Home Blog Page 3383

ನನಗೂ ಸಿಎಂ ಆಗೋ ಆಸೆ ಇದೆ! ಉಮೇಶ್ ಕತ್ತಿ ಹೊಸ ವರಸೆ

ವಿಜಯಸಾಕ್ಷಿ ಸುದ್ದಿ, ತುಮಕೂರು: ನನಗೆ ಹಾಗೂ ಯತ್ನಾಳ್ ಇಬ್ಬರಿಗೂ ಸೀನಿಯಾರಿಟಿ ಇದೆ. ಹೀಗಾಗಿ ನನಗೂ ಸಿಎಂ ಆಗವ ಆಸೆಯಿದೆ. ಸಿಎಂ ಸ್ಥಾನಕ್ಕೆ ನನಗೂ ಯತ್ನಾಳ್ ಗೂ ಪೈಪೋಟಿ ನಡೆಯಲಿದೆ ಎಂದು ಈಗಲೇ ಸಿಎಂ ಸ್ಥಾನದ ಆಸೆಯ ಸೂಚನೆಯನ್ನು ಉಮೇಶ್ ಕತ್ತಿ ನೀಡಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೇಳಿಕೆ ನೀಡಿದ ಉಮೇಶ್ ಕತ್ತಿ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ. 75 ವರ್ಷದವರೆಗೂ ಆಡಳಿತ ನಡೆಸಲು ಅವಕಾಶವಿದೆ. ಹೀಗಾಗಿ ನಾನೂ ಸಿಎಂ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಎಂ ಬಿಎಸ್ ವೈ ನನಗೆ ವಿಶೇಷವಾದಂತಹ ಜವಾಬ್ದಾರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಟ್ಟಿದ್ದಾರೆ. 4 ಕೋಟಿ 36 ಜನ್ರಿಗೆ ಆಹಾರ ನೀಡಲಾಗುತ್ತಿದೆ. ರಾಜ್ಯಕ್ಕೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ. ಈ ಖಾತೆ ಸಿಕ್ಕಿರೋದಕ್ಕೆ ನಾನು ಖುಷಿಯಲ್ಲಿದ್ದೀನಿ,ಸಂತೋಷ ಆಗಿದೆ ಎಂದರು.

ನನಗೆ ಶ್ರೀಗಳ ಆಶೀರ್ವಾದವಿದೆ, ಮುಂದಿನ ದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೆನೆ. ಜೀವನದಲ್ಲಿ ಸಿಎಂ ಆಗೋ ಆಸೆ ಎಲ್ಲರಿಗೂ ಇದೆ. ಸಿಎಂ ಆಗೋ ಆಸೆ ನನಗೂ ಇದೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದರು.

ಮೀನುಗಾರರ ಬಲೆಗೆ ಬಿದ್ದ ಬೃಹತ್ ಶಾರ್ಕ್! ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ವಿಜಯಸಾಕ್ಷಿ ಸುದ್ದಿ, ಕಾರವಾರ: ಮೀನುಗಾರರ ಬಲೆಗೆ ಬಿದ್ದಿದ್ದ ಬೃಹತ್ ಶಾರ್ಕ್‌ ಮೀನನ್ನು ಮರಳಿ ಸಮುದ್ರಕ್ಕೆ ಬಿಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ತಾಲೂಕಿನ ಗೋಕರ್ಣದ ತಡದಿ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಈ ಬೃಹತ್ ಮೀನು ದೊರೆತಿದ್ದು ಈ ತಿಮಿಂಗಿಲ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವುದರಿಂದ ಹಾಗೂ ಯಾರೂ ಕೂಡ ಆಹಾರಕ್ಕಾಗಿ ಬಳಸದ‌‌ ಕಾರಣ ವಾಪಸ್ ಕಡಲಿಗೆ ಬಿಡಲಾಗಿದೆ.

ಈ ಶಾರ್ಕ್ ಮೀನು ಬರೋಬ್ಬರಿ 500 ಕೆಜಿಗೂ ಅಧಿಕ ತೂಕವಿದ್ದು 11 ಅಡಿ ಉದ್ದವಿದೆ. ಇದನ್ನು ಬೇಟೆಯಾಡುವುದು ಹಾಗೂ ಆಹಾರಕ್ಕಾಗಿ ಬಳಸುವುದು ಅಪರಾಧವಾದ ಕಾರಣ ಈ ಬಗ್ಗೆ ತಿಳಿದ ಮೀನುಗಾರರು ವಾಪಸ್ ಕಡಲಿಗೆ ಬಿಟ್ಟಿದ್ದಾರೆ.

ಗುಜರಾತ್ ಕಡಲಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ಪ್ರಭೇದದ ಶಾರ್ಕ್ ಅರಬ್ಬೀ ಸಮುದ್ರದಲ್ಲೂ ಕಾಣಸಿಗುತ್ತವೆ. ಆದರೆ ಇದು ಇತ್ತೀಚೆಗೆ ಬಹಳ ಅಪರೂಪವಾಗಿವೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ. ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದು ಎನ್ನಲಾಗಿದ್ದು ಶಾಲಾ ಬಸ್‌ನ ಗಾತ್ರದವರೆಗೆ ಬೆಳೆಯುತ್ತವೆ. ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುವ ಇವು ನಿಧಾನವಾಗಿ ಈಜುತ್ತವೆ.

ಬೈಕ್ ಓವರ್ ಟೇಕ್ ಮಾಡಿದ್ದಕ್ಕೆ ಚಾಲಕನ ಮೇಲೆ ಮಾರಾಣಾಂತಿಕ ಹಲ್ಲೆ

0

ವಿಜಯಸಾಕ್ಷಿ ಸುದ್ದಿ, ಮೈಸೂರು: ಟ್ರಿಪಲ್ ರೈಡ್ ಹೋಗುತ್ತಿದ್ದ ಬೈಕ್ ವೊಂದನ್ನು ಓವರ್ ಟೆಕ್ ಮಾಡಿದ್ದಕ್ಕೆ, ಕೆಎಸ್ ಆರ್ ಟಿಸಿ ಚಾಲಕನಿಗರ ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಬೋಳನಹಳ್ಳಿ ಬಳಿ ನಡೆದಿದೆ.

ಹತ್ತಾರು ಜನರ ಎದುರೇ ಮಾರಕಾಸ್ತ್ರದಿಂದ ಚಾಲಕ ವೆಂಕಟೇಶ್ ಗೆ ಇರಿಯಲಾಗಿದೆ‌. ಬಸ್ ಹಾಸನದಿಂದ ಮೈಸೂರಿಗೆ ಬರುತ್ತಿತ್ತು. ಈ ವೇಳೆ ಟ್ರಿಪ್ಪಲ್ ರೈಡ್‌ನಲ್ಲಿದ್ದ ಬೈಕ್ ವೊಂದನ್ನು ಓವರ್ ಟೇಕ್ ಮಾಡಿದ್ದರು.

ಇದರಿಂದ ಕುಪಿತಗೊಂಡ ಬೈಕ್ ಸವಾರರು, ಬಹುದೂರದವರೆಗೂ ಬಸ್ ಫಾಲೋ ಮಾಡಿಕೊಂಡು ಬಂದು ಅಡ್ಡಗಟ್ಟಿ, ಬಸ್‌ನಿಂದ ಹೊಗೆ ಬಂತು ಅಂತ ಕ್ಯಾತೆ ತೆಗೆದರು. ನಂತರ ಪ್ರಯಾಣಿಕರ ಎದುರಲ್ಲೇ ಮಾತಿಗೆ ಮಾತು ಬೆಳೆಸಿ ಗಲಾಟೆ ಮಾಡಿ,ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಸಾರಿಗೆ ಸಿಬ್ಬಂದಿ ಹಾಗೂ ಯುವಕರ ಜಗಳದ ವೇಳೆ, ಚಾಲಕ ವೆಂಕಟೇಶ್ ರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಚಾಲಕ ವೆಂಕಟೇಶ್‌ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಪ್ರಯಾಣಿಕರು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ‌.

ಪಿರಿಯಾಪಟ್ಟಣ ಡಿಪೋಗೆ ಸೇರಿದ‌ ಬಸ್ ಇದಾಗಿದ್ದು, ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ: ಕಾಡು ಪ್ರಾಣಿ ಬೇಟೆಗಾರನ ಬಂಧನ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಮುಳ್ಳುಹಂದಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರ ಮೇಲೆ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಜಿಲ್ಲೆಯ ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಜಡೇಗೌಡ ( 53 ) ಬಂಧಿತ ಆರೋಪಿಯಾಗಿದ್ದಾನೆ. ಅದೇ ಗ್ರಾಮದ ಜೆ.ಮುನಿರಾಜು ಹಾಗೂ ಮುತ್ತು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಪ್ರಾಣಿಗಳನ್ನು ಬೇಟೆಯಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಪರಾರಿಯಾಗಿದ್ದು , ಓರ್ವ ಆರೋಪಿಯನ್ನು ಬಂಧಿಸಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಮುಳ್ಳುಹಂದಿ ಹಾಗೂ ಕಾಡುಹಂದಿಯ ಮಾಂಸ, ಒಂದು ಬೈಕ್ ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು , ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ .

ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಹೆಡ್‌ಕಾನ್‌ಸ್ಟೇಬಲ್ ಗಳಾದ ಲೋಕೇಶ್, ಶಂಕರ, ತಮೀವುಲ್ಲಾ, ಬಸವರಾಜು, ಕುಮಾರಸ್ವಾಮಿ, ಸ್ವಾಮಿ, ರಾಮಚಂದ್ರ ಹಾಗೂ ಚಾಲಕ ಜಾಫರ್ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಕೈಗೊಂಬೆ: ಅಬ್ದುಲ್‌ ಹಮೀದ್

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರಿಂದ ಧರಣಿ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಧರಣಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಬಿಜೆಪಿಗೆ ರೈತರು, ಕಾರ್ಮಿಕರು ಹಾಗೂ ಬಡ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರಗಳು ಬ್ರಿಟಿಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ ಎಂದು ಕಿಡಿ ಕಾರಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಫಾರಂ ಮಾತನಾಡಿ,
ಕೇಂದ್ರ ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿದೆ. ಪ್ರಧಾನಿ ಮೋದಿಯವರ ಕೃಷಿ ವಿರೋಧಿ ನಡೆಯಿಂದ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ ಎಂದು ಹರಿ ಹಾಯ್ದರು.

ಈ ಸಂದರ್ಭದಲ್ಲಿ , ಅಜೀಜ್ ಜಾಗಿರದಾರ್, ಸಲೀಂ ಅಹಮದ್ ಚಿತಾಪುರ, ಸಿದ್ದಣ್ಣ ಜಿ.ಚಕ್ರ, ಮೋಬಿನ್ ಅಹ್ಮದ್, ಅಜೀಜ್ ಪಟೇಲ್ ಯಾಳವಾರ್, ಮುನೀರ್ ಹಾಸ್ಮಿ, ಸಲೀಂ ಸದರಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

ಅಲೆಗಳಿಗೆ ಕೊಚ್ಚಿಹೋಗಿ ಮೂವರು ನೀರುಪಾಲು, ಇಬ್ಬರ ರಕ್ಷಣೆ

0

ವಿಜಯಸಾಕ್ಷಿ ಸುದ್ದಿ, ಕಾರವಾರ: ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.

ಇಲ್ಲಿನ ಮುಖ್ಯ ಕಡಲತೀರದಲ್ಲಿ ಈಜಲು ತೆರಳಿದ್ದ 21 ವರ್ಷದ ಸುಮಾ, 20 ವರ್ಷದ ತಿಪ್ಪೇಶ ನಾಯಕ್ ಮತ್ತು 35 ವರ್ಷದ ರವಿ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ರಕ್ಷಣೆ ಮಾಡಿದ್ದು ಅಸ್ವಸ್ತಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟವರು ಬೆಂಗಳೂರಿನ ಹೆಬ್ಬಗೋಡಿಯವರಾಗಿದ್ದು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದು ಈ ವೇಳೆ ಸಮುದ್ರದಲ್ಲಿ ಈಜುತ್ತಿದ್ದಾಗ ಒಮ್ಮೆಲೇ ಬಂದ ಅಲೆಗೆ ಈ ಐವರೂ ಕೊಚ್ಚಿಹೋಗಿದ್ದರು.

ತಕ್ಷಣ ಅಲ್ಲಿಯೇ ಇದ್ದ ಬೋಟಿಂಗ್ ಚಟುವಟಿಕೆ ನಡೆಸುವ ಸಿಬ್ಬಂದಿ ರಕ್ಷಣೆಗೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಮತ್ತೆ ಮೂವರನ್ನ ದಡಕ್ಕೆ ತಂದರಾದರೂ ಅಷ್ಟರಲ್ಲಾಗಲೇ, ಅವರು ಪ್ರಾಣಬಿಟ್ಟಿದ್ದರು. ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಯಲ್ಲಿ ನಿಂತ ಯುವಕರ ಮೇಲೆ ಗುಂಪೊಂದರಿಂದ ಹಲ್ಲೆ: ಮೊಬೈಲ್, ಹಣ ಕಿತ್ತು ಪರಾರಿ

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ರಸ್ತೆಯಲ್ಲಿ ನಿಂತಿದ್ದ ಯುವಕರ ಮೇಲೆ ಗುಂಪೊಂದು ದಾಳಿ ನಡೆಸಿ, ಅವರ ಬಳಿಯಿದ್ದ ಮೊಬೈಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಬಾಪು ನಗರದಲ್ಲಿ ನಡೆದಿದೆ.

ಗುಂಪಾಗಿ ಬಂದ ದುಷ್ಕರ್ಮಿಗಳು ಯುವಕರನ್ನು ಬೆದರಿಸಿ ಅವರ ಮೇಲೆ ಹಲ್ಲೆ ಮಾಡಿ ಮೊಬೈಲ್, ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮಹ್ಮದ್ ಜಾಕೀರ್, ಮಜರ್ ಹಾಗೂ ಸತ್ತಾರ್ ಎನ್ನುವವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡಿರುವ ಮೂವರೂ, ತಮ್ಮ ಬೈಕ್ ನಲ್ಲಿ ಪೆಟ್ರೋಲ್ ಮುಗಿದಿದ್ದರಿಂದ ಗೆಳೆಯರಿಗೆ ತರಲು ಹೇಳಿದ್ದು, ಗೆಳಯರ ಬರುವಿಕೆಗಾಗಿ ಕಾಯುತ್ತಿದ್ದ ವೇಳೆ ಹಲ್ಲೆ ನಡೆಸಲಾಗಿದೆ.

ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೊಬೈಲ್, ಹಣ ಕೊಡುವಂತೆ ಒತ್ತಾಯ ಮಾಡಿದ್ದಾರೆ‌. ತಮ್ಮ ಬಳಿ ಏನೂ ಇಲ್ಲ ಎಂದಾಗ ಹಲ್ಲೆ ಮಾಡಿ ಜೇಬಿನಲ್ಲಿದ್ದದ್ದನ್ನು ಕಿತ್ತುಕೊಂಡು ಪರಾರಿಯಾಗಿದ್ದಾಗಿ ಗಾಯಾಳುಗಳು ಹೇಳಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ ಪಲ್ಟಿಯಾಗಿ ಸ್ಥಳದಲ್ಲೇ‌ ಓರ್ವ ಸಾವು

0

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಕಾರು ಪಲ್ಟಿಯಾಗಿ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿರುವ ಘಟನೆ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಬಳಿ ನಡೆದಿದೆ.

ಘಟನೆಯಲ್ಲ ಮೃತಪಟ್ಟ ವ್ಯಕ್ತಿಯನ್ನು ವಿಶ್ವನಾಥ ರಾಠೋಡ್(38) ಎಂದು ಗುರುತಿಸಲಾಗಿದೆ. ವಿಶ್ವನಾಥ ಮಾಶಾಳ ತಾಂಡಾ ನಿವಾಸಿಯಾಗಿದ್ದು,
ಘಟನೆಯಲ್ಲಿ ವಿಶ್ವನಾಥ ಪತ್ನಿಗೆ ಕೈ ಮುರಿತವಾಗಿದೆ.

ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಸೀದಿಗಳಲ್ಲಿ ನಮಾಜ್, ಚರ್ಚಗಳಲ್ಲಿ ಪ್ರಾರ್ಥನೆ; ದೇವಸ್ಥಾನಗಳಿಗೆ ಏಕೆ ತೊಂದರೆ: ಮುತಾಲಿಕ್ ಕಿಡಿ

ವಿಜಯಸಾಕ್ಷಿ ಸುದ್ದಿ, ರಾಯಭಾಗ

ದೇವಸ್ಥಾನದಲ್ಲಿನ ನಿರ್ಬಂಧ ಮರಳಿ ತೆಗೆದುಕೊಳ್ಳಿ, ಇಲ್ಲವಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಮುತಾಲಿಕ್ ಮಾತನಾಡಿ, ಮಸೀದಿ, ಚರ್ಚ್‌ಗಳಿಗಿಲ್ಲದ ನಿರ್ಬಂಧ ದೇವಸ್ಥಾನಗಳಿಗೇಕೆ ಎಂದು ಪ್ರಶ್ನಿಸಿದರು.

ಚಿಂಚಲಿಯ ಪ್ರಸಿದ್ಧ ಮಾಯಕ್ಕದೇವಿ ದೇವಸ್ಥಾನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಬರುವ ಭಕ್ತರಿಗೆ ಅವಕಾಶ ನೀಡಬೇಕು. ತಕ್ಷಣ ದೇವಸ್ಥಾನದ ಮೇಲಿನ ನಿರ್ಬಂಧ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಮಸೀದಿಗಳಲ್ಲಿ ನಮಾಜ್, ಚರ್ಚಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ.
ಆದರೆ, ದೇವಸ್ಥಾನಗಳಿಗೆ ಏಕೆ ತೊಂದರೆ ನೀಡುತ್ತಿದ್ದೀರಿ. ಬಾರ್, ಹೋಟೆಲ್, ಸಂತೆಗಳೆಲ್ಲವೂ ಓಪನ್ ಇವೆ. ಎಲ್ಲವನ್ನೂ ಬಂದ್‌ಗೊಳಿಸಿ ಲಾಕ್‌ಡೌನ್ ಮಾಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಖಾತೆ ಬದಲಾವಣೆ ಅಸಮಾಧಾನವಿಲ್ಲ: ಸಚಿವ ಸಿಸಿ ಪಾಟೀಲ್ ಸ್ಪಷ್ಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಖಾತೆ ಹಂಚಿಕೆ ಮತ್ತು ಬದಲಾವಣೆ ಮುಖ್ಯಮಂತ್ರಿಗಳ ಪರಾಮಾಧಿಕಾರ. ನನಗೆ ಯಾವುದೇ ಖಾತೆ ಕೊಟ್ಟರೂ, ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಈ ಕುರಿತು ವಿಜಯಸಾಕ್ಷಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲಿದ್ದ ಗಣಿ ಮತ್ತು ಭೂ ವಿಜ್ಞಾನ ಖಾತೆಯಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಸದ್ಯ ಇದರ ಬದಲು ಯಾವುದೇ ಖಾತೆಯಾದರೂ ಸರಿ ಅದೇ ರೀತಿ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಖಾತೆ ಬದಲಾವಣೆ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದರು.

ಖಾತೆ ಬದಲಾವಣೆ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಏನೇ ಹಂಚಿಕೊಳ್ಳುವುದಿದ್ದರೂ ಪಕ್ಷದೊಳಗೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಸದ್ಯ ಸಿ.ಸಿ ಪಾಟೀಲ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಬದಲು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

error: Content is protected !!