Home Blog Page 319

ಬಿಜೆಪಿ ಮುಖಂಡ ಎಸಿಬಿ ಖೆಡ್ಡಾಗೆ ಬಿದ್ದಿದ್ದು ಹೇಗೆ?; ಡಿಎಚ್‌ಒ ಕಚೇರಿಯೇ ಮಾಸ್ಟರ್ ಹೆಡ್!

ನಾಲ್ಕು ಗಂಟೆ ವಿಚಾರಣೆ ನಡೆಸಿ ಬಂಧಿಸಿದ ಎಸಿಬಿ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ:

ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಆಸೆ, ಆಮಿಷವೊಡ್ಡುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಸರ್ಕಾರಿ ಕೆಲಸ ಮಂಜೂರು ಮಾಡಿಸುತ್ತೇನೆ, ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಉದ್ಯೋಗಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿರುವವರ ಬಳಿ ಹಣ ವಸೂಲಿ ಮಾಡುವವರ ಮೇಲೆ ಎಸಿಬಿ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.

ಹೌದು, ಗದಗನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪೊಲೀಸರು ಇದೆ ಮೊದಲ ಬಾರಿಗೆ ಖಾಸಗಿ ವ್ಯಕ್ತಿಯ ಮೇಲೆ ದಾಳಿ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ ಪಡೆಯುತ್ತಿದ್ದ ವೇಳೆ ಜಿಲ್ಲಾ ಬಿಜೆಪಿ ಯುವ ಮುಖಂಡನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಬುಧವಾರ ಗದಗನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗಿರುವ ರಾಯಲ್ ವಿಲ್ಲಾ ಹೋಟೆಲ್‌ನಲ್ಲಿ ಹಣ ತೆಗೆದುಕೊಳ್ಳುತ್ತಿದ್ದಾಗ ಎಸಿಬಿ ಪೊಲೀಸರ ಕೈಯಲ್ಲಿ ತಗಲು ಹಾಕಿಕೊಂಡಿದ್ದಾನೆ. ಬಿಜೆಪಿ ಯುವ ಮುಖಂಡ ರಮೇಶ್ ಸಜ್ಜಗಾರ ಎಂಬಾತ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಗದಗನ ಜಿಲ್ಲೆಯ ಮುಂಡರಗಿ ಅಥವಾ ಡಂಬಳದ ಸರ್ಕಾರಿ ಆಸ್ಪತ್ರೆಯಲ್ಲಿ ಅರೆಕಾಲಿಕ ನರ್ಸಿಂಗ್ ಹುದ್ದೆ ಕೊಡಿಸುತ್ತೇನೆ ಅಂತಾ ಡಂಬಳದ ಈರಯ್ಯ ಕರವೀರಮಠ ಎಂಬುವವರ ಪತ್ನಿಗೆ ಒಂದು ಲಕ್ಷ ರೂ. ಬೇಡಿಕೆ ಇಟ್ಟಿದ್ದನಂತೆ. ಅದರಲ್ಲಿ ಹೊಟೇಲ್ ರಾಯಲ್ ವಿಲ್ಲಾದಲ್ಲಿ 90 ಸಾವಿರ ರೂ. ಪಡೆದುಕೊಳ್ಳುತ್ತಿದ್ದಾಗ ಎಸಿಬಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಎಸ್‌ಪಿ ಬಿ.ಎಸ್.ನ್ಯಾಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿಗಳಾದ ಎಂ.ವಿ.ಮಲ್ಲಾಪೂರ, ಸುರೇಶ್ ರೆಡ್ಡಿ ಅವರ ನೇತೃತ್ವದಲ್ಲಿ ಗದಗ ಎಸಿಬಿ ಇನ್ಸ್‌ಪೆಕ್ಟರ್‌ಗಳಾದ ಆರ್.ಎಫ್.ದೇಸಾಯಿ, ವೀರಣ್ಣ ಹಳ್ಳಿ, ಸಿಬ್ಬಂದಿಗಳಾದ ಎಂ.ಎಂ.ಅಯ್ಯನಗೌಡ್ರ, ವೀರೇಶ್ ಜೋಳದ, ನಾರಾಯಣ ತಾಯಣ್ಣವರ್, ವೀರಣ್ಣ ಜಾಲಿಹಾಳ, ಶರೀಫ್ ಮುಲ್ಲಾ, ಮಂಜುನಾಥ್ ಮುಳಗುಂದ, ವೀರೇಶ್ ಬಿಸನಳ್ಳಿ, ನಾರಾಯಣರಡ್ಡಿ ವೆಂಕರಡ್ಡಿ ಹಾಗೂ ತಾರಪ್ಪ ಈ ಕಾರ್ಯಾಚರಣೆಯಲ್ಲಿದ್ದರು.

2018ರ ತಿದ್ದುಪಡಿ ಪ್ರಕಾರ ಖಾಸಗಿ ವ್ಯಕ್ತಿಗಳ ಮೇಲೆ ದಾಳಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಸರ್ಕಾರಿ ಕೆಲಸ ಕೊಡಿಸುತ್ತೇವೆಂದು ಆಮಿಷ, ಶಿಫಾರಸ್ಸು ಮಾಡುವವರ ಮೇಲೆ ದಾಳಿ ಮಾಡಬಹುದಾಗಿದೆ.

ಬಿ.ಎಸ್.ನ್ಯಾಮಗೌಡ, ಎಸ್‌ಪಿ, ಎಸಿಬಿ

ಬಿಜೆಪಿ ಮುಖಂಡ ಎಸಿಬಿ ಖೆಡ್ಡಾಗೆ ಬಿದ್ದಿದ್ದು ಹೇಗೆ?

ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ನರ್ಸಿಂಗ್ ಹುದ್ದೆಗಳಿಗೆ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯ ಕೆಲ ಅಧಿಕಾರಿ, ಸಿಬ್ಬಂದಿಗಳು ಹಾಗೂ ಬಿಜೆಪಿ ಯುವ ಮುಖಂಡನೊಂದಿಗೆ ಸೇರಿ ಹಣ ಲೂಟಿ ಮಾಡುವ ಸಂಚು ರೂಪಿಸಿದ್ದರು ಎನ್ನಲಾಗಿದೆ. ೩೧ ಅಭ್ಯರ್ಥಿಗಳಲ್ಲಿ ಈಗಾಗಲೇ ಹಲವರು ರಮೇಶ್ ಸಜ್ಜಗಾರನಿಗೆ ಹಣ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಆಯ್ಕೆಗೊಂಡಿದ್ದ ಮಹಿಳೆಯ ಪತಿ ಈರಯ್ಯ ಕರವೀರಮಠ ಸಂಶಯಗೊಂಡು ರಮೇಶನನ್ನು, ನೌಕರಿ ಹಾಗೂ ಹಣ ಕೊಟ್ಟ ಬಗ್ಗೆ ಗ್ಯಾರಂಟಿ ಏನೆಂದು ಪ್ರಶ್ನಿಸಿದಾಗ ಎನ್‌ಎಚ್‌ಎಂ ಅಧಿಕಾರಿ ಗದಿಗೆಣ್ಣವರಿಗೆ ಕರೆ ಮಾಡಿ ರಮೇಶ್ ಖಚಿತಪಡಿಸಿದನು ಎನ್ನಲಾಗಿದೆ. ಆದರೂ, ಇವರನ್ನೆಲ್ಲಾ ಹೆಡೆಮುರಿ ಕಟ್ಟಲು ಈರಯ್ಯ ಎಸಿಬಿ ಮೊರೆ ಹೋಗಿದ್ದ ಎಂದು ಮೂಲಗಳು ತಿಳಿಸಿವೆ.

ಡಿಎಚ್‌ಒ ಕಚೇರಿ ಭ್ರಷ್ಟರ ಕೂಪ?

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಅವಧಿ ಮುಗಿದಿದ್ದ ‘ಡಿ ಗ್ರುಪ್ ನೌಕರರ ಗುತ್ತಿಗೆ ಅವಧಿಯನ್ನು ಮುಂದುವರೆಸಲು ಲಂಚ ಪಡೆಯುತ್ತಿದ್ದ ಕಚೇರಿ ಅಧೀಕ್ಷಕ ಶಿವಾನಂದ ಸಿಂದೋಗಿಯನ್ನು ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿರುವಾಗಲೇ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು. ಈಗ ಮತ್ತೆ ಅರ್ಹತೆಯಿಂದ ಅಂತಿಮವಾಗಿ ನರ್ಸಿಂಗ್ ಹುದ್ದೆಗೆ ಆಯ್ಕೆ ಆದವರಿಂದಲೇ ಹಣ ವಸೂಲಿ ಮಾಡುವ ದಂಧೆಗೆ ಇದೇ ಇಲಾಖೆಯ ಕೆಲ ಅಧಿಕಾರಿಗಳು, ಸಿಬ್ಬಂದಿ ಇಳಿದಿದ್ದಾರೆ ಎನ್ನಲಾಗಿದೆ. ಈ ದಂಧೆಯಲ್ಲಿ ಇರುವವರು ಯಾರು ಎಂಬುವುದು ಎಸಿಬಿ ಅಧಿಕಾರಿಗಳ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ.

ಹೊಟೇಲ್ ರಾಯಲ್ ವಿಲ್ಲಾ ಮೇಲೆ ಎಸಿಬಿ ಅಧಿಕಾರಿಗಳ ದಾಳಿ; ಬಿಜೆಪಿ ಯುವ ಮುಖಂಡ ಬಂಧನ

ನರ್ಸಿಂಗ್ ಹುದ್ದೆ ಕೊಡಿಸುತ್ತೇನೆಂದು 90 ಸಾವಿರ ಹಣ ಪಡೆಯುವಾಗ ರಮೇಶ್ ಸಜ್ಜಗಾರ ವಶಕ್ಕೆ ಪಡೆದು ವಿಚಾರಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡೆಸುತ್ತೇನೆಂದು ಮಹಿಳೆಯೊಬ್ಬರಿಂದ ಹಣ ಪಡೆಯುತ್ತಿದ್ದ ವೇಳೆ ಜಿಲ್ಲಾ ಬಿಜೆಪಿ ಯುವ ಮುಖಂಡನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಬುಧವಾರ ಗದಗನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗಿರುವ ರಾಯಲ್ ವಿಲ್ಲಾ ಹೋಟೆಲ್ ನಲ್ಲಿ ಯುವ ಮುಖಂಡ ರಮೇಶ್ ಸಜ್ಜಗಾರ ಹಣ ತೆಗೆದುಕೊಳ್ಳುತ್ತಿದ್ದಾಗ ಎಸಿಬಿ ಪೊಲೀಸರ ಕೈಯಲ್ಲಿ ತಗಲು ಹಾಕಿಕೊಂಡಿದ್ದಾನೆ.

ಗದಗನ ಜಿಲ್ಲೆಯ ಮುಂಡರಗಿ ಅಥವಾ ಡಂಬಳದ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್ ಹುದ್ದೆ ಕೊಡಿಸುತ್ತೇನೆ ಅಂತಾ ಡಂಬಳದ ಈರಯ್ಯ ಕರವೀರಮಠ ಎಂಬುವರ ಪತ್ನಿಗೆ ಒಂದು‌ ಲಕ್ಷ ರೂ. ಬೇಡಿಕೆ ಇಟ್ಟಿದ್ದನಂತೆ. ಅದರಲ್ಲಿ ಇವತ್ತು ಹೊಟೇಲ್ ರಾಯಲ್ ವಿಲ್ಲಾದಲ್ಲಿ 90 ಸಾವಿರ ರೂ. ಪಡೆದುಕೊಳ್ಳುತ್ತಿದ್ದಾಗ ಎಸಿಬಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಬಿ ಎಸ್ ನ್ಯಾಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಎಮ್ ವಿ ಮಲ್ಲಾಪೂರ, ಸುರೇಶ್ ರೆಡ್ಡಿ ಅವರ ನೇತೃತ್ವದಲ್ಲಿ, ಗದಗ ಎಸಿಬಿ ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರಣ್ಣ ಹಳ್ಳಿ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡ್ರ, ವೀರೇಶ್ ಜೋಳದ, ನಾರಾಯಣ ತಾಯಣ್ಣವರ್, ವೀರಣ್ಣ ಜಾಲಿಹಾಳ, ಶರೀಫ್ ಮುಲ್ಲಾ, ಮಂಜುನಾಥ್ ಮುಳಗುಂದ, ವೀರೇಶ್ ಬಿಸನಳ್ಳಿ, ನಾರಾಯಣರಡ್ಡಿ ವೆಂಕರಡ್ಡಿ ಹಾಗೂ ತಾರಪ್ಪ ಈ ಕಾರ್ಯಾಚರಣೆಯಲ್ಲಿದ್ದರು.

ತಂಗಡಗಿ ಬೆಂಬಲಿಗನ ದರ್ಪ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಿರಾಶ್ರಿತರಿಗೆ ವಸತಿ ಯೋಜನೆಯಡಿ ಮನೆ ಹಂಚಿಕೆ ಕುರಿತು ಕಾರಟಗಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ‌ ತಂಗಡಗಿ ಬೆಂಬಲಿಗ ದರ್ಪ ತೋರಿದ ಘಟನೆ ಮಂಗಳವಾರ ನಡೆದಿದೆ.

ಮನೆ ಹಂಚಿಕೆಗೆ ಸಂಬಂಧಿಸಿದ ದಾಖಲಾತಿಗಳನ್ನು ಹಿಡಿದಿದ್ದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಾತನಾಡುತ್ತಿದ್ದಂತೆ ದಾಖಲಾತಿಗಳನ್ನು ಕಸಿದುಕೊಂಡು ಹೊರ ನಡೆಯುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ತಂಗಡಗಿ ಬೆಂಬಲಿಗ ಪ್ರಸಾದ್ ದರ್ಪ ಮೆರೆದಿರುವ ದೃಶ್ಯಗಳು ವೈರಲ್ ಆಗಿವೆ‌.

ಬೆಳಗ್ಗೆ 4.30ಕ್ಕೆ ತೇರನೆಳೆದು ರಥೋತ್ಸವ ಸಂಪನ್ನ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಲ್ಲಿನ ಸಜ್ಜನ ಜಾತ್ರೆಯ ರಥೋತ್ಸವದ ಗೊಂದಲಕ್ಕೆ ತೆರೆ ಬಿದ್ದಿದೆ.‌ ಜನೆವರಿ 19ರ ನಸುಕಿನ ವೇಳೆ 4.30ಕ್ಕೆ ತೇರನೆಳೆದು ರಥೋತ್ಸವ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಗಿದೆ. ಓಮೈಕ್ರಾನ್ ಹಿನ್ನೆಲೆಯಲ್ಲಿ ಜನಜಂಗುಳಿ ತಡೆಯಲು ಗವಿಮಠ ಹಿಂದಿನ ಸಂಪ್ರದಾಯ ಮುರಿಯದಂತೆ ಸದ್ದುಗದ್ದಲವಿಲ್ಲದೇ ರಥೋತ್ಸವ ಜರುಗಿಸಿ ಮತ್ತೊಮ್ಮೆ ಮಾದರಿ‌ ಮಠ ಎನಿಸಿದೆ.

ನರಗುಂದ ಯುವಕನ ಕೊಲೆ ಪ್ರಕರಣ; ಭಜರಂಗದಳ ಮುಖಂಡ ಸೇರಿ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮೊನ್ನೆ ಎರಡು ಗುಂಪಗಳ ಮಧ್ಯೆ ನಡೆದ ಗಲಾಟೆಯ ಪರಿಣಾಮವಾಗಿ, ಒಂದು ಕೋಮಿನ ಯುವಕರು ಸೋಮವಾರ ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನರಗುಂದ ಪಟ್ಟಣದ ಸಿದ್ದನಬಾವಿ ಓಣಿಯ ನಿವಾಸಿ ಮಲ್ಲಿಕಾರ್ಜುನ ಅಲಿಯಾಸ್ ಗುಂಡ್ಯಾ ಮುತ್ತಪ್ಪ ಹಿರೇಮಠ, ಚನ್ನಬಸಪ್ಪ ಅಲಿಯಾಸ್ ಚನ್ನಪ್ಪ ಚಂದ್ರಶೇಖರ ಅಕ್ಕಿ, ವಾಸವಿ ಕಲ್ಯಾಣ ಮಂಟಪ ಹತ್ತಿರದ ನಿವಾಸಿ ಕೂಲಿ ಕೆಲಸಗಾರ ಸಕ್ರಪ್ಪ ಹನಮಂತಪ್ಪ ಕಾಕನೂರ, ಸುಬೇದಾರ ಓಣಿಯ ಗುತ್ತಿಗೆದಾರ ಸಂಜು ಮಾರುತಿ ನಲವಡಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೋಮವಾರ ಸಂಜೆ ಪಟ್ಟಣದ ಪುರಸಭೆಯ ಹತ್ತಿರ ಪ್ರವೀಣ ಹಾಗೂ ಮಲ್ಲಿಕಾರ್ಜುನ ಹಿರೇಮಠ ಎಂಬ ಯುವಕರೊಟ್ಟಿಗೆ ೭-೮ ಜನರು ಸೇರಿ ಕಳೆದ ಎರಡು ತಿಂಗಳ ಹಿಂದಿನಿಂದ ನಡೆಯುತ್ತಿದ್ದ ಗಲಾಟೆಗೆ ಸಬಂಧಿಸಿದಂತೆ ಹಳೇ ದ್ವೇಷವಿಟ್ಟುಕೊಂಡು
ಶಮೀರ ಸುಬಾನಸಾಬ ಶಹಪುರ ಹಾಗೂ ಶಮಸೀರಖಾನ್ ನಾಶೀರಖಾನ ಪಠಾಣ ಎಂಬುವವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಶಮೀರ್ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ನರಗುಂದ ಡಿಎಸ್‌ಪಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಮಂಗಳವಾರ 18 ಮಕ್ಕಳು ಸೇರಿ 150 ಜನರಿಗೆ ಕೊರೊನಾ ಸೋಂಕು; ಜಿಲ್ಲೆಯ ಸಂಪೂರ್ಣ ಅಪ್ಡೇಟ್

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಗದಗನ 35ನೇ ವಾರ್ಡಿನ ಸಮರ್ಥ ನಗರದ ಎಂಟು ವರ್ಷದ ಮಗುವಿಗೆ ಹಾಗೂ ಇನ್ನೋರ್ವ 6 ವರ್ಷದ ಮಗುವಿಗೆ ಸೋಂಕು ಕಾಣಿಸಿಕೊಂಡಿದೆ. ಅದರಂತೆ,
ಬೆಟಗೇರಿಯ ಶ್ರೀಶರಣ ಬಸವೇಶ್ವರ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ, ರೋಣ‌ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ಸಿಬ್ಬಂದಿಗೆ, ಗದಗನ ಜಿಮ್ಸ್ ವಿಳಾಸವಿರುವ ಒಂಬತ್ತು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಅದರಂತೆ, ದೆಹಲಿಯಿಂದ ಶಿರಹಟ್ಟಿ ತಾಲ್ಲೂಕಿನ ಇಟಗಿ ಗ್ರಾಮಕ್ಕೆ ಆಗಮಿಸಿರುವ ಓರ್ವ ವ್ಯಕ್ತಿಗೆ ಹಾಗೂ ಶಿರಹಟ್ಟಿ ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಇದುವರೆಗೂ ಗದಗ ಜಿಲ್ಲೆಯಲ್ಲಿ 6,56,916
ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ 7,08,696 ಮಾದರಿ ಸಂಗ್ರಹಿಸಲಾಗಿದೆ. ಅದರಲ್ಲಿ 6,81,838 ನಕಾರಾತ್ಮಕವಾಗಿದ್ದು, ಮಂಗಳವಾರದ 150 ಸೇರಿ 26,858 ಜನರಿಗೆ‌ ಕೋವಿಡ್ ಸೋಂಕು ದೃಢಪಟ್ಟಿದೆ.

ಇದುವರೆಗೂ 319 ಜನರು ಕೋವಿಡ್ ನಿಂದ ಮೃತಪಟ್ಟಿದ್ದು, ಮಂಗಳವಾರದ 30 ಸೇರಿ 25,862 ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 677 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

‘ಏ ಸಿಪಿಐ ಕೇಸ್ ತಗೋಳ್ಬೇಕು’, ಏ ಹೊರಗ ಬಾ….. ಠಾಣೆಯಲ್ಲೇ ಖಾಕಿಗೆ ಅವಾಜ್ ಹಾಕಿದ ಭಜರಂಗದಳ ಮುಖಂಡ

ವಿಜಯಸಾಕ್ಷಿ ಸುದ್ದಿ, ಗದಗ:

‘ಕೇಸ್ ತಗೊಳ್ಬೇಕು ಸಿಪಿಐ.. ನೆನಪಿಟ್ಕೊಳ್ಳಿ ಎಲ್ಲರ ಮೇಲೂ ಕೇಸ್ ತಗೊಳ್ಬೇಕು. ಆಗುವುದಿಲ್ಲ ಅಂತಾ ಹೇಳುವ ಹಾಗಿಲ್ಲ’ ಅಂತಾ ಭಜರಂಗದಳ ಮುಖಂಡನೊಬ್ಬ ನರಗುಂದ ಪೊಲೀಸ್ ಠಾಣೆಯಲ್ಲೇ ದ್ವೇಷದ ಭಾಷಣ ಮಾಡಿದ್ದು, ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ.

ಭಜರಂಗದಳದ ಮುಖಂಡನ್ನೊಬ್ಬ ದ್ವೇಷದ ಭಾಷಣ ಮಾಡುತ್ತಿರುವಾಗಲೇ ಅಲ್ಲೇ ನೆರೆದಿದ್ದ ಇನ್ನೊಬ್ಬ ಭಜರಂಗದಳ ಕಾರ್ಯಕರ್ತ ‘ಏ ಹೊರಗೆ ಬಾ.. ಹೊರಗೆ’ ಎಂದು ಪೊಲೀಸರಿಗೆ ಅವಾಜ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

‘ಕೇಸ್ ಕೊಟ್ಬಿಡು ಅಂದ್ರೆ ಕೇಸ್ ಕೊಡ್ತೀವಿ. ಕೇಸ್ ಕೊಡ್ಬೇಡ ಅಂದ್ರು ಕೇಸ್ ಮಾಡ್ತೀರಿ. ಕೋವಿಡ್ ಕೇಸ್ ಮಾಡ್ತೀರಾ ಮಾಡಿ. ಕೌಂಟರ್ ಕೇಸ್ ಮಾಡ್ತೀರಾ ಮಾಡಿ. ಇವತ್ತೊಂದು ಕೇಸ್ ಹಾಕ್ತೀರಾ ಹಾಕಿ. ನಾವೂ ಕೇಸ್ ಕೊಡೋಕೆ ತಯಾರಾಗಿಯೇ ಬಂದಿದ್ದೇವೆ. ಎಷ್ಟು ಕೇಸ್ ದಾಖಲೆ ಮಾಡ್ತಿರೋ ಮಾಡಲೇಬೇಕು ಇವತ್ತು. ಎಲ್ಲ ಕೇಸ್ ದಾಖಲೆ ಮಾಡಲಿಕ್ಕೆ ಬಂದಿದ್ದೇವೆ’ ಎಂದಿದ್ದಾನೆ.

ಇನ್ನು, ಭಜರಂಗದಳದ ಮುಖಂಡ ಸಂಜು ನಲವಡಿ, ಕಾರ್ಯಕರ್ತರು ಬಹಿರಂಗವಾಗಿ ಇಷ್ಟೆಲ್ಲಾ ಮಾತನಾಡುತ್ತಿದ್ದರೂ, ಪೊಲೀಸರು ಬಾಯ್ ಮುಚ್ಚಿಕೊಂಡು ಸುಮ್ಮನೆ ಕೂತಿದ್ರಾ ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ. ಪೊಲೀಸರ ನಿಷ್ಕಾಳಜಿ ಹಾಗೂ ಇಂತಹ ದ್ವೇಷದ ಭಾಷಣದಿಂದ ಉದ್ರಿಕ್ತರಾದ ಯುವಕರ ಗುಂಪೊಂದು ಸೋಮವಾರ (ಜ.17)ದಂದು ರಾತ್ರಿ ಚೂರಿ ಇರಿಯುವಂತಾಗಿದ್ದು, ಯುವಕನೋರ್ವನ ಕೊಲೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಘಟನೆಯ ವಿವರ:

ಜ.14ರಂದು ಎರಡು ಕೋಮಿನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಹಿಂದೂ ದೇವರಿಗೆ ಅವಹೇಳನ ಮಾಡಿದ್ದಾರೆ. ರಾಮ, ಕೃಷ್ಣ, ಆಂಜನೇಯನಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ಹಲ್ಲೆ ನಡೆಸಿದ್ದಾರೆ ಎಂದು ಅನ್ಯ ಕೋಮಿನ 10 ಜನ ಸೇರಿದಂತೆ ಇನ್ನೂ 10-15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ಆರೋಪಿಗಳು ಕೌಂಟರ್ ಆಗಿ ಪ್ರಕರಣ ನೀಡಿದ ದೂರುದಾರರು ಸೇರಿ 65 ಜನರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಎಫ್‌ಐಆರ್ ದಾಖಲಿಸಿದ್ದರು.

ಇದರಿಂದಾಗಿ ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ, ಈವೆರಡೂ ಪ್ರಕರಣ ದಾಖಲಾದ ಬಳಿಕ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಲೋದಿಗಲ್ಲಿ ವೃತ್ತದಿಂದ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ರ‍್ಯಾಲಿ ಮಾಡಿದ್ದಾರೆ ಅಂತಾ ಸುಮಾರು 60ಕ್ಕೂ ಅಧಿಕ ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನರಗುಂದದಲ್ಲಿ ಮಾರಕಾಸ್ತ್ರ ಬಳಸಿ ಯುವಕನ ಕೊಲೆ; ಸಿಸಿಟಿವಿ ದೃಶ್ಯಾವಳಿ ವೈರಲ್

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮೊನ್ನೆ ಎರಡು ಗುಂಪಗಳ ಮಧ್ಯೆ ನಡೆದ ಗಲಾಟೆಯ ಪರಿಣಾಮವಾಗಿ,‌ ಒಂದು ಕೋಮಿನ ಯುವಕರು ಮಾರಕಾಸ್ತ್ರ ಬಳಸಿ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.

ಸೋಮವಾರ ರಾತ್ರಿ ಇಬ್ಬರು ಯುವಕರು, 19ವರ್ಷದ ಯುವಕ ಶಮೀರ್ ಶಹಪೂರ್ ಎಂಬಾತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿವೆ.

ನರಗುಂದ ಪುರಸಭೆಯ ಬಳಿ ಇಬ್ಬರು ಯುವಕರು ಸೇರಿ ಶಮೀರ್ ಎಂಬಾತನನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ಭಯಾನಕ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ. ಸಿ.ಸಿ.ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಂಚಲನ ಸೃಷ್ಟಿಸಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಶಮೀರ್ ಶಹಪೂರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರವೀಣ ಹಾಗೂ ಮಲ್ಲಿಕಾರ್ಜುನ ಹಿರೇಮಠ ಎಂಬ ಇಬ್ಬರು ಯುವಕರ ವಿರುದ್ಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನರಗುಂದದಲ್ಲಿ ಕೋಮುದ್ವೇಷ; ಯುವಕನಿಗೆ ಚೂರಿ ಇರಿದು ಕೊಲೆ, ಮತ್ತೊಬ್ಬ ಗಂಭೀರ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದ ಹಲವು ‌ದಿನಗಳಿಂದ ಜಿಲ್ಲೆಯ ‌ನರಗುಂದ ಪಟ್ಟಣದಲ್ಲಿ ಎರಡು ಸಮುದಾಯಗಳ ಮಧ್ಯ ನಡೆಯುತ್ತಿರುವ ಜಗಳಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ.

ನಿನ್ನೆ ರಾತ್ರಿ ‌ಕೋಮುದ್ವೇಷದಿಂದ ಯುವಕರ ಒಂದು ಗುಂಪು ಎದುರಾಳಿಯ ಸಮುದಾಯದ ಸಿಕ್ಕ ಸಿಕ್ಕವರ ಮೇಲೆ ಚೂರಿ ಇರಿದಿದೆ. ಇದರಿಂದಾಗಿ ಒಂದು ಸಮುದಾಯದ ಇಬ್ಬರು ಯುವಕರಿಗೆ ಚೂರಿ ಇರಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದರು.

ಪಟ್ಟಣದ ಶಮೀರ್ ಶಹಪೂರ್ ಹಾಗೂ ಶಮ್ ಶೇರ್ ಖಾನ್ ಪಠಾಣ್ ಎಂಬುವವರಿಗೆ ಚೂರಿ ಇರಿದಿದ್ದು,
ಇಬ್ಬರಿಗೂ ಎದೆ ಹಾಗೂ ಬೆನ್ನ ಮೇಲೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಶಮೀರ್ ಶಹಪೂರ್ (19) ಎಂಬಾತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಖಚಿತ ಪಡಿಸಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶಮೀರ್ ಶಹಪೂರ್ ಗೆ ಎದೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದ ಕಾರಣಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಇನ್ನೋರ್ವ ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟ‌ನೆಯಿಂದ ಕಳೆದ ಮೂರು ದಿನಗಳಿಂದ ನರಗುಂದ ಪಟ್ಟಣದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನು ಎರಡು ಸಮುದಾಯದ ಯುವಕರ ಗಲಾಟೆಗೆ ಕಡಿವಾಣ ಹಾಕಬೇಕಿದ್ದ ಪೊಲೀಸರು ಸುಮ್ಮನಿದ್ದರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೇ, ಪಟ್ಟಣದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಶಾಲೆಗೆ ಬಾರದ ಮಕ್ಕಳಿಗೆ ಆನ್‌ಲೈನ್‌ ತರಗತಿ; ಪರಿಸ್ಥಿತಿಗೆ ತಕ್ಕಂತೆ ಶಾಲೆಗೆ ರಜೆ

ವಿಡಿಯೋ ಸಂವಾದ ಮೂಲಕ ತಜ್ಞರ ಸಲಹಾ ಸಮಿತಿ ಸಭೆ
*ಪರಿಸ್ಥಿತಿಗನಗುಣವಾಗಿ ಶಾಲೆ ರಜೆ ಕುರಿತು ಸಲಹಾ ಸಮಿತಿಯ ನಿರ್ಧಾರ

ವಿಜಯಸಾಕ್ಷಿ ಸುದ್ದಿ, ಗದಗ:

ಶಾಲಾ ಮಕ್ಕಳಲ್ಲಿ ಸೋಂಕು ದೃಢವಾದಲ್ಲಿ ಆ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಪರಿಸ್ಥಿತಿಗೆ ಅನುಸಾರವಾಗಿ ರಜೆ ನೀಡಲಾಗುತ್ತಿದೆ. ಸೋಮವಾರ ನಡೆದ ತಜ್ಞರ ಸಲಹಾ ಸಮಿತಿಯು ಶಾಲಾ ತರಗತಿಗಳನ್ನು ಈ ವಾರವೂ ಮುಂದುವರೆಸಲು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿತು.

ಅನುದಾನ ರಹಿತ ಶಾಲೆಗಳ ಸಂಘದ ಮುಖ್ಯಸ್ಥ ಶಶಿಧರ ದಿಂಡೂರ ಮಾತನಾಡಿ, ಜಿಲ್ಲೆಯ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಅಷ್ಟಾಗಿ ಇಲ್ಲದಿರುವದರಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ತರಗತಿ ನಡೆಸುವದು ಸೂಕ್ತವಾಗಿದ್ದು ಈ ವಾರವು ಶಾಲೆಗಳನ್ನು ಯಥಾವತ್ತಾಗಿ ನಡೆಸಬಹುದಾಗಿದೆ ಎಂದರು.

ಜಿಲ್ಲಾಡಳಿತದಿಂದ ಸೋಮವಾರ ಏರ್ಪಡಿಸಲಾದ ತಜ್ಞರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು,‌ ಅಭಿಪ್ರಾಯಗಳನ್ನು ಪರಿಗಣಿಸಿ ಸೋಂಕು ಹೆಚ್ಚು ಕಂಡು ಬರುವ ಶಾಲೆಗಳಿಗೆ ಮಾತ್ರ ರಜೆ ನೀಡಿ ಸೋಂಕು ನಿಯಂತ್ರಣಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನು ತಪಾಸಣೆಗೊಳಪಡಿಸುವಂತೆ ಸೂಚಿಸಿದರು. ಮಕ್ಕಳಿಗೆ ಶಾಲಾ ತರಗತಿಗಳಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಆನಲೈನ್ ಮೂಲಕವೂ ತರಗತಿಗಳಿಗೆ ಹಾಜರಾಗಬಹುದಾಗಿರತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ ನುಚ್ಚಿನ ಮಾತನಾಡಿ, ಕಳೆದೆರಡು ಕೊರೊನಾ ಸೋಂಕಿನ ಅಲೆಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಈ ಬಾರಿ ಕಡಿಮೆ ಇದ್ದು ಹಾಗೂ ಸೋಂಕು ದೃಢಪಟ್ಟ ಮಕ್ಕಳ ಆರೋಗ್ಯದಲ್ಲಿ ಗಂಭೀರ ಸ್ವರೂಪದ ಪರಿಣಾಮಗಳು ಕಂಡುಬಂದಿಲ್ಲ. ಸರ್ಕಾರ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿದೆ.

ಜನೇವರಿ 1 ರಿಂದ 16 ರ ವರೆಗೆ ಜಿಲ್ಲೆಯಲ್ಲಿ ಮಕ್ಕಳು ಸೇರಿದಂತೆ ಒಟ್ಟು 21659 ಜನರನ್ನು ಸೋಂಕು ತಪಾಸಣೆಗೊಳಪಡಿಸಲಾಗಿದ್ದು ಈ ಪೈಕಿ 0-18 ವಯೋಮಾನದ 87 ಮಕ್ಕಳು ಸೇರಿದಂತೆ ಒಟ್ಟು 563 ಪ್ರಕರಣಗಳು ದೃಢಪಟ್ಟಿದ್ದು ಒಟ್ಟಾರೆ 23 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ವರೆಗೆ 53 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ಸಭೆಗೆ ಮಾಹಿತಿ ಒದಗಿಸುತ್ತಾ, ಜಿಲ್ಲೆಯಲ್ಲಿ ಒಂದನೇ ಡೋಸ್ ಲಸಿಕೆಯನ್ನು ಶೇ. 100 ಕ್ಕೂ ಅಧಿಕ ಅರ್ಹರಿಗೆ ನೀಡಲಾಗಿದೆ. ಅದರಂತೆ ಎರಡನೇ ಡೋಸನ್ನು ಶೇ. 89 ರಷ್ಟು ಪೂರ್ಣಗೊಳಿಸಲಾಗಿದೆ. 15 ರಿಂದ 18 ವಯೋಮಾನದ ಮಕ್ಕಳಿಗೆ ನೀಡುವ ಲಸಿಕಾಕರಣವನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ ಮಾತನಾಡಿ, ಸೋಂಕು ನಿಯಂತ್ರಣ ಕುರಿತು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದರೊಂದಿಗೆ ದೈಹಿಕ ಅಂತರ ಪಾಲಿಸಿ ತರಗತಿ ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಸೋಂಕು ದೃಢಪಟ್ಟ ಶಾಲೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ ತರಗತಿಗಳನ್ನು ನಡೆಸುವ ಕುರಿತಂತೆ ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.

ಕೊನೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಭರತ ತಜ್ಞರ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಸೋಂಕಿನ ಪ್ರಕರಣಗಳು ಅಧಿಕವಾಗಿ ಕಂಡುಬಂದಲ್ಲಿ ಶಾಲೆಗಳಿಗೆ ರಜೆ ಘೋಷಿಸೋಣ ಈ ಬಗ್ಗೆ ನಿರಂತರವಾಗಿ ತಜ್ಞರ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದು ಸಮನ್ವಯದೊಂದಿಗೆ ಕಾರ್ಯನಿರ್ವಹಿಸೋಣ ಎಂದರು.

ಸಲಹಾ ಸಮಿತಿ ಸಭೆಯನ್ನು ಪುನ: ಮುಂದಿನ ವಾರ ಜರುಗಿಸಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಕುರಿತು ಚರ್ಚಿಸುವ ಮೂಲಕ ಮುಂದಿನ ನಿರ್ಧಾರ ಕೈಗೊಳ್ಳಲು ಕ್ರಮ ವಹಿಸಲಾಗುವದು ಈ ಬಗ್ಗೆ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು, ಆಯ್.ಎಮ್.ಎ. ಪದಾಧಿಕಾರಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು,  ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು. 

error: Content is protected !!