Home Blog Page 61

ಬಿ.ಎಸ್.ವೈ 50 ವರ್ಷದ ರಾಜಕೀಯ ಪಯಣಕ್ಕೆ ಮೆಗಾ ಸಂಭ್ರಮ: ಚಿತ್ರದುರ್ಗದಲ್ಲಿ ಕೋಟೆ ಮಾದರಿಯ ಅಭಿಮಾನೋತ್ಸವ ವೇದಿಕೆ!

ಚಿತ್ರದುರ್ಗ: ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನವನ್ನು ಆಚರಿಸಲು ಚಿತ್ರದುರ್ಗದಲ್ಲಿ ಭಾರೀ ಅಭಿಮಾನೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಮಾದಾರ ಚೆನ್ನಯ್ಯ ಮಠದ ಸಮೀಪ ನಿರ್ಮಿಸಿರುವ ಬೃಹತ್ ವೇದಿಕೆ ಮತ್ತು ಕೋಟೆ ಮಾದರಿಯ ಪ್ರವೇಶ ದ್ವಾರಗಳು ಗಮನ ಸೆಳೆಯುತ್ತಿವೆ.

ವೇದಿಕೆ ಸುತ್ತಮುತ್ತ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರ ಭಾರೀ ಕಟೌಟ್‌ಗಳನ್ನು ಅಳವಡಿಸಲಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ.

ಜನಸಾಗರವನ್ನು ಗಮನದಲ್ಲಿಟ್ಟುಕೊಂಡು ಭೋಜನ ವ್ಯವಸ್ಥೆಯನ್ನೂ ಅದ್ದೂರಿಯಾಗಿ ಮಾಡಲಾಗಿದೆ. 1,250ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಕಾರ್ಯದಲ್ಲಿ ನಿರತರಾಗಿದ್ದು, ಮೈಸೂರ್ ಪಾಕ್, ಪಲಾವ್, ಮೆಂತ್ಯ ಪಲಾವ್, ಟೊಮೆಟೊ ಬಾತ್, ಮೊಸರನ್ನ ಸೇರಿದಂತೆ ಹಲವು ಬಗೆಯ ಊಟ ಸಿದ್ಧಪಡಿಸಲಾಗುತ್ತಿದೆ. ಕಾರ್ಯಕ್ರಮ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ.

ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ಮೂವರು ಗಂಭೀರ, ಹಲವರಿಗೆ ಗಾಯ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಕೊರಕೋಡು ಕ್ರಾಸ್ ಸಮೀಪ ಕೆರೆಯ ಏರಿಯ ಮೇಲೆ ಮದುವೆ ದಿಬ್ಬಣದ ಖಾಸಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಸಿದ್ದಾಪುರದಿಂದ ಹಾನಗಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಅಪಘಾತಕ್ಕೀಡಾಗಿದೆ.

ಆನವಟ್ಟಿ–ಸೊರಬ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಕೆರೆ ಏರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೋರಿಗೆ ಮಗುಚಿ ಬಿದ್ದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದ್ದು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಸುಮಾರು 50 ಮಂದಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ.

ಗಾಯಾಳುಗಳನ್ನು ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನ್ಯಾಯಾಲಯದ ಆದೇಶ ಇದ್ದರೆ ಇ-ಖಾತಾ ಇಲ್ಲವೆಂದು ಕ್ರಯಪತ್ರ ನೋಂದಣಿ ತಿರಸ್ಕರಿಸಲಾಗದು: ಹೈಕೋರ್ಟ್

ಬೆಂಗಳೂರು: ನ್ಯಾಯಾಲಯ ನೀಡುವ ಡಿಕ್ರಿ ಆದೇಶವು ಕೇವಲ ಹಕ್ಕಿನ ಘೋಷಣೆ ಮಾತ್ರವಲ್ಲ, ಅದನ್ನು ಕಾನೂನುಬದ್ಧವಾಗಿ ಕಾರ್ಯಗತಗೊಳಿಸಬೇಕಾದ ಬಾಧ್ಯತೆಯೂ ಆಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.

ನ್ಯಾಯಾಲಯದ ಡಿಕ್ರಿ ಇದ್ದರೂ ಆಸ್ತಿಗೆ ಇ-ಖಾತೆ ಇಲ್ಲ ಎಂಬ ಕಾರಣ ನೀಡಿ ಕ್ರಯಪತ್ರ (ಮಾರಾಟ ಪತ್ರ) ನೋಂದಣಿ ನಿರಾಕರಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಜೊತೆಗೆ, ಈ ಸಂಬಂಧ ನೋಂದಣಾಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನೂ ರೂಪಿಸಿದೆ.

ತುಮಕೂರು ಜಿಲ್ಲೆಯ ಪಿ.ಎಸ್. ಅಶೋಕ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ವಿಚಾರಣಾ ನ್ಯಾಯಾಲಯದ ಡಿಕ್ರಿ ಆದೇಶದ ಹೊರತಾಗಿಯೂ ಇ-ಖಾತೆ ಇಲ್ಲವೆಂಬ ನೆಪ ನೀಡಿ ನೋಂದಣಿ ಮಾಡಲು ನಿರಾಕರಿಸಿದ್ದ ತುಮಕೂರು ಜಿಲ್ಲಾ ನೋಂದಣಾಧಿಕಾರಿಗಳು 2025ರ ಆಗಸ್ಟ್ 28ರಂದು ಹೊರಡಿಸಿದ್ದ ಹಿಂಬರಹವನ್ನು ನ್ಯಾಯಾಲಯ ರದ್ದುಪಡಿಸಿದೆ.

ತೀರ್ಪಿನಲ್ಲಿ ಹೈಕೋರ್ಟ್, ಇ-ಖಾತೆ ಇಲ್ಲ ಎಂಬ ಕಾರಣ ನೀಡಿ ಕ್ರಯಪತ್ರ ನೋಂದಣಿಯನ್ನು ತಿರಸ್ಕರಿಸುವುದು ಕಾನೂನಿನ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಪ್ರಕರಣಗಳು ಪದೇ ಪದೇ ನ್ಯಾಯಾಲಯದ ಮುಂದೆ ಬರುತ್ತಿರುವುದು ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಾಲಯ ಒಂದು ಬಾರಿ ಡಿಕ್ರಿ ನೀಡಿದ ಬಳಿಕ, ಅದನ್ನು ಕಾನೂನುಬದ್ಧವಾಗಿ ಜಾರಿಗೆ ತರಬೇಕಾಗುತ್ತದೆ. ಕೋರ್ಟ್ ಕಮಿಷನರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಆ ಆದೇಶವನ್ನು ಅನುಷ್ಠಾನಗೊಳಿಸುವ ಅಧಿಕಾರ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ನಗರ ಪಾಲಿಕೆಗಳು ಹಾಗೂ ನೋಂದಣಿ ಪ್ರಾಧಿಕಾರಗಳು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ನ್ಯಾಯಾಲಯದ ಆದೇಶವನ್ನು ನಿಷ್ಪ್ರಯೋಜಕಗೊಳಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಸರ್ಕಾರದ ಪ್ರಾಧಿಕಾರಗಳ ಜವಾಬ್ದಾರಿ ಕೇವಲ ನಿಯಂತ್ರಣಕ್ಕೆ ಸೀಮಿತವಾಗಿಲ್ಲ. ನ್ಯಾಯಾಂಗದ ಆದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣೆಗಾರಿಕೆಯೂ ಅವರ ಮೇಲಿದೆ. ಆದರೆ ಸ್ಪಷ್ಟ ಆಡಳಿತಾತ್ಮಕ ಮಾರ್ಗಸೂಚಿಗಳ ಕೊರತೆಯಿಂದ ಅಸಂಗತ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆ, ನ್ಯಾಯಾಲಯದ ಡಿಕ್ರಿ ಜಾರಿಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಗಳು, ಸ್ಥಳೀಯ ಸಂಸ್ಥೆಗಳು ಹಾಗೂ ನೋಂದಣಿ ಪ್ರಾಧಿಕಾರಗಳು ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಹೈಕೋರ್ಟ್ ರೂಪಿಸಿದೆ. ಈ ತೀರ್ಪು ಆಸ್ತಿ ನೋಂದಣಿ ಹಾಗೂ ನ್ಯಾಯಾಲಯದ ಆದೇಶ ಜಾರಿಗೆ ಸಂಬಂಧಿಸಿದಂತೆ ಮಹತ್ವದ ಮಾದರಿಯಾಗಲಿದೆ.

“ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯ್ ಇರಲಿ”: ರಶ್ಮಿಕಾ ಮಂದಣ್ಣ

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ. ಇಂದು ವಿಜಯ್ ದೇವರಕೊಂಡ ತಮ್ಮ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ರಶ್ಮಿಕಾ ಮಂದಣ್ಣ ಅವರ ಹಳೆಯ ಭಾವನಾತ್ಮಕ ಹೇಳಿಕೆಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಶ್ಮಿಕಾ, ತಮ್ಮ ಜೀವನದ ಕಷ್ಟದ ಹಂತದಲ್ಲಿ ತಮಗೆ ನಿಜವಾದ ಬೆಂಬಲ ನೀಡಿದ್ದು ವಿಜಯ್ ದೇವರಕೊಂಡ ಎಂದು ಹೇಳಿಕೊಂಡಿದ್ದರು. “ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೀಡುವ ವ್ಯಕ್ತಿಯೊಂದಿಗೆ ಇರೋದು ಎಷ್ಟು ಮುಖ್ಯ ಅನ್ನೋದು ಈಗ ಅರ್ಥವಾಗಿದೆ” ಎಂದು ಅವರು ಹೇಳಿದ್ದರು.

ಇದೇ ವೇಳೆ ‘ಗರ್ಲ್‌ಫ್ರೆಂಡ್’ ಸಿನಿಮಾದ ಕಾರ್ಯಕ್ರಮದಲ್ಲಿ ವಿಜಯ್ ಅವರನ್ನು ಉದ್ದೇಶಿಸಿ ಮಾತನಾಡಿದ್ದ ರಶ್ಮಿಕಾ, “ಈ ಸಿನಿಮಾದ ಆರಂಭದಿಂದಲೂ ನೀನು ನನ್ನ ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯ್ ದೇವರಕೊಂಡ ಇರಲಿ ಎಂದು ನಾನು ಬಯಸುತ್ತೇನೆ. ಅಂಥ ವ್ಯಕ್ತಿ ಸಿಗೋದು ನಿಜಕ್ಕೂ ಆಶೀರ್ವಾದ” ಎಂದು ಭಾವುಕರಾಗಿದ್ದರು.

‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ಈ ಜೋಡಿ, ಬಳಿಕ ರಿಯಲ್ ಲೈಫ್‌ನಲ್ಲೂ ಆಪ್ತರಾಗಿದ್ದರು. ಡೇಟಿಂಗ್ ವದಂತಿಗಳನ್ನು ಹಲವು ಬಾರಿ ಎದುರಿಸಿದ್ದರೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರಲಿಲ್ಲ.

ಈಗ ವಿವಾಹದ ಬಳಿಕ ವಿಜಯ್ ದೇವರಕೊಂಡ ಮೊದಲ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದ್ದು, ಸಿನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.

ಬಿಟ್ ಕಾಯಿನ್ ಹಗರಣದಲ್ಲಿ ಮಹತ್ವದ ಬೆಳವಣಿಗೆ; ಪ್ರಮುಖ ಆರೋಪಿ ಶ್ರೀಕಿ ಸೇರಿ ಇಬ್ಬರ ಬಂಧನ

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಬಹುಕೋಟಿ ಬಿಟ್ಕಾಯಿನ್ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದ್ದು, ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ.

ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ‘ಶ್ರೀಕಿ’, ರಾಬಿನ್ ಖಂಡೇವಾಲ ಹಾಗೂ ಸುನೀಶ್ ಹೆಗ್ಡೆ ಅವರನ್ನು ಇಡಿ ಅಧಿಕಾರಿಗಳು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಇಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಇಡಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಆದೇಶದ ಮೇರೆಗೆ ಮೂವರನ್ನೂ 10 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಲಾಗಿದೆ.

ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆದಿರುವ ಈ ಬಿಟ್ಕಾಯಿನ್ ಹಗರಣದಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಮುಖ ಆರೋಪಿಯಾಗಿದ್ದಾನೆ. ಹ್ಯಾಕಿಂಗ್, ಡಿಜಿಟಲ್ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಗಂಭೀರ ಆರೋಪಗಳು ಆತನ ವಿರುದ್ಧ ದಾಖಲಾಗಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸುನೀಶ್ ಹೆಗ್ಡೆ ಹಾಗೂ ಪ್ರಸಿದ್ಧ ಶೆಟ್ಟಿ ಸೇರಿದಂತೆ ಇತರರು, ತಮ್ಮ ವಿರುದ್ಧ ದಾಖಲಾಗಿರುವ ಹ್ಯಾಕಿಂಗ್ ಮತ್ತು ವಂಚನೆ ಪ್ರಕರಣಗಳನ್ನು ರದ್ದುಪಡಿಸುವಂತೆ ಈ ಹಿಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಏಪ್ರಿಲ್ ತಿಂಗಳಲ್ಲಿ ಸಲ್ಲಿಸಿದ್ದ ಆ ಅರ್ಜಿಗಳ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಮುಂದುವರಿದಿದೆ.

ಲಿವ್ ಇನ್ ರಿಲೇಶನ್ʼಶಿಪ್ ನಲ್ಲಿದ್ದ ಯುವಕ ಆತ್ಮಹತ್ಯೆ! ಜೊತೆಯಲ್ಲಿದ್ದ ಮಹಿಳೆ ಪರಾರಿ

ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಎಂದು ಗುರುತಿಸಲಾಗಿದೆ.

ಮೃತ ತಿಪ್ಪೇಸ್ವಾಮಿ ಹಾಗೂ ದಾವಣಗೆರೆ ಮೂಲದ ಮಹಿಳೆ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ತಿಳಿದುಬಂದಿದೆ.

ಆ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ ಪತಿ ಹಾಗೂ ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ತಿಪ್ಪೇಸ್ವಾಮಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇಬ್ಬರೂ ಗಂಡ-ಹೆಂಡತಿ ಎಂದು ಹೇಳಿಕೊಂಡು ತಿಂಗಳಿಗೆ ಮೂರು ಸಾವಿರ ರೂಪಾಯಿ ಬಾಡಿಗೆ ನೀಡಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಮಹಿಳೆ ನನ್ನನ್ನು ಮೆಂಟೇನ್ ಮಾಡಲಾಗುವುದಿಲ್ಲ, ಬಿಟ್ಟುಬಿಡು” ಎಂದು ಯುವಕನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಯುವಕನ ಸಾವಿಗೆ ಮಹಿಳೆಯೇ ಕಾರಣ ಎಂದು ಆರೋಪಿಸಿ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಮಹಿಳೆ ನಾಪತ್ತೆಯಾಗಿದ್ದು, ಪೊಲೀಸರು ಆಕೆಯ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕೆಲಸ ಮಾಡಿಸಿದರೂ ಕೂಲಿ ಇಲ್ಲ: ಉದ್ಯೋಗ ಖಾತ್ರಿ ಯೋಜನೆ ಅವ್ಯವಸ್ಥೆಗೆ ಕಾರ್ಮಿಕರ ಆಕ್ರೋಶ – ಪೇಸ್ ಲಾಕ್: NMR ಗೊಂದಲಕ್ಕೆ ಮುತ್ತಿಗೆ

ಲಕ್ಷ್ಮೇಶ್ವರ; ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಪೂರ್ವನಿಯೋಜಿತವಾಗಿ ಕೈಗೊಳ್ಳದೇ ಅವ್ಯವಸ್ಥೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನೂರಾರು ಕೂಲಿಕಾರ್ಮಿಕರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿಯಿಂದ ಪ್ರತಿ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಬಡ ಕೂಲಿಕಾರ್ಮಿಕರಿಗೆ ನೀಡಬೇಕಾದ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ವನಿಯೋಜಿತ ಮಾಡದೇ ಇರುವುದರಿಂದ ಕೆಲಸ ನಿರ್ವಹಣೆ ಗೊಂದಲದ ನಡುವೆ ಸಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದರು.

ಮುಖ್ಯವಾಗಿ ಪೇಸ್‌ಲಾಕ್ ತಾಂತ್ರಿಕ ಸಮಸ್ಯೆಯನ್ನು ನೆಪವೊಡ್ಡಿ ಹಲವಾರು ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಲಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಆಡಳಿತ ಮುಂಚಿತವಾಗಿ ಕಾಮಗಾರಿಗಳನ್ನು ಯೋಜಿಸಿ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷವೂ ಮಳೆ ಆರಂಭವಾದ ಬಳಿಕ ಕಾಮಗಾರಿ ನಡೆಸಲು ಪ್ರಯತ್ನಿಸಿದ್ದು, 20 ದಿನ ಕೆಲಸ ಮಾಡಿದರೂ ಕೆಲವೇ ದಿನಗಳ ಅರ್ಧ ಕೂಲಿ ಮಾತ್ರ ಪಾವತಿಸಲಾಗಿದೆ. ಇದಕ್ಕೂ ತಾಂತ್ರಿಕ ದೋಷವನ್ನೇ ಕಾರಣವಾಗಿ ಹೇಳಲಾಗಿದೆ ಎಂದು ಕಾರ್ಮಿಕರು ದೂರಿದರು.

ಈ ವರ್ಷವೂ ಪೂರ್ವಯೋಜನೆ ಇಲ್ಲದೇ ಏಕಾಏಕಿ ಕಾಮಗಾರಿ ಆರಂಭಿಸಲಾಗಿದೆ. ಕಾರ್ಮಿಕರು ಸ್ಥಳಕ್ಕೆ ತೆರಳಿ ಕೆಲಸ ಆರಂಭಿಸಿದರೂ, ಪೇಸ್‌ಲಾಕ್ ತೆಗೆಯದ ಕಾರಣ ಎನ್‌ಎಂಆರ್ ದಾಖಲಾಗದೇ ಹಲವರು ಕೂಲಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ ಸೂರಣಗಿ ಮಾತನಾಡಿ, ಪ್ರತಿವರ್ಷ ಕಾರ್ಮಿಕರು ಜಾಬ್ ಕಾರ್ಡ್ ಸಲ್ಲಿಸಿದರೂ ಸಿಬ್ಬಂದಿ ಸರಿಯಾಗಿ ಎನ್‌ಎಂಆರ್ ಹಾಕುವುದಿಲ್ಲ. ಪೂರ್ವಯೋಜನೆ ಇಲ್ಲದೇ ಕಾಮಗಾರಿ ನಡೆಸುತ್ತಿರುವುದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಕೃಷಿ ಚಟುವಟಿಕೆ ಆರಂಭವಾಗುವ ಮೊದಲು ಸಮಸ್ಯೆ ಪರಿಹರಿಸಿ ಕೂಲಿಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.

“ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಪೂರ್ವನಿಯೋಜಿತವಾಗಿ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಮಾಹಿತಿ ನೀಡಲಾಗಿದೆ. ಪೇಸ್‌ಲಾಕ್ ಸೇರಿ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಕಾರ್ಮಿಕರ ನೋಂದಣಿ ವಿಳಂಬವಾಗುತ್ತಿದೆ. ಇದು ಜಿಲ್ಲೆಯ ಹಲವೆಡೆ ಕಂಡುಬಂದಿರುವ ಸಮಸ್ಯೆಯಾಗಿದ್ದು, ಶೀಘ್ರ ಪರಿಹರಿಸಿ ಕಾಮಗಾರಿ ಸುಗಮಗೊಳಿಸಲಾಗುವುದು.” ಎಂದು ರೋಣದ, ಪಿಡಿಓ ಜಿ.ಎಂ ಹೇಳಿದರು.

ಮನೆಯಲ್ಲಿ ಮಲಗಿದ್ದ 5 ತಿಂಗಳ ಮಗು ಮೇಲೆ ಬೀದಿ ನಾಯಿ ದಾಳಿ: ಚಿಕಿತ್ಸೆ ಫಲಿಸದೆ ಸಾವು

ಬೀದರ್: ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಬೀದಿ ನಾಯಿಯ ದಾಳಿಗೆ ಐದು ತಿಂಗಳ ಹೆಣ್ಣು ಮಗು ಬಲಿಯಾದ ದುರ್ಘಟನೆ ನಡೆದಿದೆ.

ಶಿವಾನಿ ಎಂಬ ಹಸುಗೂಸನ್ನು ತಾಯಿ ಮನೆಯ ಪಡಸಾಲೆಯಲ್ಲಿ ಮಲಗಿಸಿ ಕೆಲಸ ಮಾಡುತ್ತಿದ್ದಾಗ, ಮನೆಗೆ ನುಗ್ಗಿದ ಬೀದಿ ನಾಯಿ ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮೃತ ಶಿವಾನಿ ಕುಟುಂಬದ ನಾಲ್ಕನೇ ಹೆಣ್ಣು ಮಗು ಎಂದು ತಿಳಿದುಬಂದಿದೆ.

ಘಟನೆ ಬಳಿಕ ಸ್ಥಳೀಯರು ಹಾಗೂ ಕುಟುಂಬಸ್ಥರು ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ ಭೇಟಿ: ನಗರ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು, ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಹಲವು ಕಡೆ ಸಂಚಾರ ಮಾರ್ಪಾಡು ಹಾಗೂ ವಾಹನ ನಿಲುಗಡೆ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಈ ವರ್ಷ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನವೂ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ.

ವಾಹನ ನಿಲುಗಡೆ ನಿರ್ಬಂಧ

ಭಾನುವಾರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೆಚ್ಎಎಲ್ ಗೇಟ್ ನಂ.30 ಮುಂಭಾಗದಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.

ಇದೇ ವೇಳೆ ಕೆಳಕಂಡ ಪ್ರದೇಶಗಳಲ್ಲೂ ಪಾರ್ಕಿಂಗ್ ನಿರ್ಬಂಧ ಜಾರಿಯಲ್ಲಿರಲಿದೆ:

  • ಹೆಚ್ಎಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆ – ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿಜಿಸಿಎ ಕಚೇರಿವರೆಗೆ (ಎರಡೂ ಬದಿಯಲ್ಲಿ)
  • ಹೆಚ್ಎಎಲ್ ಗೇಟ್ ನಂ.30 ರಸ್ತೆ – ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ.30ರವರೆಗೆ
  • ಹಳೆ ವಿಮಾನ ನಿಲ್ದಾಣ ರಸ್ತೆ – ಎಸ್.ಡಿ ರಸ್ತೆ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್‌ವರೆಗೆ

ಗಣ್ಯರು ಹಾಗೂ ಹಿರಿಯ ಅಧಿಕಾರಿಗಳಿಗೆ ಎಸ್.ಡಿ ರಸ್ತೆ ಜಂಕ್ಷನ್‌ನಲ್ಲಿರುವ ಹೆಚ್ಎಎಲ್ ಡಿಪಾರ್ಟ್‌ಮೆಂಟ್ ಪಾರ್ಕಿಂಗ್ ಹಾಗೂ ಸುರಂಜನ್ ದಾಸ್ ರಸ್ತೆಯ ಹೆಚ್ಎಎಲ್ ಬಸ್ ಯಾರ್ಡ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ.

ನೈಸ್ ರಸ್ತೆ ಸಂಚಾರ ಬದಲಾವಣೆ

ಪ್ರಧಾನಿ ಭೇಟಿ ಹಿನ್ನೆಲೆ ನೈಸ್ ರಸ್ತೆಯಲ್ಲೂ ಕೆಲ ಮಾರ್ಗಗಳಲ್ಲಿ ಸಂಚಾರ ನಿಯಂತ್ರಣ ಜಾರಿಗೊಳಿಸಲಾಗಿದೆ.

  • ತುಮಕೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವ ವಾಹನಗಳು ಸಿಎಂಟಿಐ ಜಂಕ್ಷನ್ ಬಳಿ ತಿರುವು ಪಡೆದು ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಂಚರಿಸಬೇಕು.
  • ಮಾಗಡಿ ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುವವರು ಸುಮ್ಮನಹಳ್ಳಿ ಜಂಕ್ಷನ್ ಬಳಿ ಪರ್ಯಾಯ ಮಾರ್ಗ ಬಳಸಬೇಕು.
  • ಮೈಸೂರು ರಸ್ತೆಯಿಂದ ಕನಕಪುರ ರಸ್ತೆ ಕಡೆಗೆ ಹೋಗುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್ ಮೂಲಕ ಔಟರ್ ರಿಂಗ್ ರಸ್ತೆ ಬಳಸುವಂತೆ ಸೂಚಿಸಲಾಗಿದೆ.

ಕನಕಪುರ ಕಡೆಗೆ ಪರ್ಯಾಯ ಮಾರ್ಗಗಳು

ಮಾರ್ಗ-1:
ಕೋಣನಕುಂಟೆ ಕ್ರಾಸ್ → ವಸಂತಪುರ → ಕೆಂಗೇರಿ → ಮೈಸೂರು ರಸ್ತೆ → ಅಗರ → ಬಂಜಾರಪಾಳ್ಯ → ಕಗ್ಗಲಿಪುರ

ಮಾರ್ಗ-2:
ಎ2ಬಿ ಜಂಕ್ಷನ್ → ನಾರಾಯಣನಗರ ಜೋಡಿ ರಸ್ತೆ → ಅಂಜನಾಪುರ 80 ಅಡಿ ರಸ್ತೆ → ಬನ್ನೇರುಘಟ್ಟ ಮುಖ್ಯರಸ್ತೆ → ಕಗ್ಗಲಿಪುರ

ಪ್ರಯಾಣಿಕರು ಸಂಚಾರ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಪ್ರಯಾಣ ಯೋಜನೆ ಮಾಡಿಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಬಂಗಾಳದಲ್ಲಿ ಬಿಜೆಪಿ ಯುಗಾರಂಭ; ಸುವೇಂದು ಅಧಿಕಾರಿ ನೂತನ ಸಿಎಂ ಆಗಿ ಪ್ರಮಾಣ ಸ್ವೀಕಾರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಐತಿಹಾಸಿಕ ಬದಲಾವಣೆ ಸಂಭವಿಸಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಎನ್‌ಡಿಎ ಆಡಳಿತದ 20 ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ಸರ್ಕಾರಕ್ಕೆ ಶುಭ ಹಾರೈಸಿದರು.

ಸುವೇಂದು ಅಧಿಕಾರಿ ಅವರೊಂದಿಗೆ ದಿಲೀಪ್ ಘೋಷ್, ಅಗ್ನಿಮಿತ್ರಾ ಪೌಲ್, ಅಶೋಕ್ ಕಿರ್ತನ್ಯ, ಕ್ಷುದಿರಂ ತಡು ಮತ್ತು ನಿಶಿತ್ ಪ್ರಾಮಾಣಿಕ್ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತೆರೆದ ವಾಹನ ಮೆರವಣಿಗೆಯ ಮೂಲಕ ವೇದಿಕೆಗೆ ಆಗಮಿಸಿ, ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂದಿಗ್ರಾಮ ಚಳವಳಿಯಿಂದ ಹೊರಹೊಮ್ಮಿದ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ವಿರುದ್ಧದ ರಾಜಕೀಯ ಹೋರಾಟದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯೊಂದಿಗೆ ‘ಸೋನಾರ್ ಬಾಂಗ್ಲಾ’ ಕನಸನ್ನು ನನಸಾಗಿಸುವ ಸವಾಲು ಅವರ ಮುಂದಿದೆ.

error: Content is protected !!