನ್ ಭೀತಿ ಹಿನ್ನೆಲೆಯಲ್ಲಿ ನಗರಸಭೆ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ತನ್ನ ಹಲವು ಸದಸ್ಯರು ಸೇರಿ ಕೆಲ ಬಿಜೆಪಿ ಮುಖಂಡರನ್ನು ಅಸ್ಸಾಂ ಪ್ರವಾಸಕ್ಕೆ ಕರೆದೋಯ್ದಿತ್ತು. ದುರಂತವೆಂದರೆ, ಅಸ್ಸಾಂಗೆ ಹೋಗಿ ಮಜಾ ಮಾಡಿ ಬಂದಿರುವ ಕೆಲ ಸದಸ್ಯರೇ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಬಿಜೆಪಿಗೆ ಗುಡ್ ಬೈ ಹೇಳುತ್ತಾರೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದಾಗಿ 14 ವರ್ಷಗಳ ಬಳಿಕ ಸಿಕ್ಕ ಸುವರ್ಣಾವಕಾಶಗಳು ಬಹುತೇಕ ಕಮಲದ ‘ಕೈ ತಪ್ಪಲಿದೆ ಎಂಬ ಮಾತುಗಳು ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೇಳಿ ಬರುತ್ತಿವೆ.

ಜ. 24 ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಜ. 24 ರಂದು ತೀರ್ಮಾನಿಸಲಾಗಿದೆ. ಈ ಕುರಿತು ಉಪವಿಭಾಗಧಿಕಾರಿ ರಾಯಪ್ಪ ಹುಣಸಗಿ ಮಾಹಿತಿ ನೀಡಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಲ್.ಪ್ರಸಾದ್ ಅವರು ಜ.12 ರಂದು ನಿರ್ದೇಶಿಸಿದ್ದರು.

ಗದಗ-ಬೆಟಗೇರಿ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ದೇಶನ ಕೋರಿರುವ ವಿಷಯವನ್ನು ಪರಿಶೀಲಿಸಲಾಗಿದೆ. ನಗರಸಭೆಗಳಿಗೆ ಸಂಬಂಧಿಸಿದಂತೆ 9ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ವಿವಿಧ ಪ್ರವರ್ಗಗಳ ಮೀಸಲಾತಿ ನಿಗದಿಪಡಿಸಿ ಸರ್ಕಾರದ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಸದರಿ ಅಧಿಸೂಚನೆಯನ್ವಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ‌ನಡೆಸಲು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ‌ ನೀಡಿದ್ದರು.

ಇನ್ನು ರಾಜ್ಯ ಸರ್ಕಾರ ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ.

ಗದಗ-ಬೆಟಗೇರಿ ನಗರಸಭೆಯ 35 ವಾರ್ಡ್ ಗಳಿಗೆ
ಡಿ.27ರಂದು ಚುನಾವಣೆ ನಡೆದಿತ್ತು. ಡಿ.30 ರಂದು ಚುನಾವಣಾ ಫಲಿತಾಂಶ ಹೊರ ಬಿದ್ದಿತ್ತು. ಅದರಲ್ಲಿ ಬಿಜೆಪಿ 18, ಕಾಂಗ್ರೆಸ್ ‌15 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಒಂದೇ ಕುಟುಂಬದ 8 ಜನ ಸೇರಿ 69 ಜನರಿಗೆ ಕೋವಿಡ್ ಸೋಂಕು; ಕಂಟೈನ್ಮೆಂಟ್ ಝೋನ್ ಮಾಡಿದ ಆರೋಗ್ಯ ಇಲಾಖೆ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹದಿಹರಿಯದವರಿಂದ ಹಿಡಿದು ವಯೋಮಾನದ ಮಕ್ಕಳಿಗೂ ಕೊರೊನಾ ಸೋಂಕು ಕಂಟಕವಾಗಿ ಕಾಡುತ್ತಿದೆ. ಕೋವಿಡ್ ಬಗೆಗಿನ ನಿರ್ಲಕ್ಷ್ಯದಿಂದಾಗಿ ಎಂಟು ದಿನಗಳಲ್ಲಿ ಬರೋಬ್ಬರಿ 182 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.

ಗದಗನ ಆದರ್ಶ ನಗರದ ಆಂಜನೇಯ ದೇವಸ್ಥಾನದ ಹತ್ತಿರದ ಒಂದೇ ಕುಟುಂಬದ ಎಂಟು ಜನಕ್ಕೆ ಕೋವಿಡ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಕಂಟೈನ್ಮೆಂಟ್ ಝೋನ್ ಮಾಡಿದೆ.

ರೋಣ ಪಟ್ಟಣದ ತಾಲ್ಲೂಕು ಆಸ್ಪತ್ರೆ ಇಲಾಖೆಯ ಕಚೇರಿಯ ಇಬ್ಬರು ಹಾಗೂ ಸವಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಓರ್ವ ವೈದ್ಯಾಧಿಕಾರಿಗೆ ಸೋಂಕು ದೃಢಪಟ್ಟಿದೆ.

ಅದರಂತೆ, ಮುಂಬೈನಿಂದ ಗದಗ ನಗರಕ್ಕೆ ಬಂದಿರುವ ಮುಳಗುಂದ ನಾಕಾ ಹತ್ತಿರದ ಜೈನ್ ಕಾಲನಿಯ ಓರ್ವ ನಿವಾಸಿ ಹಾಗೂ ತೋಂಟದಾರ್ಯ ಮಠದ ರಸ್ತೆಯ ವಿಮಲ್ ಕಟ್ಟಡ ಹತ್ತಿರದ ಮೂವರು ನಿವಾಸಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಗುರುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,00,373 ಮಾದರಿ ಸಂಗ್ರಹಿಸಿದ್ದು, 6,74,097 ನಕಾರಾತ್ಮಕವಾಗಿವೆ. ಗುರುವಾರದ 69 ಪ್ರಕರಣ ಸೇರಿ ಒಟ್ಟು 26,276 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 8 ಸೇರಿ ಒಟ್ಟು 25,775 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 182 ಸಕ್ರಿಯ ಪ್ರಕರಣಗಳಿವೆ.

ಒಟ್ಟು 182 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 128, ಮುಂಡರಗಿ 25, ನರಗುಂದ 02, ರೋಣ 13 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 14 ಪ್ರಕರಣಗಳಿವೆ.

ಅದರಂತೆ, ಇಲ್ಲಿಯವರೆಗಿನ ಒಟ್ಟು 319 ಸಾವುಗಳ ಪೈಕಿ ಗದಗ ತಾಲ್ಲೂಕಿನಲ್ಲಿ 167, ಮುಂಡರಗಿ 22, ನರಗುಂದ 14, ರೋಣ 48 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 43 ಹಾಗೂ ಹೊರ ಜಿಲ್ಲೆ ಅಥವಾ ಹೊರ ರಾಜ್ಯದ ಒಟ್ಟು 25 ಜನ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಎಸಿಬಿ ಬಲೆಗೆ ಬಿದ್ದ ಪಿಡಿಓ ಮತ್ತು ಕಾರ್ಯದರ್ಶಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಫಾರಂ 11ಬಿ ಮಾಡಿಸಲು 6000 ರೂಪಾಯಿ ಬೇಡಿಕೆ ಇಟ್ಟಿದ್ದ ಪಿಡಿಓ ಹಾಗೂ ಕಾರ್ಯದರ್ಶಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾ.ಪಂ.ನಲ್ಲಿ ಗುರುವಾರ ನಡೆದಿದೆ.

ಬಂಡಿಬಸಪ್ಪ ಕ್ಯಾಂಪ್ ನಿವಾಸಿ ವಿಜಯ ಕುಮಾರ್ ಅವರಿಂದ ಹಣ ಪಡೆಯುವ ವೇಳೆ ಎಸಿಬಿ ರೈಡ್ ನಡೆದಿದ್ದು, ಕೊಪ್ಪಳ ಎಸಿಬಿ ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನ ಹಾಗೂ ಶಿವಕುಮಾರ್ ನೇತೃತ್ವದಲ್ಲಿ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ ಶೇಖಸಾಬ್ ಹಾಗೂ ಕಾರ್ಯದರ್ಶಿ ನೂರ್ ಉಲ್ಲಕ್ ಅವರ
ಭ್ರಷ್ಟಾಚಾರ ಕುರಿತು ಎಸಿಬಿ ಅಧಿಕಾರಿಗಳು ತನಿಖೆ ನೆಡಸುತ್ತಿದ್ದಾರೆ.

ಕೊಪ್ಪಳದ ಅಜ್ಜನ‌ ಜಾತ್ರೆ ರದ್ದು!!

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ:
ಶತಮಾನಗಳಿಂದ ನಡೆದುಕೊಂಡು ಬಂದ ಕೊಪ್ಪಳ ಗವಿಮಠ ಜಾತ್ರೆ ರದ್ದಾಗಿದೆ.
ದಕ್ಷಿಣ ಭಾರತದ ಮಹಾಕುಂಭ ಮೇಳ, ಉತ್ತರದ ಸಿದ್ಧಗಂಗೆ ಎಂಬ ಖ್ಯಾತಿಯ ಗವಿಮಠ ಜಾತ್ರೆ
ಕೊರೊನಾ ಹಾಗೂ ಓಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ
ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದು
ಮಾಡಿರುವುದಾಗಿ ಗವಿಮಠದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

ಪ್ರತಿ ವರ್ಷ ಜಾತ್ರೆಯಲ್ಲಿ 5-6 ಲಕ್ಷ ಜನ ಸೇರುತ್ತಿದ್ದರು.
15 ದಿನಗಳ ನಡೆಯುತ್ತಿದ್ದ ಜಾತ್ರೆ ಈ ವರ್ಷ ಜನವರಿ 19 ರಂದು ನಡೆಯಬೇಕಿದ್ದ ಮಹಾರಥೋತ್ಸವವೂ ರದ್ದಾಗಿದೆ. ಆದರೆ
ಸಂಪ್ರದಾಯಬದ್ದವಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಈಗ ಗವಿಸಿದ್ದೇಶ್ವರ ಕರ್ತೃ ಗದ್ದುಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಒಂದು ವೇಳೆ ಕೊರೊನಾ ಸೋಂಕು ಹೆಚ್ಚಾದರೆ ಶ್ರೀಮಠದ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುವುದು ಎಂದು
ಗವಿಮಠದ ಪ್ರಕಟಣೆ ತಿಳಿಸಿದೆ.

error: Content is protected !!