Home Blog Page 3288

ಈರೇಶ ಇತಲಿ ನಿಧನ

0

ಗಂಗಾವತಿ ನ.01:

ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಈರೇಶ್ ಇತಲಿ(49) ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

(ನಿವೃತ್ತ ತಹಸೀಲ್ದಾರ ಶಿವಪ್ಪ ಗದಗ ಅವರ ಪುತ್ರಿ ಶ್ರೀಮತಿ ವಿಜಯಲಕ್ಷ್ಮೀಯವರ ಪತಿ)

ಮೂಲತಃ ಬೆಂಗಳೂರಿನವರಾದ ಇವರು ಗಂಗಾವತಿಯಲ್ಲಿ ನೆಲೆಸಿದ್ದರು.

ಮೃತರು,ತಾಯಿ,ಪತ್ನಿ,ಇಬ್ಬರು ಪುತ್ರರು, ಸಹೋದರರು,ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಧ್ಯಾಹ್ನ 2 ಗಂಟೆಗೆ ಗಂಗಾವತಿಯ ಹಿರೇಜಂತಕಲ್ ರುದ್ರಭೂಮಿಯಲ್ಲಿ ಜರುಗಲಿದೆ.

ಗೊಂದಲ ಸೃಷ್ಟಿಸಿದ ಶಿಶುವಿನ ಶವ!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ಶಿಶುವಿನ ಶವ ಇರುವುದನ್ನು ಕೆಲ ಸ್ಥಳೀಯರು ಪತ್ತೆ ಮಾಡಿ ಸಿಬ್ಬಂದಿ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ.

ಜನರ ಕಣ್ಣಿಗೆ ಬಿದ್ದಂತೆ ಶಿಶುವಿನ ಶವ ರಟ್ಟಿನ ಬಾಕ್ಸ್‌ನಲ್ಲಿ ಇದ್ದದ್ದು ನಿಜವಾದರೂ ಇದಕ್ಕೆ ಕಾರಣ ಆಸ್ಪತ್ರೆಯ ಸಿಬ್ಬಂದಿಯಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಕುರಿತು ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಶಾಂತ್ ಬಾಬು ಅವರು, ಕುಷ್ಟಗಿಯಿಂದ ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಕೇಸ್ ದಾಖಲಾಗಿತ್ತು. ಸಹಜ ಹೆರಿಗೆ ಮೂಲಕ ಶಿಶು ತೆಗೆಯಿತಾದರೂ ಅದು ಹೊಟ್ಟೆಯಲ್ಲಿ ಅಸು ನೀಗಿತ್ತು. ಹೆತ್ತವರ ಸುಪರ್ದಿಗೆ ಶಿಶುವನ್ನು ಒಪ್ಪಿಸಲಾಗಿದ್ದು, ವಾಹನ ತರಲು ಹೋಗುವ ವೇಳೆ ಶಿಶುವನ್ನು ರಟ್ಟಿನ ಬಾಕ್ಸ್‌ನಲ್ಲಿಟ್ಟು ತೆರಳಿದ್ದಾರೆ. ಕೆಲ‌ ನಿಮಿಷಗಳ ಬಳಿಕ ಹೆತ್ತವರೇ ಶಿಶುವಿನ ಶವವನ್ನ ಒಯ್ದಿದ್ದಾರೆ. ಅಷ್ಟರಲ್ಲಿಯೇ ಕೆಲವರು ರಟ್ಟಿನ ಬಾಕ್ಸ್‌ನಲ್ಲಿ ಶಿಶುವಿನ ಶವ ಕಂಡು ಫೋಟೋ, ವಿಡಿಯೋ ತೆಗೆದು ಆಸ್ಪತ್ರೆ ಹಾಗೂ ಇಲ್ಲಿನ ಸಿಬ್ಬಂದಿ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ ಎಂದರು.

ಪುನೀತ್ ಸಿನಿಮಾದ ಹಾಡು ಹೇಳಿ ಸಂತಾಪ ಸೂಚಿಸಿದ ಪಾಕಿಸ್ತಾನ ಅಭಿಮಾನಿ? ಕಣ್ಣೀರಲ್ಲಿ ಕರುನಾಡು

ಯುವರತ್ನನ ಅಂತಿಮ ದರ್ಶನಕ್ಕೆ ಜನಸಾಗರ

-ಮಗುವಂತಿದ್ದ ರಾಜರತ್ನನ ಅಗಲಿಕೆ ಸಹಿಸದೇ ಬಿಕ್ಕಿ ಬಿಕ್ಕಿ ಅತ್ತ ಚಿಣ್ಣರು

ಬಸವರಾಜ ಕರುಗಲ್.
ವಿಜಯಸಾಕ್ಷಿ ವಿಶೇಷ ಸುದ್ದಿ, ಬೆಂಗಳೂರು;

ಅಕ್ಟೋಬರ್ 29ರಂದು ಕರುನಾಡಲ್ಲಿ “ಪುನೀತ್ ಸಾವು” ಎಂಬ ಬರಸಿಡಿಲು ಶುಕ್ರವಾರವೇ ಹಲವು‌ ಜೀವಗಳನ್ನ ಕಸಿದಿತ್ತು. ಆ ಬರಸಿಡಿಲಿನ‌ ಕರಾಳ ಛಾಯೆ ಇಂದೂ ಸಹ ಮುಂದಯವರಿದಿದ್ದು ನಾಡಿನ‌ ವಿವಿಧ ಭಾಗಗಳಲ್ಲಿ ಅಪ್ಪು ಸಾವನ್ನಪ್ಪಿದ ಸುದ್ದಿ ಅರಗಿಸಿಕೊಳ್ಳದ ಹಲವು ಅಭಿಮಾನಿ ದೇವರುಗಳು ಪ್ರಾಣ ತೆತ್ತಿದ್ದಾರೆ.

ಅಗಲಿದ ಅಪ್ಪುವಿನ ಅಂತಿಮ ದರ್ಶನಕ್ಕೆ ಇಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಜನಸಾಗರವೇ ಸೇರಿತ್ತು. ಇನ್ನೆಂದು ಬಾರದ ಮಗುವಿನ ಹೃದಯದ ಪುನೀತ್‌ನನ್ನು ನೆನೆದು ಕೂಗುತ್ತಿದ್ದ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರಿಗೆ ಮುಂದೇನು? ಎಂಬುದೇ ತೋಚದಂತಾಗಿ ದಿಗ್ಭ್ರಾಂತರಾಗಿದ್ದರು.

ಭಾರತೀಯ ಚಿತ್ರರಂಗದ ದಂಡು
ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆಯಲು ಭಾರತದ ವಿವಿಧ ಚಿತ್ರರಂಗಗಳ ಗಣ್ಯರ ದಂಡು ಹರಿದು ಬಂದಿತ್ತು.

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್, ಶ್ರೀಕಾಂತ್, ಅಲ್ಲು ಅರ್ಜುನ್, ಪ್ರಭುದೇವ ಸೇರಿದಂತೆ ಹಲವು ಸ್ಟಾರ್‌ಗಳು, ರಾಜಕಾರಣಿಗಳು, ಉದ್ಯಮಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಹಾಡಿನ ಮೂಲಕ ಪಾಕ್ ಅಭಿಮಾನಿ ಶ್ರದ್ಧಾಂಜಲಿ?
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆ ಕರುನಾಡು ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರಗಳಲ್ಲಿ ನೋವನ್ನುಂಟು ಮಾಡಿದೆ. ಜಾಗತಿಕ ಸುದ್ದಿ ವಾಹಿನಿಗಳಲ್ಲೂ ಇವತ್ತು ಪುನೀತ್ ನಿಧನದ ಸುದ್ದಿ ಪ್ರಸಾರವಾಗಿದೆ.

ಪಾಕಿಸ್ತಾನ ಮೂಲದ ಲಾಹೋರ್‌ನ ಪುನೀತ್ ಅಭಿಮಾನಿಯೊಬ್ಬರು ಬೊಂಬೆ ಹೇಳುತೈತೆ ಹಾಗೂ ನಿನ್ನಿಂದಲೇ… ನಿನ್ನಿಂದಲೇ ಹಾಡು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಇದು 2018ರ ವಿಡಿಯೊ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ-ಧೃತಿ

ಪುನೀತ್ ಅವರ ಮೊದಲ ಮಗಳು ಧೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು ತಂದೆಯ ಸಾವಿನ ವಿಷಯವನ್ನು ತಡವಾಗಿ ತಿಳಿಸಿದ್ದರಿಂದ ಧೃತಿ ವಿಮಾನದ ಮೂಲಕ ಶನಿವಾರ ಸಂಜೆ ಬೆಂಗಳೂರು ತಲುಪಿ ಸದಾಶಿವನಗರದ ಮನೆಗೆ ಹೋಗಿ ಅಪ್ಪನನ್ನ ಹುಡುಕಾಡಿ, ಆನಂತರ ಪಾರ್ಥಿವ ಶರೀರ ಇರುವ ಸ್ಟೇಡಿಯಂಗೆ ಬಂದು ಅಪ್ಪನ ಅಂತಿಮ ದರ್ಶನ ಪಡೆದು ಬಿಕ್ಕಿ‌ಬಿಕ್ಕಿ ಅತ್ತರು. ದೊಡ್ಡಪ್ಪ ಶಿವಣ್ಣ ಧೃತಿಯನ್ನು ಸಂತೈಸಲು ಹರಸಾಹಸ ಪಟ್ಟರು. ತಮ್ಮನ ಅಗಲಿಕೆ ನೆನೆದು ಇಡೀ ದಿನ ಶಿವಣ್ಣ ಸಹ ಕಣ್ಣೀರು ಸುರಿಸಿದರು.

ಪುನೀತ್ ಕಣ್ಮರೆಯ ಕಣ್ಣೀರಧಾರೆ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜ್ಯದ ಬಹುತೇಕ ಮನೆಗಳಲ್ಲಿ ಪುನೀತ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಾ ವೃದ್ಧರಾದಿಯಾಗಿ ಚಿಣ್ಣರು ಸಹ ಬಿಕ್ಕಳಿಸಿ ಸತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬರೆದುಕೊಂಡಿದ್ದಾರೆ. ಪುನೀತ್ ಕೇವಲ ಯುವಕರ ಕಣ್ಮಣಿ ಮಾತ್ರವಲ್ಲ, ಪುಟ್ಟ ಕಂದಮ್ಮಗಳ ನೆಚ್ಚಿನ ತಾರೆಯೂ ಆಗಿದ್ದರು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ.

ಪ್ರಾಣತ್ಯಾಗ ಮಾಡಿದ ಅಭಿಮಾನಿಗಳು
ಪುನೀತ್ ಅಗಲಿಕೆಯನ್ನು ಸಹಿಸಿಕೊಳ್ಳದೇ ಹಲವರು ಆತ್ಮಹತ್ಯೆಗೆ ಯತ್ನಿಸಿದ್ದರು. ಹೊಸಪೇಟೆಯ ಅಭಿಮಾನಿಯೊಬ್ಬ ಕಾಲುವೆಗೆ ಹಾರಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ವರದಿಯಾಗಿದೆ. ಕೊಪ್ಪಳ ಜಿಲ್ಲೆಯ ನಿಂಗಾಪುರದ ಅಭಿಮಾನಿ ಜ್ಞಾನಮೂರ್ತಿ ಪುನೀತ್ ಸಾವಿನ ಸುದ್ದಿ ಕೇಳಿ ಶುಕ್ರವಾರವೇ ಅಸ್ವಸ್ಥರಾಗಿದ್ದರು. ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಜ್ಞಾನಮೂರ್ತಿ ಶನಿವಾರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು.


ಹೆತ್ತವರ ಪಕ್ಕವೇ ಅಂತ್ಯಕ್ರಿಯೆ
ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸುವ ಸಂಬಂಧ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಸಮಾಧಿ ನಡುವೆ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಡುವಂತೆ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಪುನೀತ್ ರಾಜಕುಮಾರ್ ಅವರ ಅಪ್ಪ ಅಮ್ಮನ ಬಳಿ ಪುನೀತ್ ರಾಜಕುಮಾರ್ ಅವರು ಮಲಗಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಬೇಕಾಗುವ ಅಗತ್ಯ ಜಾಗವನ್ನು ಪಡೆದು ಎಲ್ಲ ವ್ಯವಸ್ಥೆ ನೋಡಿಕೊಳ್ಳುವಂತೆ ವಾರ್ತಾ ಇಲಾಖೆಗೆ ಸರ್ಕಾರ ಸೂಚಿಸಿದೆ.

ಸರ್ಕಾರಿ ಗೌರವ:
ಪುನೀತ್ ರಾಜಕುಮಾರ್ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದಲ್ಲಿ ‌ನಡೆಸಲೂ ಕೂಡ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗದಗ ಎಸ್ಪಿಯಾಗಿ ಶಿವಪ್ರಕಾಶ್ ದೇವರಾಜು

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಒಂದೂವರೇ‌ ವರ್ಷಗಳ ಕಾಲ ಗದಗ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಯತೀಶ್ ಎನ್ ಅವರು ಮಂಡ್ಯ ಜಿಲ್ಲೆಗೆ‌ ವರ್ಗಾವಣೆ ಆಗಿದ್ದಾರೆ.

ಗದಗ ಜಿಲ್ಲೆಗೆ ನೂತನ ಎಸ್ಪಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಆಗಮಿಸಲಿದ್ದಾರೆ.

ಶಿವಪ್ರಕಾಶ್ ದೇವರಾಜು ಅವರ 2014 ರ ಕೇಡರ್‌ನ ಐಪಿಎಸ್ ಅಧಿಕಾರಿ ಆಗಿದ್ದಾರೆ.

ಗದಗ ಜಿಲ್ಲೆಯಲ್ಲಿ ಜೆಂಟಲ್ ಮನ್ ಎಂದೆ ಖ್ಯಾತಿ ಗಳಿಸಿದ್ದ ಎಸ್ಪಿ ಯತೀಶ್ ಎನ್ ಅವರು ಲಾಕ್ ಡೌನ್ ವೇಳೆ ದಕ್ಷತೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು.

ಓಟ ನಿಲ್ಲಿಸಿದ ಭಜರಂಗಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶುಕ್ರವಾರ ತೆರೆ ಕಂಡಿದ್ದ ಭಜರಂಗಿ-2 ಪ್ರದರ್ಶನವು ಪುನೀತ್ ಅಗಲಿಕೆಯಿಂದ ರದ್ದಾಗಿದೆ.

ಭಜರಂಗಿ-2 ನೋಡಲು ಗುರುವಾರ ರಾತ್ರಿಯಿಂದಲೇ ಚಿತ್ರಮಂದಿರವನ್ನು ಶೃಂಗರಿಸಿದ್ದ ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳು ಬೆಳಗಿನ ಪ್ರದರ್ಶನವನ್ನು ಬೇಗನೇ ಆರಂಭಿಸುವಂತೆ ಮಾಲಕರಿಗೆ ಮನವಿ ಮಾಡಿದ್ದರು. ಕ್ರೌಡ್ ಹೆಚ್ಚಾಗಿದ್ದರಿಂದ ಬೆಳಗ್ಗೆ 10 ಗಂಟೆ ಸುಮಾರಿಗೆ ಭಜರಂಗಿ ಪ್ರದರ್ಶನ ಆರಂಭಗೊಂಡಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೊದಲ ಪ್ರದರ್ಶನ ಯಶಸ್ವಿಯಾಗಿದ್ದೇನೊ ನಿಜ, ಆದರೆ ಅಷ್ಟೊತ್ತಿಗೆ ಪುನೀತ್ ರಾಜ್‌ಕುಮಾರ್ ಸ್ಥಿತಿ ಗಂಭೀರ ಎನ್ನುವ ಸುದ್ದಿ ಆತಂಕ ಸೃಷ್ಟಿಸಿತ್ತು. ಆತಂಕದ ನಡುವೆಯೇ ಎರಡು ಪ್ರದರ್ಶನ ಕಂಡ ಭಜರಂಗಿ ಮೂರನೇ ಪ್ರದರ್ಶನದ ವೇಳೆಗೆ ಆಘಾತದ ಸುದ್ದಿ ಅಧಿಕೃತವಾಗಿ ಹೊರಬಿತ್ತು. ಪರಿಣಾಮ ಭಜರಂಗಿ ತನ್ನ ಓಟ ನಿಲ್ಲಿಸಿದ. ಚಿತ್ರಮಂದಿರದ ಮಾಲಕರು ರಾಜ್ಯಾದ್ಯಂತ ಪ್ರದರ್ಶನ ಸ್ಥಗಿತಗೊಳಿಸುವ ಮೂಲಕ ಪುನೀತ್ ನೆನೆದು ಭಾವುಕರಾದರು.

ಕಾಣದಂತೆ ಮಾಯವಾದನೊ..

0

ಬಾರದೂರಿಗೆ ಪುನೀತ್ ಪಯಣ

ಸಿನಿಮಾ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದ ಅಪ್ಪು

ಥೇಟ್ ಅಪ್ಪನಂತೆ ಬಡವರ ಬಂಧುವಾಗಿದ್ದ ಲೋಹಿತ್

ಬಸವರಾಜ ಕರುಗಲ್.
ವಿಜಯಸಾಕ್ಷಿ ಸುದ್ದಿ, ಬೆಂಗಳೂರು: 2021ರ ಅಕ್ಟೋಬರ್ 29 ಕರುನಾಡಿಗೆ ದಿಗ್ಭ್ರಮೆ ಮೂಡಿಸಿದ ಮತ್ತೊಂದು ದಿನ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಠಾತ್ ಪಯಣ ಬೆಳೆಸಿದ ಕೆಟ್ಟ ದಿನ.

ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದರೂ ಸದಾ ಬಡವರ ಬಗ್ಗೆ ಕಾಳಜಿ ಹೊಂದಿದ ಚಿನ್ನದ ಹೃದಯ ಹೊಂದಿದ್ದ ಅಪ್ಪಟ ಅಪರಂಜಿ ಅಪ್ಪು.
1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನ್ಮ ತಾಳಿದ ಪುನೀತ್, ಆರು ತಿಂಗಳಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡರು.

ರಾಜ್ ದಂಪತಿಯ ಕಿರಿ ಮಗುನಾಗಿದ್ದರಿಂದ ಹೆಚ್ಚು ಪ್ರೀತಿಯಲ್ಲೇ ಬೆಳೆದರೂ ಅಮ್ಮ ಮಾತ್ರ ಕಟ್ಟು ನಿಟ್ಟು, ಶಿಸ್ತನ್ನು ಮಕ್ಕಳಲ್ಲಿ ಬೆಳೆಸಿದರು. ರಾಜ್ ತಮ್ಮ ಸಿನಿಮಾಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದುದರಿಂದ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.

ಇದುವರೆಗೂ ಸುಮಾರು 39ಕ್ಕೂ ಅಧಿಕ ಸಿನಿಮಾಗಳಲ್ಲಿ ( ಅತಿಥಿ ಪಾತ್ರಗಳನ್ನೂ ಸೇರಿಸಿ) ಅಭಿನಯಿಸಿದ್ದಾರೆ. ಇತ್ತಿಚೆಗೆ ತಮ್ಮದೇ ಪ್ರೋಡಕ್ಷನ್ ಹೌಸ್ ಆರಂಭಿಸಿ ಮಾಯಾಬಜಾರ್ ಹಾಗೂ ಫ್ರೆಂಚ್ ಬಿರಿಯಾನಿ ಎಂಬ ಎರಡು ಸಿನಿಮಾಗಳನ್ನು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಇನ್ನು ಎರಡು ಸಿನಿಮಾಗಳು ನಿರ್ಮಾಣವಾಗುವ ಹಂತದಲ್ಲಿದ್ದು, ಒಂದರಲ್ಲಿ ಅವರೇ ಅಭಿನಯಿಸಬೇಕಿತ್ತು. ಆದರೆ ವಿಧಿಯಾಟ ಅದಕ್ಕೆ ಅವಕಾಶ ನೀಡಲಿಲ್ಲ.

ಬರೀ ನಟನೆ, ನಿರ್ಮಾಣ ಮಾತ್ರವಲ್ಲದೇ, ಹಾಡುವಿಕೆಯಲ್ಲೂ ಪುನೀತ್ ಮೇಲುಗೈ ಸಾಧಿಸಿದ್ದರು. ರಾಜ್ ಹಾಗೂ ಶಿವಣ್ಣ, ರಾಘಣ್ಣ ಜೊತೆ ದೇವರ ಹಾಡುಗಳು ಸೇರಿದಂತೆ 150ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇತ್ತಿಚೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ರತ್ನನ್ ಪ್ರಪಂಚ ಸಿನಿಮಾದಲ್ಲೂ ಉತ್ತರ ಕರ್ನಾಟಕ ಭಾಷೆಯ ಗಿಚ್ ಗಿಲಿಗಿಲಿ ಹಾಡು ಅವರ ಕಂಠಸಿರಿಯಲ್ಲಿ ಮೂಡಿ ಬಂದಿದೆ.

ಬಾಲ್ಯದಲ್ಲೇ ರಾಜ್ಯ ಪ್ರಶಸ್ತಿ (ಚಲಿಸುವ ಮೋಡಗಳು) ಹಾಗೂ ರಾಷ್ಟ್ರ ಪ್ರಶಸ್ತಿ (ಬೆಟ್ಟದ ಹೂವು) ಗಳನ್ನು ಮುಡಿಗೇರಿಸಿಕೊಂಡ ರಾಜರತ್ನ ಅಪ್ಪು ಜನಪ್ರಿಯತೆಯನ್ನು ನೆತ್ತಿಗೇರಿಸಿಕೊಂಡವರಲ್ಲ. 2002ರಲ್ಲಿ ಅಪ್ಪು ಸಿನಿಮಾ ಮೂಲಕ ನಾಯಕನಟರಾಗಿ ಮತ್ತೇ ಬಣ್ಣದ ಲೋಕ ಯಾನ ಆರಂಭಿಸಿದ ಪುನೀತ್ ಹಿಂತಿರುಗಿ ನೋಡಲೇ ಇಲ್ಲ. ಪುನೀತ್ ಸಿನಿಮಾಗಳ ಸಕ್ಸಸ್ ರೇಟ್ 80%.

ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಪಟ್ಟಣದ ಜನ ಕೃಷಿ ಕಡೆ ಮುಖ ಮಾಡಿದ್ದನ್ನ ಕೇಳಿದ್ದೇವೆ. ಅದೇ ರೀತಿ ಪೃಥ್ವಿ ಸಿನಿಮಾದಲ್ಲಿ ಜಿಲ್ಲಾಧಿಕಾರಿಯಾಗಿ ನಟಿಸಿದ್ದ ಪುನೀತ್ ಅನೇಕ ಆಕಾಂಕ್ಷಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಅನೇಕರು ಪೃಥ್ವಿ ಸಿನಿಮಾ ಪುನೀತ್‌ರಂತೆ ಜಿಲ್ಕಾಧಿಕಾರಿಯಾಗಬೇಕು ಎಂದು ಹೇಳಿಕೊಂಡದ್ದು ಉಂಟು.

ಪುನೀತ್ ಸಿನಿಮಾಗಳೆಂದರೆ ಫ್ಯಾಮಿಲಿ ಆಡಿಯನ್ಸ್ ಮೂವಿ ಅನ್ನೋದರಲ್ಲಿ ಅನುಮಾನಾನೇ ಇಲ್ಲ. ಬಾಲ್ಯದಲ್ಲೇ ಐತಿಹಾಸಿಕ ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿದ್ದ ಮಾಸ್ಟರ್ ಲೋಹಿತ್ ಬೆಟ್ಟದ ಹೂವು ಸಿನಿಮಾ ಮೂಲಕ ಪುನೀತ್ ಆದರು. ಅಪ್ಪು ಸಿನಿಮಾ ಮೂಲಕ ನಾಯಕನಾಗಿ ಸಾಮಾಜಿಕ, ಆ್ಯಕ್ಷನ್, ಮೆಲೋಡ್ರಾಮಾ, ಸಸ್ಪೆನ್ಸ್ ಹೀಗೆ ವಿಭಿನ್ನ ಬಗೆಯ ಸಿನಿಮಾ ಜಾನರ್‌ಗಳಲ್ಲಿ ನಟಿಸಿರುವ ಪುನೀತ್ ಸದಾ ನಿರ್ಮಾಪಕರ ಹಿತ ಕಾಯುವ ನಟರಲ್ಲೊಬ್ಬರಾಗಿದ್ದರು.

ತ್ರಿಮೂರ್ತಿಗಳ ಸಂಗಮ:
ರಾಜ್ ಬದುಕಿದ್ದಾಗಲೇ ರಾಜ್ ಹಾಗೂ ಪುತ್ರರು ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಬಯಕೆ ಮೊದಲಿನಿಂದಲೂ ಇತ್ತಾದರೂ ಅದು ನನಸಾಗಲಿಲ್ಲ. ಇತ್ತಿಚೆಗೆ ಶಿವಣ್ಣ ಹಾಗೂ ಪುನೀತ್ ಅಭಿನಯದ ಸಿನಿಮಾ ಫೈನಲ್ ಆಗಿತ್ತಾದರೂ ಸೆಟ್ಟೇರಲೇ ಇಲ್ಲ.
ರಾಜಣ್ಣ-ಶಿವಣ್ಣ-ಪುನೀತ್ ಒಟ್ಟಿಗೆ ಅಭಿನಯಿಸಿದ್ದ ಸಿನಿಮಾ ಅಂದ್ರೆ ಅದು 1988ರಲ್ಲಿ ತೆರೆ‌ಕಂಡ ‘ಶಿವ ಮೆಚ್ಚಿದ ಕಣ್ಣಪ್ಪ’.

ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ:
ಪುನೀತ್ ಓದಿದ್ದು 10ನೇ ತರಗತಿಯಾದರೂ ನಾಯಕರಾಗಿ ಪರಿಚಯವಾದ ನಂತರ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿತರು. ಇಂದು ಐಎಎಸ್/ಕೆಎಎಸ್ ಮಾಡಲು ಸಾಕಷ್ಟು ಸ್ಪರ್ಧೆ ಇರುವುದರಿಂದ ತಂದೆಯ ಹೆಸರು, ನೆನಪಿನಲ್ಲಿ ತರಬೇತಿ ಸಂಸ್ಥೆಯನ್ನು ಪುನೀತ್ ಆರಂಭಿಸಿದ್ದರು. ಇತ್ತಿಚೆಗೆ ಶೈಕ್ಷಣಿಕ ಆ್ಯಪ್‌ವೊಂದನ್ನ ಕನ್ನಡಿಗರಿಗೆ ಪರಿಚಯಿಸಿದ್ದ ಪುನೀತ್ ಸಿಎಂ ಬಸವರಾಜ ಬೊಮ್ಮಾಯಿ ಅದನ್ನ ಲೋಕಾರ್ಪಣೆ ಮಾಡಿದ್ದರು.

ತಮಿಳು ಸಿನಿಮಾ ಮೇಕಿಂಗ್‌‌ನ್ನ ಬಹುವಾಗಿ ಮೆಚ್ಚುತ್ತಿದ್ದ ಪುನೀತ್ ಹುಡುಗ್ರು ಸಿನಿಮಾ ಆ ರೇಂಜ್‌ನಲ್ಲಿತ್ತು ಎಂದು ಹಲವು ಕಡೆ ಹೇಳಿಕೊಂಡಿದ್ದರು.‌ ಆ್ಯಕ್ಷನ್ ಬಗ್ಗೆ ಒಲವಿದ್ದ ಅವರು ಇಂಗ್ಲಿಷ್ ಸಿನಿಮಾಗಳನ್ನು ಜಾಸ್ತಿ ನೋಡುತ್ತಿದ್ದರು. ತಮಿಳು, ಇಂಗ್ಲಿಷ್ ಸಿನಿಮಾಗಳನ್ನು ತಮ್ಮದೇ ಪ್ರೋಡಕ್ಷನ್ ಹೌಸ್‌ನಲ್ಲಿ ನಿರ್ಮಾಣ ಮಾಡುವ ಇಂಗಿತ ಅವರಲ್ಲಿತ್ತು.

ಬಡವರ ಬಂಧುವಾಗಿದ್ದ ರಾಜಕುಮಾರ:
ಪುನೀತ್ ಸಿರಿತನವನ್ನು ಅನುಭವಿಸಿದ್ದರೂ ತಂದೆಯಿಂದ ಬಡತನದ ಬೇಗುದಿ ಎಂಥದ್ದು ಎಂಬುದನ್ನು ಅರಿತವರು. ಹಾಗಾಗಿ ಅವರು ಯಾವುದೇ ಭಾಗಕ್ಕೆ ಚಿತ್ರೀಕರಣಕ್ಕೆ ಹೋದರೂ ಅಲ್ಲಿನ ಜನರ ಜೊತೆ ಬೆರೆಯುತ್ತಿದ್ದರು. ಬಡವ-ಬಲ್ಲಿದ ಎಂಬ ಬೇಧವಿಲ್ಲದೇ ಅವರೊಟ್ಟಿಗೆ ಊಟ ಮಾಡುತ್ತಿದ್ದರು. ಅಲ್ಲಿನ ಜನಜೀವನ ಅರಿತು, ಅಲ್ಲಿರುವ ಸಮಸ್ಯೆಗಳನ್ನು ಆಲಿಸಿ ಸಹಾಯ ಹಸ್ತ ಚಾಚುವ ನಿಷ್ಕಲ್ಮಶ ಮನಸಿನ ಯುವರತ್ನ.

ಕೊಪ್ಪಳ ಜಿಲ್ಲೆಯ ಗಂಗಾವತಿ ಸುತ್ತಮುತ್ತ ಅವರ ಅಭಿನಯದ ಜೇಮ್ಸ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದಾಗ ಪೊಲೀಸರ ಮನವಿ ಮೇರೆಗೆ ಏನನ್ನೂ ನಿರೀಕ್ಷೆ ಮಾಡದೇ ಕೊರೊಬಾ ಕುರಿತು ಜಾಗೃತಿ ಮೂಡಿಸಿದ್ದರು. ಗಂಗಾವತಿ ತಾಲೂಕಿನ ಮಲ್ಲಾಪುರ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ನಾಡಿನ ಅನೇಕ ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆಗಳಿಗೆ ಅವರ ಕೊಡುಗೆ ಅನನ್ಯ. ಆದರೆ ಎಲ್ಲೂ ಈ ಬಗ್ಗೆ ಅವರು ಹೇಳಿಕೊಂಡಿಲ್ಲ.

ಬಾರದೂರಿಗೆ ಪಯಣ ಬೆಳೆಸಿದ ಪುನೀತ್ ಆಕಾಶದಲ್ಲಿ‌ ಮಿನುಗುತ್ತಿರುವ ನಕ್ಷತ್ರಗಳಲ್ಲಿ ಒಂದಾಗಿದ್ದಾರೆ. ಅವರ ಅಗಲಿಕೆ ನಿಜಕ್ಕೂ ಅರಗಿಸಿಕೊಳ್ಳುವಂಥಲ್ಲ. ಮತ್ತೊಂದು ಜನ್ಮವಿದ್ದರೆ ನೀವು ಮತ್ತೇ ಕರುನಾಡಿನ ಪವರ್ ಸ್ಟಾರ್ ಆಗಿಯೇ ಹುಟ್ಟಿ ಬನ್ನಿ ಪುನೀತ್..


ಬಾಲ ನಟನಾಗಿ ಪುನೀತ್ ಸಿನಿಮಾಗಳು
1.ಪ್ರೇಮದ ಕಾಣಿಕೆ
2.ಭಾಗ್ಯವಂತ
3.ಎರಡು ನಕ್ಷತ್ರಗಳು
4.ಬೆಟ್ಟದ ಹೂವು
5.ಚಲಿಸುವ ಮೋಡಗಳು
6.ಶಿವ ಮೆಚ್ಚಿದ ಕಣ್ಣಪ್ಪ
7.ಪರಶುರಾಮ್
8.ಯಾರಿವನು
9.ಭಕ್ತ ಪ್ರಹ್ಲಾದ
10.ವಸಂತ ಗೀತ

ನಾಯಕನಟನಾಗಿ ಪುನೀತ್ ಸಿನಿಮಾಗಳು

1.ಅಪ್ಪು
2.ಅಭಿ

  1. ವೀರ ಕನ್ನಡಿಗ
    4.ಮೌರ್ಯ
    5.ಆಕಾಶ್
    6.ನಮ್ಮ ಬಸವ
  2. ಅಜಯ್
    8.ಅರಸು
    8.ಮಿಲನ
    10.ಬಿಂದಾಸ್
    11.ವಂಶಿ
  3. ರಾಜ್ ದ ಶೋಮ್ಯಾನ್
    13.ಪೃಥ್ವಿ
    14.ರಾಮ್
    15.ಜಾಕಿ
    16.ಹುಡುಗರು
    17.ಪರಮಾತ್ಮ
    18.ಅಣ್ಣ ಬಾಂಡ್
    19.ಯಾರೇ ಕೂಗಾಡಲಿ
  4. ನಿನ್ನಿಂದಲೇ
  5. ಮೈತ್ರಿ
  6. ಪವರ್
  7. ಧೀರ ರಣ ವಿಕ್ರಮ
  8. ಚಕ್ರವ್ಯೂಹ
    25 ದೊ‍ಡ್ಮನೆ ಹುಡುಗ
    26.ರಾಜಕುಮಾರ
  9. ಅಂಜನಿ ಪುತ್ರ
  10. ನಟಸಾರ್ವಭೌಮ
  11. 29.ಯುವರತ್ನ

ಆನಂದ ಭೋವಿ ರಚಿಸಿದ ದೀಪ ಆರುವ ಹೊತ್ತು ಗಜಲ್ ಸಂಕಲನ ಬಿಡುಗಡೆ ನಾಳೆ

ವಿಜಯಸಾಕ್ಷಿ ಸುದ್ದಿ, ನರಗುಂದ;

ನರಗುಂದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರೂ ಆಗಿರುವ ಆನಂದ ಭೋವಿ ಅವರು ರಚಿಸಿರುವ “ದೀಪ ಆರುವ ಹೊತ್ತು ಎಂಬ ಗಜಲ್ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಅ.30 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಬೈರನಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಆಯೋಜಿಸಲಾಗಿದೆ.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿರಕ್ತಮಠ,‌ ಬೈರಮಹಟ್ಟಿ ಹಾಗೂ ಸಮೀರ ಪ್ರಕಾಶನ ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಾಂತಲಿಂಗ ಸ್ವಾಮಿಗಳು ವಹಿಸುವರು.

ಕಾರ್ಯಕ್ರಮದಲ್ಲಿ ದೀಪ ಆರುವ ಹೊತ್ತು ಗಜಲ್ ಸಂಕಲನವನ್ನು ಗಜಲ್ ಕವಿ ಕೆ. ಅಲ್ಲಾಗಿರಿರಾಜ್ ಬಿಡುಗಡೆ ಮಾಡುವರು.

ಮುಖ್ಯ ಅತಿಥಿಗಳಾಗಿ ತಾ.ಪಂ.ಇಓ ಚಂದ್ರಶೇಖರ ಕುರ್ತಕೋಟಿ, ಗದಗ ಎಡಿಎಂ ಶಿಕ್ಷಣಾಧಿಕಾರಿ ಮಂಗಳಾ‌ ತಾಪಸ್ಕರ್, ಬಿಇಓ ರಾಜೇಶ್ವರಿ, ಕವಿಗಳಾದ ಆನಂದ ಬೋವಿ ಕಲಾವಿದ ಅಶೋಕ್ ಸುತಾರ, ಗಜಲ್ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವವರು.

ಈ ಕಾರ್ಯಕ್ರಮ ಯಶಸ್ವಿಗೆ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಡಳಿತ ಮಂಡಳಿ ಶುಭ ಹಾರೈಸಿದೆ.

ಫೋನ್ ಪೇ ಹ್ಯಾಕ್: ನರ್ಸ್ ಗೆ ಲಕ್ಷಾಂತರ ರೂ. ಪಂಗನಾಮ!

ವಿಜಯಸಾಕ್ಷಿ ಸುದ್ದಿ, ಗದಗ:

ದೇಶದಲ್ಲಿ ಡಿಜಿಟಲ್ ಇಂಡಿಯಾ ಜಾರಿಗೆ ಬಂದ ಬಳಿಕ ಆನ್‌ಲೈನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಹಣಕಾಸಿನ ವ್ಯವಹಾರ ಮಾಡಬೇಕಾದರೂ ಬ್ಯಾಂಕ್‌ಗೆ ಹೋಗದೆ ಬಹುತೇಕರು ಪೋನ್ ಪೇ, ಗೂಗಲ್ ಪೇನಂತಹ ಆಪ್‌ಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ.

ಆದರೆ, ಇಂತಹ ಆಪ್‌ಗಳನ್ನು ಬಳಸುವವರು, ಆನ್ಲೈನ್ ವ್ಯವಹಾರ ಮಾಡುವವರು ಮೋಸ ಹೋಗುತ್ತಿರುವುದು ಹೊಸತಲ್ಲ. ಇಂತಹದ್ದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಖದೀಮರು ಪೋನ್ ಪೇ ಆಪ್ ಬಳಸುತ್ತಿದ್ದ ನರ್ಸ್ ವೊಬ್ಬರ ಅಕೌಂಟ್ ಹ್ಯಾಕ್ ಮಾಡಿ ವಂಚಿಸಿದ್ದಾರೆ.

ಅಪರಿಚಿತ ವ್ಯಕ್ತಿಯೋರ್ವ ಫೋನ್ ಪೇ ಅಕೌಂಟ್ ಹ್ಯಾಕ್ ಮಾಡಿ 4.98 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಗದಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಜ್ಯೋತಿ ನಾಗರಾಜ ವಾಲಿ ಈ ಕುರಿತು ದೂರು ದಾಖಲಿಸಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಜ್ಯೋತಿ ಅವರ ಫೋನ್ ಪೇ ಹ್ಯಾಕ್ ಮಾಡಿರುವ ಖದೀಮರು, ಲಕ್ಷ್ಮೇಶ್ವರ ಎಸ್‌ಬಿಐ ಖಾತೆಯಿಂದ ಜೂ. 26ರಿಂದ ಅ. 10ರ ಅವಧಿಯಲ್ಲಿ ಹಂತ ಹಂತವಾಗಿ 4.98 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿದ್ದಾರೆ. ಇದು ಇತರ ಪೋನ್ ಪೇ ಬಳಕೆದಾರರಿಗೆ ಆತಂಕ ಮೂಡಿಸಿದೆ.

ಸಂಜೀವಿನಿ ಯೋಜನೆಯ ಮಹಿಳಾ ಕಾಯಕೋತ್ಸವಕ್ಕೆ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ನರಗುಂದ;

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಸಂಜೀವಿನಿ ಮಹಿಳಾ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಾಗಾರಕ್ಕೆ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿಮಾತನಾಡಿದ ಮುತ್ತು ರಾಯರಡ್ಡಿ, ಚಿಕ್ಕನರಗುಂದ ಗ್ರಾಮದಲ್ಲಿ ಮಹಿಳಾ ಒಕ್ಕೂಟಗಳು ಹಲವಾರು ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತರುವುದು ಖುಷಿಯ ವಿಷಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಹಲಾವಾರು ಯೋಜನೆಗಳು ಇದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿ ಆದಷ್ಟೂ ಬೇಗ ಗ್ರಾಪಂ. ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಕಸ ವಿಲೇವಾರಿಗೆ ವಾಹನ ಖರೀದಿ ಮಾಡಲಾಗುವದು. ಆ ಘಟಕದ ನಿರ್ವಹಣೆಯನ್ನು, ಸ್ವ ಸಹಾಯ ಸಂಘದ ಸದಸ್ಯರಿಗೆ ಹಸ್ತಾಂತರಿಸಲಾಗುವದು ಎಂದರು.

ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯ ಮಾಹಿತಿ ಇರುವ ಬಿತ್ತಿ ಪತ್ರಗಳನ್ನು ಸ್ವಸಹಾಯ ಸಂಘದ ಸದಸ್ಯರಿಗೆ ವಿತರಿಸಲಾಯಿತು.

ಮುಖ್ಯ ಅತಿಥಿಗಳಾದ ಜಿಲ್ಲಾ ವ್ಯವಸ್ಥಾಪಕ ಬಸವರಾಜ್ ಮೂಲಿಮನಿ ಮಾತನಾಡಿ, 2015 ರಿಂದ ಮಹಿಳಾ ಒಕ್ಕೂಟಗಳನ್ನು ರಚನೆ ಮಾಡಿ, ಈ ಒಕ್ಕೂಟಗಳು ಸುಸ್ಥಿರವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಇಂತಹ ತರಬೇತಿಗಳು ಅವಶ್ಯಕವಾಗಿದೆ, ಈ ಸಂಜೀವಿನಿ ಯೋಜನಾಂಶ ಅವಶ್ಯ ಇರುವ ತರಬೇತಿಗಳನ್ನು ಸ್ವ,ಸಹಾಯ ಸಂಘಗಳಿಗೆ ನೀಡುವುದರ ಜೊತೆಗೆ ಸಾಲ ಸೌಲಭ್ಯ, ಜೀವನೋಪಾಯ ಮಾಡಲು ಮಾರ್ಗದರ್ಶನ ನೀಡಲಾಗುವದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಲಕ್ಷ್ಮಣ ಕಂಬಳಿ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಓ ಶೈನಾಜ್ ಮುಜಾವರ್, ಕಾರ್ಯದರ್ಶಿ ಕೆಂಚಪ್ಪ, ಸಂಜೀವಿನಿ ವ್ಯವಸ್ಥಾಪಕ ಮೋಹನ್ ಕೃಷ್ಣ, ಮೇಲ್ವಿಚಾರಕ ಪ್ರಕಾಶ ಸೇರಿದಂತೆ ಹಲವಾರು ಮಹಿಳಾ ಸಂಘದ ಸದಸ್ಯರು ಗ್ರಾ.ಪಂ. ಸಿಬ್ಬಂದಿಗಳು ಇದ್ದರು.

ಪೊಲೀಸ್ ಠಾಣೆ ಸಮೀಪವೇ ಕಳ್ಳತನ: ಮೇಲ್ಛಾವಣಿ ಕಟ್ ಮಾಡಿ ಹಣ ಕದ್ದೋಯ್ದ ಖದೀಮರು

ವಿಜಯಸಾಕ್ಷಿ ಸುದ್ದಿ, ಗದಗ;

ಇಲ್ಲಿನ ಹಳೆ ಬಸ್ ನಿಲ್ದಾಣ (ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ) ಬಳಿ ಇರುವ ಬ್ಯಾಂಗಲ್ಸ್ ಅಂಗಡಿಯೊಂದರ ಮೇಲ್ಛಾವಣಿ ಶೀಟ್ ಕಟ್ ಮಾಡಿ ಖದೀಮರು ಕಳ್ಳತನ ಮಾಡಿದ್ದಾರೆ.

ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜು ಕಟಾರಿ ಎಂಬುವವರಿಗೆ ಸೇರಿದ ವಿಷ್ಣು ಬ್ಯಾಂಗಲ್ಸ್ ಸ್ಟೋರ್ಸ್’ನಲ್ಲಿದ್ದ ಸುಮಾರು 50 ಸಾವಿರ ರೂ. ಕದ್ದಿದ್ದಾರೆ.

ಅಂಗಡಿ ಮಾಲೀಕರು ನಿನ್ನೆ ರಾತ್ರಿ ಸಿ.ಸಿ ಟಿವಿ ಬಂದ್ ಮಾಡಿ ಮನೆಗೆ ಹೋಗಿದ್ದರು. ಇದು ಕಳ್ಳತನಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು, ಖದೀಮರು ಅಂಗಡಿಯಲ್ಲಿದ್ದ ಹಣವನ್ನು ಸಲೀಸಾಗಿ ಕದ್ದೋಯ್ದಿದ್ದಾರೆ.

ದುರಂತವೆಂದರೆ ಕಳ್ಳತನವಾಗಿರುವ ವಿಷ್ಣು ಬ್ಯಾಂಗಲ್ಸ್ ಅಂಗಡಿಯ ಸಮೀಪದಲ್ಲೇ ಶಹರ ಪೊಲೀಸ್ ಠಾಣೆ ಇದ್ದರೂ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!