Home Blog Page 3382

‘ಕಪ್ಪತ’ಗಿರಿ ಬಿಟ್ಟು ನಗರದಲ್ಲೇಕೆ ಉತ್ಸವ?: ಉತ್ಸವದ ನೆಪದಲ್ಲಿ ಸರ್ಕಾರದ ಹಣ ಲೂಟಿ ಆರೋಪ?

0
  • ಕಾಡಂಚಿನ 32 ಹಳ್ಳಿ ಜನರಿಗಿಲ್ಲ ಜಾಗೃತಿ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ

ಕಪ್ಪತಗುಡ್ಡ ಬಯಲು ಸೀಮೆಯ ಸಹ್ಯಾದ್ರಿ ಎಂದೇ ಪ್ರಖ್ಯಾತಿ ಪಡೆದಿದ್ದು, ತನ್ನೊಡಲೊಳಗೆ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು, ವನ್ಯಜೀವಿ, ಖನಿಜ ಸಂಪತ್ತು ಶೇಖರಿಸಿಕೊಂಡಿದೆ. ಸಂಪತ್ಭರಿತ ಪ್ರದೇಶದೊಂದಿಗೆ ಜಿಲ್ಲೆಯನ್ನು ಶ್ರೀಮಂತಗೊಳಿಸಿ ಪ್ರಾಕೃತಿಕ ಸೌಂದರ್ಯ ಹೆಚ್ಚಿಸಿದೆ.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪ್ರತಿವರ್ಷ ಕಪ್ಪತ ಉತ್ಸವ ಹಮ್ಮಿಕೊಳ್ಳುತ್ತಿದ್ದು, ಅಧಿಕಾರಿಗಳು ಕಪ್ಪತಗುಡ್ಡದ ಸೆರಗಿನ ಹಳ್ಳಿಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹರಡಿರುವ ಕಪ್ಪತ್ತಗುಡ್ಡದ ಉತ್ಸವ ಗದಗನಲ್ಲಿ ಆಚರಣೆ ಮಾಡುವುದು ಬಿಟ್ಟು ಕಪ್ಪತ್ತಗುಡ್ಡದಲ್ಲಿಯೇ ಆಚರಿಸಬೇಕು ಎಂದು ಗುಡ್ಡದಂಚಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಮಾರು 80 ಕಿ.ಮೀ. ವಿಸ್ತೀರ್ಣದ ಕಪ್ಪತಗುಡ್ಡ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕು ವ್ಯಾಪ್ತಿಯುದ್ದಕ್ಕೂ ಚಾಚಿಕೊಂಡಿದ್ದು, 32 ಹಳ್ಳಿಗಳನ್ನು ಒಳಗೊಂಡಿದೆ. ಹೇರಳ ಔಷಧ ಸಸ್ಯಗಳನ್ನೊಳಗೊಂಡಿರುವ ಕಪ್ಪತಗುಡ್ಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತ ಮನಸ್ಸಿಗೆ ಮುದ ನೀಡುತ್ತಿದೆ. ವನ್ಯಜೀವಿಗಳು, ವಿವಿಧ ಸಸ್ಯ ಪ್ರಭೇದಗಳು, ವನಸ್ಪತಿ ಹಾಗೂ ಹಳ್ಳಕೊಳ್ಳಗಳನ್ನು ಹೊಂದಿರುವ ಕಪ್ಪತಗುಡ್ಡ ಸದ್ಯ ಮಾನವನ ದುರಾಸೆಯಿಂದಾಗಿ ನಶಿಸಿ ಹೋಗುತ್ತಿದೆ.

ಬೇಸಗೆಯಲ್ಲಿ ಗುಡ್ಡಕ್ಕೆ ಬೆಂಕಿ

ಬೇಸಗೆಯಲ್ಲಿ ಕಾಡಂಚಿನ ಪ್ರದೇಶದಲ್ಲಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಹಾಗೂ ವಿಂಡ್ ಮಿಲ್‌ಗಳಿಂದ ಉಂಟಾಗುವ ಕಿಡಿಯಿಂದ ಅನೇಕ ಜೀವ, ಸಸ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದೆ. ಮಲ್ಲಯ್ಯನ ನೆತ್ತಿ ಸುಟ್ಟರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಂಬ ಮೂಢನಂಬಿಕೆ ಹೋಗಲಾಡಿಸಿ ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಬೇಕು.

ಗಣಿ ಕುಳಗಳ ಕಣ್ಣು

ಜಿಲ್ಲೆಯ ಪ್ರಕೃತಿ ಸೌಂದರ್ಯ ಹೆಚ್ಚಿಸಿದ ರಮಣೀಯ ಸಂಪತ್ಭರಿತ ಗುಡ್ಡದ ಮೇಲೆ ಗಣಿ ಕುಳಗಳ ಕಣ್ಣು ಬಿದ್ದಿದೆ. ಕಪೋತಗಿರಿಯನ್ನು ನಾಶಗೊಳಿಸಲು ಅವರೆಲ್ಲ ಹೊಂಚು ಹಾಕಿ ಕುಳಿತಿರುವುದು ದುರದೃಷ್ಟಕರ. ಹಾಗಾಗಿ ಪ್ರಾಣಿ ಪಕ್ಷಿಗಳನ್ನು ಒಕ್ಕಲೆಬ್ಬಿಸುವ ಜನರನ್ನ ಮಟ್ಟ ಹಾಕಬೇಕಿದೆ.

ಗುಡ್ಡದೊಂದಿಗೆ ಭಾವನಾತ್ಮಕ ಸಂಬಂಧ

ಕಪ್ಪತ್ತಗುಡ್ಡದ ಸುತ್ತಲಿನಲ್ಲಿ 32 ಹಳ್ಳಿಗಳು ಬರುತ್ತವೆ. ಈ ಹಳ್ಳಿಗಳ ಜನರು ಕಪ್ಪತ್ತಗುಡ್ಡದ ಜೊತೆಯಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕಪ್ಪತ್ತಗುಡ್ಡದ ಸಂರಕ್ಷಣೆ ಮಾಡುವ ಹೊಣೆಗಾರಿಕೆಯೂ ಇಲ್ಲಿನ ಜನರ ಮೇಲಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಪ್ಪತ್ತಗುಡ್ಡದ ಉತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಲು ಹೊರಟಿರುವುದು ಅಕ್ಷಮ್ಯವಾಗಿದೆ.

ಜನರ ಭಾವನೆಗೆ ಸ್ಪಂದಿಸಿ

ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಜನರ ಜೊತೆಗೆ ಕಪ್ಪತ್ತಗುಡ್ಡದ ರಕ್ಷಣೆ ಕುರಿತು ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕಿದೆ. ಉತ್ಸವದಲ್ಲಿ ಈ ಭಾಗದ ಜನರು ಪಾಲ್ಗೊಳ್ಳಲು ಭಾಗೀದಾರರಾಗಬೇಕು. ಕಪ್ಪತ್ತಗುಡ್ಡದ ಉತ್ತರದಾಯಿತ್ವವು ಬರೀ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಲ್ಲ. ಈ ಭಾಗದ ಜನರು, ರೈತರು, ಪರಿಸರವಾದಿಗಳಿಗೂ ಸಂಬಂಧಿಸಿದೆ. ಕಪ್ಪತ್ತಗುಡ್ಡದ ಉತ್ಸವವನ್ನು ಕಪ್ಪತ್ತಗುಡ್ಡದ ಪರಿಸರದಲ್ಲೇ ಆಚರಿಸುವ ಮೂಲಕ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಬೇಕು.

ಉತ್ಸವ ಯಾವ ಪುರುಷಾರ್ಥಕ್ಕೆ?

ಕಳೆದ ಫೆಬ್ರವರಿಯಲ್ಲಿಯೂ ಇದೆ ರೀತಿ ನಗರದಲ್ಲಿ ಕಪ್ಪತ ಉತ್ಸವ ನಡೆದಾಗಲೂ ಕಪ್ಪತಗುಡ್ಡದಂಚಿನ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಕಪ್ಪತಗುಡ್ಡದಲ್ಲಿಯೇ ಉತ್ಸವ ಹಮ್ಮಿಕೊಳ್ಳುವಂತೆ ಮನವಿ ಸಲ್ಲಿಸಿದ್ದರಂತೆ. ಆದರೆ, ಕೋಟ್ಯಂತರ ಹಣ ಖರ್ಚು ಮಾಡಿ ’ವನದೇವಿ’ ನರ್ಸರಿ ನಿರ್ಮಿಸಿದ್ದೇಕೆ? ಮತ್ತು ನಗರದಲ್ಲಿ ಕಪ್ಪತ ಉತ್ಸವ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಎದ್ದಿದೆ.

ಉತ್ಸವದ ಹೆಸರಲ್ಲಿ ಹಣ ಲೂಟಿ?

ಪ್ರತಿವರ್ಷ ನಗರದಲ್ಲಿ ನಡೆಯುವ ಕಪ್ಪತ ಉತ್ಸವಕ್ಕೆ ಹಳ್ಳಿ ಜನಕ್ಕೆ ದಿನಗೂಲಿಯಂತೆ ದುಡ್ಡು ಕೊಟ್ಟು
ಕಾರ್ಯಕ್ರಮಕ್ಕೆ ಕರೆ ತರುತ್ತಿದ್ದಾರೆ. ಕಾಟಾಚಾರಕ್ಕೆ ಕಪ್ಪತ ಉತ್ಸವ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ. ಕೋಟಿಗಟ್ಟಲೇ ಹಣ ವ್ಯಯಿಸಿದ್ದು, ಬೋರ್ಗಲ್ಲು ಮೇಲೆ ನೀರು ಸುರಿದಂತೆ ಎಂದು ಡೋಣಿ ಗ್ರಾಮದ ಶಂಕರಗೌಡ ಜಾಯಿನಗೌಡರ ಆರೋಪಿಸಿದ್ದಾರೆ.

ನಮ್ಮದು ಇಷ್ಟೇ!

ಸರ್ಕಾರದಿಂದ ಕಾರ್ಯಕ್ರಮಕ್ಕೆ ಅನುದಾನ ಕೊಟ್ಟಿಲ್ಲ. ಕಳೆದ ವರ್ಷ ಪ್ರಾರಂಭಿಸಿದ ಕಪ್ಪತ ಉತ್ಸವ ಮುಂದುವರಿಸುತ್ತಿದ್ದೇವೆ. ಆರೋಪ ಏನು ಬೇಕಾದರೂ ಮಾಡಬಹುದು. ಕಾರ್ಯಕ್ರಮ ನಡೆಸಲು ಅನುದಾನ, ಸೌಲಭ್ಯ ಇರಬೇಕು. ಕಪ್ಪತಗುಡ್ಡದಲ್ಲಿ ಎಲ್ಲೂ ಸೌಲಭ್ಯಗಳಿಲ್ಲ. ಜನರನ್ನು ಕರೆದುಕೊಂಡು ಹೋಗಿ ಎಲ್ಲಿ ಕೂರಿಸುತ್ತೀರಿ? ಯಾವ ಊರಲ್ಲಿ ಮಾಡುತ್ತೀರಿ? ಯಾವ ಹಳ್ಳಿಯಲ್ಲಿ ಮಾಡಬೇಕು? ಡಂಬಳದಲ್ಲಿ ಮಾಡಿದರೆ ಡೋಣಿಯವರು, ಡೋಣಿಯಲ್ಲಿ ಮಾಡಿದರೆ ಕಡಕೋಳದವರು ಗಲಾಟೆ ಮಾಡ್ತಾರೆ. ಕಪ್ಪತಗುಡ್ಡ ಅಂದರೆ 58 ಊರು ಇವೆ. ನೀವು ಬರೀತೀರಿ ಅವರು ಹೇಳುತ್ತಾರೆ. ಈ ರೀತಿ ಮಾಡಿದರೆ ನಾವು ಕೆಲಸ ಮಾಡಲು ಆಗುವುದಿಲ್ಲ. ನಮ್ಮದು ಇಷ್ಟೇ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಖಾರವಾಗಿ ಪ್ರತಿಕ್ರಿಯಿಸಿದರು.

ಕೆಎಸ್‌ಆರ್ಟಿಸಿ ನೌಕರ ದಂಪತಿ ಥಳಿತ: ಕೊಲೆ ಬೆದರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ರೋಣ ಕೆಎಸ್‌ಆರ್ ಟಿಸಿ ಡಿಪೋದ ನೌಕರ ದಂಪತಿ ಮೇಲೆ ಇಬ್ಬರು ಆರೋಪಿಗಳು ಥಳಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಜೇಂದ್ರಗಡ ತಾಲ್ಲೂಕಿನ ಅಶೋಕ ಚನ್ನಬಸಪ್ಪ ಡುಮ್ಮನವರ ಹಾಗೂ ರೋಣ ತಾಲ್ಲೂಕಿನ ಮೆಣಸಿಗಿ ಗ್ರಾಮದ ಫಕೀರಗೌಡ ನಾಗನಗೌಡ ಹಿರೇಗೌಡ್ರ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ.

ರೋಣ ಕೆಎಸ್‌ಆರ್ ಟಿಸಿ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದಪ್ಪ ಮಲಕಾಜಪ್ಪ ಪಟ್ಟಣಶೆಟ್ಟಿ ಹಾಗೂ ಅವರ ಪತ್ನಿ ನಿರ್ವಾಹಕಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.

ರೋಣ-ನರೇಗಲ್ ಮಾರ್ಗದಲ್ಲಿ ಕರ್ತವ್ಯ ಮಾಡುತ್ತಿದ್ದ ವೇಳೆ, ರೋಣದಿಂದ ನರೇಗಲ್ ಪಟ್ಟಣಕ್ಕೆ ಬಂದಿದ್ದಾರೆ. ಸಂಜೆ ಬಸ್ ನಿಲ್ದಾಣದ ಕ್ಯಾಂಟಿನ್ ನಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕ ಸಿದ್ದಪ್ಪನ ಮೇಲೆ ಅಶೋಕ ಹಾಗೂ ಫಕೀರಗೌಡ ಏಕಾಏಕಿ ಜಗಳಕ್ಕೆ ಮುಂದಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಸಿದ್ದಪ್ಪನ ಹೆಂಡತಿಯಾಗಿರುವ ನಿರ್ವಾಹಕಿ ಮೇಲೋ ಆರೋಪಿಗಳು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ: SDPI ಮುಖಂಡನ ಬಂಧನ

ವಿಜಯಸಾಕ್ಷಿ ಸುದ್ದಿ, ಮಂಗಳೂರು: ಹದಿನೈದು ವರ್ಷಗಳ ಹಿಂದೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿ ಆಕೆಯ ಇಬ್ಬರು ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಉಳ್ಳಾಲದ SDPI ಮುಖಂಡನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲದ SDPI ಮುಖಂಡ ಸಿದ್ದೀಕ್ ಉಳ್ಳಾಲ ಬಂಧಿತ ಆರೋಪಿ. ಸಂತ್ರಸ್ತ ಮಹಿಳೆ ಗಂಡನಿಂದ ದೂರವಾಗಿ ಉಳ್ಳಾಲದ ಒಂಭತ್ತುಕೆರೆಯಲ್ಲಿ ತನ್ನ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಈಕೆಗೆ ಸಹಾಯ ಮಾಡೋ ನೆಪದಲ್ಲಿ ಸ್ನೇಹ ಬೆಳೆಸಿಕೊಂಡ ಸಿದ್ದೀಕ್ ಆಕೆಯನ್ನು ಬಲಾತ್ಕರಿಸಿದಲ್ಲದೆ ಆಕೆಯ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಿದ್ದ.

ಈ ಬೆಳವಣಿಗೆ ಕಳೆದ ಡಿಸೆಂಬರ್ ತಿಂಗಳಲ್ಲೇ ನಡೆದಿದ್ದು ಮಹಿಳೆ ಸಿದ್ದೀಕ್ ವಿರುದ್ಧ ದೂರು ನೀಡಲು ಮುಂದಾದಾಗ ಆತನ ಸಹಚರರು ಎನ್ನಲಾದ ಪಕ್ಷದ ಮುಖಂಡರು ಜೀವ ಬೆದರಿಕೆ ಹಾಕಿದ್ದರೆನ್ನಲಾಗಿದೆ. ಆನಂತರವೂ ಸಿದ್ದೀಕ್ ಉಪಟಳ ಜಾಸ್ತಿಯಾದ ಹಿನ್ನೆಲೆಯಲ್ಲಿ ಕಳೆದ ಜ.16 ರಂದು ಸಂತ್ರಸ್ತ ಮಹಿಳೆ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಾಗಿತ್ತು.

ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೇರಳಕ್ಕೆ ಪರಾರಿಯಾಗಿದ್ದಾನೆಂಬ ಮಾಹಿತಿ ಇದ್ದುದರಿಂದ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿತ್ತು. ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಉಳ್ಳಾಲ ಠಾಣೆಗೆ ಕರೆತಂದಿದ್ದಾರೆ.‌

ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ಅಂಡ್ ಟೀಂ: ರಾಜಕಾರಣದಲ್ಲಿ ಮತ್ತೆ ಉಂಟಾಗುತ್ತಾ ಸಂಚಲನ?

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು: ಮೈತ್ರಿ ಸರ್ಕಾರವನ್ನು ಕೆಡವಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕಾರಣವಾಗಿದ್ದ ರಮೇಶ್ ಜಾರಕೀಹೊಳಿ ಮತ್ತೆ ಅಂತಹುದೇ ಪ್ರಯತ್ನಕ್ಕೆ ಕೈ ಹಾಕಿದ್ದಾರಾ ಎನ್ನುವ ಅನುಮಾನಗಳು ಆರಂಭವಾಗಿದೆ.

ಹೌದು ಕಳೆದ ರಾತ್ರಿಯಿಂದ ಜಿಲ್ಲೆಯ ಸರಾಯ್ ರೆಸಾರ್ಟ್ ನಲ್ಲಿ ರಮೇಶ್ ಜಾರಕೀಹೊಳಿ ತಮ್ಮ ಸಂಪುಟ ಸಹೋದ್ಯೋಗಿ, ಸಿ.ಪಿ ಯೋಗೇಶ್ವರ್, ಶಾಸಕರಾದ ಎಂಪಿ ಕುಮಾರಸ್ವಾಮಿ, ಗೋಪಾಲಯ್ಯ ಸೇರಿದಂತೆ ಹಲವರೊಂದಿಗೆ ರಹಸ್ಯ ಸಭೆ ನಡೆಸಿದರು.

ಕಾಫಿನಾಡಿನಲ್ಲಿ ನಡೆದ ಈ ರಹಸ್ಯ ಸಭೆಯಲ್ಲಿ ಏನೇನು ವಿಚಾರಗಳು ಚರ್ಚೆಯಾಗಿವೆ ಎನ್ನುವುದೀಗ ಪ್ರಶ್ನೆಯಾಗುಳಿದಿದೆ. ಸಿ ಪಿ ಯೋಗೇಶ್ವರ್ ಬಹಿರಂಗವಾಗಿ ಏನೂ ಹೇಳಿಲ್ಲವೆಂದರೂ ಅಸಮಾಧಾನ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಮೇಶ್ ಜಾರಕೀಹೊಳಿ ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಲಾಗಿದೆ. ಅದು ಬಿಟ್ಟು ಬೇರ್ಯಾವಾ ವಿಚಾರಗಳೂ ಚರ್ಚೆಯಾಗಿಲ್ಲ. ಮಾಧ್ಯಮದವರು ಕನ್ಫ್ಯೂಸ್ ಮಾಡಬೇಡಿ ಎಂದಿದ್ದಾರೆ.

ರಾಜ್ಯದಲ್ಲಿ ಗಣಿಗಾರಿಕೆ ಅನಿವಾರ್ಯ: ಸಿಎಂ ಯಡಿಯೂರಪ್ಪ ಹೇಳಿಕೆ

0

ವಿಜಯಸಾಕ್ಷಿ ಸುದ್ದಿ, ಮೈಸೂರು: ರಾಜ್ಯದಲ್ಲಿ ಕಲ್ಲು ಗಣಿಗಾರಿಕೆ ಅನಿವಾರ್ಯವಾಗಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಇಲ್ಲಿ ಹೇಳಿದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ‌ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಕಾಮಗಾರಿಗಳಿಗೆ ಗಣಿಗಾರಿಕೆ ಅವಶ್ಯಕತೆ ಇದೆ. ಆದರೆ ಅಕ್ರಮ ಗಣಿಗಾರಿಕೆ ವಿರುದ್ದ ನಿರ್ದಾಕ್ಷಿಣ್ಯ‌ ಕ್ರಮ ಕೈಗೊಳ್ಳಲಾಗುವುದು. ಸಕ್ರಮ ಗಣಿಗಾರಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಇನ್ನು ಎಲ್ಲಾ ಜಿಲ್ಲೆಗಳಲ್ಲೂ ಗಣಿಗಾರಿಕೆ ಪರಿಶೀಲನೆಗೆ ಆಯಾ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಮೃತ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ಕೊಡ್ತೀವಿ‌ ಎಂದು ಇಲ್ಲಿನ ಮಂಡಕ್ಕಳ್ಳಿ ಏರ್‌ಪೋರ್ಟ್‌ನಲ್ಲಿ ಸಿಎಂ ಹೇಳಿದರು.

ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾದ ಬೈಕ್ ಸವಾರ!

0

ವಿಜಯಸಾಕ್ಷಿ ಸುದ್ದಿ,ಹಾಸನ: ಕೂದಲೆಳೆ ಅಂತರದಲ್ಲಿ ಬೈಕ್ ಸವಾರನೊಬ್ಬ ಕಾಡಾನೆಯಿಂದ ಪಾರಾದ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಮಠದ ಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಕಾಫಿತೋಟದಿಂದ ರಸ್ತೆಗೆ ದಿಢೀರ್ ಎಂಟ್ರಿಕೊಟ್ಟ ಒಂಟಿ‌ ಸಲಗವನ್ನು ನೋಡದೇ ನೇರವಾಗಿ ಆನೆ ಸಮೀಪವೇ ಬೈಕ್ ಸವಾರ ಬಂದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಜನರ ಕೂಗಾಟಕ್ಕೆ ಎಚ್ಚೆತ್ತ ಬೈಕ್ ಸವಾರ ಬೈಕ್ ತಿರುಗಿಸಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗಿದ್ದಾನೆ.

ಈ ಭಾಗದಲ್ಲಿ ಹಲವು ದಿನಗಳಿಂದ ಈ ಒಂಟಿ ಸಲಗ ಸಂಚರಿಸುತ್ತಿದೆ. ಈವರೆಗೆ ಈ ಆನೆಯಿಂದ ಯಾರಿಗೂ ತೊಂದರೆ ಆಗದಿದ್ದರೂ ಕಾಡಾನೆ ಸಂಚಾರದಿಂದ ಜನರಲ್ಲಿ ಭೀತಿ ಹೆಚ್ಚಾಗಿದೆ. ಹೀಗ ರಸ್ತೆ, ಗ್ರಾಮ ಎನ್ನದೇ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸುತ್ತಿರೋ ಕಾಡಾನೆಯನ್ನು ಸ್ಥಳಾಂತರ ಮಾಡುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ.

ನಾಳೆ ನಗರಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ: ನವೀಕೃತ ಬಸ್ ನಿಲ್ದಾಣ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದ ಕೆಲವು ತಿಂಗಳ ಹಿಂದೆಯೇ ಜನರ ಬಳಕೆಗೆ ಸಿದ್ದಗೊಂಡು ಜನಪ್ರತಿನಿಧಿಗಳ ಶೀತಲ ಸಮರದಿಂದ ಉದ್ಘಾಟನೆಗೊಳ್ಳದೆ ನೆನೆಗುದಿಗೆ ಬಿದ್ದಿದ್ದ ನಗರದ ನವೀಕೃತ ಹಳೆ ಬಸ್ ನಿಲ್ದಾಣಕ್ಕೆ ಅಂತೂ ಇಂತೂ ಉದ್ಘಾಟನೆ ಭಾಗ್ಯ ಕೂಡಿ ಬಂದಿದೆ.

ನಗರದ ಹೃದಯ ಭಾಗದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣವನ್ನು ನಾಳೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸುವರು.

ಕಳೆದ ಡಿ.24 ರಂದೇ ಬಸ್ ನಿಲ್ದಾಣ ಉದ್ಘಾಟನೆಗಾಗಿ ಸಿದ್ಧತೆ ನಡೆದಿತ್ತು. ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಆದರೆ, ಉದ್ಘಾಟನೆಗೆಂದೇ ಅಂದು ನಗರಕ್ಕೆ ಬಂದಿದ್ದ ಸಚಿವ ಲಕ್ಷ್ಮಣ ಸವದಿ ಲೋಕಾರ್ಪಣೆಗೊಳಿಸದೇ ಮರಳಿದ್ದರು.

ನವೀಕೃತ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕೆಂದು ಹಲವು ಸಂಘಟನೆಗಳು ಮನವಿ ಸಲ್ಲಿಸಿದ್ದರು.

ನಾಳೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಪ್ಪತ ಉತ್ಸವ-೨೦೨೧ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಸಿ.ಪಾಟೀಲ್, ಅರವಿಂದ ಲಿಂಬಾವಳಿ ಹಾಗೂ ಆನಂದ್ ಸಿಂಗ್, ಶಾಸಕ ಎಚ್.ಕೆ.ಪಾಟೀಲ್ ಭಾಗವಹಿಸಲಿದ್ದು, ಈ ಕಾರಣಕ್ಕಾಗಿಯೇ ಬಸ್ ನಿಲ್ದಾಣ ಉದ್ಘಾಟನೆ ಆಗುವ ಭಾಗ್ಯ ದೊರೆತಿದೆ ಎಂದು ಹೇಳಲಾಗುತ್ತಿದೆ.

ಮುಸ್ಲಿಮ್ ನಾಯಕರು, ಕಾನೂನು ಪಂಡಿತರು ಜನಾಂದೋಲನ ಆರಂಭಿಸಿ: ಡಾ. ಅಬ್ದುಲ್ ರಜಾಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತಕ್ಕೂ ಹೆಚ್ಚು ವರ್ಷಗಳಾದ ಮೇಲೆ ಕರ್ನಾಟಕದಲ್ಲಿ ಭರ್ಜರಿಯಾಗಿ ತಮ್ಮ ಹಕ್ಕು ಪಡೆಯಲು ಹೋರಾಟಗಳು ಪಾದಯಾತ್ರೆ ಮೂಲಕ ನಡೆಯುತ್ತಿವೆ.

ಆದರೆ ನಮ್ಮ ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಸೇರಿದಂತೆ ಹೋರಾಟಗಾರರೆಲ್ಲರೂ ಸಾಚಾರ ಸಮಿತಿಯ ವರದಿ, ರಂಗನಾಥ್ ಮಿಶ್ರಾ ವರದಿ ಶಿಪಾರಸ್ಸಿಗಾಗಿ ಜನಾಂದೋಲನ ಆರಂಭಿಸಲು ಮುಂದಾಗಬೇಕು ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ನದಾಫ್ ಮುಸ್ಲಿಂ ನಾಯಕರಲ್ಲಿ ಮನವಿ ಮಾಡಿದ್ದಾರೆ.

ವಾಲ್ಮೀಕಿ ಜನಾಂಗ ಮೀಸಲಾತಿಯಲ್ಲಿ ಶೇ 7% ಹಿಗ್ಗಿಸಲು ಹೋರಾಡುತ್ತಿದೆ. ರಾಜಕೀಯ ಅಧಿಕಾರ ಅನುಭವಿಸಿಯೂ ಕೂಡ ಕುರುಬ ಸಮುದಾಯ ಎಸ್.ಟಿ ಸೇರ್ಪಡೆಗೆ ಬೇಡಿಕೆ ಸಲ್ಲಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದೆ.

ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿರುವ ಪಂಚಮಸಾಲಿ ಸಮಾಜ 2A ಗೆ ಸೇರಿಸುವದಕ್ಕಾಗಿ ಸರ್ಕಾರದ ಕಣ್ಣು ತೆರೆಯಲು ಕೂಡಲಸಂಗಮದಿಂದ ಬೆಂಗಳೂರಿಗೆ 700km ಪಾದಯಾತ್ರೆ ಆರಂಭಿಸಿದ್ದಾರೆ.

2B ನಲ್ಲಿ ಕ್ರೈಸ್ತರನ್ನು, ಜೈನರನ್ನು ಇಟ್ಟುಕೊಂಡ ಮುಸ್ಲಿಮ್ ಸಮುದಾಯ ಮಾತ್ರಾ ಅನುಮಾನಕ್ಕೆ ಕಾರಣವಾಗಿದೆ ಎಂದರು.

ಈ ಸಮಯದಲ್ಲಿ ಕಾನೂನು ಬಲ್ಲವರು ಮಾತ್ರ ಹೋರಾಟಗಾರರಿಗೆ, ರಾಜಕೀಯ ಧುರೀಣರಿಗೆ ಮಾರ್ಗದರ್ಶನ ನೀಡಿ ಸಾಮಾಜಿಕ ನ್ಯಾಯ ಪಡೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ ಎಂದಿದ್ದಾರೆ.

ಅದು ಸಾಚಾರ ಸಮಿತಿಯ ವರದಿ ಶಿಫಾರಸ್ಸಿಗೋ ಅಥವಾ ರಂಗನಾಥ ಮಿಶ್ರಾ ವರದಿ ಶಿಪಾರಸ್ಸಿಗೋ ಒಟ್ಟಿನಲ್ಲಿ ದೇಶಾದ್ಯಂತ ಜನಾಂದೋಲನದ ಮಾದರಿಯಲ್ಲಿ ಹೋರಾಟಕ್ಕಿಳಿಯುವ ಸುವರ್ಣ ಯುಗಾರಂಭ ಮಾತ್ರ ಮತ್ತೆ ನಮ್ಮ ನಾಡಿನಿಂದ ಆರಂಭವಾಗಲಿ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ.

ದಾರಿ ಕಾಣದ ಯುವ ನಾಯಕರಿಗೆ, ಹೋರಾಟಗಾರರಿಗೆ ದಾರಿದೀಪವಾಗಿ ಸಂವಿಧಾನ ಬದ್ಧ ಹಕ್ಕನ್ನು ಪಡೆದುಕೊಳ್ಳುವಂತೆ ಶಕ್ತಿ ತುಂಬಿ ಎಂದು ಮುಸ್ಲಿಮ್ ನಾಯಕರು, ಕಾನೂನು ಪಂಡಿತರು, ವಿದ್ವಾಂಸರು ಹೋರಾಟಗಾರರಲ್ಲಿ ಡಾ. ಅಬ್ದುಲ್ ರಜಾಕ್ ನದಾಫ್ ಮನವಿ ಮಾಡಿದ್ದಾರೆ.

ಚಿನ್ನಾಭರಣದೊಂದಿಗೆ ಓಡಿಹೋದ ಗೃಹಿಣಿ! ಪತಿಯಿಂದ ದೂರು ದಾಖಲು

0

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ವಿವಾಹಿತ ಮಹಿಳೆಯೋರ್ವಳು ಮನೆಯಲ್ಲಿ ಯಾರು ಇಲ್ಲದ ವೇಳೆ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗುಂಡೇಗಾಲ ಗ್ರಾಮದ ಶಿವಕುಮಾರ್ ರವರ ಪತ್ನಿ ಸೌಂದರ್ಯ ಎಂಬ ಗೃಹಿಣಿಯೇ ನಾಪತ್ತೆಯಾಗಿದ್ದು, ಆಕೆಯ ಪತಿ ಶಿವಕುಮಾರ್, ಕೊಳ್ಳೇಗಾಲ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.

ನಾಪತ್ತೆಯಾಗಿರುವ ಸೌಂದರ್ಯ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಅಂತರಗಂಗೆ ಗ್ರಾಮದವರು. ಸೌಂದರ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಶಿವಕುಮಾರ್ ಸಹ ಬೆಂಗಳೂರಿನ ಮಾಲ್ನಲ್ಲಿ ಪ್ಯಾಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.

ಇಬ್ಬರ ನಡುವೆ ಪರಿಚಯವಾಗಿ ತದನಂತರ ಪ್ರೇಮ ಬೆಳೆದಿದೆ. ಆನಂತರ ಕೊಳ್ಳೇಗಾಲಕ್ಕೆ ಬಂದು ಮದುವೆಯಾಗಿ ಹುಟ್ಟೂರಾದ ಗುಂಡೇಗಾಲದಲ್ಲಿ ಕಳೆದ ಒಂದು ವರ್ಷದಿಂದ ವೈವಾಹಿಕ ಜೀವನ ನಡೆಸುತ್ತಿದ್ದರು.

ಆದರೆ, ಜ.19 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಸೌಂದರ್ಯ ತನ್ನ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ಕಾಣಿಯಾಗಿದ್ದಾಳೆ ಎಂದು ಆಕೆಯ ಪತಿ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡು, ಮಹಿಳೆ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ದುಷ್ಕರ್ಮಿಗಳಿಂದ ಜೋಳದ ಬೆಳೆಗೆ ಬೆಂಕಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲ್ಲೂಕಿನ ಪು.ಬಡ್ನಿ ಗ್ರಾಮದ ರೈತನ ಜೋಳದ ಜಮೀನಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಬೆಳೆ ಹಾನಿ ಮಾಡಿದ್ದಾರೆ.

ಗ್ರಾಮದ ಭರಮಪ್ಪ ಕಾಂಬಳೆ ಎಂಬ ರೈತನ ಜಮೀನಿನಲ್ಲಿದ್ದ ಬೆಳೆಗೆ ಬೆಂಕಿ ಬಿದ್ದು ಬೆಳೆ ನಾಶವಾಗಿದೆ.

ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಿಳಿ‌ಜೋಳ ದುಷ್ಕರ್ಮಿಗಳ ಹೀನ ಕೃತ್ಯಕ್ಕೆ ಭಸ್ಮವಾಗಿದೆ. ವಾರದ ಹಿಂದಷ್ಟೇ ಅಕಾಲಿಕ ಮಳೆಗೆ ಜೋಳ ಬಿದ್ದು ಹಾಳಾಗಿತ್ತು. ಅಲ್ಪಸ್ವಲ್ಪ ಅಳೆದು ಉಳಿದಿದ್ದ ಬೆಳೆ ಸಂಪೂರ್ಣ ಕಟಾವಿಗೆ ಬಂದಿತ್ತು.

ರೈತ ಜೋಳದ ಬೆಳೆಯನ್ನು ಇನ್ನೊಂದು ವಾರದಲ್ಲಿ ಕಟಾವು ಮಾಡಬೇಕೆಂದುಕೊಂಡಿದ್ದ. ಅಷ್ಟರಲ್ಲೇ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಜಾನುವಾರುಗಳಿಗೂ ತಿನ್ನಲೂ ಬರದಂತೆ ಮೇವು ಸುಟ್ಟು ಕರಕಲಾಗಿದ್ದು, ರೈತ ಕಣ್ಣೀರು ಹಾಕುವಂತಾಗಿದೆ. ಸಂಕಷ್ಟಕ್ಕೊಳಗಾದ ರೈತನಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದರು.

error: Content is protected !!