Home Blog Page 318

ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಿದೆ; ಅಶೋಕ ಮಂದಾಲಿ ವ್ಯಂಗ್ಯ

ದಾವಣಗೆರೆಯಲ್ಲಿ ಬೆಂಗಳೂರಿನ 7ಜನ ಬಿಜೆಪಿ ಎಂಎಲ್‌ಸಿಗಳ ಹೆಸರು ಸೇರಿಸಿದ್ಯಾರು? ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಬಿಜೆಪಿ ಅನುಸರಿಸಿದ ವಾಮಮಾರ್ಗ ಗದಗ ಜಿಲ್ಲೆಯ ಬಿಜೆಪಿಗರಿಗೆ ಕಾಣುತ್ತಿಲ್ಲವೇ?: ಮಂದಾಲಿ ಪ್ರಶ್ನೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಕಾಂಗ್ರೆಸ್ ಮೇಲೆ ಮಾಡುತ್ತಿರುವ ಆರೋಪಕ್ಕೂ ಮುನ್ನ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗರು ಹಿಡಿದಿದ್ದು ಯಾವ ಮಾರ್ಗ ಎಂಬುದನ್ನು ಹೇಳಲಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ವಾಮಮಾರ್ಗ ಹೇಳಿಕೆಯ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಾವಣಗೆರೆ ಮಹಾನಗರ ಪಾಲಿಕೆಗೆ ಕಾಂಗ್ರೆಸ್ 22 ಜನ, ಬಿಜೆಪಿಯವರು 17 ಜನ ಆಯ್ಕೆಯಾಗಿದ್ದರು. ಇವರೊಂದಿಗೆ ಐವರು ಪಕ್ಷೇತರರು, ಓರ್ವ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದರು. ಓರ್ವ ಪಕ್ಷೇತರ, ಸ್ಥಳೀಯ ಶಾಸಕ, ವಿಪ ಸದಸ್ಯರು ಸೇರಿ ಕಾಂಗ್ರೆಸ್ 23 ಸಂಖ್ಯಾಬಲದೊಂದಿಗೆ ಅಧಿಕಾರ ಹಿಡಿಯಬೇಕಿತ್ತು.
ಆದರೆ, ಬಿಜೆಪಿಯವರು ಬೆಂಗಳೂರಿನಿಂದ ರವಿಕುಮಾರ, ತೇಜಸ್ವಿನಿಗೌಡ, ಲೇಹರಸಿಂಗ್, ನಂಜುಂಡಿ, ಚಿದಾನಂದಗೌಡ, ರಾಣೆಬೆನ್ನೂರಿನ ಆರ್.ಶಂಕರ್ ಸೇರಿ ಏಳು ಜನರನ್ನು ದಾವಣಗೆರೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ವಾಮಮಾರ್ಗದಿಂದ ಅಧಿಕಾರ ಪಡೆದುಕೊಂಡಿದ್ದಾರೆ.

ಗದಗನ ಬಿಜೆಪಿ ಮುಖಂಡರ ಹೇಳಿಕೆ ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ವಾರ್ಡ್ ನಂ.28, 24 ಮತ್ತು 5ರಲ್ಲಿ ಬಿಜೆಪಿಗರು ಗೆದ್ದಿದ್ದು, ಅನ್ಯಾಯ ಮಾರ್ಗದಿಂದಲೇ ಅಲ್ಲವೇ?. 28ನೇ ವಾರ್ಡಿನಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಅನಿಲ್ ಅಬ್ಬಿಗೇರಿ ಈವರೆಗೆ ಲಿಂಗಾಯತ ಎಂದು ಬಿಂಬಿಸಿಕೊಂಡು ಬಂದಿದ್ದರು. ಆದರೆ, ನಗರಸಭೆ ಚುನಾವಣೆ ಹೊತ್ತಲ್ಲಿ ಗಾಣಿಗ ಎಂದು ಸರ್ಟಿಫಿಕೇಟ್ ಪಡೆದಿದ್ದಾರೆ. ಅಭ್ಯರ್ಥಿಯ ಎಲ್‌ಸಿಯಲ್ಲಿ ಲಿಂಗಾಯತ ಎಂದು ನಮೂದಾಗಿದೆ. ಅವರು ಗದಗನ ನಿವಾಸಿಯಾಗಿದ್ದುಕೊಂಡರೂ ಗದಗನ ಸಮಾಜದ ಸದಸ್ಯತ್ವ ಪಡೆಯದೇ ಹುಬ್ಬಳ್ಳಿ ಸಂಘದಿಂದ ಗಾಣಿಗ ಜಾತಿಯ ಸದಸ್ಯತ್ವ ಮುಂದಿಟ್ಟುಕೊಂಡು, ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಾಮ ಮಾರ್ಗ ಬಿಜೆಪಿಯವರಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಮುಖಂಡರ ಸಹಾಯ ಪಡೆದು ಅನಿಲ್ ಅಬ್ಬಿಗೇರಿ ಗದಗನ ಬದಲಾಗಿ ಹುಬ್ಬಳ್ಳಿ ಸಂಘದಿಂದ ಸದಸ್ಯತ್ಯ ಪಡೆದಿದ್ದು ಏಕೆ? ಇದು ವಾಮಮಾರ್ಗ ಅಲ್ಲವೇ?. ಇನ್ನು ಯಾವುದೇ ಜಾತಿ ಪ್ರಮಾಣ ಪತ್ರ ಪಡೆಯುವಾಗ ತಂದೆ-ತಾಯಿ ಪ್ರಮಾಣ ಪತ್ರದಲ್ಲಿನ ಜಾತಿ ಪರಿಗಣಿಸುತ್ತಾರೆ ಹೊರತು ತಂದೆಗೆ ಮಕ್ಕಳ ಸರ್ಟಿಫಿಕೇಟ್‌ನಲ್ಲಿನ ಜಾತಿಯನ್ನಲ್ಲ. ಇದು ಯಾವ ಮಾರ್ಗ ಎಂಬುದನ್ನು ಬಿಜೆಪಿಯವರೇ ಹೇಳಲಿ ಎಂದು ಕಿಡಿಕಾರಿದ್ದಾರೆ.

ಓರ್ವ ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್‌ನ ಮೂವರು ಸದಸ್ಯರನ್ನು ಗದಗನಲ್ಲಿ ಹೆಸರು ಸೇರ್ಪಡೆಗೆ ನೀಡಿರುವ ಅರ್ಜಿ ಬಗ್ಗೆ ಪ್ರಶ್ನಿಸುವ ಬಿಜೆಪಿಗರು, ಅಧಿಕಾರಿಗಳ ಮೇಲೆ ಒತ್ತಡ ತಂದು ಸೇರ್ಪಡೆ ಮಾಡದಂತೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಸೇರ್ಪಡೆಗೊಂಡ ಬೆಂಗಳೂರಿನ ಏಳು ಜನ ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ದಾವಣಗೆರೆಯಲ್ಲಿ ಮತದಾರರಾಗಿದ್ದರ ಬಗ್ಗೆ ಮಾತನಾಡಲಿ. ಅದು ಬಿಟ್ಟು ಬಾವಿಯಲ್ಲಿನ ಕಪ್ಪೆಯಂತೆ ಹೇಳಿಕೆ ನೀಡಬಾರದು ಎಂದು ಹರಿಹಾಯ್ದಿದ್ದಾರೆ.

ನಗರಸಭೆಯಲ್ಲಿ 18 ಸ್ಥಾನ ಗೆದ್ದಿದ್ದೇವೆ ಎನ್ನುವವರು ಅವಳಿ ನಗರದಲ್ಲಿ ಕಾಂಗ್ರೆಸ್‌ಗೆ ಬಂದ ಮತಗಳೆಷ್ಟು, ಬಿಜೆಪಿಗೆಷ್ಟು ಬಂದಿವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. ಗದಗ-ಬೆಟಗೇರಿಯ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ಗೆ 34,972 ಮತ, ಬಿಜೆಪಿಗೆ 34,311 ಮತ ಬಂದಿವೆ. ಇಲ್ಲೂ ಕಾಂಗ್ರೆಸ್ ಮುನ್ನಡೆ ಇದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.

ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿ ತೆಕ್ಕೆಗೆ?; ಆಡಿಯೋ, ವಿಡಿಯೋ ಕಾಲ್’ನಲ್ಲಿ ಸಂಪರ್ಕ!

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದ ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ‌ ನಗರದಲ್ಲಿ ರಾಜಕೀಯ ಮೇಲಾಟಗಳು‌‌ ನಡೆಯುತ್ತಲಿವೆ. ಆಡಳಿತ‌ ಚುಕ್ಕಾಣಿ ಹಿಡಿಯಲು ಎರಡೂ ಪಕ್ಷಗಳು ಈಗಿರುವ ಸದಸ್ಯರ ಸಂಖ್ಯಾಬಲ‌ ಹೆಚ್ಚಿಸಿಕೊಳ್ಳಲು ಡೇ‌ ಒನ್ ನಿಂದ ಪ್ರಯತ್ನಿಸುತ್ತಿವೆ.

ಈ ಮಧ್ಯೆ 15 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೂ ಮುಂದಾಗಿತ್ತು‌ ಎಂಬ ಮಾತುಗಳು ಕೇಳಿ‌ ಬಂದಿತ್ತು. ಅದರ ಭಾಗವಾಗಿ ಕಾಂಗ್ರೆಸ್ ನಾಯಕರು ಮೂವರು ಬಿಜೆಪಿ ಸದಸ್ಯರ ಮನವೊಲಿಸಲು ಶತಪ್ರಯತ್ನಪಟ್ಟಿದ್ದರು. ಆದರೆ, ಅದು ಫಲದಾಯಕವಾಗಿಲ್ಲ‌ ಎನ್ನಲಾಗುತ್ತಿದೆ.

ಅದರಂತೆ, ಇದೀಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೂ ಸೇಫರ್ ಸೈಡ್ ಆಗಿ ಕಾಂಗ್ರೆಸ್ ನ ಇಬ್ಬರು ಸದಸ್ಯರಿಗೆ ಗಾಳ ಹಾಕಿದೆ. ಕಾಂಗ್ರೆಸ್ನ ಓರ್ವ ಹೊಸ ಸದಸ್ಯ ಹಾಗೂ ಇತ್ತೀಚೆಗಷ್ಟೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಓರ್ವ ಪಕ್ಷೇತರ ಸದಸ್ಯರ ಜೊತೆ ಬಿಜೆಪಿಯ ಕೆಲ ನಾಯಕರು ನಿಕಟ‌ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಸದಸ್ಯರ ಮನವೊಲಿಸಲು ಬಿಜೆಪಿಯ ನಾಯಕರು ಆಡಿಯೋ, ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಮನವೊಲಿಸಲು ಯತ್ನಿಸಿದ್ದು, ನಗರಸಭೆ ಗದ್ದುಗೆ ಹಿಡಿಯಲು ಬಿಜೆಪಿ ಕಾಂಗ್ರೆಸ್ ನಡುವೆ ಒಂದೇ ಒಂದು ಸಂಖ್ಯೆಯ ಕೊರತೆ ಇರುವುದರಿಂದ ನಾಳೆ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಏನಾಗುತ್ತದೆಯೋ ಎಂಬ ಕುತೂಹಲ ಹೆಚ್ಚಿಸಿದೆ.

ಗದ್ದುಗೆ ಏರಲು ಅಡ್ಡದಾರಿ; ಕಾಂಗ್ರೆಸ್‌ಗೆ ಬಿಜೆಪಿ ಗುದ್ದು

  • ಅಧಿಕಾರ ಹಿಡಿಯುವುದಕ್ಕಾಗಿ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆಗೆ ಯತ್ನ
  • ಚುನಾವಣೆ ವೇಳೆ ಎಲ್ಲಿದ್ರಿ? ಎಷ್ಟು ಅನುದಾನ ಕೊಟ್ಟಿದ್ದೀರಿ? ನಗರದಲ್ಲಿ ವೃತ್ತಗಳೆಷ್ಟಿವೆ? ಎಂಬಿತ್ಯಾದಿ ಪ್ರಶ್ನೆಗಳ ಪೋಸ್ಟರ್‌ಗಳು ವೈರಲ್

ವಿಜಯಸಾಕ್ಷಿ ಸುದ್ದಿ, ಗದಗ:

ಸೋಮವಾರ ನಡೆಯುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಗೆದ್ದು, ಗದುಗಿನ ಗದ್ದುಗೆ ಏರಲು ಸನ್ನದ್ಧಗೊಳ್ಳುತ್ತಿರುವ ಕಾಂಗ್ರೆಸ್ ವಿರುದ್ಧ ಗದಗ-ಬೆಟಗೇರಿ ಅವಳಿ ನಗರದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಮೋಹನ್‌ಕುಮಾರ ಕೊಂಡಜ್ಜಿ, ಪ್ರಕಾಶ್ ರಾಥೋಡ ಹಾಗೂ ರಾಜ್ಯಸಭಾ ಸದಸ್ಯ ಡಾ| ಎಲ್. ಹನುಮಂತಯ್ಯ ಅವರು ತಮ್ಮ ಹೆಸರನ್ನು ಗದಗ ವಿಧಾನಸಭಾ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವುದಕ್ಕೆ ಅವಳಿ ನಗರದ ಜನತೆ ಕೈ ನಾಯಕರ ವಿರುದ್ಧ ಹರಿಹಾಯುತ್ತಿದ್ದಾರೆ.

ಅದರಲ್ಲೂ, ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ನ ಮೂವರು ಮೇಲ್ಮನೆ ಸದಸ್ಯರ ವಿರುದ್ಧ ನಗರದ ಜನರು, ಅದರಲ್ಲೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಲ್ಲದೆ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅವು ಹೀಗಿವೆ..

ಎಲ್ಲಿದ್ರಿ? ಎಷ್ಟು ಅನುದಾನ ಕೊಟ್ಟಿದ್ದೀರಿ?:
‘ಮಾನ್ಯ ಮೋಹನ್‌ಕುಮಾರ ಕೊಂಡಜ್ಜಿಯವರೇ, ನಗರಸಭೆಯ ಚುನಾವಣೆಯ ಸಂದರ್ಭದಲ್ಲಿ ಎಲ್ಲಿದ್ರಿ? ತಾವು ತಮ್ಮ ಅಭ್ಯರ್ಥಿಗಳ ಪರ ಪ್ರಚಾರವನ್ನೇ ಮಾಡಲಿಲ್ಲ. ಈಗ ತಾವು 6 ತಿಂಗಳಿಂದ ಗದಗ ನಗರದಲ್ಲಿ ವಾಸವಿದ್ದ ದಾಖಲೆಯನ್ನು ನೀಡುತ್ತೀರಾ? ಅಷ್ಟಕ್ಕೂ ನಗರದ ಅಭಿವೃದ್ಧಿಗೆ ತಾವು ಎಷ್ಟು ಅನುದಾನ ನೀಡಿದ್ದೀರಾ..? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಷ್ಟು ಸರ್ಕಲ್ ಇವೆ?:
‘ಮಾನ್ಯ ಹನುಮಂತಯ್ಯನವರೇ ತಾವು ಗದಗ ನಗರದಲ್ಲಿ ವಾಸವಿದ್ದು 6 ತಿಂಗಳಾಗಿದೆ ಅಂತ ದಾಖಲೆ ನೀಡಿದ್ದೀರಿ? ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದು, ಆ ಕ್ಷೇತ್ರದಿಂದ ಆಯ್ಕೆಯಾಗಿ ಬುದ್ಧಿಜೀವಿ ಎಂದು ಬಿರುದು ಪಡೆದ ತಾವು ಈ ಹನುಮಂತನಿಗೆ (ಶಾಸಕ ಎಚ್.ಕೆ. ಪಾಟೀಲ್) ಬಾಗಿದ್ದು ಸರಿಯೇ..? ಜೊತೆಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಎಷ್ಟು ಸರ್ಕಲ್‌ಗಳಿವೆ ಅಂತ ತಮಗೆ ಗೊತ್ತೆ? ಹಾಗೆ ತಮ್ಮ ಅನುದಾನವನ್ನು ಎಷ್ಟು ನೀಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

ಪೋಸ್ಟರ್‌ಗಳು ವೈರಲ್:
ಅದರಂತೆ, ಪ್ರಕಾಶ್ ರಾಥೋಡಅವರನ್ನೂ ಜನತೆ ಪ್ರಶ್ನಿಸುತ್ತಿದ್ದಾರೆ, ‘ನೀವು ಗದಗನಲ್ಲಿ ಮತ್ತೊಂದು ಮನೆ ಮಾಡಿದ್ದೀರಾ? ಅವಳಿ ನಗರದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿರುವ ಪೋಸ್ಟರ್‌ಗಳು ವಾಟ್ಸಾಪ್, ಫೇಸ್‌ಬುಕ್, ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೈ ನಾಯಕರಿಗೆ ಮುಜುಗರವನ್ನುಂಟು ಮಾಡಿವೆ.

ಇನ್ನು ಗದಗ-ಬೆಟಗೇರಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ ನಾಯಕರು ಇಷ್ಟೆಲ್ಲ ಕಸರತ್ತು ನಡೆಸುತ್ತಿದ್ದು, ಭಾರೀ ಕುತೂಹಲ ಕೆರಳಿಸಿದೆ. ಸಂಖ್ಯಾಬಲದಲ್ಲಿ ಸ್ವಲ್ಪವಷ್ಟೇ ಅಂತರವಿರುವ ಕಾರಣ, ಸೋಮವಾರದ ಚುನಾವಣೆಯಲ್ಲಿ ಯಾವ ತಂತ್ರದ ಮೂಲಕ ಯಾರು ಅಧಿಕಾರ ಹಿಡಿಯುತ್ತಾರೆ ಎನ್ನುವುದು ಕಷ್ಟ. ಕಾಂಗ್ರೆಸ್, ಬಿಜೆಪಿ ಮಧ್ಯೆ ಅಧಿಕಾರಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿದೆ. ಅದೃಷ್ಟ ಯಾರಿಗೆ ಒಲಿಯುತ್ತದೆ ಎಂಬುದು ಸೋಮವಾರ ಮಧ್ಯಾಹ್ನದ ವೇಳೆಗೆ ಗೊತ್ತಾಗುವುದು.

ಅಕ್ಕಿ ಮೂಟೆ ಹೊತ್ತ ಗವಿಶ್ರೀ!

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಮಠಾಧೀಶರೆಂದರೆ ಪೀಠದ ಮೇಲೆ ಕುಳಿತು ಆಶೀರ್ವದಿಸುವವರು ಎಂಬ ನೋಟ ಕಣ್ಮುಂದೆ ಬರುತ್ತದೆ. ಆದರೆ ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಗವಿಶ್ರೀಗಳು ಮಾತ್ರ ವಿಭಿನ್ನ. ಸದಾ ಕಾಯಕಯೋಗಿ, ಜನಸಾಮಾನ್ಯರ ಜೊತೆ ಸಾಮಾನ್ಯ ವ್ಯಕ್ತಿಯಂತೆ ಬೆರೆಯುವ ಅವರ ಸ್ವಭಾವವೇ ಎಲ್ಲರಿಗೂ ಮಾದರಿ. ಯಾವುದೇ‌ ಕೆಲಸವಿದ್ದರೂ ಹೇಳುವುದಕ್ಕಿಂತ ಮಾಡುವುದು ಉತ್ತಮ ಎಂಬ ನಿಲುವಿನವರು. ಕಸ ಹೊಡೆಯುವುದು, ಲಟ್ಟಣಿಗೆಯಲ್ಲಿ ಚಪಾತಿ ಲಟ್ಟಿಸುವುದನ್ನು, ತೆಪ್ಪ ನಡೆಸುವುದನ್ನು ಈಗಾಗಲೇ ಕಂಡಿದ್ದೇವೆ.

ಈಗ ಜಾತ್ರೆಯ ನಿಮಿತ್ತ ಶ್ರೀಮಠದ ಅನ್ನದಾಸೋಹಕ್ಕೆ‌ ಭಕ್ತರು ನೀಡಿದ ಅಕ್ಕಿ‌ಮೂಟೆಗಳನ್ನು ಹೊತ್ತು ಭಕ್ತರ ಸೇವೆ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಅನ್ನದಾಸೋಹಕ್ಕಾಗಿ ವಾಹನದಲ್ಲಿ ಬಂದ ಅಕ್ಕಿ ಮೂಟೆಗಳನ್ನು ಇಳಿಸಿಕೊಂಡು ಕೂಲಿ ಕೆಲಸಗಾರರಂತೆ ಹೊತ್ತು ಒಂದೆಡೆ ಸಾಗಿಸುವ ಮೂಲಕ ಇತರರಿಗೆ ಶ್ರೀಗಳು ಪ್ರೇರಣೆಯಾಗಿದ್ದಾರೆ.

ಬೈಕ್’ಗೆ ಕಾರು ಡಿಕ್ಕಿ; ಗುತ್ತಿಗೆದಾರ ಸೇರಿ ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ:

ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಗುತ್ತಿಗೆದಾರನೊಬ್ಬ ಸ್ಥಳದಲ್ಲೇ ಮೃತಪಟ್ಟು, ಗಂಭೀರವಾಗಿ ಗಾಯಗೊಂಡಿದ್ದ ಜೆಸಿಬಿ ಆಪರೇಟರ್ ಆಸ್ಪತ್ರೆಯಲ್ಲಿ ಮೃತಪಟ್ಟ ಗದಗ ತಾಲ್ಲೂಕಿನ ಹರ್ಲಾಪುರ ಕ್ರಾಸ್ ಬಳಿ ನಡೆದಿದೆ.

ಘಟನೆಯಲ್ಲಿ ಗದಗ ತಾಲ್ಲೂಕಿನ ಶ್ಯಾಗೋಟಿ ಗ್ರಾಮದ ಗುತ್ತಿಗೆದಾರ ಯಲ್ಲಪ್ಪಗೌಡ ಬಸನಗೌಡ ವೆಂಕನಗೌಡ (50) ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌. ಜೆಸಿಬಿ ಆಪರೇಟರ್ ಲೋಕೇಶ್ ಗುಡಿಗೇರಿ (35) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರಸಭೆ ಗದ್ದುಗೇರಲು ಕಾಂಗ್ರೆಸ್ ಹಠ?: ಕೈ ನಾಯಕರ ಆಟಕ್ಕೆ ಬೆಚ್ಚಿಬಿದ್ದ ಬಿಜೆಪಿ!

*ನಾಲ್ವರ ವಿಳಾಸ ವರ್ಗಾವಣೆಗೆ ಅರ್ಜಿ ಸಲ್ಲಿಕೆ

ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ, ಚಿತ್ರದುರ್ಗ ಮೂಲದ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ ಅವರ ವಾಸಸ್ಥಳ ಬದಲಾವಣೆಗೆ ಕಾಂಗ್ರೆಸ್ ಮಹಾಪ್ಲ್ಯಾನ್

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕೇವಲ ಒಂದೇ ಒಂದು ಸದಸ್ಯ ಸ್ಥಾನದ ಅಂತರದಲ್ಲಿರುವ ಬಿಜೆಪಿ, ಕಾಂಗ್ರೆಸ್ ನಡುವಿನ ಬಿಗ್ ಫೈಟ್‌ಗೆ ಮೂರೇ ದಿನ ಬಾಕಿ ಉಳಿದಿದೆ. ಈ ಬೆನ್ನಲ್ಲೇ ನಗರಸಭೆಯ ಸಾಂಪ್ರದಾಯಿಕ ಆಡಳಿತ ಚುಕ್ಕಾಣಿ ಹಿಡಿಯುವದಕ್ಕಾಗಿ ಕಾಂಗ್ರೆಸ್ ವಾಮಮಾರ್ಗ ಹಿಡಿದಿದೆ. ಬಿಜೆಪಿಗೆ ಗದುಗಿನ ಗದ್ದುಗೆ ಬಿಟ್ಟು ಕೊಡಬಾರದೆಂಬ ಹಠ ತೊಟ್ಟಿದೆ.

ನಗರಸಭೆ 35 ಸದಸ್ಯ ಸ್ಥಾನಗಳನ್ನು ಹೊಂದಿದ್ದು, ಅಧಿಕಾರಕ್ಕೇರಲು 18 ಸಂಖ್ಯಾಬಲಬೇಕು. ಫಲಿತಾಂಶದ ದಿನವೇ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಮಲ 18 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 15 ಸ್ಥಾನ ಜಯಿಸಿದೆ. ಇನ್ನು ಎರಡು ಸ್ಥಾನಗಳು ಪಕ್ಷೇತರ ಪಾಲಾಗಿದ್ದು, ಗೆದ್ದ ಇಬ್ಬರೂ ಪಕ್ಷೇತರ ಸದಸ್ಯರು ಕಾಂಗ್ರೆಸ್ ಬಂಡಾಯ ಸದಸ್ಯರು ಅನ್ನೋದು ವಿಶೇಷ. ಅದರಲ್ಲಿ 17ನೇ ವಾರ್ಡಿನ ಸದಸ್ಯೆ ಆಸ್ಮಾರೇಶ್ಮಿ ಅವರು ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಹೀಗೆ ಒಂದೊಂದಾಗಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್ ಗದಗ ರಾಜಕೀಯ ಇತಿಹಾಸಕ್ಕೆ ಹೊಸ ಮುನ್ನುಡಿ ಬರೆಯಲು ಸಜ್ಜಾಗಿದೆ. ಸದ್ದಿಲ್ಲದೇ ಇದಕ್ಕೆ ಬೇಕಾದ ಎಲ್ಲ ರೀತಿಯ ಪೂರ್ವ ತಯಾರಿ ನಡೆಸಿದೆ.

ಹೌದು, ಪಕ್ಷದ ಹಲವು ವಿಧಾನ ಪರಿಷತ್, ರಾಜ್ಯಸಭಾ ಸದಸ್ಯರ ವಿಳಾಸ (ರೆಸಿಡೆನ್ಶಿಯಲ್) ಬದಲಾವಣೆಗೆ ಕೈ ಹಾಕಿದೆ. ನಗರಸಭೆಯಲ್ಲಿ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ರಾಜ್ಯದ ವಿವಿಧ ಜಿಲ್ಲೆಯ ನಾಲ್ವರು ಕಾಂಗ್ರೆಸ್ಸಿಗರನ್ನು ಗದಗಗೆ ಕರೆ ತರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಿರುವ ಜಿಲ್ಲಾ ಕಾಂಗ್ರೆಸ್ ನಾಯಕರು, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ, ಚಿತ್ರದುರ್ಗ ಮೂಲದ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ ಅವರ ವಾಸಸ್ಥಳ ಬದಲಾವಣೆಗೆ ಮಹಾಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಮುಗಳ್ನಗು ಬೀರುತ್ತಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್‌ ಅವರು ಕಳಸಾಪುರ ರಸ್ತೆ, ಮೋಹನ್ ಕುಮಾರ ಕೊಂಡಜ್ಜಿ 28ನೇ ವಾರ್ಡಿನ ಪಂಚಾಕ್ಷರಿ ನಗರ, ಪ್ರಕಾಶ ರಾಥೋಡ್ ಬೆಟಗೇರಿಯ ಅನುರಾಗ ಹೆಲ್ತ್ ಕ್ಯಾಂಪ್ ಹಾಗೂ
ಡಾ.ಎಲ್.ಹನುಮಂತಯ್ಯ 27ನೇ ವಾರ್ಡಿನ ಸಂಭಾಪುರ ರಸ್ತೆಯ ನಿವಾಸಿಗಳನ್ನಾಗಿ ಈ ನಾಲ್ವರ ವಿಳಾಸವನ್ನು ವರ್ಗಾಯಿಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಈ‌ ನಾಲ್ವರ ವಿಳಾಸ‌ ವರ್ಗಾಯಿಸಿಕೊಂಡಿದ್ದೆ ಆದಲ್ಲಿ, ಕಾಂಗ್ರೆಸ್ 22 ಸಂಖ್ಯಾಬಲದೊಂದಿಗೆ ನಗರಸಭೆ ಗದ್ದುಗೆ ಏರುವುದು ನಿಶ್ಚಿತ.

ಸಂಕನೂರ ಹಾದಿ ಹಿಡಿದ ಕಾಂಗ್ರೆಸ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಅವರು ಇತ್ತೀಚೆಗಷ್ಟೇ ಗದಗದಿಂದ ಧಾರವಾಡಕ್ಕೆ ವಿಳಾಸ ವರ್ಗಾಯಿಸಿಕೊಂಡಿದ್ದರು. ಇದೀಗ ಗದಗ ಬಿಜೆಪಿಗೆ ನಗರಸಭೆಯಲ್ಲಿ ತುಸು ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಪುನಃ ವಿಳಾಸ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ‌. ಇದರಿಂದ ಸಂಸದ, ವಿಧಾನ ಪರಿಷತ್ ಸದಸ್ಯರನ್ನೊಳಗೊಂಡತೆ ಬಿಜೆಪಿ 20 ಸಂಖ್ಯಾಬಲ ಹೊಂದುವ ಸಾಧ್ಯತೆ ಇದೆ.

ಆದರೆ, ಎಸ್.ವ್ಹಿ.ಸಂಕನೂರ ಅವರು ವಿಳಾಸ ವರ್ಗಾಯಿಸಿಕೊಂಡಿರುವುದರಿಂದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದರು. ಇದೀಗ ಪುನಃ ಪಡೆದುಕೊಳ್ಳಲು ಹಾತೊರೆಯುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ಸದ್ಯ 19 ಸಂಖ್ಯಾಬಲಕ್ಕೆ ಸಂತೃಪ್ತಿ ಪಟ್ಟಿದೆ. ಆದರೆ, ಸೋಲುಂಡಿರುವ ಕಾಂಗ್ರೆಸ್ ತನ್ನ ಸಂಖ್ಯೆ ಹೆಚ್ಚಿಸುತ್ತಿದೆ.

ಬಿಜೆಪಿಗಿಲ್ಲ ಅಧಿಕಾರದ ಆಸಕ್ತಿ?

ಕಾಂಗ್ರೆಸ್ ಕಳೆದ ಹಲವು ದಿನಗಳಿಂದ‌ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂಬ ಕಾರಣಕ್ಕೆ ಇನ್ನಿಲ್ಲದ ಕಸರತ್ತು‌ ನಡೆಸುತ್ತಿದೆ. ತನ್ನವರಲ್ಲದ ಸದಸ್ಯರ‌ ಮನವೊಲಿಸಲು ಪ್ರಯತ್ನಿಸುತ್ತಿದೆ. ಇದಿಷ್ಟು ಸಾಲದು ಅಂತಾ ರಾಜ್ಯ ನಾಯಕರ ವಿಳಾಸವನ್ನೇ ವರ್ಗಾಯಿಸಿಕೊಳ್ಳಲು ಹೊರಟಿದೆ. ಇಷ್ಟೆಲ್ಲಾ ತನ್ನ ಕಣ್ಮುಂದೆ ನಡೆಯುತ್ತಿದ್ದರೂ ಬಿಜೆಪಿ ನಾಯಕರು ಮಾತ್ರ ಮೂಕ ಪ್ರೇಕ್ಷಕರಂತೆ ಕಾಂಗ್ರೆಸ್ ನ ರಾಜಕೀಯ ‌ನಾಟಕ ವೀಕ್ಷಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ನಾಯಕರಿಗಿದ್ದ ನಗರಸಭೆ ಅಧಿಕಾರಕ್ಕೇರುವ ಉತ್ಸಾಹ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಷ್ಟೇನೂ ಕಾಣಿಸುತ್ತಿಲ್ಲ. ಇದಕ್ಕೆ ಕಾರಣವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸದ್ಯ 30 ತಿಂಗಳವರೆಗೆ ನಗರಸಭೆ ಅಧ್ಯಕ್ಷ ಪರಿಶಿಷ್ಟ ಜಾತಿಗೆ ಮೀಸಲಿದೆ. ಎರಡೂವರೆ ವರ್ಷದ ಬಳಿಕ ಮೀಸಲಾತಿ ಬದಲಾಗಲಿದೆ. ಹೀಗಾಗಿ ಆಯ್ಕೆಗೊಂಡಿರುವ ಕೆಲ ಬಿಜೆಪಿ ಸದಸ್ಯರು ಹಾಗೂ ಮುಖಂಡರಿಗೆ ಎಸ್ಸಿ ಸಮುದಾಯದವರನ್ನು ಅಧ್ಯಕ್ಷ ಪಟ್ಟದಲ್ಲಿ ಕೂರಿಸಲು ಎಳ್ಳಷ್ಟು ಇಷ್ಟವಿಲ್ಲ. ಅದಕ್ಕಾಗಿಯೇ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕೆಲ ಬಿಜೆಪಿ ನಾಯಕರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಿರುವ ಮೀಸಲಾತಿ ಬದಲಾಯಿಸುವಂತೆ ಪಕ್ಷದ ಹಲವು ನಾಯಕರಿಗೆ ಮನವಿ ಮಾಡಿಕೊಂಡಿದ್ದರು.

ಅಲ್ಲದೇ ಅನಿಲ್ ಮೆಣಸಿನಕಾಯಿ ಬೆಂಬಲಿಗ ಮಹೇಶ್ ದಾಸರ ಅವರ ಪತ್ನಿ ಉಷಾ ದಾಸರ ಅಧ್ಯಕ್ಷರಾಗುವುದನ್ನು ಕೈತಪಿಸುವ ಸಲುವಾಗಿಯೇ ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಐವರು ಜ.14ರಂದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಂತೆ ಯಾರು, ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕೆಂದರೆ ಕನಿಷ್ಠ 6 ತಿಂಗಳಾದರೂ ವಾಸವಾಗಿರಬೇಕು.

ಕಿಶನ್ ಕಲಾಲ್, ತಹಸೀಲ್ದಾರ್. ಗದಗ

ಅರ್ಜಿ ನಮೂನೆಗಳು ಇನ್ನೂ ವಿಲೇವಾರಿ ಆಗಿಲ್ಲ. ಚುನಾವಣಾ ಆಯೋಗದ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಅರ್ಹವಾಗುತ್ತದೆಯೋ? ಅನರ್ಹಗೊಳ್ಳುತ್ತದೆಯೋ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು. ಇಲ್ಲಿಯವರೆಗೂ ನಮ್ಮ ಕಚೇರಿಗೆ ಯಾವುದೇ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಒಂದು ವೇಳೆ ಟಪಾಲಿನಲ್ಲಿ ಕೊಟ್ಟಿದ್ದಾರೋ ಎಂಬ ಬಗ್ಗೆ ನೋಡುತ್ತೇನೆ.

ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ

ನರಗುಂದ ಕೊಲೆ ಪ್ರಕರಣ; ನೊಂದವರಿಗೆ ಧೈರ್ಯ ತುಂಬಿದ ಎಸ್ಪಿ ಶಿವಪ್ರಕಾಶ್ ದೇವರಾಜು

ವಿಜಯಸಾಕ್ಷಿ ಸುದ್ದಿ, ಗದಗ:

ನರಗುಂದದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು, ನೊಂದವರಿಗೆ ಧೈರ್ಯ ತುಂಬಿ ಆಡಿದ ಮಾತುಗಳು ಶಾಂತಿ ಸ್ಥಾಪನೆಗೆ ಕಾರಣವಾಗುತ್ತಿವೆ.

ಸೋಮವಾರ ರಾತ್ರಿ ನಡೆದ ಘಟನೆಯಿಂದ ನರಗುಂದ ಪಟ್ಟಣದ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ಮಡುಗಟ್ಟಿತ್ತು. ಪ್ರತಿಕಾರದ ಮಾತುಗಳೂ ಪ್ರತಿಧ್ವನಿಸಿದ್ದವು. ಆದರೆ ಎಸ್ಪಿ ಶಿವಪ್ರಕಾಶ್ ಅವರು, ನೊಂದವರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ವಾಗ್ದಾನ ಮಾಡಿರುವುದರಿಂದ ಪರಿಸ್ಥಿತಿ ತಿಳಿಗೊಳ್ಳುವಂತಾಗಿದೆ. ಅಮಾಯಕ ಯುವಕನ ಕೊಲೆ ನಂತರ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಎಸ್ಪಿ ಶಿವಪ್ರಕಾಶ್ ಅವರು ಮಾತನಾಡಿದ್ದು ಹೀಗೆ…

‘ಸೋಮವಾರ ಸಂಜೆ ಘಟನೆ ನಡೆದ ಬಳಿಕ ನನಗೆ ಫೋನ್ ಬಂತು. ಅವಾಗಿನಿಂದ ಈವರೆಗೆ ನಿದ್ದೆ ಮಾಡಿಲ್ಲ. ಕೊಲೆಯಾಗಿರುವ ಹುಡುಗನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಹೀಗಾಗಿ ಬಹಳಷ್ಟು ಬೇಜಾರಾಯ್ತು. ನೀವು ನಮ್ಮ ಮೇಲೆ ಹೀಗೆಲ್ಲಾ ಮಾಡಿದ್ದಕ್ಕೆ ತಪ್ಪೆನ್ನುವುದಿಲ್ಲ. ಏಕೆಂದರೆ ನಿಮಗೆ ನೋವಿದೆ. ಅದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

‘ನಾನು ನಿಮಗೆ ಎರಡು ಭರವಸೆಗಳನ್ನು ಕೊಡ್ತೀನಿ. ನಿಯತ್ತಿನಿಂದ ಹೇಳ್ತೀನಿ. ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಲಾಗುವುದು. ಘಟನೆ ನಡೆದ ದಿನ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಘಟನೆಗೆ ಪ್ರಚೋದಿಸಿದವರನ್ನು, ಕಾರಣರಾದವರನ್ನು ಬಂಧಿಸುತ್ತೇವೆ. ಒಂದು ವೇಳೆ ಆರೋಪಿಗಳನ್ನು ಬಂಧಿಸದಿದ್ದರೆ ನಾನು ನಿಮ್ಮ ಮುಂದೆ ಹೀಗೆ ಬಂದು ಮಾತನಾಡುವುದಿಲ್ಲ’ ಎಂದು ಹೇಳುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಎರಡು ಗುಂಪಗಳ ಮಧ್ಯೆ ನಡೆದ ಗಲಾಟೆಯಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 19 ವರ್ಷದ ಯುವಕ ಶಮೀರ್ ಶಹಪೂರ್ ಎಂಬಾತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿವೆ.

ಸೋಮವಾರ ನರಗುಂದ ಪುರಸಭೆಯ ಬಳಿ ಇಬ್ಬರು ಯುವಕರು ಸೇರಿ ಶಮೀರ್ ಹಾಗೂ ಅವನ ಸ್ನೇಹಿತನಿಗೆ ಅಟ್ಟಾಡಿಸಿಕೊಂಡು ಹೊಡೆದು ಚಾಕು ಇರಿದಿದ್ದರು. ಇದರ ಪರಿಣಾಮ ಗಂಭೀರ ಗಾಯಗೊಂಡಿದ್ದ ಶಮೀರ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಮೂರಾರ್ಜಿ ವಸತಿ ಶಾಲೆ, ಶರಣ ಬಸವೇಶ್ವರ ಪ್ರೌಢಶಾಲೆಯಲ್ಲಿ ಕೊರೊನಾ ಮಹಾಸ್ಫೋಟ: 80 ಮಕ್ಕಳು ಸೇರಿ 289 ಜನರಿಗೆ ಕೋವಿಡ್ ಸೋಂಕು

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದ ಒಂದು ವಾರದಿಂದ ನೂರರ ಗಡಿ ದಾಟಿದ್ದ ಕೊರೊನಾ ಸೋಂಕು ಮುನ್ನೂರರ ಗಡಿಯತ್ತ ದಾಪುಗಾಲು ಇಡುತ್ತಿದೆ. ಗುರುವಾರ ಒಂದೇ ದಿನ 80 ಮಕ್ಕಳು ಸೇರಿದಂತೆ 289 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 955ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆಯೂ ವರದಿಯಾಗುತ್ತಿದೆ.

ಜಿಮ್ಸ್‌ನ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳಿಗೆ, ಬೆಟಗೇರಿಯ ಶರಣ ಬಸವೇಶ್ವರ ಪ್ರೌಢಶಾಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಗದಗ ತಾಲ್ಲೂಕು ಮಲ್ಲಸಮುದ್ರ ಗ್ರಾಮದ ಮೂರಾರ್ಜಿ ವಸತಿ ಶಾಲೆಯ 40ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಅದರಂತೆ, ಗದಗ ತಾಲ್ಲೂಕಿನ ಹುಲಕೋಟಿಯ ಶ್ರೀರಾಜೇಶ್ವರಿ ವಿದ್ಯಾನಿಕೇತನದ ಮೂವರು ವಿದ್ಯಾರ್ಥಿಗಳಲ್ಲಿ, ಚಿಂಚಲಿ ಗ್ರಾಮದ ತೇರಿನಗಡ್ಡಿ ಹತ್ತಿರದ ಓರ್ವ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಗುರುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,12,493 ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 6,85,246 ನಕಾರಾತ್ಮಕವಾಗಿವೆ. ಗುರುವಾರದ 289 ಪ್ರಕರಣ ಸೇರಿ ಒಟ್ಟು 27,247 ಜನರಿಗೆ ಸೋಂಕು ದೃಢಪಟ್ಟಿದೆ. ಇಂದಿನ ಒಂದು ಸೇರಿ ಇದುವರೆಗೂ ಸೋಂಕಿನಿಂದ 321 ಜನ ಮೃತಪಟ್ಟಿದ್ದಾರೆ. ಇಂದಿನ 73 ಜನ ಸೇರಿ ಒಟ್ಟು 25,971 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 955 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿರುವ 955 ಸಕ್ರಿಯ ಪ್ರಕರಣಗಳ ಪೈಕಿ ಗದಗ 697, ಮುಂಡರಗಿ 101, ನರಗುಂದ 10, ರೋಣ 94, ಶಿರಹಟ್ಟಿ ತಾಲ್ಲೂಕಿನಲ್ಲಿ 50 ಹಾಗೂ ಹೊರ ಜಿಲ್ಲೆ ಅಥವಾ ರಾಜ್ಯದ 3 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಡ್ಜ್‌ನಲ್ಲಿ ಇಸ್ಪೀಟಾಟ; ವಿಡಿಯೋ ವೈರಲ್

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಎಪಿಎಂಸಿ ಸದಸ್ಯರೊಬ್ಬರು ಲಾಡ್ಜ್ ವೊಂದರಲ್ಲಿ ನಿತ್ಯ ಇಸ್ಪೀಟು ಆಟ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.

ಕಾರಟಗಿ ಪಟ್ಟಣದ ವರದಾ ಲಾಡ್ಜ್‌ನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ಜೂಜಾಟ ನಡೆಯುತ್ತಿದ್ದು, ಕಾರಟಗಿಯ ವಿಶೇಷ ಎಪಿಎಂಸಿಯ ಸದಸ್ಯ ನಾಗರಾಜ್ ಅರಳಿ ಸೇರಿದಂತೆ ಮತ್ತಿತರರ ಗುಂಪು ಈ ಜೂಜಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಸ್ವತಃ ನಾಗರಾಜ್ ಅರಳಿ ಸೇರಿದಂತೆ ಮತ್ತಿತರರು ಕಾನೂನಿನ ಕಣ್ಣು ತಪ್ಪಿಸಿ ಜೂಜಾಟ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಇಸ್ಪೀಟು ಆಟವಾಡುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಓಮಿಕ್ರಾನ್ ಸೋಂಕು ಪತ್ತೆ; ವರದಿ ಬರುವುದಕ್ಕಿಂತ ಮುನ್ನವೇ ಬಿಡುಗಡೆ ಹೊಂದಿದ ಸೋಂಕಿತೆ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ.‌ ಈ ಮಧ್ಯೆ ಮುಂಬೈನಿಂದ ಬಂದಿದ್ದ ಓರ್ವರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಪಾಸಿಟಿವ್ ವರದಿ ಬರುವುದಕ್ಕೂ ಮುನ್ನವೇ ಸೋಂಕಿತ ಯುವತಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಹೌದು, ಮುಂಬೈನಿಂದ ರೈಲು ಮೂಲಕ ಗದಗ ನಗರಕ್ಕೆ ಬಂದಿದ್ದ ಕೊಪ್ಪಳ‌ ಮೂಲದ ಓರ್ವ ಯುವತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಮುಂಬೈನಿಂದ ‌ಬಂದ 15 ಜನರಲ್ಲಿ ಯುವತಿಗೆ ಓಮಿಕ್ರಾನ್ ಪತ್ತೆಯಾಗಿದೆ. ಗದಗ ರೈಲು ನಿಲ್ದಾಣದಲ್ಲಿ‌ ಕೊರೊನಾ ಪರೀಕ್ಷೆ ಮಾಡಿದಾಗ ಡಿ.30 ರಂದು ಯುವತಿಗೆ ಸೋಂಕು ದೃಢಪಟ್ಟಿದ್ದು, ಕೂಡಲೇ ಅವರನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೊನಾ ಸೋಂಕು ಪತ್ತೆಯಾದ ಯುವತಿಯ ಮಾದರಿಯನ್ನು ಓಮಿಕ್ರಾನ್ ಶಂಕೆ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆಗಾಗಿ ಜನೇವರಿ ಮೊದಲ ವಾರದಲ್ಲೇ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿತ್ತು. ಆದರೆ, ಯುವತಿಗೆ ಓಮಿಕ್ರಾನ್ ಸೋಂಕು ಇರುವುದು ಜ.19 ರಂದು ಖಚಿತಪಟ್ಟಿದ್ದು, ಓಮಿಕ್ರಾನ್ ಸೋಂಕು ದೃಢಪಡುವುದಕ್ಕಿಂತ‌ ಮುನ್ನವೇ ಅಂದರೆ, ಜ.8 ರಂದೇ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಇದನ್ನೂ ಓದಿ ಬಿಜೆಪಿ ಮುಖಂಡ ಎಸಿಬಿ ಖೆಡ್ಡಾಗೆ ಬಿದ್ದಿದ್ದು ಹೇಗೆ?; ಡಿಎಚ್‌ಒ ಕಚೇರಿಯೇ ಮಾಸ್ಟರ್ ಹೆಡ್!

ಜನರಲ್ಲಿ ಆತಂಕ:

ಮುಂಬೈನಿಂದ ರೈಲು ಮೂಲಕ ಬಂದ ಯುವತಿ ಅಂಗಡಿಗಳಲ್ಲಿ ನೀರಿನ ಬಾಟಲಿ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ಖರೀದಿ‌ ಮಾಡಿದ್ದರು. ರೈಲು ನಿಲ್ದಾಣದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ಮಾಡಿದ ಬಳಕ ಪಾಸಿಟಿವ್ ಕಂಡು ಬಂದಿತ್ತು. ಆಗ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಯುವತಿಯ ಪತ್ತೆಗಾಗಿ ಹರಸಾಹಸ ಪಟ್ಟಿದ್ದರು. ಇನ್ನು ಜಿಲ್ಲೆಯ ಜನರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿಲ್ಲ ಎಂಬುದು ತುಸು ಸಮಾಧಾನ ತರಿಸಿದ್ದು, ಹೊರ ರಾಜ್ಯದ ಮಹಿಳೆಗೆ ಜಿಲ್ಲೆಯಲ್ಲಿಯೇ ಓಮಿಕ್ರಾನ್ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

error: Content is protected !!