Home Blog Page 3287

ಟೈರ್ ಸ್ಫೋಟ; ಪ್ರಯಾಣಿಕರ ಪ್ರಾಣ ಉಳಿಸಿದ ಬಸ್ ಚಾಲಕ

ವಿಜಯಸಾಕ್ಷಿ ಸುದ್ದಿ, ಗದಗ;

ಟೈರ್ ಸ್ಫೋಟಗೊಂಡ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ವೊಂದು ರಸ್ತೆಯ ಬದಿಗೆ ವಾಲಿದ್ದು, ಓರ್ವ ವಿದ್ಯಾರ್ಥಿನಿ ಸೇರಿ ಹಲವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಹಿರೇಕೊಪ್ಪ ಗ್ರಾಮದ ಬಳಿ ನಡೆದಿದೆ.

ಗದಗದಿಂದ ಅರಹುಣಸಿ ಗ್ರಾಮಕ್ಕೆ ತೆರುಳುತ್ತಿದ್ದ ಬಸ್ ಹಿರೇಕೊಪ್ಪ ಗ್ರಾಮದ ಬಳಿ ಹೋಗುತ್ತಿದ್ದಂತೆ ದಿಢೀರನೇ ಟೈರ್ ಸ್ಪೋಟಗೊಂಡಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿದರೂ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಾಲಕ ಬಸ್ ನಿಲುಗಡೆ ಮಾಡಲು ರಭಸವಾಗಿ ಹಾಕಿದ ಬ್ರೇಕ್‌ನಿಂದ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗದಗನ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್, ಮನೆಗಳ ಗೋಡೆ ಬಿರುಕು: ಸ್ಥಳೀಯರಿಂದ ಎಸ್‌ಪಿಗೆ ದೂರು

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

‘ಪಟ್ಟಣದ ಸುತ್ತಮುತ್ತಲಿನ ಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್ ಮಾಡಲಾಗುತ್ತಿದ್ದು, ಇದರಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದರು.

ಮಂಗಳವಾರ ಶಿರಹಟ್ಟಿ ಪೊಲೀಸ್ ಠಾಣೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆದ ಸಾರ್ವಜನಿಕರ ಸಭೆಯಲ್ಲಿ ಅವರು ದೂರಿದರು.

ಪಟ್ಟಣದ ವಿದ್ಯಾನಗರ ಭಾಗದಲ್ಲಿ ಬರುವ ಕ್ರಷರ್‌ಗಳಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಈ ವೇಳೆ ಭಾರೀ ಪ್ರಮಾಣದಲ್ಲಿ ಸದ್ದು ಆಗುತ್ತಿದ್ದು, ಕ್ರಮೇಣ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ಇದರಿಂದ ನಿತ್ಯವೂ ಕಿರಿಕಿರಿಯುಂಟಾಗುತ್ತಿದೆ. ಅಲ್ಲದೇ, ಕ್ರಷರ್‌ಗಳಿಂದ ಮಿತಿಮೀರಿ ಜಲ್ಲಿ, ಎಂಸ್ಯಾಂಡ್ ಸಾಗಿಸುವ ಟಿಪ್ಪರ್‌ಗಳ ಹಾವಳಿ ಹೇಳತೀರದಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರು ‘ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಮಟ್ಟದ ಮುಖಂಡರು ಇನ್ನು ಮುಂದೆ ವಿವಿಧ ಅಪರಾಧ ಪ್ರಕರಣಗಳ ರಾಜಿ ಸಂಧಾನ ನಡೆಸುವುದು ಬೇಡ. ಪ್ರತಿ ಪ್ರಕರಣಗಳನ್ನು ಸ್ವತಃ ನಾವೇ ಇತ್ಯರ್ಥ ಪಡಿಸುತ್ತೇವೆ. ಇದಕ್ಕೆ ತಾವೆಲ್ಲರೂ ಸಹಕರಿಸಬೇಕು. ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡುವುದರಿಂದ ಅಪರಾಧಗಳಲ್ಲಿ ಭಾಗಿಯಾದವರು ಕೆಲವೇ ದಿನಗಳಲ್ಲಿ ತಮ್ಮ ಹಳೆಯ ಪ್ರವೃತ್ತಿಯನ್ನೇ ಮುಂದುವರಿಸುತ್ತಾರೆ. ಅಲ್ಲದೇ, ರಾಜಿ ಸಂಧಾನ ಮಾಡಿಸಿದವರ ಮಾತನ್ನೂ ಕೇಳುವುದಿಲ್ಲ.

ಹೀಗಾಗಿ ಇಂತಹ ಪ್ರಕ್ರಿಯೆಯನ್ನು ಕೈಬಿಡಬೇಕು. ಪ್ರತಿ ಹಳ್ಳಿಗೂ ಸಹ ಪೊಲೀಸ್ ಸಿಬ್ಬಂದಿ ಗಸ್ತು ಮಾಡಬೇಕು. ಗ್ರಾಮಗಳಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಸಂಪರ್ಕಿಸಬೇಕು ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ಹೇಳಿದರು. ಈ ಸಂದರ್ಭದಲ್ಲಿ ಡಿ ಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ನವೀನ ಜಕ್ಕಲಿ ಇದ್ದರು.

ಸಭೆಯಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಮಾಬುಸಾಬ್ ಲಕ್ಷ್ಮೇಶ್ವರ, ಯಲ್ಲಪ್ಪಗೌಡ ಪಾಟೀಲ್, ಚಾಂದಸಾಬ ಮುಳಗುಂದ, ಬಸವಣ್ಣೆಪ್ಪ ತುಳಿ, ಬಸವರಾಜ ವಡವಿ, ಮುತ್ತುರಾಜ್ ಬಾವಿಮನಿ, ಯಲ್ಲಪ್ಪ ಇಂಗಳಗಿ, ಪರಶುರಾಮ ಡೊಂಕಬಳ್ಳಿ ಉಪಸ್ಥಿತರಿದ್ದರು.

66ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ; ಕನ್ನಡಪರ ಸಂಘಟನೆಗಳಿಂದ ಬೃಹತ್ ಧ್ವಜಾರೋಹಣ

ವಿಜಯಸಾಕ್ಷಿ ಸುದ್ದಿ, ನರಗುಂದ

ಇಲ್ಲಿನ ಪುರಸಭೆ ಮುಂಭಾಗದಲ್ಲಿರುವ ವೀರಕೇಸರಿ ಬಾಬಾಸಾಹೇಬ್ ಪುತ್ಥಳಿ ಬಳಿ ಕನ್ನಡಪರ ಹೋರಾಟಗಾರರ ಒಕ್ಕೂಟದಿಂದ 66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸೋಮವಾರ 30 ಅಡಿ ಉದ್ದ 9 ಅಡಿ ಅಗಲ ವಿಸ್ತೀರ್ಣದ ಬೃಹತ್ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣವನ್ನು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚನ್ನು ನಂದಿ, ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕ ಅಧ್ಯಕ್ಷ ಮುತ್ತು ರಾಯರಡ್ಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಬಸವರಾಜ ತಾವರೆ. ಸ್ವಾಭಿಮಾನಿ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಚಿಂತಾಲ, ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಪಾರುಖ್ ಮಜಿದಮನಿ, ಪುರಸಭೆ ಮುಖ್ಯಾಧಿಕಾರಿ ಅಮಿತ್ ತೇರದಾಳ, ವಿ.ಎಚ್.ಕೆಂಚನಗೌಡ್ರ, ಮಾರುತಿ ಅಬ್ಬಿಗೇರಿ, ಬಸವರಾಜ ನೇಸರಗಿ, ಮಂಜುನಾಥ್ ಮೆಣಸಗಿ, ಸಂಗಮೇಶ ಬ್ಯಾಳಿ, ರಾಜು ಹೂಲಿ, ಸಿದ್ದಪ್ಪ ಆಯಟ್ಟಿ ಉಪಸ್ಥಿತರಿದ್ದರು.

ಅನ್ಯಭಾಷಿಗರಿಂದ ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ನಮ್ಮದಾಗಿದೆ; ಮುತ್ತು ರಾಯರಡ್ಡಿ

ವಿಜಯಸಾಕ್ಷಿ ಸುದ್ದಿ, ನರಗುಂದ;

ಕನ್ನಡವೆಂಬುದು ಈ ರಾಜ್ಯದ ಮಾತೃಭಾಷೆಯಾಗಿದ್ದು, ಅನ್ಯ ಭಾಷಿಗರ ಹಾವಳಿಯಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆಯಾ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಬೇಕಾಗಿರುವ ಅನಿವಾರ್ಯತೆ ನಮ್ಮೆದುರಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಬೇಸರ ವ್ಯಕ್ತಪಡಿಸಿದರು.

66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಐತಿಹ್ಯವಿದೆ. ಅದರದ್ದೇ ಆದ ಶಕ್ತಿ ಸಾಮರ್ಥ್ಯವಿದೆ. ಕುವೆಂಪು ಸೇರಿದಂತೆ ಅನೇಕ ಕವಿಗಳು, ಸಾಹಿತಿಗಳು ಕನ್ನಡ ನಾಡು ನುಡಿಯ ಬಗ್ಗೆ ಹಾಡಿಹೊಗಳಿರುವ ನಿದರ್ಶನಗಳಿದ್ದು, ಕನ್ನಡದ ಕಂಪನ್ನು ಪಸರಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ದೇಶದಲ್ಲಿ 1951 ನವೆಂಬರ್ 1 ರಂದು ಭಾಷಾವಾರು ಪ್ರಾಂತಗಳ ರಚನೆಯಾಯಿತು. ಆಗ ಕನ್ನಡ ಭಾಷೆ ಮಾತನಾಡುವ ಜನರು ಇರುವ ಭಾಗವನ್ನು ಸೇರಿಸಿ ಮೈಸೂರು ರಾಜ್ಯ ನಿರ್ಮಾಣವಾಯಿತು.
ಇದಕ್ಕಾಗಿ ಅನೇಕ ಕನ್ನಡದ ಅಭಿಮಾನಿಗಳು ಹೋರಾಟ ಮಾಡಿದ್ದರು.

ಈ ಹಿಂದೆ ಆಡಳಿತದ ಅನುಕೂಲಕ್ಕಾಗಿ ಹೈದ್ರಾಬಾದ್, ಮುಂಬೈ ಕರ್ನಾಟಕವೆಂದು ಹರಿದು ಹಂಚಿಹೋಗಿತ್ತು. ಆಲೂರ ವೆಂಕಟರಾಯರು ಸೇರಿದತೆ ಅನೇಕರ ಹೋರಾಟದ ಫಲವಾಗಿ ಮೈಸೂರು ರಾಜ್ಯವೆಂಬುವುದು ಕರ್ನಾಟಕವೆಂದು ಮರುನಾಮಕರಣವಾಯಿತು ಎಂದು ಕನ್ನಡ ಏಕೀಕರಣದ ಹೋರಾಟವನ್ನು ಮುತ್ತು ರಾಯರಡ್ಡಿ ಸ್ಮರಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು. ಈ ವೇಳೆ ಶಾಲಾ ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪು ಹಿರೇಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಓ ಶೈನಾಜ್ ಮುಜಾವರ್,

ಕಾರ್ಯದರ್ಶಿ ಕೆಂಚಪ್ಪ ಮಾದರ, ಶಿಕ್ಷಕಿ ಎಲ್.ಬಿ.ಹೊಸಳ್ಳಿ, ಶಿಕ್ಷಕರಾದ ವಿ.ಎನ್.ಬೋಸ್ಲೆ, ಎಂ.ಪಿ.ಕುಲಕರ್ಣಿ, ಸುರೇಶ್, ಗ್ರಾಮಸ್ಥರಾದ ಮಲ್ಲಿಕಾರ್ಜುನ ಸಾತನ್ನವರ, ಮಲ್ಲನಗೌಡ ಸರ್ವಮಾನೇದ, ಬಸನಗೌಡ ಮುದಿಗೌಡ್ರ, ಹನಮಂತ ರಾಯರಡ್ಡಿ, ಬಸವರಾಜ ಗುಂಜಲ್, ಚನ್ನಪ್ಪ ಬ್ಯಾಳಿ, ರಮೇಶ ಪತ್ತಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

74 ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು, 80 ಜನರ ಬಂಧನ; ಕಳ್ಳತನವಾಗಿದ್ದ ಸ್ವತ್ತು ಪುನಃ ಮಾಲೀಕರ ಕೈಗೆ


ಪೊಲೀಸರ ಕಾರ್ಯಕ್ಕೆ ನೂತನ ಎಸ್‌ಪಿ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ಗದಗ;

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ, ಮೋಸ, ವಂಚನೆ ಪ್ರಕರಣಗಳಲ್ಲಿ 74 ಪ್ರಕರಣಗಳನ್ನು ಬೇಧಿಸಿ 80 ಜನರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿತರಿಂದ ಒಂದು ಕೆ.ಜಿ. 38 ಗ್ರಾಂ ಚಿನ್ನಾಭರಣಗಳು, ಸುಮಾರು ಐದು ಕೆ.ಜಿ.ಯಷ್ಟು ಬೆಳ್ಳಿಯ ಆಭರಣಗಳು ಸೇರಿ ಒಟ್ಟು 64,55,099 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು, ಮಾಲೀಕರಿಗೆ ಸ್ವತ್ತುಗಳನ್ನು ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು.

ಸೋಮವಾರ ಪೊಲೀಸ್ ಭವನದಲ್ಲಿ ನಡೆದ ಕಳುವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ಮಾಲೀಕರಿಗೆ ಹಿಂದುರಿಗಿಸುವ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2020 ನವೆಂಬರ್ 21 ರಿಂದ 2021 ಅಕ್ಟೋಬರ್ 25ರವರೆಗೆ ಒಟ್ಟು 81,28,590 ರೂ. ಕಳ್ಳತನವಾಗಿದ್ದು, 64,55,099 ರೂ. ಮೊತ್ತವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸಂಬಂಧಿಸಿದ ಮಾಲೀಕರಿಗೆ ಸ್ವತ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದರು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಸುಮಾರು 33,65,685 ರೂ ಮೌಲ್ಯದ 1ಕೆ.ಜಿ.38 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದು, ಈವರೆಗೆ ಒಟ್ಟು 29,78,795 ರೂ. ಮೌಲ್ಯದ 887 ಗ್ರಾಂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 2,65,854 ರೂ. ಮೌಲ್ಯದ 5 ಕೆ.ಜಿ. 274 ಗ್ರಾಂ ಬೆಳ್ಳಿಯ ಆಭರಣಗಳು ಕಳ್ಳತನವಾಗಿದ್ದು, ಅದರಲ್ಲಿ 2,63,664 ರೂ ಮೌಲ್ಯದ 5 ಕೆ.ಜಿ.253 ಗ್ರಾಂ ಬೆಳ್ಳಿಯ ಒಡವೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದರು.

ಅದರಂತೆ, ಒಟ್ಟು 18,16,000 ರೂ. ಮೌಲ್ಯದ 35 ವಾಹನಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 16,16,೦೦೦ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಸಿಲೆಂಡರ್, ತಾಮ್ರದ ತಂತಿ, ಮೊಬೈಲ್, ಬ್ಯಾಟರಿ, ವೆಲ್ಡಿಂಗ್ ಹಾಗೂ ಇನ್ನಿತರ ವಸ್ತುಗಳು ಸೇರಿ ಒಟ್ಟು 5,49,125 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 3,89,950 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಳ್ಳತನವಾಗಿದ್ದು ಒಟ್ಟು 8,79,200 ನಗದು ಹಣದಲ್ಲಿ 2,27,200 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಅ.25 ರವರೆಗೆ ಮೂರು ಮೋಸ, ವಂಚನೆ ಪ್ರಕರಣ ದಾಖಲಾಗಿದ್ದು, ಒಂಬತ್ತು ಜನರನ್ನು ಬಂಧಿಸಿ ಒಟ್ಟು 9,79,500 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಅವರು, ಪೊಲೀಸರ ಮೇಲೆ ಸಾರ್ವಜನಿಕರು ಇಟ್ಟಿರುವ ಭರವಸೆಯನ್ನು ಉತ್ತೇಜಿಸಲು ‘ಪ್ರಾಪರ್ಟಿ ಪರೇಡ್ ನಡೆಸಲಾಗುತ್ತದೆ ಎಂದರು. ಇದೇ ವೇಳೆ ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ನರಗುಂದ ಡಿಎಸ್‌ಪಿ ಶಂಕರ್ ರಾಗಿ, ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ರವಿ ಕಪ್ಪತ್ತನವರ, ಪಿ.ವಿ.ಸಾಲಿಮಠ, ಬಿ.ಜಿ.ಸುಬ್ಬಾಪುರಮಠ, ಸುಧೀರ್‌ಕುಮಾರ್ ಬೆಂಕಿ, ವಿಕಾಸ್ ಲಮಾಣಿ, ಸುನೀಲ್ ಸವದಿ, ಪಿಎಸ್‌ಐಗಳಾದ ಭಾರತಿ ತಳವಾರ, ಜಿ.ಟಿ.ಜಕ್ಕಲಿ, ರಾಜೇಶ್ ಬಟಕುರ್ಕಿ, ರೇಣುಕಾ ಮುಂಡೆವಾಡಗಿ, ಶರಣಮ್ಮ ಕವಲೂರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

ಮುಂದಿನ ಸಿಎಂ ಬೊಮ್ಮಾಯಿಯವರೇ: ಹಾಲಪ್ಪ ಆಚಾರ್

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮುಂದಿನ ಚುನಾವಣೆಗೆ ಬೊಮ್ಮಾಯಿಯವರ ನೇತೃತ್ವದಲ್ಲೇ ಬಿಜೆಪಿ ಅಣಿಯಾಗುತ್ತೆ. ಬಿಜೆಪಿಯಿಂದ ಅವರೇ ಮುಂದಿನ ಸಿಎಂ ಅಭ್ಯರ್ಥಿ. ಅದರಲ್ಲಿ ತಪ್ಪೇನಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೊಮ್ಮಾಯಿಯವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿದ್ದು ಸಿಂದಗಿಯಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ. ಹಾನಗಲ್‌ನಲ್ಲೂ ಬಿಜೆಪಿ ಅಭ್ಯರ್ಥಿ ಪರ ಉತ್ತಮ ಅಭಿಪ್ರಾಯ ಇದೆ ಎಂದರು.

ಬೆಲೆ ಏರಿಕೆ ಕುರಿತು ಡಿಕೆಶಿ ಸೇರಿದಂತೆ ಪ್ರತಿಪಕ್ಷಗಳ ಮುಖಂಡರ ಆರೋಪ ಕುರಿತಾಗಿ ಮಾತನಾಡಿದ ಅವರು ಡಿಕೆಶಿ ಮತ್ತು ಪ್ರತಿಪಕ್ಷಗಳ ಮುಖಂಡರು ಮೊದಲಿನಿಂದಲೂ ಬಿಜೆಪಿ ಬಗ್ಗೆ ಭ್ರಮೆ ಹೊಂದಿದ್ದಾರೆ. ರಾಜ್ಯದ ಮತದಾರರು ಬುದ್ಧಿವಂತರಿದ್ದಾರೆ. ಅವರೇ ತಕ್ಕ ಉತ್ತರ ನೀಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.

ಪೆಟ್ರೋಲ್, ಡೀಸೆಲ್ ಸೇರಿಸಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದನ್ನು ಒಪ್ಪಿಕೊಳ್ಳುತ್ತೇವೆ. ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವುದಕ್ಕೆ ವಿಷಾದಿಸುತ್ತೇವೆ. ಆದರೆ ಇದನ್ನು ನಮ್ಮ ಸರಕಾರ ಜನರಿಗೆ ಹೊರೆ ಆಗಲಿ ಎಂದು ಮಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆ ಅನುಸರಿಸಿ ಇಂಥ ತೀರ್ಮಾನಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿ ಬಂದೊದಗಿದೆ. ಶೀಘ್ರವೇ ಎಲ್ಲ ಸರಿ ಹೋಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು ರಾಜ್ಯದೆಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದ ಅವರು, ಪುನೀತ್ ಸಾವು ರಾಜ್ಯಕ್ಕೆ ದಿಗ್ಭ್ರಮೆ ಮೂಡಿಸಿದೆ. ಆದರೂ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇದೆ. ಕೋವಿಡ್ ಕಾರಣದಿಂದ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಪುನೀತ್ ನೋಡಿಕೊಳ್ಳುತ್ತಿದ್ದ ಅನಾಥಾಶ್ರಮಗಳ ದತ್ತು ತೆಗೆದುಕೊಳ್ಳುವ ಕುರಿತು ಪರಿಪೂರ್ಣ ಮಾಹಿತಿ ಪಡೆದು ನಂತರ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ಬಿ.ಫೌಜಿಯಾ ತರುನ್ನೀಮ್ ಇತರರು ಇದ್ದರು.

ಈರೇಶ ಇತಲಿ ನಿಧನ

0

ಗಂಗಾವತಿ ನ.01:

ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಈರೇಶ್ ಇತಲಿ(49) ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

(ನಿವೃತ್ತ ತಹಸೀಲ್ದಾರ ಶಿವಪ್ಪ ಗದಗ ಅವರ ಪುತ್ರಿ ಶ್ರೀಮತಿ ವಿಜಯಲಕ್ಷ್ಮೀಯವರ ಪತಿ)

ಮೂಲತಃ ಬೆಂಗಳೂರಿನವರಾದ ಇವರು ಗಂಗಾವತಿಯಲ್ಲಿ ನೆಲೆಸಿದ್ದರು.

ಮೃತರು,ತಾಯಿ,ಪತ್ನಿ,ಇಬ್ಬರು ಪುತ್ರರು, ಸಹೋದರರು,ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಧ್ಯಾಹ್ನ 2 ಗಂಟೆಗೆ ಗಂಗಾವತಿಯ ಹಿರೇಜಂತಕಲ್ ರುದ್ರಭೂಮಿಯಲ್ಲಿ ಜರುಗಲಿದೆ.

ಗೊಂದಲ ಸೃಷ್ಟಿಸಿದ ಶಿಶುವಿನ ಶವ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ಶಿಶುವಿನ ಶವ ಇರುವುದನ್ನು ಕೆಲ ಸ್ಥಳೀಯರು ಪತ್ತೆ ಮಾಡಿ ಸಿಬ್ಬಂದಿ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ.

ಜನರ ಕಣ್ಣಿಗೆ ಬಿದ್ದಂತೆ ಶಿಶುವಿನ ಶವ ರಟ್ಟಿನ ಬಾಕ್ಸ್‌ನಲ್ಲಿ ಇದ್ದದ್ದು ನಿಜವಾದರೂ ಇದಕ್ಕೆ ಕಾರಣ ಆಸ್ಪತ್ರೆಯ ಸಿಬ್ಬಂದಿಯಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಕುರಿತು ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಶಾಂತ್ ಬಾಬು ಅವರು, ಕುಷ್ಟಗಿಯಿಂದ ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಕೇಸ್ ದಾಖಲಾಗಿತ್ತು. ಸಹಜ ಹೆರಿಗೆ ಮೂಲಕ ಶಿಶು ತೆಗೆಯಿತಾದರೂ ಅದು ಹೊಟ್ಟೆಯಲ್ಲಿ ಅಸು ನೀಗಿತ್ತು. ಹೆತ್ತವರ ಸುಪರ್ದಿಗೆ ಶಿಶುವನ್ನು ಒಪ್ಪಿಸಲಾಗಿದ್ದು, ವಾಹನ ತರಲು ಹೋಗುವ ವೇಳೆ ಶಿಶುವನ್ನು ರಟ್ಟಿನ ಬಾಕ್ಸ್‌ನಲ್ಲಿಟ್ಟು ತೆರಳಿದ್ದಾರೆ. ಕೆಲ‌ ನಿಮಿಷಗಳ ಬಳಿಕ ಹೆತ್ತವರೇ ಶಿಶುವಿನ ಶವವನ್ನ ಒಯ್ದಿದ್ದಾರೆ. ಅಷ್ಟರಲ್ಲಿಯೇ ಕೆಲವರು ರಟ್ಟಿನ ಬಾಕ್ಸ್‌ನಲ್ಲಿ ಶಿಶುವಿನ ಶವ ಕಂಡು ಫೋಟೋ, ವಿಡಿಯೋ ತೆಗೆದು ಆಸ್ಪತ್ರೆ ಹಾಗೂ ಇಲ್ಲಿನ ಸಿಬ್ಬಂದಿ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ ಎಂದರು.

ಪುನೀತ್ ಸಿನಿಮಾದ ಹಾಡು ಹೇಳಿ ಸಂತಾಪ ಸೂಚಿಸಿದ ಪಾಕಿಸ್ತಾನ ಅಭಿಮಾನಿ? ಕಣ್ಣೀರಲ್ಲಿ ಕರುನಾಡು

ಯುವರತ್ನನ ಅಂತಿಮ ದರ್ಶನಕ್ಕೆ ಜನಸಾಗರ

-ಮಗುವಂತಿದ್ದ ರಾಜರತ್ನನ ಅಗಲಿಕೆ ಸಹಿಸದೇ ಬಿಕ್ಕಿ ಬಿಕ್ಕಿ ಅತ್ತ ಚಿಣ್ಣರು

ಬಸವರಾಜ ಕರುಗಲ್.
ವಿಜಯಸಾಕ್ಷಿ ವಿಶೇಷ ಸುದ್ದಿ, ಬೆಂಗಳೂರು;

ಅಕ್ಟೋಬರ್ 29ರಂದು ಕರುನಾಡಲ್ಲಿ “ಪುನೀತ್ ಸಾವು” ಎಂಬ ಬರಸಿಡಿಲು ಶುಕ್ರವಾರವೇ ಹಲವು‌ ಜೀವಗಳನ್ನ ಕಸಿದಿತ್ತು. ಆ ಬರಸಿಡಿಲಿನ‌ ಕರಾಳ ಛಾಯೆ ಇಂದೂ ಸಹ ಮುಂದಯವರಿದಿದ್ದು ನಾಡಿನ‌ ವಿವಿಧ ಭಾಗಗಳಲ್ಲಿ ಅಪ್ಪು ಸಾವನ್ನಪ್ಪಿದ ಸುದ್ದಿ ಅರಗಿಸಿಕೊಳ್ಳದ ಹಲವು ಅಭಿಮಾನಿ ದೇವರುಗಳು ಪ್ರಾಣ ತೆತ್ತಿದ್ದಾರೆ.

ಅಗಲಿದ ಅಪ್ಪುವಿನ ಅಂತಿಮ ದರ್ಶನಕ್ಕೆ ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಜನಸಾಗರವೇ ಸೇರಿತ್ತು. ಇನ್ನೆಂದು ಬಾರದ ಮಗುವಿನ ಹೃದಯದ ಪುನೀತ್‌ನನ್ನು ನೆನೆದು ಕೂಗುತ್ತಿದ್ದ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರಿಗೆ ಮುಂದೇನು? ಎಂಬುದೇ ತೋಚದಂತಾಗಿ ದಿಗ್ಭ್ರಾಂತರಾಗಿದ್ದರು.

ಭಾರತೀಯ ಚಿತ್ರರಂಗದ ದಂಡು
ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆಯಲು ಭಾರತದ ವಿವಿಧ ಚಿತ್ರರಂಗಗಳ ಗಣ್ಯರ ದಂಡು ಹರಿದು ಬಂದಿತ್ತು.

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್, ಶ್ರೀಕಾಂತ್, ಅಲ್ಲು ಅರ್ಜುನ್, ಪ್ರಭುದೇವ ಸೇರಿದಂತೆ ಹಲವು ಸ್ಟಾರ್‌ಗಳು, ರಾಜಕಾರಣಿಗಳು, ಉದ್ಯಮಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಹಾಡಿನ ಮೂಲಕ ಪಾಕ್ ಅಭಿಮಾನಿ ಶ್ರದ್ಧಾಂಜಲಿ?
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆ ಕರುನಾಡು ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರಗಳಲ್ಲಿ ನೋವನ್ನುಂಟು ಮಾಡಿದೆ. ಜಾಗತಿಕ ಸುದ್ದಿ ವಾಹಿನಿಗಳಲ್ಲೂ ಇವತ್ತು ಪುನೀತ್ ನಿಧನದ ಸುದ್ದಿ ಪ್ರಸಾರವಾಗಿದೆ.

ಪಾಕಿಸ್ತಾನ ಮೂಲದ ಲಾಹೋರ್‌ನ ಪುನೀತ್ ಅಭಿಮಾನಿಯೊಬ್ಬರು ಬೊಂಬೆ ಹೇಳುತೈತೆ ಹಾಗೂ ನಿನ್ನಿಂದಲೇ… ನಿನ್ನಿಂದಲೇ ಹಾಡು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಇದು 2018ರ ವಿಡಿಯೊ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ-ಧೃತಿ

ಪುನೀತ್ ಅವರ ಮೊದಲ ಮಗಳು ಧೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು ತಂದೆಯ ಸಾವಿನ ವಿಷಯವನ್ನು ತಡವಾಗಿ ತಿಳಿಸಿದ್ದರಿಂದ ಧೃತಿ ವಿಮಾನದ ಮೂಲಕ ಶನಿವಾರ ಸಂಜೆ ಬೆಂಗಳೂರು ತಲುಪಿ ಸದಾಶಿವನಗರದ ಮನೆಗೆ ಹೋಗಿ ಅಪ್ಪನನ್ನ ಹುಡುಕಾಡಿ, ಆನಂತರ ಪಾರ್ಥಿವ ಶರೀರ ಇರುವ ಸ್ಟೇಡಿಯಂಗೆ ಬಂದು ಅಪ್ಪನ ಅಂತಿಮ ದರ್ಶನ ಪಡೆದು ಬಿಕ್ಕಿ‌ಬಿಕ್ಕಿ ಅತ್ತರು. ದೊಡ್ಡಪ್ಪ ಶಿವಣ್ಣ ಧೃತಿಯನ್ನು ಸಂತೈಸಲು ಹರಸಾಹಸ ಪಟ್ಟರು. ತಮ್ಮನ ಅಗಲಿಕೆ ನೆನೆದು ಇಡೀ ದಿನ ಶಿವಣ್ಣ ಸಹ ಕಣ್ಣೀರು ಸುರಿಸಿದರು.

ಪುನೀತ್ ಕಣ್ಮರೆಯ ಕಣ್ಣೀರಧಾರೆ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜ್ಯದ ಬಹುತೇಕ ಮನೆಗಳಲ್ಲಿ ಪುನೀತ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಾ ವೃದ್ಧರಾದಿಯಾಗಿ ಚಿಣ್ಣರು ಸಹ ಬಿಕ್ಕಳಿಸಿ ಸತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬರೆದುಕೊಂಡಿದ್ದಾರೆ. ಪುನೀತ್ ಕೇವಲ ಯುವಕರ ಕಣ್ಮಣಿ ಮಾತ್ರವಲ್ಲ, ಪುಟ್ಟ ಕಂದಮ್ಮಗಳ ನೆಚ್ಚಿನ ತಾರೆಯೂ ಆಗಿದ್ದರು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ.

ಪ್ರಾಣತ್ಯಾಗ ಮಾಡಿದ ಅಭಿಮಾನಿಗಳು
ಪುನೀತ್ ಅಗಲಿಕೆಯನ್ನು ಸಹಿಸಿಕೊಳ್ಳದೇ ಹಲವರು ಆತ್ಮಹತ್ಯೆಗೆ ಯತ್ನಿಸಿದ್ದರು. ಹೊಸಪೇಟೆಯ ಅಭಿಮಾನಿಯೊಬ್ಬ ಕಾಲುವೆಗೆ ಹಾರಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ನಿಂಗಾಪುರದ ಅಭಿಮಾನಿ ಜ್ಞಾನಮೂರ್ತಿ ಪುನೀತ್ ಸಾವಿನ ಸುದ್ದಿ ಕೇಳಿ ಶುಕ್ರವಾರವೇ ಅಸ್ವಸ್ಥರಾಗಿದ್ದರು. ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಜ್ಞಾನಮೂರ್ತಿ ಶನಿವಾರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು.


ಹೆತ್ತವರ ಪಕ್ಕವೇ ಅಂತ್ಯಕ್ರಿಯೆ
ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸುವ ಸಂಬಂಧ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಸಮಾಧಿ ನಡುವೆ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಪುನೀತ್ ರಾಜಕುಮಾರ್ ಅವರ ಅಪ್ಪ ಅಮ್ಮನ ಬಳಿ ಪುನೀತ್ ರಾಜಕುಮಾರ್ ಅವರು ಮಲಗಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಬೇಕಾಗುವ ಅಗತ್ಯ ಜಾಗವನ್ನು ಪಡೆದು ಎಲ್ಲ ವ್ಯವಸ್ಥೆ ನೋಡಿಕೊಳ್ಳುವಂತೆ ವಾರ್ತಾ ಇಲಾಖೆಗೆ ಸರ್ಕಾರ ಸೂಚಿಸಿದೆ.

ಸರ್ಕಾರಿ ಗೌರವ:
ಪುನೀತ್ ರಾಜಕುಮಾರ್ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದಲ್ಲಿ ‌ನಡೆಸಲೂ ಕೂಡ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗದಗ ಎಸ್ಪಿಯಾಗಿ ಶಿವಪ್ರಕಾಶ್ ದೇವರಾಜು

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಒಂದೂವರೇ‌ ವರ್ಷಗಳ ಕಾಲ ಗದಗ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಯತೀಶ್ ಎನ್ ಅವರು ಮಂಡ್ಯ ಜಿಲ್ಲೆಗೆ‌ ವರ್ಗಾವಣೆ ಆಗಿದ್ದಾರೆ.

ಗದಗ ಜಿಲ್ಲೆಗೆ ನೂತನ ಎಸ್ಪಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಆಗಮಿಸಲಿದ್ದಾರೆ.

ಶಿವಪ್ರಕಾಶ್ ದೇವರಾಜು ಅವರ 2014 ರ ಕೇಡರ್‌ನ ಐಪಿಎಸ್ ಅಧಿಕಾರಿ ಆಗಿದ್ದಾರೆ.

ಗದಗ ಜಿಲ್ಲೆಯಲ್ಲಿ ಜೆಂಟಲ್ ಮನ್ ಎಂದೆ ಖ್ಯಾತಿ ಗಳಿಸಿದ್ದ ಎಸ್ಪಿ ಯತೀಶ್ ಎನ್ ಅವರು ಲಾಕ್ ಡೌನ್ ವೇಳೆ ದಕ್ಷತೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು.

error: Content is protected !!