Home Blog Page 330

ಪರೀಕ್ಷೆ ಅವಾಂತರ; ಪಿಯು ಮಂಡಳಿಯಿಂದ ಡಿಡಿಪಿಯುಗೆ ನೋಟಿಸ್

ಡಿಡಿಪಿಯು ರಾಜೂರಿಗೆ ನೋಟಿಸ್; ಭೂಪಟ ಝರಾಕ್ಸ್ ಮಾಡಿಸಿ, ಉಪನ್ಯಾಸಕರಿಂದ ಪ್ರಶ್ನೆ ಬರೆಸಿದ್ದೇವೆ ಎಂದ ಡಿಡಿಪಿಯು * ಪಿಯು ಮಂಡಳಿ‌ ಜೆಡಿ ಶೈಲಜಾ ಮಾಹಿತಿ

ವಿಜಯಸಾಕ್ಷಿ ಸುದ್ದಿ, ಗದಗ:

‘ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಇತಿಹಾಸ, ಕನ್ನಡ ವಿಷಯಗಳ ಪರೀಕ್ಷೆಗಳನ್ನು ಗದಗ ಜಿಲ್ಲೆಯಲ್ಲಿ ಯಾವ ರೀತಿ ನಡೆಸಿದ್ದೀರಿ. ಕೆಲವು ವಿಷಯಗಳ ಪ್ರಶ್ನೆಗಳು ಯಾಕೆ ಪ್ರಶ್ನೆಪತ್ರಿಕೆಯಲ್ಲಿ ಇರಲಿಲ್ಲ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಒದಗಿಸಿ ಎಂದು ಪಿಯು ಮಂಡಳಿಯ ನಿರ್ದೇಶಕಿ ಸ್ನೇಹಲತಾ ಅವರು ಸೋಮವಾರ (ಡಿ.13) ಗದಗ ಡಿಡಿಪಿಯು ಅವರಿಗೆ ಪತ್ರದ ಮೂಲಕ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.

ಡಿ.12ರಂದು ‘ವಿಜಯಸಾಕ್ಷಿ ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಕುರಿತು ‘ಪಿಯುಸಿ: ‘ಕಾಟಾಚಾರದ ಮಧ್ಯಂತರ ಪರೀಕ್ಷೆ ಬೇಕೇ? ಎಂಬ ಶೀರ್ಷಿಕೆಯಡಿ ಪ್ರಶ್ನೆಪತ್ರಿಕೆಗಳಲ್ಲಾದ ಲೋಪದೋಷ ಹಾಗೂ ಡಿಡಿಪಿಯು ರಾಜೂರು ಅವರು ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿರುವ ಕುರಿತು ಸವಿಸ್ತಾರವಾದ ಸುದ್ದಿ ಪ್ರಕಟಿಸಿತ್ತು. ಅಲ್ಲದೆ, ಈ ಬಗ್ಗೆ ಪಿಯು ಮಂಡಳಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕ(ಪರೀಕ್ಷೆ)ರ ಗಮನಕ್ಕೂ ತರಲಾಗಿತ್ತು. ಈ ಬೆನ್ನಲ್ಲೇ ಪಿಯು ಮಂಡಳಿ ಕೇಂದ್ರ ಕಚೇರಿಯಿಂದ ಡಿಡಿಪಿಯು ಅವರಿಗೆ ಪತ್ರ ಬಂದಿದೆ.

ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಹಿನ್ನೆಲೆಯಲ್ಲಿ ಡಿ.9ರಂದು ಗದಗ ಜಿಲ್ಲೆಯಲ್ಲಿ ನಡೆದ ಇತಿಹಾಸ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಭೂಪಟ ಬಂದಿರಲಿಲ್ಲ. ಕನ್ನಡ ವಿಷಯದ ಪ್ರಶ್ನೆ ನಂ.27 ಮತ್ತು 28 ಮುದ್ರಣ ಆಗಿರಲಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ವರದಿ ತರಿಸಿಕೊಂಡಿದ್ದೇವೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಕುರಿತು ಗದಗ ಡಿಡಿಪಿಯುಗೆ ಕೇಳಿದ್ದೇವೆ. ಅವರು ‘ಪರೀಕ್ಷಾ ಸಮಯದಲ್ಲಿಯೇ ಕುರ್ತಕೋಟಿಯ ಸರ್ಕಾರಿ ಕಾಲೇಜಿನಿಂದ ಭೂಪಟವನ್ನು ಝರಾಕ್ಸ್ ಮಾಡಿಸಿ ಎಲ್ಲ ಕಾಲೇಜುಗಳಿಗೂ ಕೊಟ್ಟಿದ್ದೇವೆ. ಕನ್ನಡ ಉಪನ್ಯಾಸಕರನ್ನು ಕರೆಸಿ ಪ್ರಶ್ನೆ ಪತ್ರಿಕೆಯಿಂದ ಬಿಟ್ಟು ಹೋಗಿದ್ದ 27 ಮತ್ತು 28ನೇ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಬೇರೆ ಪ್ರಶ್ನೆಗಳನ್ನು ಕೊಟ್ಟು ಪರೀಕ್ಷೆ ಬರೆಸಿದ್ದೇವೆ ಎಂದು ಪತ್ರ ಕಳುಹಿಸಿದ್ದಾರೆ ಎಂದು ಪಿಯು ಮಂಡಳಿಯ ಪರೀಕ್ಷಾಂಗದ ಜಂಟಿ ನಿರ್ದೇಶಕಿ ಶೈಲಜಾ ‘ವಿಜಯಸಾಕ್ಷಿಗೆ ತಿಳಿಸಿದರು.

ಇತಿಹಾಸ ವಿಷಯದಲ್ಲಿ ಕಣ್ಮರೆಯಾಗಿದ್ದ ಭೂಪಟ ಹಾಗೂ ಕನ್ನಡ ವಿಷಯದಲ್ಲಿ ನಾಪತ್ತೆಯಾಗಿದ್ದ ಎರಡು ಪ್ರಶ್ನೆಗಳನ್ನು ಡಿಡಿಪಿಯು ಎಚ್.ಎಸ್. ರಾಜೂರು ಅವರು ಕೇವಲ ಮೂರು ಗಂಟೆಗಳ ಪರೀಕ್ಷಾ ಅವಧಿಯಲ್ಲಿ ಪ್ರಶ್ನೆಗಳನ್ನು ಮುದ್ರಣ ಮಾಡಿಸಿ ಜಿಲ್ಲೆಯ ಎಲ್ಲ ಕಾಲೇಜುಗಳಿಗೂ ಸರಬರಾಜು ಮಾಡಲು ಸಾಧ್ಯವಿಲ್ಲ. ಕನ್ನಡ ವಿಷಯದಲ್ಲಿ ಬಿಟ್ಟು ಹೋಗಿದ್ದ ಎರಡೂ ಪ್ರಶ್ನೆ ಹಾಗೂ ಇತಿಹಾಸದ ಭೂಪಟವನ್ನು ವಾಟ್ಸ್‌ಆಪ್ ಮೂಲಕ ಶೇರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಪರೀಕ್ಷಾ ಕೊಠಡಿಗಳಲ್ಲಿ ಮೊಬೈಲ್ ನಿಷಿದ್ಧವಾಗಿದ್ದರೂ, ಪರೀಕ್ಷಾ ಪಾವಿತ್ರ್ಯ ಕಾಪಾಡಬೇಕಿರುವ ಡಿಡಿಪಿಯು ಮೊಬೈಲ್‌ಗಳ ಮೂಲಕ ಪ್ರಶ್ನೆಗಳನ್ನು ಹರಿಬಿಟ್ಟಿದ್ದೇಕೆ? ಇದು ಪ್ರಶ್ನೆ ಪತ್ರಿಕೆ ಸೋರಿಕೆ ಅಲ್ಲವೇ? ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಯ ವಿರುದ್ಧ ಕ್ರಮ ಯಾವಾಗ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭಿಸಿಲ್ಲ.

ಪ್ರಶ್ನೆಪತ್ರಿಕೆಗಳ ಮುದ್ರಣ ಎಲ್ಲಿ?

ಪ್ರತಿ ಜಿಲ್ಲೆಯ ಪ್ರಶ್ನೆ ಪತ್ರಿಕೆಗಳಲ್ಲಿ ವ್ಯತ್ಯಾಸ ಇರುವುದರಿಂದ ಪಿಯು ಮಂಡಳಿ ನಿಯಮದ ಪ್ರಕಾರ ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಮುದ್ರಣ ಮಾಡಿಸುವಂತಿಲ್ಲ. ಪ್ರಶ್ನೆಪತ್ರಿಕೆಗಳ ಮುದ್ರಣಕ್ಕೆ ಟೆಂಡರ್ ಆಗಿರುವ ಪ್ರಿಂಟಿಂಗ್ ಪ್ರೆಸ್‌ನವರಿಗೆ ಪ್ರಭಾವಿ ವ್ಯಕ್ತಿಗಳು ಆಮಿಷವೊಡ್ಡಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವಂತೆ ಮಾಡಬಹುದು. ಪರೀಕ್ಷಾ ಪಾವಿತ್ರ್ಯ ಕಾಪಾಡುವ ಹಿತದೃಷ್ಟಿಯಿಂದ ಪಕ್ಕದ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿಸಿ ತರಬೇಕು. ಆದರೆ, ಗದಗ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮುದ್ರಣ ಕಾಶಿ ಎಂದು ಖ್ಯಾತಿ ಹೊಂದಿರುವ ಗದಗದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿಸಿದ್ದಲ್ಲದೆ, ಡಿಡಿಪಿಯು ಅವರು ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ.

ಫ್ರೂಪ್ ರೀಡ್ ಮಾಡಿದ್ದು ಯಾರು?

ಪಿಯು ಮಂಡಳಿ ಕೇಂದ್ರ ಕಚೇರಿಯಿಂದ ಕಳುಹಿಸಿದ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಗಳು ಮುದ್ರಣಗೊಳ್ಳುವ ಮುನ್ನ ನೈಪುಣ್ಯ ಹೊಂದಿರುವ ಆಯಾ ವಿಷಯಗಳ ಶಿಕ್ಷಕರು, ತಜ್ಞರನ್ನೊಳಗೊಂಡ ಒಂದು ಸಮಿತಿ ರಚಿಸಬೇಕು. ಸಮಿತಿಯ ಸಂಪನ್ಮೂಲ ವ್ಯಕ್ತಿಗಳು ಪ್ರತಿ ಪ್ರಶ್ನೆಪತ್ರಿಕೆಗಳನ್ನು ಫ್ರೂಫ್ ರೀಡ್ ಮಾಡಿ ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ಅಂತಿಮವಾಗಿ ಪ್ರಶ್ನೆಪತ್ರಿಕೆಗಳನ್ನು ಮುದ್ರಣ ಮಾಡಿಸಬೇಕು. ಆದರೆ, ಗದಗ ಡಿಡಿಪಿಯು ಎಚ್.ಎಸ್.ರಾಜೂರು ಅವರ ನಿರ್ಲಕ್ಷ್ಯದಿಂದಾಗಿ ಅದ್ಯಾವುದು ನಡೆದಿಲ್ಲ ಎನ್ನಲಾಗುತ್ತಿದೆ. ಪಿಯು ಮಂಡಳಿಯ ನಿಯಮಾನುಸಾರ ಪರೀಕ್ಷೆಗಳು ನಡೆದಿದ್ದರೆ ಜಿಲ್ಲೆಯಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ.

ಜಿಲ್ಲೆಯಲ್ಲಿ ಯಾವ ರೀತಿಯ ಪರೀಕ್ಷೆ ನಡೆಸಲಾಗಿದೆ ಎಂಬುವುದರ ಕುರಿತು ತನಿಖೆ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ಬಗ್ಗೆ ಸಂಪೂರ್ಣ ವರದಿ ಕೊಡುವಂತೆ ಡಿಡಿಪಿಯುಗೆ ಕೇಳಿದ್ದೇವೆ. ಈಗಾಗಲೇ ಒಂದು ಪತ್ರ ಕೊಟ್ಟಿದ್ದು, ಪಿಯು ಮಂಡಳಿಯಿಂದ ಮತ್ತೊಂದು ಪತ್ರ ಕಳುಹಿಸುತ್ತಿದ್ದೇವೆ. ಎಲ್ಲ ಕಾಲೇಜುಗಳಿಗೂ ಭೂಪಟ, ಪ್ರಶ್ನೆಗಳನ್ನು ಸರಬರಾಜು ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸಲಾಗುವುದು. ಅಲ್ಲದೇ, ಪ್ರಶ್ನೆಪತ್ರಿಕೆ ಮುದ್ರಿಸುವುದಕ್ಕಿಂತ ಮುನ್ನ ಅವರು ಗಮನಿಸಬೇಕಿತ್ತು. ಕೇಂದ್ರ ಕಚೇರಿಯಿಂದ ಕೊಟ್ಟಿರುವ ಪ್ರಶ್ನೆಪತ್ರಿಕೆ ಮುದ್ರಣ ಮಾಡಿಸಬೇಕಿರುವುದು ಅವರ ಜವಾಬ್ದಾರಿಯಾಗಿದ್ದು, ಇದರಲ್ಲಿ ಡಿಡಿಪಿಯು ತಪ್ಪಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನೋಟಿಸ್ ಜಾರಿ ಮಾಡಲಾಗುವುದು.

ಶೈಲಜಾ, ಜಂಟಿ ನಿರ್ದೇಶಕರು (ಪರೀಕ್ಷೆ)

‘ಪಿಯು ಮಂಡಳಿ ನಿರ್ದೇಶಕರು ಮಾಹಿತಿ ಒದಗಿಸುವಂತೆ ಕೇಳಿದ್ದಾರೆ. ಏನಾಗಿದೆ ಎಂದು ಉತ್ತರ ಬರೆದು ಹೇಳುತ್ತೇನೆ ಎಂದು ಡಿಡಿಪಿಯು ಎಚ್.ಎಸ್.ರಾಜೂರು ಅವರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು.

ಉಧೋ..ಉಧೋ.. ಹುಲಿಗೆಮ್ಮ ಹಾಡು ಬಿಡುಗಡೆ//
ಹುಲಿಗೆಮ್ಮ‌ನ ಸನ್ನಿಧಾನದಲ್ಲಿ ರಾಣಾನ‌ ರಾಗ ರಂಗು!

0

-ಹುಚ್ಚೆದ್ದು ಕುಣಿದ, ದಣಿದ, ಮಣಿದ ಧ್ರುವ ಬಾಸ್ ಫ್ಯಾನ್ಸ್!

-ಮಾಂಗಲ್ಯ ಕದ್ದು ಸಿಕ್ಕು ಬಿದ್ದ ಕಳ್ಳ

ಬಸವರಾಜ ಕರುಗಲ್.
ವಿಜಯಸಾಕ್ಷಿ ವಿಶೇಷ, ಕೊಪ್ಪಳ:
ಸಿನಿಮಾ ಜಗತ್ತಿಗೆ ಮಾಯಾ ಬಜಾರ್ ಅಂತ ಯಾಕೆ‌ ಕರೀತಾರೆ ಅನ್ನೋದಕ್ಕೆ ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನಿದರ್ಶನವಾಗಿತ್ತು.

ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಸಿನಿಮಾವೊಂದರ ಹಾಡೊಂದು ಕೊಪ್ಪಳ ಜಿಲ್ಲೆಯಲ್ಲಿ ಬಿಡುಗಡೆಗೊಂಡದ್ದು, ಹಾಡನ್ನು ಬಿಡುಗಡೆ ಮಾಡಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಂದದ್ದು, ಧ್ರುವ ಬಾಸ್‌ನ್ನ ಕಣ್ತುಂಬಿಕೊಳ್ಳಲು ಬಂದು ಹಲವರು ಮೊಣಕಾಲು ಕೆತ್ತಿಸಿಕೊಂಡದ್ದು… ಇವೆಲ್ಲ ಮಾಯಾಬಜಾರ್‌ನ ಝಲಕ್.

ಬಹದ್ದೂರ್ ಧ್ರುವ ಭರ್ಜರಿಯಾಗೇ ಎಂಟ್ರಿ ಕೊಟ್ರು. ನೂಕು ನುಗ್ಗಲಿನ ನಡುವೆಯೂ ಇಲ್ಲಿನ ಜನ ಆ್ಯಕ್ಷನ್ ಪ್ರಿನ್ಸ್ ಮತ್ತು ರಾಣಾ ಚಿತ್ರ ತಂಡವನ್ನು ಅದ್ಧೂರಿಯಾಗೇ ಸ್ವಾಗತಿಸಿದ್ರು. ಬ್ಯಾರಿಕೇಡ್‌ಗಳು ಮುರಿದು ಹೋಗುವಷ್ಟು, ಬೆತ್ತ, ಲಾಠಿಗಳು ತುಂಡಾಗುವಷ್ಟು (ಲಾಠಿ ಚಾರ್ಜ್ ಏನಲ್ಲ) ಜನ ಜಮಾಯಿಸಿದ್ದು, ನಿಯಂತ್ರಣಕ್ಕೆ ಪೊಲೀಸರು ಪಟ್ಟ ಪಾಡು, ತಾಯಿ‌ ಹುಲಿಗೆಮ್ಮನಿಗೆ ಪ್ರೀತಿ ಎಂಬಂತಿತ್ತು.

ಅಂತು-ಇಂತು ದಾಂಡಿಗರ ಕೈ ಸರಪಳಿಯ ಮಧ್ಯೆ ಹುಲಿಗೆಮ್ಮ ದೇವಸ್ಥಾನ ಪ್ರವೇಶಿಸಿದ ಚಿತ್ರತಂಡ ಪೂಜೆ ಸಲ್ಲಿಸಿ ವೇದಿಕೆ ಹತ್ತೊಷ್ಟರಲ್ಲಿ ಅರ್ಧ ಗಂಟೆ ಕಳೆದೇ ಹೋಗಿತ್ತು.

ಇಷ್ಟೆಲ್ಲ ಗದ್ದಲದ ನಡುವೆಯೂ ಧ್ರುವ ಅಭಿಮಾನಿಗಳ ಸೆಲ್ಫಿಗೆ ಮುಖವೊಡ್ಡುತ್ತಿದ್ದರು. ವೇದಿಕೆಯ ಮೇಲಿಂದಲೂ ಜನ ಕಾಣುವಂತೆ ತಾವೇ ಸೆಲ್ಫಿ ತೆಗೆದುಕೊಂಡರು.

ಮಾತು ಆರಂಭಿಸುತ್ತಿದ್ದಂತೆ ಡೈಲಾಗ್..ಡೈಲಾಗ್… ಎಂಬ ಅಭಿಮಾನಿಗಳ ಕೂಗು. ಮಾತಿನ ಮಧ್ಯೆ ಪೊಗರು ಸಿನಿಮಾದ ಡೈಲಾಗ್ ತುಣುಕೊಂದನ್ನ ಹೇಳಿದ ಧ್ರುವ ಅಣ್ಣ ಚಿರಂಜೀವಿ ಹಾಗೂ ಅಪ್ಪು ಸರ್ ಅವರನ್ನ ಕಳೆದುಕೊಂಡ ಚಿತ್ರರಂಗ ಚೇತರಿಕೆ ಕಾಣಬೇಕಿದೆ. ಶ್ರೇಯಸ್‌ನಂಥ ಯಂಗ್‌ಸ್ಟರ್‌ಗಳನ್ನ ಅವರ ಸಿನಿಮಾ ನೋಡೋ ಮೂಲಕ ನೀವೆಲ್ಲ ಅವರನ್ನ ಬೆಳೆಸಬೇಕಿದೆ. ರಾಣಾ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಈ ಭಾಗಕ್ಕೆ ಬಂದದ್ದು ತುಂಬಾನೇ ಖುಷಿ.. ಹೊಸಪೇಟೆ ಅಂದ್ರೆ ಬಹಳ ಇಷ್ಟ ಎನ್ನುತ್ತಿದ್ದಂತೆ, “ರಾಯಚೂರಣ್ಣಾ..” ಎನ್ನುವ ದೊಡ್ಡ ಧ್ವನಿ ಧ್ರುವಗೆ ಕೇಳಸ್ತು. ಆಗ “ಏಯ್.. ರಾಯಚೂರು ನಮ್ದೇ ಸುಮ್ಕಿರ್ಲಾ” ಎಂದು ಪ್ರೀತಿಯಿಂದ ಗದರಿದರು.

ಮತ್ತೇ ಮಾತು ಮುಂದುವರಿಸಿದ ಧ್ರುವ, ಶ್ರೇಯಸ್ ಮತ್ತು ತಾವು ಒಂದೇ ಜಿಮ್‌ಗೆ ಹೋಗ್ತಿವಿ, ಅಲ್ಲಿ ರಾಣಾ ಸಿನಿಮಾ ಬಗ್ಗೆನೇ ಜಾಸ್ತಿ ಮಾತಾಡ್ತಿವಿ.. ಸಿನಿಮಾ ತುಂಬಾ ಚನ್ನಾಗಿ ಬಂದಿದೆ.. ‌ಇವತ್ತು ಇಲ್ಲಿ ಬಿಡುಗಡೆ ಆಗ್ತಿರೊ ಹಾಡನ್ನ ಎಲ್ರೂ ಷೇರ್ ಮಾಡಿ ಎಂದು ಲಿರಿಕಲ್ ಸಾಂಗ್ ರಿಲೀಸ್ ಮಾಡಿದ್ರು.

ಇದಕ್ಕೂ ಮುನ್ನ ಮಾತನಾಡಿದ ಚಿತ್ರರಂಗದ ಖ್ಯಾತ ನಿರ್ಮಾಪಕ ಗಂಡುಗಲಿ ಕೆ.ಮಂಜು, ಇದು ನನ್ನ ಪುತ್ರನ ಮೂರನೇ ಸಿನಿಮಾ. ಹರಸಿ, ಹಾರೈಸಿ ಅಂದ್ರು.‌

ರಾಣಾ ಚಿತ್ರದ ನಿರ್ಮಾಪಕ ಪುರುಷೋತ್ತಮ ಮಾತನಾಡಿ, ರಾಣಾ ಚಿತ್ರದಲ್ಲಿ ಬೇರೊಂದು ಹಾಡು ರೆಡಿಯಾಗಿತ್ತು. ಆದರೆ ಹುಲಿಗೆಮ್ಮದೇವಿಯ ಪರಮಭಕ್ತನಾದ ನಾನು ಆ ಹಾಡನ್ನ ಕೈ ಬಿಟ್ಟು, ಇಂದು ಬಿಡುಗಡೆ ಆಗ್ತಿರೊ ಈ ಹಾಡನ್ನ ಸೇರಿಸಿದೆ. ಹಾಡು‌ ಖಂಡಿತವಾಗಿಯೂ ಎಲ್ರಗೂ ಇಷ್ಟ ಆಗುತ್ತೆ.. ದೂರದ ಬೆಂಗಳೂರಿನಿಂದ ಬಂದು ನಮ್ಮ ಚಿತ್ರದ ಹಾಡು ಬಿಡುಗಡೆಯಲ್ಲಿ ಪಾಲ್ಗೊಂಡಿರೊ ಧ್ರುವ ಬಾಸ್‌ಗೆ ಥ್ಯಾಂಕ್ಸ್… ಚಿತ್ರದ ಡೈರೆಕ್ಟರ್ ನಂದ ಕಿಶೋರ್ ಸಿನಿಮಾ ರಿಚ್ ಆಗಿ ಬರುವಂತೆ ಚಿತ್ರಿಸಿದ್ದಾರೆ. ಕೆ.ಮಂಜು ಸರ್ ಈ ಸಿನಿಮಾದ ಬೆಂಗಾವಲಾಗಿ ನಿಂತಿದಾರೆ. ಚಂದನ್ ಶೆಟ್ಟಿ ತುಂಬ ಚನ್ನಾಗಿ ಮ್ಯೂಜಿಕ್ ಮಾಡಿದಾರೆ. ಇಮ್ರಾನ್ ಸರ್ ಎರಡು ಹಾಡುಗಳಿಗೆ, ಮುರಳಿ ಸರ್ ಎರಡು ಹಾಡುಗಳಿಗೆ ಕೊರಿಯೊಗ್ರಾಫಿ ಮಾಡಿದಾರೆ ಎಂದು ಏದುಸಿರಿನಿಂದ ಹೇಳಿ ಮಾತು ಮುಗಿಸಿದರು.

ನಿರ್ದೇಶಕ ನಂದ ಕಿಶೋರ್,  ಮಾತು ಆರಂಭಿಸುವ ಮುನ್ನ ಅಗಲಿದ ಯುವರತ್ನನಿಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಜನಸ್ತೋಮ ಪುನೀತ್‌ಗೆ ಗೌರವ ಸಲ್ಲಿಸುವಂತೆ ಸೂಚಿಸಿದರು. ರಾಣಾ ಸಿನಿಮಾ ಎಲ್ರಗೂ ಇಷ್ಟ ಆಗುತ್ತೆ ಅಂತ ಭರವಸೆ ನೀಡಿ ಮಾತಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.

*ಸಿಕ್ಕಿ ಬಿದ್ದ ಕಳ್ಳ
ಧ್ರುವ ಸರ್ಜಾ ಮತ್ತು ಚಿತ್ರತಂಡವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಜನಸ್ತೋಮ ಕಂಡು ಕಳ್ಳನೊಬ್ಬ ಮಹಿಳೆಯ ಮಾಂಗಲ್ಯ ಕತ್ತರಿಸಿ ಪರಾರಿಯಾಗುತ್ತಿದ್ದುದನ್ನ ಕಂಡ ಸ್ಥಳೀಯರು ಆತನನ್ನ ಪೊಲೀಸರ ಅತಿಥಿಯನ್ನಾಗಿಸಿದರು.

ಕುಸಿದು ಬಿದ್ದರೂ ಸೆಲ್ಫಿ..!
ವೇದಿಕೆ ಮೇಲೆ ಅನುಮತಿ ಇಲ್ಲದೇ ಪ್ರವೇಶಿಸಿದ ಅಭಿಮಾನಿಯೊಬ್ಬ ಧ್ರುವ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕುಸಿದು ಬಿದ್ದ. ಆದರೂ ಧೃತಿಗೆಡದೆ ಎದ್ದು ನಿಂತು ಸೆಲ್ಫಿ ತಗೊಂಡ. ಪೊಲೀಸರು ಅನಾಮತ್ತಾಗಿ ಎತ್ತಿ ಹೊರಹಾಕಿದರು. ಆತನ ಹುಚ್ಚಾಟ ಕಂಡ ಕೆಲವರು ಪೊಲೀಸರನ್ನೇ ವೇದಿಕೆಯಿಂದ ಕೆಳದಬ್ಬಿ ಹುಚ್ಚಾಟ ಮೆರೆದರು. ಕೊನೆಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಅವರನ್ನೆಲ್ಲ ವೇದಿಕೆಯಿಂದ ಕೆಳಗಿಳಿಸಿದರು.

ಅಚ್ಚುಕಟ್ಟಾಗಿ ನಡೆಯಲಿಲ್ಲ ಕಾರ್ಯಕ್ರಮ
ಧ್ರುವ ಸರ್ಜಾ ಆಗಮಿಸುವ ವಿಷಯ ಪೊಲೀಸ್ ಇಲಾಖೆಗೆ ನಾಲ್ಕು ದಿನಗಳ ಮುಂಚೆಯೇ ಗೊತ್ತಿದ್ದು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ವೇದಿಕೆ ಅಚ್ಚುಕಟ್ಟಾಗಿ ಇರಲಿಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮ ಎನ್ನುವಂತಾಗಿದ್ದು ಸೌಮ್ಯ ಸ್ವಭಾವದ ಚಿತ್ರಪ್ರೇಮಿಗಳಿಗೆ, ಅಭಿಮಾನಿಗಳಿಗೆ ಬೇಸರದ ಸಂಗತಿ‌.

ಕಾಂಗ್ರೆಸ್ ಟಿಕೆಟ್ ಹಂಚಿಕೆ ಪೈನಲ್; ಎಲ್ಲಾ ವಾರ್ಡ್’ಗೂ ಅಭ್ಯರ್ಥಿಗಳ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ:

ನಿನ್ನೆ ರಾತ್ರಿವರೆಗೂ 26 ವಾರ್ಡ್ ಗಳಿಗೆ ಟಿಕೆಟ್ ಫೈನಲ್ ಮಾಡಿದ್ದ ಕಾಂಗ್ರೆಸ್ ಪಕ್ಷ ಇಂದು ಬೆಳಿಗ್ಗೆ ಉಳಿದ ಒಂಬತ್ತು ವಾರ್ಡ್ ಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ.

3ನೇ ವಾರ್ಡ್ ಗೆ ಗಣೇಶ್ ಸಿಂಗ್‌ ಬ್ಯಾಳಿ, 5ನೇ ವಾರ್ಡ್ ಗೆ ಹಮೀದಾಬೇಗಂ ಬೊದ್ಲೇಖಾನ್ , 6ನೇ ವಾರ್ಡ್ ಗೆ ಲಕ್ಷ್ಮವ್ವ ಭಜಂತ್ರಿ ,13ನೇ ವಾರ್ಡ್ ಗೆ ವಿನಾಯಕ ಆಲೂರ, 14ನೇ ವಾರ್ಡ್ ಗೆ ಪರಶುರಾಮ ನಾಯ್ಕರ್, 21ನೇ ವಾರ್ಡ್ ಗೆ ಪರಪ್ಪ ಕಮತರ , 22ನೇ ವಾರ್ಡ್ ಗೆ ರವಿ ಕಮತರ, 28 ನೇ ವಾರ್ಡ್ ಗೆ ಆನಂದ ಕೊರ್ಲಹಳ್ಳಿ, 33ನೇ ವಾರ್ಡ್ ಗೆ ಚಳಗೇರಿ ಅಭ್ಯರ್ಥಿಗಳಾಗಿದ್ದಾರೆ.

ವಾರ್ಡ್ ವಾರು ಅಭ್ಯರ್ಥಿಗಳ ಫೈನಲ್ ಪಟ್ಟಿ ಹೀಗೆ ಇದೆ.

ವಾರ್ಡ್ ನಂ.1 ಲಕ್ಷ್ಮೀ ಅನಿಲ್‌ಕುಮಾರ್ ಸಿದ್ದಮ್ಮನಹಳ್ಳಿ (ಹಿಂದುಳಿದ ವರ್ಗ `ಎ’ ಮಹಿಳೆ), ವಾರ್ಡ್ ನಂ.2 ಸುರೇಶ್ ಕಟ್ಟಿಮನಿ
(ಪರಿಶಿಷ್ಟ ಜಾತಿ),

ವಾರ್ಡ್ ನಂ.3 ಗಣೇಶ್ ಸಿಂಗ್ ಬ್ಯಾಳಿ (ಸಾಮಾನ್ಯ)
ವಾರ್ಡ್ ನಂ.4 ಶಕುಂತಲಾ ಹೊಳೆಬಸಪ್ಪ ಅಕ್ಕಿ(ಹಿಂದುಳಿದ ವರ್ಗ `ಬಿ’ ಮಹಿಳೆ)

ವಾರ್ಡ್ ನಂ.5 ಹಮೀದಾಬೇಗಂ ಬೊದ್ಲೇಖಾನ್ (ಹಿಂದುಳಿದ ವರ್ಗ ಎ’ ಮಹಿಳೆ) ವಾರ್ಡ್ ನಂ.6 ಲಕ್ಷ್ಮವ್ವ ಭಜಂತ್ರಿ (ಪರಿಶಿಷ್ಟ ಮಹಿಳೆ)

ವಾರ್ಡ್ ನಂ.7 ನಾಗಲಿಂಗ ಐಲಿ(ಹಿಂದುಳಿದ ವರ್ಗ ಎ), ವಾರ್ಡ್ ನಂ.8 ಪೂರ್ಣಿಮಾ ಪ್ರೇಮನಾಥ್ ಬರದ್ವಾಡ (ಸಾಮಾನ್ಯ ಮಹಿಳೆ),

ವಾರ್ಡ್ ನಂ.9 ಚಂದ್ರು ಕರಿಸೋಮನಗೌಡ(ಹಿಂದುಳಿದ ವರ್ಗ ಬಿ), ವಾರ್ಡ್ ನಂ.10 ಇಮ್ತಿಯಾಜ್ ಶಿರಹಟ್ಟಿ (ಸಾಮಾನ್ಯ),

ವಾರ್ಡ್ ನಂ.11 ಕುಂಕುಮಾದೇವಿ ಹದ್ದಣ್ಣವರ(ಹಿಂದುಳಿದ ವರ್ಗ `ಎ’ ಮಹಿಳೆ), ವಾರ್ಡ್ ನಂ.12 ಚಂದ್ರಕಲಾ ಮಂಜುನಾಥ ಪೂಜಾರ(ಸಾಮಾನ್ಯ ಮಹಿಳೆ), ವಾರ್ಡ್ ನಂ.13 ವಿನಾಯಕ ಆಲೂರ(ಹಿಂದುಳಿದ ವರ್ಗ ಎ’) ವಾರ್ಡ್ ನಂ.14 ಪರಶುರಾಮ ನಾಯ್ಕರ್ (ಸಾಮಾನ್ಯ)

ವಾರ್ಡ್ ನಂ.15 ಮೋಹನ್ ಅಣವೀರಪ್ಪ ದೊಡ್ಡಕುಂಡಿ(ಸಾಮಾನ್ಯ), ವಾರ್ಡ್ ನಂ.16 ಕೃಷ್ಣಾ ಪರಾಪುರ(ಸಾಮಾನ್ಯ), ವಾರ್ಡ್ ನಂ.17 ನೂರ್‌ಜಾನ್ ನರೇಗಲ್(ಸಾಮಾನ್ಯ ಮಹಿಳೆ), ವಾರ್ಡ್ ನಂ.18 ಜೂನ್‌ ಸಾಬ್ ನಮಾಜಿ(ಹಿಂದುಳಿದ ವರ್ಗ ಎ), ವಾರ್ಡ್ ನಂ.19 ಸಂಗಮೇಶ್ ಕವಳಿಕಾಯಿ(ಸಾಮಾನ್ಯ), ವಾರ್ಡ್ ನಂ.20 ಪರವಿನ್‌ಬಾನು ಅಬ್ದುಲ್ ಮುನಾಫ್ ಮುಲ್ಲಾ (ಹಿಂದುಳಿದ ವರ್ಗ `ಎ’ ಮಹಿಳೆ)

ವಾರ್ಡ್ ನಂ.21 ಪರಪ್ಪ ಕಮತರ (ಸಾಮಾನ್ಯ), ವಾರ್ಡ್ ನಂ.22 ರವಿ ಕಮತರ (ಸಾಮಾನ್ಯ)

ವಾರ್ಡ್ ನಂ.24 ಶಿವಪ್ಪ ಬಳ್ಳಾರಿ (ಪರಿಶಿಷ್ಟ ಪಂಗಡ) ವಾರ್ಡ್ ನಂ.23 ಬರಕತ್ ಅಲಿ ಮುಲ್ಲಾ(ಹಿಂದುಳಿದ ವರ್ಗ ಎ), ವಾರ್ಡ್ ನಂ.25 ಅಶೋಕ ಮಂದಾಲಿ(ಸಾಮಾನ್ಯ), ವಾರ್ಡ್ ನಂ.26 ಸಾಹಿರಾಬಾನು ಬಸೀರ್‌ಅಹ್ಮದ್ ಬಳ್ಳಾರಿ (ಹಿಂದುಳಿದ ವರ್ಗ `ಎ’ ಮಹಿಳೆ),

ವಾರ್ಡ್ ನಂ.27 ಲಲಿತಾ ಬಸೆಟ್ಟೆಪ್ಪ ಅಸೂಟಿ(ಸಾಮಾನ್ಯ ಮಹಿಳೆ), ವಾರ್ಡ್ ನಂ.28 ಆನಂದ ಕೊರ್ಲಹಳ್ಳಿ (ಹಿಂದುಳಿದ ವರ್ಗ ಎ’)

ವಾರ್ಡ್ ನಂ.29 ಲಕ್ಷ್ಮಣ ಚಂದಾವರಿ(ಪರಿಶಿಷ್ಟ ಜಾತಿ), ವಾರ್ಡ್ ನಂ.30 ಪದ್ಮಾ ಪರಶುರಾಮ ಕಟಗಿ(ಸಾಮಾನ್ಯ ಮಹಿಳೆ), ವಾರ್ಡ್ ನಂ.31 ಗೀತಾಬಾಯಿ ಕೃಷ್ಣಸಾ ಹಬೀಬ(ಸಾಮಾನ್ಯ ಮಹಿಳೆ), ವಾರ್ಡ್ ನಂ.32 ಸುಮನ್ ಗಣಪತಿ ಜಿತೂರಿ(ಸಾಮಾನ್ಯ ಮಹಿಳೆ),

ವಾರ್ಡ್ ನಂ.33 ಚಳಗೇರಿ (ಸಾಮಾನ್ಯ ಮಹಿಳೆ)
ವಾರ್ಡ್ ನಂ.34 ವೀಣಾ ಅನಿಲ್ ಗರಗ(ಸಾಮಾನ್ಯ ಮಹಿಳೆ), ವಾರ್ಡ್ ನಂ.35 ನಾಗರತ್ನ ಶಿವಣ್ಣ ಮುಳಗುಂದ(ಪರಿಶಿಷ್ಟ ಜಾತಿ ಮಹಿಳೆ)

ಪಟ್ಟಿಯಲ್ಲಿ ನಾಳೆ ಮಧ್ಯಾಹ್ನದವರೆಗೂ ಬದಲಾದರೂ ಅಚ್ಚರಿ ಪಡಬೇಕಿಲ್ಲ.

ಶಾಸಕ ದಢೇಸೂಗೂರು ಬೆಂಬಲಿಗರಿಂದ “ಕಿರುಕುಳ”?

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕಾರಟಗಿ ಮಹಿಳಾ ಅದಿಕಾರಿಯೊಬ್ಬರಿಗೆ ಕನಕಗಿರಿ ಶಾಸಕ ಬಸವರಾಜ ದಢೇಸೂಗುರು ಬೆಂಬಲಿಗರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು, ಕಿರುಕುಳಕ್ಕೊಳಗಾದ‌ ಮಹಿಳಾ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಸೋಮವಾರ ರಾತ್ರಿ ಎಸ್‌ಪಿ ಕಚೇರಿಗೆ ಆಗಮಿಸಿದ್ದರೆಂಬ ಸುದ್ದಿ ಸಂಚಲನ ಮೂಡಿಸಿದೆ.

ಈ ಬೆಳವಣಿಗೆ ನಿಜವೋ? ಸುಳ್ಳೋ? ಎಂಬುದಿನ್ನು ಖಚಿತವಾಗಿಲ್ಲ. ಈ ಕುರಿತು ಮಾಹಿತಿ ಪಡೆಯಲು ಎಸ್ಪಿ ಹಾಗೂ ಮಹಿಳಾ ಅಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಮೂಲಗಳ ಪ್ರಕಾರ ಇತ್ತಿಚೆಗೆ ಮಹಿಳಾ ಅಧಿಕಾರಿಯ ವರ್ಗಾವಣೆಗೆ ಸಂಬಂಧಿಸಿದಂತೆ ಶಾಸಕರ ಜೊತೆ ವಾಗ್ವಾದ ನಡೆದಿದ್ದು ಆಕ್ರೋಶಗೊಂಡ ಬೆಂಬಲಿಗರು ಅಧಿಕಾರಿಯ ಕೈ ಹಿಡಿದು ಎಳೆದಾಡಿದ್ದಾರೆ ಎನ್ನಲಾಗಿದೆ. ಶಾಸಕರಿಗೂ ಮತ್ತು ಮಹಿಳಾ ಅಧಿಕಾರಿಗೂ ಇಷ್ಟರಮಟ್ಟಿಗೆ ಸಲುಗೆ ಬೆಳೆದಿದ್ದಾರೂ ಹೇಗೆ ಎಂಬ ಪ್ರಶ್ನೆ ಈಗ ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.

ಈ ಕುರಿತು ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಶಾಸಕ ಬಸವರಾಜ ದಢೇಸೂಗುರು ಅವರು, ಪಟ್ಟಣ ಪಂಚಾಯಿತಿ ಚುನಾವಣೆ ಗದ್ದಲದಲ್ಲಿ ಇದ್ದೇವೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಸದ್ಯಕ್ಕೆ ಚುನಾವಣಾ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.

ಅವಳಿ ನಗರದ ಅಭಿವೃದ್ಧಿಗಾಗಿ ಅನಿಲ್ ಮತಭಿಕ್ಷೆ! ಅಭ್ಯರ್ಥಿ ಪರ ಬಿಜೆಪಿ ವಿನೂತನ ಪ್ರಚಾರ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ಅವಳಿ ನಗರದ ಜನರ ಸಮಸ್ಯೆಗಳನ್ನು ಅರಿಯಲು ಪ್ರತಿ ಮನೆ ಮನೆಗಳಿಗೂ ಭೇಟಿ ನೀಡಿ ಅವರು ನೀಡುವ ಸಲಹೆಗಳನ್ನು ಅರ್ಥೈಯಿಸಿಕೊಂಡು ಕನಿಷ್ಠ 6 ತಿಂಗಳ ಕಾಲಾವಕಾಶದೊಳಗೆ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ಅಲ್ಲದೇ, ಪುನಃ ಅವರ ಮನೆಗಳಿಗೆ ತಿಳಿಸಲಾಗುವುದು’ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.

ಸೋಮವಾರ ಹುಡ್ಕೋ ಕಾಲನಿಯ ಬಯಲು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತಭಿಕ್ಷೆ ಅಭಿಯಾನ ಪ್ರಾರಂಭಿಸಿದ ಅವರು 35ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಉಷಾ ಮಹೇಶ್ ದಾಸರ ಅವರ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಕೈಗೊಂಡು ಬಳಿಕ ಮಾತನಾಡಿದರು.

ಅವಳಿ ನಗರದಲ್ಲಿ ಸುಮಾರು 36 ಸಾವಿರ ಮನೆಗಳಿದ್ದು, ಪ್ರತಿನಿತ್ಯ 2000ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಮತಭಿಕ್ಷೆ ಕೇಳಬೇಕೆಂದು ತೀರ್ಮಾನಿಸಲಾಗಿದೆ. ಅಲ್ಲದೇ, ಈ ಬಾರಿ ಬಿಜೆಪಿ ನಗರಸಭೆ ಅಧಿಕಾರಕ್ಕೆ ಬರುತ್ತದಲ್ಲದೇ, ಅವಳಿ ನಗರದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.

ಈ ಹಿಂದೆ ನಗರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ದುರಾಡಳಿತ ನಡೆಸಿದೆ. ಅಲ್ಲದೇ, ಕಾಂಗ್ರೆಸ್‌ನದ್ದು ಭ್ರಷ್ಟಚಾರ ಸಿದ್ಧಾಂತವಾಗಿದೆ. ಹೀಗಾಗಿ ಪ್ರತಿ 10 ತಿಂಗಳಿಗೊಮ್ಮೆ ನಗರಸಭೆ ಅಧ್ಯಕ್ಷರನ್ನು ಬದಲಾಯಿಸಿ ಭ್ರಷ್ಟಾಚಾರ ನಡೆಸಿದರು. ಇದರಿಂದ ಅವಳಿ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಕುಡಿಯುವ ನೀರು ಯೋಜನೆಯಡಿ ಇಲ್ಲಿಯವರೆಗೆ ಅವಳಿ ನಗರದ ಎಷ್ಟು ಮನೆಗಳಿಗೆ ಪೈಪ್‌ಲೈನ್ ಅವಳವಡಿಸಲಾಗಿದೆ ಎಂಬುವುದು ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ.

ನಗರದೆಲ್ಲೆಡೆ ಅವೈಜ್ಞಾನಿಕವಾಗಿ ಯುಜಿಡಿ, ಕುಡಿಯುವ ನೀರು ಯೋಜನೆಯ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗಿವೆ. ಸುಮಾರು 150 ಕೋಟಿ ರೂ. ಯುಜಿಡಿ ಕಾಮಗಾರಿಗೆ ನೀಡಲಾಗಿದೆ. ಆದರೆ, ಯುಜಿಡಿ ಕಾಮಗಾರಿಯ ಪರಿಸ್ಥಿತಿ ಏನಾಗಿದೆ ಎಂಬುವುದು ಜನರಿಗೆ ಗೊತ್ತಿದೆ’ ಎಂದು ಅನಿಲ್ ಮೆಣಸಿನಕಾಯಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಸಂಗಮೇಶ್ ದುಂದೂರ, ಎಂ.ಎಸ್.ಕರೀಗೌಡ್ರ, 35ನೇ ವಾರ್ಡ್ ಅಭ್ಯರ್ಥಿ ಉಷಾ ದಾಸರ, ಮಹೇಶ್ ದಾಸರ, ಪ್ರಶಾಂತ್ ನಾಯ್ಕರ, ಸಿದ್ದು ಪಲ್ಲೇದ, ಪರಮೇಶ್ ನಾಯಕ್, ಜಯಣ್ಣ ಶೆಟ್ಟರ್, ಕೆ ಕೆ ಮಳಗೌಡರ, ಮೋಹನ ಮಾಳಗಿಮನಿ, ಬಸವರಾಜ್ ಗಡ್ಡೆಪ್ಪನವರ್, ಪ್ರಕಾಶ್ ಕೋಟಿ, ರಾಹುಲ್ ಸುಗಂಧಿ, ಮಲ್ಲಿಕಾರ್ಜುನಗೌಡ ಹೊಳೆಯಣ್ಣವರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ಕಾಂಗ್ರೆಸ್ ಪಟ್ಟಿ ಪ್ರಕಟ; 25 ವಾರ್ಡ್’ಗಳ ಅಭ್ಯರ್ಥಿಗಳು ಫೈನಲ್

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೆರಡು ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಬಿಜೆಪಿ ಕದನ ಕಲಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಅಳಿದು ತೂಗಿ ಗೆಲ್ಲಬಹುದಾದ ಅಭ್ಯರ್ಥಿಗಳಿಗೆ ಸ್ವತಃ ಶಾಸಕ ಎಚ್.ಕೆ.ಪಾಟೀಲ್ ಅವರು ಕರೆ ಮಾಡಿ ಟಿಕೆಟ್ ನೀಡಿರುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಮಾಜಿ ಶಾಸಕ ಡಿ.ಆರ್.ಪಾಟೀಲ್ ಹಾಗೂ ಶಹರ ಘಟಕ ಅಧ್ಯಕ್ಷ ಗುರಣ್ಣ ಬಳಗಾನೂರ ಅವರು `ಬಿ’ ಫಾರ್ಮ್ ವಿತರಿಸುತ್ತಿದ್ದಾರೆ. ಅವಳಿ ನಗರದ 35 ವಾರ್ಡ್ಗಳ ಪೈಕಿ 25 ವಾರ್ಡ್ಗಳಿಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇನ್ನುಳಿದ 10 ವಾರ್ಡ್ಗಳಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಇದ್ದು, ಸೋಮವಾರ ಸಂಜೆ ಅಷ್ಟೊತ್ತಿಗೆ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ವಾರ್ಡ್ವಾರು ಅಭ್ಯರ್ಥಿಗಳ ವಿವರ:

ಗದಗ ಬೆಟಗೇರಿ ಅವಳಿ ನಗರದ ವಾರ್ಡ್ ನಂ.1 ಲಕ್ಷ್ಮೀ ಅನಿಲ್‌ಕುಮಾರ್ ಸಿದ್ದಮ್ಮನಹಳ್ಳಿ (ಹಿಂದುಳಿದ ವರ್ಗ ಎ’ ಮಹಿಳೆ), ವಾರ್ಡ್ ನಂ.2 ಸುರೇಶ್ ಕಟ್ಟಿಮನಿ (ಪರಿಶಿಷ್ಟ ಜಾತಿ),ವಾರ್ಡ್ ನಂ.4 ಶಕುಂತಲಾ ಹೊಳೆಬಸಪ್ಪ ಅಕ್ಕಿ(ಹಿಂದುಳಿದ ವರ್ಗ ಬಿ’ ಮಹಿಳೆ) ವಾರ್ಡ್ ನಂ.7 ನಾಗಲಿಂಗ ಐಲಿ(ಹಿಂದುಳಿದ ವರ್ಗ ಎ), ವಾರ್ಡ್ ನಂ.8 ಪೂರ್ಣಿಮಾ ಪ್ರೇಮನಾಥ್ ಬರದ್ವಾಡ (ಸಾಮಾನ್ಯ ಮಹಿಳೆ),

ವಾರ್ಡ್ ನಂ.9 ಚಂದ್ರು ಕರಿಸೋಮನಗೌಡ(ಹಿಂದುಳಿದ ವರ್ಗ ಬಿ), ವಾರ್ಡ್ ನಂ.10 ಇಮ್ತಿಯಾಜ್ ಶಿರಹಟ್ಟಿ(ಸಾಮಾನ್ಯ), ವಾರ್ಡ್ ನಂ.11 ಕುಂಕುಮಾದೇವಿ ಹದ್ದಣ್ಣವರ(ಹಿಂದುಳಿದ ವರ್ಗ ಎ’ ಮಹಿಳೆ), ವಾರ್ಡ್ ನಂ.12 ಚಂದ್ರಕಲಾ ಮಂಜುನಾಥ ಪೂಜಾರ(ಸಾಮಾನ್ಯ ಮಹಿಳೆ), ವಾರ್ಡ್ ನಂ.15 ಮೋಹನ್ ಅಣವೀರಪ್ಪ ದೊಡ್ಡಕುಂಡಿ(ಸಾಮಾನ್ಯ), ವಾರ್ಡ್ ನಂ.16 ಕೃಷ್ಣಾ ಪರಾಪುರ(ಸಾಮಾನ್ಯ), ವಾರ್ಡ್ ನಂ.17 ನೂರ್‌ಜಾನ್ ನರೇಗಲ್(ಸಾಮಾನ್ಯ ಮಹಿಳೆ), ವಾರ್ಡ್ ನಂ.18 ಜೂನ್‌ಸಾಬ್ ನಮಾಜಿ(ಹಿಂದುಳಿದ ವರ್ಗ ಎ), ವಾರ್ಡ್ ನಂ.19 ಸಂಗಮೇಶ್ ಕವಳಿಕಾಯಿ(ಸಾಮಾನ್ಯ), ವಾರ್ಡ್ ನಂ.20 ಪರವಿನ್‌ಬಾನು ಅಬ್ದುಲ್ ಮುನಾಫ್(ಹಿಂದುಳಿದ ವರ್ಗ ಎ ಮಹಿಳೆ) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಅದರಂತೆ, ವಾರ್ಡ್ ನಂ.23 ಬರಕತ್ ಅಲಿ ಮುಲ್ಲಾ(ಹಿಂದುಳಿದ ವರ್ಗ ಎ), ವಾರ್ಡ್ ನಂ.25 ಅಶೋಕ ಮಂದಾಲಿ(ಸಾಮಾನ್ಯ), ವಾರ್ಡ್ ನಂ.26 ಸಾಹಿರಾಬಾನು ಬಸೀರ್‌ಅಹ್ಮದ್ ಬಳ್ಳಾರಿ (ಹಿಂದುಳಿದ ವರ್ಗ `ಎ’ ಮಹಿಳೆ), ವಾರ್ಡ್ ನಂ.27 ಲಲಿತಾ ಬಸೆಟ್ಟೆಪ್ಪ ಅಸೂಟಿ(ಸಾಮಾನ್ಯ ಮಹಿಳೆ), ವಾರ್ಡ್ ನಂ.29 ಲಕ್ಷ್ಮಣ ಚಂದಾವರಿ(ಪರಿಶಿಷ್ಟ ಜಾತಿ),

ವಾರ್ಡ್ ನಂ.30 ಪದ್ಮಾ ಪರಶುರಾಮ ಕಟಗಿ(ಸಾಮಾನ್ಯ ಮಹಿಳೆ), ವಾರ್ಡ್ ನಂ.31 ಗೀತಾಬಾಯಿ ಕೃಷ್ಣಸಾ ಹಬೀಬ(ಸಾಮಾನ್ಯ ಮಹಿಳೆ), ವಾರ್ಡ್ ನಂ.32 ಸುಮನ್ ಗಣಪತಿ ಜಿತೂರಿ(ಸಾಮಾನ್ಯ ಮಹಿಳೆ), ವಾರ್ಡ್ ನಂ.34 ವೀಣಾ ಅನಿಲ್ ಗರಗ(ಸಾಮಾನ್ಯ ಮಹಿಳೆ), ವಾರ್ಡ್ ನಂ.35 ನಾಗರತ್ನ ಶಿವಣ್ಣ ಮುಳಗುಂದ(ಪರಿಶಿಷ್ಟ ಜಾತಿ ಮಹಿಳೆ) ಅವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ.

ಇನ್ನು ಈಗಾಗಲೇ ಆಯ್ಕೆಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊನೆ ಘಳಿಗೆಯಲ್ಲಿ ಬದಲಾದರೂ ಅಚ್ಚರಿ ಪಡಬೇಕಿಲ್ಲ.

ಸರಣಿ ಅಪಘಾತ; ಗದಗನ ನಾಲ್ವರು ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ:

ಜಿಲ್ಲೆಯ ಹಿರಿಯೂರು ಬಳಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟು 10 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಹಿರಿಯೂರು ತಾಲೂಕಿನ ಹಾಲೂರು ಸಮೀಪ ನಡೆದಿದೆ.

ಮೃತರೆಲ್ಲರೂ ಗದಗ ತಾಲೂಕಿನ ಹುಯಿಲಗೋಳ ಗ್ರಾಮದವರು ಎನ್ನಲಾಗಿದೆ. ಹನುಮಂತಪ್ಪ(30), ಪ್ರಶಾಂತ್ ಹಟ್ಟಿ(29) ಗುರಪ್ಪ ಅಲಿಯಾಸ್ ಗುರುಮೂರ್ತಿ ಹೂಗಾರ್ (29) ಹಾಗೂ ರಮೇಶ್ ಅಲಿಯಾಸ್ ರಾಮನಗೌಡ (30) ಮೃತ ದುರ್ದೈವಿಗಳಾಗಿದ್ದಾರೆ.

ಬೆಂಗಳೂರಿಗೆ ಈರುಳ್ಳಿ ತುಂಬಿಕೊಂಡು ಹೊರಟಿದ್ದ ಲಾರಿ ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತವಾಗಿತ್ತು. ಅಪಘಾತವಾಗಿದ್ದ ಲಾರಿಗೆ ಹಿಂಬದಿಯಿಂದ 3 ಈಚರ್, 3 ಲಾರಿ, 1 ಕಾರ್ ಡಿಕ್ಕಿ ಹೊಡೆದಿವೆ. ಇದರ ಪರಿಣಾಮ 4 ಮಂದಿ ಸಾವನ್ನಪ್ಪಿ 10 ಮಂದಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳು ಹಿರಿಯೂರು, ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಮೃತರು ಹುಯಿಲಗೋಳ ಗ್ರಾಮದಿಂದ ಒಟ್ಟು 6 ಮಂದಿ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಲು ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಬೆಳ್ಳಂಬೆಳಗ್ಗೆ ಯಮಕಿಂಕರ ತನ್ನ ಅಟ್ಟಹಾಸ‌ ಮೆರೆದಿದ್ದಾನೆ.

ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಂಬಳದ ಪುರಾತನ ದೇವಾಲಯದ ಸೊಬಗು; ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರ ದಂಡು

0

ವಿಜಯಸಾಕ್ಷಿ ಸುದ್ದಿ, ಡಂಬಳ:

ವರ್ಷದ ನವೆಂಬರ್, ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳುಗಳು ಪ್ರವಾಸಕ್ಕೆ ಪ್ರಶಕ್ತವಾಗಿದ್ದು, ಈ ತಿಂಗಳುಗಳಲ್ಲಿ ಅಧಿಕ ಜನರು ಪ್ರವಾಸ ಕೈಗೊಳ್ಳುತ್ತಾರೆ. ಅದರಂತೆ, ಗದಗ ಜಿಲ್ಲೆಯ ಪ್ರಾಚೀನ ಕಾಲದ ಐತಿಹಾಸಿಕ ದೇವಾಲಯಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗುಮಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ತುಸು ಚೇತರಿಕೆ ಕಾಣಿಸುತ್ತಿದೆ.

ಮುಂಡರಗಿ ತಾಲೂಕಿನ ಡಂಬಳ(ಧರ್ಮಪುರ) ಗ್ರಾಮದ ಐತಿಹಾಸಿಕ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕುಟಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಗ್ರಾಮಕ್ಕೆ ಬರುತ್ತಿರುವ ಪ್ರವಾಸಿಗರು ಗ್ರಾಮದಲ್ಲಿರುವ ದೊಡ್ಡ ಬಸವೇಶ್ವರ ದೇವಾಲಯ, ಜಪದ ಬಾವಿ, ಸಿದ್ಧೇಶ್ವರ ದೇವಾಲಯ, ತೋಂಟದಾರ್ಯ ಮಠ, ಜಮಾಲ ಶಾವಲಿ ದರ್ಗಾ, ಬೀಗರ ಬಾವಿ, ಸೋಮನಾಥ ದೇವಾಲಯ, ವಿಕ್ಟೋರಿಯಾ ಮಹಾರಾಣಿಯ ಕೆರೆ, ಕೋಟೆ, ಗಣಪತಿ ದೇವಾಲಯ ಸೇರಿದಂತೆ ಗ್ರಾಮದಲ್ಲಿರುವ ಇನ್ನಿತರ ಪುರಾತನ ಕಾಲದ ಐತಿಹಾಸಿಕ ಸ್ಥಳಗಳ ಸೊಬಗನ್ನು ಸವಿಯುತ್ತಿದ್ದಾರೆ.

ಡಂಬಳವು ಐತಿಹಾಸಿಕ ಗ್ರಾಮವಾಗಿದ್ದು, ಇಲ್ಲಿರುವ ಹಲವು ಪುರಾತನ ದೇವಾಲಯಗಳು, ಇಲ್ಲಿನ ಪ್ರಾಕೃತಿಕ ಸೌಂದರ್ಯ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ ಎಂದು ಪ್ರವಾಸಿಗರಾದ ಶ್ರೀನಿವಾಸ ಕಟ್ಟಿಮನಿ, ಮಂಜುನಾಥ ಮುಧೋಳ ಹೇಳಿದರು.

ಬೇವಿನಮರದಲ್ಲಿ‌ ಸುರಿಯುತ್ತಿರುವ ಬಿಳಿ ದ್ರವ; ದೈವ ಕೃಪೆ ಎಂದು ಟೆಂಟ್ ಹಾಕಿದ ಜನ!!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಸಾಮಾನ್ಯವಾಗಿ ಚಳಿಗಾಲದಲ್ಲಿ ಬೇವಿನಮರದಲ್ಲಿ ಬಿಳಿ ರೂಪದ ದ್ರವ ಸುರಿಯುತ್ತದೆ. ಇದು ಇಂದು-ನಿನ್ನೆಯದಲ್ಲ, ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಸ್ಥರಿಗೆ ಇದೊಂದು ಪವಾಡದಂತೆ ಭಾಸವಾಗಿದೆ.

ಬಿಜಕಲ್‌ನ ಗೋಪಾಲರಾವ್ ಎಂಬುವವರ ಹೊಲದಲ್ಲಿ ಬೇವಿನಮರದಿಂದ ಬಿಳಿ ದ್ರವ ಸ್ರವಿಸುತ್ತಿದೆ. ಇದನ್ನು ಕಂಡವರು, ಬೇವಿನಮರದ ಬುಡದಲ್ಲಿ ಗದ್ದೆಮ್ಮ ದೇವಿ ಮೂರ್ತಿ ಇದೆ. ಮರದಿಂದ ಬಿಳಿ ದ್ರವ ಸ್ರವಿಸುತ್ತಿರುವುದು ದೇವಿಯ ಪವಾಡ ಎಂದು ಹೇಳುತ್ತಿದ್ದಂತೆ, ಜನಸಾಗರ ಸೇರಿದೆ. ಕೊನೆಗೆ ಮರದ ಬಳಿ ಟೆಂಟ್ ಹಾಕಿ ಪೂಜೆ-ಪುನಸ್ಕಾರ ಪ್ರಕ್ರಿಯೆಗಳು ಭರ್ಜರಿಯಾಗಿ ನಡೆಯುತ್ತಿವೆ. ಇದನ್ನ ಕಣ್ತುಂಬಿಕೊಳ್ಳಲು ಜನ ಟಂಟಂ, ಆಟೋ, ಟ್ರ್ಕಾಕ್ಟರ್ ಸಮೇತ ತಂಡೋಪತಂಡವಾಗಿ ಆಗಮಿಸಿ, ಧನ್ಯತಾ ಭಾವ ಪ್ರದರ್ಶಿಸುತ್ತಿದ್ದಾರೆ.

ವಾಸ್ತವವಾಗಿ ಚಳಿಗಾಲದಲ್ಲಿ ಬೇವಿನ ಮರದಿಂದ ಬಿಳಿದ್ರವ ಸುರಿಯುವುದಕ್ಕೆ ವೈಜ್ಞಾನಿಕ ಕಾರಣಗಳಿವೆಯೇ ಹೊರತು ದೈವದ ಕಾರಣಗಳಲ್ಲ ಎಂದು ತಜ್ಞರು ಹೇಳುತ್ತಾರೆ.

ಕಾಂಗ್ರೆಸ್‌’ನಲ್ಲಿ ಬುಗಿಲೆದ್ದ ಅಸಮಾಧಾನ; ಟಿಕೆಟ್ ಕೈ ತಪ್ಪಿದ್ದಕ್ಕೆ ರಾತ್ರೋರಾತ್ರಿ ಧರಣಿ, ಕಣ್ಣೀರು ಹಾಕಿದ ಕಾರ್ಯಕರ್ತ!

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಅಷ್ಟೇ ಉಳಿದಿದ್ದು, ರಾಷ್ಟ್ರೀಯ ಪಕ್ಷಗಳ ಟಿಕೆಟ್’ಗಾಗಿ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಬಿಜೆಪಿ 35 ವಾರ್ಡ್ ಗಳ ಪೈಕಿ 30 ವಾರ್ಡ್ ಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಕಾಂಗ್ರೆಸ್ ಇನ್ನೂವರೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ಬೆನ್ನಲ್ಲೇ ಪತ್ನಿಯರಿಗೆ ಟಿಕೆಟ್ ಕೈ ತಪ್ಪಿದ ಕಾರಣಕ್ಕಾಗಿ ಆಕ್ರೋಶಗೊಂಡ ಕಾರ್ಯಕರ್ತನೊಬ್ಬ ರಾತ್ರೋರಾತ್ರಿ ಧರಣಿ ನಡೆಸಿದರೇ, ಮತ್ತೊಬ್ಬ ಕಾರ್ಯಕರ್ತ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಬೆಟಗೇರಿಯ ಹಿಂದುಳಿದ ‘ಅ’ ವರ್ಗದ ಮಹಿಳೆಗೆ ಮೀಸಲು ಇದ್ದ 5ನೇವಾರ್ಡ್‌’ನ ಕಾಂಗ್ರೆಸ್ ಟಿಕೆಟ್ ಪಡೆಯಲು ತನ್ನ ಪತ್ನಿಗಾಗಿ ಪ್ರಯತ್ನ ನಡೆಸಿದ್ದ ವಿಷ್ಣು ಬಗಾಡೆ ಟಿಕೆಟ್ ಕೈ ತಪ್ಪಿದ ಪರಿಣಾಮ ತನ್ನ ಆಪ್ತರೆದರು ಕಣ್ಣೀರು ಹಾಕಿದ್ದು, ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೊಂದು ಪ್ರಕರಣದಲ್ಲಿ
20ನೇ ವಾರ್ಡ್’ನ ಕಾಂಗ್ರೆಸ್ ಟಿಕೆಟ್ ಪತ್ನಿಗೆ ನೀಡುವಂತೆ ಚಾಂದ್ ಕೊಟ್ಟೂರ ಕಳೆದ ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷದ ಹೈಕಮಾಂಡ್ ಟಿಕೆಟ್ ಕೊಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಕೆ.ಎಚ್.ಪಾಟೀಲ್ ಅವರ ಪುತ್ಥಳಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಚಾಂದ್ ಕೊಟ್ಟೂರ ಅವರು ಧರಣಿ‌ ನಡೆಸುತ್ತಿರುವುದ‌ನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್ ಅಬ್ಬಿಗೇರಿ, ಶಹಬಾಜ್ ಮುಲ್ಲಾ ಮನವೊಲಿಸಿ‌ ಮನೆಗೆ ಕಳುಹಿಸಿದ್ದಾರೆ. ಶನಿವಾರ ರಾತ್ರಿ 10 ಗಂಟೆಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಏಕಾಂಗಿಯಾಗಿ ಪ್ರತಿಭಟನೆ‌ ನಡೆಸಿದ್ದಾರೆ.

ಕಾಂಗ್ರೆಸ್ ನಲ್ಲಿ 35 ವಾರ್ಡ್ಗಳಲ್ಲಿ 100ಕ್ಕೂ ಅಧಿಕ ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಕಾಂಗ್ರೆಸ್ ಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾದಂತಿದೆ. ಇದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕೈ ನಾಯಕರಿಗೆ ಟಿಕೆಟ್ ಹಂಚಿಕೆ ಮುನ್ನವೇ ಅಸಮಾಧಾನದ ಬಿಸಿ ತಟ್ಟುತ್ತಿದೆ. ಇನ್ನು ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದರೆ, ಅಸಮಾಧಾನ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿದ್ದು, ಚುನಾವಣೆ ಸಂದರ್ಭದಲ್ಲಿ ಗೆಲುವಿಗೆ ಕಂಟಕವಾಗಿ ಪರಿಣಮಿಸಬಾರದೆಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದ್ದು, ಟಿಕೆಟ್ ಹಂಚಿಕೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

error: Content is protected !!