Home Blog Page 319

ಕೊಪ್ಪಳ ನಗರದಲ್ಲಿ ಚಿರತೆ ಪ್ರತ್ಯಕ್ಷ?

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊಪ್ಪಳ ನಗರದ ಹೊರವಲಯದಲ್ಲಿ, ನೀರಿನ ಸಂಗ್ರಹಾಗಾರ ಇರುವ ಸಿಂದೋಗಿ ರಸ್ತೆಯ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಕಳೆದ ಎರಡು ತಿಂಗಳಿಂದ ಈ ಭಾಗದ ರೈತರು ಚಿರತೆಯನ್ನು ಗಮನಿಸಿದ್ದಾರೆ. ಕಲ್ಲು ಬಂಡೆಯ ಮೇಲೆ ಅದು ಬಿಸಿಲಿಗೆ ಮೈಯೊಡ್ಡಿ ಕೂತಿದ್ದನ್ನು ಕಂಡು ಗಾಬರಿಯಾದ ರೈತರು, ಕೊಪ್ಪಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಆದರೆ, ಉಡಾಫೆ ವರ್ತನೆ ತೋರಿದ ಅರಣ್ಯ ಇಲಾಖೆ ಸಿಬ್ಬಂದಿ, ನಗರ ಪ್ರದೇಶದಲ್ಲಿ ಯಾವುದೇ ಚಿರತೆ ಇಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಸ್ಥಳೀಯ ಪ್ರದೇಶದ ರೈತರು ಚಿರತೆ ಬಂಡೆಗಲ್ಲಿನಲ್ಲಿ ಕೂತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

0

ವಿಜಯಸಾಕ್ಷಿ ಸುದ್ದಿ, ಹಾವೇರಿ:

ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದ ಬಳಿ ಎರಡು ಕಾರು ಮತ್ತು ಮೆಕ್ಕೆಜೋಳ ತುಂಬಿದ ಲಾರಿ ಮಧ್ಯೆ ಶನಿವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದು, ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮತ್ತಿಕೋಟೆ ಗ್ರಾಮದ ಶಂಕರಗೌಡ ಬಸನಗೌಡ ನಾಗಪ್ಪಗೌಡರ್ (35), ಕರ್ನಲ್ಲಿ ಗ್ರಾಮದ ಪುನೀತ್ ಹರಮುಚಡಿ (12), ಮುಚಡಿ ಗ್ರಾಮದ ಶಾಂತಮ್ಮ ಶಿವಾನಂದಪ್ಪ ಹೊಟ್ಟಿಗೌಡರ(32) ಹಾಗೂ ರಘು ಶಿವಾನಂದಪ್ಪ ಹೊಟ್ಟಿಗೌಡರ (14) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.

ಇನ್ನು 26 ವರ್ಷದ ಪವಿತ್ರಾ, 16 ವರ್ಷದ ಪೂಜಾ ಹರಮುಚಡಿ, 7 ವರ್ಷದ ಪ್ರೀತಮ್, 50 ವರ್ಷದ ಕಲಾವತಿ ನಾಗಪ್ಪಗೌಡರ, 4 ವರ್ಷದ ಪೃಥ್ವಿ, 25 ವರ್ಷದ ಪ್ರೇಮಾ, 30 ವರ್ಷದ ಜ್ಯೋತಿ ಹಾಗೂ ತಿಪ್ಪೇಶ ರಾಗಿಕೊಪ್ಪ ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದರ ಹಿಂದೆ ಒಂದು ಚಲಿಸುತ್ತಿದ್ದ ಎರಡೂ ಕಾರುಗಳಿಗೆ ಮೆಕ್ಕೆಜೋಳ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರುಗಳಿಗೆ ಡಿಕ್ಕಿ ಹೊಡೆದಿರುವುದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ರಟ್ಟೀಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಕ್ರಾಂತಿ ಪುಣ್ಯಸ್ನಾನಕ್ಕೆ ಹೋದ ಬಾಲಕರಿಬ್ಬರು ತುಂಗಭದ್ರಾ ನದಿಯಲ್ಲಿ ಸಾವು; ಮುಗಿಲು‌ ಮುಟ್ಟಿದ ಹೆತ್ತವರ ಆಕ್ರಂದನ

  • ಹಬ್ಬದ ಸಂಭ್ರಮಕ್ಕೆ ಸೂತಕದ ಛಾಯೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

 ಮಕರ ಸಂಕ್ರಾಂತಿಯ ನಿಮಿತ್ತ ತಾಲೂಕಿನ ಹೊಳೆ ಇಟಗಿ ಗ್ರಾಮದ ಪಕ್ಕದಲ್ಲಿರುವ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.

ಶನಿವಾರ ಮಧ್ಯಾಹ್ನ ಹೊಳೆಇಟಗಿ ಗ್ರಾಮಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯಲ್ಲಿ ಸಂಕ್ರಮಣ ನಿಮಿತ್ತ ಸ್ನಾನಕ್ಕಾಗಿ ಹೋದಾಗ ನದಿಯಲ್ಲಿರುವ ಆಳದ ಗುಂಡಿಯಲ್ಲಿ ಮುಳಗಿ ಸೂರಣಗಿ ಗ್ರಾಮದ ಪ್ರಜ್ವಲ್ ಬಸವರಾಜ ಮಾಸ್ತಮ್ಮನವರ (14) ಹಾಗೂ ಹೊಳೆ ಇಟಗಿ ಗ್ರಾಮದ ನಾಗರಾಜ ಕರಬಸಪ್ಪ ಬುರಡಿ (13) ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದು ಸ್ಥಳೀಯರು ನದಿ ಪಾತ್ರಕ್ಕೆ ತೆರಳಿ ಈಜುಗಾರರ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ನವೀನ್ ಕುಮಾರ್ ಜಕ್ಕಲಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ
ಮೃತ ಬಾಲಕರ ಪಾಲಕರು, ಸಂಬಂಧಿಕರು ಸ್ಥಳದಲ್ಲಿ ಜಮಾಯಿಸಿ, ಮೃತ ದೇಹಗಳನ್ನು ನೋಡಿ ಮಾಡಿದ ಆಕ್ರಂದನ ಕರುಳು ಹಿಂಡುವಂತಿತ್ತು.

ಶನಿವಾರವೂ ಮುಂದುವರೆದ ಸೋಂಕಿನ ಸ್ಫೋಟ; ರೋಣದ 30 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ‌ 134 ಜನರಿಗೆ ಪಾಸಿಟಿವ್

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದೊಂದು ವಾರದಿಂದ ಶಾಲಾ ಕಾಲೇಜು ಮಕ್ಕಳಲ್ಲೂ ಹೆಚ್ಚೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಕೋವಿಡ್ ಕಂಟಕವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿತ್ತು. ಜ.14ರಂದು ಕಾಣಿಸಿಕೊಂಡ 110 ಸೋಂಕಿತರ ಪೈಕಿ 18 ವರ್ಷದೊಳಗಿನ 21 ಜನ ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ ಈ ವಯೋಮಾನದ 41 ಸಕ್ರಿಯ ಪ್ರಕರಣಗಳಿವೆ.

30 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು

ಜಿಲ್ಲೆಯ ರೋಣದ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಕೊರೊನಾ ಸ್ಫೋಟಗೊಂಡಿದೆ. ಒಂದೇ ದಿನ ರಾಜೀವ್ ಗಾಂಧಿ ಆಯುರ್ವೇದ ಮೆಡಿಕಲ್ ಕಾಲೇಜಿನ ಮೂವರು ವೈದ್ಯ ಉಪನ್ಯಾಸಕರು, 30 ವಿದ್ಯಾರ್ಥಿಗಳು ಸೇರಿ 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜ.13ರಂದು ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿ 267 ಜನರ ಮಾದರಿ ಸಂಗ್ರಹಿಸಿತ್ತು. ರಾಜೀವ್‌ಗಾಂಧಿ ಆಯುರ್ವೇದಿಕ ಆಸ್ಪತ್ರೆಯಲ್ಲಿ 27ಜನ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 6 ಜನರನ್ನು ಹೋಂ ಐಸೋಲೇಶ್‌ನಲ್ಲಿರಸಲಾಗಿದ್ದು, ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಡಿಎಚ್‌ಒ ಡಾ.ಜಗದೀಶ್ ನುಚ್ಚಿನ್ ತಿಳಿಸಿದ್ದಾರೆ.

ಶನಿವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,04,116 ಮಾದರಿ ಸಂಗ್ರಹಿಸಿದ್ದು, 6,77,596 ನಕಾರಾತ್ಮಕವಾಗಿವೆ. ಶನಿವಾರದ 134 ಪ್ರಕರಣ ಸೇರಿ ಒಟ್ಟು 26,520 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 14 ಸೇರಿ ಒಟ್ಟು 25,798 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 403 ಸಕ್ರಿಯ ಪ್ರಕರಣಗಳಿವೆ.

ಒಟ್ಟು 403 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 262, ಮುಂಡರಗಿ 46, ನರಗುಂದ 4, ರೋಣ 53 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 37 ಹಾಗೂ ಹೊರ ಜಿಲ್ಲೆಯ 1ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ನಗರಸಭೆ ಚುನಾವಣೆಯ ದ್ವೇಷ: ರಿಯಲ್ ಎಸ್ಟೇಟ್ ಉದ್ಯಮಿ ಥಳಿಸಿದ ಪಕ್ಷೇತರ ಅಭ್ಯರ್ಥಿ ಸಂಬಂಧಿಕರು!

ವಿಜಯಸಾಕ್ಷಿ ಸುದ್ದಿ, ಗದಗ:

ಚುನಾವಣೆ ಮುಗಿದರೂ ಚುನಾವಣೆಯ ದ್ವೇಷ ಮುಕ್ತಾಯಗೊಳ್ಳುವುದಿಲ್ಲ. ಎಲೆಕ್ಷನ್ ಹಗೆ ಬೂದಿ‌ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೆ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಕಳೆದ ಡಿಸೆಂಬರ್ ನಲ್ಲಿ‌ ನಡೆದ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣ ನೀನೇ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಅವಳಿ ನಗರದ ವಿವೇಕಾನಂದ‌ ನಗರದ ಎರಡನೇ ಕ್ರಾಸ್ ನಲ್ಲಿ ನಡೆದಿದೆ.

ಹಾತಲಗೇರಿ ರಸ್ತೆಯ ಹಮಾಲರ ಕಾಲನಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ತಿಪ್ಪಣ್ಣ ಹನಮಂತಪ್ಪ ಘೋರ್ಪಡೆ ಎಂಬುವವರ ಮೇಲೆ ಅದೇ ಕಾಲನಿಯ ನಿವಾಸಿಗಳಾದ ಶರಣಪ್ಪ ಗೊಳಗೊಳಕಿ ಹಾಗೂ ಪ್ರಭುಕುಮಾರ ಗೊಳಗೊಳಕಿ ಎಂಬ ಇಬ್ಬರು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾಗಿರುವ ತಿಪ್ಪಣ್ಣ ಔಷಧ ತರಲು ಮೆಡಿಕಲ್ ಸ್ಟೋರ್ ಗೆ ಹೋಗಿದ್ದ ವೇಳೆ ಈ ಇಬ್ಬರೂ ಆರೋಪಿಗಳು ಅಡ್ಡಗಟ್ಟಿ ನಗರಸಭೆ ಚುನಾವಣೆಯಲ್ಲಿ ನನ್ನ ತಮ್ಮನ ಹೆಂಡತಿ ಸೋಲಲು ನೀನೇ ಕಾರಣ ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿದ್ದಲ್ಲದೇ, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಪ್ಪಣ್ಣ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಪ್ಪನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಲ್ಲೆ ನಡೆಸಿರುವ ಗೊಳಗೊಳಕಿ ಸಹೋದರರು ಗದಗ-ಬೆಟಗೇರಿ‌ ನಗರಸಭೆಯಲ್ಲಿ ಅವಳಿ‌ ನಗರದ 11ನೇ ವಾರ್ಡಿನ ಹಿಂದುಳಿದ ವರ್ಗ ‘ಎ’ ಮೀಸಲು ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಸಿದ್ದ ಅಶ್ವಿನಿ ಊರ್ಫ ಆಶಾಬಿ ಗೊಳಗೊಳಕಿ ಅವರ ಸಂಬಂಧಿಕರಾಗಿದ್ದಾರೆ.

ಅವಳಿ‌ ನಗರದ 11ನೇ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಕುಂಕುಮಾ ಹದ್ದಣ್ಣವರ, ಜೆಡಿಎಸ್‌ನಿಂದ ಪುಷ್ಪಾ ಪತ್ತಾರ, ಬಿಜೆಪಿಯಿಂದ ಶ್ವೇತಾ ದಂಡಿನ, ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಲಲಿತಾ ಮಾಯಣ್ಣವರ ಸೇರಿ ಐದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯ ಅಭ್ಯರ್ಥಿ ಶ್ವೇತಾ ದಂಡಿನ ಅಭೂತಪೂರ್ವ ಗೆಲುವು ಸಾಧಿಸಿದ್ದರು.

ನರಗುಂದ ಪೊಲೀಸ್ ಉಪವಿಭಾಗಕ್ಕೆ ಹೊಸ ವಾಹನ

0

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ನರಗುಂದ ಪೊಲೀಸ್ ಉಪವಿಭಾಗಕ್ಕೆ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 12 ಲಕ್ಷ ರೂ. ಮೊತ್ತದ ನೂತನ ಮಹೀಂದ್ರಾ ಸ್ಕಾರ್ಪಿಯೋ ವಾಹನವನ್ನು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಪಂ ಸಿಇಒ ಭರತ್ ಕೆ., ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಹರ ಪೊಲೀಸರ ಭರ್ಜರಿ ಭೇಟಿ; ಇಬ್ಬರು ಅಂತಾರಾಜ್ಯ‌ ಮನೆಗಳ್ಳರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಅಂತರ ರಾಜ್ಯ ಮನೆಗಳ್ಳರನ್ನು ಗದಗ‌ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜ.3 ರಂದು ಗದಗ ಬಾಪೂಜಿ‌ ನಗರದ ನಿವಾಸಿ ರೇಖಾ ಸೋಮಪ್ಪ ಬೇಲೇರಿ ಅವರ ಮನೆಯ ಮನೆಯ ಬೀಗ ಮುರಿದು ಟ್ರಝುರಿಯಲ್ಲಿದ್ದ 1.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ 6 ಸಾವಿರ ರೂ. ಬೆಲೆಬಾಳುವ 60 ಗ್ರಾಂ ತೂಕದ ಬೆಳ್ಳಿಯ ಲಕ್ಷ್ಮೀ ಮುಖ ಕದ್ದೋಯ್ದಿದ್ದ ಅಂತರ ರಾಜ್ಯ ಮನಗಳ್ಳರನ್ನು ಕೊನೆಗೂ ಗದಗ ಶಹರ ಪೊಲೀಸರು ಬಂಧಿಸಿದ್ದಾರೆ.

ನೆರೆಯ ಮಹಾರಾಷ್ಟ್ರ ಮೂಲದ ಶಂಕರ ಸಾಹೇಬರಾವ್ ಜಾಧವ ಹಾಗೂ ಶಿವಾ ಚಿಮ್ಮಾಜಿ ಜಾಧವ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.26 ಲಕ್ಷ ರೂ.‌ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೇ, ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ ಕಳ್ಳತನವಾಗಿದ್ದ ಒಟ್ಟು 2,27,500 ರೂ. ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಜಪ್ತಿ‌ ಮಾಡಿದ್ದಾರೆ. ಅದರಂತೆ, ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಒಟ್ಟು 1,03,900 ರೂ. ಮೌಲ್ಯದ 1,940 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಆರೋಪಿತರಿಂದ ಒಟ್ಟು 4,57,400 ರೂ.‌ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಜಪ್ತಿ‌ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ, ಡಿಎಸ್ಪಿ ಶಿವಾನಂದ ಪವಾಡಶೆಟ್ಟರ ಅವರ ನೇತೃತ್ವದಲ್ಲಿ ಪ್ರಕರಣ ಭೇದಿಸಿದ ಗದಗ ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ವ್ಹಿ.ಸಾಲಿಮಠ, ಮಹಿಳಾ ಪಿಎಸ್ಐ ಜಿ.ಟಿ.ಜಕ್ಕಲಿ, ಎಎಸ್ಐ ವೈ.ಬಿ.ಪಾಟೀಲ್, ಸಿಬ್ಬಂದಿಗಳಾದ ವ್ಹಿ.ಎಸ್.ಭಿಕ್ಷಾವತಿಮಠ, ವ್ಹಿ.ಎಸ್.ಶೆಟ್ಟಣ್ಣವರ, ಎಸ್.ಎ.ಗುಡ್ಡಿಮಠ, ಎಸ್.ಎಸ್.ಮಾವಿನಕಾಯಿ, ಕೆ.ಡಿ.ಜಮಾದರ, ಪಿ.ಎಸ್.ಕಲ್ಲೂರ, ಆರ್.ಎನ್.ಬಾಲರಡ್ಡಿ ಅವರನ್ನೊಳಗೊಂಡ ವಿಶೇಷ ತಂಡದ ಕಾರ್ಯಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಶತಕ ದಾಟಿದ ಸೋಂಕು; ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 110 ಜನರಿಗೆ ಕೊರೊನಾ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಶುರುವಾಗಿದೆ. ಶುಕ್ರವಾರ ಒಂದೇ ದಿನ ಹೊಸದಾಗಿ ದಾಖಲೆಯ ಬರೋಬ್ಬರಿ 110 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 110 ಸೋಂಕಿತರ ಪೈಕಿ ಏಳು ಜನ ಶಿಕ್ಷಕರಿಗೆ, ಏಳು ಜನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ.

ವಿದ್ಯಾದಾನ ಸಮಿತಿಯ ಬಾಲಕಿಯರ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ. ಹುಲಕೋಟಿಯ ರಾಜೇಶ್ವರಿ ಶಾಲೆಯ ಮೂವರು, ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಕೆಜಿಬಿವ್ಹಿ ಹಾಸ್ಟೆಲ್‌ನ ನಾಲ್ವರು ಹಾಗೂ ಗದಗನ ದೇವರಾಜು ಅರಸು ವಸತಿ ನಿಲಯದ ಓರ್ವ ವಿದ್ಯಾರ್ಥಿಗೆ ಸೋಂಕು ತಗುಲಿದೆ.

ಶುಕ್ರವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,02,440 ಮಾದರಿ ಸಂಗ್ರಹಿಸಿದ್ದು, 6,76,054 ನಕಾರಾತ್ಮಕವಾಗಿವೆ. ಶುಕ್ರವಾರದ 110 ಪ್ರಕರಣ ಸೇರಿ ಒಟ್ಟು 26,386 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 9 ಜನ ಸೇರಿ ಒಟ್ಟು 25,784 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 283 ಸಕ್ರಿಯ ಪ್ರಕರಣಗಳಿವೆ.

ಒಟ್ಟು 283 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 193, ಮುಂಡರಗಿ 40, ನರಗುಂದ 3, ರೋಣ 18 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 29 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ಆರ್ಭಟ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ಕುಕನೂರಿನಲ್ಲಿರುವ ನವೋದಯ ವಸತಿ ಶಾಲೆಯ‌ 13 ಜನರಲ್ಲಿ ಕೊರೋನಾ ‌ಸೋಂಕು ಪತ್ತೆಯಾಗಿದೆ.

ನವೋದಯ ವಸತಿ ಶಾಲೆಯ ಒಬ್ಬರು ಶಿಕ್ಷಕರು,12 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ವೈದ್ಯರು ಐಸೋಲೇಟ್ ಮಾಡಿದ್ದು ವಸತಿ ಶಾಲೆಯ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಮತ್ತೊಂದು ಪರೀಕ್ಷಾ ವರದಿ ನಿರೀಕ್ಷೆಯಲ್ಲಿರೋ ವೈದ್ಯ ಸಿಬ್ಬಂದಿ ಫಲಿತಾಂಶಕ್ಕಾಗಿ‌ ಕಾಯುತ್ತಿದ್ದಾರೆ.

ಬೆಟಗೇರಿ ಪೊಲೀಸರ ಕಾರ್ಯಾಚರಣೆ; ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಟಗೇರಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಒಟ್ಟು 20,300 ರೂ ಮೌಲ್ಯದ 2300 ಗ್ರಾಂ ಗಾಂಜಾ ಹಾಗೂ 2.50 ಲಕ್ಷ ರೂ. ಬೆಲೆ ಬಾಳುವ ಸಿಪ್ಟ್ ಕಾರು(ಕೆಎ 05 ಎಎಫ್ 6723) ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕೊನಸಾಗರ ಗ್ರಾಮದ ಚಾಲಕ ಪರಸಪ್ಪ ಖೀಗಪ್ಪ ಭಜಂತ್ರಿ ಹಾಗೂ ರೈತ ಹುಸೇನಸಾಬ ಯಮನೂರಸಾಬ ನಾಯ್ಕ್ ಎಂಬುವವರ ವಿರುದ್ಧ ಎನ್ ಡಿಪಿಎಸ್ ಆ್ಯಕ್ಟ್ ನಡಿ ಪ್ರಕರಣ ದಾಖಲಾಗಿದೆ.

ರೋಣದಿಂದ ಹುಬ್ಬಳಿ‌ ಕಡೆಗೆ ಕಾರಿನಲ್ಲಿ ಅನಧಿಕೃತವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ ಬಣಕಾರ ಅವರಿಗೆ ಮಾಹಿತಿ ಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ ಅವರ ನಿರ್ದೇಶನದಂತೆ ಬೆಟಗೇರಿ ಪೊಲೀಸ್ ಠಾಣೆಯ ಸಿಪಿಐ ಸುಬ್ಬಾಪೂರಮಠ ಅವರ ಮಾರ್ಗದರ್ಶನದಂತೆ ದಾಳಿ ನಡೆಸಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಿದ್ದಾರೆ.

ಬೆಟಗೇರಿ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನದ ಹತ್ತಿರ ನಿಂತುಕೊಂಡಿದ್ದ ಪೊಲೀಸರು ರೋಣ ಕಡೆಯಿಂದ ಬರುವ ಎಲ್ಲ ವಾಹನಗಳನ್ನು ತಪಾಸಣೆ‌ ನಡೆಸಿದ್ದಾರೆ. ಈ ವೇಳೆ ಬಿಳಿಯ ಸ್ವಿಫ್ಟ್ ಕಾರೊಂದು ಬಂದಿದ್ದು, ನಿಲ್ಲಿಸಿ ಚಾಲಕನನ್ನು ವಿಚಾರಿಸಿದ್ದಾರೆ. ಗಾಬರಿಗೊಂಡ ಚಾಲಕ ಮಾತನಾಡಲು ತಡವರಿಸಿದ್ದು, ಆಗ ಪೊಲೀಸರು ಕಾರು ಸುತ್ತುವರಿದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಡಿಕ್ಕಿಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಅಡಗಿಸಿಟ್ಟಿದ್ದ
ಒಣಗಿದ ಗಾಂಜಾ ಪತ್ತೆಯಾಗಿದೆ.

ಈ ವೇಳೆ ಪೊಲೀಸರು ಕಾರು ಚಾಲಕ ಪರಸಪ್ಪನನ್ನು
ವಿಚಾರಣೆ ನಡೆಸಿದ್ದು, ‘ಒಂದು ವರ್ಷದ ಹಿಂದೆ ಲಾರಿ ಚಾಲನೆ‌ ಮಾಡುತ್ತಿದ್ದಾಗ ವಿಜಯಪುರ ಹತ್ತಿರದ ಗಾಂಜಾ ಮಾರುತ್ತಿದ್ದವನ ಬಳಿ ತಂದಿದ್ದೇನೆ. ಆದರೆ, ಅವನು ಯಾರು? ಎಲ್ಲಿಯವನು ಅಂತಾ ಗೊತ್ತಿಲ್ಲ. ನಾನು ಹುಬ್ಬಳ್ಳಿಗೆ ಹೆಚ್ಚಿನ ಹಣಕ್ಕಾಗಿ ಗಾಂಜಾ ಮಾರಾಟ‌ಮಾಡಲು ಹೊರಟ್ಟಿದ್ದೇ‌ನೆ’ ಎಂದು ಬಾಯ್ಬಿಟ್ಟಿದ್ದಾನೆ. ಆದರೆ ಇದು ಕಟ್ಟುಕಥೆ ಎನ್ನಲಾಗಿದೆ.

ಗದಗ ತಹಸೀಲ್ದಾರ ಕಿಶನ್ ಕಲಾಲ್, ಕಂದಾಯ ನಿರೀಕ್ಷಕ ರಂಗನಗೌಡ ಶಿವಶಂಕರಗೌಡ ಪಾಟೀಲ್ ಹಾಗೂ ಮದಗಾನೂರ ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್ ಸಣ್ಣಯಲ್ಲಪ್ಪ ಗಾಜಿ ಎಂಬುವವರು ಗಾಂಜಾ ದಾಳಿ ವೇಳೆ ಇದ್ದರು. ಈ ಕುರಿತು ಪ್ರಕರಣ ದಾಖಲಿಸಿರುವ ಬೆಟಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!