Home Blog Page 59

ತಾಯಿ–ದೊಡ್ಡಮ್ಮನ ಖಾಸಗಿ ಚಿತ್ರಗಳನ್ನು ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿದ ಆರೋಪ: ಮಗಳ ವಿರುದ್ಧ FIR

0

ಬೆಂಗಳೂರು: ಹೆತ್ತ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಭಾವಚಿತ್ರಗಳನ್ನು ರಹಸ್ಯವಾಗಿ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿದ್ದ ಆರೋಪದಡಿ ಮಗಳ ವಿರುದ್ಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ನಿವಾಸಿಯಾದ 49 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ, ಮಗಳು ಹಾಗೂ ಆಕೆಯ ಪ್ರಿಯಕರ ವರುಣ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರ ಮಹಿಳೆಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಖಾಸಗಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಕಳೆದ ವರ್ಷ ಮಗಳಿಗೆ ಮೊಬೈಲ್ ನೀಡಲಾಗಿತ್ತು.

ಸುಮಾರು ಒಂದು ತಿಂಗಳ ಹಿಂದೆ ಮಗಳು ಅಪರಿಚಿತ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿ ರುವುದನ್ನು ಗಮನಿಸಿದ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗಳಿಗೆ ತಿಳುವಳಿಕೆ ಹೇಳಿ ಮೊಬೈಲ್ ಪರಿಶೀಲಿಸಿದಾಗ, ತನ್ನ ಖಾಸಗಿ ಭಾವಚಿತ್ರಗಳು ಫೋನ್‌ನಲ್ಲಿ ಇರುವುದನ್ನು ಕಂಡು ತಾಯಿ ಆಘಾತಗೊಂಡಿದ್ದಾರೆ.

ಅಲ್ಲದೆ, ತನ್ನ ಸಹೋದರಿಯ ಬೆತ್ತಲೆ ಚಿತ್ರಗಳನ್ನೂ ಮಗಳು ಯುವಕನಿಗೆ ಕಳುಹಿಸಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಗಳ ಮೊಬೈಲ್‌ನಲ್ಲಿ ಯುವಕ ತಾಯಿಯ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಸಂದೇಶ ರವಾನಿಸಿದ್ದೂ ಪತ್ತೆಯಾಗಿದೆ. ಬಳಿಕ ಮಗಳಿಗೆ ಬುದ್ಧಿ ಹೇಳಿ ಮೊಬೈಲ್‌ನಲ್ಲಿದ್ದ ಚಿತ್ರಗಳನ್ನು ಡಿಲೀಟ್ ಮಾಡಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಕೆಲ ದಿನಗಳ ಬಳಿಕ ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಜಗಳ ಮಾಡಿಕೊಂಡು ಮಗಳು ಮನೆ ಬಿಟ್ಟು ಹೋಗಿದ್ದಾಳೆ. ತನ್ನ ಖಾಸಗಿ ಫೋಟೋಗಳನ್ನು ಯುವಕ ಬೇರೆಯವರಿಗೆ ಕಳುಹಿಸಿರುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ತಾಯಿ, ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದು ಕಳ್ಳರು ಎಸ್ಕೇಪ್: ಮಹಿಳೆ ಸಾವು

0

ಬೆಂಗಳೂರು: ನೆಲಮಂಗಲ ಬಳಿಯ ಹುಸ್ಕೂರು ಗ್ರಾಮದಲ್ಲಿ ಸ್ಪ್ರೇ ಸಿಂಪಡಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದು, ಸ್ಪ್ರೇ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜ್ಯೋತಿ (45) ಮೃತ ಮಹಿಳೆ. ಬೆಳಿಗ್ಗೆ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತ ಕಳ್ಳರು ಆಕೆಯ ಮೇಲೆ ಸ್ಪ್ರೇ ಸಿಂಪಡಿಸಿ, ಕೊರಳಲ್ಲಿದ್ದ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಸ್ಪ್ರೇ ಪರಿಣಾಮವಾಗಿ ಜ್ಯೋತಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಇಸ್ರೇಲ್‌ನಿಂದ ತರಲಾಗಿದ್ದ ಜೀಬ್ರಾ ‘ಪ್ರಾಚಿ’ ಚಿಕಿತ್ಸೆ ಫಲಿಸದೆ ಸಾವು: ಎರಡು ದಿನಗಳ ಹಿಂದೆ ಜನಿಸಿದ್ದ ಮರಿ ಅನಾಥ

0

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ದಾಖಲಾಗಿರುವ ಮಹತ್ವದ ಘಟನೆಯಲ್ಲಿ, ಇಸ್ರೇಲ್‌ನಿಂದ ತರಲಾಗಿದ್ದ ಹೆಣ್ಣು ಜೀಬ್ರಾ ‘ಪ್ರಾಚಿ’ ಸಾವನ್ನಪ್ಪಿದೆ. ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಪ್ರಾಚಿ, ಎರಡು ದಿನಗಳ ಹಿಂದೆ ಹೆಣ್ಣು ಮರಿಯನ್ನು ಹೆತ್ತ ನಂತರ ಗಂಭೀರ ಅನಾರೋಗ್ಯಕ್ಕೆ ಒಳಗಾಗಿತ್ತು.

2018ರ ಸೆಪ್ಟೆಂಬರ್ 4ರಂದು ಇಸ್ರೇಲ್‌ನ ರಾಮತ್ ಗ್ಯಾನ್ ಮೃಗಾಲಯದಿಂದ ಮೈಸೂರಿಗೆ ತರಲಾಗಿದ್ದ ಪ್ರಾಚಿ, ಕಳೆದ ಒಂದು ದಶಕದಿಂದ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ಈ ಅವಧಿಯಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ್ದ ಪ್ರಾಚಿ, ಇತ್ತೀಚೆಗೆ ಆರನೇ ಮರಿಗೆ ಜನ್ಮ ನೀಡಿತ್ತು.

ಹೆರಿಗೆ ನಂತರ ಪ್ರಾಚಿಯ ಆರೋಗ್ಯದಲ್ಲಿ ತೀವ್ರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಕರುಳಿನ ಕಾಯಿಲೆ ಉಲ್ಬಣಗೊಂಡಿತ್ತು. ಮೃಗಾಲಯದ ಪಶುವೈದ್ಯರು ಹಾಗೂ ಸಿಬ್ಬಂದಿ ನಿರಂತರ ಚಿಕಿತ್ಸೆ ಮತ್ತು ನಿಗಾ ವಹಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಪ್ರಾಚಿ ಮೃತಪಟ್ಟಿದೆ.

ಪ್ರಾಚಿಯ ಸಾವಿನಿಂದ ಮೈಸೂರು ಝೂಗೆ ಮಹತ್ತರ ನಷ್ಟವಾಗಿದ್ದು, ಮೃಗಾಲಯದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಇತ್ತ ಪ್ರಾಚಿಗೆ ಜನಿಸಿದ ಹೆಣ್ಣು ಮರಿ ಆರೋಗ್ಯವಾಗಿದ್ದು, ಝೂ ಸಿಬ್ಬಂದಿ ಹಾಲುಣಿಸಿ ವಿಶೇಷ ಆರೈಕೆ ನೀಡುತ್ತಿದ್ದಾರೆ. ಪಶುವೈದ್ಯರ ನೇರ ಮೇಲ್ವಿಚಾರಣೆಯಲ್ಲಿ ಮರಿಯನ್ನು ಬೆಳೆಸಲಾಗುತ್ತಿದೆ.

ಪ್ರಾಚಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಂತರ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ತನ್ನ ವಿಶಿಷ್ಟ ಮೈಬಣ್ಣ ಮತ್ತು ಪಟ್ಟೆಗಳಿಂದ ಪ್ರವಾಸಿಗರ ಗಮನ ಸೆಳೆದಿದ್ದ ಪ್ರಾಚಿ, ಇದೀಗ ಮೈಸೂರಿನ ಝೂ ಇತಿಹಾಸದಲ್ಲಿ ನೆನಪಾಗಿ ಉಳಿದಿದೆ.

Metro ದರ ಏರಿಕೆ ಖಂಡಿಸಿ ಮೆಟ್ರೋ ನಿಲ್ದಾಣದಲ್ಲಿ BJP ಪ್ರತಿಭಟನೆ: ತೇಜಸ್ವಿ ಸೂರ್ಯ- ರಾಮಮೂರ್ತಿ ಪೊಲೀಸರ ವಶಕ್ಕೆ

0

ಬೆಂಗಳೂರು: ಮೆಟ್ರೋ ದರ ಏರಿಕೆಯನ್ನು ಖಂಡಿಸಿ ಆರ್‌ವಿ ಮೆಟ್ರೋ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ಶಾಸಕ ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆಗೆ ಅನುಮತಿ ಇಲ್ಲವೆಂದು ಪೊಲೀಸರು ಮುಂಚಿತವಾಗಿಯೇ ನೋಟಿಸ್ ನೀಡಿದ್ದರೂ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಖಾಲಿ ಟ್ರಂಕ್ ಹಿಡಿದುಕೊಂಡು ಆಗಮಿಸಿದ ತೇಜಸ್ವಿ ಸೂರ್ಯ, ಟ್ರಂಕ್ ತೆರೆದು “ರಾಜ್ಯ ಸರ್ಕಾರ ಖಾಲಿಯಾಗಿದೆ” ಎಂದು ಟೀಕಿಸಿದರು.

ನಾನು ಪ್ರತಿಭಟನೆ ಮಾಡುತ್ತಿಲ್ಲ, ಖಾಲಿ ಟ್ರಂಕ್ ಹಿಡಿದಿದ್ದೇನೆ. ನನ್ನನ್ನು ಯಾರೂ ತಡೆಯಬಾರದು ಎಂದು ತೇಜಸ್ವಿ ಸೂರ್ಯ ಹೇಳಿದರು. ಪೊಲೀಸರು ತಡೆದಾಗ, ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನನ್ನನ್ನು ವಶಕ್ಕೆ ಪಡೆಯುವಂತಿಲ್ಲ. ಕಾನೂನು ತಿಳಿದುಕೊಂಡು ವಶಕ್ಕೆ ಪಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಾದ ಬಳಿಕ ಪೊಲೀಸರು ತೇಜಸ್ವಿ ಸೂರ್ಯ ಅವರನ್ನು ವಶಕ್ಕೆ ಪಡೆದು, ಟ್ರಂಕ್ ಮೇಲಿದ್ದ “ಕಾಂಗ್ರೆಸ್ ಸರ್ಕಾರ ಖಾಲಿ ಟ್ರಂಕ್ ಸರ್ಕಾರ” ಎಂಬ ಪೋಸ್ಟರ್ ಅನ್ನು ತೆರವುಗೊಳಿಸಿದರು.

ಇದೇ ವೇಳೆ ಬಿಜೆಪಿ ಮೌನ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ರಾಮಮೂರ್ತಿ, ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿರುವುದಾಗಿ ಹೇಳಲಾಗುತ್ತಿದೆ. ಆದರೆ ದರ ಏರಿಕೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಈಗಿರುವ ದರವನ್ನೂ ಕಡಿಮೆ ಮಾಡಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಲ್ಲಿ ಇಂದು 100 ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಪವರ್ ಕಟ್; ಬೆಸ್ಕಾಂ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಕೂಡ ವಿದ್ಯುತ್ ಕಟ್ ಆಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಾರಕ್ಕಿ ಮತ್ತು ಎಲಿಟ ಪ್ರೋಮೆನೇಡ್ ಉಪಕೇಂದ್ರ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಶಾಕಂಬರಿ ನಗರ, ಪೈಪ್ ಲ್ಯೆನ್ ರೋಡ್, ರಾಘವೇಂದ್ರ ಸ್ವಾಮಿ ಮಟ, ಜೆ.ಪಿ ನಗರ ಮೊದಲನೇ ಹಂತ, 14ನೇ ಅಡ್ಡ ರಸ್ತೆ, ಸಲಾರ್ಪುರಿಯಾ ಅಪಾರ್ಟ್ ಮೆಂಟ್, ನಾಗಗಾರ್ಜುನ ಅಪಾರ್ಟ್‌ ಮೆಂಟ್ ಪುಟ್ಟೇನಹಳ್ಳಿ, ಜಯನಗರ 8, 5, 7 ನೇ ಬ್ಲಾಕ್, ಐಟಿಐ ಲೇಔಟ್, ಎಸ್. ಬಿ.ಐ ಕಾಲೋನಿ, ಅರ್.ವಿ.ಡೆಂಟಲ್ ಕಾಲೇಜ್ ಸುತ್ತಮುತ್ತಲ ಪ್ರದೇಶಗಳು, 24ನೇ ಮೈನ್‌, ಎಲ್ಐಸಿ ಕಚೇರಿ ಹಿಂಬಾಗ, ಎಲ್ಐಸಿ ಕಾಲೋನಿ, ಕೆ ಆರ್ ಲೇಔಟ್, ವೆಂಕಟಾದ್ರಿ ಲೇಔಟ್,

ಜಿ.ಪಿ.ನಗರ 5ನೇ ಹಂತ, ಸಾಯಿ ನರ್ಸರಿ ರಸ್ತೆ, ಜಿ.ಪಿ.ನಗರ 6ನೇ ಹಂತ, 15ನೇ ಕ್ರಾಸ್, 16 & 12 ನೇ ಕ್ರಾಸ್, ಆದರ್ಶ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌, ಬನ್ನೇರುಘಟ್ಟ ರೋಡ್, ಡಾಲರ್ಸ್ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ಅಪಾರ್ಟ್‌ಮೆಂಟ್, ಕಲ್ಯಾಣಿ ಕೃಷ್ಣ ಮ್ಯಾಗ್ನಮ್ ಮತ್ತು ಎಲಿಟ ಪ್ರೋಮೆನೇಡ್ ಅಪಾರ್ಟ್‌ಮೆಂಟ್, ಕೆ.ಆರ್. ಲೇಔಟ್, ಶಾರದನಗರ, ಚುಂಚಗಟ್ಟ. ಇದಲ್ಲದೆ ಟ್ಯಾನರಿ ರಸ್ತೆ ಜೈಭಾರತ್ ನಗರ, ಸಿ.ಕೆ. ಉದ್ಯಾನ, ಡಿ’ಕೋಸ್ಟಾ ಲೇಔಟ್, ಹಚಿನ್ಸ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ, ಬಾಣಸವಾಡಿ ರೈಲ್ವೆ ನಿಲ್ದಾಣ ರಸ್ತೆ, ಮರಿಯಮ್ಮ ದೇವಸ್ಥಾನ ಬೀದಿ, ಲಾಜರ್ ಲೇಔಟ್, ವಿವೇಕಾನಂದ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಯಶ್ ತಾಯಿ ಪುಷ್ಪಾ ಸೈಟ್ ವಿವಾದ: ಹಲವು ದಿನಗಳ ಬಳಿಕ ಪ್ರತ್ಯಕ್ಷವಾಗಿ ಗಂಭೀರ ಆರೋಪ ಮಾಡಿದ ಮೂಲ ಮಾಲಕಿ ಲಕ್ಷ್ಮಮ್ಮ

ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರ ನಿವೇಶನ ವಿವಾದ ಇದೀಗ ಕೇವಲ ಭೂಮಿ ಸಂಬಂಧದ ಜಗಳವಲ್ಲ, ಸಂಘಟಿತ ದಂಧೆಯ ಆರೋಪದ ಹಂತಕ್ಕೆ ತಲುಪಿದೆ. ಈ ಪ್ರಕರಣದಲ್ಲಿ ಇದೀಗ ಮೂಲ ಮಾಲಕಿ ಎನ್ನಲಾದ ಲಕ್ಷ್ಮಮ್ಮ ಅವರು ಪ್ರತ್ಯಕ್ಷರಾಗಿದ್ದು, ವಿವಾದಕ್ಕೆ ಮತ್ತಷ್ಟು ಕಾವು ತಂದಿದ್ದಾರೆ.

ಲಕ್ಷ್ಮಮ್ಮ ಅವರು, “ಪುಷ್ಪಾ ಅವರ ಜಾಗ ಬೇರೆ ಕಡೆ ಇದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದನ್ನು ನಾವು ತೆಗೆಸಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ವಾಸವಾಗಿರುವ 93 ವರ್ಷದ ಲಕ್ಷ್ಮಮ್ಮ, ಹಾಸನಕ್ಕೆ ಬರಲು ತೊಂದರೆಯಿರುವುದರಿಂದ ದೇವರಾಜ್ ಅವರನ್ನು ಜಿಪಿಎ ಹೋಲ್ಡರ್ ಆಗಿ ನೇಮಿಸಿದ್ದಾಗಿ ತಿಳಿಸಿದ್ದಾರೆ.

ಆದರೆ ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಪುಷ್ಪಾ ಅರುಣ್ ಕುಮಾರ್, “ಲಕ್ಷ್ಮಮ್ಮ ಅವರಿಂದ ಜಾಗ ವರ್ಗಾವಣೆ ಆಗಿ 45 ವರ್ಷಗಳಾಗಿವೆ. ಈಗ ಟಿವಿಯಲ್ಲಿ ಅವರನ್ನು ನೋಡುತ್ತಿದ್ದೇನೆ. ಖಾತೆ ನನ್ನ ಹೆಸರಿನಲ್ಲಿ ಇದೆ, ಕಂದಾಯ ನಾನು ಕಟ್ಟುತ್ತಿದ್ದೇನೆ. ಅವರ ಹೆಸರಿನಲ್ಲಿ ಯಾಕೆ ಕಂದಾಯ ದಾಖಲೆ ಇಲ್ಲ?” ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೆ, “ಹಾಸನದಲ್ಲಿ ಈ ರೀತಿ ದಂಧೆ ನಡೆಯುತ್ತಿದೆ. ಹಿಂದಿನ ಎರಡು ಸೈಟ್ಗಳಲ್ಲೂ ಇದೇ ಮಾದರಿಯ ಪ್ರಯತ್ನ ನಡೆದಿದೆ. ಸತೀಶ್ ಪಟೇಲ್, ಲಾಯರ್ ಶೇಖರ್, ಡಿಪಿಒ ನಟರಾಜ್, ದೇವರಾಜೇಗೌಡ ಸೇರಿ ಈ ದಂಧೆ ನಡೆಸುತ್ತಿದ್ದಾರೆ. ಅನೇಕ ಜನರಿಗೆ ಇದೇ ರೀತಿ ತೊಂದರೆ ಕೊಟ್ಟಿದ್ದಾರೆ ಎಂಬ ಮಾಹಿತಿ ನನಗೆ ಬರುತ್ತಿದೆ” ಎಂದು ಪುಷ್ಪಾ ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರ ಮೋಸ ಮಾಡಿದ್ದರೆ ಸರ್ಕಾರವನ್ನು ಪ್ರಶ್ನಿಸಬೇಕು, ನಮ್ಮ ಮೇಲೆ ಫೈಟ್ ಮಾಡೋದಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ನಾನು 2020ಕ್ಕೂ ಮುಂಚೆಯೇ ಈ ನಿವೇಶನ ಖರೀದಿಸಿದ್ದೇನೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದೇನೆ” ಎಂದಿದ್ದಾರೆ.

ಇನ್ನೂ, “ದೇವರಾಜ್ ಮತ್ತು ಸತೀಶ್ ಅವರು ಹೆಣ್ಮಕ್ಕಳ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ಈ ಕುರಿತು ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ” ಎಂದು ಪುಷ್ಪಾ ಅರುಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಉದ್ಯಮಿಗೆ 7 ಕೋಟಿ ಬ್ಲ್ಯಾಕ್‌ಮೇಲ್ ಆರೋಪ: ಕೃಷಿ ತಾಪಂಡ ಆಪ್ತನ ಬಂಧನ, ನಟಿಗೆ ಪೊಲೀಸ್ ನೋಟಿಸ್

ನಟಿ ಕೃಷಿ ತಾಪಂಡ ಹಾಗೂ ಎಆರ್‌ವಿ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿ ನಡುವಿನ ವಿವಾದ ಇದೀಗ ಕೇವಲ ಆರೋಪ–ಪ್ರತ್ಯಾರೋಪಗಳ ಹಂತ ಮೀರಿ ಕ್ರಿಮಿನಲ್ ತನಿಖೆಯ ದಾರಿಗೆ ಕಾಲಿಟ್ಟಿದೆ. ಉದ್ಯಮಿ ಅರವಿಂದ್ ರೆಡ್ಡಿಗೆ ಏಳು ಕೋಟಿ ರೂಪಾಯಿ ಹಣ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಮಾನಸಿಕ ಕಿರುಕುಳ ಆರೋಪಿಸಿ ಕೃಷಿ ತಾಪಂಡ ನೀಡಿದ್ದ ದೂರಿನ ಬಳಿಕ ಉದ್ಯಮಿ ಅರವಿಂದ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಯಾಗಿ ಅರವಿಂದ್ ರೆಡ್ಡಿ, ನಟಿಗಾಗಿ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡಿದ್ದು, ಹಣಕ್ಕಾಗಿ ತಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಬಹಿರಂಗ ಆರೋಪಗಳನ್ನು ಮಾಡಿದ್ದರು.

ಈ ನಡುವೆಯೇ ಅರವಿಂದ್ ರೆಡ್ಡಿಗೆ ಬಂದ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಪೂರ್ಣ ಹೊಸ ತಿರುವು ನೀಡಿದೆ. ಪತ್ರದಲ್ಲಿ ಮಹಿಳೆಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸುವಂತೆ ಹಾಗೂ ಏಳು ಕೋಟಿ ರೂಪಾಯಿ ಹಣ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು.

ಪತ್ರದ ಮೂಲವನ್ನು ಪತ್ತೆ ಹಚ್ಚಿದ ಪೊಲೀಸರು, ಅದು ಬನಶಂಕರಿಯಿಂದ ಕೊರಿಯರ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದು, ಬಳಿಕ ಮೆಕ್ಯಾನಿಕ್ ವೈಶಾಖ್ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತ ವೈಶಾಖ್ ನಟಿ ಕೃಷಿ ತಾಪಂಡ ಅವರ ಆಪ್ತನಾಗಿದ್ದು, ಪತ್ರ ಕೊರಿಯರ್ ಮಾಡಲು ಸೂಚನೆ ದೊರೆತಿದೆ ಎಂದು ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ.

ಇನ್ನಷ್ಟು ಅನುಮಾನ ಹುಟ್ಟಿಸಿರುವ ಅಂಶವೆಂದರೆ, ವೈಶಾಖ್ ತನ್ನ ಮೊಬೈಲ್ ಫೋನ್ ಅನ್ನು ಕೃಷಿ ತಾಪಂಡ ಮನೆಯಲ್ಲೇ ಅಡಗಿಸಿಟ್ಟಿದ್ದಾನೆ ಎನ್ನುವ ಪೊಲೀಸರ ಶಂಕೆ. ಈ ಹಿನ್ನೆಲೆ ನಟಿ ಕೃಷಿ ತಾಪಂಡ ಅವರನ್ನು ವಿಚಾರಣೆಗೆ ಕರೆದಿದ್ದು, ಪ್ರಕರಣದ ತನಿಖೆ ಇದೀಗ ಮತ್ತಷ್ಟು ತೀವ್ರಗೊಂಡಿದೆ.

ಈ ಹೈ-ಪ್ರೊಫೈಲ್ ಪ್ರಕರಣದಲ್ಲಿ ಇನ್ನೂ ಹಲವು ಸ್ಫೋಟಕ ಸಂಗತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬ್ರೇಕ್ ಫೇಲ್ ಆಗಿ ಆಟೋಗೆ ಡಿಕ್ಕಿ, ಬೈಕ್ ಮೇಲೆ ಹರಿದ BMTC ಬಸ್; ತಪ್ಪಿದ ದುರಂತ

0

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬಿಎಂಟಿಸಿ ಬಸ್ ನಿಂದ ಅಪಘಾತ ಸಂಭವಿಸಿದೆ.

ಕಮಲನಗರ ಬಸ್ ನಿಲ್ದಾಣದ ಬಳಿ ನಿನ್ನೆ ಸಂಜೆ ಆಟೋಗೆ ಡಿಕ್ಕಿ ಹೊಡೆದು ಬೈಕ್ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬ್ರೇಕ್ ಫೇಲ್ ಆಗಿದ್ದ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

‘ಅದಕ್ಕೆ ದೊಡ್ಡೋರು ಅನ್ನೋದು’; ಕಿಚ್ಚ ಸುದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಧನ್ವೀರ್

ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಸಾಗಬೇಕು ಎಂಬ ಮಾತುಗಳು ಆಗಾಗ ಕೇಳಿಬರುತ್ತಿದ್ದರೂ, ಅಭಿಮಾನಿಗಳ ನಡುವಿನ ಜಗಳಗಳು ಚಿತ್ರರಂಗಕ್ಕೂ ಬಿಸಿ ತಟ್ಟಿಸುತ್ತಿವೆ. ದರ್ಶನ್ ಬಗ್ಗೆ ಸದಾ ಗೌರವದಿಂದ ಮಾತನಾಡುವ ಕಿಚ್ಚ ಸುದೀಪ್ ಮತ್ತು ಅವರ ಅಭಿಮಾನಿ ವಲಯದ ನಡುವಿನ ಘರ್ಷಣೆ ಮತ್ತೊಮ್ಮೆ ಸುದ್ದಿಯಲ್ಲಿದೆ.

ಇತ್ತೀಚೆಗೆ ವಿನಯ್ ಗೌಡ ಹಾಗೂ ಧನ್ವೀರ್ ನಡುವಿನ ಸೋಶಿಯಲ್ ಮೀಡಿಯಾ ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ್ದ ಸುದೀಪ್, “ನನಗೆ ಧನ್ವೀರ್ ಮತ್ತು ವಿನಯ್ ಇಬ್ಬರೂ ಒಂದೇ. ಅವರು ಯಂಗ್ಸ್ಟರ್ಸ್. ಆದರೆ ಧನ್ವೀರ್ ಬಳಿ ಏನೇ ಆದರೂ ಆ ಹೀರೋ ಜೊತೆ ನಿಲ್ಲುತ್ತೇನೆ ಅನ್ನೋ ನೀಯತ್ತು ಇದೆ. ಅದೇ ನನಗೆ ಇಷ್ಟ” ಎಂದು ಹೇಳಿದ್ದರು.

ಈ ಹೇಳಿಕೆಗೆ ಧನ್ವೀರ್ ಪ್ರತಿಕ್ರಿಯೆ ನೀಡಿ “ದೊಡ್ಡವರು ಮಾತನಾಡೋದು ಇದೇ. ಅವರಿಗೆ ಎಲ್ಲವೂ ಗೊತ್ತಿರುತ್ತೆ. ಅದಕ್ಕೇ ಅವರು ದೊಡ್ಡ ಮಾತು ಆಡ್ತಾರೆ” ಎಂದು ಸುದೀಪ್ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

ಇದೇ ವೇಳೆ, ವಿನಯ್ ಗೌಡಗೆ ಟಾಂಗ್ ನೀಡಿದ ಧನ್ವೀರ್, “ಆಗದೆ ಇದ್ದವರು ಎಲ್ಲೋ ಕೂತು ಮಾತನಾಡ್ತಾರೆ” ಎಂದು ಹೇಳಿದ್ದಾರೆ. ಸುದೀಪ್ ಮಾತು ಕೇಳಿ ನಮಗೆ ಖುಷಿ ಆಯ್ತು ಎಂದೂ ಅವರು ಹೇಳಿದ್ದಾರೆ.

ಸುದೀಪ್ ಅವರಿಗೆ ಅನೇಕ ಯುವ ಹೀರೋಗಳು ನೀಯತ್ತು ತೋರಿಸುತ್ತಾರೆ. ಇದೇ ರೀತಿಯ ಗೌರವ ಬೇರೆ ಹಿರಿಯ ನಟರಿಗೂ ಸಿಗಬೇಕು ಎಂಬ ಅಭಿಪ್ರಾಯವೂ ಚಿತ್ರರಂಗದಲ್ಲಿ ಕೇಳಿಬರುತ್ತಿದ್ದು, ಯುವ ನಟರ ನೀಯತ್ತು ಚಿತ್ರರಂಗಕ್ಕೆ ಪ್ಲಸ್ ಆಗುತ್ತದೆ ಎನ್ನಲಾಗುತ್ತಿದೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೂ ಟೀಕೆ ಎದುರಿಸಿದ ದಳಪತಿ ವಿಜಯ್: ಕಾರಣವೇನು?

ನಟ ದಳಪತಿ ವಿಜಯ್ ಸದ್ಯ ಸಿನಿಮಾ ಹಾಗೂ ರಾಜಕೀಯ ಎರಡೂ ವಲಯಗಳಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಮಧ್ಯೆ, ವಿಜಯ್ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಚೆನ್ನೈನಲ್ಲಿ ನಡೆದ ಹೈಪ್ರೊಫೈಲ್ ಮದುವೆ ಸಮಾರಂಭದಲ್ಲಿ ವಿಜಯ್ ಹಾಜರಿದ್ದು, ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ವಿಜಯ್ ಅವರ ಹಾಜರಿಯನ್ನು ಪ್ರಶ್ನಿಸಿ ಟೀಕಿಸಿದ್ದಾರೆ.

ಹಿಂದೆ ಕರೂರಿನಲ್ಲಿ ನಡೆದ ವಿಜಯ್ ರ್ಯಾಲಿಯ ವೇಳೆ ಉಂಟಾದ ಕಾಲ್ತುಳಿತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ವಿಜಯ್ ವಿರುದ್ಧ ಹೊಣೆಗಾರಿಕೆ ಆರೋಪಗಳು ಕೇಳಿಬಂದಿದ್ದು, ಅವರು ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಇಂತಹ ಹಿನ್ನೆಲೆಯಲ್ಲೇ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ “ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಮಯ ಕೊಡದವರು, ಮದುವೆ ಸಮಾರಂಭಕ್ಕೆ ತೆರಳಿರುವುದು ನೋವು ತಂದಿದೆ” ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮತ್ತೊಂದೆಡೆ, ಕೆಲವರು ವಿಜಯ್ ಅವರನ್ನು ಅನಗತ್ಯವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಸಮರ್ಥನೆಯನ್ನೂ ನೀಡಿದ್ದಾರೆ.

ಇನ್ನು ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದಲ್ಲಿನ ರಾಜಕೀಯ ಅಂಶಗಳೇ ಬಿಡುಗಡೆ ವಿಳಂಬಕ್ಕೆ ಕಾರಣ ಎಂಬ ಚರ್ಚೆ ಜೋರಾಗಿದೆ. ಕನ್ನಡದ ಕೆವಿಎನ್ ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಧಿಕೃತ ಘೋಷಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

error: Content is protected !!