Home Blog Page 3300

ನಕಲಿ ಹೇರ್ ಕಲರ್ ಮಾರಾಟ; ಬ್ಯೂಟಿ ಪಾರ್ಲರ್ ಮಾಲೀಕನ ವಿರುದ್ಧ ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಸ್ಟ್ರೀಕ್ಸ್ ಕಂಪನಿಯ ಹೇರ್ ಕಲರ್ ನಕಲು ಮಾಡಿ ಗ್ರಾಹಕರಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಕುರಿತು ಗದಗನ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಗದಗ ನಗರದ ಬ್ಯಾಂಕ್‌ ರಸ್ತೆಯ ವರ್ಧಮಾನ್ ಮಾರ್ಕೆಟ್ ದಲ್ಲಿರುವ ಮಹಾಲಕ್ಷ್ಮಿ ಬ್ಯೂಟಿ ಸೆಂಟರ್ ಮಾಲೀಕ ನಗರದ ಶಹಾಪುರ ಪೇಟೆಯ ಭರತಕುಮಾರ ಕರ್ನಾಜಿ ಲೋಹಾರ ವಿರುದ್ಧ ಹೈಜೆನಿಕ್ ರೀಸರ್ಚ್ ಇನ್‌ಸ್ಟಿಟ್ಯೂಟ್ ದೂರು ದಾಖಲಿಸಿದೆ.

ನಗರ ಠಾಣೆಯ ಪೊಲೀಸರು, ಬ್ಯೂಟಿ ಪಾರ್ಲರ್ ನಲ್ಲಿ ಇದ್ದ 250 ಎಂಎಲ್ ನ 2 ಸ್ಟ್ರೀಕ್ಸ್ ಪ್ರೊಫೆಷನಲ್ ಹೇರ್ ಕಲರ್ ಪಡೆದು ಪರಿಶೀಲಿಸಿದ್ದು, ಹೈಜೆನಿಕ್ ರಿಸರ್ಚ್ ಇನ್‌ಸ್ಟಿಟ್ಯೂಟ್ ತಯಾರಿಸುವ ಸ್ಟ್ರೀಕ್ಸ್ ಕಂಪನಿಯ ಲೋಗೋ ಬಳಸಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಖಚಿತಪಟ್ಟಿದೆ.

ನಗರಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಭಾರೀ ಮಳೆ; ಒಂದೇ ಕುಟುಂಬದ ಏಳು ಜನರ ಸಾವು

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಯೊಂದು ಕುಸಿದು ಐದು ವರ್ಷದ ಬಾಲಕ ಸೇರಿ ಏಳು ಜನ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಇಂದು ಸಂಜೆ ಜರುಗಿದೆ.

ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಎರಡು ದಿನಗಳಿಂದ ಆಗಾಗ ಸುರಿಯುತ್ತಿರುವ ಭಾರಿ ಮಳೆಗೆ ಮಣ್ಣಿನ ಗೋಡೆ ನೆನದು ಏಕಾಏಕಿ ಮನೆ ನೆಲಸಮಗೊಂಡಿದೆ. ಮನೆಯಲ್ಲಿದ್ದ ಎಂಟು ಜನ ಕುಟುಂಬ ಸದಸ್ಯರ ಪೈಕಿ ಅವಶೇಷಗಳಡಿ ಸಿಲುಕಿ ಐದು ವರ್ಷದ ಮಗು ಸೇರಿ ಐವರು ಜೀವಂತ ಸಮಾಧಿಯಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಸ್ಥಳೀಯರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅದರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎಸ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಂಬುಲೆನ್ಸ್ ಜೊತೆಗೆ ಸ್ಥಳಕ್ಕೆ ಧಾವಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ

ವೈದ್ಯನಿಗೆ ಕಪಾಳಮೋಕ್ಷ ..? ಕ್ರಿಕೆಟ್ ಆಟದ ವೇಳೆ ಕೈ ಕೈ ಮಿಲಾಯಿಸಿದ ಇಲಾಖೆ ಸಿಬ್ಬಂದಿ!

ವಿಜಯಸಾಕ್ಷಿ ಸುದ್ದಿ, ಗದಗ


ಪಿಟ್ ಇಂಡಿಯಾ ಅಭಿಯಾನದಡಿ ನಡೆದ ಕ್ರಿಕೆಟ್ ಪಂದ್ಯಾವಳಿ ವೇಳೆ ಸಿಕ್ಸರ್ ವಿಷಯಕ್ಕೆ ಪಂಚಾಯತ್ ರಾಜ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿದ ಘಟನೆ ರೋಣ ಪಟ್ಟಣದಲ್ಲಿ ನಡೆದಿದೆ.

ಗದಗ ಜಿಲ್ಲೆಯ ರೋಣ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪಿಟ್ ಇಂಡಿಯಾ ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ಸ್ವೀಪ್ ವತಿಯಿಂದ ಕ್ರೀಡಾಕೂಟ ನಡೆಯುತ್ತಿದೆ.

ಮಂಗಳವಾರ ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಆರೋಗ್ಯ ಇಲಾಖೆ ತಂಡದ ಆಟಗಾರ ಸಿಕ್ಸ್ ಹೊಡೆದಾಗ, ತಾಲೂಕು ಪಂಚಾಯತಿ ತಂಡದ ಆಟಗಾರ ಕ್ಯಾಚ್ ಹಿಡಿದರು. ಆದರೆ, ಬ್ಯಾಟಿಂಗ್ ಮಾಡುವ ತಂಡದ ಆಟಗಾರರು ಬೌಂಡರಿ ಗೇರೆ ಟಚ್ ಮಾಡಿ ಕ್ಯಾಚ್ ಹಿಡಿದಿದೆ ಎಂದು ವಾದಿಸಿದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಈ ವೇಳೆ ಮಧ್ಯೆ ಪ್ರವೇಶಿಸಿದ ತಾಪಂ ಇಒ ಸಂತೋಷ ಪಾಟೀಲ ಪಂದ್ಯಾವಳಿ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಎರಡೂ ತಂಡದ ಆಟಗಾರರು ವಾಗ್ವಾದ ನಿಲ್ಲಿಸಿ ವಾಪಸ್ ತೆರಳಿ ಆಟ ಪ್ರಾರಂಭಿಸಿದರು.

ವೈದ್ಯನಿಗೆ ಕಪಾಳಮೋಕ್ಷ

ತಾಲೂಕು ಪಂಚಾಯತಿ ಸಿಬ್ಬಂದಿಯೊಬ್ಬರು ಆರೋಗ್ಯ ಇಲಾಖೆಯ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಪರಿಣಾಮವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಆಕ್ರೋಶಗೊಂಡರು. ಇದೇ ಸಂದರ್ಭದಲ್ಲಿ ಸಹನೆ ಕಳೆದುಕೊಂಡ ಸಿಬ್ಬಂದಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡಿದ್ದರಿಂದ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಪರಸ್ಪರರು ಮತ್ತೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದೀಗ ಈ ಪ್ರಕರಣ ಜಿಲ್ಲೆಯ ನೌಕರರಲ್ಲಿ ಚರ್ಚೆಯ ವಿಷಯವಾಗಿದ್ದು, ಮುಂದೆ ಏನಾಗುತ್ತೋ ಎಂಬುದೀಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಜನರಿಗೆ ಬುದ್ದಿ ಹೇಳಬೇಕಾದ ಅಧಿಕಾರಿ ವರ್ಗ, ಕೈ ಕೈ‌ ಮಿಲಾಯಿಸುವು ಹಂತಕ್ಕೆ ಹೋಗಿದ್ದು ವಿಪರ್ಯಾಸ.

ತಾಯಿ, ಮಗನ ಜೀವಕ್ಕೆ ಕುತ್ತು ತಂದ ಭಜಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಉತ್ತರ ಕರ್ನಾಟಕದ ಭಜಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಾಮಾನ್ಯ. ಆದರೆ, ಈ ಭಜಿಯೇ ತಾಯಿ ಮತ್ತು ಮಗನ ಜೀವಕ್ಕೆ ಕುತ್ತು ತಂದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುದಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಹುದಲಿ ಗ್ರಾಮದ ಪಾರ್ವತಿ ಮಾರುತಿ ಮಳಗಲಿ (58) ಮತ್ತು ಮಗ ಸೋಮನಿಂಗ ಮಾರುತಿ ಮಳಗಲಿ (28) ಮೃತ ದುರ್ದೈವಿಗಳು.

ಏನಾಯಿತು: ಹೊಲಕ್ಕೆ ಹೋಗಿದ್ದ ತಾಯಿ ಮತ್ತು ಮಗ ಕೆಲಸ ಮುಗಿಸಿ ಸಂಜೆ ಮನೆಗೆ ಮರಳಿ ಭಜಿ ಮಾಡಿ ಇಬ್ಬರೂ ಸೇರಿ ತಿಂದಿದ್ದಾರೆ. ಕೆಲ ಸಮಯದ ನಂತರ ಇಬ್ಬರಿಗೂ ವಾಂತಿ ಭೇದಿ ಶುರುವಾಗಿದೆ.

ಸ್ಥಳೀಯ ವೈದ್ಯರ ಬಳಿಗೆ ತೋರಿಸಿದ್ದು, ವೈದ್ಯರು ಫುಡ್ ಫಾಯಿಸನ್ ಔಷಧಿ ಕೊಟ್ಟಿದ್ದಾರೆ. ಔಷಧಿ ತೆಗೆದುಕೊಂಡರೂ ವಾಂತಿ ಭೇದಿ ಕಡಿಮೆಯಾಗದೇ ತೀವ್ರ ಅಸ್ವಸ್ಥಗೊಂಡಿದ್ದರಿಂದ ಇಬ್ಬರನ್ನೂ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ದಾರಿ ಮಧ್ಯದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸಿಸುತ್ತಿದ್ದರು. ಫುಡ್ ಫಾಯಿಸನ್ ನಿಂದ ಸಾವು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸತ್ಯ ಬಯಲಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಮೃಗ ಬೇಟೆ; ಸೆಟ್ಲಮೆಂಟ್ ನ ಇಬ್ಬರು ಸೇರಿ ಮೂವರು ಬೇಟೆಗಾರರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೃಷ್ಣಮೃಗ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು
ಅರಣ್ಯ ಇಲಾಖೆ ಹಾಗೂ ಗ್ರಾಮೀಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಎಸ್ ಎಮ್ ಕೃಷ್ಣ ನಗರದ ಬಳಿ‌ ಇರುವ ತ್ಯಾಜ್ಯ ವಿಲೇವಾರಿ ಘಟಕದ ಸಮೀಪದಲ್ಲೇ ಕೃಷ್ಣಮೃಗದ ಮಾಂಸ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಗದಗನ ಅರಣ್ಯ ಇಲಾಖೆಯ ಅಧಿಕಾರಿ ರಾಜು ಗೋಂದಕರ್ ಹಾಗೂ ಸಿಬ್ಬಂದಿ, ಗ್ರಾಮೀಣ ಪೊಲೀಸರ ಸಹಕಾರದೊಂದಿಗೆ ದಾಳಿ ಮಾಡಿದ್ದರು.

ಗದಗ ತಾಲೂಕಿನ ಕಣಗಿನಹಾಳ ಗ್ರಾಮದ ಅರ್ಜುನ ಗಿರಿಯಪ್ಪ ಹರಣಶಿಕಾರಿ, ಬೆಟಗೇರಿಯ ಸೆಟ್ಲಮೆಂಟ್ ನಿವಾಸಿಗಳಾದ ರಮೇಶ್ ಮಾನಪ್ಪ ಚವ್ಹಾಣ ಹಾಗೂ ಸುರೇಶ ಚಂದ್ರು ದೊಡ್ಡಮನಿ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 15 ಕೆಜಿ ಕೃಷ್ಣಮೃಗ ಮಾಂಸ, ಎರಡು ಫೋನ್ ಮತ್ತು ಬೈಕ್ ವಶ ಪಡಿಸಿಕೊಳ್ಳಲಾಗಿದೆ.

ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗದಗ ಬೆಟಗೇರಿ ನಗರಸಭೆ ಚುನಾವಣೆ- ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

0

ವಿಜಯಸಾಕ್ಷಿ ಸುದ್ದಿ, ಗದಗ

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2021-22 ಕ್ಕೆ ಸಂಬಂಧಿಸಿದಂತೆ, ಗದಗ-ಬೆಟಗೇರಿ ನಗರಸಭೆ ಮತದಾರ ಪಟ್ಟಿ ತಯಾರಿಸುವ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಗಳನ್ನು ಸಿದ್ದಪಡಿಸುವ ಕುರಿತು ಆಯೋಗವು ನೀಡಿರುವ ವೇಳಾಪಟ್ಟಿಯಂತೆ ಅಕ್ಟೋಬರ್ 4 ರಂದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಗಳನ್ನು ಅಳವಡಿಸಿಕೊಂಡು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಸದರಿ ಮತದಾರ ಪಟ್ಟಿಗಳು ಮತದಾರರ ಪರಿಶೀಲನೆಗಾಗಿ ಗದಗ-ಬೆಟಗೇರಿ ನಗರಸಭೆ, ತಹಶೀಲ್ದಾರ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ವೆಬ್ ಸೈಟ್ www.gadag.nic.in ನಲ್ಲಿ ಪರಿಶೀಲನೆಗೆ ಲಭ್ಯವಿರುತ್ತವೆ.

ಸದರಿ ನಗರ ಸ್ಥಳೀಯ ಸಂಸ್ಥೆಗಳ ಮತದಾರರ ಹೆಸರು ತಾವು ವಾಸವಿರುವ ವಾರ್ಡಿನ ವ್ಯಾಪ್ತಿಯಲ್ಲಿ ಇರದೆ ಬೇರೆ ವಾರ್ಡಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಹಾಗೂ ಗ್ರಾಮೀಣ ಮತದಾರರ ಹೆಸರನ್ನು ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆಯನ್ನು ಸಂಬಂಧಿಸಿದ ಗದಗ ತಾಲೂಕಿನ ಗೊತ್ತುಪಡಿಸಿದ ಅಧಿಕಾರಿಯಾದ ತಹಶೀಲ್ದಾರ, ಗದಗ ಇವರಿಗೆ ಅಕ್ಟೋಬರ್ 11 ರೊಳಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣೆ ವಿಭಾಗದ ಪ್ರಕಟಣೆ ತಿಳಿಸಿದೆ.

ಬ್ಯಾಂಕ್ ನೌಕರನ ಮನೆಗೆ ಕನ್ನ; ಚಿನ್ನ, ಬೆಳ್ಳಿ ದೋಚಿದ ಕಳ್ಳರು

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಟ್ರಜರಿಯಲ್ಲಿಟ್ಟಿದ್ದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳ್ಳವು ಮಾಡಿದ ಘಟನೆ ಗದಗ ಕೆಎಚ್ ಬಿ ಕಾಲೋನಿಯಲ್ಲಿ ನಡೆದಿದೆ.

ಬ್ಯಾಂಕ್ ಉದ್ಯೋಗಿ ಸುರೇಂದ್ರ ಗುಡಿ ಅವರು ಬೇರೆ ಊರಿಗೆ ಹೋಗಿದ್ದಾಗ, ಮನೆಯಲ್ಲಿ ಯಾರು ಇರದ ಸುಳಿವು ಅರಿತ ಕಳ್ಳರು ಮನೆಗೆ ಕನ್ನ ಹಾಕಿದ್ದು, 6 ಗ್ರಾಂ ಚಿನ್ನ, 610 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 25 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದತ್ತ ಪೀಠದಲ್ಲಿ ಹಿಂದುಗಳ ಪೂಜೆಗೆ ಮುಕ್ತ ಅವಕಾಶ ನೀಡಿ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ದತ್ತ ಪೀಠವೇ ಬೇರೆ, ಬಾಬಾ ಬುಡನ್ ದರ್ಗಾನೇ ಬೇರೆ. ಇಲ್ಲಿ ಅನಗತ್ಯವಾಗಿ ನಿರ್ಮಿಸಿರುವ ದರ್ಗಾಗಳನ್ನು ನಾಗೇನಹಳ್ಳಿಗೆ ಸ್ಥಳಾಂತ ಮಾಡಿ. ದತ್ತ ಪೀಠವನ್ನು ಹಿಂದುಗಳಿಗೆ ಮುಕ್ತವಾಗಿ ಪೂಜೆಗೆ ಬಿಡುವಂತೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ‌.

ದತ್ತಪೀಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸಲ್ಮಾನರು ಕಣ್ತೆರೆದು ನೋಡಬೇಕು. ನಾಗೇನಹಳ್ಳಿ ದರ್ಗಾ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದುಗಳ ವಿರುದ್ಧ ನಿರ್ಣಯ ಕೈಗೊಂಡಿತ್ತು. ಸುಪ್ರೀಂಕೋರ್ಟ್ ಆದೇಶವಿದ್ದರೂ ಹಿಂದುಗಳಿಗೆ ಪೂಜೆಗೆ ಅವಕಾಶ ನೀಡಿರಲಿಲ್ಲ. ಸಮಿತಿ ರಚಿಸಿ ಮುಜಾವರ್ ರಿಂದ ಪೂಜೆಗೆ ಅವಕಾಶ ಮಾಡಿತ್ತು. ಹಿಂದಿನ ಸರ್ಕಾರದ ಮುಜಾವರ್ ನೇಮಕವನ್ನು ಹೈಕೋರ್ಟ್ ರದ್ದು ಮಾಡಿದೆ.

ದತ್ತ ಪೀಠದಲ್ಲಿ ಮುಜಾವರ್ ಪೂಜೆ ಮಾಡುವುದಲ್ಲ. ಹಿಂದು ಅರ್ಚಕರ ಮೂಲಕವೇ ಪೂಜೆ ಮಾಡಬೇಕೆಂಬ ರೂಪದಲ್ಲಿ ಆದೇಶ ನೀಡಿದೆ ಎಂದು ಹೇಳಿದರು.

ನಾನು ದತ್ತ ಪೀಠ ಹೋರಾಟದ ಮೂಲಕವೇ ಸಾರ್ವಜನಿಕ ಜೀವನಕ್ಕೆ ಬಂದವನು. ದತ್ತ ಪೀಠದಯ ಹೋರಾಟದಿಂದಲೇ ಜನಪ್ರತಿನಿಧಿಯಾಗಿ, ಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಮತ್ತಷ್ಟು ಹಿಂದುತ್ವದ ಪರ ಕೆಲಸ ಮಾಡುವಂತೆ ಬೇಡಿಕೊಂಡಿದ್ದೇನೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು

ಕಲಬುರಗಿ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ನಲವತ್ತು ಶಾಸಕರು ಬಿಜೆಪಿಯಿಂದ ಕಾಂಗ್ರೆಸ್ ಗೆ ಬರ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳ್ತಾರೆ. ನಾಲ್ಕು ಜನ ಶಾಸಕರೂ ಹೋಗೋದಿಲ್ಲ. ಸಾಯೋ ಪಾರ್ಟಿಗೆ ಯಾರು ಹೋಗಿ ಸೇರಿಕೊಳ್ತಾರೆ. ಡಿ.ಕೆ.ಶಿವಕುಮಾರ್ ಅವರನ್ನು ಯಾವ ಹುಚ್ಚಾಸ್ಪತ್ರೆಗೆ ಸೇರಿಸಬೇಕು
ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದ್ರೆ ಕಾಂಗ್ರೆಸ್ ನವರು ನಡುಗಿ ಹೋಗ್ತಾರೆ.
ಬಹುತೇಕ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಡಿಪಾಜಿಟ್ ಕಳೆದುಕೊಳ್ಳುತ್ತಾರೆ. ಬೇರೆ ಮನೆಯವರನ್ನು ಹುಡುಕಿಕೊಂಡು ಬಂದು ಟಿಕೆಟ್ ನೀಡ್ತಾರೆ. ಕಾಂಗ್ರೆಸ್ ನಲ್ಲಿ ಕಾರ್ಯಕರ್ತರೇ ಇಲ್ವಾ ಎಂದು ಪ್ರಶ್ನಿಸಿದ ಅವರು, ಎರಡೂ ಉಪ ಚುನಾವಣೆಯಲ್ಲಿ ನಾವೇ ಗೆಲ್ತೇವೆ ಎಂದು ಹೇಳಿದರು.

ಹಿಂದುತ್ವ ಬಿಜೆಪಿ ಅಜೆಂಡಾದ ಈಶ್ವರಪ್ಪ ತಂಟೆಗೆ ನಾನು ಹೋಗೋದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಏನು ಮಾತನಾಡುತ್ತೇನೆಂದು ಅವರಿಗೆ ಗೊತ್ತಿದೆ.‌ ಅದಕ್ಕಾಗಿ ನನ್ನ ತಂಟೆಗೆ ಬರಲ್ಲ. ಇನ್ನಾದರೂ ಏಕ ವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.

ಸೆಲ್ಫಿ ಗೀಳು; 140 ಅಡಿ ಕಂದಕಕ್ಕೆ ಬಿದ್ದರೂ ಬದುಕುಳಿದ ಯುವಕ

ವಿಜಯಸಾಕ್ಷಿ ಸುದ್ದಿ, ಗೋಕಾಕ

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ 140 ಅಡಿ ಆಳದ ಕಂದಕಕ್ಕೆ ಬಿದ್ದ ಯುವಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಪ್ರದೀಪ ಸಾಗರ ಅದೃಷ್ಟವಂತ ಯುವಕ. ಬೆಳಗಾವಿಯ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ ಶನಿವಾರ ರಜೆ ಮಜಾ ಜಳೆಯಲು ಸ್ನೇಹಿತರ ಜತೆ ಗೋಕಾಕ್ ಫಾಲ್ಸ್ ಗೆ ಬಂದಿದ್ದ.

ಫಾಲ್ಸ್ ಮೇಲಿನ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸುವ ವೇಳೆ 140 ಅಡಿ ಆಳದ ಕಂದಕಕ್ಕೆ ಜಾರಿಬಿದ್ದಿದ್ದಾನೆ. ಸ್ನೇಹಿತರು ತಕ್ಷಣ ಗೋಕಾಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಗೋಕಾಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಾತ್ರಿಯವರೆಗೆ ರಕ್ಷಣಾ ಕಾರ್ಯಾಚರಣೆ ‌‌ನಡೆಸಿದ್ದರು. ಬದುಕುಳಿದಿರುವುದು ಅಸಾಧ್ಯವಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ಮೊಟಕುಗೊಳಿಸಿ ಸಿಬ್ಬಂದಿ ಹಾಗೂ ಸ್ನೇಹಿತರು ತೆರಳಿದ್ದರು.

ಆದರೆ ಬೆಳಗಿನ ಜಾವ 4 ಗಂಟೆಗೆ ಪ್ರದೀಪ ಸ್ನೇಹಿತರಿಗೆ ಕರೆ ಮಾಡಿ, ತನ್ನ ಲೋಕೇಶನ್ ಶೇರ್ ಮಾಡಿದ್ದ. ಸ್ನೇಹಿತರು ತಕ್ಷಣ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

140 ಅಡಿ ಆಳದ ಕಂದಕಕ್ಕೆ ಇಳಿದ ಆಯೂಬ್ ಖಾನ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪ್ರದೀಪನನ್ನು ರಕ್ಷಿಸಿ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿದ್ದ ಸ್ಥಿತಿ ನೋಡಿದರೆ ಯುವಕ ಬದುಕುಳಿದಿರುವುದು ಪವಾಡವೆಂದೇ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!