Home Blog Page 319

ಸರ್ಕಾರಿ ನೌಕರರನ್ನು ಅಶ್ಲೀಲವಾಗಿ ನಿಂದಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ!

ವಿಜಯಸಾಕ್ಷಿ ಸುದ್ದಿ, ಕೋಲಾರ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರಿ ನೌಕರರನ್ನು ಅಶ್ಲೀಲ ಪದಬಳಕೆ ಮಾಡಿ ನಿಂದಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಸಲುವಾಗಿ ಚರ್ಚಿಸಲು ತಹಶೀಲ್ದಾರ್ ಶ್ರೀನಿವಾಸ್ ಸಮ್ಮುಖದಲ್ಲಿ ನಡೆದ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ಗುರುವಾರ ಈ ಘಟನೆ ನಡೆದಿದೆ.

ರೈತರಿಗೆ ಡಿಸಿಸಿ ಬ್ಯಾಂಕ್ ವಿತರಿಸುವ ಸಾಲಕ್ಕೆ ದಾಖಲೆ ಕೊಡಲು ಕಂದಾಯ ಇಲಾಖೆ ವಿಳಂಬ ಮಾಡಿದ್ದಕ್ಕೆ ತಾಳ್ಮೆ ಕಳೆದುಕೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸರ್ಕಾರಿ ನೌಕರರಿಗೆ ಬಾಯಿಗೆ ಬಂದಂತೆ ಅಶ್ಲೀಲ ಪದಗಳ ಪ್ರಯೋಗ ಮಾಡಿದ್ದಾರೆ.

ಸರ್ಕಾರಿ ನೌಕರರನ್ನು ಸೂ… ಮಕ್ಕಳು ಎಂದು ಹೀಯಾಳಿಸಿದ್ದಲ್ಲದೆ, ಇದಕ್ಕಾಗಿ ನಿರ್ದಿಷ್ಟ ಜಾತಿ ಹೆಸರನ್ನೂ ಬಳಸಿಕೊಂಡಿದ್ದಾರೆ. ಕೆಲಸ ಮಾಡದ ನೌಕಕರನ್ನು ಬಾರಿಸಲು ಶುರು ಮಾಡ್ತೀನಿ. ಅವರ (ನೌಕರರ) ಸಂಘ ಬಂದು ಪ್ರತಿಭಟನೆ ಮಾಡಲೀ ನೋಡ್ತೀನಿ. ರೈತರನ್ನು ಕರೆದುಕೊಂಡು ( ನೌಕರರನ್ನ) ಸೂ….ಮಕ್ಕಳನ್ನು ಸುಡಿಸಿಬಿಡ್ತೀನಿ.

ರಾಜ್ಯದಲ್ಲಿ ಸಂಘರ್ಷವೇ ನಡೆದುಹೋಗಲಿ, ಜನರು ಒಳ್ಳೆಯದನ್ನು ತೀರ್ಮಾನಿಸ್ತಾರೆ. ಸಂಬಳ ಬೇಕು, ಬಂದೋಬಸ್ತ್ ಬೇಕು, ಅನುಕೂಲ ಬೇಕು ಆದರೆ, ರೈತರ ಕಷ್ಟ ಬೇಕಾಗಿಲ್ಲ ಸೂ…ಮಕ್ಕಳಿಗೆ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

ರೈತ ಕಳೆದುಕೊಳ್ಳುವ ಹಣದ ಬಗ್ಗೆ ಮಾತನಾಡಿದಾಗ ನಿರ್ದಿಷ್ಟ ಜಾತಿ ಉಲ್ಲೇಖಿಸಿದ್ದಾರೆ. ಇತ್ತೀಚೆಗಷ್ಟೆ ರಮೇಶ್ ಕುಮಾರ್ ಚಿಂತಾಮಣಿಯಲ್ಲಿ ಪೊಲೀಸರನ್ನು ನಿಂದಿಸಿ ಸುದ್ದಿಯಾಗಿದ್ದರು. ರಮೇಶ್ ಕುಮಾರ್ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಇದೀಗ ಸರ್ಕಾರಿ ನೌಕರರನ್ನು ಅಶ್ಲೀಲವಾಗಿ ಬೈದಿರುವ ರಮೇಶ್ ಕುಮಾರ್ ವರ್ತನೆಗೆ ಸರ್ಕಾರಿ ನೌಕರರ ಸಂಘದ ಮುಖಂಡರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ನಾನು ಯಾರನ್ನೂ ಬೈದಿಲ್ಲ

ಶುಕ್ರವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮೇಶ್ ಕುಮಾರ್, ಉದ್ದೇಶಪೂರ್ವಕವಾಗಿ ಯಾರಿಗೂ ಬೈದಿಲ್ಲ. ಆವೇಶಭರಿತವಾಗಿ ಮಾತಾನಾಡಿದ್ದೇನೆ. ದುರದ್ದೇಶದಿಂದ ನಿಂದಿಸಿಲ್ಲ. ಅವಾಚ್ಯವಾಗಿ, ಯಾವುತ್ತು ಎಂದಿಗೂ ಮಾತಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪೊರಕೆ ಹಿಡಿದು ಶೌಚಾಲಯ ಸ್ವಚ್ಛಗೊಳಿಸಿದ ಸಿ.ಟಿ.ರವಿ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಾಲಕಿಯರ ಹಾಸ್ಟೆಲ್ ನಲ್ಲಿ ಪೊರಕೆ ಹಿಡಿದು ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದ್ದಾರೆ.

ಗಾಂಧೀಜಿ ಜಯಂತಿ ಹಿನ್ನೆಲೆ ಸ್ವಚ್ಛತಾ ಅಭಿಯಾನ ಅಂಗವಾಗಿ ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಸಿ.ಟಿ. ರವಿ ಶೌಚಾಲಯ ಕ್ಲೀನ್ ಮಾಡಿ ವಿದ್ಯಾರ್ಥಿಗಳಲ್ಲಿ ಅಚ್ಚರಿ ಮೂಡಿಸಿದರು.

ಸಾರ್ವಜನಿಕರಿಂದ ಹಣ ವಸೂಲಿ; ಗದಗನ ಇಬ್ಬರು ನಕಲಿ ಪೊಲೀಸರ ಬಂಧನ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದ್ದಾರೆ. ಗದಗನ ವೀರನಾರಾಯಣ ಗುಡಿ ಬಳಿಯ ನಿವಾಸಿ ಸಂಜಯ್ ಕೊಪ್ಪದ (23), ನರಗುಂದದ ಸಂಜು ಚಲವಾದಿ (23) ಬಂಧಿತ ಆರೋಪಿಗಳು.

ನಗರದ ಆರ್ ಟಿಒ ಕಚೇರಿ ಹೊರವಲಯದ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಭೀಮೇಶ್ ಹುಗ್ಗಿ ಎಂಬುವರನ್ನು ತಡೆದು ದಾಖಲೆಗಳನ್ನು ಪರಿಶೀಲನೆಗೆ ಕೇಳಿದ್ದಾರೆ. ದಾಖಲೆ ಇಲ್ಲವೆಂದ ಮೇಲೆ ದಂಡ ಕಟ್ಟಬೇಕು ಇಲ್ಲವೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಹೇಳಿದ್ದಾರೆ.

ಆದರೆ ದಂಡ ಕಟ್ಟಲು ಹಣ ಇಲ್ಲ ಎಂದಾಗ ಕಪಾಳಕ್ಕೆ ಹೊಡೆದು ಜೇಬು ಪರಿಶೀಲಿಸಿ ಒಂದು ಸಾವಿರ ರೂ.ನಗದು, ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ,  ಎಟಿಎಂ ಕಾರ್ಡ್ ಪಡೆದು ನಂತರ, ಅದರ ಪಾಸ್‍ವರ್ಡ್ ಕೇಳಿ, ಬ್ಯಾಂಕ್ ಖಾತೆಯಲ್ಲಿನ ರೂ. 1,500 ರೂ.  ಡ್ರಾ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಗಸ್ಟ್‌ 15 ರಂದು ಪ್ರಕರಣ ದಾಖಲಾಗಿತ್ತು
ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸೈ ಲಕ್ಕಪ್ಪ ಅಗ್ನಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ವೇಳೆಯಲ್ಲಿ ನಗರದ ಹೊರವಲಯದಲ್ಲಿ ಸಾರ್ವಜನಿಕರನ್ನು ತಡೆದು ಪೊಲೀಸ್ ಎಂದು ಬೆದರಿಸಿ ಹಣಕೀಳುವ ವೇಳೆಯಲ್ಲಿ ವಶಕ್ಕೆ ಪಡೆಯಲಾಗಿದೆ.

ಗದಗ ನಗರ, ಗ್ರಾಮೀಣ, ಅಣ್ಣಿಗೇರಿ, ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಮಣ್ಣಿನ ಮಕ್ಕಳ ಕಲ್ಲು; ಸಿದ್ದರಾಮಯ್ಯ

ವಿಜಯಸಾಕ್ಷಿ ಸುದ್ದಿ, ಕೋಲಾರ

ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ನೀರಾವರಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ‘ಕಲ್ಲು’ಹಾಕಲು ಹವಣಿಸಿದ್ದ ಮಣ್ಣಿನಮಕ್ಕಳು, ಈಗ ನನ್ನ ತಲೆಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಮಾಲೂರು ತಾಲೂಕಿನ ದೊಡ್ಡಶಿವಾರ ಈಶ್ವರಕೆರೆ ನಾಲ್ಕು ದಶಕದ ಬಳಿಕ ಭರ್ತಿಯಾದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.

ಮಳೆಯ ಜೂಜಾಟದಲ್ಲಿ ಪಾತಾಳಕ್ಕೆ ಕುಸಿದಿದ್ದ ಕೋಲಾರ ಜಿಲ್ಲೆಯಲ್ಲಿನ ಅಂತರ್ಜಲ ಈಗ ಕೆಸಿ ವ್ಯಾಲಿ ನೀರಾವರಿ ಯೋಜನೆಯಿಂದಾಗಿ ಪುನಶ್ಚೇತನ ಕಂಡಿದೆ. 800- 900 ಅಡಿಗೂ ನಿಲುಕದ ಅಂತರ್ಜಲ, ಯೋಜನೆಯ ಅನುಷ್ಠಾನದಿಂದಾಗಿ 300- 500ರ ಅಡಿಗೆ ನೀರು ಕಾಣುವಂತಾಗಿದೆ. ಯೋಜನೆಗೆ ಅಡ್ಡಿಗಾಲು ಹಾಕಿದ್ದ ಮಣ್ಣಿನಮಕ್ಕಳಿಗೆ ತಕ್ಕಪಾಠ ಕಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಅವರು ಸ್ವಘೋಷಿತ ಮಣ್ಣಿನಮಕ್ಕಳು. ನಾವು ರೈತರ ಮಕ್ಕಳು ಎಂದು ದೇವೇಗೌಡರನ್ನು ಕಾಲೆಳೆದ ಸಿದ್ದರಾಮಯ್ಯ, ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೇ. ಆಗ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಆದರೆ, ಈಗಿನ ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳನ್ನ ಅನುಷ್ಠಾನಕ್ಕೆ ತರಲು ಸರ್ಕಾರದ ಬಳಿ ಹಣವೇ ಇಲ್ಲ ಎಂದು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕುರಿತು ಛೇಡಿಸಿದರು.

ಅನ್ನಭಾಗ್ಯ ಯೋಜನೆ ಅಡಿ ನಮ್ಮ ಸರ್ಕಾರ ಪ್ರತಿ ವ್ಯಕ್ತಿಗೆ ಏಳು ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದೇವು. ಆದರೆ, ಈಗ ಬಿಜೆಪಿ ಸರ್ಕಾರ ಎರಡು ಕೆಜಿ ಕಡಿತಗೊಳಿಸಿದೆ. ಅಕ್ಕಿ ಕಡಿತಗೊಳಿಸಿದ ಸಚಿವ ಉಮೇಶ್ ಕತ್ತಿ ಅವರಿಗೆ ಸಕ್ಕರೆ ಕಾಯಿಲೆ ಇರಬೇಕು. ಅದಕ್ಕಾಗಿ ಅವರು ಅಕ್ಕಿಯನ್ನು ಕಡಿತಗೊಳಿಸಿದ್ದಾರೆ ಎಂದು ಕುಟುಕಿದರು.
ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಇತರರು ಇದ್ದರು.

ಬಾಗಿನ ಕಾರ್ಯಕ್ರಮದಲ್ಲಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜಮಾಯಿಸುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಕೇಳಿ ಬಂತು.

ಬಲವಂತದ ಮತಾಂತರಕ್ಕೆ ನಮ್ಮ ವಿರೋಧ: ಸಿದ್ದು

ಯಾವುದೇ ವ್ಯಕ್ತಿ ಸ್ವಯಂಪ್ರೇರಿತವಾಗಿ ತನ್ನ ಧರ್ಮದಿಂದ ತನಗೆ ಸರಿಕಾಣುವ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ, ಆದರೆ, ಆಸೆ, ಆಮಿಷಗಳಿಗೆ ಒಳಗಾಗಿ, ಬಲವಂತದಿಂದ ಮತಾಂತರಕ್ಕೆ ಒಳಗಾದರೆ, ಅದಕ್ಕೆ ನಮ್ಮ ವಿರೋಧ ಇದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರತಿಕ್ರಿಯಿಸಿದರು.

ಜೇಬಿಗೆ ಕತ್ತರಿ ಹಾಕಿದ ದುಷ್ಕರ್ಮಿಗಳು

ಈಶ್ವರಕೆರೆ ಭರ್ತಿಯಾಗಿ ಕೋಡಿಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಸಹಸ್ರಾರು ಜನಸ್ತೋಮ ಜಮಾಯಿಸಿತ್ತು. ಇಂಥಹ ಸಂದರ್ಭವನ್ನೇ ಅವಕಾಶವಾಗಿ ಬಳಸಿಕೊಂಡ ಪುಢಾರಿಗಳು, ತಾಲ್ಲೂಕಿನ ಹುಲ್ಕೂರು ಗ್ರಾಮದ ನಾಗೇಶ್ ಅವರ ಜುಬ್ಬಾದ ಜೇಬಿಗೆ ಕತ್ತರಿ ಹಾಕಿ, ಅವರ ಜೇಬಿನಲ್ಲಿದ್ದ ರೂ. 25ಸಾವಿರ ಹಣವನ್ನು ಎಗರಿಸಿದ ಘಟನೆ ನಡೆದಿದೆ.

ಮನೆಯ ಬೀಗ ಮುರಿದು ಕಳವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಹಾಡುಹಗಲೇ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಕಳವು ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಡೋಣಿತಾಂಡದಲ್ಲಿ ನಡೆದಿದೆ.

ಕಳೆದ ಸೆ. 26ರಂದು ಬೆಳಿಗ್ಗೆ 8ಗಂಟೆಯ ಸುಮಾರು ಬೀಗ ಮುರಿದು ಒಳನುಸುಳಿದ ಕಳ್ಳರು, ಮನೆಯ ಹಾಲ್‍ನಲ್ಲಿನ ತಿಜೋರಿಯ ಬೀಗ ಹೊಡೆದು, ಅದರಲ್ಲಿನ ರೂ. 78ಸಾವಿರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ರೂ. 20ಸಾವಿರ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಮನೆಯ ಮಾಲೀಕ ಬಸಪ್ಪ ಚವ್ಹಾಣ್ ಮುಂಡರಗಿ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ; ಸಿಡಿಲು ಬಡಿದು ಮಹಿಳೆ ಸಾವು

ವಿಜಯಸಾಕ್ಷಿ ಸುದ್ದಿ, ರೋಣ

ರೋಣ ತಾಲೂಕಿನ ವಿವಿಧೆಡೆ ಶುಕ್ರವಾರ ಸಾಯಂಕಾಲ ಗುಡುಗು- ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ. ಈ ಸಂದರ್ಭದಲ್ಲಿ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತವಾಗಿದ್ದ ಮಹಿಳೆ ಒಬ್ಬರು ಸಿಡಿಲು ಅಪ್ಪಳಿಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ನೈನಾಪೂರ ಗ್ರಾಮದ ರೇಖಾ ಭೀಮಪ್ಪ ನಂದಿಕೇಶ್ವರ(20) ಎಂದು ಗುರುತಿಸಲಾಗಿದೆ. ಜಮೀನನಲ್ಲಿ ಶೇಂಗಾ ಕಟಾವು ಕೆಲಸದಲ್ಲಿ ರೇಖಾ ನಿರತರಾಗಿದ್ದರು.

ಸಾಯಂಕಾಲ ಗುಡುಗು ಸಿಡಿಲು ಸಹಿತ ಮಳೆ ಸುರಿಯಲು ಆರಂಭವಾಗಿದೆ. ಈ ವೇಳೆ ಸಿಡಿಲು ಬಡಿದ ಪರಿಣಾಮ ಮಹಿಳೆ ರೇಖಾ ದುರ್ಮಣಕ್ಕೆ ತುತ್ತಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿ ಕನೋಜ್ ಕೂಡ ಭೇಟಿ ನೀಡಿದ್ದಾರೆ. ಈ ಕುರಿತು ರೋಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ಒಂದೂವರೆ ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ದೋಚಿದ ಕಳ್ಳರು

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು ಒಂದುವರೆ ಲಕ್ಷ ರೂ. ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜನತಾ ಪ್ಲಾಟ್ ನಿವಾಸಿ, ನಿವೃತ್ತ ನೌಕರ ಶೇಖರಪ್ಪ ರುದ್ರಪ್ಪ ದೊಡಮನಿ ಎಂಬುವವರು ರಾತ್ರಿ 9.30ರ ಸುಮಾರು ಮನೆಗೆ ಬೀಗ ಹಾಕಿ ಗ್ರಾಮದಲ್ಲಿರುವ ಸಹೋದರನ ಮನೆಗೆ ಹೋಗಿ ಊಟ ಮಾಡಿ ಅಲ್ಲಿಯೇ ಮಲಗಿ ಬೆಳಗ್ಗೆ 6.30ರ ಸುಮಾರಿಗೆ ಬಂದು ನೋಡಿದಾಗ ಮನೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಟ್ರಜರಿಯಲ್ಲಿಟ್ಟಿದ್ದ 3 ತೊಲ ಚಿನ್ನದ ಎರಡು ಚೈನ್, ತಲಾ ಅರ್ಧ ತೊಲ ಎರಡು ಚಿನ್ನದ ಉಂಗುರ, 15 ಗ್ರಾಂ ತೂಕದ ಬೆಳ್ಳಿಯ ಬ್ರಾಸ್ ಲೈಟ್, 12 ಗ್ರಾಂ ಬೆಳ್ಳಿಯ ಉಂಗುರ, 1 ಗ್ರಾಂನ ಎರಡು ಬೆಳ್ಳಿಯ ರಿಂಗ್, 15 ಗ್ರಾಂ ಬೆಳ್ಳಿಯ ಕಾಲಗಡಗ, ನಡಪಟ್ಟಿ, ಗುಣಗಡಗಿ, ಒಂದು ಟೈಟನ್ ವಾಚ್, 5 ಸಾವಿರ ರೂ. ನಗದು ಕಳ್ಳತನವಾಗಿದೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಬ್ಬಗಳು ಇರೋಂದ್ರಿಂದ ಯಡಿಯೂರಪ್ಪ ಪ್ರವಾಸ ಮುಂದಕ್ಕೆ; ಸಚಿವ ಕಾರಜೋಳ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಹಬ್ಬಗಳು ಇರೋದ್ರಿಂದ ಯಡಿಯೂರಪ್ಪ ರಾಜ್ಯ ಪ್ರವಾಸ ಮುಂದೂಡಿದ್ದಾರೆ. ಹಬ್ಬಗಳು ಮುಗಿದ ಬಳಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನವನಿಹಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ಮುಂದೆ ನಿಂತು ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಲಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ಆರ್ ಎಸ್ ಎಸ್ ನ್ನು ತಾಲಿಬಾನ್ ಗೆ ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ಪ್ರಚಾರಕ್ಕಾಗಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡಬಾರದು. ಅವರು ಸಿಎಂ ಆಗಿದ್ದವರು, ಸಾಕಷ್ಟು ಅನುಭವವಿದೆ. ಜನಪ್ರತಿನಿಧಿಗಳು ಎಲ್ಲರಿಗೂ ಆದರ್ಶವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಲು ಚಿತ್ರಮಂದಿರ ಓಪನ್ ಮಾಡಲಾಗಿದೆ. ಮಾಲೀಕರು ಕೋವಿಡ್ ನಿಯಮ ಉಲ್ಲಂಘಿಸಬಾರದು ಎಂದು ಸಲಹೆ ನೀಡಿದರು.

ಡಿಎಚ್ಒ ಕಚೇರಿ ಮೇಲೆ ಎಸಿಬಿ ದಾಳಿ; ಲಂಚ ಪಡೆಯುತ್ತಿದ್ದ ಅಧೀಕ್ಷಕ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಗುತ್ತಿಗೆ ಅವಧಿಯನ್ನು ಮುಂದುವರಿಸಲು ಡಿ ಗ್ರೂಪ್ ನೌಕರರ ಹೆಚ್ಚಳವಾಗಿರುವ ಗೌರವಧನವನ್ನು ಲಂಚವಾಗಿ ಪಡೆಯುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಅಧೀಕ್ಷಕನನ್ನು ಡ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿರುವ ಡಿಎಚ್ಒ ಕಚೇರಿಯಲ್ಲಿ ಬುಧವಾರ ಸಂಜೆ ಎಸಿಬಿ ಅಧಿಕಾರಿಗಳು, ಅಧೀಕ್ಷಕ ಶಿವಾನಂದ ಸಿಂದೋಗಿ ಎಂಬುವವರು 19 ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಐದು ಜನ ಡಿ ಗ್ರೂಪ್ ನೌಕರರಿಗೆ ಈ ಹಿಂದೆ ನೀಡಿರುವ ಗೌರವಧನ ಹೆಚ್ಚಾಗಿದೆ. ಆ ಹೆಚ್ಚುವರಿ ಹಣ ಮರಳಿಸಬೇಕು ಹಾಗೂ ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆ ಅವಧಿ ಮುಗಿಯಲು ಬಂದಿದ್ದು, ಅದೂ ಕೂಡ ಮುಂದುವರೆಯಬೇಕಾದರೆ ಹೆಚ್ಚಾದ ಹಣ ಕೊಡಲೇಬೇಕು ಎಂದು ಶಿವಾನಂದ ಸಿಂದೋಗಿ ಎಂಬುವವರು ಹಣ ಕೇಳಿದ್ದರು ಎನ್ನಲಾಗಿದೆ.

ಐದು ಜನರಲ್ಲಿ‌ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಶಂಕ್ರಯ್ಯ ಸಾರಂಗಮಠ ಎಂಬುವವರು ಬುಧವಾರ ಸಂಜೆ 19 ಸಾವಿರ ಹಣ ಕೊಡುವಾಗ ಈ ದಾಳಿ ನಡೆದಿದೆ.

ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ, ಡಿವೈಎಸ್ಪಿ ಎಂ ವಿ ಮಲ್ಲಾಪೂರ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಸಿಬ್ಬಂದಿಗಳಾದ ನಾರಾಯಣಗೌಡ್ ತಾಯಣ್ಣವರ್, ಎಮ್ ಎಮ್ ಅಯ್ಯನಗೌಡ್ರ, ಆರ್ ಎಸ್ ಹೆಬಸೂರ, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ, ಹಾಗೂ ಬಿಸಿನಳ್ಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

2 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಸಚಿವ ಪಾಟೀಲ ಭೂಮಿ ಪೂಜೆ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ

ಚಿಕ್ಕನರಗುಂದ ಗ್ರಾಮದ ಅಭಿವೃದ್ಧಿಗಾಗಿ 2 ಕೋಟಿ 12 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಲೋಕೋಪಯೋಗಿ ಖಾತೆ ಸಚಿವ ಸಿ ಸಿ ಪಾಟೀಲ ಇತ್ತೀಚೆಗೆ ಚಾಲನೆ ನೀಡಿದರು.

ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 1 ಕೋಟಿ 82 ಲಕ್ಷ ರೂ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನ‌ ನಿರ್ಮಾಣಕ್ಕಾಗಿ 20 ಲಕ್ಷ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 5 ಲಕ್ಷ ರೂ ಹಾಗೂ ಉದ್ಯೋಗ ಖಾತರಿ ಯೋಜನೆಯ 5 ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರೆಡ್ಡಿ, ಸದಸ್ಯರಾದ ಶರಣಬಸಪ್ಪ ಹಳೇಮನಿ, ಬಾಪುಗೌಡ ಹಿರೇಗೌಡ್ರ, ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಓ ಶೈನಾಜ್ ಮುಜಾವರ್,

ಹಿರಿಯರಾದ ಅಶೋಕ ಸಾಲೂಟಗಿ, ಬಸನಗೌಡ ಮುದಿಗೌಡ್ರ, ಈರಣ್ಣ ಹೊಂಗಲ್, ಸುರೇಶ್ ಸಾತಣ್ಣವರ್, ಅಡಿವೆಪ್ಪ ಮರಿಯಣ್ಣವರ, ಚನ್ನಪ್ಪ ಬ್ಯಾಳಿ, ಬಿ ಸಿ ಹನಮಂತಗೌಡ್ರ, ಬಸು ಕೊಣನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!