Home Blog Page 330

ಇಂದು ರಾಜ್ಯ ಸರ್ಕಾರದಿಂದ ಐತಿಹಾಸಿಕ ವಿಧೇಯಕ ಮಂಡನೆ : ಸಚಿವ ಶ್ರೀರಾಮುಲು

  • ಉಭಯ ಸದನಗಳಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ

ವಿಜಯಸಾಕ್ಷಿ ಸುದ್ದಿ, ಗದಗ:

‘ಇಂದು ಮುಖ್ಯಮಂತ್ರಿಗಳು, ಕಾನೂನು ಸಚಿವರು ಉಭಯ ಸದನಗಳಲ್ಲಿ ಐತಿಹಾಸಿಕ ಮತಾಂತರ ನಿಷೇಧ ವಿಧೇಯಕ ಮಂಡಿಸಲಿದ್ದಾರೆ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಂಗಳವಾರ ಗದಗನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಆಸೆ, ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡಬಾರದು ಎಂಬ ಕಾರಣದಿಂದ ಕಾಯ್ದೆ ಜಾರಿಯಾಗಲಿದೆ. ಯಾರೇ ಆಗಿದ್ದರೂ ಉಡುಗೊರೆ, ಉದ್ಯೋಗ, ಹಣ, ಇನ್ನಿತರ ಭರವಸೆಗಳನ್ನು ನೀಡಿ ಕಾನೂನು ಬಾಹಿರ ಕೆಲಸ ಮಾಡುವವರಿಗೆ ಜನರು ಅಪರಾಧಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗುವುದು. ಒಂದು ವೇಳೆ ಬಲವಂತವಾಗಿ ಮತಾಂತರ ಮಾಡಿದಲ್ಲಿ 3 ರಿಂದ 10 ವರ್ಷ ಕಠಿಣ ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ಕಾನೂನಿನಲ್ಲಿ ಪ್ರಸ್ತಾಪವಿದೆ’ ಎಂದು ತಿಳಿಸಿದರು.

‘ಎಂಇಎಸ್ ಮಹಾ ಎಡವಟ್ಟು ಸಂಘವಾಗಿದ್ದು,
ಅವರ ಪುಂಡಾಟಕ್ಕೆ ಹೇಡಿ ಕೃತ್ಯಗಳಿಗೆ, ಆಟಗಳಿಗೆ ರಾಜ್ಯ ಸರ್ಕಾರ ಗೂಂಡಾ ಕಾಯ್ದೆ ಹಾಕುವ ನಿರ್ಧಾರ ತೆಗೆದುಕೊಂಡಿದೆ. ಎಂಇಎಸ್ ನವರದ್ದು ಇದೇ ಮೊದಲಲ್ಲ, ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂತಹ ಹೇಡಿ ಕೃತ್ಯ ಎಸಗುತ್ತಿದ್ದು, ಕೃತ್ಯ ಎಸಗಿದವರ ವಿರುದ್ಧ ಗೂಂಡಾ ಕಾಯ್ದೆ ಮೂಲಕ ಸರ್ಕಾರ ಪ್ರತ್ಯುತ್ತರ ನೀಡುತ್ತಿದೆ. ಅಲ್ಲದೇ, ಎಂಇಎಸ್ ಬ್ಯಾನ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ತಜ್ಞರ ಜೊತೆ ಪರಾಮರ್ಶಿಸುತ್ತಿದ್ದು, ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಕನ್ನಡ ನಾಡು-ನುಡಿ ಜಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಂಗೊಳ್ಳಿ ರಾಯಣ್ಣ ಅವರ ವಿಗ್ರಹವನ್ನು ಧ್ವಂಸಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಎಂಇಎಸ್ ಈ ರೀತಿ ಮಾಡಲು ಬಿಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಕೆಸರೆರಚಾಟ ನಡೆಸುವ ಬದಲು ಪ್ರತಿಯೊಬ್ಬರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದು ಸಚಿವ ಶ್ರೀರಾಮುಲು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರವಿ ದಂಡಿನ, ಎಸ್.ಎಚ್.ಶಿವನಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆಕಾಶದಲ್ಲಿ ಕೌತುಕ; ರೈಲು ಬೋಗಿಯಂತೆ ಸಾಗಿದ ನಕ್ಷತ್ರಗಳು, ಗಾಬರಿಬಿದ್ದ ಜನರು

ವಿಜಯಸಾಕ್ಷಿ ಸುದ್ದಿ, ಗದಗ:

ಆಗಾಗ ಆಕಾಶದಲ್ಲಿ ಕೌತಕ ನಡೆಯುತ್ತಲೇ ಇರುತ್ತವೆ. ಜನರನ್ನು ನಿಬ್ಬೆರಾಗಿಸುತ್ತಲೇ ಇರುತ್ತವೆ. ಕೆಲವೊಂದು ಕೌತುಕ ಖಗೋಳ ತಜ್ಞರಿಗೆ ಸವಾಲೊಡ್ಡಿದರೆ, ಇನ್ನೂ ಕೆಲವು ಕೌತುಕದ ಹಿಂದಿನ ರಹಸ್ಯ ಬಲು ಬೇಗನೇ ತಿಳಿಯುತ್ತದೆ. ಅಂತಹದ್ದೇ ಒಂದು ಕೌತುಕ ಸೋಮವಾರ ರಾತ್ರಿ ನಡೆದಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಒಂದರ ಹಿಂದೆ ಒಂದು ಎಂಬಂತೆ ಸಾಲು ಸಾಲಾಗಿ ಸಾಗುತ್ತಿರುವ ಬೆಳ್ಳಿ ನಕ್ಷತ್ರಗಳು ಗೋಚರಗೊಂಡಿವೆ. ಅದರಂತೆ, ಗದಗ ಜಿಲ್ಲೆಯ ಕೆಲ ಭಾಗಗಳಲ್ಲಿಯೂ ಕಾಣಿಸಿಕೊಂಡಿದ್ದು, ಜನರನ್ನು ನಿಬ್ಬೆರಗುಗೊಳಿಸಿವೆ.

ಇಂತಹ ಕೌತುಕ ಕಪ್ಪತಗುಡ್ಡ ಹಾಗೂ ಗದಗ ನಗರದಲ್ಲಿ ಗೋಚರಗೊಂಡಿದ್ದು, ಜನರು ಮೂಕ ವಿಸ್ಮಿತರಾಗಿ ವೀಕ್ಷಿಸಿದರು.40ಕ್ಕೂ ಅಧಿಕ ನಕ್ಷತ್ರಗಳು ಸಾಲಾಗಿ ಸಾಗುತ್ತಿರುವುದನ್ನು ಕಂಡು ಏನಿರಬಹುದು ಎಂದು ಜನ ಕೆಲ ಕಾಲ ಗಾಬರಿಬಿದ್ದರು.

ಆಗಸದಲ್ಲಿ ಕಂಡ ಕೌತುಕದ ಬಗ್ಗೆ ಖಗೋಳ ತಜ್ಞರೇ ಸಾಲಾಗಿ ಸಾಗಿದ್ದು ನಕ್ಷತ್ರಗಳೋ ಅಥವಾ ಕೃತಕ ಉಪಗ್ರಹಗಳೋ ಎಂಬುವುದನ್ನು ಸ್ಪಷ್ಟಪಡಿಸಬೇಕಿದೆ.

ಸಾರಿಗೆ ಸಚಿವರ ‘ಕರ್ಮ’ಭೂಮಿಯಲ್ಲೇ ಇಲ್ಲ ಬಸ್ ಸೌಲಭ್ಯ! ವಿದ್ಯಾರ್ಥಿಗಳ ಪರದಾಟ

ಬಸ್‌ಗಾಗಿ ಕಾಯುವುದೇ ಸಾಹಸ; ಗೋಳು ತಪ್ಪಿಸುವರೇ ಸಚಿವ ಬಿ. ಶ್ರೀರಾಮುಲು?

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಕರ್ಮಭೂಮಿ ಗದಗ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಬಸ್‌ಗಾಗಿ ಒಂಟಿಗಾಲಲ್ಲಿ ನಿಲ್ಲಬೇಕಾದ ದುಸ್ಥಿತಿ ಇದೆ. ಶಾಲೆ-ಕಾಲೇಜುಗಳ ಸಮಯಕ್ಕೆ ಬಸ್‌ಗಳು ಬಾರದೆ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಶಾಲೆ, ಕಾಲೇಜಿನಿಂದ ಮರಳಿ ಮನೆಗೆ ಬರಲೂ ಸಮಸ್ಯೆ ಎದುರಿಸುತ್ತಿದ್ದಾರೆ.

ಹೌದು, ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಹಾಗೂ ಅಂಜುಮನ್ ಕಾಲೇಜು ಸೇರಿ ಬಹುತೇಕ ಕಾಲೇಜು ವಿದ್ಯಾರ್ಥಿಗಳ ದಿನನಿತ್ಯದ ಗೋಳಾಟವಿದು. ಈ ಎರಡು ಕಾಲೇಜುಗಳು ಗದಗ-ಮುಳಗುಂದ ರಸ್ತೆಯ ಪಕ್ಕದಲ್ಲಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಇಲ್ಲಿಗೆ ವ್ಯಾಸಂಗ ಮಾಡಲು ಬರುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಹೊರೆಗಿಂತ ಬಸ್ ಏರಿ ಕಾಲೇಜಿಗೆ ಬಂದು ಹೋಗುವುದೇ ಬಹುದೊಡ್ಡ ಸಾಹಸವಾಗಿದೆ.

ಗ್ರಾಮೀಣ ಪ್ರದೇಶಗಳಿಂದ ನಗರದ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ಸೂಕ್ತ ಬಸ್‌ಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿದಿನ ಬಸ್‌ಪಾಸ್ ಇರುವ ವಿದ್ಯಾರ್ಥಿಗಳು ಕಂಡರೆ ಸಾಕು ಸಾರಿಗೆ ಸಂಸ್ಥೆಯ ಬಸ್‌ನ ಚಾಲಕರು ಹಾಗೂ ನಿರ್ವಾಹಕರು ಬಸ್ ನಿಲ್ಲಿಸದೆ ಶರವೇಗದಲ್ಲಿ ಚಲಿಸುತ್ತಿದ್ದಾರೆ. ಅಪ್ಪಿತಪ್ಪಿ ಬಸ್ ನಿಲ್ಲಿಸಿದರೆ ಅದು ಖಾಲಿ ಇರಲಿ, ತುಂಬಿರಲಿ ಸಂಪ್ರದಾಯಕ್ಕೆ ಎಂಬಂತೆ ಒಬ್ಬಿಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಹತ್ತಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಹಣ ಕೊಟ್ಟು ಸಂಚರಿಸುವ ಪ್ರಯಾಣಿಕರು ಇದ್ದರೆ ಬಸ್ ತುಂಬಿ ತುಳುಕುತ್ತಿದ್ದರೂ, ಉಸಿರುಗಟ್ಟುವ ರೀತಿಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದಾರೆ.

ಗೋಳಾಟಕ್ಕೆ ಕೊನೆ ಇಲ್ಲವೇ?

ನಗರದ ಹೊರವಲಯದಲ್ಲಿರುವ ಕಾಲೇಜುಗಳ ಮುಂದೆ ಕೆಎಸ್‌ಆರ್‌ಟಿಸಿಯೇ ಕೋರಿಕೆಯ ಬಸ್ ನಿಲುಗಡೆ ನಾಮಫಲಕ ಹಾಕಿದ್ದರೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಸ್ ನಿಲ್ಲಿಸುತ್ತಿಲ್ಲ. ನಿಲ್ಲಿಸಿದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಬಸ್‌ಗಾಗಿ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು? ಕಾಲೇಜು ಮುಂದಿರುವ ಕೋರಿಕೆಯ ನಿಲುಗಡೆಯ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸಿ ಅನುಕೂಲ ಮಾಡಿಕೊಡುವಂತೆ ವಿದ್ಯಾರ್ಥಿಗಳು ಅಂಗಲಾಚುತ್ತಿದ್ದಾರೆ.

ಸತ್ತರೆ ಹೊಣೆ ಯಾರು?

ಗದಗ-ಹೊನ್ನಾಳ್ಳಿ ರಸ್ತೆ ಸುಧಾರಣಾ ಕಾಮಗಾರಿ ನಡೆಯುತ್ತಿದ್ದು, ನಾಗಾವಿ ಕ್ರಾಸ್‌ವರೆಗೆ ರಸ್ತೆ ಅಗಲೀಕರಣವಾಗಿದೆ. ಇದರಿಂದ ಕೋರಿಕೆಯ ನಿಲುಗಡೆ ನಾಮಫಲಕ ಇಲ್ಲವಾಗಿದೆ. ಹೀಗಾಗಿ ಸರ್ಕಾರಿ ಹಾಗೂ ಅಂಜುಮನ್ ಕಾಲೇಜು ಬಿಟ್ಟ ಬಳಿಕ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಾ ರಸ್ತೆಯ ಮೇಲೆ, ಪಕ್ಕವೇ ನಿಂತುಕೊಳ್ಳುತ್ತಿದ್ದಾರೆ. ಇದರಿಂದ ರಸ್ತೆ ಇಕ್ಕಾಟ್ಟಾಗುತ್ತಿದೆ. ಮುಳಗುಂದ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಿದ್ದು, ಶರವೇಗದಲ್ಲಿ ಬರುವ ವಾಹನಗಳಿಂದ ಅವಘಡ ಸಂಭವಿಸಿದರೆ ಯಾರು ಹೊಣೆ? ಕೂಡಲೇ ಇವೆರಡೂ ಕಾಲೇಜುಗಳ ಹತ್ತಿರ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳ ಜೀವ ಉಳಿಸಬೇಕು.

ಈ ಮಾರ್ಗದಲ್ಲಿ ಬರುವ ಪ್ರತಿ ಬಸ್‌ಗಳನ್ನು ನಿಲ್ಲಿಸುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು. ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ಅವರು ತಮ್ಮ ಕರ್ಮಭೂಮಿಯಾಗಿರುವ ಗದಗ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ನೇರ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಪ್ರತಿನಿತ್ಯ ಕಾಲೇಜು ಬಿಟ್ಟ ಬಳಿಕ ವಿದ್ಯಾರ್ಥಿಗಳು ಬಸ್ ನಿಲ್ದಾಣ ಹಾಗೂ ಊರುಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತಾ ರಸ್ತೆಯ ಮೇಲೆ ನಿಂತುಕೊಳ್ಳುತ್ತಿದ್ದಾರೆ. ಬಸ್ ನಿಲ್ಲಿಸುವಂತೆ ವಿದ್ಯಾರ್ಥಿಗಳು ಕೈ ಮಾಡಿದರೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಸ್ ನಿಲ್ಲಿಸದ ಕಾರಣ ಕೆಲವು ವಿದ್ಯಾರ್ಥಿಗಳು ನಡೆದುಕೊಂಡೇ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾರೆ. ದಯವಿಟ್ಟು ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಿ.

ಪೂರ್ಣಿಮಾ ಹೊಸಮನಿ, ಪ್ರಚಾರ್ಯರು

ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ. ಸೂಕ್ತ ಬಸ್ ಸೌಕರ್ಯ ಒದಗಿಸುವಂತೆ ಅನೇಕ ಬಾರಿ ಹೋರಾಟಗಳನ್ನು ಮಾಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಪ್ರತಿ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು.

ಗಿರೀಶ್ ನರಗುಂದಕರ್, ಎಬಿವಿಪಿ ಧಾರವಾಡ ವಿಭಾಗದ ಪ್ರಮುಖ್

ಮಿಷನ್ ಅಂತ್ಯೋದಯ ತರಬೇತಿ ಕಾರ್ಯಕ್ರಮಕ್ಕೆ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸೋಮವಾರ ನಡೆದ ಗ್ರಾಮೀಣ ಬಡತನ ನಿವಾರಣಾ ಯೋಜನೆ ಮಿಷನ್ ಅಂತ್ಯೋದಯ ಮತ್ತು ಜನರ ಅಭಿವೃದ್ಧಿ ಯೋಜನೆಗಳ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶರಣಬಸಪ್ಪ ಹಳೇಮನಿ, ಬಾಪು ಹಿರೇಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಪಿಡಿಒ ಶೈನಾಜ್ ಮುಜಾವರ್, ಸಂಪನ್ಮೂಲ ವ್ಯಕ್ತಿ ಗಂಗಮ್ಮ ನಾಯಕ್ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

ಬೆಳಗಾವಿಯಲ್ಲಿ ಗಲಾಟೆ ಮಾಡಿದವರೆಲ್ಲ ಕಾಂಗ್ರೆಸಿಗರು!

ವಿಜಯಸಾಕ್ಷಿ ಸುದ್ದಿ, ಗದಗ:

ಬೆಳಗಾವಿಯಲ್ಲಿ ಗಲಾಟೆ ಮಾಡಿದವರೆಲ್ಲ ಕಾಂಗ್ರೆಸಿಗರು. ಗಲಭೆ ಮಾಡಿದವರಲ್ಲಿ ಕೆಲವರು ಕಿಡಿಗೇಡಿಗಳು, ಕಾಂಗ್ರೆಸ್ ಪಕ್ಷದ ಚೇಲಾಗಳಿದ್ದಾರೆ. ಹೀಗಾಗಿ ಎಮ್ಇಎಸ್ ಯಾವುದೇ ಪಕ್ಷದಲ್ಲಿದ್ರೂ ಅರೆಸ್ಟ್ ಮಾಡುವ ಕೆಲಸ ಆಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದರು.

ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರ ಮೇಲೆ ದಾಳಿಗಳಾಗಿವೆ. ನನಗೆ ಗೊತ್ತಿರುವಂತೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಕರ್ನಾಟಕದಲ್ಲಿ ಇರುವ ಕೆಲವು ಪುಂಡರು ಕುಮ್ಮಕ್ಕು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್, ಎಮ್ಇಎಸ್ ಯಾರೇ ಇದ್ದರೂ ಕ್ಷಮಿಸುವ ಪ್ರಶ್ನೆ ಇಲ್ಲ’ ಎಂದರು.

‘‌ಬೆಳಗಾವಿಯಲ್ಲಿ ಶಿವಾಜಿ, ರಾಯಣ್ಣ ನಮಗಾಗಿ ಪ್ರಾಣತ್ಯಾಗ ಮಾಡಿದ್ದು, ಯಾವುದೇ ವ್ಯಕ್ತಿ, ಸಂಘಟನೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳತ್ತೇವೆ.
ಮಹಾನ್ ನಾಯಕರಿಗೆ ಅಗೌರವ ತೋರಿದವರನ್ನು ಅರೆಸ್ಟ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ದುಷ್ಕೃತ್ಯಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಟ್ವೀಟ್ ಮಾಡುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು

ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಗಲಾಟೆ ಮಾಡುವ ಸಂಪ್ರದಾಯವನ್ನು ಎಂಇಎಸ್ ಮೈಗೂಡಿಸಿಕೊಂಡಿದೆ.
ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸದನ ನಡೆಯುತ್ತಿದ್ದು, ಗಲಾಟೆ ಸಂಪ್ರದಾಯ ಕನ್ನಡಿಗರು ಸಹಿಸಲ್ಲ.

ಕಾಂಗ್ರೆಸ್ ರ‌್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಅಧಿವೇಶನ ನಡೆಯಲು ಕಾಂಗ್ರೆಸ್ ನಾಯಕರು ಬಿಡುತ್ತಿಲ್ಲ. ರಾಜಕಾರಣದಲ್ಲಿ ಕಾಂಗ್ರೆಸ್ ನಾಟಕ ಜೋರಾಗಿದೆ.
ಅಧಿವೇಶನ ನಡೆಸಲು ಕಾಂಗ್ರೆಸ್ ನಾಯಕರು ಅನುವು ಮಾಡಿಕೊಡಬೇಕು. ಉತ್ತರ ಕರ್ನಾಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಜನರಿಗೆ ತೋರಿಸುವ ಸಲುವಾಗಿ ಟ್ರ್ಯಾಕ್ಟರ್, ಎತ್ತಿನ ಬಂಡಿ ತರುವ ನಾಟಕ ಮಾಡುತ್ತಿದ್ದೀರಿ’ ಎಂದು ಟಾಂಗ್ ನೀಡಿದರು.

ಎಂಇಎಸ್ ಬ್ಯಾನ್ ಗೆ ಕನ್ನಡ ಪರ ಸಂಘಟನೆಗಳು ಆಗ್ರಹ ವಿಚಾರದ ಕುರಿತು ಮಾತನಾಡಿ ‘ಎಂಇಎಸ್ ಬ್ಯಾನ್ ಮಾಡುವ ವಿಚಾರಕ್ಕೆ ಸಂಪೂರ್ಣ ಬೆಂಬಲವಿದೆ.
ಬ್ಯಾನ್ ಮಾಡುವುದರಿಂದ ಅನುಕೂಲ ಆಗುತ್ತದೆ.
ಈ ಬಗ್ಗೆ ಕೇಂದ್ರಕ್ಕೆ ಸಾಕಷ್ಟು ವರದಿಯನ್ನೂ ನೀಡಿದ್ದೇವೆ ಎಂದು ಹೇಳಿದರು.

‘ಸಿಎಂ ಬದಲಾವಣೆ ವಿಚಾರವನ್ನು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾವುದೇ ಬದಲಾವಣೆ ಇಲ್ಲ. ಕೇವಲ ಊಹಾಪೋಹ. ಯಾರೋ ಮಾತಾಡ್ತಾರೆ. ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆಯಲ್ಲಿ ನಡೆಯಲಿದೆ ಎಂದು ನಮ್ಮ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್‌ ಮೆಣಸಿನಕಾಯಿ ಇದ್ದರು.

ಸಚಿವ ಶ್ರೀರಾಮುಲು ಭರ್ಜರಿ ಪ್ರಚಾರ, ಅನಿಲ್ ಸಾಥ್

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದ 35ನೇ ವಾರ್ಡ್ ನ ಕಳಸಾಪುರ ರಸ್ತೆಯ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಉಷಾ‌ ಮಹೇಶ್ ದಾಸರ ಪರವಾಗಿ ಸೋಮವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಭರ್ಜರಿ ಪ್ರಚಾರ ನಡೆಸಿದರು. ಪಾಂಡುರಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ನಾನು ಹಾಗೂ ಸಿ.ಸಿಪಾಟೀಲರು ಗದಗ ಜಿಲ್ಲಾ ಉಸ್ತುವಾರಿ ಸಚಿರವಾಗಿದ್ದಾಗ ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. 2008-09ರಲ್ಲಿನ ಗದಗ ಜಿಲ್ಲೆಯ ಪರಿಸ್ಥಿತಿ ಹಾಗೂ ಈಗಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿ ಎಂದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ. ಆದರೆ, ಇಲ್ಲಿನ ನಗರಸಭೆಯಲ್ಲಿ ಮಾತ್ರ ಸೋಲುತ್ತಿದ್ದೇವೆ‌. ಹೀಗಾಗಿ 35ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಯಾಗಿರುವ ಉಷಾ ದಾಸರ ಅವರನ್ನು ಗೆಲ್ಲಿಸಿಕೊಡಬೇಕು. ಅಲ್ಲದೇ, ನಗರಸಭೆ ಚುನಾವಣೆಯಲ್ಲಿ ನೀಡುವ ಮತ 2023ರಲ್ಲಿ ಅನಿಲ್‌ ಮೆಣಸಿನಕಾಯಿ ಎಂಎಲ್ಎ ಆಗಲಿದ್ದಾರೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.

ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ಕಾಂಗ್ರೆಸ್ ನವರಿಂದ ನಗರಸಭೆಯಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಂದ ಆಯ್ಕೆಯಾಗಿ ಹೋದ ಕಾಂಗ್ರೆಸ್ ಸದಸ್ಯರು ಜನರ ಕೈಗೆ ಸಿಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬೇರೆ ವಾರ್ಡ್ ಗೆ ಹೋಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅವಳಿ ನಗರದಲ್ಲಿ ಬದಲಾವಣೆ ಆಗಬೇಕಿದೆ. ಚುನಾವಣೆ ಸಂದರ್ಭದಲ್ಲಿ ಅಲೆದಾಡುವ ಪಾಟೀಲರನ್ನು ದೂರ ಇಡುವ ಮೂಲಕ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಕಲಿಸಬೇಕು. ಅಲ್ಲದೇ, ಸಚಿವರಾದ ಶ್ರೀರಾಮುಲು, ಸಿ.ಸಿ.ಪಾಟೀಲರು ಪ್ರಚಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನವರಿಗೆ ಲೈಟ್ ಹತ್ತಿವೆ ಎಂದು ಕಿಡಿಕಾರಿದರು.

ಸಚಿವ ಶ್ರೀರಾಮುಲು ಅವರಿಗೆ ಬಿಜೆಪಿ ಅಭ್ಯರ್ಥಿ ಉಷಾ ದಾಸರ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ರಾಜು ಕುರುಡಗಿ, ಎಂ.ಎಸ್.ಕರಿಗೌಡ್ರ, ಸಿದ್ದು ಪಲ್ಲೇದ, ಮಹೇಶ್ ದಾಸರ, ಅಮರೇಶ್ ಬೆಟಗೇರಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗದಗನ ಜನತೆ ಇಬ್ಬರು ಪಾಟೀಲರನ್ನಷ್ಟೇ ನೋಡಿದ್ದಾರೆ

13ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದ 13ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಗೂಳಪ್ಪ (ಮುತ್ತು) ಹನುಮಂತಪ್ಪ ಮುಶಿಗೇರಿ ಅವರ ಪರವಾಗಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರು ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.

ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ಅನಿಲ್ ಅವರು, 13ನೇ ವಾರ್ಡ್ ನಲ್ಲಿರುವ ಸಮಸ್ಯೆಗಳನ್ನು ಮತದಾರರಿಂದ ಆಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಅವರು ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ಅವಳಿ ನಗರದಲ್ಲಿ ಕಾಂಗ್ರೆಸ್ಸಿಗರ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೀರು, ಚರಂಡಿ, ರಸ್ತೆ, ವಿದ್ಯುತ್ ಸಮಸ್ಯೆ ತಪ್ಪುತ್ತಿಲ್ಲ. ಈ ಹಿಂದೆ ನಗರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಅಲ್ಲದೇ, ಅವಳಿ ನಗರದ ಜನ ಇಬ್ಬರು ಪಾಟೀಲರನ್ನಷ್ಟೇ ನೋಡಿದ್ದಾರೆ.

ಆದರೆ ನಮ್ಮ ಸಿ ಸಿ ಪಾಟೀಲರು ಹಾಗಲ್ಲ, ಅಭಿವೃದ್ಧಿ ಪರ ಪಾಟೀಲರು. ಜನರ ಬಳಿಯೇ ಬಂದು ಜನರ ಸಮಸ್ಯೆ ಹಾಗೂ ಸಲಹೆ ಪಡೆದು ಯಾವ ರೀತಿ ಅವಳಿ ನಗರವನ್ನು ಅಭಿವೃದ್ಧಿ ಮಾಡಬಹುದು ಎಂಬ ನೀಲ ನಕ್ಷೆ ರೆಡಿ ಮಾಡಿ ಮಾದರಿ ನಗರವನ್ನಾಗಿ ಮಾಡಲು ಶ್ರಮಿಸುವ ಪಾಟೀಲರು ‌ಆಗಿದ್ದಾರೆ ಎಂದ ಅನಿಲ‌ ಮೆಣಸಿನಕಾಯಿ, ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಬಂದು ಮತ ಕೇಳುವ ಅಭ್ಯರ್ಥಿಗಳಿಗೆ ಮತ ನೀಡಬೇಡಿ. ಅವಳಿ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎನ್ನುವ ಬಿಜೆಪಿ ಅಭ್ಯರ್ಥಿಗಳಿಗೆ ಮತ‌ ನೀಡಬೇಕು’ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಪತಿ ಉಡುಪಿ, ಪರಮೇಶ ಲಮಾಣಿ, ಕೋಟ್ನಿಕಲ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಬೈಕ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲಿಯೇ ಸಾವು

0

ವಿಜಯಸಾಕ್ಷಿ ಸುದ್ದಿ, ಶಲವಡಿ;

ದ್ವಿ ಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ‌-ನರಗುಂದ ರಸ್ತೆಯ ಶಲವಡಿ ಸಮೀಪ ನಡೆದಿದೆ.

ಗುರುಶಾಂತ್ ನಾವಳ್ಳಿ (26) ಮೃತ ದುರ್ದೈವಿಯಾಗಿದ್ದಾನೆ. ಈರಣ್ಣ ಷಣ್ಮುಖಪ್ಪ ನಾಯ್ಕರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸ್ಥಳೀಯರು ಹೇಳುವ ಪ್ರಕಾರ ಮೃತ ವ್ಯಕ್ತಿ ಗುರುಶಾಂತ್ ಶಲವಡಿಯಿಂದ ಜಮೀನಿಗೆ ಮೆಣಸಿನಕಾಯಿ ಕಾಯಲು ನರಗುಂದ ಕಡೆ ಹೋಗುತ್ತಿದ್ದನಂತೆ. ಇನ್ನೊಬ್ಬ ಬೈಕ್ ಸವಾರ ಜಮೀನು ಕೆಲಸ ಮುಗಿಸಿಕೊಂಡು ಊರಿಗೆ ಬರುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಅಕ್ತಂಗಿಯರಿಗೆ ತೊಂದ್ರೆ ಆಗ್ಬಾರ್ದು ಅಂತಾ ಮತಾಂತರ ಕಾಯ್ದೆ ತರ್ತಿದ್ದೇವೆ ; ಈಶ್ವರಪ್ಪ

ವಿಜಯಸಾಕ್ಷಿ ಸುದ್ದಿ, ಗದಗ:

‘ನಮ್ಮ ಸ್ವಂತ ಅಕ್ಕ ತಂಗಿಯರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದಲೇ ಬಿಗಿ ಮತಾಂತರ ಕಾಯ್ದೆ ತರಲಾಗುತ್ತದೆ. ಹಿಂದೂ ಸಮಾಜಕ್ಕೆ ತೊಂದರೆ ಆಗಬಾರದು ಎಂದು ಕಾಯ್ದೆ ಮಾಡುತ್ತಿದ್ದರೆ; ಬೆರೆಕೆಯವರು ಮಾತ್ರ ವಿರೋಧ ಮಾಡುತ್ತಿದ್ದಾರೆ’
ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

ಶನಿವಾರ ರಾತ್ರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಪೂರ್ಣ ಬಲವಂತದ ಮತಾಂತರವೋ, ಆಸೆ ಆಮಿಷದ ಮತಾಂತರವೋ, ಲವ್‌ ಜೆಹಾದಿಯೋ
ಮತಾಂತರ ಕಾಯ್ದೆ ವಿರೋಧ ಮಾಡುತ್ತಿರುವವರ ಕುಟುಂಬದಲ್ಲಿ ಆದಾಗ ಮಾತ್ರ ಅದರ ತೀವ್ರತೆ ಎಷ್ಟೆಂಬುದು ಅವರಿಗೆ ಗೊತ್ತಾಗುತ್ತದೆ’ ತಿರುಗೇಟು ನೀಡಿದರು.

ಅಧಿಕಾರಕ್ಕೆ ಬಂದರೆ ಕಾಯ್ದೆ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಧೂಳೀಪಟ ಆಗಲಿದೆ. ಅವರ ಸರ್ಕಾರ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ಮುಸಲ್ಮಾನರನ್ನು ತೃಪ್ತಿಪಡಿಸುವ ಯೋಜನೆಯಲ್ಲಿರುವ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೂ ಇಲ್ಲ. ಸಿದ್ದರಾಮಯ್ಯ ಅವರ ಸಿಎಂ ಕನಸು ನನಸಾಗುವುದಿಲ್ಲ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಗದಗ ಗ್ರಾಮೀಣ ಹಿಂದುಳಿದ ವರ್ಗಗಳ ತಾಲೂಕಾಧ್ಯಕ್ಷ ರವಿ ವಗ್ಗನವರ,ರವಿ ಶಿದ್ಲಿಂಗ್ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.

ರಿಕ್ಷಾಗೆ ಕಾರು ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ವಿಜಯಸಾಕ್ಷಿ ಸುದ್ದಿ, ಗದಗ:

ಗೂಡ್ಸ್ ರಿಕ್ಷಾಗೆ ಇನೋವಾ ಕಾರು ಡಿಕ್ಕಿ ಹೊಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಗದಗ-ಕಳಸಾಪೂರ ರಸ್ತೆಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ದುರ್ಘಟನೆಯಲ್ಲಿ ಮೃತಪಟ್ಟಿರುವ ರವಿ‌ ಶಿಂಧೆ (30) ಹಾಗೂ ಗಾಯಗೊಂಡಿರುವ ನಿಖಿಲ್ ರಾಯಭಾಗಿ ಇಬ್ಬರೂ ಗದಗ ಶಹರ ನಿವಾಸಿಯಾಗಿದ್ದಾರೆ.

ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಹೊರಟಿದ್ದ ಕಾರು, ಕಳಸಾಪೂರದಿಂದ ಗದಗ ಕಡೆ ಬರುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಗಾಯಗೊಂಡಿರುವ ನಿಖಿಲ್ ನನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದು ಅರ್ಧ ಗಂಟೆ ಆದರೂ 112 ಹಾಗೂ 108 ವಾಹನಗಳು ಬಂದಿಲ್ಲ ಎಂದು ಸ್ಥಳದಲ್ಲಿದ್ದ‌ವರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!