Home Blog Page 92

ಸಿನಿಮಾ ಮನರಂಜನೆ ಮಾತ್ರ ಅಲ್ಲ, ಸಮಾಜದ ಅಸಮಾನತೆಗೆ ಕನ್ನಡಿಯಾಗಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾ ಹಾಗೂ ಸಮಾಜದ ನಡುವಿನ ಸಂಬಂಧದ ಬಗ್ಗೆ ಗಂಭೀರ ಚರ್ಚೆಗೆ ವೇದಿಕೆ ಸಿದ್ಧಪಡಿಸಿದರು. ಈ ಬಾರಿ 70 ದೇಶಗಳ 240ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನ ನಡೆಯಲಿದೆ ಎಂದು ಅವರು ಘೋಷಿಸಿದರು.

ಚಿತ್ರೋತ್ಸವದ ರಾಯಭಾರಿಯಾಗಿ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡ ಸಿಎಂ, “ಅವರು ಕೇವಲ ನಟರಲ್ಲ, ಸಾಮಾಜಿಕ ಹೋರಾಟಗಾರರೂ ಹೌದು. ಸಿನಿಮಾ ಮತ್ತು ಸಮಾಜದ ನಡುವಿನ ಸೇತುವೆಯಾಗುವ ಸಾಮರ್ಥ್ಯ ಅವರಿಗೆ ಇದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಬಾರಿ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಸಿನಿಮಾ ಮನರಂಜನೆಯಷ್ಟೇ ಅಲ್ಲ, ಸಮಾಜದಲ್ಲಿರುವ ಅಸಮಾನತೆ, ಬಡತನ ಮತ್ತು ಅನ್ಯಾಯಗಳನ್ನು ಪ್ರಶ್ನಿಸುವ ಶಕ್ತಿ ಹೊಂದಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬದುಕಿನ ವಾಸ್ತವ ಚಿತ್ರಣ ಸಿನಿಮಾಗಳ ಮೂಲಕ ಜಗತ್ತಿನ ಮುಂದೆ ಬರಬೇಕು ಎಂದು ಒತ್ತಾಯಿಸಿದರು. ಈ ಜವಾಬ್ದಾರಿಯನ್ನು ಡಾ. ರಾಜ್‌ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ನಿರ್ವಹಿಸಿದ್ದನ್ನು ಅವರು ಸ್ಮರಿಸಿದರು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಉದ್ದೇಶ ಕೇವಲ ಸಿನಿಮಾ ಪ್ರದರ್ಶನವಲ್ಲ. ಬೇರೆ ದೇಶಗಳ ಸಮಾಜ, ರಾಜಕೀಯ, ಸಂಸ್ಕೃತಿ ಹಾಗೂ ಮಾನವ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವೇ ಅದರ ಆತ್ಮ ಎಂದು ಸಿಎಂ ಅಭಿಪ್ರಾಯಪಟ್ಟರು. ಸಮಾಜದಲ್ಲಿ ಬದಲಾವಣೆ ಆಗದೇ ಇದ್ದರೆ ಸಿನಿಮಾಗಳು ಕೇವಲ ಮನರಂಜನೆಯ ವಸ್ತುಗಳಾಗಿಬಿಡುತ್ತವೆ ಎಂದು ಎಚ್ಚರಿಸಿದರು.

ಪ್ರತಿ ವ್ಯಕ್ತಿಯನ್ನು ಪ್ರೀತಿ ಮತ್ತು ಸ್ನೇಹದಿಂದ ನೋಡುವ ಮನೋಭಾವ ಬೆಳೆದರೆ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಅಸಮಾನತೆಯನ್ನು ಹೋಗಲಾಡಿಸುವ ಶಕ್ತಿಯನ್ನು ಸಿನಿಮಾ ಮಾಧ್ಯಮ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡ ಸಿನಿಮಾರಂಗದ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ ಸಿಎಂ, ಸಮಾಜವನ್ನು ಹಸನು ಮಾಡುವಂತಹ ಸಿನಿಮಾಗಳು ಕನ್ನಡದಲ್ಲಿ ಮೂಡಿಬರಲಿ ಎಂದು ಆಶಿಸಿದರು. “ಜೈಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ” ಎಂಬ ಘೋಷಣೆಯೊಂದಿಗೆ ಭಾಷಣ ಮುಕ್ತಾಯಗೊಳಿಸಿದರು.

ತಾಯಿ ಅಂಜನಾ ದೇವಿ ಹುಟ್ಟುಹಬ್ಬಕ್ಕೆ ಜಿರಾಫೆ ದತ್ತು ಪಡೆದ ಪವನ್ ಕಲ್ಯಾಣ್

ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಗುರುವಾರ ವಿಶಾಖಪಟ್ಟಣದ ಇಂದಿರಾ ಗಾಂಧಿ ಪ್ರಾಣಿ ಉದ್ಯಾನವನಕ್ಕೆ ಭೇಟಿ ನೀಡಿ, ಪ್ರಾಣಿ ಸಂರಕ್ಷಣೆಯತ್ತ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮ್ಮ ತಾಯಿ ಅಂಜನಾ ದೇವಿಯ ಹುಟ್ಟುಹಬ್ಬದ ನೆನಪಿಗಾಗಿ ಮೃಗಾಲಯದಲ್ಲಿರುವ ಎರಡು ಜಿರಾಫೆಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯುವುದಾಗಿ ಘೋಷಿಸಿ, ಅವುಗಳ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.

ಮೃಗಾಲಯಕ್ಕೆ ಭೇಟಿ ನೀಡಿದ ವೇಳೆ ಪವನ್ ಕಲ್ಯಾಣ್, ಹೊಸದಾಗಿ ನಿರ್ಮಿಸಲಾದ ಕರಡಿ ಆವರಣವನ್ನು ಉದ್ಘಾಟಿಸಿದರು. ನಂತರ ನೀರಾನೆ, ಕೃಷ್ಣಮೃಗ, ಹುಲಿ ಹಾಗೂ ಸಿಂಹಗಳನ್ನು ಇರಿಸಿರುವ ವಲಯಗಳಿಗೆ ಭೇಟಿ ನೀಡಿ, ಪ್ರಾಣಿಗಳ ಆಹಾರ ವ್ಯವಸ್ಥೆ, ಆರೋಗ್ಯ ಹಾಗೂ ಸಂರಕ್ಷಣಾ ಕ್ರಮಗಳ ಕುರಿತು ಮೃಗಾಲಯದ ಕ್ಯುರೇಟರ್ ಅವರಿಂದ ಮಾಹಿತಿ ಪಡೆದರು. ಅಲ್ಲದೇ ಆನೆ ಮತ್ತು ಜಿರಾಫೆಗಳಿಗೆ ಸ್ವತಃ ಆಹಾರ ನೀಡುವ ಮೂಲಕ ಪ್ರಾಣಿಪ್ರೇಮ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ಮೃಗಾಲಯಗಳು ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಸುಮಾರು 650 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ವಿಶಾಖಪಟ್ಟಣ ಮೃಗಾಲಯದಲ್ಲಿ ನೂರಾರು ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಸುರಕ್ಷಿತ ಮತ್ತು ಸ್ವಚ್ಛ ವಾತಾವರಣದಲ್ಲಿ ವಾಸಿಸುತ್ತಿವೆ” ಎಂದು ಹೇಳಿದರು.

ಇದೇ ವೇಳೆ ಅವರು ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಾಣಿ ಸಂರಕ್ಷಣೆಯಲ್ಲಿ ಪಾಲುದಾರರಾಗುವಂತೆ ಮನವಿ ಮಾಡಿ, “ಕಾರ್ಪೊರೇಟ್‌ಗಳು ತಮ್ಮ ಇಷ್ಟದ ಪ್ರಾಣಿಗಳನ್ನು ದತ್ತು ಪಡೆದು ಮೃಗಾಲಯಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಇಡೀ ಕುಟುಂಬವೇ ಪ್ರಾಣಿ ಪ್ರಿಯರು. ಪ್ರಾಣಿ ಕಲ್ಯಾಣ ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದರು.

ಸಿನಿಮಾ ವೇದಿಕೆಯಲ್ಲಿ ರಾಜಕೀಯ ಗೋಡೆ? BIFFESನಲ್ಲಿ ಪ್ರಕಾಶ್ ರಾಜ್‌ರ ತೀವ್ರ ಪ್ರತಿರೋಧ

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ವೇದಿಕೆ ಈ ಬಾರಿ ಕೇವಲ ಸಿನಿಮಾಗಳ ಸಂಭ್ರಮಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಉತ್ಸವದ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್, ಚಲನಚಿತ್ರೋತ್ಸವದ ಮೂಲ ಆಶಯ, ಮಾನವೀಯತೆಯ ಪ್ರಶ್ನೆ ಮತ್ತು ರಾಜಕೀಯ ಹಸ್ತಕ್ಷೇಪದ ವಿರುದ್ಧ ಗಂಭೀರ ಧ್ವನಿಯಲ್ಲಿ ಮಾತನಾಡಿದರು.

‘16 ವರ್ಷಗಳ ಹಿಂದೆ ನಾನು ಈ ಉತ್ಸವವನ್ನು ಉದ್ಘಾಟಿಸಿದ್ದೆ. ಆಗ ಇದು ಸಂಸ್ಕೃತಿಗಳ ಸಂಗಮವಾಗಬೇಕು ಎಂಬ ಕನಸಿನಿಂದ ಹುಟ್ಟಿದ ಪ್ರಯತ್ನವಾಗಿತ್ತು. ಇಂದು ಅದೇ ವೇದಿಕೆಯಲ್ಲಿ ನಾನು ನಟನಾಗಿ ಮಾತ್ರವಲ್ಲ, ನಿರ್ಮಾಪಕ, ವಿತರಕ ಮತ್ತು ರಾಯಭಾರಿಯಾಗಿ ನಿಂತಿದ್ದೇನೆ’ ಎಂದು ಅವರು ಹೇಳಿದರು.

ಅಂತರಿಕ್ಷದಿಂದ ಭೂಮಿಯನ್ನು ಕಂಡ ಅನುಭವದ ಬಗ್ಗೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ನೀಡಿದ ಉತ್ತರವನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ‘ಈ ಭೂಮಿ ಮನುಷ್ಯರಿಗಿಂತ ಪ್ರಾಣಿಗಳದ್ದು ಹೆಚ್ಚು. ಆದರೂ ನಾವು ಜಗಳ, ಯುದ್ಧಗಳಲ್ಲಿ ತೊಡಗಿದ್ದೇವೆ’ ಎಂಬ ಮಾತುಗಳು ತಮ್ಮನ್ನು ತಟ್ಟಿದವು ಎಂದು ಹೇಳಿದರು.

ಅಂತರಾಷ್ಟ್ರೀಯ ಚಿತ್ರೋತ್ಸವಗಳು ಗಡಿಗಳನ್ನು ಮೀರಿ ಮಾನವೀಯತೆಯನ್ನು ಬೆಳೆಸಬೇಕಾದ ವೇದಿಕೆಗಳಾಗಬೇಕು. ಆದರೆ ಇತ್ತೀಚೆಗೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ರಾಜಕೀಯ ಪ್ರವೇಶ ಮಾಡಿರುವುದು ದುಃಖಕರ ಸಂಗತಿ ಎಂದು ಅವರು ಕಟುವಾಗಿ ಟೀಕಿಸಿದರು. ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಕೇವಲ ಕಲೆಯ ಮೇಲೆ ಮಾತ್ರವಲ್ಲ, ಮಾನವೀಯತೆಯ ಮೇಲೆಯೂ ಹಸ್ತಕ್ಷೇಪವಾಗಿದೆ ಎಂದು ಹೇಳಿದರು.

‘ನಮ್ಮ ಕಥೆಗಳು ಜಗತ್ತಿನ ವೇದಿಕೆಗೆ ಹೋದಾಗ ನಾವು ಹೆಮ್ಮೆಪಡುತ್ತೇವೆ. ಆದರೆ ಜಗತ್ತಿನ ನೋವಿನ ಕಥೆಗಳು ನಮ್ಮ ನೆಲಕ್ಕೆ ಬರಬಾರದು ಎನ್ನುವುದು ಯಾವ ತರ್ಕ?’ ಎಂದು ಪ್ರಶ್ನಿಸಿದ ಅವರು, ಕೇರಳ ಸರ್ಕಾರ ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡಿರುವುದನ್ನು ಉದಾಹರಿಸಿದರು.

‘ನಮ್ಮ ಕಣ್ಣೀರಿನ ಪರಿಚಯ ನಮ್ಮ ನೋವಿಗೆ ಮಾತ್ರ ಸೀಮಿತವಾಗಿರಬಾರದು. ಇತರರ ನೋವಿಗೂ ನಾವು ಅಳಬೇಕು. ಇಲ್ಲದಿದ್ದರೆ ನಾವು ಮನುಷ್ಯರಾಗಿರೋದಕ್ಕೆ ಅರ್ಥವಿಲ್ಲ’ ಎಂದು ಹೇಳಿದ ಪ್ರಕಾಶ್ ರಾಜ್, ಪ್ಯಾಲೆಸ್ತೀನ್ ಸಿನಿಮಾಗಳಿಗೆ ಅವಕಾಶ ನಿರಾಕರಿಸಿದರೆ, ವೇದಿಕೆಯಲ್ಲೇ ಪದ್ಯ ಓದುತ್ತೇನೆ ಎಂದು ತಮ್ಮ ಪ್ರತಿರೋಧವನ್ನು ಘೋಷಿಸಿದರು.

ಸಂಗೀತದಿಂದ ಜನಸೇವೆ ಕಡೆಗೆ? ಅರಿಜಿತ್ ಸಿಂಗ್ ರಾಜಕೀಯದ ಹೊಸ ರಾಗ

ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಗಾಯನ ಕ್ಷೇತ್ರಕ್ಕೆ ಫುಲ್ ಸ್ಟಾಪ್ ಹಾಕಿದ ನಿರ್ಧಾರವೇ ಅಚ್ಚರಿ ಮೂಡಿಸಿದ ಬೆನ್ನಲ್ಲೇ, ಇದೀಗ ಇನ್ನೊಂದು ಸಂಚಲನಕಾರಿ ಸುದ್ದಿ ಹೊರಬಿದ್ದಿದೆ. ಅರಿಜಿತ್ ಸಿಂಗ್ ರಾಜಕೀಯ ಪಕ್ಷ ಸ್ಥಾಪಿಸಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ಚಿಂತನೆಯಲ್ಲಿದ್ದಾರೆ ಎಂಬ ವರದಿ ಭಾರೀ ಚರ್ಚೆಗೆ ಕಾರಣವಾಗಿದೆ.

ಎನ್‌ಡಿಟಿವಿ ವರದಿ ಪ್ರಕಾರ, ಈ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅರಿಜಿತ್ ಸಿಂಗ್ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯ ಪಕ್ಷವನ್ನು ಕಟ್ಟಿಬಳೆಸಲು ದೀರ್ಘಾವಧಿಯ ಸಿದ್ಧತೆ ನಡೆಸುವ ಉದ್ದೇಶ ಅವರದ್ದಾಗಿದೆ. ರಾಜಕೀಯ ಕಣಕ್ಕೆ ಇಳಿಯುವುದು ಕೇವಲ ಘೋಷಣೆಯಿಂದ ಸಾಧ್ಯವಲ್ಲ ಎಂಬ ಅರಿವಿನೊಂದಿಗೆ ಅವರು ಮುಂದಿನ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಭಾರತದಲ್ಲಿ ಸಿನಿಮಾ ಕ್ಷೇತ್ರದ ಅನೇಕರು ರಾಜಕೀಯಕ್ಕೆ ಬಂದಿದ್ದಾರೆ. ಕೆಲವು ಗಾಯಕರು ರಾಜಕೀಯ ಪಕ್ಷಗಳ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಆದರೆ, ಒಬ್ಬ ಗಾಯಕ ಸ್ವತಂತ್ರವಾಗಿ ಪಕ್ಷ ಸ್ಥಾಪಿಸಿ ರಾಜಕೀಯ ಭೂಮಿಕೆಗೆ ಇಳಿಯಲು ಮುಂದಾಗಿರುವುದು ಅಪರೂಪದ ಬೆಳವಣಿಗೆಯಾಗಿದೆ. ಈ ಕಾರಣದಿಂದಲೇ ಅರಿಜಿತ್ ಸಿಂಗ್ ಅವರ ನಿರ್ಧಾರ ವಿಭಿನ್ನವಾಗಿ ಕಾಣುತ್ತಿದೆ.

ಅರಿಜಿತ್ ಸಿಂಗ್ ಅವರ ವ್ಯಕ್ತಿತ್ವ ಸಂಗೀತಕ್ಕಷ್ಟೇ ಸೀಮಿತವಲ್ಲ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನವರಾದ ಅವರು, ತಮ್ಮ ಊರಿನ ಬಡವರಿಗಾಗಿ ಹಲವು ಸಾಮಾಜಿಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನರಿಗಾಗಿ 40 ರೂಪಾಯಿಗೆ ಊಟ ನೀಡುವ ರೆಸ್ಟೋರೆಂಟ್ ಆರಂಭಿಸಿರುವುದು ಅವರ ಮಾನವೀಯ ಮುಖವನ್ನು ತೋರಿಸುತ್ತದೆ.

ಸಾಮಾಜಿಕ ಸೇವೆಯನ್ನು ವ್ಯವಸ್ಥಿತವಾಗಿ ಮತ್ತು ವ್ಯಾಪಕವಾಗಿ ಮುಂದುವರಿಸಲು ರಾಜಕೀಯವೇ ಪರಿಣಾಮಕಾರಿ ಮಾರ್ಗ ಎಂಬ ನಿರ್ಣಯಕ್ಕೆ ಅವರು ಬಂದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಸಂಗೀತ ಜಗತ್ತಿನಿಂದ ಹಿಂದೆ ಸರಿದು ಜನಸೇವೆ ಹಾಗೂ ರಾಜಕೀಯದತ್ತ ಅವರು ಮುಖ ಮಾಡಿದ್ದಾರೆ ಎಂಬ ವಿಶ್ಲೇಷಣೆಗಳು ಇದೀಗ ಜೋರಾಗಿವೆ.

WPL 2026; 8 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಫೈನಲ್‌ಗೆ RCB ಎಂಟ್ರಿ!

0

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಮಹಿಳಾ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್‌ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್‌ಗೆ ಪ್ರವೇಶಿಸಿದೆ.

ಈ ಜಯವು ತಂಡದ ಇತಿಹಾಸದಲ್ಲಿ ಫಸ್ಟ್ ಟೈಮ್ ಸಾಧನೆಯಾಗಿದೆ. ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ ಆರಂಭಿಸಿ 8 ವಿಕೆಟ್ ನಷ್ಟಕ್ಕೆ 143 ರನ್‌ಗಳನ್ನಷ್ಟೇ ಗಳಿಸಿತು. ವಾರಿಯರ್ಸ್‌ ಪರ ದೀಪ್ತಿ ಶರ್ಮಾ 55 ರನ್, ನಾಯಕಿ ಮೆಗ್ ಲ್ಯಾನಿಂಗ್ 41 ರನ್ ಗಳಿಸಿದರೂ ಇತರ ಆಟಗಾರರು ಅಲ್ಪ ಮೊತ್ತಕ್ಕೆ ಔಟಾದರು. ಆರ್‌ಸಿಬಿ ಅಲ್ಪ ಗುರಿ ಬೆನ್ನಟ್ಟಿ ಚೇಸ್‌ಗೆ ಎದ್ದಾಗ, ಗ್ರೇಸ್ ಹ್ಯಾರಿಸ್ ಮೊದಲ ಓವರ್‌ನಿಂದಲೇ ಬ್ಯಾಟಿಂಗ್ ಪ್ರಾರಂಭಿಸಿ 37 ಎಸೆತಗಳಲ್ಲಿ 75 ರನ್ (2 ಸಿಕ್ಸರ್‌, 13 ಬೌಂಡರಿ) ಗಳಿಸಿದರು. ಜೊತೆಗೆ ನಾಯಕಿ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 54 ರನ್ (2 ಸಿಕ್ಸರ್‌, 8 ಬೌಂಡರಿ) ಗಳಿಸಿ ತಂಡದ ಗೆಲುವಿಗೆ ಮಹತ್ವಪೂರ್ಣ ಪಾತ್ರ ವಹಿಸಿದರು. ಜಾರ್ಜಿಯಾ ವೋಲ್ 16 ರನ್ ನೀಡಿ ಮಿಂಚಿದರು.

ಪಂದ್ಯದ ಪ್ರಾರಂಭದಲ್ಲಿ ಮೆಗ್ ಲ್ಯಾನಿಂಗ್ ಮತ್ತು ದೀಪ್ತಿ ಶರ್ಮಾ ಪವರ್‌ ಪ್ಲೇ‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್‌ ಕಲೆಹಾಕಿದರು. ಆದರೆ 9ನೇ ಓವರ್‌ನಲ್ಲಿ ನಾಡಿನ್ ಡಿ ಕ್ಲರ್ಕ್ ಮೊದಲ ಎಸೆತದಲ್ಲಿ ಮೆಗ್ ಲ್ಯಾನಿಂಗ್ ವಿಕೆಟ್ ಕಿತ್ತರು, ನಂತರ 5ನೇ ಎಸೆತದಲ್ಲಿ ಜೋನ್ಸ್ ವಿಕೆಟ್ ಉರುಳಿದರು. ಆದರೆ ಆರ್‌ಸಿಬಿ ಬ್ಯಾಟಿಂಗ್ ಆರ್ಭಟ ಮುಂದುವರಿದು, ಕೊನೆಗೆ ಕೇವಲ 13.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್‌ ಬಾರಿಸಿ ಜಯವನ್ನು ಖಚಿತಪಡಿಸಿಕೊಂಡಿತು. ಬೌಲಿಂಗ್‌ನಲ್ಲಿ ಗ್ರೇಸ್ ಹ್ಯಾರಿಸ್ 2 ವಿಕೆಟ್, ಲೂರೆನ್ ಬೆಲ್ ಮತ್ತು ಶ್ರೇಯಾಂಕ ಪಾಟೀಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಸೋಫಿ ಎಕ್ಲಿಸ್ಟೋನ್ ಮತ್ತು ಸಿಮ್ರನ್ ಶೈಖಾ ಯುಪಿ ವಾರಿಯರ್ಸ್‌ ಪರ ಪ್ರಮುಖ ವಿಕೆಟ್‌ಗಳನ್ನು ಪಡೆದರು.
ಈ ಜಯದೊಂದಿಗೆ ಆರ್‌ಸಿಬಿ ಮಹಿಳಾ ತಂಡ ನೇರವಾಗಿ WPL ಫೈನಲ್‌ಗೆ ಲಗ್ಗೆಯಿಟ್ಟಿದೆ.

ಚಾಮರಾಜನಗರ| ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚಾಕು ಇರಿತ; ಅದೃಷ್ಟವಶಾತ್ ತಪ್ಪಿದ ಅನಾಹುತ!

0

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ವರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

34 ವರ್ಷದ ಎಲ್.ರವೀಶ್ ಚಾಕು ಇರಿತಕ್ಕೊಳಗಾದ ಯುವಕ. ಈತ ತಾಲೂಕಿನ ಕುಣಗಳ್ಳಿ ನಿವಾಸಿ. ಅದೃಷ್ಟವಶಾತ್ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರವೀಶ್​ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಬ್ಬಳೊಂದಿಗೆ ಮದುವೆ ನಿಶ್ಚಯವಾಗಿತ್ತು. ಜ.30 ರಂದು ವೆಂಕಟೇಶ್ವರ ಮಹಲ್‌ನಲ್ಲಿ ಆರತಕ್ಷತೆ ನಡೆಯಬೇಕಾಗಿತ್ತು.

ಸುದ್ದಿಯ ಪ್ರಕಾರ, ಆರತಕ್ಷತೆಗೆ ತಮ್ಮ ಗ್ರಾಮದಿಂದ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುವಾಗ ಕೊಳ್ಳೇಗಾಲದ ಎಂಜಿಎಸ್​ವಿ ಕಾಲೇಜು ರಸ್ತೆಯ ಬಳಿ ವರ ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಎಲ್. ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಎಡಗೈ ತೊಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ. ಸದ್ಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ರವೀಶ್ ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿ, “6 ತಿಂಗಳ ಹಿಂದೆಯಷ್ಟೇ ನನ್ನ ಎಂಗೇಜ್ಮೆಂಟ್ ನಿಶ್ಚಿತವಾಯಿತು. ಆರತಕ್ಷತೆಗೆ ತೆರಳುವಾಗ ಹಿಂಬದಿಯಿಂದ ಬಂದ ಕಾರಿನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದರು. ಯಾರಿದ್ದಾರೆ ಎಂಬುದು ತಿಳಿಯುತ್ತಿಲ್ಲ” ಎಂದು ಹೇಳಿದರು. ಘಟನೆ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಕೇಸ್; ವೀರೇಂದ್ರ ಪಪ್ಪಿಗೆ ಶಾಕ್ ಕೊಟ್ಟ ED – 177.3 ಕೋಟಿ ಮೌಲ್ಯದ ಆಸ್ತಿ ಜಪ್ತಿ!

0

ಬೆಂಗಳೂರು: ‘ಕೈ’ ಶಾಸಕ ಕೆಸಿ ವೀರೇಂದ್ರ ವಿರುದ್ಧ ಅಕ್ರಮ ಆನ್ಲೈನ್ ಬೆಟ್ಟಿಂಗ್ ಪ್ರಕರಣದ ಸಂಬಂಧ ಕೃಷಿ ಜಮೀನು, ನಿವಾಸ ಸೇರಿದಂತೆ 177.3 ಕೋಟಿ ರೂಪಾಯಿಯ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.

ತನಿಖೆ ವೇಳೆ ಕೆಸಿ ವೀರೇಂದ್ರ ಮತ್ತು ಅವರ ಸಹಚರರು ಈ ಪ್ರಕರಣದ “ಮಾಸ್ಟರ್ ಮೈಂಡ್” ಆಗಿರುವುದು ದೃಢಪಟ್ಟಿದ್ದು, ನೂರಾರು ಬೇನಾಮಿ ಖಾತೆ ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂದು ED ಗೆ ದೊರೆತ ದಾಖಲೆಗಳಿಂದ ತಿಳಿದುಬಂದಿದೆ. 177.3 ಕೋಟಿ ರೂ. ಮೌಲ್ಯದ ಆಸ್ತಿ ಈ ಅಕ್ರಮ ಹಣದಿಂದ ಸಂಪಾದನೆಗೊಂಡಿರುವುದು ಪತ್ತೆಯಾಗಿದ್ದು, ಸಾಕ್ಷ್ಯಗಳ ಆಧಾರದ ಮೇಲೆ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ಹಿಂದೆ ಪ್ರಕರಣದ ಭಾಗವಾಗಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ED ದಾಳಿ ನಡೆಸಿ ಚಿನ್ನ, ನಗದು, ಬೆಳ್ಳಿ, ವಾಹನಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಒಟ್ಟಾರೆ 320 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ತನಿಖೆ ವೇಳೆ 2,300 ಕೋಟಿ ರೂ. ಅಧಿಕ ಅಕ್ರಮ ಹಣದ ವಹಿವಾಟು ನಡೆದಿರುವುದೂ ಪತ್ತೆಯಾಗಿದ್ದು, ED ತನಿಖೆ ಮುಂದುವರಿದಿದೆ.

ಅದ್ದೂರಿಯಾಗಿ ಜರುಗಿದ ರಂಗಪ್ಪಜ್ಜನ ಜಾತ್ರೆ

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಬೆಟಗೇರಿ-ನರಸಾಪುರ ಮಧ್ಯದಲ್ಲಿರುವ ಪೂಜ್ಯ ರಂಗಾವಧೂತರ ತಪೋಭೂಮಿಯಲ್ಲಿ ಪೂಜ್ಯ ವೀರಪ್ಪಜ್ಜ ಹಾಗೂ ಪೂಜ್ಯ ರಂಗಪ್ಪಜ್ಜ ಗುರು ಶಿಷ್ಯರ 97ನೇ ಜೋಡು ರಥೋತ್ಸವ ಜರುಗಿತು. ರಂಗಪ್ಪಜ್ಜನ ಮಠದಲ್ಲಿ ಅಲಂಕೃತವಾದ ಗಡ್ಡಿತೇರು ಪೂಜ್ಯ ವೀರಪ್ಪಜ್ಜನ ರಥ ಸಿದ್ಧಪಡಿಸಲಾಗಿತ್ತು. ಬೆಟಗೇರಿ ಮಂಜುನಾಥ ನಗರದ ನಾಗಲಿಂಗೇಶ್ವರ ಯುವಕ ಮಂಡಳಿ ಹಾಗೂ ಶಿವಾಜಿ ನಗರದ ವಿನಾಯಕ ಗೆಳೆಯರ ಬಳಗದವರು ಬೃಹತ್ ಗಾತ್ರದ ಹೂಮಾಲೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರಪ್ಪ ಅರಣಿ, ರುದ್ರಪ್ಪ ಬಾದರದಿನ್ನಿ, ಭೋಜಪ್ಪ ಹೆಗ್ಗಡಿ, ಮಹದೇಹಸಾ ಮೇರವಾಡೆ, ಹೇಮಂತಗೌಡ ಬೆನಹಾಳ, ರಾಜು ಕಟಗಿ, ಮಲ್ಲೇಶಪ್ಪ ಐಲಿ, ವಿಜಯ ಕಬಾಡಿ, ದುರ್ಗಾಸಿಂಗ್ ಕಾಟೇವಾಲ, ರಂಗಪ್ಪ ದ್ಯಾವಣಸಿ, ನಗರಸಭಾ ಸದಸ್ಯರಾದ ರಾಘವೇಂದ್ರ ಯಳವತ್ತಿ, ಶಕುಂತಲಾ ಅಕ್ಕಿ ಸೇರಿದಂತೆ ನೂರಾರು ಸಾಧು ಸಂತರು ಸೇರಿದಂತೆ ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು.

ರಂಗಾವಧೂತರ ತಪೋಭೂಮಿಯಲ್ಲಿ ನಡೆದ ಜೋಡು ರಥೋತ್ಸವಕ್ಕೆ ಸಹಕರಿಸಿದ ಸಮಸ್ತ ಸದ್ಭಕ್ತರಿಗೆ, ದಾನಿಗಳಿಗೆ, ಗದಗ-ಬೆಟಗೇರಿ ನಗರಸಭೆ, ಹಾತಲಗೇರಿ, ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಒಂದು ವಾರದಿಂದ ಜರುಗಿದ ಪ್ರಸಾದವನ್ನು ಸ್ವಯಂ ಪ್ರೇರಣೆಯಇಂದ ಸಿದ್ಧಗೊಳಿಸಿದ್ದ ಚಿದಾನಂದ ಖಾಕಿ ಅವರುಗಳಿಗೆ ಟ್ರಸ್ಟ್ ಕಾರ್ಯದರ್ಶಿ ಗಣೇಶಸಿಂಗ್ ಬ್ಯಾಳಿ ಅಭಿನಂದಿಸಿದ್ದಾರೆ.

ಬೆಂಗಳೂರು| 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ!

0

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅದ್ಧೂರಿಯಾಗಿ ಉದ್ಘಾಟಿಸಿದರು.

ಕನ್ನಡ ಮತ್ತು ಇತರ ಬಹುಭಾಷಾ ಚಿತ್ರರಂಗದ ಸಾಧನೆಗಳನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಉದ್ದೇಶದಿಂದ ಈ ಮಹತ್ತರ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಸಕ ರಿಜ್ವಾನ್ ಅರ್ಶದ್ ಇದ್ದರು. ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಬಹುಭಾಷಾ ನಟ ಪ್ರಕಾಶ್ ರಾಜ್, ಖ್ಯಾತ ನಟಿ ರುಕ್ಮಿಣಿ ವಸಂತ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಸದಸ್ಯ ಚಿದಾನಂದ ಪಟೇಲ್ ಸೇರಿದಂತೆ ಚಿತ್ರರಂಗ ಮತ್ತು ಆಡಳಿತ ವಲಯದ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಿನಿ ಕಲೆಯ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವ ಪ್ರಯತ್ನವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

`ನಿರಂತರ ಪ್ರಕಾಶನ’ಕ್ಕೆ ರಾಜ್ಯಮಟ್ಟದ ಪ್ರಕಾಶಕ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ ಎರಡೂವರೆ ದಶಕಗಳಿಂದ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಗಳಿಸಿ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ, ಅಕ್ಷರ ಸಂಸ್ಕೃತಿ ಉಳಿಸಿ, ಪುಸ್ತಕ ಸಂಸ್ಕೃತಿ ಬೆಳೆಸಲು ಪಣ ತೊಟ್ಟಿರುವ ಸ್ಥಳೀಯ ನಿರಂತರ ಪ್ರಕಾಶನದ ಪ್ರಕಾಶಕ, ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಅವರು ರಾಜ್ಯಮಟ್ಟದ ಪ್ರಕಾಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಫೆಬ್ರವರಿ 7 ಮತ್ತು 8ರಂದು ಬೀದರ್ ಜಿಲ್ಲೆಯ ಬೇಲೂರಿನ ಶರಣ ಉರಿಲಿಂಗ ಪೆದ್ದಿ, ಶರಣೆ ಕಾಳವ್ವೆ ಉತ್ಸವ, ಲಿಂಗೈಕ್ಯ ಶಿವಲಿಂಗೇಶ್ವರ ಶಿವಯೋಗಿಗಳ 57ನೇ ಪುಣ್ಯ ಸ್ಮರಣೆ ನಿಮಿತ್ತ ಉರಿಲಿಂಗ ಪೆದ್ದಿ ಮಠದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಸಮಗ್ರ ಯೋಜನೆ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸತೀಶ್ ಹೊಸಮನಿಯವರು ಪ್ರಶಸ್ತಿ ಪ್ರದಾನ ಮಾಡುವರು.

ಪುಸ್ತಕೋದ್ಯಮಿ ಬಸವರಾಜ್ ಜಿ.ಕೊನೆಕ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಶರಣು ಸಲಗರ ಸಮಾರಂಭದ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಸಾಗರ ಖಂಡ್ರೆ, ಪುಸ್ತಕ ವ್ಯಾಪಾರಿ ಮತ್ತು ಪ್ರಕಾಶಕರ ಸಂಘದ ಜಿಯಾ ಉದ್ದಿತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉರಿಲಿಂಗಪೆದ್ದಿ ಸಂಸ್ಥಾನ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಖ್ಯಾತ ಕವಿ ಡಾ. ರಾಜಶೇಖರ್ ಮಠಪತಿ ಸಮಾರೋಪ ನುಡಿಗಳನ್ನಾಡುವರು.

ಇದೇ ಸಂದರ್ಭದಲ್ಲಿ ನಿರಂತರ ಪ್ರಕಾಶನದ ಜೊತೆಗೆ ವಿದ್ಯಾನಿಧಿ ಪ್ರಕಾಶನ, ಅಭಿನವ ಪ್ರಕಾಶನ, ಶಾರದಾ ಪ್ರಕಾಶನ, ಅಮರ ಪ್ರಕಾಶನ, ಶಿರಾಪುರ ಪ್ರಕಾಶನ, ಧರಿನಾಡು ಪ್ರಕಾಶನ, ಪೂಜಾ ಪ್ರಕಾಶನ ಸಂಸ್ಥೆಗಳ ಪ್ರಕಾಶಕರೂ ಪ್ರಕಾಶನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

error: Content is protected !!