Home Blog Page 84

ಕ್ಯಾಬ್ ಅಡ್ಡಗಟ್ಟಿ ಡ್ರೈವರ್ ಮೇಲೆ ಕ್ರೂರ ಹಲ್ಲೆ: ಬೆಂಗಳೂರು ರಸ್ತೆಯಲ್ಲಿ ಗ್ಯಾಂಗ್ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನ ಮೇಲೆ ಮತ್ತೊಬ್ಬ ಚಾಲಕ ಮತ್ತು ಆತನ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಡಬಲ್ ರೋಡ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮೇ 22ರಂದು ನಡೆದ ಈ ಘಟನೆ ತಡವಾಗಿ ಬಹಿರಂಗವಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಾಹಿತಿ ಪ್ರಕಾರ, ಮತ್ತೊಂದು ಕಾರಿನಲ್ಲಿ ಬಂದಿದ್ದ ಗ್ಯಾಂಗ್ ಉಬರ್ ಕ್ಯಾಬ್ ಅನ್ನು ಮಧ್ಯರಸ್ತೆಯಲ್ಲೇ ಅಡ್ಡಗಟ್ಟಿದೆ. ಬಳಿಕ ಚಾಲಕನನ್ನು ಬಲವಂತವಾಗಿ ಕಾರಿನಿಂದ ಕೆಳಕ್ಕೆ ಎಳೆದು ಮನಬಂದಂತೆ ಹಲ್ಲೆ ನಡೆಸಲಾಗಿದೆ. ಘಟನೆಯ ವೇಳೆ ಪಕ್ಕದಲ್ಲೇ ಯುವತಿಯೊಬ್ಬರು ನಿಂತಿದ್ದರೂ ಪುಂಡರು ಯಾವುದೇ ಭಯವಿಲ್ಲದೆ ಹಿಗ್ಗಾಮುಗ್ಗಾ ಥಳಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ದೂರು ಇಲ್ಲದಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೆ.ಹೆಚ್ ರಸ್ತೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹಲ್ಲೆಗೆ ಬಳಸಲಾದ ಕಾರುಗಳ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಚಿರತೆ ಹತ್ಯೆ ಪ್ರಕರಣ ಭೇದಿಸಿದ ಅರಣ್ಯಾಧಿಕಾರಿಗಳು: ನಾಲ್ವರು ಆರೋಪಿಗಳು ಅರೆಸ್ಟ್

ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಯಡಮೊಗೆ ಗ್ರಾಮದ ಸಾಲಿಮಕ್ಕಿಯ ಮಂಜುನಾಥ ಶೆಟ್ಟಿ, ಕಾವ್ರಾಡಿ ಗ್ರಾಮದ ಕಂಡೂರಿನ ನದೀಮ್ ಕರಾಣಿ ಹಾಗೂ ಯಡಮೊಗೆ ಗ್ರಾಮದ ಹನೆಬಚ್ಚಲು ನಿವಾಸಿಗಳಾದ ನಾಗರಾಜ ಭೋವಿ ಮತ್ತು ವೆಂಕಟರಮಣ ಭೋವಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಚಿರತೆಯ ನಾಲ್ಕು ಕಾಲಿನ ಉಗುರುಗಳು, ಮೂಳೆಯ ಭಾಗಗಳು, ಒಂದು ಬಂದೂಕು, ಐದು ಜೀವಂತ ಗುಂಡುಗಳು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದಾಪುರ–ಶಿವಮೊಗ್ಗ ಜಿಲ್ಲಾ ರಸ್ತೆ ಸಮೀಪ ಫೆಬ್ರವರಿ 4ರಂದು ಚಿರತೆಯೊಂದನ್ನು ಕೊಂದು ಹಾಕಿರುವ ಬಗ್ಗೆ ಶಂಕರನಾರಾಯಣ ಅರಣ್ಯ ವಲಯದಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೊಂಡ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಮೇ 21ರಂದು ಆರೋಪಿ ಮಂಜುನಾಥ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತ ಆರೋಪಿಗಳನ್ನು ಕುಂದಾಪುರ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಕುಂದಾಪುರ ಭಾಗದ ವಿವಿಧ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಹಜ್ಜೇನು ದಾಳಿಗೆ ರೈತ ಬಲಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಹಜ್ಜೇನುಗಳ ದಾಳಿಗೆ ಒಳಗಾಗಿ ರೈತನೋರ್ವ ಮೃತಪಟ್ಟ ದುರ್ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ತಂಬ್ರಹಳ್ಳಿ ಗ್ರಾಮದ ತಳವಾರ ಹನುಮಂತಪ್ಪ (70) ಮೃತಪಟ್ಟ ರೈತ. ಮೇ 19ರಂದು ಶ್ರೀ ಬಂಡೆ ರಂಗಪ್ಪನ ಬೆಟ್ಟದ ಸಮೀಪದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಹಜ್ಜೇನುಗಳ ಗುಂಪು ದಾಳಿ ನಡೆಸಿದೆ. ದಾಳಿಯಿಂದ ಮೈತುಂಬ ಕಚ್ಚಿಸಿಕೊಂಡ ಹನುಮಂತಪ್ಪ ಅವರನ್ನು ತಕ್ಷಣ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಬಳಿಕ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಪುತ್ರ ಪ್ರವೀಣ ತಳವಾರ ನೀಡಿದ ದೂರಿನ ಮೇರೆಗೆ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭೀಕರ ಅನಿಲ ಸ್ಫೋಟ: 82 ಕಾರ್ಮಿಕರ ದುರ್ಮರಣ

ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 82 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಸಂಭವಿಸಿದ ಅತಿದೊಡ್ಡ ಕೈಗಾರಿಕಾ ದುರಂತಗಳಲ್ಲಿ ಇದೂ ಒಂದಾಗಿದೆ ಎಂದು ವರದಿಯಾಗಿದೆ.

ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ 7:29ರ ಸುಮಾರಿಗೆ ಸ್ಫೋಟ ಸಂಭವಿಸಿದೆ.

ಅಪಘಾತ ಸಂಭವಿಸಿದ ವೇಳೆ ಒಟ್ಟು 247 ಕಾರ್ಮಿಕರು ಗಣಿಯ ಒಳಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಬಹುತೇಕರನ್ನು ಶನಿವಾರ ಬೆಳಗ್ಗಿನ ವೇಳೆಗೆ ರಕ್ಷಿಸಿ ಮೇಲ್ಮೈಗೆ ಕರೆತರಲಾಗಿದೆ.

ಸ್ಫೋಟದ ಪರಿಣಾಮ 82 ಮಂದಿ ಮೃತಪಟ್ಟಿದ್ದು, ಇನ್ನೂ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ. ಅದೇ ವೇಳೆ ಈ ಭೀಕರ ದುರಂತದ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಆದೇಶ ನೀಡಿದ್ದಾರೆ.

ಅಂತಹ ಘಟನೆ ನಡೆದಿಲ್ಲ: ಜೈಲಿನಲ್ಲಿ ದರ್ಶನ್ ಆತ್ಮಹತ್ಯೆ ಯತ್ನ ವದಂತಿಗೆ ತೆರೆ ಎಳೆದ ಪರಮೇಶ್ವರ್

ಬೆಂಗಳೂರು: ಜೈಲಿನಲ್ಲಿ ನಟ ದರ್ಶನ್ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬ ವದಂತಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ವಿಚಾರ ನನ್ನ ಗಮನಕ್ಕೆ ಬಂದ ಬಳಿಕ ಅಧಿಕಾರಿಗಳಿಂದ ಮೌಖಿಕವಾಗಿ ಮಾಹಿತಿ ಪಡೆದಿದ್ದೇನೆ. ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತು ಮತ್ತೇನೂ ವಿಷಯ ಇಲ್ಲ ಎಂದು ಹೇಳಿದರು.

ಇನ್ನೊಂದೆಡೆ, ಟೌನ್‌ಹಾಲ್ ಬಳಿ ನಾಳೆ ನಡೆಯಬೇಕಿದ್ದ ಸಿಜೆಪಿ ಬಹಿರಂಗ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿರುವ ವಿಚಾರಕ್ಕೂ ಗೃಹ ಸಚಿವರು ಪ್ರತಿಕ್ರಿಯಿಸಿದರು.

ಯಾವ ಉದ್ದೇಶಕ್ಕೆ ಕಾರ್ಯಕ್ರಮ ನಡೆಯುತ್ತಿದೆ, ಯಾರೆಲ್ಲ ಭಾಗವಹಿಸುತ್ತಾರೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಾರೆ. ಅನುಮತಿ ನೀಡಬೇಕಾ ಬೇಡವಾ ಅನ್ನೋದು ಪೊಲೀಸರ ನಿರ್ಧಾರ. ಪೊಲೀಸರು ನಿರಾಕರಣೆ ಮಾಡಿದ್ದಾರೆ ಅಂದ್ರೆ ಅದರ ಹಿಂದೆ ಕೆಲವು ಅಂಶಗಳು ಇರಬಹುದು ಎಂದು ಹೇಳಿದರು.

ನಮ್ಮ ಪಕ್ಷ ಮತ್ತು ನಾಯಕರ ಬೆಂಬಲ ಬೇರೆ ವಿಚಾರ. ಪೊಲೀಸರ ಕೆಲಸವನ್ನು ಪೊಲೀಸರು ಮಾಡುತ್ತಾರೆ. ರಾಜಕಾರಣಿಗಳ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ” ಎಂದು ಸ್ಪಷ್ಟಪಡಿಸಿದರು.

ಬಕ್ರೀದ್ ಹಬ್ಬದ ವೇಳೆ ಕುರ್ಬಾನಿಗೆ ರಕ್ಷಣೆ ನೀಡುವಂತೆ ವಕ್ಫ್ ಬೋರ್ಡ್ ಪತ್ರ ಬರೆದಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಗೃಹ ಸಚಿವರು, “ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಪೊಲೀಸರು ಸಾಮಾನ್ಯವಾಗಿ ಎಚ್ಚರಿಕೆ ವಹಿಸುತ್ತಾರೆ. ಹೆಚ್ಚುವರಿ ಭದ್ರತೆ ಅಗತ್ಯವಿದ್ದರೆ ಅದನ್ನೂ ಮಾಡುತ್ತಾರೆ ಎಂದರು.

ವಕ್ಫ್ ಬೋರ್ಡ್‌ಗೆ ಏನು ಆತಂಕವಿದೆಯೋ ಗೊತ್ತಿಲ್ಲ. ಅವರು ಪತ್ರ ಬರೆದಿದ್ದರೆ, ಅದಕ್ಕೆ ಅನುಗುಣವಾಗಿ ಪೊಲೀಸರು ಸ್ಪಂದಿಸುತ್ತಾರೆ ಎಂದು ತಿಳಿಸಿದರು.

ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ

0

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಅಬಕಾರಿ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸಿನಿಮೀಯ ಶೈಲಿಯ ಅಕ್ರಮ ಸ್ಪಿರಿಟ್ ಸಾಗಣೆ ಜಾಲ ಬಯಲಾಗಿದೆ. ಆಯಿಲ್ ಟ್ಯಾಂಕರ್ ಹೆಸರಿನಲ್ಲಿ ಸಾಗಿಸಲಾಗುತ್ತಿದ್ದ ವಾಹನದೊಳಗೆ 14 ಸಾವಿರ ಲೀಟರ್ ಸ್ಪಿರಿಟ್ ಪತ್ತೆಯಾಗಿದ್ದು, ಅಧಿಕಾರಿಗಳು ಶಾಕ್ ಆಗಿದ್ದಾರೆ.

ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಸ್ಪಿರಿಟ್ ಅನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಗ್ಯಾಂಗ್ ವಿಶೇಷ ತಂತ್ರ ಬಳಸಿತ್ತು. ಟ್ಯಾಂಕರ್‌ನ ಕೆಲವು ಭಾಗಗಳಲ್ಲಿ ಮಾತ್ರ ಆಯಿಲ್ ತುಂಬಿಸಿ, ಸಣ್ಣ ಪೈಪ್‌ಗಳ ಮೂಲಕ ಅದನ್ನು ಹೊರಗೆ ತೋರಿಸಲಾಗುತ್ತಿತ್ತು. ಉಳಿದ ಭಾಗಗಳಲ್ಲಿ ಭಾರಿ ಪ್ರಮಾಣದ ಸ್ಪಿರಿಟ್ ಸಂಗ್ರಹಿಸಿ ಅಕ್ರಮ ಸಾಗಣೆ ನಡೆಸಲಾಗುತ್ತಿತ್ತು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾನಾಪುರ ಅಬಕಾರಿ ಅಧಿಕಾರಿಗಳು ಟ್ಯಾಂಕರ್‌ನ ಒಳಭಾಗ ಪರಿಶೀಲಿಸಿದಾಗ, ಆಯಿಲ್ ಪೈಪ್‌ಗಳ ಸುತ್ತಲೂ ಸ್ಪಿರಿಟ್ ತುಂಬಿರುವುದು ಪತ್ತೆಯಾಗಿದೆ.

ಸಾಮಾನ್ಯವಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಮದ್ಯ ಬರುತ್ತದೆ. ಆದರೆ ಈ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾಕ್ಕೆ ಸ್ಪಿರಿಟ್ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಸದ್ಯ ಅಬಕಾರಿ ಇಲಾಖೆ ಇಡೀ ಜಾಲದ ಬೇರು ಪತ್ತೆಹಚ್ಚಲು ಮುಂದಾಗಿದ್ದು, ಬಂಧಿತ ಆರೋಪಿಯಿಂದ ಮಹತ್ವದ ಮಾಹಿತಿ ಕಲೆಹಾಕುತ್ತಿದೆ.

ಇವಾಂಕಾ ಟ್ರಂಪ್ ಹತ್ಯೆಗೆ ಸಂಚು ಆರೋಪ: ಇರಾಕಿ ಪ್ರಜೆ ಬಂಧನ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಇರಾಕಿ ಪ್ರಜೆಯೊಬ್ಬನನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

32 ವರ್ಷದ ಮೊಹಮ್ಮದ್ ಬಕರ್ ಸಾದ್ ದಾವೂದ್ ಅಲ್-ಸಾದಿ ಎಂಬಾತ ಪ್ರಮುಖ ಶಂಕಿತನಾಗಿದ್ದು, ಈತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

2020ರಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್‌ನ ಸೇನಾ ಕಮಾಂಡರ್ ಖಾಸಿಂ ಸೊಲೈಮಾನಿ ಹತ್ಯೆಯಾಗಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಆರೋಪಿ ಇವಾಂಕಾ ಟ್ರಂಪ್ ಅವರ ಫ್ಲೋರಿಡಾ ನಿವಾಸದ ನೀಲನಕ್ಷೆಯನ್ನು ಹೊಂದಿದ್ದಾನೆ ಎನ್ನಲಾಗಿದೆ. ಅಲ್ಲದೆ, “ನಿಮ್ಮ ಅರಮನೆಗಳು ಅಥವಾ ಸೀಕ್ರೆಟ್ ಸರ್ವೀಸ್ ನಿಮ್ಮನ್ನು ರಕ್ಷಿಸಲಾರದು” ಎಂದು ಅಮೆರಿಕನ್ನರಿಗೆ ಎಚ್ಚರಿಕೆ ನೀಡುವ ಆನ್‌ಲೈನ್ ಬೆದರಿಕೆ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಟ್ರಂಪ್ ನಮ್ಮ ಮನೆಯನ್ನು ಸುಟ್ಟ ರೀತಿಯಲ್ಲೇ ಅವರ ಮನೆಯನ್ನು ಸುಟ್ಟುಹಾಕಬೇಕು ಎಂದು ಹೇಳಿ ಇವಾಂಕಾ ಟ್ರಂಪ್ ಅವರನ್ನು ಕೊಲ್ಲುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದ ಎಂದು ಇರಾಕಿನ ಮಾಜಿ ರಾಜತಾಂತ್ರಿಕ ಎಂಟಿಫಾದ್ ಕಾನ್ಬರ್ ಹೇಳಿದ್ದಾರೆ.

ಮೇ 15ರಂದು ಟರ್ಕಿಯಲ್ಲಿ ಬಂಧಿತನಾದ ಅಲ್-ಸಾದಿಯನ್ನು ಬಳಿಕ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ. ಈತ ಯುರೋಪ್ ಹಾಗೂ ಉತ್ತರ ಅಮೆರಿಕಾದಾದ್ಯಂತ ನಡೆದ 18 ದಾಳಿಗಳು ಮತ್ತು ದಾಳಿ ಪ್ರಯತ್ನಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದಾರೆ.

ಫೈರ್‌ಬಾಂಬ್ ದಾಳಿ, ಗುಂಡಿನ ದಾಳಿ, ಯಹೂದಿ ಸಮುದಾಯದ ಕೇಂದ್ರಗಳು ಹಾಗೂ ಅಮೆರಿಕನ್ ರಾಜತಾಂತ್ರಿಕ ಕಚೇರಿಗಳನ್ನು ಗುರಿಯಾಗಿಸಿಕೊಂಡು ನಡೆದ ಹಲವು ದಾಳಿಗಳಿಗೂ ಈತನ ಸಂಪರ್ಕವಿದೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.

ನಿಖಿಲ್ ಕುಮಾರಸ್ವಾಮಿ ವಯಸ್ಸಿಗೆ ತಕ್ಕಂತೆ ಮಾತನಾಡಲಿ: ಇಕ್ಬಾಲ್ ಹುಸೇನ್

ರಾಮನಗರ: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾರೋಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ನಿಖಿಲ್ ಕುಮಾರಸ್ವಾಮಿ ತಮ್ಮ ವಯಸ್ಸಿಗೆ ಹಾಗೂ ಅನುಭವಕ್ಕೆ ತಕ್ಕಂತೆ ಮಾತನಾಡಿದರೆ ಒಳ್ಳೆಯದು ಎಂದು ಟೀಕಿಸಿದರು.

ನಿಖಿಲ್‌ಗೆ ಇನ್ನೂ ರಾಜಕೀಯ ಅನುಭವ ಕಡಿಮೆ. ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುರಿತೂ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಮತ್ತು ಕುಮಾರಸ್ವಾಮಿ ಒಂದೇ ವಯಸ್ಸಿನವರು. ರಾಜಕೀಯದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರಾಜಕಾರಣ ಬರುತ್ತದೆ, ಹೋಗುತ್ತದೆ. ಆದರೆ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಬೇಕು ಎಂದು ಪರೋಕ್ಷವಾಗಿ ನಿಖಿಲ್‌ಗೆ ತಿರುಗೇಟು ನೀಡಿದರು.

ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಆದಷ್ಟು ಬೇಗ ಎಲ್ಲವೂ ಒಳ್ಳೆಯದಾಗಲಿದೆ. ಸಿಹಿ ಸುದ್ದಿ ಬರಲಿದೆ. ಸ್ವಲ್ಪ ದಿನ ಕಾಯಬೇಕು ಅಷ್ಟೇ ಎಂದು ಕುತೂಹಲಕಾರಿ ಹೇಳಿಕೆ ನೀಡಿದರು.

ಮಾದಾವರ-ತುಮಕೂರು ಮೆಟ್ರೋ ರೈಲು ಯೋಜನೆಗೆ ಮಹತ್ವದ ಹೆಜ್ಜೆ: ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ

ಬೆಂಗಳೂರು: ಮಾದಾವರ-ತುಮಕೂರು ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ವಿವರವಾದ ಯೋಜನಾ ವರದಿ (DPR)ಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ವಿಧಾನಸೌಧದಲ್ಲಿ ನಿನ್ನೆ ಸಂಜೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಡಿಪಿಆರ್ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿದರು. ಈ ಯೋಜನೆ ಕುರಿತು ಮುಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಂಸ್ಥೆಯು ಡಿಪಿಆರ್ ಸಿದ್ಧಪಡಿಸಿದ್ದು, ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಹಂತದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.

ಈ ಕುರಿತು ಮಾತನಾಡಿದ ಡಾ. ಪರಮೇಶ್ವರ್, “ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಫೀಸಿಬಿಲಿಟಿ ಅಧ್ಯಯನ ನಡೆಸುವುದಾಗಿ ಘೋಷಿಸಿದ್ದರು” ಎಂದು ಹೇಳಿದರು.

“ಹೈದರಾಬಾದ್ ಮೂಲದ ಸಂಸ್ಥೆಯೊಂದರಿಂದ ₹3.5 ಕೋಟಿ ವೆಚ್ಚದಲ್ಲಿ ಕಾರ್ಯಸಾಧ್ಯತಾ ವರದಿ ಪಡೆಯಲಾಗಿದೆ. ಆ ವರದಿಯಲ್ಲಿ ಮಾದಾವರದಿಂದ ತುಮಕೂರುವರೆಗೆ ಮೆಟ್ರೋ ಯೋಜನೆ ಜಾರಿಗೆ ತರಬಹುದು ಎಂದು ಶಿಫಾರಸು ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ಅದರ ನಂತರ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ನೀಡಲಾಗಿದ್ದು, ಮೆಟ್ರೋ ಸಂಸ್ಥೆಯ ಮೂಲಕ ಮತ್ತೊಂದು ಏಜೆನ್ಸಿಯಿಂದ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಯನ್ನು ಪಿಪಿಪಿ (Public-Private Partnership) ಮಾದರಿಯಲ್ಲಿ ಜಾರಿಗೊಳಿಸುವ ಉದ್ದೇಶವಿದ್ದು, ಡಿಪಿಆರ್ ಪ್ರಕಾರ ಯೋಜನೆಗೆ ಸುಮಾರು ₹20 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.

“ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ” ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಆಧಾರ್ʼನಲ್ಲಿ ಮಗಳ ಹೆಸರು, ಲಿಂಗ ತಪ್ಪು: ₹10 ಲಕ್ಷ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ

ಬೆಂಗಳೂರು: ಆಧಾರ್ ಕಾರ್ಡ್‌ನಲ್ಲಿ ಅಪ್ರಾಪ್ತ ಬಾಲಕಿಯ ಹೆಸರು ಮತ್ತು ಲಿಂಗವನ್ನು ತಪ್ಪಾಗಿ ನಮೂದಿಸಿ, ಹಲವು ಬಾರಿ ಮನವಿ ಮಾಡಿದರೂ ತಿದ್ದುಪಡಿ ಮಾಡದೇ ನಿರ್ಲಕ್ಷ್ಯ ವಹಿಸಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ವಿರುದ್ಧ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಸಿಂಗೇನ ಅಗ್ರಹಾರದ ನಿವಾಸಿ ಲಕ್ಷ್ಮಿ ಅವರು ತಮ್ಮ ಮಗಳ ಪರವಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.

ಅರ್ಜಿಯ ಪ್ರಕಾರ, ಲಕ್ಷ್ಮಿ ಅವರ ಮಗಳು ತನುಶ್ರೀ 2015ರ ಜುಲೈ 22ರಂದು ಜನಿಸಿದ್ದು, ಜನನ ಪ್ರಮಾಣಪತ್ರ ಹಾಗೂ ಶಾಲಾ ದಾಖಲೆಗಳಲ್ಲಿ ‘ತನುಶ್ರೀ’ ಮತ್ತು ‘ಹೆಣ್ಣು ಮಗು’ ಎಂದೇ ನಮೂದಿಸಲಾಗಿದೆ. ಆದರೆ ಯುಐಡಿಎಐ ನೀಡಿರುವ ಆಧಾರ್ ಕಾರ್ಡ್‌ನಲ್ಲಿ ಮಗುವಿನ ಹೆಸರನ್ನು ‘ಪೂಜಾ’ ಎಂದು ಹಾಗೂ ಲಿಂಗದ ಜಾಗದಲ್ಲಿ ‘ಗಂಡು’ ಎಂದು ತಪ್ಪಾಗಿ ಮುದ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ತಪ್ಪನ್ನು ಸರಿಪಡಿಸಲು ತಾಯಿ ಲಕ್ಷ್ಮಿ ಹಲವು ಬಾರಿ ಸಂಬಂಧಿತ ದಾಖಲೆಗಳೊಂದಿಗೆ ಆಧಾರ್ ಕೇಂದ್ರಗಳು ಹಾಗೂ ಯುಐಡಿಎಐ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

2026ರ ಮಾರ್ಚ್ 24ರಂದು ಯುಐಡಿಎಐ ಕೇಂದ್ರ ಕಚೇರಿ ಮತ್ತು ಬೆಂಗಳೂರು ಪ್ರಾದೇಶಿಕ ಕಚೇರಿಗೆ ಕಾನೂನು ನೋಟಿಸ್ ನೀಡಲಾಗಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿಯ ಶಾಲಾ ಪ್ರವೇಶ, ಸರ್ಕಾರಿ ಸೌಲಭ್ಯಗಳು ಹಾಗೂ ಇತರ ಗುರುತಿನ ದಾಖಲೆಗಳಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ತಾಯಿ ಮತ್ತು ಮಗಳು ತೀವ್ರ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಯುಐಡಿಎಐ ಕ್ರಮವು ಸಂವಿಧಾನದ ವಿಧಿ 14 ಮತ್ತು 21ರ ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದ್ದು, ಅಧಿಕಾರಿಗಳ ಕರ್ತವ್ಯ ವೈಫಲ್ಯದಿಂದ ಬಾಲಕಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಹಕ್ಕುಗಳಿಗೂ ಧಕ್ಕೆಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಹೀಗಾಗಿ ಆಧಾರ್ ಕಾರ್ಡ್‌ನಲ್ಲಿರುವ ‘ಪೂಜಾ, ಗಂಡು’ ಎಂಬ ತಪ್ಪು ಮಾಹಿತಿಯನ್ನು ತೆಗೆದುಹಾಕಿ ‘ತನುಶ್ರೀ, ಹೆಣ್ಣು’ ಎಂದು ತಕ್ಷಣ ತಿದ್ದುಪಡಿ ಮಾಡಲು ಯುಐಡಿಎಐಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಅಲ್ಲದೇ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಂವಿಧಾನಿಕ ನಡೆಗಾಗಿ ತಪ್ಪಿತಸ್ಥ ಅಧಿಕಾರಿಗಳಿಂದಲೇ ₹10 ಲಕ್ಷ ಪರಿಹಾರ ಕೊಡಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿದಾರರು ಮನವಿ ಮಾಡಿದ್ದಾರೆ.

error: Content is protected !!