Home Blog Page 74

ನಿರೀಕ್ಷಣಾ ಜಾಮೀನು ರದ್ದಾಗುವವರೆಗೆ ಬಂಧನ ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಆರೋಪಿಗೆ ಒಮ್ಮೆ ನಿರೀಕ್ಷಣಾ ಜಾಮೀನು ಮಂಜೂರಾದ ಬಳಿಕ, ಅದು ಆರೋಪಪಟ್ಟಿ ಸಲ್ಲಿಕೆಯಾದ ನಂತರವೂ ಮುಂದುವರಿಯಲಿದೆ. ಜಾಮೀನು ರದ್ದುಗೊಳಿಸದೇ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ನಿರೀಕ್ಷಣಾ ಜಾಮೀನಿದ್ದರೂ ಬಂಧನಕ್ಕೆ ಆದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಕ್ರಿಮಿನಲ್ ಪ್ರಕರಣದಲ್ಲಿ ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವೂ ಜಾರಿಯಲ್ಲೇ ಇರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೇ, ಜಾಮೀನು ರದ್ದುಪಡಿಸುವಂತೆ ರಾಜ್ಯ ಸರ್ಕಾರ ಅಥವಾ ಸಂತ್ರಸ್ತೆಯ ಪರದಿಂದ ಯಾವುದೇ ಅರ್ಜಿ ಸಲ್ಲಿಸದೇ ಇದ್ದರೂ ಆರೋಪಿಯನ್ನು ವಶಕ್ಕೆ ಪಡೆಯುವಂತೆ ನಿರ್ದೇಶನ ನೀಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನುಬಾಹಿರ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆರೋಪಿಗೆ ಈಗಾಗಲೇ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಜಾಮೀನು ರದ್ದುಪಡಿಸದೇ ಬಂಧನಕ್ಕೆ ಆದೇಶಿಸಿರುವುದು ಕಾನೂನಿಗೆ ವಿರುದ್ಧ ಎಂದು ನ್ಯಾಯಪೀಠ ತಿಳಿಸಿದೆ.

ಈ ವೇಳೆ ಡಾ. ರಾಜೇಶ್ ಪ್ರತಾಪ್ ಗಿರಿ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಹಾಗೂ ಸುಶೀಲಾ ಅಗರ್ವಾಲ್ ವಿರುದ್ಧ ದೆಹಲಿ ರಾಜ್ಯ ಸರ್ಕಾರ ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಆರೋಪಪಟ್ಟಿ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಆರೋಪಿಯು ಶರಣಾಗಿ ನಿಯಮಿತ ಜಾಮೀನು ಪಡೆಯಬೇಕೆಂಬ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು ವಿಚಾರಣೆ ಪೂರ್ಣಗೊಳ್ಳುವವರೆಗೂ ಮುಂದುವರಿಯಬಹುದು ಎಂದು ನ್ಯಾಯಪೀಠ ಹೇಳಿದೆ.

ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ಬಂಧನ ಆದೇಶವನ್ನು ರದ್ದುಪಡಿಸಿ ಆರೋಪಿಯನ್ನು ಬಿಡುಗಡೆ ಮಾಡಲು ಹೈಕೋರ್ಟ್ ಸೂಚಿಸಿದೆ. ಜೊತೆಗೆ, ನಿಯಮಿತ ಜಾಮೀನು ಅರ್ಜಿಯನ್ನು ಕಾನೂನು ಪ್ರಕಾರ ಮರುಪರಿಶೀಲಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
ಅರ್ಜಿದಾರ ಆರೋಪಿಯ ವಿರುದ್ಧ ಅಪ್ರಾಪ್ತೆಯ ಮೇಲಿನ ಲೈಂಗಿಕ ಕಿರುಕುಳ ಆರೋಪದಡಿ ಫೋಕ್ಸೋ ಕಾಯ್ದೆಯ ಸೆಕ್ಷನ್ 12 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 78(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಿಶೇಷ ನ್ಯಾಯಾಲಯವು 2026ರ ಫೆಬ್ರವರಿ 26ರಂದು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಬಳಿಕ ತನಿಖಾಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂತ್ರಸ್ತೆಯ ತಾಯಿ, ಆರೋಪಿ ಸಂತ್ರಸ್ತೆಯನ್ನು ಹಿಂಬಾಲಿಸುತ್ತಿದ್ದಾನೆ ಎಂದು ಮೌಖಿಕವಾಗಿ ಆರೋಪಿಸಿದ್ದರು. ಇದನ್ನು ಆರೋಪಿ ನಿರಾಕರಿಸಿದ್ದರೂ ವಿಶೇಷ ನ್ಯಾಯಾಲಯ ಬಂಧನಕ್ಕೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದರು.

‘ಸರ್ಕಾರಿ OTT ಬಂದರೆ ಗೇಮ್ ಚೇಂಜ್!’: ಸಿಎಂ ವಿಜಯ್ ಮುಂದೆ ವಿಜಯ್ ಸೇತುಪತಿ ಇಟ್ಟ ದೊಡ್ಡ ಡಿಮ್ಯಾಂಡ್

ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ ಪ್ಲಾಟ್‌ಫಾರ್ಮ್ ಆರಂಭಿಸಬೇಕು ಎಂದು ನಟ ವಿಜಯ್ ಸೇತುಪತಿ ಮುಖ್ಯಮಂತ್ರಿ ವಿಜಯ್ ಅವರಿಗೆ ನೇರ ಸಲಹೆ ನೀಡಿದ್ದಾರೆ. ಪ್ರಾದೇಶಿಕ ಸಿನಿಮಾಗಳ ಉಳಿವು ಮತ್ತು ಬೆಳವಣಿಗೆಗಾಗಿ ಇದು ಅತ್ಯಗತ್ಯ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒಟಿಟಿ ಕಂಪನಿಗಳು ಆರ್ಥಿಕ ಒತ್ತಡ ಎದುರಿಸುತ್ತಿವೆ. ಚಂದಾದಾರರ ಸಂಖ್ಯೆ ಕುಸಿತ, ಕಂಟೆಂಟ್ ಹೂಡಿಕೆ ಇಳಿಕೆ ಮತ್ತು ಪ್ರಾದೇಶಿಕ ಸಿನಿಮಾಗಳಿಗೆ ಕಡಿಮೆಯಾಗುತ್ತಿರುವ ಅವಕಾಶಗಳ ನಡುವೆ, ಸರ್ಕಾರದ ಬೆಂಬಲಿತ ಡಿಜಿಟಲ್ ವೇದಿಕೆ ಅಗತ್ಯವಾಗಿದೆ ಎಂದು ವಿಜಯ್ ಸೇತುಪತಿ ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ನಟ ಕಮಲ್ ಹಾಸನ್ ಕೂಡ ಇದೇ ವಿಚಾರವನ್ನು ಹಿಂದೆ ಪ್ರಸ್ತಾಪಿಸಿದ್ದರು. ಇದೀಗ ಆ ಅಭಿಪ್ರಾಯಕ್ಕೆ ಬಲ ತುಂಬಿರುವ ವಿಜಯ್ ಸೇತುಪತಿ, ಸರ್ಕಾರದ ಒಟಿಟಿ ಬಂದರೆ ಸಣ್ಣ ಸಿನಿಮಾಗಳಿಗೂ ಜಾಗ ಸಿಗುತ್ತದೆ ಎಂದು ಹೇಳಿದ್ದಾರೆ. ದೊಡ್ಡ ಪ್ಲಾಟ್‌ಫಾರ್ಮ್‌ಗಳಲ್ಲಿ ಅವಕಾಶ ಕಳೆದುಕೊಳ್ಳುತ್ತಿರುವ ಹೊಸ ಪ್ರತಿಭೆಗಳು ಮತ್ತು ಪ್ರಾದೇಶಿಕ ಕಥೆಗಳಿಗೆ ಇದು ಹೊಸ ದಾರಿ ತೆರೆದಿಡಲಿದೆ ಎಂದು ತಿಳಿಸಿದ್ದಾರೆ.

ಸಿನಿಮಾ ಮಾತ್ರವಲ್ಲ, ಭಾಷೆ ಮತ್ತು ಸಂಸ್ಕೃತಿಯನ್ನು ಡಿಜಿಟಲ್ ಯುಗದಲ್ಲಿ ಉಳಿಸಿಕೊಳ್ಳಲು ಕೂಡ ಇಂತಹ ಸರ್ಕಾರಿ ಒಟಿಟಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

‘ಮಾಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ವಿಜಯ್ ಮತ್ತು ವಿಜಯ್ ಸೇತುಪತಿ ಇದೀಗ ಮುಖ್ಯಮಂತ್ರಿ-ನಟ ಎಂಬ ಹೊಸ ಸಮೀಕರಣದಲ್ಲಿ ಸುದ್ದಿಯಾಗಿದ್ದಾರೆ. ವಿಜಯ್ ಸೇತುಪತಿ ನೀಡಿರುವ ಈ ಸಲಹೆ ತಮಿಳು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಕಾವ್ಯಾ ಭಾಷಣ ಮಧ್ಯೆ ವೇದಿಕೆಯಲ್ಲಿ ಹೈಡ್ರಾಮಾ: ವೈರಲ್ ವಿಡಿಯೋದಲ್ಲಿ ಸೆರೆಯಾಯ್ತು ಅಚ್ಚರಿಯ ಕ್ಷಣ!

ಕಲಬುರಗಿ: ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕಾವ್ಯಾ ಶೈವ ಭಾಗವಹಿಸಿದ್ದ ಕಾರ್ಯಕ್ರಮವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮದ ವೇಳೆ ವೇದಿಕೆ ಮೇಲೆಯೇ ಮಾತನಾಡುತ್ತಿದ್ದ ಕಾವ್ಯಾ ಅವರ ಕೈಯಿಂದ ವ್ಯಕ್ತಿಯೊಬ್ಬರು ಮೈಕ್ ಕಿತ್ತುಕೊಂಡ ಘಟನೆ ವೈರಲ್ ಆಗಿದೆ.

ಕಲಬುರಗಿಯ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆಯೇ ಕಾವ್ಯಾ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅವರ ಬಳಿ ಬಂದು ಮೈಕ್ ಅನ್ನು ಕಸಿದುಕೊಂಡಿದ್ದಾರೆ.

ಘಟನೆಯಿಂದ ಕೆಲಕಾಲ ವೇದಿಕೆಯ ಮೇಲೆ ಗೊಂದಲ ಉಂಟಾಯಿತು. ಕಾವ್ಯಾ ಶೈವ ಅಚ್ಚರಿಗೊಂಡರೂ, ಯಾವುದೇ ಪ್ರತಿಕ್ರಿಯೆ ನೀಡದೆ ಸಮಾಧಾನದಿಂದ ನಿಂತಿದ್ದರು. ಆದರೆ, ಕಾವ್ಯಾಗೆ ಆಗಿರುವ ಅವಮಾನವನ್ನು ಪ್ರಶ್ನಿಸಿದ ಸಂಘಟಕರೊಬ್ಬರು ಮೈಕ್ ಕಿತ್ತುಕೊಂಡ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದು, “ಅತಿಥಿಗಳಿಗೆ ಇದೇನಾ ಗೌರವ?” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಕಾವ್ಯಾ ಅವರ ತಾಳ್ಮೆಯನ್ನು ಮೆಚ್ಚಿಕೊಂಡಿದ್ದಾರೆ.

ಕಾವ್ಯಾ ಶೈವ ಅವರು ಕಿರುತೆರೆಯ ‘ಕೆಂಡ ಸಂಪಿಗೆ’ ಧಾರಾವಾಹಿ ಮೂಲಕ ಮನೆಮಾತಾಗಿದ್ದು, ‘ಕೊತ್ತಲವಾಡಿ’ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ.

ತನಿಖಾಧಿಕಾರಿ ಗೈರು ಹಿನ್ನೆಲೆ: ವಚನಾನಂದ ಸ್ವಾಮೀಜಿ ವಿಚಾರಣೆ ಮುಂದೂಡಿದ ಹರಿಹರ ಪೊಲೀಸರು

ದಾವಣಗೆರೆ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರ ವಿಚಾರಣೆಯನ್ನು ಪೊಲೀಸರು ಮುಂದೂಡಿದ್ದಾರೆ.

ಸ್ವಾಮೀಜಿ ಅವರು ಸೋಮವಾರ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಬೇಕಾಗಿತ್ತು. ಆದರೆ ಬೇರೆ ಪ್ರಕರಣದ ತನಿಖೆ ನಿಮಿತ್ತ ಹರಿಹರ ಗ್ರಾಮಾಂತರ ಠಾಣೆಯ ಪಿಐ ಸುರೇಶ್ ಸಗರಿ ಕೇಂದ್ರ ಸ್ಥಾನದಿಂದ ಹೊರಗಿದ್ದ ಹಿನ್ನೆಲೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ವಿಚಾರಣೆಗೆ ಸಹಕರಿಸುವಂತೆ ಇನ್‌ಸ್ಪೆಕ್ಟರ್ ಅವರಿಂದ ಸ್ವಾಮೀಜಿಗೆ ಲಿಖಿತ ನೋಟಿಸ್ ರವಾನಿಸಲಾಗಿತ್ತು. ಇಂದು ಬೆಳಗ್ಗೆ 10 ಗಂಟೆಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಮೂರನೇ ಬಾರಿ ವಿಚಾರಣೆಗೆ ವಚನಾನಂದ ಸ್ವಾಮೀಜಿ ಹಾಜರಾಗಬೇಕಿತ್ತು.

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಮಠದ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದೈಹಿಕ ಹಿಂಸೆ ನೀಡಿದ ಆರೋಪದಡಿ ಪೋಷಕರು ದೂರು ದಾಖಲಿಸಿದ್ದರು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಾರಂಭದಲ್ಲಿ ಗದಗ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ನಂತರ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸಿಪಿಐ ಸುರೇಶ್ ಸಗರಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಜಯರತ್ನಮ್ಮ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಇದೇ ವೇಳೆ, ಪೋಕ್ಸೋ ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಬಳಿಕ ಆ ಜಾಮೀನನ್ನು ರದ್ದುಗೊಳಿಸುವಂತೆ ಪೊಲೀಸರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ವಿಚಾರಣೆ ನಡುವೆಯೇ ಸ್ವಾಮೀಜಿಯನ್ನು ಈಗಾಗಲೇ ವಿಚಾರಣೆಗೆ ಕರೆದು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿಯವರು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮೋದಿಯವರು ಪ್ರಧಾನಿ ಆದ ಬಳಿಕ ಸತತವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವುದನ್ನು ರೂಢಿ ಮಾಡಿಕೊಂಡಿದ್ದು ಈ ಬಾರಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆ ಮಾಡಿ ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ಏರಿಸಿದ್ದು, ದೇಶದ ಇತಿಹಾಸದಲ್ಲಿ ಹೀಗೆ ಏರಿಕೆಯಾಗಿದ್ದಿಲ್ಲ. ಜನಸಾಮಾನ್ಯರು, ಮದ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ ಎಂದರು.

’ಅಚ್ಛೇ ದಿನ್’ ಎಂದು ಜನರಿಗೆ ಟೋಪಿ ಹಾಕಲಾಗುತ್ತಿದೆ

ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ. ಕಳೆದ 11 ದಿನಗಳಿಂದ 4 ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 .93 ರೂ.ಗಳಾಗಿವೆ. ಡೀಸೆಲ್ ದರ 98.89 ರೂ.ಗಳಾಗಿವೆ. 7. 52 ರೂ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ದೇಶವನ್ನು ಲೂಟಿ ಮಾಡುತ್ತಿರುವುದು ರುಜುವಾತಾಗುತ್ತಿದೆ ಎಂದರು.

ಕಚ್ಚಾತೈಲ ದರ ಕಡಿಮೆಯಿದ್ದಾಗಿನ ಲಾಭ ಗ್ರಾಹಕರಿಗೆ ದೊರೆಯಲಿಲ್ಲ

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2014ರ ಮೇ ತಿಂಗಳಲ್ಲಿ 71.41 ರೂ. ಪೆಟ್ರೋಲ್ ಲೀ. ಒಂದಕ್ಕೆ ಬೆಲೆಯಿದ್ದರೆ, ಡೀಸೆಲ್ 56.71 ಪೈಸೆಯಿತ್ತು. ಅಂದು 412 ರೂ. ಆಗಿದ್ದ ಗ್ಯಾಸ್ ಸಿಲಿಂಡರ್ ಬೆಲೆ , ಇಂದು 915 ರೂ. ಆಗಿದೆ , ಇದು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೋಲಿಸಿದರೆ ಪ್ರಸ್ತುತ ಬೆಲೆ ಇಳಿದಿದ್ದರೂ ಕೂಡ,

ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚುತ್ತಿದೆ. 65 ರಿಂದ 75 ಡಾಲರ್ ಬೆಲೆ ಇದ್ದಾಗ, ಈ ಕಡಿಮೆ ಬೆಲೆಯ ಲಾಭ, ಗ್ರಾಹಕರಿಗೆ ದೊರೆಯಲಿಲ್ಲ. ಪ್ರಸ್ತುತ ಕಚ್ಚಾ ತೈಲದ ಬೆಲೆ 100 ಡಾಲರ್ ಮಿತಿಯೊಳಗಿದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಸತತ ನಾಲ್ಕು ಬಾರಿ ಏರಿಕೆ ಮಾಡಿದೆ. ಇದರಿಂದಾಗಿ ಗ್ರಾಹಕರಿಗೆ, ರೈತರಿಗೆ, ಜನಸಾಮಾನ್ಯರಿಗೆ ಈ ಬೆಲೆಏರಿಕೆಯ ಬಿಸಿ ತಟ್ಟಲಿದೆ. ಮೋದಿಯವರು ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್, ಅಭಿಷೇಕ್ ದತ್ತಾ ಮೊದಲಾದವರು ಉಪಸ್ಥಿತರಿದ್ದರು.

ಪರ ಪುರುಷನ ಜೊತೆ ಅಕ್ಕನ ಅಕ್ರಮ ಸಂಬಂಧ ಶಂಕೆ: ಕತ್ತು ಸೀಳಿ ಕೊಂದ ತಮ್ಮ

0

ಹಾವೇರಿ: ಸಂಬಂಧಗಳೇ ರಕ್ತಪಾತಕ್ಕೆ ಕಾರಣವಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಮರುಕಳಿಸುತ್ತಿರುವ ಬೆನ್ನಲ್ಲೇ, ಶಿಗ್ಗಾವಿಯಲ್ಲಿ ನಡೆದ ದಾರುಣ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಮೇಲೆ ತಮ್ಮನೇ ಸ್ವಂತ ಅಕ್ಕನ ಕತ್ತು ಸೀಳಿ ಕೊಲೆಗೈದಿರುವ ಆರೋಪ ಕೇಳಿಬಂದಿದೆ.

ಮೃತ ಮಹಿಳೆಯನ್ನು ಸುಮಾ ಶಿವಶಂಕರ್ ವನಹಳ್ಳಿ (29) ಎಂದು ಗುರುತಿಸಲಾಗಿದ್ದು, ಆಕೆ ಶಿಗ್ಗಾವಿಯ ಮೌಲಾಲಿ ಗುಡ್ಡ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಿದ್ದಳು. ಸೋಮವಾರ ಬೆಳಗ್ಗೆ ಸುಮಾರು 10:15ರ ವೇಳೆಗೆ ಅಂಗನವಾಡಿಗೆ ಬಂದ ಆರೋಪಿ ಸಂಜು, ಅಕ್ಕನೊಂದಿಗೆ ವಾಗ್ವಾದ ಆರಂಭಿಸಿದ್ದಾನೆ.

ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು, ಸಂಜು ತನ್ನ ಬಳಿ ಇದ್ದ ಮಚ್ಚಿನಿಂದ ಸುಮಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ ಭಾಗಕ್ಕೆ ಬಿದ್ದ ಗಂಭೀರ ಏಟು ಹಾಗೂ ಕೈಗೆ ಉಂಟಾದ ಭಾರೀ ಗಾಯದಿಂದ ಸುಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳದಲ್ಲಿ ರಕ್ತದ ಮಡುವು ಸೃಷ್ಟಿಯಾಗಿದ್ದು, ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಶಿಗ್ಗಾವಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಸಂಬಂಧದ ಅನುಮಾನವೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಬಂಧನ ಕಾರ್ಯಾಚರಣೆ ಮುಂದುವರಿದಿದೆ.

‘ಕಾಕ್ರೋಚ್ ಜನತಾ ಪಾರ್ಟಿ’ ವಿರುದ್ಧ ಸಿಬಿಐ ತನಿಖೆ ಬೇಡಿಕೆ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು ಸೋಮವಾರ ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ವಾದ ಆಲಿಸಿದ ಸಿಜೆಐ, “ಈ ವಿಷಯದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಕಾಣಿಸುತ್ತಿಲ್ಲ. ಇದನ್ನು ಅತಿಯಾಗಿ ಭಾವನಾತ್ಮಕವಾಗಿ ಪರಿಗಣಿಸುವ ಅಗತ್ಯವೂ ಇಲ್ಲ” ಎಂದು ಅಭಿಪ್ರಾಯಪಟ್ಟರು.

ಜೊತೆಗೆ, ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಯಂತೆ ಸೂಕ್ತ ಸಮಯದಲ್ಲಿ ಅರ್ಜಿಯನ್ನು ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಈ ಹಿಂದೆ ನ್ಯಾಯಾಲಯದಲ್ಲಿ ಬಳಸಿದ್ದ ‘ಜಿರಳೆ’ ಎಂಬ ರೂಪಕದ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಮಾಧ್ಯಮಗಳು ತಪ್ಪು ರೀತಿಯಲ್ಲಿ ಬಿಂಬಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನನ್ನ ಹೇಳಿಕೆಯನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ. ನಕಲಿ ಹಾಗೂ ಬೋಗಸ್ ಪದವಿಗಳನ್ನು ಬಳಸಿಕೊಂಡು ಕಾನೂನು ವೃತ್ತಿಗೆ ಪ್ರವೇಶಿಸುತ್ತಿರುವ ಅಕ್ರಮ ಜಾಲವನ್ನು ಟೀಕಿಸಲು ಮಾತ್ರ ಆ ಪದವನ್ನು ಬಳಸಿದ್ದೆ. ಅದು ದೇಶದ ನಿರುದ್ಯೋಗಿ ಯುವಕರನ್ನು ಉದ್ದೇಶಿಸಿ ಅಲ್ಲ,” ಎಂದು ಸಿಜೆಐ ಸ್ಪಷ್ಟನೆ ನೀಡಿದರು.

ವಕೀಲ ರಾಜಾ ಚೌಧರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ ರಹಸ್ಯ ಚಟುವಟಿಕೆಗಳು ಹಾಗೂ ದೇಶಾದ್ಯಂತ ಸಕ್ರಿಯವಾಗಿರುವ ನಕಲಿ ಪದವಿ ಕಾನೂನು ವೃತ್ತಿ ಜಾಲದ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಲಾಗಿತ್ತು.

ಇದಲ್ಲದೆ, ನ್ಯಾಯಾಲಯದ ನೇರ ಪ್ರಸಾರದ ವಿಡಿಯೋ ಹಾಗೂ ಆಡಿಯೋ ತುಣುಕುಗಳನ್ನು ಕತ್ತರಿಸಿ ಮೀಮ್ಸ್ ರೂಪದಲ್ಲಿ ವಾಣಿಜ್ಯ ಮತ್ತು ವೈಯಕ್ತಿಕ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ತಕ್ಷಣವೇ ಕಾನೂನು ರೂಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

‘ಟೀಸರ್ ನೋಡಿ ಸಿನಿಮಾ ಜಡ್ಜ್ ಮಾಡ್ಬೇಡಿ!’ ‘ಟಾಕ್ಸಿಕ್’ ವಿವಾದಕ್ಕೆ ಖಡಕ್ ಉತ್ತರ ಕೊಟ್ಟ ಯಶ್‌ ತಾಯಿ

‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಟೀಸರ್‌ನ ಬೋಲ್ಡ್ ದೃಶ್ಯಗಳನ್ನು ಕೆಲವರು ಟೀಕಿಸಿದ್ದರೆ, ಇನ್ನೂ ಕೆಲವರು ಯಶ್ ಅವರ ಹೊಸ ಪ್ರಯೋಗಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ಈ ವಿವಾದದ ಬಗ್ಗೆ ನಟಿ ಪುಷ್ಪಾ ನೇರ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟೀಸರ್ ಅಂದ್ರೆ ಕೇವಲ ಆಕರ್ಷಣೆಗೆ ಮಾಡಿರುವ ಒಂದು ಚಿಕ್ಕ ಭಾಗ. ಅದನ್ನೇ ಆಧಾರ ಮಾಡಿಕೊಂಡು ಇಡೀ ಸಿನಿಮಾವನ್ನು ನಿರ್ಧರಿಸುವುದು ತಪ್ಪು. ಸಿನಿಮಾ ನೋಡಿದ ನಂತರ ಮಾತ್ರ ಅದರ ಕಥೆ, ಉದ್ದೇಶ ಅರ್ಥವಾಗುತ್ತದೆ” ಎಂದು ಹೇಳಿದರು.

ಕನ್ನಡ ಪ್ರೇಕ್ಷಕರಿಗೆ ಈ ರೀತಿಯ ಕಂಟೆಂಟ್ ಸರಿಯಲ್ಲ ಎಂಬ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪ್ರೇಕ್ಷಕರು ಯಾವ ರೀತಿಯ ಸಿನಿಮಾಗಳನ್ನು ನೋಡಲು ಬಯಸುತ್ತಾರೋ ಅದನ್ನೇ ಸಿನಿಮಾ ಮಂದಿ ಕೊಡುತ್ತಾರೆ. ಇಂದಿನ ಯೂತ್ ಬದಲಾಗಿದ್ದಾರೆ. ಅವರ ರುಚಿಗೂ ಸಿನಿಮಾಗಳು ಬದಲಾಗುತ್ತಿವೆ” ಎಂದು ಹೇಳಿದರು.

ಇನ್ನೊಂದೆಡೆ, ಯಶ್ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳು ವರ್ಷಗಟ್ಟಲೆ ತಡವಾಗುತ್ತಿರುವ ವಿಚಾರಕ್ಕೂ ಅವರು ಪ್ರತಿಕ್ರಿಯಿಸಿದರು. “ಕನ್ನಡ ಚಿತ್ರರಂಗ ಈಗ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದೆ. ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡಲು ಸಮಯ ಬೇಕು. ಅದು ನಮ್ಮ ಇಂಡಸ್ಟ್ರಿಯ ಸಾಧನೆ” ಎಂದು ಅಭಿಪ್ರಾಯಪಟ್ಟರು.

ಯಶ್ ಅಭಿನಯದ ‘ಟಾಕ್ಸಿಕ್’ ಈಗಾಗಲೇ ದೇಶಾದ್ಯಂತ ಕುತೂಹಲ ಮೂಡಿಸಿದ್ದು, ಸಿನಿಮಾ ಬಿಡುಗಡೆಯ ಮುನ್ನವೇ ಭಾರೀ ಹೈಪ್ ಪಡೆದುಕೊಂಡಿದೆ.

ಸಾಹಸ ಆಟವೇ ಸಾವಿನ ಬಲೆ! ಪೋಷಕರ ಕಣ್ಣೆದುರೇ ಜಿಪ್‌ಲೈನ್‌ನಿಂದ ಬಿದ್ದು ಬಾಲಕ ದಾರುಣ ಅಂತ್ಯ

ಆಗ್ರಾದ ಪ್ರಸಿದ್ಧ ಪ್ರವಾಸಿ ತಾಣ ‘ಆಗ್ರಾ ಚೌಪಟ್ಟಿ’ಯಲ್ಲಿ ನಡೆದ ಭೀಕರ ದುರಂತ ಒಂದು ಕುಟುಂಬದ ಬದುಕನ್ನೇ ಕತ್ತಲಲ್ಲಿ ತಳ್ಳಿದೆ. ಮನರಂಜನೆಗಾಗಿ ಜಿಪ್‌ಲೈನ್ ಸಾಹಸಕ್ಕೆ ತೆರಳಿದ್ದ 15 ವರ್ಷದ ಬಾಲಕ, ಗಾಳಿಯಲ್ಲೇ ನಿಯಂತ್ರಣ ಕಳೆದುಕೊಂಡು ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸ್ಥಳದಲ್ಲಿದ್ದ ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ. ಬಾಲಕ ತನ್ನ ಪೋಷಕರೊಂದಿಗೆ ಚೌಪಟ್ಟಿಗೆ ಬಂದಿದ್ದು, ಉತ್ಸಾಹದಿಂದ ಜಿಪ್‌ಲೈನಿಂಗ್ ಆರಂಭಿಸಿದ್ದ. ಆದರೆ ಮಧ್ಯದಲ್ಲೇ ತಾಂತ್ರಿಕ ದೋಷ ಅಥವಾ ಸುರಕ್ಷತಾ ಲೋಪ ಸಂಭವಿಸಿದ ಪರಿಣಾಮ ಆತ ನೇರವಾಗಿ ಕೆಳಗೆ ಬಿದ್ದಿದ್ದಾನೆ.

ದುರಂತದ ಕ್ಷಣವನ್ನು ಅಲ್ಲಿದ್ದ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗನನ್ನು ಕಣ್ಣೆದುರೇ ಕಳೆದುಕೊಂಡ ಪೋಷಕರ ಆಕ್ರಂದನ ಸ್ಥಳದಲ್ಲಿದ್ದವರ ಮನಕಲುಕುವಂತಿತ್ತು.

ಈ ಘಟನೆ ಬಳಿಕ ಜಿಪ್‌ಲೈನ್ ನಿರ್ವಹಣಾ ಕಂಪನಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗತ್ಯ ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜಿಪ್‌ಲೈನಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಕಂಪನಿಯ ಮ್ಯಾನೇಜರ್‌ನನ್ನು ಬಂಧಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಿದ್ಧತೆ ನಡೆದಿದೆ.

ಕಾಂಗ್ರೆಸ್ ನಾಯಕತ್ವ ಗೊಂದಲ ಅಂತ್ಯವಾಗುತ್ತಾ? ಖರ್ಗೆ-ರಾಹುಲ್ ಜೊತೆ ನಾಳೆ ಸಿದ್ದರಾಮಯ್ಯ ಮಹತ್ವದ ಸಭೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿರುವ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಹಾಗೂ ‘ಪವರ್ ಶೇರಿಂಗ್’ ರಾಜಕೀಯ ಇದೀಗ ಅಂತಿಮ ಹಂತ ತಲುಪಿದಂತೆ ಕಾಣುತ್ತಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ದೆಹಲಿಗೆ ತುರ್ತು ಬುಲಾವ್ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ರಾಜಕೀಯ ತಂತ್ರ ರೂಪಿಸಿದ್ದು, ತಮ್ಮ ಆಪ್ತ ಸಚಿವರೊಂದಿಗೆ ಇಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳು ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಹೈಕಮಾಂಡ್ ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ದೆಹಲಿಗೆ ಬರುವಂತೆ ಸೂಚಿಸಿತ್ತು. ಆದರೆ ಸಿಎಂ ಸದ್ದಿಲ್ಲದೆ ತಮ್ಮ ಆಪ್ತ ಸಚಿವರಿಗೆ ಕೂಡ ದೆಹಲಿಗೆ ಆಗಮಿಸುವಂತೆ ಸಂದೇಶ ರವಾನಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಿಎಂ ಜೊತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಎದುರು ತಮ್ಮ ಸಂಖ್ಯಾಬಲ ಹಾಗೂ ಬೆಂಬಲಿಗರ ಶಕ್ತಿಯನ್ನು ಪರೋಕ್ಷವಾಗಿ ಪ್ರದರ್ಶಿಸಲು ಸಿದ್ದರಾಮಯ್ಯ ಈ ರಾಜಕೀಯ ನಡೆ ಅನುಸರಿಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

ಸಿದ್ದರಾಮಯ್ಯ ಇಂದು ರಾತ್ರಿ ದೆಹಲಿ ತಲುಪಲಿದ್ದು, ನಾಳೆ (ಮೇ 26) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.

ಮೊದಲ ಹಂತದಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದು, ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಸಭೆ ಸಿದ್ದರಾಮಯ್ಯ ಪಾಲಿಗೆ ರಾಜಕೀಯವಾಗಿ ಮಹತ್ವದ್ದಾಗಿದ್ದು, ಮುಂದಿನ ನಾಯಕತ್ವದ ಬಗ್ಗೆ ಸ್ಪಷ್ಟ ಸಂದೇಶ ಸಿಗುವ ನಿರೀಕ್ಷೆ ಇದೆ.

ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಿಎಂಗೆ ದೆಹಲಿ ಬುಲಾವ್ ನೀಡಲಾಗಿದೆ ಎಂದು ಅಧಿಕೃತವಾಗಿ ಹೇಳಲಾಗುತ್ತಿದ್ದರೂ, ಕಾಂಗ್ರೆಸ್ ಒಳಗಡೆ ಮೂರು ಪ್ರಮುಖ ರಾಜಕೀಯ ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ.

ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಿ, ಕೇಂದ್ರ ರಾಜಕಾರಣಕ್ಕೆ ಆಹ್ವಾನಿಸುವ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಡಲಾಗುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನೊಂದು ಕಡೆ, ಸದ್ಯ ನಾಯಕತ್ವ ಬದಲಾವಣೆ ಬೇಡ, ಸರ್ಕಾರ ಮುಂದುವರಿಸಿ, ಅಗತ್ಯವಿದ್ದರೆ ಸಂಪುಟ ಪುನರ್‌ರಚನೆ ಮಾಡಿಕೊಳ್ಳಿ ಎಂಬ ಸಂದೇಶವನ್ನು ಹೈಕಮಾಂಡ್ ನೀಡುವ ಸಾಧ್ಯತೆಯೂ ಇದೆ.

ರಾಜ್ಯಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ಬದಲಾವಣೆ ಬೇಡ, ಮುಖ್ಯಮಂತ್ರಿ ಸ್ಥಾನ ವಿಚಾರವನ್ನು ನಂತರ ಪರಿಶೀಲಿಸೋಣ ಎಂಬ ತಾತ್ಕಾಲಿಕ ಸಮಾಧಾನದ ಸೂತ್ರಕ್ಕೂ ಹೈಕಮಾಂಡ್ ಮೊರೆ ಹೋಗಬಹುದು ಎನ್ನಲಾಗುತ್ತಿದೆ.

ಈ ಮೂರು ಪ್ರಮುಖ ರಾಜಕೀಯ ಸಾಧ್ಯತೆಗಳ ಪೈಕಿ ಒಂದಕ್ಕೆ ಈ ಬಾರಿ ಸ್ಪಷ್ಟತೆ ಸಿಗುವ ನಿರೀಕ್ಷೆ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

error: Content is protected !!